ಅನುಭವದ ಲಾಭ ದೊರೆತು ಯಕ್ಷಗಾನದ ಪುನರುತ್ಥಾನದ ಈ ಪರ್ವ ಪುನರ್ವ್ಯವಸ್ಥೆಯ ಪರ್ವವೂ ಆಗಬೇಕು.
ಯಕ್ಷಗಾನದ ಕಲಾವಿದನ ಬದುಕು ಬಹಳ ಶ್ರಮದಾಯಕ. ವರ್ಷಕ್ಕೆ ಇನ್ನೂರು ದಿನ, ಇಡಿ ರಾತ್ರಿಯ ಆಟಗಳು. ಊರಿಂದೂರಿಗೆ ಸಂಚಾರ, ಸಂಸಾರದಿಂದ ದೂರ, ಆರೋಗ್ಯದ ಸಮಸ್ಯೆ ಬೇರೆ. ಸಂಬಳಗಳು ಇನ್ನೂ ತೃಪ್ತಿಕರ ಮಟ್ಟದಲ್ಲಿಲ್ಲ, ಆದರೂ ಇದೊಂದು most living fantacy. ಆದುದರಿಂದ ಕಲಾವಿದನ ಸ್ವಂತ ಗೀಳು ಅವನ ಚಾಲಕಶಕ್ತಿ, ಕಲಾವಿದನ ಸ್ಥಿತಿ ಸುಧಾರಣೆಗೆ ವ್ಯಾಪಕ ಪ್ರಯತ್ನ ನಡೆಯಬೇಕಾದುದು ಕಲೆಯ ಉಳಿವಿಗೆ, ಬೆಳವಣಿಗೆಗೆ ಬಹು ಮುಖ್ಯ. ಗುಣ ಗಾತ್ರಗಳೆರಡರಲ್ಲೂ ವಿಶೇಷವಾಗಿ ಬೆಳೆದಿರುವ ಕರಾವಳಿಯ ಯಕ್ಷಗಾನ ಇನ್ನೂ ಕೂಡ ಪ್ರಚಾರ ಪ್ರಸಾರಗಳಲ್ಲಿ ಅಖಿಲ ಕರ್ನಾಟಕ ವ್ಯಾಪ್ತಿಯನ್ನು ಹೊಂದದಿರುವುದು ವಿಚಿತ್ರ ಸತ್ಯ. ಯಕ್ಷಗಾನಕ್ಕೆ 'ಓಹೋ, ಆಹಾ' ಎಂಬ ಅಚ್ಚರಿ. ಬೆರಗಿನ ಮೆಚ್ಚುಗೆಯಾಗಲಿ, ಜಾನಪದ ವೈಶಿಷ್ಟ್ಯ ಎಂಬ ಸರಳ ಪ್ರೋತ್ಸಾಹಕರ ವಿಮರ್ಶೆಯಾಗಲಿ ಸಾಲದು. ಅದರ ಎಲ್ಲ ಅಂಗಗಳ ಸೌಂದರ್ಯವನ್ನು ವ್ಯಷ್ಟಿಯಾಗಿ ಮತ್ತು ಸಮಷ್ಟಿಯಾಗಿ ಗುರುತಿಸಿ ಮೆಚ್ಚುವ ವಿಮರ್ಶಿಸುವ ಪ್ರವೃತ್ತಿ ಬೆಳೆಯಬೇಕಾದುದು ಮುಖ್ಯ.
ಕರ್ನಾಟಕವು ಸಹ್ಯಾದ್ರಿಯನ್ನು, ಪಂಪ, ಕುಮಾರವ್ಯಾಸರನ್ನು ಪಡೆದು ಸಾಂಸ್ಕೃತಿಕವಾಗಿ ಭಾಗ್ಯಶಾಲಿಯಾಗಿದೆ ಎಂಬ ಮಾತಿದೆ ನಿಜ, ಆ ಎಲ್ಲದರ ಕಲಶವಾಗಿರುವ ಯಕ್ಷಗಾನ ಕರ್ನಾಟಕದ ಸಾಂಸ್ಕೃತಿಕ ಸಂಪತ್ತಿನ ಅತ್ಯಂತ ಶ್ರೇಷ್ಠ ನಿಧಿ, ಕರ್ನಾಟಕ ಸಂಸ್ಮರಣೆಯ ಶ್ರೀಗಂಧ.
[ಇದು 18-9-1983 ರಂದು ತಿಪಟೂರಿನ ಕೆನಹಳ್ಳಿಯ ಮೂಡಲಪಾಯ ಯಕ್ಷಗಾನ ಟ್ರಸ್ಟ್ ಆಶ್ರಯದಲ್ಲಿ ನಡೆದ ವಿಚಾರಸಂಕಿರಣದಲ್ಲಿ ಮಂಡಿಸಿದ ಪ್ರಬಂಧ.]
#. 'ಪಡುವಲಪಾಯ' ಎಂಬ ಪದವು, ಮೂಡಲಾಯಕ್ಕಿಂತ ಭಿನ್ನವಾದ ಕರಾವಳಿಯ ಯಕ್ಷಗಾನವನ್ನು ಸೂಚಿಸಲು, ವಿದ್ವಾಂಸರು ಇತ್ತೀಚೆಗೆ ಸೃಷ್ಟಿಸಿದ ಪರಿಭಾಷೆ, ಕರಾವಳಿಯ ಯಕ್ಷಗಾನದಲ್ಲಿ ಇದು ಬಳಕೆಯಲ್ಲಿಲ್ಲ. ವ್ಯಾಪಕ, ಸ್ಕೂಲ, ವಿಭಾಗ ಸೂಚನೆಗೆ ಅನುಕೂಲವಾದ ಪದ ಪ್ರಯೋಗವಿದು. #. ಶಿವರಾಮ ಕಾರಂತ: ಯಕ್ಷಗಾನ ಬಯಲಾಟ: ದ್ವಿ. ಮು. 1963, ಪುಟ 42 'ಯಕ್ಷೌಘಗೀತಮಪಿ ಗಾನಶೈಲಿಂ' ಎಂಬ, ಗೋವಿಂದದೀಕ್ಷಿತಕೃತ 'ಸಂಗೀತಸುಧಾ' ಗ್ರಂಥದ ಉಲ್ಲೇಖವೂ ಇದರ ಜತೆಗೆ ಬಂದಿದೆ.