ಪುಟ:Mysore-University-Encyclopaedia-Vol-1-Part-1.pdf/೧೪೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


144

       ಅಕ್ಬರನಾಮ - ಅಕ್ರೂರ

ಅಬುಲ್ ಫಜಲ್ ಅವರ ಭಾವನೆಗಳು ಮತ್ತು ವಿಚಾರಧರೆಗಳು ಅಕ್ಬರನ ಮೇಲೆ ಪರಿಣಾಮ ಬೀರಿದುವು. 'ಜೀವಾತ್ನಗಳು ಪರಮಾತ್ಮನ ಅಂಶಗಳು ಮತ್ತು ಕೊನೆಗೆ ಪರಮಾತ್ಮನಲ್ಲೇ ಐಕ್ಯವಾಗುತ್ತವೆ', ಎಂಬ ಸೂಫಿ ತತ್ವದಲ್ಲಿ ಅವನಿಗೆ ಬಹಳ ನಂಬಿಕೆ. ಅಕ್ಬರ್ ೧೫೭೫ರಲ್ಲಿ ಸಿಕ್ರಿ ಎಂಬಲ್ಲಿ ಇಬದತ್ ಖಾನವನ್ನು (ಪ್ರಾರ್ಥನಾಮಂದಿರ)ಕಟ್ಟಿಸಿದ. ಇಲ್ಲಿ ಸಾಮ್ರಾಜ್ಯದ ಎಲ್ಲ ಭಾಗಗಳಿಂದಲೂ ಹಿಂದೂ, ಜೈನ, ಪಾರಸಿ, ಕ್ರೈಸ್ತ ಮತ್ತು ಮಹಮದೀಯ ಮತದ ಪಂಡಿತರು ಸಭೆ ಸೇರಿ ಅಕ್ಬರನ ಸಂದೇಶಗಳನ್ನು ನಿವಾರಿಸ ಬೇಕಾಗಿದ್ದಿತು. ಆದರೆ ನಾನಾ ಪಂಥಗಳ ವಿದ್ವಾಂಸರು ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಮುಂದುಮಾಡಿಕೊಂಡು ವಾದ ವಿವಾದದಲ್ಲಿ ನಿರತರಾಗಿ ಸಮಸ್ಯೆಗಳನ್ನೇ ಸೃಷ್ಟಿಸಿದರು. ಆದ್ದರಿಂದ ಅಕ್ಬರ್ ತಾನೇ ಸರ್ವಧರ್ಮಗಳ ಮುಖಂಡತ್ವವನ್ನು ವಹಿಸಿಕೊಂಡು ಮತೀಯ ಕಚ್ಚಾಟಗಳನ್ನು ನಿಲ್ಲಿಸಿ ತನ್ನ ತೀರ್ಪನ್ನು ಅವರು ಒಪ್ಪುವಂತೆ ವಿಧೇಯಕ ಮಾಡಿದ. ಅಕ್ಬರ್ ತಾನೊಬ್ಬ ಪ್ರವಾದಿ ಎಂದು ನಂಬಿಯೂ ಇರಲಿಲ್ಲ. ಹಾಗೆ ಪ್ರಚಾರವನ್ನೂ ಮಾಡಲಿಲ್ಲ. ಆದರೆ ವಿಭಿನ್ನ ಮತೀಯರನ್ನು ಸಮತೆಯ ಆಧಾರದ ಮೇಲೆ ಒಂದುಗೂಡಿಸಲು ಸತತವಾಗಿ ಪ್ರಯತ್ನಪಟ್ಟ, ಅಲ್ಲದೆ ಅವನ ಆಳ್ವಿಕೆಯು ಮಹಾ ಘಟನಾವಳಿಗಳಿಂದ ಕೂಡಿದ ಉಜ್ವಲ, ಐತಿಹಾಸಿಕ ಕಾಲವಾಗಿತ್ತು. ಆದ್ದರಿಂದ ಚರಿತ್ರಕಾರರು ಅಕ್ಬರನನ್ನು ಮಹಾಶಯ ಎಂದು ಕರೆದರು. ಅಕ್ಬರನಾಮ : ಚಕ್ರವರ್ತಿ ಅಕ್ಬರನ ಜೀವನವನ್ನು ಚಿತ್ರಿಸುವ ಚಾರಿತ್ರಿಕ ಗ್ರಂಥ. ಅಕ್ಬರನ ಆಸ್ಥಾನದಲ್ಲಿದ್ದ ಅಬುಲ್ ಫಜಲ್ ಇದನ್ನು ಪರ್ಷಿಯನ್ ಭಾಷೆಯಲ್ಲಿ ರಚಿಸಿದ. ಇದರ ಶೈಲಿ ಪ್ರೌಢವಾಗಿದೆ. ಗ್ರಂಥದಲ್ಲಿ ಎರಡು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಮೊಗಲ್ ವಂಶಾವಳಿಯನ್ನು ವಿವರಿಸಲಾಗಿದೆ. ಮೊಗಲ ಬಾದಶಹರು ತೈಮೂರನ ವಂಶಕ್ಕೆ ಸೇರಿದವರು. ಅಕ್ಬರನ್ನು ತನ್ನ ಅದಿನಾಲ್ಕನೆಯ ವಯಸ್ಸಿನಲ್ಲಿ ಪಟ್ಟಕ್ಕೆ ಬಂದನು. ಮೊದಲಿನ ಹದಿನೇಳು ವರ್ಷದ ಆಳ್ವಿಕೆಯನ್ನು ಈ ಭಾಗದಲ್ಲಿ ವರ್ಣಿಸಲಾಗಿದೆ. ಗ್ರಂಥದ ಎರಡನೆಯ ಭಾಗದಲ್ಲಿ ಅಕ್ಬರನ ಮುಂದಿನ ಇಪ್ಪತ್ತೊಂಬತ್ತು ವರ್ಷಗಳ ಆಳ್ವಿಕೆಯನ್ನು ಬಣ್ಣಿಸಲಾಗಿದೆ. (ಎಸ್.ಎಂ.ಎಸ್) ಅಕ್ರಮ ನಿರ್ಬಂಧ: ಒಬ್ಬ ವ್ಯಕ್ತಿಯ ಚಲನವಲನದ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿ ಬಲವಂತವಾಗಿ ಒಂದೆಡೆ ಕೂಡಿಡುವುದು. ಇದನ್ನು ಇಂಡಿಯನ್ ಪೀನಲ್ ಕೋಡ್ ೩೩೯ನೆಯ ಕಲಂನಲ್ಲಿ ವಿವರಿಸಿ.

  ತನಗಿಷ್ಟ ಬಂದ ಕಡೆ ಹೋಗುವ ಹಕ್ಕು ವ್ಯಕ್ತಿಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು. ಬೇರೆಯವರ ಮನೆಗೆ ಅಕ್ರಮವಾಗಿ ಪ್ರವೇಶಿಸುವುದು, ಇತರರ ಆಸ್ತಿವ್ಯವಹಾರಗಳಲ್ಲಿ ಕೈಹಾಕುವುದು-ಇತ್ಯಾದಿ ವ್ಯಕ್ತಿಸ್ವಾತಂತ್ರ್ಯವಲ್ಲ. ತಮಗೆ ಇಷ್ಟ ಬಂದ ಕಡೆ ಹೋಗುವ ಸ್ವಾತಂತ್ರ್ಯ ಎಲ್ಲ ವ್ಯಕ್ತಿಗಳಿಗೂ ಉಂಟು. ಅದನ್ನು ನಿರೋಧಿಸುವುದು ಅಕ್ರಮ ನಿರ್ಬಂಧ. ಆದರೆ ಎಲ್ಲ ನಿರ್ಬಂಧವೂ ಅಕ್ರಮವೆನಿಸುವುದಿಲ್ಲ. ಅವುಗಳಿಗೆ ನಿರ್ದಿಷ್ಟ ನಿಯಮಗಳಿರುತ್ತವೆ. ನೆಲದ ಮೇಲೆ ಅಥವಾ ನೀರಿನ ಮೇಲೆ ಹಾದುಹೋಗುವ ಖಾಸಗಿ ದಾರಿಹಕ್ಕನ್ನು ಹೊಂದಿದವನೊಬ್ಬನು ತನಗೊಬ್ಬನಿಗೆ ಆ ದಾರಿಯಲ್ಲಿ ಓಡಾಡುವ ಸಂಪೂರ್ಣ ಹಕ್ಕಿದೆಯೆಂದು ತಿಳಿದು, ಇತರರು ಆ ದಾರಿಯಲ್ಲಿ ಹೋಗದಂತೆ ನಿರ್ಬಂಧಪಡಿಸಿದರೆ ಆಗ ಅದು ಅಕ್ರಮ ನಿರ್ಬಂಧ ಎನಿಸುವುದಿಲ್ಲ. ಏಕೆಂದರೆ ಆ ದಾರಿಯಲ್ಲಿ ಓಡಾಡುವ ಹಕ್ಕು ಇರುವುದಿಲ್ಲ. ಒಂದು ವೇಳೆ ಅಡ್ಡಗಟ್ಟಿದವನು ದಾರಿಹೋಕನ ಹಕ್ಕನ್ನು ಅಡ್ಡಿಪಡಿಸಿದ್ದರಿಂದ ಉದ್ಭವಗೊಂಡ ವಿವಾದವನ್ನು ಸಿವಿಲ್ ನ್ಯಾಯಲಯಗಳಲ್ಲಿ ಬಗೆಹರಿಸಿಕೊಳ್ಳಬೇಕು. 
  ಒಬ್ಬನನ್ನು ಒಂದು ಕೋಣೆಯಲ್ಲೋ ಮನೆಯೆಲ್ಲೋ ಕೂಡಿಹಾಕಿ ಹೊರಗೆ ಬರದಂತೆ ಆತನನ್ನು ನಿರ್ಬಂಧಿಸುವುದಾಗಲಿ, ಮನೆಯ ಯಜಮಾನನು ತನ್ನ ಮನೆಯೊಳಕ್ಕೆ ಹೋಗದಂತೆ ಬಾಗಿಲನ್ನು ಭದ್ರಪಡಿಸಿ ಅಥವಾ ನಿರ್ಬಂಧಿಸುವುದು ನಿಸ್ಸಂಶಯವಾಗಿ ಅಕ್ರಮ ನಿರ್ಬಂಧವಾಗುತ್ತದೆ. ಆದರೆ, ಸಾರ್ವಜನಿಕ ರಸ್ತೆಗೆ ಅಡ್ಡಲಾಗಿ ಕಲ್ಲನ್ನೋ ಮರದ ದಿಮ್ಮಿಗಳನ್ನೋ ಇಟ್ಟು ಗುಳಿ ತೋಡಿದರೆ ಅದು ಅಕ್ರಮ ನಿರ್ಬಂಧವಾಗುವುದೆ? ದಾರಿಹೋಕನಿಗೆ ಆತ ಮುಂದಕ್ಕೆ ಹೋಗಲು ಅದು ಅಡ್ಡಿಯಾಗಿದೆಯೇ ಹೊರತು, ಹಿಂತಿರುಗಿ ಹೋಗಲು ಎಡಬಲಗಳಿಗೆ ಸರಿದುಹೋಗಲು ಯಾವ ಅಡ್ಡಿಯೂ ಇರುವುದಿಲ್ಲವಲ್ಲ - ಎಂದು ವಾದಿಸಿ ಇದು ಅಕ್ರಮ ನಿರ್ಬಂಧವಲ್ಲವೆಂದು ವಾದಿಸಬಹುದು. ಇದೂ ಅಕ್ರಮ ನಿರ್ಬಂಧವೆಂದು ನ್ಯಾಯಾಲಯಗಳು ತೀರ್ಪಿತ್ತಿವೆ. ತನಗೆ ಹಕ್ಕಿರುವ ದಿಕ್ಕಿನಲ್ಲಿ ಹೋಗುವವನೊಬ್ಬನನ್ನು ಬೇರೊಂದು ದಿಕ್ಕಿನಲ್ಲಿ ಹೋಗುವಂತೆ ಪ್ರೇರೇಪಿಸಿ ನಿರ್ಬಂಧಿಸಿದರೆ ಆಗ ಅದು ಅಕ್ರಮ ನಿರ್ಬಂಧವಾಗುತ್ತದೆ.
  ಒಟ್ಟಿನಲ್ಲಿ ಹೇಳುವುದಾದರೆ ಒಬ್ಬನ ವ್ಯಕ್ತಿಸ್ವಾತಂತ್ರ್ಯವನ್ನು ಮೊಟಕುಮಾಡುವ ಯಾವುದೇ ರೀತಿಯ ನಿರ್ಬಂಧವಾದರೂ ಅದು ಅಕ್ರಮ ನಿರ್ಬಂಧವಾಗುತ್ತದೆ. 
  ಅಕ್ರಾನ್: ಅಮೆರಿಕ ಸಂಯುಕ್ತಸಂಸ್ಥಾನದ ಓಹಿಯೊ ರಾಜ್ಯದಲ್ಲಿರುವ ಒಂದು ನಗರ. ಸಮುದ್ರಮಟ್ಟದಿಂದ ೩೬೬ಮೀ ಎತ್ತರದಲ್ಲಿದೆ. ಗುಡ್ಡಗಳಿಂದ ಆವರಿಸಲ್ಪತಟ್ಟಿದ್ದು ಅನೇಕ ಸರೋವರಗಳಿಂದ ಕೂಡಿದೆ. ವಿಸ್ತೀರ್ಣ ೫೩.೭ ೧೩೯ ಚ.ಕಿಮೀ. ಜನಸಂಖ್ಯೆ ೨೧೭೦೭೪(೨೦೦೦). ಅಕ್ರಾನ್ ನಗರ, ಕ್ಲೀವ್ ಲ್ಯಾಂಡ್ ನಿಂದ ೫೬ಕಿಮೀ ದಲ್ಲಿ ಕುಯಾ ಹೋಗು ನದಿ ದಂಡೆಯಲ್ಲಿದೆ. ಓಹಿಯೊ ಪ್ರಾಂತ್ಯದಲ್ಲೇ ಅತ್ಯಂತ ಎತ್ತರದ ಸ್ಥಳದಲ್ಲಿರುವುದರಿಂದ ಇದರ ಈ ಹೆಸರು ಬಂದಿದೆ. ಗ್ರೀಕ್ ಭಾಷೆಯಲ್ಲಿ ಅಕ್ರಾಸ್ ಎಂದರೆ ಎತ್ತರವೆಂದರ್ಥ. ಈ ನಗರಕ್ಕೆ ಓಹಿಯೊ ಮತ್ತು ಈರಿ ಕಾಲುವೆಯ ನೌಕಾಯಾನ ಸೌಲಭ್ಯವಿದೆ. ಪ್ರಪಂಚದ ಎರಡನೆಯ ಮಹಾಯುದ್ಧದ ಕಾಲದಲ್ಲಿ ಕೃತಕ ರಬ್ಬರಿನ ಸಾಮಾಗ್ರಿಗಳನ್ನು ತಯಾರಿಸುವ ಕೇಂದ್ರವಾಗಿತ್ತು. ಹೀಗಾಗಿ ಪ್ರಪಂಚದ ರಬ್ಬರ್ ನಗರವೆಂದೇ ಪ್ರಸಿದ್ಧಿ. ಆಹಾರ ವಸ್ತುಗಳು, ರಾಸಾಯನಿಕ ಕಲ್ನಾರು, ರಬ್ಬರಿನ ಉಪಕರಣಗಳು, ವಾಹನಗಳ ಬ್ಯಾಟರಿಗಳು, ಮರದ ಸಾಮಾಗ್ರಿಗಳು ಕಾಗದ, ಹೈನದ ವಸ್ತು ಇವೇ ಮೊದಲಾದವು ಇಲ್ಲಿಯ ಕೈಗಾರಿಕಾ ಉತ್ಪನ್ನಗಳು. (ಎಂ.ಎಸ್.ಎಂ)
  ಅಕ್ರಿಡಿನ್ : ಸಾರಜನಕದ ಪರಮಾಣುವೊಂದನ್ನುಳ್ಳ ಮಿಶ್ರಚಕ್ರೀಯ(ಹೆಟೆರೋಸೈಕ್ಲಿಕ್) ಸಂಯುಕ್ತ ಇದನ್ನು ಮುಂದೆ ತೋರಿಸಿರುವ ಅಣುಸೂತ್ರದಿಂದ ನಿರೂಪಿಸಬಹುದು. ಒಂದಕ್ಕೊಂದು ಸೇರಿಕೊಂಡಿರುವ ಮೂರು ಚಕ್ರಗಳನ್ನುಳ್ಳ ಈ ಸಂಯುಕ್ತ ರಚನೆ (ರಿಂಗ್ ಸ್ಟ್ರಕ್ಚರ್)ಆಂಥ್ರಿಸೀನ್ ರಚನೆಯನ್ನು ಹೋಲುತ್ತದೆ.
  ಕಲ್ಲಿದ್ದಲಿನಿಂದ ಉತ್ಪತ್ತಿಯಾಗುವ ಟಾರೆಣ್ಣೆಯಲ್ಲಿ ಈ ಸಂಯುಕ್ತ ಅಲ್ಪ ಪ್ರಮಾಣದಲ್ಲಿ ದೊರೆಯುತ್ತದ. ಕೃತಕವಾಗಿಯೂ ಇತರ ಸಂಯುಕ್ತಗಳಿಂದಲೂ ಅಕ್ರಿಡಿನ್ನನ್ನು ತಯಾರಿಸಬಹುದು.
  ಶುದ್ಧ ಅಕ್ರಿಡಿನ್ನಿನ ರೂಪ ವರ್ಣ ರಹಿತ ಸೂಜಿಯಾಕಾರದ ಹರಳುಗಳಂತಿರುತ್ತದೆ. ಅಕ್ರಿಡಿನ್ ಮತ್ತು ಅದರ ಇತರ ಸಂಯುಕ್ತಗಳೆಲ್ಲವೂ ತಮ್ಮದೇ ಆದ ಒಂದು ವಿಶಿಷ್ಟ ವಾಸನೆಯನ್ನು ಹೊಂದಿದೆ. ದ್ರಾವಣರೂಪದಲ್ಲಿದ್ದಾಗ ಹಳದಿ ಹಸಿರುಮಿಶ್ರಿತವಾಗಿ ಗೋಚರಿಸುವ ಕಿರಣಸ್ಫುರಣ ಅಥವಾ ಪ್ರತಿದೀಪ್ತಿಯನ್ನು (ಫೋರಸೆನ್ಸ್) ಇವು ಪ್ರದರ್ಶಿಸಬಲ್ಲುವು.
  ಅಕ್ರಿಡಿನ್ನಿನಿಂದ ನೇರವಾಗಿ ಹೆಚ್ಚು ಉಪಯೋಗವಿಲ್ಲದಿದ್ದರೂ ಬಣ್ಣಗಳಾಗಿ ಉಪ್ಯೋಗಿಸಲಾಗುತ್ತಿರುವ ಅಕ್ರಿಡಿನ್ ಆರೆಂಜ್, ಅಕ್ರಿಡಿನ್ ಯೆಲ್ಲೋ, ಕ್ರೈಸಾನಿಲಿನ್, ಟ್ರಿಪಪ್ಲೇವಿನ್ ಮತ್ತು ಬೆಂಜೋಪ್ಲೇವಿನ್ ಗಳಲ್ಲಿ ಅಕ್ರಿಡಿನ್ನಿನ ಮಾತೃವೃತ್ತ(ಪೇರೆಂಟ್ ರಿಂಗ್) ಇದೆ. ಮಲೇರಿಯಾ ಜ್ವರಕ್ಕೆ ಮದ್ದಾಗಿರುವ ಅಟೆಬ್ರಿನ್ ಮತ್ತು ಅಮೀಬದ ರಕ್ತಭೇದಿಯ ಚಿಕಿತ್ಸೆಯಲ್ಲಿ ಉಪಯೋಗಿಸುವ ದಿವನಾಲ್ ಸಂಯುಕ್ತಗಳು ಅಕ್ರಿಡಿನ್ ರಚನೆಯಿಂದ ಜನ್ಯವಾದವು.
  ಅಕ್ರಿಪ್ಲೇವಿನ್ : ಕಲ್ಲಿದ್ದಲ ಟಾರೆಣ್ಣೆಯಿಂದ ತಯಾರಾದ, ಜೀವಿನಿರೋಧಕ (ಆಂಟಿಸೆಪ್ಟಿಕ್), ಕೆಂಬೂದು ಬಣ್ಣದ, ಅಕ್ರಿಡಿನ್ ಸಂಯುಕ್ತ ಪುಡಿ, ಟ್ರಿಪಪ್ಲೇವಿನ್ ಹೆಸರಿನಲ್ಲಿ ಜರ್ಮನಿಯ ಪಾಲ್ ಆರ್ಲಿಕ್ (೧೯೧೨)ಇದನ್ನು ನಂಜು ಕಳೆವ ಮದ್ದಾಗಿ ಬಳಕೆಗೆ ತಂದ ಮೇಲೆ, ಒಂದನೆಯ ಮಹಾಯುದ್ಧದಲ್ಲಿ ಬಹುವಾಗಿ ಬಳಕೆಯಲ್ಲಿತ್ತು. ಸಲ್ಫ, ಜೀವಿರೋಧಕ (ಆಂಟಿಬಯೋಟಿಕ್) ಮದ್ದುಗಳು ಬಂದ ಮೇಲೆ ಇದರ ಬಳಕೆ ತೀರ ಅಪರೂಪ. ಪರಮಾ (ಗೊನೋರಿಯ) ಮೇಹರೋಗದಲ್ಲಿ ಮೂತ್ರನಾಳವನ್ನೂ ಗಾಯಗಳನ್ನೂ ತೊಳೆಯಲು ಇದರ ತಟಸ್ಥ (ನ್ಯೂಟ್ರಲೈಸ್ಡ್) ರೂಪದ ದ್ರಾವಣ ಬಳಕೆಯಲ್ಲಿವೆ. ಮೂತ್ರಜನಕಾಂಗ ಮಂಡಲದ ಜೀವಿನಿರೋಧಕವಾಗಿ ಹೊಟ್ಟೆಗೂ ಸೇವಿಸಬಹುದು.  (ಡಿ.ಎಸ್.ಎಸ್)
  ಅಕ್ರಿಯಾವಾದ : ಬುದ್ಧನ ಸಮಕಾಲೀನನಾದ ಪೂರಣ ಕಸ್ಸಪನೆಂಬುವನ ತತ್ತ್ವ ನಿಜ ಹೇಳುವುದು, ದಾನ ಮಾಡುವುದು, ಸಂಯಮ-ಇವು ಒಳ್ಳೆಯವೂ ಅಲ್ಲ; ಸುಳ್ಳು ಹೇಳುವುದು, ಕದಿಯುವುದು, ಕೊಲೆ ಮಾಡುವುದು-ಇವು ಕೆಟ್ಟವು ಅಲ್ಲ. ಯಾವುದನ್ನೂ ಮಾಡದ ನಿಷ್ಕ್ರೀಯೆಯೇ ಸರಿಯಾದ ಮಾರ್ಗ ಎಂಬುದು ಇವನ ತತ್ವ. (ಜಿ.ಎಸ್)
   ಅಕ್ರೂರ : ತಂದೆಯ ಕಡೆಯಿಂದ ಕೃಷ್ಣನ ಮಿತ್ರನಾದ ಯಾದವ. ಯದುವಂಶದ ಶ್ವಫಲ್ಕನ ಮಗ, ತಾಯಿ ಗಾಂದಿನಿ, ಕಂಸನ ಅಷ್ಟಮಂತ್ರಿಗಳಲ್ಲಿ ಒಬ್ಬ. ಆಹುಕನ ಮಗಳಾದ ಭುತನುವನ್ನು ಮದುವೆಯಾಗಿದ್ದ. ಕಂಸನ ಅಪ್ಪಣೆಯಂತೆ ಬಲರಾಮ ಕೃಷ್ಣರನ್ನು ಮಧುರೆಗೆ ಕರೆತರುವಾಗ ಯಮುನೆಯಲ್ಲಿ ಸ್ನಾನ ಮಾಡುತ್ತಿದ್ದ ಇವನಿಗೆ ಕೃಷ್ಣ ತನ್ನ ದಿವ್ಯರೂಪವನ್ನು ತೋರಿದ. ದ್ರೌಪದೀ ಸ್ವಯಂವರ ಕಾಲದಲ್ಲಿ ಇವನೂ ಹೋಗಿದ್ದ. ಪಾಂಡವರು ಅಜ್ಞಾತವಾಸ ಮುಗಿಸಿ ಉಪಪ್ಲಾವ್ಯ ನಗರದಲ್ಲಿ ವಾಸವಾಗಿದ್ದಾಗ ಅವರಲ್ಲಿಗೆ ಹೋಗಿದ್ದ. ಈತನಿಗೆ ಬಭ್ರು ಎಂದು ಇನ್ನೊಂದು ಹೆಸರು. ಪರಮ ಭಾಗವತರಲ್ಲೊಬ್ಬನಾದ ಈತನನ್ನು ಕುರಿತ ಸೋಮನಾಥಕೃತ ಅಕ್ರೂರ ಚರಿತೆ(ಸು.೧೬೦೦) ಎಂಬ ಕನ್ನಡ ಷಟ್ಪದಿ ಕಾವ್ಯವಿದೆ.