ಪುಟ:Mysore-University-Encyclopaedia-Vol-1-Part-3.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರ್ಮಡಿಲೊ-ಆರ್ಮೊನಿಕ ಮೊಟ್ಟಮೊದಲು ಈ ಪಡೆಯಲ್ಲಿ ೨೪ ಯುದ್ಧದ ಹಡಗುಗಳು ಮಾತ್ರ ಇದ್ದವು.ಕೊನೆಗೆ ಒಟ್ಟು ೧೩೦ ಹಡಗುಗಳೂ ೨,೫೦೦ ಫಿರಂಗಿಗಳೂ ೮,೦೦೦ ನಾವಿಕರೂ ೨೦,೦೦೦ ಯೋಧರೂ ಕೂಡಿದರು.ಡೋವರ್ ಜಲಸಂಧಿಯಲ್ಲಿದ್ದ ಇಂಗ್ಲಿಷ್ ನೌಕೆಯನ್ನು ಹೊಡೆದಟ್ಟಿ ಸ್ಪೇನ್ ಸೈನ್ಯ ದಾಟಿ ಹೋಗಲು ದಾರಿ ಮಾಡಬೇಕೆಂಬುದು ಮೊದಲನೆಯ ಉದ್ದೇಶ.ಪಡೆಯ ಮೊದಲ ನಾಯಕ ಸಾಂತಾಕ್ರೂಜ್.ಈತ ಯುದ್ಧದ ಆರಂಭದಲ್ಲೇ ಮೃತಪಟ್ಟ(೧೫೮೮).ಆಮೇಲ ಪಡೆಯ ನಾಯಕತ್ವವನ್ನು ಮೆಡೀನ ಸಿಡೋನಿ ವಹಿಸಿಕೊಂಡ.

೨೯ ಜುಲೈ ೧೫೮೮ ರಂದು ನೌಕಾದಾಳಿ ಆರಂಭವಾಯಿತು.ಒಂದು ವಾರದೊಳಗೆ ಪ್ಲೀಮತ್,ಪೋರ್ಟ್ಲೆಂಡ್ ಮತ್ತು ವೈಟ್ ದ್ವೀಪಗಳಲ್ಲಿ ಕದನ ನಡೆಯಿತು.ಆದರೆ ಯಾವ ಕದನದಲ್ಲೂ ಸ್ಪೇನಿಗೆ ಖಚಿತವಾದ ಜಯ ದೊರೆಯಲಿಲ್ಲ.ಕೊನೆಗೆ ಆಗಸ್ಟ್ ೬ ರಂದು ಡೋವರ್ ತಲುಪಿ ಸ್ಪೇನ್ ಪಡೆ ಕೆಲೆ ಹತ್ತಿರ ಬೀಡು ಬಿಟ್ಟಿತು.

ಇಂಗ್ಲೆಂಡಿನ ಕೆಥೊಲಿಕ್ ಪಂಗಡ ದಂಗೆಯೆದ್ದಲ್ಲಿ ತನಗೆ ಸಹಾಯವಾದೀತೆಂದು ಫಿಲಿಪ್ ನಂಬಿದ್ದ.ಆದರೆ ಅವರು ತಾಯಿನಾಡಿಗೆ ವಿರೋಧವಾಗಿ ನಡೆದುಕೊಳ್ಳಲಿಲ್ಲ.ಅಲ್ಲದೆ ಫ್ರಾನ್ಸಿಸ್ ಡ್ರೇಕ್,ಹಾಕಿನ್ಸ್ ಮತ್ತು ಫ್ರಾಬಿಷರ್ ಎಲ್ಲರೂ ಒಟ್ಟುಗೂಡಿ ಬಿರುಸಾಗಿ ಕಾದಿದರು.ಮೂರನೆಯದಾಗಿ ಆಗಸ್ಟ್ ೭ ಮತ್ತು ೮ರಂದು ಪಡೆಗೆ ವಿರೋಧವಾಗಿ ಸಮುದ್ರದಲ್ಲಿ ಬಿರುಗಾಳಿ ಎದ್ದಿತು.ಪಡೆಯ ನಾವಿಕರಲ್ಲನೇಕರಿಗೆ ಕಾಯಿಲೆ ಬಂತು.ಆಹಾರ ಮತ್ತು ನೀರಿನ ಸರಬರಾಜು ಕುಗ್ಗಿಹೋಯಿತು.ಇಂಥ ದುಃಸ್ಥಿತಿ ಒದಗಿದ್ದುದರಿಂದ ಪಡೆಯ ಹೆಚ್ಚುಭಾಗ ತಿರುಗಿ ಸ್ಪೇನನ್ನು ಮುಟ್ಟಲೂ ಆಗಲಿಲ್ಲ.

ಇಂಗ್ಲೆಂಡು ಬದುಕಿತು.ದಿಗ್ವಿಜಯದ ಉತ್ಸಾಹದಲ್ಲಿ ರಾಣಿ ಎಲಿಜಬೆತ್ "ದೇವರು ಬೀಸಿದ,ಅವು ಚದುರಿ ಹೋದುವು" ಎಂಬ ಅರ್ಥ ಬರುವ ಫಲಕವೊಂದನ್ನು ಮಾಡಿಸಿ ಹಾಕಿಸಿದಳು.ಸಮುದ್ರದ ಮೇಲೆ ತನ್ನ ಪ್ರಾಬಲ್ಯವನ್ನು ಬೆಳೆಸಿಕೊಂಡ ಹೊರತು ಸ್ವಾತಂತ್ರ್ಯಕ್ಕೆ ಉಳಿಗಾಲವಿಲ್ಲ ಎಂಬ ಪಾಠವನ್ನು ಇಂಗ್ಲೆಂಡ್ ಕಲಿತಿತು. (ಬಿ.ಎಸ್.ಎನ್.)

ಆರ್ಮಡಿಲೊ:ಈಡೆಂಟೇಟ ವರ್ಗಕ್ಕೆ ಸೇರಿದ ಹೆಗ್ಗಣದಂತೆ ನೆಲಕೊರೆಯುವ ಒಂದು ಜಾತಿಯ ಪ್ರಾಣಿ.ಈ ಜಾತಿಯ ಪ್ರಾಣಿಗಳೆಲ್ಲ ಅಮೇರಿಕದ ನಿವಾಸಿಗಳು.ಇವುಗಳ ಹಲವಾರು ಮೂಳೆಚಕ್ಕೆಗಳು ಹೆಚ್ಚು ಕಡಿಮೆ ಮೈಯನ್ನೆಲ್ಲ ಪೂರ್ಣವಾಗಿ ಮುಚ್ಚುವ ಕವಚದಂತಿವೆ.ಹೆಗಲಿನಲ್ಲಿ ಒಂದು ಮೂಳೆಯ ಗುರಾಣಿ ಇದೆ.ಸೊಂಟದಲ್ಲಿ ಮತ್ತೊಂದಿದೆ.ಇವುಗಳ ನಡುವೆ ಚಲಿಸುವಂಥ ಹಲವಾರು ಮೂಳೆಯ ಒಡ್ಯಾಣ ಅಥವಾ ಚುಕ್ಕೆಗಳು ಇದ್ದು ಮೈ ಬಾಗಿ ಬಳುಕಲು ಸಾಕಷ್ಟು ಅವಕಾಶವಿದೆ.ತಲೆಯಮೇಲೆ ಮತ್ತೊಂದು ಮೂಳೆಯ ಗುರಾಣಿ ಇದೆ.ಬಾಲದುದ್ದಕ್ಕೂ ಚಿಕ್ಕ ಮೂಳೆಗಳಿವೆ.ಇವನ್ನು ಬಿಟ್ಟರೆ ಚರ್ಮದಮೇಲೆ ಮೂಳೆಗಳಿರುವ ಪ್ರಾಣಿಗಳು ಇನ್ನಾವುವೂ ಇಲ್ಲ.ಇವುಗಳ ಹೆಸರುಗಳು ಮೂಳೆಪಟ್ಟಿಗಳ ಲೆಕ್ಕವನ್ನವಲಂಬಿಸಿದೆ.ಉದಾಹರಣೆಗೆ,ಮೂರು ಪಟ್ಟೆ,ಆರು ಪಟ್ಟೆ,ಒಂಬತ್ತು ಪಟ್ಟೆ ಇತ್ಯಾದಿ.ಹೊರಕವಚ ಬಹಳ ಬಲವಾಗಿರುವುದಲ್ಲದೆ ಅದರೊಳಕ್ಕೆ ಪ್ರಾಣಿ ತನ್ನ ತಲೆಯನ್ನೂ ಬಾಲವನ್ನೂ ಎಳೆದುಕೊಂಡು ಒಂದು ದುರ್ಭೇದ್ಯವಾದ ಚೆಂಡಿನಂತೆ ಗುಂಡಾಗಿ ಉರುಳುತ್ತಿರಬಲ್ಲದು.

ಇದು ಸ್ಲಾತ್ ಎಂಬ ಪ್ರಾಣಿಯ ಗುಂಪಿಗೆ ಸೇರಿದೆ.ಸ್ಲಾತ್ ಪ್ರಾಣಿಯು ಮರದ ರೆಂಬೆಗಳನ್ನು ಆಶ್ರಯಿಸಿದರೆ ಇದು ತನ್ನ ಕವಚವನ್ನೂ ತೋಡುವ ಸಾಮರ್ಥ್ಯವನ್ನು ಅವಲಂಬಿಸಿ ನೆಲವನ್ನು ಆಶ್ರಯಿಸಿದೆ.ಇದಕ್ಕೆ ಒಳ್ಳೆಯ ಬಲವಾದ ಉಗುರುಗಳಿರುವುದರಿಂದ ನೆಲವನ್ನು ಬೇಗನೆ ತೋಡಿ ನೆಟ್ಟನೆ ಒಳಕ್ಕಿಳಿದು ಕಣ್ಮರೆಯಾಗಬಲ್ಲೌ.ಕವಚದ ರಕ್ಶಣೆಯ ಜೊತೆಗೆ ಇದು ವೇಗವಾಗಿ ಓಡಲೂಬಲ್ಲದು;ಚುರುಗುಟ್ಟುವಂತೆ ಕಡಿಯಲೂ ಬಲ್ಲದು.ಸಾಮಾನ್ಯವಾಗಿ ಇದು ದುಷ್ಟಜಂತುವಲ್ಲ.ಬೆದೆಗಾಲದಲ್ಲಿ ಹೊರತು,ಮಿಕ್ಕ ಸಮಯಗಳಲ್ಲಿ ಒಂಟಿಯಾಗಿಯೇ ಇರುತ್ತದೆ.ತಗ್ಗು ಏರು ಇಲ್ಲದ ಬಯಲು ಕಾಡುಗಳಲ್ಲೂ,ನೆಲಗಳಲ್ಲೂ ಇರಲು ಇದಕ್ಕೆ ಇಷ್ಟ.ಇರುವೆ,ಹುಳು ಹುಪ್ಪಟೆ,ಸಸ್ಯ,ಕೊಳೆತ ಮಾಂಸ ಇವು ಇದರ ಆಹಾರ.ನಸುಹಳಸಿದ ಮಾಂಸವೆಂದರೆ ಇದಕ್ಕೆ ತುಂಬ ಪ್ರೀತಿ.ಕೆಲವು ಆರ್ಮಡಿಲೊಗಳು ಹಾವುಗಳನ್ನು ತಿನ್ನುತ್ತವೆ.ಒಟ್ಟಿನಲ್ಲಿ ಆರ್ಮಡಿಲೊ ತಿನ್ನದ ವಸ್ತುವಿಲ್ಲ ಎನ್ನಬಹುದು.ಇವು ರಾತ್ರಿಯಲ್ಲಿ ತಮ್ಮ ಗೂಡುಗಳಿಂದ ಹೊರಬಿದ್ದು ಹುಳು ಹುಪ್ಪಟೆ,ಸಣ್ಣದಂಶಕ ಪ್ರಾಣಿಗಳು ಮತ್ತು ಸತ್ತ ಪ್ರಾಣಿಗಳನ್ನು ಹುಡುಕಿಕೊಂಡು ಹೊರಡುತ್ತವೆ.ತಲೆಯಿಂದ ಬಾಲದ ಕೊನೆಯವರೆಗೆ ಐದು ಅಡಿಗಳಷ್ಟಿರುವ ರಾಕ್ಷಸ ಆರ್ಮಡಿಲೊ ಈ ಜಾತಿಯಲ್ಲಿ ಅತ್ಯಂತ ದೊಡ್ಡ ಪ್ರಾಣಿ.ಒಂಬತ್ತು ಪಟ್ಟೆಗಳುಳ್ಳ ಆರ್ಮಡಿಲೊ ಒಂದೇ ದಕ್ಷಿಣ ಟೆಕ್ಸಾಸ್,ಆರಿಜೋನ,ಅಲ್ಲಿಂದ ದಕ್ಷಿಣಕ್ಕೆ ಬ್ರೆಜಿಲ್ವರೆಗೂ ಅರ್ಜಂಟೀನದ ಬಯಲು ಕಾಡಿನಿಂದ ಹಿಡಿದು ಪನಾಮದವರೆಗೂ ದಕ್ಷಿಣ ಅಮೆರಿಕದ ಎಲ್ಲೆಡೆಯಲ್ಲೂ ಹರಡಿದೆ.ಮನುಷ್ಯರ ಕೈಗೆ ಸಿಕ್ಕು ಬಾಳಬೇಕಾಗಿ ಬಂದಾಗ ಇವುಗಳಲ್ಲಿ ಅನೇಕವು ಕೊಚ್ಚಿದ ಮಾಂಸ,ಕೋಳಿ,ಮೊಟ್ಟೆ,ಅನ್ನ ತಿಂದು ಬದುಕಬಲ್ಲವು. (ಎ.)

ಆರ್ಮೇನಿಯ:ಸೋವಿಯತ್ ಗಣರಾಜ್ಯಗಳಲ್ಲೊಂದು ಹಳೆಯ ಆರ್ಮೆನಿಯ ದೇಶದ ವಿಸ್ತಾರ ೧೦೩,೬೦೦ ಚ.ಕಿಮೀ. ಈ ರಾಜ್ಯ ಪ್ರ.ಶ.ಪೂ. ೬ನೆಯ ಶತಮಾನದಲ್ಲಿ ಸ್ವತಂತ್ರ್ಯ ರಾಜ್ಯವಾಗಿತ್ತು.ಕೆಲವು ಕಾಲದ ಮೇಲೆ ಇದು ರೋಮ್ ರಾಜ್ಯದ ಒಂದು ಅಂಗವಾಯಿತು.ಮಧ್ಯಯುಗದಲ್ಲಿ ಮತ್ತೆ ಸ್ವತಂತ್ರ್ಯವಾದ ಈ ರಾಜ್ಯದಲ್ಲಿ ಅಲ್ಲಿಯ ಅರಸರು ಆಳುತ್ತಿದ್ದರು.೧೪೦೦ರಿಂದ ಮುಂದೆ ಇದನ್ನು ತುರುಕರು ಮತ್ತು ಪಾರ್ಸಿಗಳು ತಮ್ಮ ತಮ್ಮೊಳಗೆ ಹಂಚಿಕೊಂಡರು.೧೯ನೆಯ ಶತಮಾನದ ಆರಂಭದ ಇದರ ಬಹಳ ಭಾಗವನ್ನು ರಷ್ಯಾದವರು ಗೆದ್ದುಕೊಂಡರು.ಒಂದನೆಯ ಮಹಾಯುದ್ಧದ ಕಾಲದವರೆಗೆ ಇದರಲ್ಲಿ ತುರುಕರು,ಪಾರ್ಸಿಗಳು ಮತ್ತು ರಷ್ಯನ್ನರಿಗೆ ಸೇರಿದ ಮೂರು ಭಾಗಗಳಿದ್ದುವು.

೧೯ನೆಯ ಶತಮಾನದ ಅಂತ್ಯಕ್ಕೆ ತುರುಕರು ಆರ್ಮೇನಿಯರ ಕೊಲೆ ಮಾಡತೊಡಗಿದರು.ಆದುದರಿಂದ ಯುರೋಪಿನಲ್ಲಿ ಆರ್ಮೇನಿಯನ್ನರ ಬಗೆಗೆ ಸಹಾನುಭೂತಿ ಮತ್ತು ಆತ್ಮೀಯ ಭಾವಗಳು ಹುಟ್ಟಿದುವು.೧೯೦೮ರಲ್ಲಿ ತುರುಕ ಯುವಕರು ಹೆಚ್ಚಾದ ವ್ಯವಸ್ಥಿತ ರೀತಿಯಲ್ಲಿ ಆರ್ಮೇನಿಯರ ಕೊಲೆಯ ಕಾರ್ಯವನ್ನು ಕೈಗೊಂಡರು.ಆಗ ಸು.೮೦,೦೦೦ ಆರ್ಮೇನಿಯನ್ನರು ಕೊಲ್ಲಲ್ಪಟ್ಟರೆಂದು ತಿಳಿದುಬಂದಿದೆ.

ಆ ರೀತಿಯಲ್ಲಿ ಆರ್ಮೇನಿಯ ಗಣರಾಜ್ಯ ೧೯೧೮ರಲ್ಲಿ ತಲೆಯೆತ್ತಿತು.ಯುರೋಪಿನ ಶಕ್ತಿಕೂಟದವರು ಇದನ್ನು ೧೯೨೦ರಲ್ಲಿ ಮನ್ನಿಸಿದರು.ಆದರೆ ಇದರ ಬಾಳ್ವೆ ನಾನಾ ಬಗೆಯಾಗಿ ಕೆಲವೇ ವರ್ಷಗಳಲ್ಲಿ ಕೊನೆಗೊಂಡಿತು.ಆಗ ಇಲ್ಲಿ ಬೋಲ್ಷೆವಿಸ್ಟರ ಪ್ರಭಾವ ಬೆಳೆಯುತ್ತಿದುದರಿಂದ ೧೯೨೧ರಲ್ಲಿ ಸೋವಿಯತ್ ಮಾದರಿಯ ಗಣರಾಜ್ಯ ರೂಪುಗೊಂಡಿತು.

ಕ್ರೈಸ್ತಪಂಥ ೩ನೆಯ ಶತಮಾನದಲ್ಲಿ ಮೊದಲು ಇಲ್ಲಿ ತಳವೂರಿತು.ಆಡಳಿತ ಮತ್ತು ನಿಯಮಾಚರಣೆಗಳಲ್ಲಿ ಇದು ಗ್ರೀಕರ ಕ್ರೈಸ್ತಪಂಥವನ್ನು ಹೋಲುತ್ತದೆಯಾದರೂ ತಮ್ಮ ಧರ್ಮದ ಹಿರಿಯರ ಅಧಿಕಾರದಲ್ಲಿ ಇದು ಬೇರೆಯಾಗಿಯೇ ಇದೆ.ಜಗತ್ತಿನಲ್ಲಿ ಇದೇ ಅತಿ ಪ್ರಾಚೀನವಾದ ಕ್ರೈಸ್ತಪಂಥವೆಂದು ಪ್ರತೀತಿ. (ಎಚ್.ಜಿ.ಬಿ.)

ಆರ್ಮೊನಿಕ:ಇದೊಂದು ಸಂಗೀತವಾದ್ಯ.ಇದಕ್ಕಿರುವ ಗಾಜಿನ ಅಥವಾ ಲೋಹದ ಕೊಳವೆಗಳ ಮೇಲೆ ಒದ್ದೆ ಬೆರಳನ್ನು ಆಡಿಸಿದಾಗ ಉಂಟಾಗುವ ಘರ್ಷಣೆಯಿಂದಾಗಿ ಶಬ್ದೋತ್ಪತ್ತಿಯಾಗುತ್ತದೆ.ಬಹಳ ಹಿಂದಿನ ಕಾಲದಿಂದಲೇ ಪೌರಸ್ತ್ಯದೇಶಗಳಲ್ಲಿ ಮತ್ತು ೧೫ನೆಯ ಶತಮಾನದ ಯುರೋಪಿನಲ್ಲಿ ಈ ವಾದ್ಯದ ಪರಿಚಯ ಸಾಕಷ್ಟಿತ್ತು.ಜರ್ಮನಿಯ ಖ್ಯಾತ ಸಂಗೀತಕೃತಿಕಾರ ಗ್ಲೂಕ್ ತನ್ನ ಲಂಡನ್ನಿನ ಭೇಟಿಯ ಸಮಯದಲ್ಲಿ(೧೭೪೫) ಈ ವಾದ್ಯವನ್ನು ನುಡಿಸಿದ.ಆಸ್ಟ್ರಿಯದ ಖ್ಯಾತ ಸಂಗೀತಕೃತಿಕಾರ ಮೊಜಾರ್ಟ್ ಈ ವಾದ್ಯವೂ ಸೇರಿದಂತೆ ಅಳವಡಿಸಿದ ಗೀತೆ (ಪಂಚಮೇಳ,ಕ್ವಿಂಟೆಟ್) ಒಂದನ್ನು