ಪುಟ:Mysore-University-Encyclopaedia-Vol-1-Part-1.pdf/೨೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ವಿರುದ್ಧ ಅರ್ಥವುಳ್ಳ ವಸ್ತುವಿನ ಅಭಿವ್ಯಕ್ತಿಗಾಗಿ ಬಳಸಿ, ಗೇಲಿ ಮಾಡುವುದು ಪ್ಯಾರಡಿಯ ಗುರಿ. ಇಂಥ ಅಣಕುಬರೆಹ ಸೃಜಿಸುವ ಉತ್ತಮ ಸಾಹಿತಿ ಕೇವಲ ವಿಕಟಾನುಕರಣ (ಟ್ರ್ಯಾವೆಸ್ಟಿ) ಮಾಡದೆ, ಅತಿಯಾದ ಉತ್ಪ್ರೇಕ್ಷೆಯಿಂದ ಕೂಡಿದ ಹುಚ್ಚಾಟ (ಬರ್ಲೆಸ್ಕ್)ಬರೆಯದೆ, ತನ್ನ ರಸಮಯ ಕಲ್ಪನೆಯ ಮೂಲಕ ಕಲಾತ್ಮಕ ಸಾಹಿತ್ಯರೂಪ ಸೃಷ್ಟಿಸುತ್ತಾನೆ. ಮೂಲದ ದೌರ್ಬಲ್ಯಗಳನ್ನು ಕೃತಕತೆಯನ್ನೂ ಎತ್ತಿ ತೋರಿಸುತ್ತಾನೆ. ಯಾವುದನ್ನು ತಪ್ಪೆಂದು ಟೀಕಿಸಿ, ಖಂಡಿಸುತ್ತಾನೋ ಅದರ ಬದಲು ಒಪ್ಪಾದುದನ್ನು ಸೃಷ್ಟಿಸಿ ಕೃತಕೃತ್ಯನಾಗುತ್ತಾನೆ. ಅವನೊಬ್ಬ ಕ್ರಿಯಾತ್ಮಕ ವಿಮರ್ಶಕ. ಯೂರಿಪಿಡೀಸನನ್ನು ಟೀಕಿಸಲು ಹೊರಟ ಆರಿಸ್ಟೋಫೆನಿಸ್ ತನ್ನ ನಾಟಕದಲ್ಲಿ (ದಿ ಫ್ರಾಗ್ಸ್) ಸೃಷ್ಟ್ಯಾತ್ಮಕ ಚಿರಂತನ ಮೌಲ್ಯಗಳನ್ನು ಕುರಿತು ವಿವೇಚನೆ ಮೂಡಿಸಿದ. ರಿಚರ್ಡ್‍ಸನ್ ಬರೆದ ಅತಿಭಾವುಕ ವಸ್ತುವಿನ ಕಾದಂಬರಿಯನ್ನು ಒಪ್ಪದ ಫೀಲ್ಡಿಂಗ್ ತಾನೇ ಸೊಗಸಾದ ಕಾದಂಬರಿ ಸೃಷ್ಟಿಸಿದ. ಶ್ಲೇಷೆ, ವ್ಯಂಗ್ಯದ ಮೂಲಕ ವಿರೋಧ ಅರ್ಥಗಳ ವೈದೃಶ್ಯ ತೋರಿಸುವುದು (ಐರಾನಿಕ್ ಕಾಂಟ್ರಾಸ್ಟ್), ಹದಿರು ನುಡಿ-ಇವು ಅಣಕು ಸಾಹಿತಿಯ ಸಾಧನಗಳು. ಪುರಾತನ ಗ್ರೀಕ್ ದೇಶದಲ್ಲಿ ಹುಟ್ಟಿ, ಅರಿಸ್ಟೋಫೆನಿಸ್‍ನಿಂದ ಹಿಡಿದು ಜೇಮ್ಸ್ ಜಾಯ್ಸನವರೆಗೆ ಪ್ರಪಂಚದ ಎಲ್ಲ ಸಾಹಿತ್ಯದಲ್ಲೂ ಹಬ್ಬಿದ ಈ ತೆರನಾದ ಅಣಕುಬರೆವಣಿಗೆಯನ್ನು ಹಲವು ಸಾಹಿತಿಗಳು ರಚಿಸಿದ್ದಾರೆ. ತಾನು ಒಪ್ಪಿಯೋ ಒಪ್ಪದೆಯೋ ಅಳವಡಿಸಿಕೊಳ್ಳುವ ರಮ್ಯ ಪ್ರಣಯವಸ್ತು, ಹಳೆಯ ನಾಟಕಗಳ ಆಡಂಬರದ ವಾಗ್ವಿಲಾಸ. ಹಳ್ಳಿಗಾಡಿನ ಜೀವನ ಚಿತ್ರಿಸುವ ಕವನ ಸಂಪ್ರದಾಯ (ಪ್ಯಾಸ್ಟೊರಲ್) ಇವುಗಳನ್ನು ತಾನೇ ಅಣಕಿಸುವ ಷೇಕ್ಸ್‍ಷಿಯರನ ರಮ್ಯವಿನೋದ ನಾಟಕಗಳಲ್ಲಿ ಅಣಕುಬರೆಹದ ವಿವಿಧ ಸ್ತರಗಳನ್ನು ಕಾಣಬಹುದು. ತನ್ನನ್ನು ತಾನೇ ಗೇಲಿ ಮಾಡಿಕೊಳ್ಳುವ, ನಕ್ಕು ನಗಿಸುವ ಷೇಕ್ಸ್‍ಪಿಯರನ ಈ ಮನೋಧರ್ಮ ಅಣಕುಬರೆಹಗಾರರಿಗೆ ಒಳ್ಳೆಯ ಪ್ರೇರಣೆ, ಸ್ಫೂರ್ತಿ. ಕನ್ನಡದಲ್ಲಿ ನಾ. ಕಸ್ತೂರಿ, ಬುಳ್ಳ ಮೊದಲಾದವರು ಪ್ರಸಿದ್ಧ ಹೊಸಗನ್ನಡ ಕವಿಗಳ ಹಾಗೂ ದಾಸರ ಕವನಗಳ ಪ್ರಶಸ್ತ ಅಣಕರೂಪಗಳನ್ನು ರಚಿಸಿದ್ದಾರೆ. ಬೇಂದ್ರೆಯವರು ತಮ್ಮ ಕವನಗಳನ್ನೇ ಬಳಸಿಕೊಂಡು ಅಣಕವಾಡುಗಳನ್ನು ಕಟ್ಟಿದ್ದಾರೆ. ರಾಶಿಯವರ ಕೆಣಕೋಣ ಬಾರ ಒಂದು ಗಮನಾರ್ಹ ಅಣಕು. ನಾರಣಪ್ಪನ ಭಾರತದ ಶೈಲಿಯಲ್ಲಿ ಜಿ.ಪಿ. ರಾಜರತ್ನಂ ರಚಿಸಿರುವ ಪುರುಷಸರಸ್ವತಿಯ ಬಹುಭಾಗ ಗ್ರಂಥಸಂಪಾದನಾ ಕಾರ್ಯವನ್ನು ಬಹು ಚೆನ್ನಾಗಿ ಅಣಕಿಸುತ್ತದೆ. (ನೋಡಿ- ವಿಡಂಬನೆ) (ಎಚ್.ಕೆ.ಆರ್.ಎಲ್.ಎಸ್.ಎಸ್) ಅಣಬೆಗಳು : ಭೂಮಿಯ ಮೇಲ್ಮೈ ಮತ್ತು ಕೆಲವೊಮ್ಮೆ ಭೂಒಳಪದರಗಳಲ್ಲಿ ಹೊರಚಿಮ್ಮುವ ರಸವತ್ತಾದ ಶಿಲೀಂಧ್ರಂಗಾಂಶ (ಮಶ್ರೂಮ್). ಇವುಗಳನ್ನು ಹರಿತ್ತಿಲ್ಲದ ಸಸ್ಯಗಳು, ನಾಯಿಕೊಡೆಗಳು ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಇವು ಹೆಚ್ಚು ತೇವಾಂಶ ಮತ್ತು ಆದ್ರ್ರತೆಯಿರುವ ವಾತಾವರಣದಲ್ಲಿ ಹುಲುಸಾಗಿ ಬೆಳೆಯುತ್ತವೆ. ಅಣಬೆಗಳು ಸಸ್ಯಗಳಂತೆ ಸಾವಯವ ಮಣ್ಣು ಮತ್ತು ಸತ್ತೆಗಳ ಮೇಲೆ ಬೆಳೆಯುತ್ತವೆ. ಅಣಬೆಗಳ ರಚನಾಂಗಗಳು ಬಹಳ ಸರಳವಾಗಿದ್ದು ಸಸ್ಯಗಳಿಗಿಂತ ಭಿನ್ನವಾಗಿರುತ್ತವೆ. ಅಣಬೆಯ ಬೀಜಾಣು ಬಹಳ ಚಿಕ್ಕದಾಗಿದ್ದು ಸೂಕ್ಷ್ಮದರ್ಶಕಗಳ ಸಹಾಯದಿಂದ ವೀಕ್ಷಿಸಬಹುದು. ಅಣಬೆಗಳು ಸೂಕ್ಷ್ಮ ಜೀವಿಜಗತ್ತಿನಲ್ಲಿ ಶಿಲೀಂಧ್ರಗಳ ಗುಂಪಿಗೆ ಸೇರಿವೆ. ಅಣಬೆಗಳಲ್ಲಿ ಖಾದ್ಯ ಅಣಬೆಗಳು ಮತ್ತು ವಿಷ ಅಣಬೆಗಳು ಎಂಬ ಎರಡು ವಿಧಗಳಿವೆ. ವಿಷ ಅಣಬೆಗಳು ತಿನ್ನಲು ಯೋಗ್ಯವಿರುವುದಿಲ್ಲ. ಅನೇಕ ಜಾತಿಯ ವಿಷ ಅಣಬೆಗಳು ಜೀವಕ್ಕೆ ಮಾರಕವಾಗಿವೆ. ಆದರೆ, ಖಾದ್ಯ ಅಣಬೆಗಳು ಪುಷ್ಟಿಕರ ಆಹಾರಾಂಶವನ್ನು ಹೊಂದಿದ್ದು, ರುಚಿಕರ ಮತ್ತು ಆರೋಗ್ಯಕರ ಭೋಜನಕ್ಕೆ ಅಮೂಲ್ಯ ತರಕಾರಿಗಳಾಗಿವೆ. ಮಳೆಗಾಲದ ದಿನಗಳಲ್ಲಿ ಕಾಡುಮೇಡುಗಳು ಮತ್ತು ಹೊಲಗದ್ದೆಗಳ ಬದುಗಳಲ್ಲಿ ಬೆಳೆಯುವ ಖಾದ್ಯ ಅಣಬೆಗಳನ್ನು ಪತ್ತೆ ಹಚ್ಚಿ ತಂದು ತರಕಾರಿಗಳಂತೆ ಉಪಯೋಗಿಸುವುದನ್ನು ಈಗಲೂ ಸಹ ನಮ್ಮ ರೈತ ಮಹಿಳೆಯರಲ್ಲಿ ವಾಡಿಕೆಯಲ್ಲಿದೆ. ಪ್ರತಿವರ್ಷ ಅಣಬೆಗಳು ಮೂಡುತ್ತಿದ್ದ ಜಾಗಕ್ಕೆ ಹೋಗಿ ಅಣಬೆಗಳನ್ನು ಹುಡುಕುವುದು ಇಂದಿಗೂ ವಾಡಿಕೆಯಾಗಿದೆ. ಸ್ವಾಭಾವಿಕವಾಗಿ ಅಣಬೆಗಳು ವಿವಿಧ ಬಣ್ಣ ಮತ್ತು ರಚನೆಗಳನ್ನು ಹೊಂದಿದ್ದು ಮಾನವನಲ್ಲಿ ಕುತೂಹಲ ಕೆರಳಿಸಿವೆ. ಅವುಗಳ ಈ ವಿಸ್ಮಯ ರೂಪವನ್ನು ಪ್ರಕೃತಿಯಲ್ಲಿ ನೋಡಲು ಬಹಳ ಸುಂದರ. ಆದರೆ, ಇಂತಹ ಅಣಬೆಗಳು ವಿಷಕಾರಕಗಳೆಂಬುದನ್ನು ಮರೆಯಬಾರದು. ಏಕೆಂದರೆ, ಬಹುತೇಕ ವರ್ಣರಂಜಿತ ಅಣಬೆಗಳು ವಿಷ ಅಣಬೆಗಳ ಗುಂಪಿಗೆ ಸೇರಿರುತ್ತವೆ. ಆದ್ದರಿಂದ, ಸ್ವಾಭಾವಿಕವಾಗಿ ಬೆಳೆಯುವ ಅಣಬೆಗಳನ್ನು, ಖಾದ್ಯ ಅಣಬೆಯೆಂದು ಖಚಿತವಾಗಿ ತಿಳಿಯದಿದ್ದಲ್ಲಿ ಉಪಯೋಗಿಸಬಾರದು. ಹಾಗೆಂದು ವರ್ಣರಂಜಿತ ಅಣಬೆಗಳೆಲ್ಲ ವಿಷ ಅಣಬೆಗಳೆಂದು ಹೇಳಲಾಗುವುದಿಲ್ಲ. ಏಕೆಂದರೆ ಕೆಲವು ಜಾತಿಯ ಬಣ್ಣದ ಅಣಬೆಗಳು ಸಹ ಖಾದ್ಯ ಅಣಬೆಗಳಾಗಿವೆ. ಉದಾಹರಣಗೆ ಬೋಲಿಟಸ್ ಮತ್ತು ಪ್ಲೋರೋಟಸ್ ಇಯಸ್ ಅಣಬೆಗಳು ಬಣ್ಣ ಹೊಂದಿದ್ದು ತಿನ್ನಲು ಯೋಗ್ಯವಾಗಿವೆ. ಅಣಬೆಯ ಪದಾರ್ಥಗಳು ಬಹಳ ರುಚಿಕರವಾಗಿದ್ದು, ಮೊಟ್ಟೆ ಮಾಂಸಗಳ ರುಚಿಯನ್ನು ಮೀರಿಸಬಲ್ಲವು. ಆದ್ದರಿಂದಲೇ ರೋಮನ್ ದೇಶದ ಜನರು ಅಣಬೆಗಳನ್ನು ದೇವರ ಆಹಾರವೆಂದು ವರ್ಣಿಸಿದ್ದಾರೆ. ಚೀಣಿಯರು ಅಣಬೆಯ ತಿಂಡಿಗಳು ಆರೋಗ್ಯ ಮತ್ತು ಹರ್ಷದಾಯಕವೆಂದು ಬಣ್ಣಿಸಿದ್ದಾರೆ. ಹೀಗೆ ಅಣಬೆಯಿಂದ ತಯಾರಿಸಿದ ತಿಂಡಿಗಳು ರುಚಿಕರ ಮಾತ್ರವೇ ಅಲ್ಲ ಅವು ಪುಷ್ಟಿದಾಯಕವೂ ಹೌದು. ಅಣಬೆಗಳಲ್ಲಿ ನಮ್ಮ ಶರೀರಕ್ಕೆ ಆವಶ್ಯಕವಾದ ಪ್ರೋಟೀನುಗಳು, ಅಮೈನೋ, ಆಮ್ಲಗಳು (ಅಲಾನಿನ್, ಲೈಸಿನ್, ಲೂಸಿನ್, ವೇಲಿನ, ಮಿಥಿಯಾನಿನ್, ಗ್ಲೈಸಿನ್, ಆಸ್ಪಾರ್ಟಿಕ್ ಆಮ್ಲ, ಗ್ಲುಟಾಮಿಕ್ ಆಮ್ಲ ಮುಂತಾದವು) ಜೀವಸತ್ವಗಳಾದ ರೈಬೋ, ಫ್ಲೇವಿನ್, ನಿಯಾಸಿನ್, ಥೈಯಾಮಿನ್, ಪೆಂಟ್‍ಥೋನಿಕ್ ಆಮ್ಲ, ಬಯೋಟಿನ್, ಆಸ್ಕಾರ್ಬಿಕ್ ಆಮ್ಲ, ನಿಕೋಟಿನಿಕ್ ಆಮ್ಲ ಹಾಗೂ ಖನಿಜಾಂಶಗಳಾದ, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಸೋಡಿಯಂ, ಪೊಟ್ಯಾಸಿಯಂಗಳು ಅಧಿಕ ಪ್ರಮಾಣದಲ್ಲಿವೆ. ಅಣಬೆಯಲ್ಲಿ ಸಕ್ಕರೆ ಮತ್ತು ಕೊಬ್ಬಿನ ಅಂಶ ಕಡಿಮೆ ಪ್ರಮಾಣದಲ್ಲಿರುವುದರಿಂದ ಸಿಹಿಮೂತ್ರ ಮತ್ತು ಹೃದ್ರೋಗಿಗಗಳಿಗೆ ಉತ್ತಮ ಆಹಾರವೆಂದು ಪರಿಗಣಿಸಲಾಗಿದೆ. ಅಣಬೆಗಳು ಕೇವಲ ಆಹಾರ ಪದಾರ್ಥಗಳಿಗೆ ಮೀಸಲಾಗಿರದೆ, ಬೇರೆ ಬೇರೆ ಉದ್ದಿಮೆಗಳಲ್ಲಿ ಅದರದೇ ಆದ ಪ್ರಾಮುಖ್ಯವನ್ನು ಪಡೆದಿವೆ. ಚಿತ್ರಕಾರರಿಗೆ ಅವು ಸೌಂದರ್ಯದ ವಸ್ತುಗಳಾಗಿವೆ. ಗಿಡಮೂಲಿಕೆಗಳಂತೆ ಅಣಬೆಗಳನ್ನು ಔಷಧಿಯ ತಯಾರಿಕೆ ಯಲ್ಲಿ ಬಳಸಲಾಗುತ್ತದೆ. ವಾಸ್ತುಶಿಲ್ಪಿ ಗಳಿಗೆ ಅವು ಮಾದರಿಗಳಾಗಿದ್ದು, ಅಣಬೆಗಳ ಮಾದರಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ನೆರವಾಗಿವೆ. ಅಕ್ಕಸಾಲಿ ಗರು ಒಡವೆಗಳನ್ನು ಸಹ ಅಣಬೆಗಳ ಮಾದರಿಯಲ್ಲಿ ವಿನ್ಯಾಸಗೊಳಿಸಿದ್ದಾರೆ. ವಸ್ತ್ರವಿನ್ಯಾಸಕಾರರು ಅಣಬೆಗಳ ಚಿತ್ರಗಳನ್ನು ಬಟ್ಟೆಗಳ ಮೇಲೆ ಮುದ್ರಿಸಿರುವುದನ್ನು ಕಾಣಬಹುದು. ಅಣಬೆಯ ರಸದಲ್ಲಿನ ರಾಸಾಯನಿಕಗಳು ಹಲವರು ಕ್ರಿಮಿಕೀಟಗಳ ಹತೋಟಿಯಲ್ಲಿ ಫಲಕಾರಿಯಾಗಿವೆ. ಆದರೂ ಸಹ ಇಂತಹ ಅನೇಕ ಅಣಬೆಗಳ ಉಪಯೋಗಗಳನ್ನು ಇನ್ನೂ ಪರಿಶೋಧಿಸಬೇಕಾಗಿದೆ. ಉದಾಹರಣೆಗೆ ಜಪಾನಿನ ಅಣಬೆ ಶಿಲೀಂಧ್ರ ನಿರೋಧಕ ವೆಂದು ಹೇಳಲಾಗಿದೆ. ಓಂಫಲೋಟಸ್ ಒಲೆರಿಯಸ್ ಎಂಬ ವಿಷ ಅಣಬೆಯ ರಾಸಾಯನಿಕವು ಪ್ಲಾಸ್ಮೋಡಿಯಂ ಗ್ಯಾಲಿನೇಸಿಯಸ್ ಎಂಬ ಪ್ರೊಟೋಜೋವಾ ಕ್ರಿಮಿಯ ಮೇಲೆ ಹತೋಟಿಕಾರಿಯಾಗಿದೆ. ಪಾಲಿಪೋರಸ್ ಅಫಿಸಿನೇಲಿಸ್ ಮತ್ತು ಫೋಮ್ಸ್ ಇಗ್ನೇರಿಸಿ ಎಂಬ ಅಣಬೆಗಳನ್ನು ರಕ್ತ ಹೆಪ್ಪುಗಟ್ಟಲು ಬಳಸಲಾಗಿದೆ. ಕ್ಯಾಲ್ವೇಸಿಯಾ ಜೈಗಾಂಸಿಯಾ ಎಂಬ ಅಣಬೆಯನ್ನು ಮತ್ತು ಬರುವಿಕೆಗೆ ಬಳಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಅಣಬೆಗಳ ಪಾತ್ರ ಬಹುಮುಖ್ಯ. ಇವು ಅರಣ್ಯದಲ್ಲಿ ಬಿದ್ದ ಕಡ್ಡಿ ಕಸ ಮುಂತಾದ ಸಾವಯವ ವಸ್ತುಗಳ ಕೊಳೆಯುವಿಕೆಗೆ ಕಾರಣವಾಗಿವೆ. ಇದರಿಂದ ಆ ಪ್ರದೇಶದ ಭೂಮಿ ಫಲವತ್ತಾಗುವುದಲ್ಲದೆ, ಅಲ್ಲಿನ ಕಸಕಡ್ಡಿಗಳ ವಿಲೇವಾರಿ ಆದಂತಾಗುತ್ತದೆ. ಅರಣ್ಯ ಸಸ್ಯಗಳ ಬೇರುಗಳಲ್ಲಿ ಅನೇಕ ಮೈಕೋರೈಜಾ ಅಣಬೆಗಳ ಸಂಬಂಧವಿರುವುದರಿಂದ ಅವು ಅರಣ್ಯ ಸಸ್ಯಗಳ ಹಾಗೂ ಇತರೆ ಸಸ್ಯಗಳಿಗೆ ಬೇಕಾದ ರಂಜಕ ಮುಂತಾದ ಆಹಾರಾಂಶಗಳನ್ನು ಒದಗಿಸುತ್ತವೆ. ಈ ಒಂದು ಸ್ವಾಭಾವಿಕ ಸಂಬಂಧದಿಂದ ಶಿಲೀಂಧ್ರಗಳು ಬಾಹ್ಯವಾಗಿ ಬೇರುಗಳನ್ನು ಸುತ್ತುವರಿಯುವುದರಿಂದ ಸಸ್ಯವು ತೇವಾಂಶ ಕೊರತೆಯಿಂದ ಬಳಲದಂತೆ ಸಹಾಯಕಾರಿಯಾಗಿವೆ. ಈ ಅಣಬೆಗಳು ಆಂಟಿಬೈಯೋಟಿಕ್ ಎಂಬ ಕ್ರಿಮಿನಾಶಕ ರಾಸಾಯನಿಕಗಳನ್ನು ಬಿಡುಗಡೆ ಮಾಡುವುದರಿಂದ ಬೇರುಗಳಿಗೆ ಬರುವ ರೋಗಗಳನ್ನು ತಡೆಗಟ್ಟಬಲ್ಲವಾಗಿವೆ. ಇದಲ್ಲದೆ ಫೋಮ್ಸ್ ಪೊಮೆಂಟಾರಿಯಸ್ ಮತ್ತು ಗ್ಯಾನೋಡೆರ್ಮಾ ಅಪುಲಾಟೂಸ್ ಎಂಬ ಅಣಬೆಗಳನ್ನು ಉಡುಪು ಮತ್ತು ಆಟಿಕೆಗಳ ತಯಾರಿಕೆಯಲ್ಲಿ ಉಪಯೋಗಿಸ ಲಾಗುತ್ತಿದೆ. ಪಾಲಿಪೋರಸ್ ಸ್ಕಾಮೋಸ ಎಂಬ ಅಣಬೆಯಿಂದ ಸೀಸೆಗಳ ಮುಚ್ಚಳಗಳನ್ನು ತಯಾರಿಸಬಹುದು. ವಾಲಿಪೋರಸ್ ಗಿಸ್ಪಿಡಸ್ ಎಂಬ ಅಣಬೆಯಿಂದ ಕಂದು ರಸವನ್ನು ತೆಗೆದು, ರೇಷ್ಮೆ, ಹತ್ತಿ ಮತ್ತು ಉಣ್ಣೆ ಬಟ್ಟೆಗಳಿಗೆ ಬಣ್ಣಹಾಕಲು ಉಪಯೋಗಿಸುತ್ತಾರೆ. ಪಾಲಿಪೋರಸ್ ಪೋಮೆಂಟಾರಿಯಸ್ ಮತ್ತು ಪಾಲಿಪೋರಸ್ ಇಗ್ನೇರಿಯಸ್ ಎಂಬ ಅಣಬೆಗಳು ಆಕರ್ಷಿತ ಅಂಗರಚನೆ ಹೊಂದಿದ್ದು ಅವುಗಳನ್ನು ಹೂದಾನಿಗಳಲ್ಲಿ ಬಳಸಲಾ ಗುತ್ತಿದೆ. ಕೆಲವು ಅಣಬೆಗಳಿಗೆ ಬೆಳಕು ಚಿಮ್ಮುವ ಸಾಮಥ್ರ್ಯವಿರುವುದರಿಂದ ವಿಜ್ಞಾನಿಗಳು ಹಾಗೂ ಶಿಲೀಂಧ್ರ ತಜ್ಞರನ್ನು ಗಾಢವಾಗಿ ಆಕರ್ಷಿಸಿವೆ. ಇದುವರೆಗೂ, ಸು. ೨೦೦೦ ಖಾದ್ಯ ಅಣಬೆಗಳನ್ನು ಗುರುತಿಸಿದ್ದು, ಕೇವಲ ೨೦ ಪ್ರಭೇದಗಳನ್ನು ಕೃಷಿ ಮಾಡಲಾಗುತ್ತಿದೆ. ಭಾರತದಲ್ಲಿ ಸದ್ಯಕ್ಕೆ ಕೃಷಿಯಲ್ಲಿರುವ ಮುಖ್ಯ ಅಣಬೆಗಳೆಂದರೆ- ಗುಂಡಿ ಅಣಬೆ, ಚಿಪ್ಪಣಬೆ, ಭತ್ತದಹುಲ್ಲಿನ ಅಣಬೆ, ಶಿಟಾಕೆ ಅಣಬೆ, ಅರಿಕ್ಯುಲೇರಿಯಾ ಅಣಬೆ ಇತ್ಯಾದಿಗಳು.