ಪುಟ:Kedage.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರ್ಥಗಾರಿಕೆ : ಸೃಜನಶೀಲದೃಷ್ಟಿ/ 59

ಆದರೆ ಬೇರೊಂದು ಪಾತ್ರದ ನಿಲುಮೆ ಒಂದು ಪಾತ್ರಕ್ಕೆ ಗೊತ್ತಿರುವುದೆಷ್ಟು? ಎಷ್ಟು ಗೊತ್ತಿರಲು ಸಾಧ್ಯ. ಪ್ರಸಿದ್ಧವಾಗಿ ತಿಳಿದು ಯಾ ಸಹವಾಸದಿಂದ ಅರಿತ ಸಂಗತಿಯಾಗಿ ಮೂಡಬಹುದಾದುದು ಎಷ್ಟು? ಎಂಬ ಬಗೆಗೆ ಎಚ್ಚರ ಇರಬೇಕು. ಧರ್ಮರಾಜನ ನಿಲುಮೆಯೇನು, ಭೀಮನೇನು ಇದು ಕೃಷ್ಣನಿಗೆ ಚೆನ್ನಾಗಿ ಯಾವಾಗಲೂ ತಿಳಿದಿದೆ ಎನ್ನೋಣ. ಕೌರವನ ಬಗೆಗೆ ಕೃಷ್ಣನಿಗೆ ಇಂತಹದೊಂದು ತಿಳುವಳಿಕೆ ಇರುವಂತೆ ವರ್ತಿಸಬಾರದಷ್ಟೆ! ಕೌರವನ ಮುಖ್ಯವಾದ ಧೋರಣೆ ಏನು ಎಂಬುದು ಕೃಷ್ಣನಿಗೆ ತಿಳಿದಿದೆ ಎಂದಿಟ್ಟುಕೊಂಡರೂ ಹಾಗೇ ಮೇಲಾಗಿ ಒಬ್ಬನು ಹೇಳಿದ ವಿಚಾರಗಳ ಶಬ್ದಶಃ ವಿವೇಚನ ಖಂಡನಗಳು ವಿರಸಕ್ಕೂ, ಅನೌಚಿತ್ಯಕ್ಕೂ ಕಾರಣವಾಗುತ್ತವೆ. ಒಂದು ಮಿತಿಯಲ್ಲಿ ಈ ಪರೋಕ್ಷ ಖಂಡನ, ವಿವೇಚನಪದ್ಧತಿ ಹರಿತವಾದ ಬುದ್ಧಿ ಬಲಕ್ಕೆ ಪ್ರಸಂಗದ ಕಲಾತ್ಮಕ ಬೆಳವಣಿಗೆಗೆ ಮಾರ್ಗವಾದರೂ ಈ ಪದ್ಧತಿಯ ಹದ ತುಂಬ ನಾಜೂಕಾದದ್ದು.

ಅರ್ಥಗಾರಿಕೆಯಲ್ಲಿ ಸೃಜನಶೀಲತೆ ಎರಡು ಮುಖಗಳಿಂದ ಬರಬೇಕು. ವೈಚಾರಿಕವಾದ ನೆಲೆ ಒಂದು, ತಾಂತ್ರಿಕವಾದ ನೆಲೆ ಇನ್ನೊಂದು. ತಾಂತ್ರಿಕವಾಗಿ ಎಂದರೆ ಸ್ವರದ ಏರಿಳಿತ, ಪದ್ಯಗಳನ್ನು ಎತ್ತಿಕೊಳ್ಳುವ ಎತ್ತುಗಡೆ (ಸಂದರ್ಭ ಕೊಡುವುದು) ಸಂಭಾಷಣತಂತ್ರಗಳಲ್ಲಿ ನಾವೀನ್ಯಕ್ಕೆ ಬಹಳಷ್ಟು ಅವಕಾಶ ಇದೆ. ಮೂರು ನಾಲ್ಕು ಪಾತ್ರಗಳು ರಂಗದಲ್ಲಿ ಜತೆಯಾಗಿ ಇರುವಾಗ ಒಂದು ಪಾತ್ರವನ್ನು ಉದ್ದೇಶಿಸಿ (ಅಂದರೆ ಉಳಿದವರಿಗೆ ಅದು ಕೇಳಿಸುತ್ತಿಲ್ಲ ಎಂಬಂತೆ ಮಾತನಾಡುವ ರೀತಿ ಇಂತಹದೊಂದು ತಾಂತ್ರಿಕ ಪ್ರಯೋಗ. ಒಂದು ಪದ್ಯದ ವಿಷಯಗಳನ್ನು ಕುತೂಹಲಕ್ಕಾಗಿ ಹಿಂದು ಮುಂದಾಗಿ ಹೇಳಿ ಸಹಪಾತ್ರದ ಪ್ರತಿಕ್ರಿಯೆಗೆ ಅವಕಾಶವಿತ್ತು ಸಂಭಾಷಣೆ ಬೆಳೆಸುವ ಕ್ರಮ ಇನ್ನೊಂದು. ಪದ್ಯಗಳ ಅರ್ಥವನ್ನೇ ತುಸುವಾಗಿ ಹೇಳುತ್ತ ಚುಟುಕು ಪ್ರಶೋತ್ತರಗಳ ಮೂಲಕ ಸಂವಾದವನ್ನು ಬೆಳೆಸುತ್ತ ಸಾಗುವ ಕ್ರಮ ಮತ್ತೊಂದು (ಕೃಷ್ಣ ಸಂಧಾನದಲ್ಲಿ ದುರ್ಯೋಧನ ಬಲರಾಮ ಸಂವಾದದಂತಹ ಸಂದರ್ಭಗಳು ಇಂತಹ ತಂತ್ರಗಳಿಗೆ ಒಳ್ಳೆಯ ಅವಕಾಶ ನೀಡುತ್ತವೆ.) ಸಂಸ್ಕೃತ ನಾಟಕಗಳ ಆಕಾಶ ಭಾಷಿತದಂತಹ ವಿಧಾನದ ಬಳಕೆಯಾಗಿದೆ. ಇವುಗಳೆಲ್ಲ ಕೇಳುಗನ ಮೇಲೆ ವಿಶಿಷ್ಟ ಪರಿಣಾಮ ಬೀರುತ್ತವೆ.

ಪಾತ್ರಗಳ ಅಂತರಂಗಶೋಧನೆ ಮಾಡುತ್ತ, ಅದನ್ನು ವ್ಯಾಖ್ಯಾನಿಸುತ್ತ ತಾಳಮದ್ದಳೆ (ಯಾ ಆಟ) ಎಂಬ ಚೌಕಟ್ಟಿನಲ್ಲಿ ಅದನ್ನು ನೀಡುವುದು ಸೃಜನಶೀಲನ ಕೆಲಸ. ಈ ದೃಷ್ಟಿಯಿಂದ ಯಕ್ಷಗಾನದ ಅರ್ಥಗಾರಿಕೆ ಸಾಧಿಸಿರುವ ಸಿದ್ದಿ