64/ ಕೇದಗೆ
ಈ ಭಾಷೆಯಲ್ಲಿ ಕಲಾವಿದರು ಬಹಳಷ್ಟು ಕೃಷಿ ಮಾಡಿದ್ದಾರೆ. ತುಳು ಬದುಕಿನ ವೈವಿಧ್ಯಮಯವಾದ ವಿವರಗಳು, ಆಟದಲ್ಲಿ ಕೌತುಕಕರವಾದ ಮರುಹುಟ್ಟು ಪಡೆದಿವೆ. ತುಳು ಆಟಗಳ ಅರ್ಥಗಾರಿಕೆ ಅಭ್ಯಾಸಯೋಗ್ಯವಾದ ಒಂದು ಕ್ಷೇತ್ರ.
ಅರ್ಥಗಾರಿಕೆ ಪ್ರಸಂಗಕ್ಕೆ ನಿಷ್ಠವಾಗಿರಬೇಕು ಎಂಬ ಮಾತು ಸಾಧಾರಣವಾಗಿ ಒಪ್ಪತಕ್ಕದ್ದೆ. ಇದು ಅರ್ಥಗಾರಿಕೆಯ ಒಂದು ಮೂಲಸೂತ್ರ. ಆದರೆ ಒಂದು ಮಟ್ಟದಲ್ಲಿ ಮಾತ್ರ ಈ ಸೂತ್ರ ನಿಜ. ಇನ್ನೊಂದು ಮಟ್ಟದಲ್ಲಿ ಸೃಜನಶೀಲ ಅರ್ಥಧಾರಿ ಪ್ರಸಂಗದ ಆಶಯವನ್ನು, ಹಂದರವನ್ನು ಮೀರಿ ನಡೆಯುತ್ತಾನೆ. ನಡೆಯಬೇಕು. ಪ್ರಸಿದ್ಧವಾದ ಪ್ರಸಂಗ "ಕರ್ಣಪರ್ವ'ದ (ಗೆರೆಸೊಪ್ಪೆ ಶಾಂತಪ್ಪಯ್ಯ, ಪಾವಂಜೆ ಗುರುರಾವ್ ಎಂಡ್ ಸನ್ಸ್ ಉಡುಪಿ) ಉದಾಹರಣೆಯನ್ನೆ ತೆಗೆದುಕೊಳ್ಳೋಣ. ಅರ್ಥಧಾರಿ ಚಿತ್ರಿಸುವ ಕರ್ಣನ ದುರಂತಮಯ ಜೀವನ, ಪಾಂಡವ ಕೌರವರ ಮಧ್ಯೆ ಹೊಯ್ದಾಡುವ ಮನಸ್ಸು ಮುಂತಾದುವುಗಳಿಗೆ ಪ್ರಸಂಗದಲ್ಲಿ ಕೊನೆಯ ಹಂತದ ಒಂದೆರಡು ಪದ್ಯಗಳನ್ನು* ಬಿಟ್ಟರೆ ಬೇರೆ ಯಾವ ಆಧಾರವೂ ಇಲ್ಲ. ಪ್ರಸಂಗವು ಸರಳವಾದ ನಿರೂಪಣೆಯಂತಿದ್ದು ಕರ್ಣನದು ಒಂದು ವೀರ ಉದ್ಧತ ಪಾತ್ರ ಮಾತ್ರವಾಗಿದೆ. ಅರ್ಥಧಾರಿ ಅಷ್ಟನ್ನೆ ಚಿತ್ರಿಸಿದರೆ ಸಾಕೆ? ಅದರ ಹೊರಗಿನ ವಿಷಯಗಳನ್ನು ತಂದು ಅಭಿವ್ಯಕ್ತಿಸಿದರೆ ಪ್ರಸಂಗದ ಆಶಯವನ್ನು ಮೀರಿದಂತೆ, ಬದಲು ಮಾಡಿದಂತೆ ಆಗಲಾರದೆ? ಆಗುತ್ತದೆ ನಿಜ. ಆದರೆ ಅದು 'ಭೂಷಣಂ ನ ತು ದೂಷಣಂ.' ಅರ್ಥಧಾರಿಯ ಕೆಲಸ ಪ್ರಸಂಗಕ್ಕೆ ಪ್ರತಿಯಾದ, ಪ್ರತಿಕಾವ್ಯಸೃಷ್ಟಿ ಕೂಡ ಹೌದು. ಆಧುನಿಕ ನಾಟಕ ದಿಗ್ದರ್ಶಕನೊಬ್ಬನಿಗೆ ನಾಟಕವು ಒಂದು ದ್ರವ್ಯ ಮಾತ್ರ. ರಂಗದಲ್ಲಾಗುವ ಪ್ರಯೋಗ, ರಂಗನಾಟಕ, (Stage production) ಅವನದೇ ಕೂಸು. ಹಾಗೆಯೇ. ಮಾತ್ರವಲ್ಲ, ಅದಕ್ಕಿಂತಲೂ ಹೆಚ್ಚಾದ ಸ್ವಾತಂತ್ರ್ಯ ವಹಿಸಬಹುದು ಅರ್ಥಧಾರಿ. ಏಕೆಂದರೆ, ಇಲ್ಲಿ ಮಾತು ಇವನದೇ, ಪ್ರಸಂಗದ ಸ್ಕೂಲವಾದ ಬಂಧವು ನೀಡುವ ವಿನ್ಯಾಸಕ್ಕೆ ನಾಟಕೀಯ ನೆಲೆಯಲ್ಲಿ ವ್ಯತಿರೇಕವಾಗುವ, ಪ್ರಸಂಗದ ಅಂಗಭಂಗವಾಗುವ, ಹಾಗೆ ಈ ಸೃಜನಶೀಲತೆ ಬಳಕೆಯಾಗಬಾರದು.
ಹಾಸ್ಯಗಾರನು ವಹಿಸುವ ಪಾತ್ರಗಳಿಗೆ, ಆಟದಲ್ಲೂ ತಾಳಮದ್ದಳೆಯಲ್ಲೂ ವಿಶೇಷವಾದ ಸೌಲಭ್ಯಗಳಿವೆ. ವಿಡಂಬನೆ, ವಿಚಿತ್ರ ವ್ಯಾಖ್ಯಾನ ಜೀವನವಿವೇಚನೆಗಳಲ್ಲಿ ಅವನಿಗೆ ಕಾಲ ದೇಶಗಳ ಬಂಧ ಅಷ್ಟಾಗಿ ಇಲ್ಲ.
* ಏನ ಮಾಡುವದಿನ್ನು ದೈವವಿ | ಹೀನನಲ್ಲಾನೃಪತಿ .., ಎನ್ನ ಕುಲವ ಕೃಷ್ಣನು ಎಚ್ಚರಿಸುತ ಎನ್ನೊಡೆಯನ ಕೊಂದನು....., ಮುಂತಾಗಿ,