ಪುಟ:Mysore-University-Encyclopaedia-Vol-2-Part-2.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಇಡಗುಂಜಿ.
ವಾಗಿಯೂ ಚಿತ್ರಿಸಿಲಾಗಿದೆ. ತಮಗೆ ಪ್ರಿಯವಾದ ಔತಣ, ಭೋಜನಗಳಲ್ಲಿ, ಆಟೋಟ ಸ್ಪರ್ಧೆಗಳಲ್ಲಿ, ಕುದುರೆಯ ಓಟ, ಮೂರು ಕುದುರೆಗಳನ್ನು ಹೂಡಿದ ರಥಗಳ ಓಟ ಮೊದಲಾದವಲ್ಲಿ ಜನ ನಿರತರಾಗಿರುವಂತೆಯೂ ವಿವಿಧ ವಾದ್ಯಗಳನ್ನು ಹಿಡಿದ ಸಂಗೀತಗಾರರಿಂದಲೂ ತಟ್ಟೆ ಬಟ್ಟಲುಗಳನ್ನು ತರುತ್ತಿರುವ ದಾಸ ದಾಸಿಯರಿಂದಲೂ ಆವೃತವಾಗಿರುವಂತೆಯೂ ಇಲ್ಲಿನ ಅನೇಕ ಚಿತ್ರಗಳಲ್ಲಿ ತೋರಿಸಲಾಗಿದೆ. ಟರ್ ಕ್ವಿನಿಯದ ಚಿರತೆಗಳ, ಶವಾಗಾರದ, ಔತಣದ, ಓಟದ, ಮಲ್ಲಯುದ್ಧದ ಚಿತ್ರಗಳು, ಕಂಚಿನ ಎರಕದಲ್ಲಿ ನೇಗಿಲಿಗೆ ಎತ್ತುಗಳನ್ನು ಹೂಡಿದ ರೈತ (ಪ್ರಶ. ಪೂ. 4ನೆಯ ಶತಮಾನ); ಈಟಿಯನ್ನು ಹಿಡಿದು ನಿಂತಿರುವ ಯೋಧ(ಪ್ರಶ. ಪೂ. 5ನೆಯ ಶತಮಾನ); ಪೆರೂಗಿಯದಲ್ಲಿ ಸಿಕ್ಕಿದ ಮುಳುಗುಗಾರ ಚಿತ್ತರದ ಕೆಲಸವಿರುವ ಕಂಚಿನ ರಥ, ಭವಿಷ್ಯವಾದಿಗಳ ಪ್ರತಿಮೆಗಳ, ಮಣ್ಣಿನಲ್ಲಿ ಚಿತ್ರಿಸಿರುವ ಯೋಧನ ತಲೆ, ಭರಣಿಗಳ ಮೆಚ್ಚಳಗಳ ಮೇಲೆ ಚಿತ್ರಿಸಿರುವ ದಂಪತಿಗಳ ಕೆತ್ತನೆಗಳು; ಬಣ್ಣ ಬಳಿಯಲ್ಪಟ್ಟ ಮಣ್ಣಿನ ಅಪೊಲೊ ಪ್ರತಿಮೆಗಳು; ಸೂಕ್ಷ್ಮವಾದ ಕೆತ್ತನೆಯ, ವಿಚಿತ್ರ ಮೃಗಗಳ ಚಿತ್ರವುಳ್ಳ ಚಿನ್ನದ ಒಡವೆಗಳು-ಇವೇ ಮೊದಲಾದವು ಅವರ ಕಲೆಯ ಉತ್ತಮ ನಿದರ್ಶನಗಳಾಗಿವೆ. ಪಿಟುಲೋನಿಯದ ಮಂಡುಗೋರಿಯಲ್ಲಿ ದೊರೆತ ಮಣ್ಣಿನ ಪಾತ್ರೆಗಳಲ್ಲಿ ಜ್ಯಾಮಿತೀಯ ಆಕೃತಿಗಳಿದ್ದು 46 ಅಕ್ಷರಗಳನ್ನು ಬಿಡಿಸಲಾಗಿದೆ. ಚಿತ್ರಗಾರಿಕೆಯುಳ್ಳ ಮಣ್ಣಿನ ಕಲಶಗಳಲ್ಲಿ ಗ್ರೀಕ್ ಪ್ರಭಾವ ಕಂಡುಬರುತ್ತದೆ. (ಎಂ.ಎಂ.ಪಿ)

ಇಡಗುಂಜಿ: ಉತ್ತರ ಕರ್ನಾಟಕದ ಯಾತ್ರಾಕ್ಷೇತ್ರಗಳಲ್ಲೆಲ್ಲ ವಿಶಿಷ್ಟವಾದುದು. ಭರತ ಖಂಡದ ಸಿದ್ಧಿಪ್ರದ ಅಷ್ಟಕ್ಷೇತ್ರಗಳಲ್ಲಿ ಒಂದು. ದ್ವಿಭುಜ ಗಣಪತಿಯ ಸುಂದರ ಶಿಲಾವಿಗ್ರಹವಿಲ್ಲಿದೆ. ಇಂಥ ವಿಗ್ರಹ ಕೇವಲ ಎರಡೇ ಸ್ಥಳಗಳಲ್ಲಿವೆ; ಒಂದು ಇಡಗುಂಜಿಯಲ್ಲಿ, ಇನ್ನೊಂದು ಗೋಕರ್ಣದಲ್ಲಿ. ಶರಾವತಿಯ ಮುಖ್ಯಪ್ರದೇಶದ ಎಡಭಾಗದಲ್ಲಿ ಇಡಗುಂಜಿಯಿದೆ. ಹೊನ್ನಾವರದಿಂದ ಇಲ್ಲಿಗೆ 13 ಕಿಮೀ. ಇಡಾ ಎಂದರೆ ಎಡ, ಕುಂಜು ಎಂದರೆ ಗಿಡಗಂಟೆಗಳಿಂದ ತುಂಬಿರುವ ಅರಣ್ಯಪ್ರದೇಶ. ಇಡಗುಂಜಿ ಎಂಬ ಹೆಸರು ಇಡಾಕುಂಜೆ ಎಂಬುದರಿಂದ ಬಂದುದು. ಮೊದಲು ಈ ಪ್ರದೇಶಕ್ಕೆ ಗುಂಜಾರಣ್ಯ ಎಂಬ ಹೆಸರು ಇತ್ತು. ಈಗ ಸು. 2500 ಜನಸಂಖ್ಯೆ ಇರುವ ಫಲಭರಿತ ಪ್ರದೇಶವಿದು.

ಇಡಗುಂಜಿ ವಿಶೇಷತಃ ಹವ್ಯಕ ಜನಾಂಗದ ಯತ್ರಾಕ್ಷೇತ್ರ. ವಿಘ್ನೇಶ್ವರ ಅವರ ಕುಲದೈವ. ಇಲ್ಲಿ ಅವನಿಗೆ ಕೊಳಯಡಿಕೆ ಗಣಪತಿ ಎಂಬ ಹೆಸರೂ ಇದೆ. ಅಡಕೆ ತೋಟಗಳಿಗೆ ಕೊಳೆರೋಗ ಬಂದಾಗ ಹರಕೆ ಹೊರುವುದು ಸಾಮಾನ್ಯ. ಉತ್ತರ ಕನ್ನಡದ ಯಕ್ಷಗಾನ ಪರಂಪರೆಗೆ ಇಡಗುಂಜಿಯ ಗಣಪತಿ ಮತ್ತು ಅಲ್ಲಿಂದ ಸು. 16 ಕಿಮೀ ದೂರದಲ್ಲಿರುವ ಗುಂಡಬಾಳದ ಹನುಮಂತದೇವರು ಸ್ಪೂರ್ತಿ ಸ್ವರೂಪರು. ಶ್ರೀ ಇಡಗುಂಜಿ ಯಕ್ಷಗಾನ ಮಂಡಳಿ ದೇಶಕ್ಕೆ ಪ್ರಸಿದ್ಧ ನಟರನ್ನು ನೀಡಿದೆ. ಇವರು ಇಲ್ಲಿಂದ ಕಾಶ್ಮೀರದ ವರೆಗೂ ಪರ್ಯಟನೆ ಮಾಡಿ ಜನಮನ ಸೂರೆಗೊಂಡಿದ್ದಾರೆ. ಇಡಗುಂಜಿ ಉತ್ತಮ ಶಿಕ್ಷಣ ಕೇಂದ್ರವೂ ಹೌದು. ಇಲ್ಲಿ ಗುರುಕುಲ ಪದ್ಧತಿಯ ಸಂಸ್ಕೃತ ಪಾಠಶಾಲೆಯಿದ್ದು 5 ವರ್ಷಕಾಲ ವಿದ್ಯಾರ್ಥಿಗಳಿಗೆ ಉಚಿತ ಊಟವಸತಿಗಳ ಸೌಲಭ್ಯವಿದೆ. ಇಲ್ಲಿಯ ಸಂಸ್ಕೃತಾಭ್ಯಾಸಕ್ಕೆ ಸರ್ಕಾರದ ಮನ್ನಣೆಯಿದೆ. ದೇವಸ್ಥಾನದ ಪರಿಸರ 17 ಗುಂಟೆ ಕ್ಷೇತ್ರವನ್ನಾವರಿಸಿದ್ದು, ದೇವಾಲಯ 3 ಲಕ್ಷ ರೂ.ಗಳ ವೆಚ್ಚದಲ್ಲಿ ಕಾಂಕ್ರೀಟಿನಿಂದ ನಿರ್ಮಿತವಾಗಿದೆ. ಇದರ ಮೇಲೆ 22 ತೊಲ ಚಿನ್ನದ ಲೇಪವುಳ್ಳ 78 ಕಿ.ಗ್ರಾಂ. ತೂಕದ ಪಂಚಲೋಹದ ಕಳಶವಿದೆ. ಇಲ್ಲಿ ಪ್ರತಿವರ್ಷವೂ ರಥಸಪ್ತಮಿಯ ದಿನ ರಥೋತ್ಸವವು ಗಣೇಶ ಚತುರ್ಥಿಯ ದಿವಸ ವೈಭವೋಪೇತ ಉತ್ಸವವು ನಡೆಯುತ್ತವೆ.

ಲೋಕ ಕಲ್ಯಾಣಾರ್ಥ ವಾಲಖಿಲ್ಯಾದಿ ಋಷಿಗಳೂ ಕುಟಜಾದ್ರಿಯಲ್ಲಿ ತಪಸ್ಸನ್ನಾಚರಿಸುತ್ತಿದ್ದಗ ಅನೇಕ ವಿಘ್ನಗಳು ಉಂಟಾದವು. ತ್ರಿಲೋಕ ಸಂಚಾರಿ ನಾರದ ಇದನ್ನರಿತು ಪರಿಹಾರಕ್ಕೆ ಮಹಾಗಣಪತಿಯ ಪೂಜೆಗೈಯಬೇಕೆಂದು ಆದೇಶವಿತ್ತ. ಗಣನಾಥನನ್ನು ಭೂಲೋಕಕ್ಕೆ ಕರೆತರುವ ಹೊರೆ ಹೊತ್ತ ನಾರದ ಆ ಮುನಿಗಡಣದೊಂದಿಗೆ ಪಡುವಣಕ್ಕೆ ಅಭಿಮುಖವಾಗಿ ಬಂದು ವಟಿಕಾ ಘಟ್ಟದಿಂದಿಳಿದು ಗೋವರ್ಧನ ಗಿರಿಯಲ್ಲಿ(ಗೇರು ಸೊಪ್ಪ) ನಿಂತು ಸುತ್ತಲ ಪ್ರದೇಶವನ್ನು ನೋಡಿದ. ಶರಾವತಿಯ ಮುಖಜ ಪ್ರದೇಶ ಅವರೆಲ್ಲರ ಮನಸೆಳೆಯಿತು. ಅಲ್ಲಿ ಪೂರ್ವ-ಪಶ್ಚಿಮಗಳಲ್ಲಿ ಔಷಧಿ, ವನೌಷಧಿ ಪರ್ವತಗಳಿರುವ ಪ್ರದೇಶವನ್ನು ಆರಿಸಿ, ಶರಾವತಿಯ ಎಡಪ್ರದೇಶದಲ್ಲಿರುವ ಅರಣ್ಯ ಪ್ರದೇಶಕ್ಕೆ ನಾರದ ಇಡಾಕುಂಜ ಎಂದು ಹೆಸರಿಟ್ಟು ಅದೇ ನಾಮದಿಂದ ಪ್ರಸಿದ್ಧಿ ಹೊಂದಲೆಂದು ವೀಣೆ ನುಡಿಸಿ ಹರಸಿದ.

ಪ್ರತಿದಿನ ಪಂಚಕಜ್ಜಾಯ ತಿನ್ನಲು ಕೊಡುವುದಾಗಿ ಹೇಳಿ ಕೈಲಾಸದಿಂದ ಗಜಾನನನನ್ನು ನಾರದ ಅಲ್ಲಿಗೆ ಕರೆತಂದ. ಭಕ್ತರ ಪಾಲನೆಯಲ್ಲಿ ತನಗೆ ನೆರವಾಗಬೇಕೆಂದು ಗಣನಾಥ ಇಚ್ಛಿಸಲು ಹರಿಹರ ಬ್ರಹ್ಮಾದಿಗಳೂ ದೇವತೆಗಳೂ ಋಷಿಗಳೂ ಅವನೊಂದಿಗೆ ಬಂದರು. ಗಣಪತಿಯ ವ್ಯಾಸಕ್ಕೆಂದು ವಿಶ್ವಕರ್ಮ ಸುಂದರವಾದ ವಿಗ್ರಹವನ್ನು ಏಕಶಿಲೆಯಲ್ಲಿ ನಿರ್ಮಿಸಿದ. ಈ ಲಂಬೋದರಮೂರ್ತಿ ತನ್ನ ದ್ವಿಭುಜಗಳಲ್ಲಿ ಪದ್ಮ, ಮೋದಕಧಾರಿಯಾಗಿದೆ. ಲಕ್ಷ್ಮಿ, ಸರಸ್ವತಿ, ಪಾರ್ವತಿಯರನ್ನೂ ದೇವ ದೇವತೆಗಳನ್ನೂ ಒಳಗೊಂಡು ಬಂದ ಮಹಾಗಣಪತಿಯನ್ನು ಪೂರ್ವತ್ರೇತಾಯುಗದ ನೃಪವರ ಚಂಡವಿದ್ಯಾಶಕಾಬ್ದ 813ನೆಯ ವಿಭವ ಸಂವತ್ಸರದ ಉತ್ತರಾಯಣ, ಶಿಶಿರಋತು, ಮಾಘಮಾಸ, ಶುಕ್ಲಪಕ್ಷ, ದ್ವಿತೀಯ ಸೌಮ್ಯವಾಸರದ, ಉತ್ತರಾಭಾದ್ರನಕ್ಷತ್ರದ ಶುಭ ಮುಹೂರ್ತದಲ್ಲಿ ನಾರದಮಹರ್ಷಿ ಪ್ರತಿಷ್ಠಾಪಿಸಿದ. ಗಣಪತಿ ತನ್ನ ಸಮ್ಮುಖದಲ್ಲಿ ಗಣೇಶ ತೀರ್ಥವನ್ನು ಸ್ಥಾಪಿಸಿದ. ಹಾಗೆ ಪೂರ್ವ ದಿಕ್ಕಿನಲ್ಲಿ ವಿಷ್ಣು ತನ್ನ ಚಕ್ರದಿಂದ ಚಕ್ರತೀರ್ಥವನ್ನೂ ಶಿವ ತನ್ನ ಶೂಲದಿಂದ ಪಶ್ಚಿಮದಲ್ಲಿ ಶೂಲ ತೀರ್ಥವನ್ನೂ