ವಿಷಯಕ್ಕೆ ಹೋಗು

ಪುಟ:Kedage.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

40/ಕೇದಗೆ

9. ಹದವಾದ ಕಥಾವೇಗ.
10. ಯಕ್ಷಗಾನದ ವೇಷಪದ್ಧತಿಗೆ ಅನುಗುಣವಾದ ಕಥೆ, ಕಥಾವಸ್ತು.
11. ಮೇಲಿನ ಗುಣಗಳ ಜತೆಗೆ ಯಕ್ಷಗಾನದ ಸ್ವರೂಪಕ್ಕೆ ಅನುಗುಣವಾಗಿ, ಹೊಸ ಆಶಯಗಳನ್ನು ನೀಡುವ ಪ್ರಾಯೋಗಿಕ ದೃಷ್ಟಿಯೂ ಇದ್ದರೆ, ಸ್ವಾಗತಾರ್ಹ.

ಒಂದು ಪ್ರಸಂಗದಲ್ಲಿ, ಇಂದಿನ ರಂಗಸ್ಥಿತಿಯಿಂದ (Theatre situation) ಹೇಳುವುದಾದರೆ, ಸುಮಾರು ಇನ್ನೂರಐವತ್ತಕ್ಕೆ ಮೀರದಂತೆ ಪದ್ಯಗಳ ಸಂಖ್ಯೆ ಇರಬೇಕು. ಇಂದು ರಂಗದಲ್ಲಿ ಸಾಮಾನ್ಯವಾಗಿ ಬಳಕೆಯಾಗುವುದು ಸುಮಾರು ಇನ್ನೂರು ಪದ್ಯಗಳು ಮಾತ್ರ. ಒಳ್ಳೆಯ ಸತ್ವಶಾಲಿಯಾದ ಪ್ರಸಂಗ ಕೂಡ, ಅತಿಯಾದ ಪದ್ಯಸಂಖ್ಯೆಯಿಂದ, ತೆಳ್ಳಗಾಗಿ ಹೋಗುವುದಕ್ಕೆ ಹಲಸಿನ ಹಳ್ಳಿಯವರ ಭೀಷ್ಮವಿಜಯ ಒಂದು ದೃಷ್ಟಾಂತ. (ಭೀಷ್ಮವಿಜಯದಲ್ಲಿ 489 ಪದ್ಯಗಳಿವೆ) ಅದನ್ನೊಂದು ಅಚ್ಚುಕಟ್ಟಾದ ಪ್ರಸಂಗವಾಗಿ ಸಂಗ್ರಹಿಸುವುದೇ ಪ್ರಯಾಸದ ಕೆಲಸ.

ಹಾಗೆಯೇ ಒಂದು ಪದ್ಯವು ದೀರ್ಘವಾಗಿ ಇದ್ದರೆ, ರಂಗದಲ್ಲಿ ನಟರಿಗೆ ತೊಂದರೆಯಾಗುತ್ತದೆ. ಉದಾ: ರತ್ನಾವತಿ ಕಲ್ಯಾಣ, ಧನಗುಪ್ತ ಮಹಾಬಲಿ ಪ್ರಸಂಗಗಳ ಕೆಲವು ಪದ್ಯಗಳು.

ಈ ಸ್ಕೂಲವಾದ ನಿಕಷಗಳ ಮೇಲಿಂದ ಪರೀಕ್ಷಿಸುವಾಗ ಭೀಷ್ಮಪರ್ವ, ಇಂದ್ರಜಿತುಕಾಳಗ, ಪಂಚವಟಿ, ಕರ್ಣಾರ್ಜುನ, ವಿರಾಟಪರ್ವ, ಬಿಲ್ಲಹಬ್ಬ, ದೌಪದೀಸ್ವಯಂವರ, ಅಕ್ಷಯಾಂಬರ, ನಳದಮಯಂತಿ, ಮುಂತಾದ ಪ್ರಸಂಗಗಳು ಪ್ರಸಂಗರಚನೆಗೆ ಮಾದರಿಯಾಗಿ ನಿಲ್ಲಬಲ್ಲ ಗುಣಗಳನ್ನು ಹೊಂದಿವೆ.

ಇಲ್ಲಿ ಗಮನಿಸಬೇಕಾದ ಒಂದು ಮಹತ್ತ್ವದ ಸಂಗತಿ ಇದೆ. ಆರ್ವಾಚೀನ ಪ್ರಸಂಗಸಾಹಿತ್ಯವನ್ನು ಗಮನಿಸಿದರೆ, ಹೆಚ್ಚುಕಡಿಮೆ ಎಲ್ಲ ರಚನೆಗಳೂ ರಂಗ ದೃಷ್ಟಿಯಿಂದ ಪ್ರಬುದ್ಧವಾಗಿವೆ. ಸಮರ್ಥವಾಗಿವೆ. ಸಾಂಪ್ರದಾಯಿಕ ಪ್ರಸಂಗಗಳಲ್ಲಿರುವ ಕೊರತೆಗಳನ್ನು ಮಿತಿಗಳನ್ನು ಮೀರಿ, ದಾಟಿ ಮೂಡಿಬಂದಿವೆ. ಈ ದೃಷ್ಟಿಯಿಂದ ಆಧುನಿಕ ಪ್ರಸಂಗಸಾಹಿತ್ಯ ಸಮೃದ್ಧವೂ, ಶ್ರೀಮಂತವೂ ಆಗಿದೆ. ಇದು ಒಂದು ಸಹಜವಾದ ಪ್ರಕ್ರಿಯೆ. ಇಂದಿನ ಹೆಚ್ಚಿನ ಪ್ರಸಂಗ ಕರ್ತೃಗಳು ನೇರವಾಗಿ ರಂಗಸ್ಥಳವನ್ನು - ಕೆಲವೊಮ್ಮೆ ಒಂದು ವಿಶಿಷ್ಟವಾದ ಯಕ್ಷಗಾನ ಮಂಡಳಿಯನ್ನು ದೃಷ್ಟಿಯಲ್ಲಿರಿಸಿಯೇ ಪ್ರಸಂಗಗಳನ್ನು ಬರೆಯುತ್ತಾರೆ. ಹೀಗಾಗಿ, ಇತ್ತೀಚಿನ ಹೆಚ್ಚಿನ ರಚನೆಗಳಲ್ಲಿ ಜೀವಂತವಾದ, ಸಕ್ರಿಯವಾದ ರಂಗದೃಷ್ಟಿ ಸ್ಪುಟವಾಗಿ ಕಾಣಿಸುತ್ತದೆ. (ಬೇರೆ ದೃಷ್ಟಿಗಳಿಂದ ಅವುಗಳ