ವಿಷಯಕ್ಕೆ ಹೋಗು

ಪುಟ:Kannadigara Karma Kathe.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨
ಕನ್ನಡಿಗರ ಕರ್ಮಕಥೆ

ಮೆಹರ್ಜಾನಳು ಬಾರದಿರುವದನ್ನು ನೋಡಿ, ಹೆಂಗಸರು ಮತ್ತಷ್ಟು ಆಕ್ರೋಶ ಮಾಡತೊಡಗಿದರು. ಆಗ ಗಂಡಸರು ಅವರಿಗೆ ಸಿಟ್ಟುಮಾಡಿ ಸಮಾಧಾನಗೊಳಿಸಿ ಸುಮ್ಮನಿರಿಸಿದರು. ಅವರೊಳಗೆ ಮೆಹರ್ಜಾನಳ ಶೋಧದ ವಿಷಯವಾಗಿ ಬಹಳ ಚರ್ಚೆಯು ನಡೆಯಿತು. ಕೆಲವರಿಗೆ ಮೆಹರ್ಜಾನಳ ಶೋಧವಾಗುವದು ಅಶಕ್ಯವಾಗಿ ತೋರಿದ್ದರಿಂದ ಅವರು ಮುಂದಕ್ಕೆ ಸಾಗೋಣವೆಂದು ಹೇಳಿದರು. ಆದರೆ ಅವರಲ್ಲಿ ಒಬ್ಬ ದೃಢ ಸ್ವಭಾವದ ಪ್ರೌಢ ಸ್ತ್ರೀಯು-ಹಾಗೆ ಹೋಗುವದು ಸರಿಯಲ್ಲ. ನಾವು ಸಮೀಪದಲ್ಲಿರುವ ಮುದಗಲ್ಲಿಗೆ ಹೋಗಿ ಅಲ್ಲಿ ಶೋಧಮಾಡೋಣ ಹಿಂದಿನಿಂದ ಪಶ್ಚಾತ್ತಾಪ ಪಡುವದಕ್ಕಿಂತ ಈಗಲೇ ಆದಷ್ಟು ಶ್ರಮಪಟ್ಟು ಹುಡುಕುವದು ಯೋಗ್ಯವು. ಎಂದು ಹೇಳಿದಳು. ಕಡೆಗೆ ಆಕೆಯ ಮಾತೂ ಎಲ್ಲರಿಗೂ ಸಮರ್ಪಕವಾಗಿ ತೋರಿ ಅವರೆಲ್ಲರು ಮರುದಿನ ಬೆಳಗಾದಕೂಡಲೆ ಮುದಗಲ್ಲಿಗೆ ಹೋಗಿ, ಅಲ್ಲಿ ಮೆಹರ್ಜಾನಳ ಶೋಧವನ್ನು ನಡೆಸಿದರು.

ಇತ್ತ ರಾಮರಾಜನು ತನ್ನ ಆ ಸುಂದರ ತರುಣಿಯ, ಅಂದರೆ ಮೆಹರ್ಜಾನಳ ಮನೆಯವರ ಶೋಧಕ್ಕಾಗಿ ತನ್ನ ಸಂಗಡ ಒಬ್ಬ ಮನುಷ್ಯನನ್ನು ಕರಕೊಂಡು ಅವರು ಇಳಿದ ಸ್ಥಳಕ್ಕೆ ಹೊರಟನು. ರಾಮರಾಜನ ಸಂಗಡ ಬಂದ ಮನುಷ್ಯನ ಮೈಬಣ್ಣವು ಎಣ್ಣೆಯಲ್ಲಿ ಅದ್ದಿದ ನೀರಲ ಹಣ್ಣಿನಷ್ಟು ಕಪ್ಪಾಗಿತ್ತೆಂದು ಹೇಳಬಹುದು; ಆದರೆ ಆತನ ಕಣ್ಣುಗಳು ಬಹು ಹೊಳಪುಳ್ಳವಾಗಿದ್ದು, ಕೃಷ್ಣಸರ್ಪದ ಕಣ್ಣುಗಳಂತೆ ಅವು ಭಯಂಕರವಾಗಿದ್ದವು. ಅವರು ಆ ಇಳಿದ ಸ್ಥಳಕ್ಕೆ ಹೋಗಿ ಎಡಬಲದಲ್ಲಿ ವಿಚಾರಿಸಲು, ನಿನ್ನೆ ಇಲ್ಲಿ ಇಳಕೊಂಡವರು ಇಂದು ಮಂಜಾನೆ ಮುದಗಲ್ಲಿಗೆ ಹೋದರೆಂಬ ಸುದ್ದಿಯು ಹತ್ತಿತು. ಕೂಡಲೆ ಅವರು ಮುದಗಲ್ಲಿಗೆ ಬಂದು ಶೋಧಮಾಡಹತ್ತಿದರು. ರಾಮರಾಜನು ಶೋಧಮಾಡುವ ಕ್ರಮವನ್ನು ಮೊದಲೇ ಗೊತ್ತು ಮಾಡಿದ್ದನು. ಆ ಜನರನ್ನು ಮೊದಲು ದೂರದಿಂದ ನೋಡಿ ಅವರೊಳಗಿನ ಮಾರ್ಜೀನೆಯೆಂಬ ಸ್ತ್ರೀಯನ್ನು ಮಾತ್ರ ಬೇರೆ ಕರೆದು ಭೆಟ್ಟಿಯಾಗಬೇಕೆಂದು ಆತನು ತನ್ನ ಸೇವಕನಾದ ಆ ಧನಮಲ್ಲನಿಗೆ ಹೇಳಿದ್ದನು. ಧನಮಲ್ಲನು ಏನು ಹಂಚಿಕೆ ಮಾಡಿದನೋ ಏನೋ, ಆತನು ಮಾರ್ಜೀನೆಯನ್ನು ರಾಮರಾಜನ ಎದುರಿಗೆ ತಂದು ನಿಲ್ಲಿಸಿದನು. ಆಗ ರಾಮರಾಜನು ಮಾರ್ಜೀನೆಯನ್ನು ಕುರಿತು-ಮಾರ್ಜೀನೇ, ನಿನ್ನ ಮಗಳು ನೆಟ್ಟಗಿದ್ದಾಳೆ. ಆಕೆಯ ಬಳಿಗೆ ನೀನು ಹೋಗಬೇಕೆಂದು ಇಚ್ಛಿಸುತ್ತಿದ್ದರೆ, ಇಗೋ ಈ ಮನುಷ್ಯನ ಸಂಗಡ ನಡೆ. ನಿನ್ನ ಮಗಳ ಹೇಳಿಕೆಯಿಂದಲೇ ನಾವು ನಿನ್ನನ್ನು ಹುಡುಕುತ್ತಿದ್ದೆವು. ಎರಡನೆಯವರಿಗ್ಯಾರಿಗಾದರೂ ಈ ಸುದ್ದಿಯನ್ನು ನೀನು ಹೇಳಿದರೆ, ನಿನ್ನ ಮಗಳ ಉಗುರು ಸಹ ನಿನ್ನ ಕಣ್ಣಿಗೆ