ವಿಷಯಕ್ಕೆ ಹೋಗು

ಪುಟ:Kannadigara Karma Kathe.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
vi


ಹೊನ್ನುಡಿ

ನಾಡಿನ ಭಾಷೆ, ಸಂಸ್ಕೃತಿ ಮತ್ತು ಜನಜೀವನದ ಪರಿಮಾಣವನ್ನು ಅಳೆಯುವುದರಲ್ಲಿ ಅಲ್ಲಿನ ಸಾಹಿತ್ಯದ ಕೃತಿಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಸುಮಾರು ಎರಡು ಸಾವಿರದ ಐದನೂರು ವರ್ಷಗಳಿಗೂ ದೀರ್ಘವಾದ ಐತಿಹಾಸಿಕ ಪರಂಪರೆ ಚೆಲುವ ಕನ್ನಡ ನಾಡಿನದು. ಹಾಗೆಯೇ ಅದರ ಸಾಹಿತ್ಯ ಕೂಡ ಪಂಪ, ಕುಮಾರವ್ಯಾಸ, ಶರಣರು, ದಾಸರು ಮೊದಲಾದವರಿಂದ ಸಮೃದ್ಧವಾಗಿ ಬೆಳೆದಿದೆ. ಅದರ ಸಮೃದ್ಧತೆಗೆ ಏಳು ಜ್ಞಾನಪೀಠಗಳ ಗರಿಮೆಯೇ ಸಾಕ್ಷಿ.

ಕರ್ನಾಟಕವು ಏಕೀಕರಣಗೊಂಡು ೫೫ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಈ ಸಂದರ್ಭದಲ್ಲಿ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ಆಚರಿಸುತ್ತಿರುವುದು ಒಂದು ಐತಿಹಾಸಿಕವೂ ಹಾಗೂ ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ.

ವಿಶ್ವ ಕನ್ನಡ ಸಮ್ಮೇಳನದ ಸಂಭ್ರಮಾಚರಣೆಯ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕನ್ನಡ ನಾಡಿನ ವಿವಿಧ ಕ್ಷೇತ್ರಗಳಲ್ಲಾಗಿರುವ ಪ್ರಗತಿಯ ಆತ್ಮಾವಲೋಕನದ ಜೊತೆಗೆ ಕನ್ನಡ ಸಾಹಿತ್ಯದ ಸೃಜನಶೀಲ ಹಾಗೂ ಸೃಜನೇತರ ಪ್ರಕಾರದ ೧೦೧ ಕೃತಿಗಳನ್ನು, ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಪ್ರಕಟಿಸಲಾಗುತ್ತಿದೆ.

ಈ ವಿಶಿಷ್ಟ ಕೃತಿಗಳನ್ನು ಆಯ್ಕೆ ಮಾಡಿದ ಆಯ್ಕೆ ಸಮಿತಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ನನ್ನ ವಂದನೆಗಳು. ಈ ಸಾಹಿತ್ಯ ಮಾಲಿಕೆಯನ್ನು ಸಾಹಿತ್ಯಾಭಿಮಾನಿಗಳು ಸ್ವಾಗತಿಸುವ ಮೂಲಕ ಈ ಕೃತಿಗಳ ಸದುಪಯೋಗ ಪಡೆದುಕೊಳ್ಳುತ್ತಾರೆಂದು ಭಾವಿಸಿದ್ದೇನೆ.

(ಐ.ಎಂ. ವಿಠಲಮೂರ್ತಿ) ವಿಶೇಷಾಧಿಕಾರಿಗಳು

ವಿಶ್ವ ಕನ್ನಡ ಸಮ್ಮೇಳನ