ಪುಟ:Mysore-University-Encyclopaedia-Vol-1-Part-1.pdf/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅವಹೇಳನ, ಉಪದ್ರವಗಳನ್ನು ಕಡೆಗಣಿಸಿ ದೃಢನಿಶ್ಚಯದಿಂದ ದೇಶಸೇವೆಯನ್ನು ಮುಂದುವರಿಸಿದರು; ಸ್ವಾತಂತ್ರ್ಯ ಬಂದ ಮೇಲೆ ಕೇಂದ್ರ ಸರ್ಕಾರದ ವಿದ್ಯಾಮಂತ್ರಿಯಾದರು. ಅವರ ಪಾಂಡಿತ್ಯ ಅನೇಕ ವೇಳೆ ನಮ್ಮನ್ನು ಭಾವಪರವಶರನ್ನಾಗಿ ಮಾಡುತ್ತಿತ್ತು ಎಂಬುದಾಗಿ ಜವಾಹರಲಾಲ್ ನೆಹರು ತಮ್ಮ ಆತ್ಮಚರಿತ್ರೆಯಲ್ಲಿ ಒಂದೆಡೆ ಬರೆದಿದ್ದಾರೆ. (ಕೆ.ಎಸ್.) ಅಜಾಮಿಳ : ಕನ್ಯಾಕುಬ್ಜದ ಒಬ್ಬ ಬ್ರಾಹ್ಮಣ. ಶೂದ್ರಸ್ತ್ರೀಸಂಪರ್ಕ ಹೊಂದಿದ್ದು, ತಂದೆ-ತಾಯಿಯರನ್ನೂ ಸಹಧರ್ಮಿಣಿಯನ್ನೂ ಪರಿತ್ಯಾಗ ಮಾಡಿ ಅನೇಕ ದುರಾಚಾರಗ ಳಿಂದ ಪತಿತನಾಗಿದ್ದ. ಸಾಯುವ ಕಾಲದಲ್ಲಿ ನಾರಾಯಣನೆಂಬ ತನ್ನ ಮಗನನ್ನು ಹೆಸರು ಹಿಡಿದು ಕರೆದುದರಿಂದ ಉಂಟಾದ ನಾರಾಯಣ ಸ್ಮರಣೆಯ ಮಹಿಮೆಯಿಂದ ದಿವ್ಯಗತಿ ಯನ್ನು ಪಡೆದ. ಭಾಗವತ ಸಂಪ್ರದಾಯದಲ್ಲಿ ಈ ಕಥೆಗೆ ಹೆಚ್ಚಿನ ಪ್ರಾಧಾನ್ಯವಿದೆ. ಹರಿದಾಸರು ತಮ್ಮ ಕೀರ್ತನೆಗಳನ್ನು ನಾಮಸ್ಮರಣೆಯ ಪ್ರಾಮುಖ್ಯವನ್ನು ಹೇಳುವಾಗ ಅಜಾಮಿಳನ ಹೆಸರನ್ನೂ ಕಥೆಯನ್ನೂ ಅನೇಕ ಕಡೆ ಬಳಸಿದ್ದಾರೆ. (ಜಿ.ಎಚ್.) ಅಜಿತ : ಪ್ರ.ಶ.ಪೂ 5ನೆಯ ಶತಮಾನದ ಒಬ್ಬ ನಾಸ್ತಿಕ. ಭೌತಿಕವಾದಿ, ನಿಶ್ಚಯಜ್ಞಾನ ಸಾಧ್ಯವಿಲ್ಲವೆಂದು ವಾದಿಸಿದವ. ಮಾನವಕೇಶದಿಂದ ರಚಿತವಾದ ನೀಳುಡುಪನ್ನು ಧರಿಸುತ್ತಿದ್ದುದರಿಂದ ಇವನನ್ನು ಕೇಶಕಂಬಲಿನ್ ಎಂದೂ ಕರೆಯುತ್ತಾರೆ. ಇವನ ವಾದ ಹೀಗಿದೆ: ಮನುಷ್ಯ ಮತ್ತು ಪ್ರಪಂಚ ಇವು ನೀರು, ಗಾಳಿ, ಬೆಂಕಿ ಮತ್ತು ಭೂಮಿ ಎಂಬ ನಾಲ್ಕು ಪದಾರ್ಥಗಳಿಂದ ಉಂಟಾಗಿವೆ; ಇವುಗಳ ವ್ಯತ್ಯಸ್ತ ಪ್ರಮಾಣದ ಸಂಯೋಜನೆಯಿಂದಲೇ ಪ್ರಪಂಚ ಹುಟ್ಟಿಕೊಂಡಿತು. ಇಂದ್ರಿಯಗಳ ಮೂಲಕ ಮಾತ್ರವೇ ಜ್ಞಾನಾರ್ಜನೆ ಸಾಧ್ಯವಾದ್ದರಿಂದ ಕೇವಲ ಒಳನೋಟದ ಮೂಲಕ ಅದು ಎಂದಿಗೂ ಸಾಧನೆಯಾಗಲಾರದು. ಗ್ರಹಿಕೆಯನ್ನು ತರ್ಕದಿಂದ ಶಾಸ್ತ್ರೀಕರಿಸಿದಾಗ ಅದು ಇನ್ನಷ್ಟು ಮಿಥ್ಯವಾಗುತ್ತದೆ. ಭಾವೋದ್ರೇಕದಿಂದ ಈ ಇಂದ್ರಿಯಗಳು ಮತ್ತು ಆಲೋಚನಾಶಕ್ತಿ ದಾರಿತಪ್ಪುತ್ತವೆ. ಜ್ಞಾನವೆನ್ನಿಸಿಕೊಂಡದ್ದು ಕೂಡ ದುರಾಶೆ ಮತ್ತು ದುರಹಂಕಾರಗಳಿಂದ ಇನ್ನಷ್ಟು ಕಲುಷಿತಗೊಳ್ಳುತ್ತದೆ. ವೇದಗಳು ಅಹಂಕಾರಮೂಲವಾಗಿ ಬ್ರಾಹ್ಮಣರ `ವಾಂತಿ'ಯಾಗಿವೆ. ದಡ್ಡರೇ ಆಗಲಿ, ಜಾಣರೇ ಆಗಲಿ ದೇಹದಿಂದ ಬೇರ್ಪಡುವುದು ಮಾತ್ರವೇ ಅಲ್ಲದೆ, ಅವರೆಲ್ಲ ನಿರ್ನಾಮರಾಗುತ್ತಾರೆ. ಸಾವನ್ನಪ್ಪಿದವನು ಸಂಪೂರ್ಣವಾಗಿ ಇಲ್ಲವಾಗುತ್ತಾನೆ. ತ್ಯಾಗದಿಂದ ಲಾಭವೂ ಇಲ್ಲ, ದುಷ್ಟತನದಿಂದ ಮತ್ತು ದುರಾಚಾರದಿಂದ ನಷ್ಟವೂ ಇಲ್ಲ. ಆಹ್ಲಾದದಂಥ ವಿಷಯದಲ್ಲಿ ಯಾರಿಗಾದರೂ ಸಂಬಂಧವಿದ್ದರೆ ಅದು ಅವರಿಂದ ಸ್ವೀಕೃತವಾಗಬಹುದು ಅಥವಾ ಆಗದಿರಬಹುದು ಮತ್ತು ಅವರು ಅದನ್ನು ಅನುಭವಿಸಬಹುದಿತ್ತು ಅಥವಾ ಬಿಡಬಹುದಿತ್ತು. ಅದು ಯಾವ ವ್ಯತ್ಯಾಸವನ್ನೂ ಉಂಟುಮಾಡುವುದಿಲ್ಲ. ದಾನಧರ್ಮಗಳನ್ನೇ ಆಗಲಿ, ಯಜ್ಞಯಾಗಗಳನ್ನೇ ಆಗಲಿ ಮಾಡುವುದರಲ್ಲಿ ಹುರುಳಿಲ್ಲ. ಜೀವ ಹೋದ ಮೇಲೆ ಏನೂ ಇಲ್ಲ. ಮುಂದಿನ ಪ್ರಪಂಚ ಅಥವಾ ಮುಂದಿನ ಜನ್ಮಗಳೂ ಇಲ್ಲ; ಒಳಿತು ಕೆಡುಕುಗಳ ಆಚಾರದಿಂದ ಫಲವೂ ಇಲ್ಲ. ಬೌದ್ಧರಿಂದ, ಜೈನರಿಂದ ಮತ್ತು ಹಿಂದೂಗಳಿಂದ ಈ ಪಂಥಕ್ಕೆ ಪ್ರೋತ್ಸಾಹ ಸಿಕ್ಕಲಿಲ್ಲ. (ಆರ್.) ಅಜಿತಸೇನಾಚಾರ್ಯ: 10ನೆಯ ಶತಮಾನದಲ್ಲಿದ್ದ ಕನ್ನಡ ನಾಡಿನಲ್ಲಿ ಅತ್ಯಂತ ಪ್ರತಿಷ್ಟೆ ಪಡೆದ ಜೈನಗುರು. ಇವರಿಗೆ ಭುವನಗುರುವೆಂಬ ಬಿರುದೂ ಇತ್ತು. ಇವರ ವಿದ್ಯಾಮಂಡಲ ಅನೇಕ ಕವಿಗಳಿಂದ ಮತ್ತು ಹಿರಿಯರಿಂದ ಕೂಡಿತ್ತಲ್ಲದೆ ಇವರ ಶಿಷ್ಯಪರಿವಾರ ಬಹು ದೊಡ್ಡದಾಗಿತ್ತು. ಶ್ರವಣಬೆಳಗೊಳದ ಗೊಮ್ಮಟೇಶ್ವರ ವಿಗ್ರಹವನ್ನು ಕೆತ್ತಿಸಿದ ಮಹಾಮಾತ್ಯ ಚಾವುಂಡರಾಯ ಮತ್ತು ಗಂಗವಂಶದ ಮಾರಸಿಂಹ ಇವರ ಶಿಷ್ಯರಾಗಿದ್ದರು. ಕನಕಸೇನ ಮತ್ತು ಮಲ್ಲಿಷೇಣರೂ ಇವರ ಶಿಷ್ಯವರ್ಗಕ್ಕೆ ಸೇರಿದವರು. ಅಜಿತಸೇನಾಚಾರ್ಯರು ತನಗೆ ಗುರುವಾಗಿದ್ದ ವಿಷಯವನ್ನು ಕನ್ನಡ ಕವಿ ರನ್ನ ತನ್ನ ಅಜಿತಪುರಾಣದಲ್ಲಿ ಹೇಳಿಕೊಂಡಿದ್ದಾನೆ. (ಎ.ಎನ್.ಯು.) ಅಜಿರೇಟಮ್ : ಈ ಕುಲದ ಸಸ್ಯಗಳ ಹೂವು ದೀರ್ಘಕಾಲ ಲವಲವಿಕೆಯಾಗಿ ಉಳಿದಿರುವುದರಿಂದ ಈ ಹೆಸರು ಬಂದಿದೆ. ಇದು ವರ್ಷದ ಎಲ್ಲ ಕಾಲಗಳಲ್ಲಿಯೂ ಬೆಳೆಯುವುದರಿಂದ ತೋಟಗಾರಿಕೆಯಲ್ಲಿ ಜನಪ್ರಿಯತೆ ಗಳಿಸಿದೆ. ಇವುಗಳನ್ನು ಅಂಚು ಸಸ್ಯ, ಮಡಿ ಸಸ್ಯ ಮತ್ತು ಕಲ್ಲೇರಿ ಸಸ್ಯಗಳಾಗಿ ಬೆಳೆಸುತ್ತಾರೆ. ಹೂಗೊಂಚಲುಗಳು ಬಿಳುಪು ಮತ್ತು ನೀಲಿ ಬಣ್ಣಗಳಲ್ಲಿ, ಆಕರ್ಷಕ ಆಕಾರಗಳಲ್ಲಿರುತ್ತವೆ. ಅಜಿರೇಟಮ್ ಜಾತಿಯಲ್ಲಿ ಸು. 30ಕ್ಕೂ ಹೆಚ್ಚು 2' ಬೆಳೆಯುವ ಏಕಋತುವಿನ ವರ್ಣಸಸಿ ಪ್ರಭೇದಗಳಿವೆ. ಎಲೆಗಳು ಅಭಿಮುಖರಚನೆಯನ್ನು ಹೊಂದಿದ್ದು ಕರನೆಯಾಕಾರದಲ್ಲಿರುವ ಅವುಗಳ ಗರಗಸದಂಥ ಅಂಚು ಗುಂಡಾದ ಹಲ್ಲುಗಳಾಗಿ ಒಡೆದಿದೆ. ಪ್ರತಿ ಗೊಂಚಲಲ್ಲೂ ಅನೇಕ ಚೆಂಡುಗಳಿರುತ್ತವೆ. ಚಪ್ಪಟೆಯಾಗಿರುವ ಹೂದಿಂಡಿನ ಮೇಲೆ ಅಸಂಖ್ಯಾತ ಪ್ರತ್ಯೇಕಲಿಂಗ ಅಥವಾ ದ್ವಿಲಿಂಗ ಪುಷ್ಪಗಳು ಇರುತ್ತವೆ. ಬಿಡಿ ಹೂಗಳು ಕಿರಿದಾದ ಕೊಳವೆಯಾಕಾರದ ಬಿಳುಪು ಅಥವಾ ನೀಲಿ ಬಣ್ಣದವಾಗಿರುತ್ತವೆ; ಪುಷ್ಪಪತ್ರಗಳಿಂದ ಆವೃತವಾಗಿರುತ್ತವೆ. ಹಣ್ಣು ಒಂದು ಬೀಜದ ಅಕೆನ್ ಮಾದರಿಯದು. ಇದನ್ನು ಐದು ಕೋಣೆಗಳ ಹೂ ತೊಟ್ಟು ಆವರಿಸಿರುತ್ತದೆ. ಅಜಿರೇಟಮ್ ಸಸ್ಯವನ್ನು ಸುಲಭವಾಗಿ ಬೀಜಗಳಿಂದ ವೃದ್ಧಿ ಮಾಡಬಹುದು. ಬೀಜಗಳನ್ನು ನೇರವಾಗಿ ಸಸಿ ನೆಡುವ ಸ್ಥಳಗಳಲ್ಲೊ, ಮೊಳಕೆ ಕುಂಡಗಳಲ್ಲೊ ಚೆಲ್ಲಿ ಸಸ್ಯಗಳನ್ನು ಬೆಳೆಸಬಹುದು. ಮಳೆಗಾಲದ ಮತ್ತು ಚಳಿಗಾಲದ ವಾರ್ಷಿಕ ಹೂ ಬಿಡುವುದಾದರೂ ಈ ಸಸ್ಯವನ್ನು ಎಲ್ಲ ಕಾಲಗಳಲ್ಲಿಯೂ ಬೆಳೆಯಬಹುದು. ಬಿತ್ತನೆ ಮಾಡಿದ 4-5 ದಿನಗಳಲ್ಲಿ ಪೂರ್ತಿಯಾಗಿ ಬೆಳೆಯುತ್ತದೆ. 20 ದಿನಗಳ ಅನಂತರ, ಬೇರುಬಿಟ್ಟು ನೆಡಲು ಸಿದ್ಧವಾಗುತ್ತದೆ. ಸಸಿ ನೆಟ್ಟ 10 ದಿನಗಳ ಅನಂತರ ಮೇಲುಗೊಬ್ಬರ ಕೊಡಬೇಕು. ತಳಭಾಗದಲ್ಲಿರುವ ಬಲಿತ ಹಳದಿಬಣ್ಣದ ಎಲೆಗಳನ್ನು ಕ್ರಮವಾಗಿ ತೆಗೆಯುತ್ತಿದ್ದರೆ ಒಳ್ಳೆಯದು. ಸಸಿ ನೆಟ್ಟ ಒಂದೂವರೆ ತಿಂಗಳಿಗೆ ಹೂಗಳು ಅರಳುತ್ತವೆ. ಸಸ್ಯಗಳು ಎತ್ತರವಾಗಿ ಬೆಳೆದು ನೆಲದ ಮೇಲೆ ಮಲಗುವಂತಿದ್ದರೆ, ಸುತ್ತಲೂ ಬಿದಿರು ಕಡ್ಡಿಗಳನ್ನು ಸಿಕ್ಕಿಸಿ ದಾರದಿಂದ ಕಟ್ಟಬೇಕು. ಮೊದಲು ಅರಳಿದ ಹೂಗಳನ್ನು ತೆಗೆದುಹಾಕುವುದರಿಂದ ಹೆಚ್ಚಿನ ಹೊಸ ಹೂಗೊಂಚಲು ಬರುತ್ತದೆ. ಸಸಿ ನೆಟ್ಟ ಎರಡೂವರೆ ತಿಂಗಳ ಅನಂತರ ಬೀಜ ಬಿಡಿಸಲು ಪ್ರಾರಂಭಿಸಬೇಕು. ಸಸ್ಯದ ಜೀವಾವಧಿ ಸು. 31/2 ತಿಂಗಳು. (ಡಿ.ಎಂ.) ಅಜಿûಮತ್ : ನಕ್ಷತ್ರ ಮೊದಲಾದ ಆಕಾಶಕಾಯಗಳನ್ನು ಖಗೋಳದ ಮೇಲೆ ಸೂಚಿಸಲು ಉಪಯೋಗಿಸುವ ಒಂದು ನಿರ್ದೇಶಕ. ಚಿತ್ರದಲ್ಲಿ z ಬಿಂದು ವೀಕ್ಷಕನ ಖಮಧ್ಯ (e಼ೆನಿತ್); P ಧ್ರುವಬಿಂದು ; ZPZ’ ಮಹಾವೃತ್ತ ವೀಕ್ಷಕನ ಮಧ್ಯಾಹ್ನರೇಖೆ. ಗೋಳದ ಮೇಲೆ ಯಾವುದಾದರೂ ನಕ್ಷತ್ರ ಅಥವಾ ಗ್ರಹಸ್ಥಾನ ಼ ಆಗಿದ್ದರೆ ಼ ದ ಸ್ಥಾನ ನಿರ್ದೇಶಕಗಳು Z಼ ಮತ್ತು PZ಼ ಕೋನ. ಈ ಕೋನಕ್ಕೆ ಅಜಿûಮತ್ ಎಂದು ಹೆಸರು. ಕೆಲವರು ಇದನ್ನು ದಕ್ಷಿಣದ ಕಡೆಯಿಂದ ಅಳೆಯುತ್ತಾರೆ. ಆಗ ನಕ್ಷತ್ರ ಅಥವಾ ಗ್ರಹದ ಅಜಿûಮತ್ 1800- PZ಼. ನಕ್ಷತ್ರದ ಅಜಿûಮತ್ ಸ್ಥಳ ಮತ್ತು/ಅಥವಾ ಕಾಲ ವ್ಯತ್ಯಾಸವಾದಾಗ ಬದಲಾಗುತ್ತದೆ. (ಸಿ.ಎನ್.ಎಸ್.) ಅಜಿಲರು : ವಿಜಯನಗರ ಸಾಮ್ರಾಜ್ಯದೊಂದಿಗೆ ತುಳುನಾಡು ವಿಲೀನಗೊಂಡ ಅನಂತರ ಅಲ್ಲಿ ತಲೆಯೆತ್ತಿದ ಹಲವು ಸ್ಥಳೀಕ ಮನೆತನಗಳಲ್ಲಿ ಒಂದು. ಮೊದಲು ವೇಣೂರಿನಿಂದ ಮತ್ತು ಅನಂತರ ಆಲದಂಗಡಿಯಿಂದ ಇವರು ಆಳಿದ ಸಂಸ್ಥಾನಕ್ಕೆ ಪೂಂಜಳಿ ಅಥವಾ ಪುಂಜಳಿಕೆಯ ರಾಜ್ಯ ಮತ್ತು ಅ¾ುವ ರಾಜ್ಯ ಎಂಬ ಹೆಸರುಗಳಿದ್ದುವು. ಇವರು ತಮ್ಮನ್ನು ಸಾಳುವ ವಂಶದವರೆಂದು ಕರೆದುಕೊಳ್ಳುತ್ತಿದ್ದರು. ವೇಣೂರಿನ ಮಹಾಲಿಂಗೇಶ್ವರ ಇವರ ಕುಲದೇವತೆಯಾದರೂ ಇವರು ಜೈನಧರ್ಮಾವಲಂಬಿಗಳಾಗಿದ್ದರು. 1408ರ ವಿಜಯನಗರದ ಶಾಸನವೊಂದರಲ್ಲಿ ಅಜಿಲರು ಬಂಗ ಮತ್ತು ಚೌಟ ಮನೆತನಗಳ ಅರಸುಗಳೊಂದಿಗೆ ಆಡಳಿತ ಕ್ಷೇತ್ರದಲ್ಲಿ ವಿಜಯನಗರ ರಾಜ್ಯಪಾಲನ ಸಹಾಯಕರಾಗಿ 1405ರಲ್ಲಿ ಕಾಣಿಸಿಕೊಳ್ಳುತ್ತಾರೆ. ಅಜಿಲ ಅರಸುಗಳ ಪೈಕಿ ಮುಖ್ಯನಾದವನು 4ನೆಯ ವೀರತಿಮ್ಮರಾಜ ಒಡೆಯ. ರಾಜಕುಮಾರನ ಅಳಿಯನೂ ಪಾಂಡ್ಯಕದೇವಿಯ ಮಗನೂ ಜೈನಗುರು ಚಾರುಕೀರ್ತಿದೇವರ ಪ್ರಿಯಾಗ್ರಶಿಷ್ಯನೂ ಆಗಿದ್ದ ಈ ತಿಮ್ಮರಾಜನೇ ವೇಣೂರಿನ ಗೊಮ್ಮಟ ಶಿಲಾಮೂರ್ತಿಯನ್ನು ಪ್ರತಿಷ್ಠಾಪಿಸಿದ. ಇವನ ರಾಣಿ ಪಾಂಡ್ಯಕದೇವಿ ಅಥವಾ ವರ್ಧಮಾನಕ್ಕ ಗೊಮ್ಮಟನ ಎಡಭಾಗದಲ್ಲಿ ಚಂದ್ರನಾಥ ಚೈತ್ಯಾಲಯವನ್ನೂ ಇವನ ಮತ್ತೊಬ್ಬ ರಾಣಿ ಪಾಶ್ರ್ವದೇವಿ ಅಥವಾ ಬಿನ್ನಾಣೆ ಗೊಮ್ಮಟನ ಬಲಭಾಗದಲ್ಲಿ ಶಾಂತೀಶ್ವರ ಚೈತ್ಯಾಲಯವನ್ನೂ ಕಟ್ಟಿಸಿದರು. ಅಜಿಲರ ರಾಣಿ ಮದುರಕದೇವಿಯನ್ನು 1622ರ ಒಂದು ಶಾಸನದಲ್ಲಿ ಜೈನಗುರು ಲಲಿತಕೀರ್ತಿ ಭಟ್ಟಾರಕದೇವರ ಪ್ರಿಯಾಗ್ರ್ರಶಿಷ್ಯೆಯೆಂದು ವರ್ಣಿಸಲಾಗಿದೆ. ಇವಳು ತನ್ನ ರಾಜಧಾನಿ ಆಲದಂಗಡಿಯಲ್ಲಿ ಒಂದು ಅರಮನೆಯನ್ನೂ ಒಂದು ಜೈನಬಸದಿಯನ್ನೂ ಅರ್ಧನಾರೀಶ್ವರ ಮತ್ತು ಸೋಮನಾಥ ದೇವಾಲಯಗಳನ್ನೂ ಕಟ್ಟಿಸಿದಳು. ವೇಣೂರಿನಲ್ಲಿ ಅಜಿಲರು ಕಟ್ಟಿಸಿಕೊಂಡಿದ್ದ ಅರಮನೆಗೆ ಏಳುಪ್ಪರಿಗೆಗಳಿದ್ದವೆಂಬ ಪ್ರತೀತಿಯಿದ್ದು, ಇಂದು ಆ ಅರಮನೆಯ ನಿವೇಶನದಲ್ಲಿ ತಳಪಾಯದ ಕುರುಹುಗಳೂ ಕಲ್ಲಿನ ಎರಡು ಆನೆಗಳೂ ಕಾಣಸಿಗುತ್ತವೆ. ಅಜಿಲಮೊಗರು ಎಂಬ ಸಣ್ಣ ಗ್ರಾಮದಲ್ಲಿರುವ ಮಸೀದಿಯ ನಿರ್ಮಾಪಕ ಒಬ್ಬ ಅಜಿಲ ಅರಸು ಎಂಬ ಐತಿಹ್ಯವಿದೆ. ಆ ಅರಸ ಯಾವುದೋ ರೋಗದಿಂದ ಬಳಲುತ್ತಿದ್ದಾಗ ಸೈಯದ್ ಬಾಬಾ ಫಕ್ರುದ್ದಿನ್ ಎಂಬ ಪರ್ಷಿಯ ದೇಶದ ಗುರು ಆ ರೋಗವನ್ನು ಗುಣಪಡಿಸಿದ ಕಾರಣ ಅಜಿಲ ಆ ಮಸೀದಿಯನ್ನು ಕಟ್ಟಿಸಿದನಂತೆ. ಹೈದರನ ಕಾಲದಲ್ಲಿ ಅಜಿಲರ ಆಳ್ವಿಕೆ ಕೊನೆಗಂಡಿತು. ಆಲದಂಗಡಿ ಮತ್ತು ಬಂಗಾಡಿ ಎಂಬೀ ಸ್ಥಳಗಳಲ್ಲಿ ಅಜಿಲ ವಂಶದವರು ಇಂದಿಗೂ ವಾಸಿಸುತ್ತಿದ್ದಾರೆ. (ಕೆ.ವಿ.ಆರ್.)