ನಾಮಗಳಲ್ಲಿ ಮುಖ್ಯವಾಗಿ ಎರಡು ವಿಧ. ಉದ್ದನಾಮ ಅಥವಾ ಊರ್ಧ್ವ ಪುಂಡ್ರ ಮತ್ತು ಅಡ್ಡನಾಮ ಅಥವಾ ತ್ರಿಪುಂಡ್ರ, ಚಿಹ್ನೆಗಳು ಹಲವು ವಿಧ ವಾಗಿವೆ - ಅಶ್ವತ್ಥದ ಎಲೆ, ವಜ್ರಾಕೃತಿ, ಕಣ್ಣು, ಉರುಟು ಬೊಟ್ಟು, ಶಿವಲಿಂಗ, ಕಮಲ, ತ್ರಿದಳಾಕೃತಿ (ಕಳಾವರ್ ಆಕಾರ), ಚಕ್ರ, ಹೂವು ಇತ್ಯಾದಿ. ನಾಮಗಳ ಮತ್ತು ಚಿಹ್ನೆಗಳ ಬಳಕೆ ಮೂಗಿನಿಂದಾರಂಭಿಸಿ ಹಣೆಯ ಅಲಂಕಾರಕ್ಕೆ ಮುದ್ರೆ ಗಳು ಕಣ್ಣಿನ ಕೆಳಗಡೆ ಮತ್ತು ಗದ್ದದ ಮೇಲೆ, ಇವು ಮುಖ್ಯವಾಗಿ ಉರುಟಾಗಿ ಮತ್ತು ಗೇರುಬೀಜದ ಆಕೃತಿಯ ವಿವಿಧ ವಿನ್ಯಾಸಗಳು. ಗೀರುಗಳನ್ನು ಹಣೆಯ ಮೇಲೆ ಮತ್ತು ಮುದ್ರೆಗಳ ಸುತ್ತ ಎಳೆಯುವರು. ಗೀರುಗಂಧವೆಂದರೆ ಗೀರು ಗಳಿಂದ ಎಳೆದ ತ್ರಿಪುಂಡ್ರ ಅಥವಾ ಅಡ್ಡನಾಮ, ಹಣೆಯಲ್ಲಿ ಇದರ ಬಳಕೆ. ಮುತ್ತರಿ ಎಂದರೆ ಮುದ್ರೆ ಮತ್ತು ನಾಮಗಳ ಹೊರಗೆ ಇಡುವ ಬಿಳಿ ಚುಕ್ಕಿಗಳ ಸಾಲು, ವರ್ಣಭಾಯೆಗಳನ್ನು (Shading) ಮುದ್ರೆಗಳ ಸುತ್ತ ಮತ್ತು ಕಣ್ಣಿನ ಕೆಳಗೆ ಅವು ಎದ್ದು ಕಾಣುವುದಕ್ಕೆ ಪಾತ್ರಗಳ ಸ್ವಭಾವಚಿತ್ರಣಕ್ಕೆ ಬಳಸುವರು. ಉದಾ: ದುರ್ವಾಸ ಮುನಿಯ ಕಣ್ಣಿನ ಕೆಳಗೆ ಕೆಂಪು ಛಾಯೆ. ಚುಟ್ಟಿಯೆಂದರೆ ಅಕ್ಕಿಹಿಟ್ಟು ಮತ್ತು ಸುಣ್ಣದ ಮಿಶ್ರಣದಿಂದ ಮುಳ್ಳುಗಳಂತೆ ಇರಿಸುವ ಸಾಲುಗಳ ವಿನ್ಯಾಸ, ಇವು ಹತ್ತಾರು ಬಗೆಯಲ್ಲಿವೆ. ಸುಳಿ ಎಂದರೆ ಮುಖ್ಯವಾಗಿ ವಾಲಿ, ಹನುಮಂತ ಮುಂತಾದ ಕಪಿ ವೇಷಗಳಿಗೆ ಮುಖದಲ್ಲಿ ಬರೆಯುವ ಸುರುಳಿ ಯಾಕಾರದ ವಿನ್ಯಾಸ, ಇವನ್ನು ಹತ್ತಿಯಿಂದಲೂ ರಚಿಸುತ್ತಾರೆ. ಚುಟ್ಟಿಗಳ ಬಳಕೆ ಬಣ್ಣದ ವೇಷಗಳಿಗೆ, ಬಣ್ಣದ ವೇಷಗಳ ಹಾಗೂ ಇತರ ಕೆಲವು ವಿಶಿಷ್ಟ ಪಾತ್ರಗಳ ಮೂಗು ಹಣೆಗಳ ಮೇಲೆ ಹತ್ತಿಯ ಉಂಡೆಗಳನ್ನಿಟ್ಟು ಭೀಕರತೆ ಎದ್ದು ಕಾಣುವಂತೆ ಮಾಡುವರು. ಬಣ್ಣವನ್ನು ಬರೆಯಲು ಬಲಿತ ತೆಂಗಿನ ಮರದ ಗರಿಯ ಕಡ್ಡಿಯನ್ನು ಬಳಸುತ್ತಾರೆ. ಈ ಕಡ್ಡಿಗಳು ಪ್ರತಿದಿನ ಹೊಸದಾಗಿ ಸಿದ್ಧವಾಗಬೇಕು. ಇದು ತೆಂಕುತಿಟ್ಟಿನ ಕ್ರಮವಾದರೆ ಬಡಗಿನಲ್ಲಿ ಮರದ ಬಣ್ಣದ ಕಡ್ಡಿ, ಬರಿಯ ಬೆರಳುಗಳಿಂದಲೇ ಬರೆಯುವವರೂ ಇದ್ದಾರೆ. ಸ್ವತಃ ಬಣ್ಣಗಾರಿಕೆ ಮಾಡಿಕೊಳ್ಳುವುದು ಯಕ್ಷಗಾನದ ವೈಶಿಷ್ಟ್ಯ . ಸ್ವಂತ ಮೇಕಪ್ ಮಾಡಿಕೊಳ್ಳದವನು ವೇಷಧಾರಿಯೇ ಅಲ್ಲ ಎಂಬುದು ಇಲ್ಲಿ ಅಂಗೀಕೃತ ತತ್ವ.
ವೇಷಗಳ ನಾಮಗಳಿಗೂ ಯಕ್ಷಗಾನದ ವೈಷ್ಣವ ಆಶಯಕ್ಕೂ ಸಂಬಂಧ ವಿದ್ದಂತೆ ತೋರುವುದು. ಯಕ್ಷಗಾನಕ್ಕೆ ದಶಾವತಾರ, ಭಾಗವತರಾಟ ಎಂಬ ಹೆಸರಿರುವುದು. ಬಾಲಗೋಪಾಲರ ವೇಷ ಮುಂತಾದ ಸಂಪ್ರದಾಯಗಳು ಇವೆಲ್ಲ ಈ ಕಲಾಮಾಧ್ಯಮವು ಒಂದು ಕಾಲಕ್ಕೆ ಆಳವಾದ ವೈಷ್ಣವ ಪ್ರಭಾವಕ್ಕೆ ಒಳಗಾಗಿತ್ತು ಎಂಬುದನ್ನು ಸೂಚಿಸುತ್ತದೆ. ಒಟ್ಟು ಪ್ರಸಂಗಸಾಹಿತ್ಯದಲ್ಲಿ ತ್ರಿಮೂರ್ತಿಗಳ ಸಮಾನತ್ವ, ದೇವಿಯ ಮಹತ್ವ - ಇವೆಲ್ಲ ಇದ್ದರೂ ಹಿಂದಿನ