ಪುಟ:Mahakhshatriya.pdf/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾಮರೂಪಗಳು ಹಾದಿ ಬಿಟ್ಟು ಸಚ್ಚಿದಾನಂದವನ್ನು ತೋರಿಸುವುದು. ನೋಡು, ನೋಡು. ನಾನು ಹೇಳುತ್ತಿದ್ದಂತೆಯೇ ನಿನಗೆ ಅನುಭವವು ಬಂತು. ಆ ಅನುಭವವನ್ನು ಸಾಕ್ಷಾತ್ಕರಿಸು. ಆಕೆಯು ದರ್ಶನ ಕೊಡುವಳು. ಅದೋ, ನಿನ್ನ ಕಣ್ಣೆದುರಾಗಿ ನಿಂತಿರುವವಳೇ ಬ್ರಹ್ಮವಿದ್ಯಾ ಸ್ವರೂಪಿಣಿಯಾದ ಉಮಾದೇವಿಯು.”

ಅರಸನು ಉಮಾದರ್ಶನದಿಂದ ಸಂತೃಪ್ತನಾಗಿ ಮಾನಸೋಪಚಾರಗಳಿಂದ ಆರಾಧಿಸಿದನು. ಆಕೆಯು ಪ್ರಸನ್ನಳಾಗಿ ‘ಅರಸಾ, ನಿನ್ನ ಇಂದ್ರಿಯ ವೃತ್ತಿಗಳು ಹರಿದೆಡೆಯಲ್ಲೆಲ್ಲಾ, ಅಷ್ಟೇನು ಪ್ರತಿಬೋಧದಲ್ಲೂ ನಿನಗೆ ನಾಮರೂಪರಹಿತವಾದ ಬ್ರಹ್ಮದ ಸಾಕ್ಷಾತ್ಕಾರವಾಗಲಿ. ಎಚ್ಚರಿಕೆ, ಆನಂದವನ್ನು ಅನುಭವಿಸುವವನು ನೀನಲ್ಲ. ಆನಂದವು ನೀನು. ನೀನು ಆನಂದವು ಪ್ರತ್ಯೇಕವೆಂದುಕೊಂಡಾಗ ಕಾಣುವವಳು ನಾನು” ಎಂದು ರಹಸ್ಯವನ್ನು ಬೋಧಿಸಿ ಕಣ್ಮರೆಯಾದಳು. ಅರಸನಿಗೆ ಕೂಡಲೇ ಎಚ್ಚರವಾಯಿತು.

ಮತ್ತೆ ಇಂದ್ರನು ಮಾತನಾಡಿದನು : “ದೇವ, ಇನ್ನು ಇಂದ್ರತ್ವವನ್ನು ಗ್ರಹಿಸುವ ಮಾತು. ಅದು ನನ್ನೊಬ್ಬನ ವಿಷಯವಲ್ಲ. ಅಗ್ನಿವಾಯುಗಳೂ ದೇವಗುರುವೂ ಗೊತ್ತು ಮಾಡಬೇಕಾದ ವಿಷಯ. ದಯವಿಟ್ಟು ಅವರನ್ನು ಕರೆಸಬೇಕು.”

ಅರಸನು ಆಗಲೆಂದನು. ಮತ್ತೊಂದು ಕ್ಷಣದೊಳಗಾಗಿ ಅವರೂ ಬಂದರು. ಅವರೆಲ್ಲರ ಸಮ್ಮುಖದಲ್ಲಿ ಇಂದ್ರನು ಮತ್ತೆ “ಸರ್ವರೀತಿಯಿಂದಲೂ ನನಗಿಂತ ಶ್ರೇಷ್ಠನಾಗಿರುವ ಈತನೇ ಈ ಕಲ್ಪಾಂತದವರೆಗೂ ಇಂದ್ರನಾಗಿರಲೆಂದು ನನ್ನ ಕೋರಿಕೆ. ಈತನು ಶಿಬಿಕೋತ್ಸವವಾದ ಮೇಲೆ ಇಂದ್ರತ್ವವನ್ನು ಬಿಟ್ಟುಬಿಡಬೇಕು ಎಂದಿರುವನು. ಇದನ್ನು ನೀವೆಲ್ಲ ವಿಮರ್ಶಿಸಬೇಕು” ಎಂದನು.

ಅಗ್ನಿ ವಾಯುಗಳು ಹೇಳಿದರು : “ನಿತ್ಯನೈಮಿತ್ತಿಕ ಸಂಬಂಧದಿಂದ ನೀನು ಜ್ಯೇಷ್ಠನು. ಆದರೆ ಈಗ ನೀನು ಉಪಕೃತನಾಗಿರುವುದರಿಂದ ನಿನ್ನ ಜ್ಯೇಷ್ಠತ್ವವು ಈತನಿಗೆ ಬಂದಿರುವುದು. ಅದರಿಂದ ನೀನು ಸೋಲಬೇಕು. ಆಯಿತು. ಈತನು ಇಂದ್ರನಾದರೆ ನೀನೇನು ಮಾಡುವೆ?”

“ಶಚಿಯು ತನ್ನ ಇಂದ್ರಾಣೀತ್ವವನ್ನು ವಿರಜಾದೇವಿಗೊಪ್ಪಿಸುವಳು. ನಾವಿಬ್ಬರೂ ಈತನ ಸೇವಕರಾಗಿ ಈತನ ಋಣವನ್ನು ತೀರಿಸಿಕೊಳ್ಳುವೆವು.”

“ಪ್ರಭುವಿನ ಅಭಿಮತವೇನು?”

“ನಾನು ಇಂದ್ರನಿಗೆ ಉಪಕಾರವಾಗಲೆಂದು ಯಾವ ಕಾರ್ಯವನ್ನೂ ಮಾಡಲಿಲ್ಲ ನಾನು ಬಿಟ್ಟಕೊಡುವ ಇಂದ್ರತ್ವವನ್ನು ವಹಿಸಿಕೊಳ್ಳಲು ಇನ್ನೊಬ್ಬನು