ವಿಷಯಕ್ಕೆ ಹೋಗು

ಪುಟ:Kedage.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

62/ ಕೇದಗೆ

ಮನುಷ್ಯ ಪ್ರಪಂಚದ ಪದರುಗಳನ್ನು ತೆರೆದು ತೋರುವ ಸಾಮಗ್ರಿಗಳು, ಇವುಗಳನ್ನು ಮನುಷ್ಯತ್ವದ ನೆಲೆಯಲ್ಲಿ ಬಗೆದಾಗ ಕಲೆ ಅರಳುತ್ತದೆ. ಒಂದೊಂದು ಪಾತ್ರಕ್ಕೂ ಎಷ್ಟೊಂದು ಮುಖಗಳಿವೆ. ಅವುಗಳ ಮೂಲಕ ಸಾಂಸ್ಕೃತಿಕ ಪುನರ್ವ್ಯಾಖ್ಯಾನ ಹೇಗೆ ಸಾಧ್ಯ ಎಂಬುದನ್ನು ಹಿರಿಯ ಕಲಾಕಾರರು ತೋರಿಸಿಕೊಟ್ಟಿದ್ದಾರೆ. ಪಾತ್ರಗಳನ್ನು ಶಾಸ್ತ್ರದೃಷ್ಟಿಯಿಂದ, ಮನಃಶಾಸ್ತ್ರೀಯ ದೃಷ್ಟಿಯಿಂದ, ತುಂಟತನದಿಂದ ಕೂಡ ಗ್ರಹಿಸಿ ಸೃಜಿಸಿ ಕೃತಾರ್ಥರಾದ ಕಲಾವಿದರ ಮಹತ್ಸಾಧನೆ ನಮ್ಮದುರಿಗಿದೆ.

ಒಂದು ಮಾತು, ಒಂದು ವಾಕ್ಯ, ಏಕೆ ಇಡೀ ಒಂದು ಭಾಗದಷ್ಟು ಮಾತು ಮಾತಾಗಿ ಮಾತ್ರ ಸ್ವಾರಸ್ಯಯುಕ್ತವಾಗಿರಬಹುದು. ಬರೆದಾಗ ಅದು ಮಾನ್ಯವೆನಿಸಬಹುದು. ಮಾತು ಮಾತಾಗಿಯೇ ಪ್ರಕಾಶಿಸುವ ಸ್ವತಂತ್ರ ಸ್ಥಿತಿ ಅದು. ಸಾಹಿತ್ಯ ಗುಣವನ್ನಾಶ್ರಯಿಸದೆ ಸಫಲವಾಗುವ ವಾಕ್ಕಿನ ಕಲೆ ನಿಜವಾದ ಮಾತುಗಾರಿಕೆಯ ಒಂದು ದೊಡ್ಡ ಗುಣ ಇದೇ. ಕೆಲವು ಬಾರಿ ಖಾಸಗಿ ಮಾತುಗಾರಿಕೆಯಲ್ಲಿ ಕೆಲವು ವಿಷಯಗಳನ್ನು ನಿರೂಪಿಸುವಾಗ "ಇದನ್ನು ಬರೆದರೆ ಲೇಖನವೊ, ಕತೆಯೋ ಆಗಬಹುದು" ಎಂದು ಹಿತೈಷಿಗಳು ಸಲಹೆ ನೀಡಿದರೆ ಪ್ರತಿಕ್ರಿಯೆಯಾಗಿ ಒಂದು ಮಾತು ಕೇಳುತ್ತೇವೆ. ಹೇಳುತ್ತೇವೆ. "ಇದನ್ನೆಲ್ಲ ಬರೆದರೆ ಇಷ್ಟು ಸ್ವಾರಸ್ಯವಾಗಲಾರದೋ ಏನೋ. ಇದು ಹೇಳುವಾಗ ಕೇಳುವುದಕ್ಕೇ ಅಂದ" ಎಂದು. ಇದು ಬಹಳ ಸಲ ನಿಜ ಕೂಡ. ಮಾತಿನ ಶಕ್ತಿ, ಅಸಾಧಾರಣ. ಲಿಪಿಬದ್ಧ ಸಾಹಿತ್ಯಕ್ಕಿಲ್ಲದ ಹಲವು ಆಯಾಮಗಳು ಅದಕ್ಕಿವೆ. ಸ್ವರದ ಶಕ್ತಿಯ ಪ್ರಯೋಗ, ಸ್ವರದ ವಿನ್ಯಾಸ, ಆಡುಮಾತಿನ ದೇಸಿಯ ಮೋಡಿ, ಎತ್ತುಗಡೆ, ನಿಲುಗಡೆಗಳ ಬಳಕೆ. ಮಾತನಾಡುವಾಗ ಬರುವ ಒಟ್ಟು ಭಾವಾಭಿವ್ಯಕ್ತಿಸ್ವರೂಪ, ಕೈ, ಮೈಗಳ ಭಾವ ಅಭಿನಯ ಸಹ (ಇದು ಒಂದು ಬಗೆಯ ಅಭಿನಯವೇ) ಇವು ಸೇರಿ ಮಾತು ಜೀವಂತವಾಗುತ್ತದೆ. ಇಡಿಯ ಒಂದು ಸನ್ನಿವೇಶ ಮಾತಿನಲ್ಲಿ ಮರುಹುಟ್ಟು ಪಡೆಯುವಾಗ ಲಿಖಿತದಲ್ಲಿ ಇರದ ಹಲವು ಕೋನಗಳು ಅದಕ್ಕಿವೆ.

ಸ್ವರದ ಚಾತುರ್ಯಪೂರ್ಣ ಉಪಯೋಗದಿಂದ ಸಾಧಿಸಬಹುದಾದ ಪ್ರಯೋಜನ ಅಸೀಮ. ಒಂದು ಹುಂಕಾರ ಹತ್ತು ಬಗೆಯ ಭಾವ ಬಿಂಬಗಳ ಸೃಷ್ಟಿ ಮಾಡುತ್ತದೆ. ಒಂದು 'ಛೇ' 'ಏನೋ' 'ಆಹಾ'ಗಳಿಂದ ಅದ್ಭುತವನ್ನು ಸಾಧಿಸಬಹುದು. ಯಕ್ಷಗಾನದ ಮಾತುಗಾರಿಕೆಯ ಸ್ವರದಲ್ಲಿ ಒಂದು ಬಗೆಯ ಅಸಹಜತೆ, ತೂಕಗಳಿರುವುದು ಕ್ರಮ. (ಈಯೊಂದು ವಿಶಿಷ್ಟ ಸ್ವರಕ್ರಮವನ್ನು ಶ್ರುತಿಬದ್ಧತೆ, ಮಾತಿನ ಶ್ರುತಿ ಎಂದೂ ಕರೆಯುವುದುಂಟು.) ಆದರೂ