ಪುಟ:Kedage.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುನ್ನುಡಿ

'ಕೇದಗೆ' ಬಲು ತೀಕ್ಷ್ಣವಾದ ಪರಿಮಳವಿರುವ ಹೂ ಎಸಳು. ತುಳುನಾಡಿನ ತಾಯಂದಿರಿಗೆ ಬಹಳ ಇಷ್ಟವಾಗಿರುವಂಥದು. ಇದಕ್ಕೂ ಯಕ್ಷಗಾನಕ್ಕೂ ಏನು ಸಂಬಂಧ? ಯಕ್ಷಗಾನದಲ್ಲಿ 'ಕೇದಗೆ ಮುಂದಲೆ' ಎಂಬ ಶಿರೋಭೂಷಣವಿದೆ. 'ಕೇದಗೆ' ಎಂಬ ಆಭರಣದ ಜಾಗದಲ್ಲಿ ಹಿಂದೆ ಕೇದಗೆ ಎಸಳುಗಳನ್ನ ಕೋದು ಸಿಂಗರಿಸುತ್ತಿದ್ದರಂತೆ. ಇಷ್ಟರಿಂದ, ನಿಮ್ಮ ಕೈಯಲ್ಲೀಗ ತೆರೆದುಕೊಂಡಿರುವ, ಗೆಳೆಯ ಶ್ರೀ ಎಂ. ಪ್ರಭಾಕರ ಜೋಶಿ ಅವರ ಹೊತ್ತಗೆಯ ಹೆಸರಿಗೆ ವಿಶೇಷ ಅರ್ಥ ಹುಟ್ಟಿತೆನ್ನಲಾಗದು. ಯಕ್ಷಗಾನರಂಗದಲ್ಲಾಗುವ ಭಾವಾಭಿವ್ಯಂಜನಕ್ಕೆ ಇತರ ರಂಗಪ್ರಕಾರಗಳಲ್ಲಿ ಕಾಣಸಿಗದ, ತೀಕ್ಷ್ಣತೆ ಇದೆ - ಕೇದಗೆಯ ಪರಿಮಳದಂತೆ, ಇಲ್ಲಿ, ಈ ಹೊತ್ತಗೆಯಲ್ಲಿ. ಬಲು ನಿಶ್ಚಿತವಾದ ವೈಚಾರಿಕ ಸೀಳುನೋಟಗಳಿಂದ, ಯಕ್ಷಗಾನದ ಲಕ್ಷ ಲಕ್ಷಣಗಳನ್ನು, ಬೇಕು—ಬೇಡಗಳನ್ನು ಸಮೀಕ್ಷಿಸುವ ಕೆಲಸವನ್ನು ಜೋಶಿ ಅವರು ಮಾಡಿದ್ದಾರೆ. ಈ ಅರ್ಥದಲ್ಲಿ ಈ ಗ್ರಂಥಕ್ಕೆ 'ಕೇದಗೆ' ಅನ್ವರ್ಥವಾದ ಹೆಸರು.

ತನ್ನ ಮೊದಲ ಪ್ರಬಂಧಸಂಕಲನ (ಜಾಗರ) ಕ್ಕೆ ರಾಜ್ಯಮಟ್ಟದ ಪ್ರಶಸ್ತಿಯನ್ನು ಗೆದ್ದು ಕೊಂಡಿರುವ ಜೋಶಿ ಅವರ ಈ 'ಕೇದಗೆ ಇನ್ನಾವ ಮುಡಿಯನ್ನು ಅಲಂಕರಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಇವೆರಡೂ ಗ್ರಂಥಗಳು ಯಾವ ರತ್ನಪರೀಕ್ಷಕನ ಮುಂದೆಯೂ ಅಪ್ಪಟ ಎಂದು ಸ್ಥಿರಗೊಳ್ಳುವುದರಲ್ಲಿ ಸಂದೇಹ ಬೇಡ.

ಯಕ್ಷಗಾನದ ಬಗೆಗೆ ಇದುವರೆಗೆ ಲಿಖಿತವಾಗಿ ಹಾಗೂ ಭಾಷಣರೂಪದಲ್ಲಿ ಬಂದಿರುವ ವಿಮರ್ಶೆಗಳನ್ನು ಸ್ಥೂಲವಾಗಿ ಎರಡು ದರ್ಜೆಗಳಲ್ಲಿ ವಿಂಗಡಿಸಬಹುದು. ಒಂದು ವರ್ಗದಲ್ಲಿ ಇರುವವರು ಯಕ್ಷಗಾನರಂಗದ ಯಾವ ವಿಭಾಗದಲ್ಲೂ ಸಮಗ್ರವಾದ ಪರಿಶ್ರಮ ಇಲ್ಲದೆ, ಕೇವಲ ಹೊರಗಿನವರಾಗಿದ್ದು, ಅದನ್ನು ಅಭ್ಯಸಿಸಿದ ಕಲಾರಸಿಕರು. ಇನ್ನೊಂದು ವರ್ಗದಲ್ಲಿ ಯಕ್ಷಗಾನದ ಜತೆಗೆ ತಾವೂ ಜೀವಿಸುತ್ತ ಅದರ ಎಲ್ಲ ಆಗುಹೋಗುಗಳಲ್ಲಿ ತಮಗೂ ಒಂದಿಷ್ಟು ಪಾತ್ರ ಇರುವ ಜನರು. ಇವೆರಡು ವರ್ಗಗಳ ಜನರಿಂದ ಆರೋಗ್ಯಪೂರ್ಣಚಿಂತನ ಸಾಧ್ಯ ಎಂಬುದಕ್ಕೆ ಇನ್ನೂ ಪುರಾವೆ ಸಿಗಬೇಕಷ್ಟೆ. ಒಂದು ವರ್ಗದಲ್ಲಿ ಕಲೆಯ ಸಮಗ್ರದರ್ಶನದ ಅಭಾವ, ಇನ್ನೊಂದರಲ್ಲಿ ಕಲೆಯ ಆಗುಹೋಗುಗಳಲ್ಲಿ ತಮ್ಮ ಶಾಮಿಲಿನಿಂದಾಗಿ ನಿರ್ಲಿಪ್ತ ಚಿಂತನೆಯ ಅಸಾಮರ್ಥ್ಯ. ಈ ದೃಷ್ಟಿಯಲ್ಲಿ

vii