ಪುಟ:Mysore-University-Encyclopaedia-Vol-1-Part-1.pdf/೪೪೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅರಣ್ಯಗಳು ಮತ್ತು ಅರಣ್ಯಶಾಸ್ತ್ರ

ವರ್ಧನೆ, ಪೋಷಣೆ, ಸಂರಕ್ಷಣೆ ಮತ್ತು ಅವುಗಳಿಂದ ಪರಮಾವಧಿ ಉಪಯೋಗಗಳನ್ನು ಇಂದೂ ಮುಂದೂ ಹೊಂದುವ ವಿಧಾನಗಳು ಮತ್ತು ಅವುಗಳ ವೈಜ್ಞಾನಿಕ ಆಡಳಿತದ ಏರ್ಪಾಡು ಅಡಕವಾಗಿವೆ. ಮರಗಳು ಬೇಳೆದು ಉಪಯೋಗಕಾರಿಯಾಗಲು ಹಲವಾರು ವರ್ಷಗಳೇ ಬೇಕಾದುದರಿಂದ ಅರಣ್ಯಗಳ ಪ್ರಶ್ನೆ ದೀರ್ಘಕಾಲದ್ದು. ಆದ್ದರಿಂದ ಅರಣ್ಯಗಳನ್ನು ಕುರಿತು ದೀರ್ಘಕಾಲದ ಯೋಜನೆ ಅವಶ್ಯಕ. ಬೆಳೆಸಬೇಕಾದ ಮರಗಳ ಜಾತಿ ಪರಿಸರದ ಹವೆ, ಮಣ್ಣಿನ ಗುಣ, ಮರಗಳ ಪೋಷಣೆಗೆ ಮಾಡಬೇಕಾದ ಉಪಚಾರ ಇವೆಲ್ಲವನ್ನೂ ಕ್ರಮಬದ್ದವಾಗಿ ಅಭ್ಯಸಿಸಿ, ಪ್ರಯೋಗಗಳಿಂದ ಪರೀಕ್ಷಿಸಿ ಮುಂದುವರಿಯಬೇಕು.


ಅರಣ್ಯನಾಶ, ಸಂರಕ್ಷಣೆ : ಅರಣ್ಯನಾಶದ ಕಾರಣಗಳು- 1 ಮನುಷ್ಯ; 2 ಬೆಂಕಿ; 3 ಪ್ರಾಣಿಗಳು,ಕೀಟಗಳು ಮತ್ತು ರೋಗಗಳು; 4 ಇತರ ನೈಸರ್ಗಿಕ ಕಾರಣಗಳು.


ಮನುಷ್ಯ ತನ್ನ ತಾತ್ಕಾಲಿಕ ಸೌಕರ್ಯ, ಲಾಭಗಳಿಗಾಗಿ ಉಂಟುಮಾಡುವ ಹಾನಿ ಅಪಾರವಾಗಿದೆ. ಇಂಥ ಹಾನಿಯಿಂದ ಅರಣ್ಯ ಸಂರಕ್ಷಣೆ ಮಾಡಲು ಸರ್ಕಾರ ಕಾನೂನು ಕಾಯಿದೆ ಮಾಡಿ, ತಪ್ಪಿತಸ್ಥರನ್ನು ಹಿಡಿದು ಶಿಕ್ಷಿಸುವುದು. ಆದರೆ ಮನುಷ್ಯನಿಂದೊದಗುವ ಪ್ರತ್ಯಕ್ಷ ಪರೋಕ್ಷಹಾನಿ ಪೂರ್ಣ ನಿವಾರ್ಯವಲ್ಲ.


ಬೆಂಕಿ ಮನುಷ್ಯನ ಅಜಾಗರೂಕತೆಯಿಂದ ಅಥವಾ ವಿನಾಶಕಾರೀ ಭವನೆಯಿಂದ ಉಂಟಾಗಬಹುದು; ಅಥವಾ ಕಾಡ್ಗಿಚ್ಚಾಗಿ ತೊಡಗಬಹುದು. ಕಾಡ್ಗಿಚ್ಚುಗಳಲ್ಲಿ ಎರಡು ವಿಧ-ತಳದ ಕಿಚ್ಚು, ತಲೆಯ ಕಿಚ್ಚು. ಮೊದಲಿನವೇ ಹೆಚ್ಚು. ನೆಲದಲ್ಲಿ ಹರೆಡಿದ ತರಗೆಲೆ, ಹುಲ್ಲು, ಹೊದರುಗಳನ್ನು ದಹಿಸಿ ಬೇಗನೆ ಹರಡಿದ ಈ ಕಿಚ್ಚು ಮರಗಳು ತಳಕ್ಕೆ ಗಾಸಿ ಉಂಟುಮಾಡುತ್ತದೆ. ಆದರೆ ಸ್ವಲ್ಪಕಾಲದಲ್ಲಿಯೇ ಶಾಂತವಾಗುವುದು. ತಳದ ಕಿಚ‍್ಚುಗಳು ಮರಗಳ ಮೇಲುಭಾಗವನ್ನೆಲ್ಲ ಉರಿಸಿ ಮರಗಳನ್ನು ನಾಶ ಮಾಡುತ್ತವೆ. ಗಾಳಿ ಬೀಸಿದಂತೆ ಸರ್ವವ್ಯಾಪಿಯಾಗುವ ಈ ಕಿಚ್ಚುಗಳನ್ನು ಹತೋಟಿಗೆ ತರುವುದು ಕಷ್ಟ. ಇಂ‍ಥ ಕಿಚ್ಚುಗಳಿಂದ ಅರಣ್ಯಕೆ ತುಂಬ ಹಾನಿಯಾಗುವುದು. ಬೆಂಕಿ ಒಳ್ಳೆ ಆಳು, ಆದರೆ ಕೆಟ್ಟ ಯಜಮಾನ ಎನ್ನುವುದಕ್ಕೆ ಕಾಡ್ಗಿಚ್ಚು ಉತ್ತಮ ನಿದರ್ಶನ. ಕಾಡ್ಗಿಚ್ಚುಗಳಿಂದ ಆರಣ್ಯ ಸಂರಕ್ಷಣೆ ಮಾಡಲು ಅನುಸರಿಸುವ ಕ್ರಮಗಳು- (1) ಶಿಕ್ಷಣದಿಂದ, ಶಕ್ಷೆಯಿಂದ ಮನುಷ್ಯಕೃತ ಅಪರಾಧಗಳನ್ನು ಕಡಿಮೆ ಮಾಡುವುದು; (2) ಕಾಡುಗಳು, ತೋಪುಗಳ ಸುತ್ತ ಒಳಗೊ ಹೊರಗೊ ಕಿಚ್ಚನ್ನು ತಡೆಯುವ ಅಷ್ಟಿಷ್ಪಗಲದ ಪಾಕುಸಾಲುಗಳನ್ನು (ಬೆಂಕ್ರೋಟು) ಮಾಡಿ ಅವು ಮುಚ್ಚಿಹೋಗದಂತೆ ಎಚ್ಚರ ವಹಿಸುವುದು. ಹೊರಗಿನಿಂದ ಹರೆಡಿಬಂದ ಬೆಂಕಿ ಈ ಸಾಲಿನಲ್ಲಿ ಗ್ರಾಸ ದೊರೆಯದೆ ನಂದಿಹೋಗುವುದು ಅಥವಾ ಅಲ್ಲಿ ಅದನ್ನು ಹತೋಟಿಗೆ ತರಬಹುದು. ಅಡವಿಯಲ್ಲಿನ ರಸ್ತೆಗಳ ಅಕ್ಕಪಕ್ಕಗಳಲ್ಲೂ ಪಾಕುಮಾಡಿ ಅಲ್ಲಿ ಸಸ್ಯಗಳು ಇರದಂತೆ ನಿರ್ಮೂಲಿಸುತ್ತಾರೆ. ಇದರಿಂದ ಬೆಂಕಿಯ ಹರಡುವಿಕೆಗೆ ತಡೆ ಉಂಟಾಗುತ್ತದೆ. ಕಾಡ್ಗಿಚ್ಚನ್ನು ತಡೆಯಲು ಇನ್ನೊಂದು ವಿಧಾನವೂ ಇದೆ-ಬೆಂಕಿ ಹಿಡಿಯಬಹುದಾದ ಪ್ರದೇಶಗಳನ್ನು ಮೊದಲೇ ಗುರುತಿನಿ ಅಲ್ಲಿ ನಿಯಂತ್ರಿತವಾದ ಬೆಂಕಿ ಹಾಕುವುದು. ಇದರಿಂದ ನೈಸರ್ಗಿಕವಾಗಿ ಅಕಸ್ಮಾತಾಗಿ ಸಂಭವಿಸಬಹುದಾದ ಅಪಘಾತ ಇಲ್ಲದಾಗುತ್ತದೆ. ವಿಧಾನ ಏನೇ ಇರಲಿ, ಅರಣ್ಯ ಸಿಬ್ಬಂದಿಯವರ ನಿರಂತರ ಜಾಗರೂಕತೆ ಅತ್ಯಾವಶ್ಯಕ. ಹೆಲಿಕಾಪ್ಟರ್ ಸಹಾಯದಿಂದ ರಾಸಾಯನಿಕಗಳನ್ನು ಕಾಡ್ಗಿಚ್ಚಿನ ಮೇಲೆ ಮಳೆಗೆರೆದು ಶಮನಗೊಳಿಸುವುದೂ ಸಾಧ್ಯವಿದೆ.


ಪ್ರಾಣಿಗಳು, ಕೀಟಗಳು ಮತ್ತು ರೋಗಗಳು: ಅಡವಿಯ ಉತ್ಪನ್ನಗಳಿಗೆ ಘಾತವುಂಟು ಮಾಡುವ ಪ್ರಾಣಿಗಳು, ಕೀಟಗಳು, ರೋಗಗಳು ಯಾವುವು; ಅವುಗಳಿಂದಾಗುವ ಘಾತದ ಸ್ವರೂಪವೇನು ಎಂಬುದರ ತಿಳಿವಳಿಕೆಯ ಮೇಲೆ ರಕ್ಷಣೋಪಾಯ ಅವಲಂಬಿಸಿದೆ. ಸಾಕುಪ್ರಾಣಿಗಳಾದ ದನ,ಆಡುಗಳಿಂದ,ಕಾಡುಪ್ರಾಣಿಗಳಾದ ಆನೆ, ಕಾಡುಕೋಣ, ಕಾಡುಹಂದಿ ಮುಂತಾದವುಗಳಿಂದ ಸಾಕಷ್ಟು ನಾಶ ಉಂಟಾಗುವುದು. ಮಿಡತೆ ಮುಂತಾದ ಕೀಟಗಳು ಮಹಾರಣ್ಯಗಳನ್ನೇ ನಿರ್ಮೂಲ ಮಾಡಿದುದಕ್ಕೆ ನಿದರ್ಶನಗಳಿವೆ. ಸೂಕ್ಷ್ಮಾಣುಗಳಿಂದ ಶಿಲಿಂಧ್ರಗಳಿಂದ ಹರಡುವ ರೋಗಗಳು-ಅರಣ್ಯಗಳಿಗೆ ಮಾರಕ. ಇವುಗಳಲ್ಲಿ ಪ್ರತಿಯೊಂದರಿಂದ ಆಗುವ ಹಾನಿಯನ್ನು ಪ್ರತ್ಯೇಕವಾಗಿ ಅಭ್ಯಸಿಸಿ ಅದಕ್ಕೆ ಪರಿಹಾರ ಹುಡುಕಬೇಕು. ಅರಣ್ಯಶಾಸ್ತ್ರ ಸಂಶೋಧನಾಗಾರದಲ್ಲಿ ನಿರಂತರವಾಗಿ ನಡೆಯುವ ಕೆಲಸವಿದು.


ಇತರ ನೈಸರ್ಗಿಕ ಕಾರಣಗಳು : ಮಳೆ ಗಾಳಿಂದ ಸಾಕಷ್ಟು ನಾಶ ಸಂಭವಿಸುವುದಿದೆ.ನೆಲ ಜರಿದು ಅರಣ್ಯದ ಸ್ವರೂಪ ಬದಲಾಗುವುದಿದೆ. ಕಡು ಬೇಸಿಗೆಯಿಂದ ತಂಪಿಲ್ಲದೆ ಕಾಡು ಒಣಗಬಹುದು. ನೆಲ ಸವೆದು ಕುಸಿಯದಂತೆ ಕಾಪಾಡುವುದರ ಮೂಲಕ ಗಾಳಿಯ ಸಂಚಾರ ಸರಾಗವಾಗಿರುವಂತೆ ಮರಗಳ ಇರವನ್ನು ನಿಯಂತ್ರಿಸುವುದರ ಮೂಲಕ ಕಾಡಿನ ಝರಿಗಳನ್ನು ಸಂರಕ್ಷಿಸಿಕೊಂಡು ಬರುವುದರ ಮೂಲಕ ಇಂಥ ಅಪಾಯಗಳಿಂದ ಅರಣ್ಯಗಳನ್ನು ರಕ್ಷಿಸಬಹುದು.


ಅರಣ್ಯ ಇಲಾಖೆಯಲ್ಲಿ ಜಾರಿಯಲ್ಲಿರುವ ಹತೋಟಿ ಕ್ರಮಗಳು: (1) ನೆಲದ ಸದುಪಯೋಗ ; (2) ಎಲ್ಲೆಕಟ್ಟನ್ನು ಹಾಕುವುದು ; (3) ಎಲ್ಲೆಯ ಸುತ್ತ ಅಗಳನ್ನು ತೋಡುವುದು ; (4) ವಾಟ್ ಕೆಟ್ಟೆಯನ್ನು ಹಾಕುವುದು (ಭೂಮಿಯ ಎಲ್ಲ ಕಡೆಗಳಲ್ಲೂ ಮಣ್ಣನ್ನು ಎಲ್ಲೆಗಳಲ್ಲಿ ರಾಶಿಹಾಕಿ ಯಾವ ರೂಪದಲ್ಲೇ ಆಗಲಿ ಕಟ್ಟೆಗಳನ್ನೋ ಕಟ್ಟುವ ವಿಧಾನ. ಕೊಚ್ಚಿ ಹೋಗುವ ನೀರನ್ನು ತಡೆದಿಡುವುದು ಇವುಗಳ ಉದ್ದೇಶ): 5 ಸೋಪಾನಸ್ತರಗಳನ್ನು ಮಾಡುವುದು; 6 ಕೊರಕಲುಗಳನ್ನು ಮುಚ್ಚುವುದು; 7 ತಡೆಗಟ್ಟುಗಳನ್ನು ಹಾಕುವುದು; 8 ಪ್ರವಾಹಗಳನ್ನೂ ಹುಚ್ಚು ಹೊಳೆಗಳನ್ನೂ ಸರಿಯದ ಕಡೆಗೆ ಹರಿಯುವಂತೆ ಮಾಡುವುದು; 9 ಹುಲ್ಲುಗಾವಲುಗಳನ್ನು ವ್ಯವಸ್ಥೆಯಿಂದ ನೋಡಿಕೊಳ್ಳುವುದು; ಮತ್ತು 10 ಅಡವಿಗಳನ್ನು ಬೆಳೆಸುವುದು.


ಅರಣ್ಯದ ಲಘು ಫಸಲುಗಳು: ಅರಣ್ಯದ ಪ್ರಧಾನ ಫಸಲುಗಳು ಚೌಬೀನೆ (ನಾಟಾ), ಸೌದೆ (ಉರಿಸುವ ಕಟ್ಟಿಗೆ ಮತ್ತು ಇದ್ದಲು). ಉಳಿದವುಗಳ ಹೆಸರು ಲಘು ಫಸಲುಗಳು. ಅರಣ್ಯ ಸಂಪತ್ತಿನಲ್ಲಿರುವ ಸಸ್ಯ, ಪ್ರಾಣಿ ಮತ್ತು ಖನಿಜ ಸಂಬಂಧ ಉತ್ಪನ್ನಗಳೆಲ್ಲ ಲಘು ಫಸಲುಗಳೇ. ಇವುಗಳ ವಿಂಗಡಣೆ ಈ ಕೆಳಗಿನಂತಿದೆ.

1. ಸಸ್ಯಸಂಬಂಧ ಫಸಲುಗಳು - 1 ಕಾಡುಹುಲ್ಲು, ಬಿದಿರು ಬೆತ್ತ, 2 ಮರದ ಎಲೆಗಳು (ಮೇವಿನ ಎಲೆ, ಗೊಬ್ಬರದ ಎಲೆ). 3 ನಾರುಗಳು ಮತ್ತು ಮಡ್ಡಿ ರೇಷ್ಮೆ. 4 ಎಣ್ಣೆ ಬೀಜಗಳು. 5 ಧರ್ಮ ಹದಮಾಡುವ ಟ್ಯಾನ್ ಮತ್ತು ಬಣ್ಣಗಳು. 6 ಅಂಟು ರಾಳ, ತೈಲರಾಳ, 7 ಔಷಧಿ,ಸಾಂಬಾರ ಪದಾರ್ಥಗಳು, ತಿನಿಸು ಪದಾರ್ಥಗಳು ಮತ್ತು ವಿಷಪೂರಿತ ವಸ್ತುಗಳು. 8 ಬಟ್ಟಿ ಇಳಿಸಿ ಅಥವಾ ಕಷಾಯದಿಂದ ಬರುವ ಉತ್ಪನ್ನಗಳು. 9 ಇನ್ನುಳಿದ ವಿವಿಧ ಉತ್ಪನ್ನಗಳು.


2 ಪ್ರಾಣಿಸಂಬಂಧ ಫಸಲುಗಳು-1 ಅರಗು. 2 ಜೇನುತುಪ್ಪ. ಮೇಣ 3 ರೇಷ್ಮೆ, 4 ಧರ್ಮ, 5 ದಂತ, 6 ಹಕ್ಕಿಗಳ ಗೂಡು, 7 ಮೀನು, 8 ಷಿಕಾರಿಯ ಸಂಗ್ರಹಗಳು.


3 ಖನಿಜ ಸಂಬಂಧ ಉತ್ಪನ್ನಗಳು -1 ಅಭ್ರಕ, ಮ್ಯಾಂಗನೀಸ್, ಕಬ್ಬಿಣದ ಅದುರು. 2 ಸುಣ್ಣಕಲ್ಲು, 3 ಬಳಪದಕಲ್ಲು, 4 ಕಟ್ಟಡದ ಕಲ್ಲು ಇತ್ಯಾದಿ.


ಅರಣ್ಯ ಕೈಗಾರಿಕೆಗಳು: ಇವುಗಳ ವಿಭಾಗಗಳು ಈ ಕೆಳಗಿನಂತಿವೆ. 1 ಚೌಬೀನೆ ತಯಾರಿಕೆ (ಲಾಗಿಂಗ್), ಹದಮಾಡುವಿಕೆ ಮತ್ತು ಮರ ಸಂಸ್ಕರಣ, 2 ಮರಕೊಯ್ತು ಮತ್ತು ಪೀಠೋಪಕರಣ. 3 ಪದರ ಹಲಗೆ (ಪ್ಲೈವುಡ್) ಹಲಗೆ ಮತ್ತು ಗಟ್ಟಿ (ಹಾರ್ಡ್) ಹಲಗೆ. 5 ಕಾಗದದ ಪಲ್ವ್ ಮತ್ತು ರೇಯಾನ್. 6 ಬೆಂಕಿಕಡ್ಡಿ, 7 ಸೌದೆ, ಇದ್ದಲು, 8 ಗಂಧದ ಎಣ್ಣೆ, 9 ಕಾಚು ರೇಸಿನ್, ಟರ್ಪಂಟೈನ್, ಅರಗು, ಕರ್ಪೂರ, ಹುಲ್ಲು ಸರಬರಾಜು ಇತ್ಯಾದಿ. ಭಾರತದಲ್ಲಿ ಕೈಗಾರಿಕೆಯ ದೃಷ್ಟಿಯಿಂದ ಚೌಬೀನೆಯ ಅವಶ್ಯಕತೆ ತುಂಬಾ ಇದೆ.


ಅರಣ್ಯಮೃಗ ಸಂರಕ್ಷಣೆ : ಜನಸಂಖ್ಯೆಯ ಬೆಳೆವಣಿಗೆ, ಕಾಡುಗಳು ನಿರ್ಮೂಲನ, ಮೃಗ ಪಕ್ಷಿಗಳ ನಿರಾಶ್ರಿತತ್ವ, ನಾಶ- ಈ ಸಮಸ್ಯೆಗಳು ಕ್ರಮೇಣ ಬೃಹತ್ವ್ರಮಾಣ ತಾಳಿವೆ. ಅರಣ್ಯಮೃಗಸಂರಕ್ಷಣೆ ಅರಣ್ಯಶಾಸ್ತ್ರದ ಬಹು ಮುಖ್ಯ ಅಂಗ. ನಿಸರ್ಗದ ಸಮತೋಲನ ಕಾಪಾಡುವುದರಲ್ಲಿ ಆ ಮೂಲಕ ಮನುಷ್ಯ ಜೀವನ ಸುಗಮಗೊಳಿಸುವುದರಲ್ಲಿ ಇದರ ಪಾತ್ರ ಹಿರಿದು. ಇದಕ್ಕಾಗಿ ರಕ್ಷಿತ ಅರಣ್ಯಗಳು, ಬೇಟೆ ನಿಷೇಧಿಸಿರುವ ಪ್ರದೇಶಗಳು, ಮೃಗಪಕ್ಷಿಗಳಿಗೆ ಮೀಸಲಾಗಿರುವ ಉದ್ಯಾನಗಳು,ಅಭಯಾರಣ್ಯಗಳು ಎಂದು ಮುಂತಾಗಿ ಸರಕಾರಗಳು ವಿಧಿಸಿವೆ. ಮುಖ್ಯ ಉದೇಶವಿಷ್ಟು- ಪ್ರಾಣಿಗಳು ಸಹಜ ಪರಿಸರದಲ್ಲಿ ವಿಕಾಸ ಹೊಂದಲು ಅವಕಾಶ ಒದಗಿಸಬೇಕು; ಇದರಿಂದ ಮನುಷ್ಯನ ಜ್ಞಾನಾಭಿವೃದ್ಧಿಯಾಗುವುದರ ಜೊತೆಗೆ ರಸಾನುಭವವೂ ಇದೆ.


ಕರ್ನಾಟಕ ರಾಜ್ಯದಲ್ಲಿ 1907ರಲ್ಲಿ ಬೇಟೆ ಕಾನೂನು ಜಾರಿಗೆ ಬಂದಿತು. ಇದರ ಪ್ರಕಾರ ಆಗ ಪ್ರಚಾರವಾಗಿದ್ದ ಮೃಗಯಾನಿಯಮಗಳಿಗೆ ಅನುಸಾರವಾಗಿ ವನ್ಯಜೀವಿಗಳು ಹೇರಳವಾಗಿದ್ದ ಅನೇಕ ಕಾಡುಗಳಲ್ಲಿ ಬೇಟೆಯನ್ನು ನಿಷೇಧಿಸಲಾಗಿತ್ತು. 1941ರಲ್ಲಿ ನೀಲಗಿರಿಗೂ ವೈನಾಡಿಗೂ ಹೊಂದಿಕೊಂಡಿರುವ ಸುಮಾರು 321 ಚ.ಮೈ. ಪ್ರದೇಶದ ವೇಣುಗೋಪಾಲ ವನ್ಯಮೃಗ ಅಭಯಾರಣ್ಯ, ರಾಷ್ಟೀಯ ಉದ್ಯಾನವನಗಳೆಂದರೆ ನಾಗರಹೊಳೆ (573 ಚ.ಕಿಮೀ). ಬಂಡೀಪುರ (820 ಚ.ಕಿಮೀ), ಭದ್ರಾ ( 490 ಚ.ಕಿಮೀ) ಇತ್ಯದಿ.


ಅರಣ್ಯ ಕಾಯಿದೆಗಳು: ಅರಣ್ಯ ಪದದ ವ್ಯಾಖ್ಯೆ ಆಯಾದೇಶದ ಸಂವಿಧಾನಕ್ಕೆ ಅನುಗುಣವಾಗಿದೆ. ಇಂಥ ವ್ಯಾಖ್ಯೆ ಕಾಲಾನಿಸಾರ ಬದಲಾವಣೆಗೊಂಡಿದೆ. ಈಗ ಸರಕಾರ ಅರಣ್ಯ ಎಂದು ವಿಧಿಸುವ ಪ್ರದೇಶಗಳ ಆಡಳಿತಕ್ಕಾಗಿ ರೂಪಿಸುವ ನಿಯಮಗಳಿಗೆ ಅರಣ್ಯ ಕಾಯಿದೆಗಳೆಂದು ಹೆಸರು. ಅರಣ್ಯಕ್ಕೆ ಸೇರದ ಭೂಮಿಯ ಒಡೆತನ ಯಾರದ್ದಾಗಿದ್ದರೂ ಕಾಯಿದೆಗಳಿಗೆ ಸರ್ವವ್ಯಾಪ್ತಿಯಿದ್ದೇ ಇದೆ. ಅರಣ್ಯ ರಾಷ್ಟ್ರದ ಸಂಪತ್ತು. ಅದರ ಏಳ್ಗೆ, ನಾಶಗಳೊಡನೆ ದೇಶದ ಏಳ್ಗೆ ನಾಶಗಳು ನಿಕಟವಾಗಿ ಹೊಂದಿಕೊಂಡಿವೆ-ಇದು ಒಂದು ರಾಷ್ಟ್ರದ ಅರಣ್ಯ ನೀತಿ.