ಪುಟ:Kedage.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

44 ಕೇದಗೆ

ತಾಳಮದ್ದಲೆಯೂ ಒಂದು ರಂಗಪ್ರಕಾರ ಎಂಬುದೇ ಅದರ ಸ್ವರೂಪ ವಿಶೇಷ, ಅದರ ಸ್ವಾರಸ್ಯ. ಆ ಪ್ರಕಾರವನ್ನು 'ಲುಪ್ತನಾಟ್ಯ' ವೆಂದು ಹಿರಿಯ ವಿದ್ವಾಂಸ ಸೇಡಿಯಾಪು ಕೃಷ್ಣ ಭಟ್ಟರು ಕರೆದಿರುವುದು ತುಂಬ ಅರ್ಥಪೂರ್ಣವಾಗಿದೆ.*

ಹಿರಿಯ ಅರ್ಥಧಾರಿಗಳಾಗಿದ್ದ ದಿ| ಕುಬಣೂರು ಬಾಲಕೃಷ್ಣರಾಯರು ಒಂದು ಮಾತನ್ನು ಆಗಾಗ ಹೇಳುವುದಿತ್ತು : “ತಾಳಮದ್ದಲೆಯಲ್ಲಿ ಅರ್ಥ ಹೇಳುವುದಲ್ಲ, ಅರ್ಥ ಮಾತಾಡುವುದು” ಎಂದು. “ನೀವು ಈ ದಿನ ಅರ್ಜುನನ ಅರ್ಥ ಮಾತನಾಡಿ” ಎಂಬಂತೆ ಅರ್ಥಧಾರಿಗೆ (ಅಂದರೆ ಪಾತ್ರಧಾರಿಗೆ) ಸೂಚಿಸುವ ಕ್ರಮ ತಾಳಮದ್ದಲೆ ಕ್ಷೇತ್ರದಲ್ಲಿ ಬಳಕೆಯಲ್ಲಿದೆ. ಇಲ್ಲಿ “ಅರ್ಥವನ್ನು ಮಾತಾಡುವುದು' ಎಂಬ ಪ್ರಯೋಗ ಅರ್ಥಪೂರ್ಣ. ಇಲ್ಲೊಂದು ತತ್ತ್ವ ಅಡಗಿದೆ. ಅರ್ಥಧಾರಿ (ಅಥವಾ ಅರ್ಥಗಾರ)ಯು ಪ್ರಸಂಗವೆಂಬ ಹಾಡುಗಬ್ಬದ ಪದ್ಯಗಳ ಅರ್ಥವನ್ನು ಹೇಳುವುದಲ್ಲ. ಅಂದರೆ ತಾನು ತನ್ನ ಕಾಲದಲ್ಲಿ ನಿಂತು ಮೂರನೆಯವನಾಗಿ ಪದ್ಯಗಳ ಅರ್ಥವನ್ನು ವ್ಯಾಖ್ಯಾನಕಾರನಂತೆ, ವಚನಕಾರನಂತೆ ಹೇಳುವುದಲ್ಲ. ಅವನು ತಾನೇ ಪಾತ್ರನಾಗಿ ಪದ್ಯಗಳನ್ನು ಆಧರಿಸಿ ಅದರ ಅರ್ಥವನ್ನು 'ಮಾತನಾಡುವುದು' ಅಂದರೆ ಪಾತ್ರವಾಗಿ ಮಾತಾಡುವುದು ಎಂದರ್ಥ.

ಅರ್ಥಧಾರಿಯ ಮಾತುಗಾರಿಕೆ ಸಿದ್ಧಪಡಿಸಿದ ಬಾಯಿಪಾಠವಲ್ಲ. (ಅದರಲ್ಲಿ ಸಿದ್ಧವೆನಿಸಬಹುದಾದ ಭಾಗಗಳು ಕೆಲವು ಅರ್ಥಧಾರಿಗಳಲ್ಲಿ ಇರಬಹುದಾದರೂ) ಅದು ಆಶುಭಾಷಣಸ್ವರೂಪದ ಸಾಹಿತ್ಯ, ನಿಜಾರ್ಥದ 'ವಾಙ್ಮಯ'. ಇದು ರಂಗದಲ್ಲಿ ಸಿದ್ಧವಾಗುವ ಸ್ವತಂತ್ರಭಾಷಣ, ಸಂಭಾಷಣ ಎಂದರೆ ಈ ಕ್ಷೇತ್ರದ ಪರಿಚಯವಿಲ್ಲದೆ ನಂಬದಿರುವುದುಂಟು. ಅರ್ಥಧಾರಿಗಳ ಮಾತಿನಲ್ಲಿ ಬರುವ ವಿಷಯಸಮೃದ್ಧಿ, ರಸಾವಿಷ್ಕಾರ, ಸಂಭಾಷಣಸೌಂದಯ್ಯ, ಸಹಜವಾದ ನಾಟಕೀಯತೆಗಳಿಂದಾಗಿ ಅಂತಹ ಅಭಿಪ್ರಾಯ ಬರುವುದು ಸಹಜ, ಮಾತ್ರವಲ್ಲ 'ಇದು ಪೂರ್ವಸಿದ್ಧತೆಯಿಂದಲೇ ಮೂಡಿದುದು' ಎಂಬುದು ಈ ರಂಗಕ್ಕೆ ಸಲ್ಲುವ ಪ್ರಶಂಸೆಯೂ ಹೌದು. ಆದರೆ ಸೂಕ್ಷ್ಮವಾಗಿ ಪರಿಶೀಲಿಸಿದರೆ ಅರ್ಥಧಾರಿಯ ಅರ್ಥ ಮಾತಾಡುವಿಕೆ ಎಂಬ ಪಾತ್ರನಿರ್ವಹಣವು ತನ್ನ ಸ್ವರೂಪದಲ್ಲಿ 'ಮಾತು' ಆಗಿರುತ್ತದೆ. ಲಿಖಿತ ಪಾಠದ 'ಕೊಡುವಿಕೆ' ಯಾ ಒಪ್ಪಿಸುವಿಕೆ ಆಗಿರುವುದಿಲ್ಲ. ಅದರಲ್ಲಿರುವ ಸಾಹಿತ್ಯದ ಗುಣವಷ್ಟೇ ಏಕೆ ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಅದರಲ್ಲಿ ಮಾತಿನ ಕಲೆ ಇರುತ್ತದೆ. ಸಾಹಿತ್ಯವು 'ಮಾತು' ಆಗಿ ಅಭಿವ್ಯಕ್ತವಾದಾಗ ಅದಕ್ಕೆ ಬರುವ ಜೀವಶಕ್ತಿ ಎಂತಹದು<
_____________________________________________________________________ * ರಾಷ್ಟ್ರ ಮತ, ಮಂಗಳೂರು ವಿಶೇಷಾಂಕದ ಲೇಖನ - ತಾಳಮದ್ದಲೆಯ
ಸುಧಾರಣೆ, 1938