ಪುಟ:Mysore-University-Encyclopaedia-Vol-2-Part-2.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇತಿಹಾಸ ಸಾಹಿತ್ಯ. ಕಾಣಲು ಸಾಧ್ಯವೆಂಬ ನಂಬಿಕೆಯಿಂದ ಬರೆದರು. ಮುಸ್ಲಿಮರ ಆದರ್ಶ ಇತಿಹಾಸವನ್ನು ಸ್ವರ್ಗದಲ್ಲಿಡಲಾಗಿದೆಯೆಂದೂ, ಇದಕ್ಕೆ ದೃಷ್ಟಾಂತಗಳನ್ನು ಜೋಡಿಸುವುದೇ ತಮ್ಮ ಮೂಲಭೂತ ಕರ್ತವ್ಯವೆಂದೂ ಈ ಕಾರ್ಯ ಮಾಡುವಲ್ಲಿ ತಮ್ಮ ಆಕರಗಳನ್ನು ಉದ್ಧರಿಸಬಹುದಲ್ಲದೆ ಅದನ್ನು ಪ್ರಶ್ನಿಸುವುದಾಗಲಿ ವ್ಯಾಖ್ಯಾನಿಸುವುದಾಗಲಿ ಉಚಿತವಲ್ಲವೆಂದೂ ಅದೊಂದು ಘಟನೆಗಳ ಸರಣಿಯೆಂಬಂತೆ, ಅನೇಕ ವೇಳೆ ಬಿಡಿಬಿಡಿಯಾಗಿ ಒಂದೊಂದಕ್ಕೆ ಸ್ಪಷ್ಟವಾಗಿ ಸಂಬಂಧವಿಲ್ಲವೆಂಬಂತೆ ಕಲ್ಪಿಸಿಕೊಂಡರು. ಇವಕ್ಕೆ ದೇವರೇ ಅರ್ಥ ಕೊಟ್ಟಿದ್ದಾನೆ. ಅವರ ಇತಿಹಾಸದೃಷ್ಟಿ ನಿಯತವೂ ಖಚಿತವೂ ಆದದ್ದು. ಕಾಲಾನುಕ್ರಮಣಿಕೆಯ ಪ್ರಜ್ಞೆಯಂತೂ ತುಂಬ ಕರಾರುವಾಕ್ಕಾದದ್ದು. ಭಾರತದ ಮುಸ್ಲಿಂ ಇತಿಹಾಸ ಲೇಖನದಲ್ಲಿ ಹಿಂದೂಗಳು ಮತ್ತು ಬೌದ್ಧರಲ್ಲಿ ಕಾಣುವಂಥ ಇತಿಹಾಸದ ಪರಿವರ್ತನೆಯ ದೃಷ್ಟಿಯನ್ನು ಮಾತ್ರವಲ್ಲದೆ ಅನೇಕ ಮುಖ್ಯ ಬರಹಗಾರರ ವೈಯಕ್ತಿಕ ಕಾಣಿಕೆಗಳನ್ನೂ ಕಾಣಬಹುದು.

ಭಾರತದ ಅನೇಕ ಮುಸ್ಲಿಂ ಚರಿತ್ರಕಾರರು ಆಸ್ಥಾನಿಕರಾಗಿದ್ದರು ಅಥವಾ ತಮ್ಮ ಅರಸನ ಆಜ್ಞಾನುಸಾರವಾಗಿಯೋ ಅವರ ಆಶ್ರಯವನ್ನು ಗಳಿಸಲೆಂದೋ ಲೇಖನಕಾರ್ಯದಲ್ಲಿ ತೊಡಗುತ್ತಿದ್ದ ಅಧಿಕಾರಿಗಳಾಗಿದ್ದರು. ಒಳ್ಳೆಯ ಮುಸ್ಲಿಮರಿಗೆ ತಕ್ಕದಾದ ರೀತಿಯಲ್ಲಿ ನಡೆಯಬೇಕೆಂಬುದು ಅವರ ಬೋಧನೆಯ ಉದ್ದೇಶ. ತಮ್ಮ ಅರಸರು ದೈವೀ ಉದ್ದೇಶದ ವಾಹಕರೆಂದೂ ಸಂಕೇತಗಳೆಂದೂ ಅವರು ಚಿತ್ರಿಸಿದರು. ಅರಸರ ಸತ್ಕಾರ್ಯಗಳನ್ನೂ ದುಷ್ಕಾರ್ಯಗಳನ್ನೂ ನಮೂದಿಸಿ ಒಳ್ಳೆಯದನ್ನು ಪ್ರೋತ್ಸಾಹಿಸಿ, ಕೆಟ್ಟದ್ದಕ್ಕೆ ಎಚ್ಚರಿಕೆ ನೀಡುವುದು ಅವರ ಉದ್ದೇಶ. ನಿಜಾóಂ ಉದ್ದೀನ್ ಅಹಮದ್, ಅಬ್ದುಲ್ ಖಾದಿರ್ ಬಡೋನಿ, ಫೆರಿಷ್ಟ ಮುಂತಾದವರು ಸಾಮಾನ್ಯ ಚರಿತ್ರೆಗಳನ್ನು ರಚಿಸಿದರು. ಕಾಲಕ್ರಮದಲ್ಲಿ ಪ್ರಾದೇಶಿಕ ಹಾಗೂ ಸ್ಥಳೀಯ ಚರಿತ್ರೆಗಳೂ ಕಾಣಿಸಿಕೊಂಡುವು. ಹೊರಗಿನ ಮುಸ್ಲಿಂ ಪ್ರದೇಶಗಳೊಂದಿಗೆ ಸಂಪರ್ಕ ಕಡಿದುಕೊಂಡ ಅಕ್ಬರನ ಉದ್ದೇಶಪೂರ್ವ ನೀತಿಯಿಂದ ಇದಕ್ಕೆ ಪ್ರೋತ್ಸಾಹ ದೊರಕಿತು. ಭಾರತದಲ್ಲಿ ಮೊಗಲ್ ಯುಗವನ್ನು ಅಧಿಕೃತ ಚರಿತ್ರೆಗಳ ಯುಗವೆನ್ನಬಹುದು. ಆಡಳಿತ, ಸೈನ್ಯ ಹಾಗೂ ಭೌಗೋಳಿಕ ಅಂಶಗಳ ಮೇಲೆ ಬೆಳಕು ಬೀರಲು ಮೊಗಲ್ ಅಧಿಕಾರಿಗಳು ಅಸಂಖ್ಯಾತ ದಾಖಲೆಗಳನ್ನು ಉಪಯೋಗಿಸಿಕೊಂಡರು. ಮೊಗಲ್ಚ ರಿತ್ರಕಾರರು ವ್ಯಕ್ತಿಗಳ ಬಗ್ಗೆ ಹೆಚ್ಚು ಹೆಚ್ಚು ಆಸಕ್ತಿ ತೋರಿಸಲಾರಂಭಿಸಿದರು. ಜೀವನಚರಿತ್ರೆಗಳೂ ಅಧಿಕೃತ ಪತ್ರವ್ಯವಹಾರಗಳ ಸಂಗ್ರಹಗಳೂ ಕಾಣಿಸಿಕೊಂಡುವು.ಇವು ಮೊಗಲ್ ಆಸ್ಥಾನಗಳಲ್ಲಿನ ಧಾರಾಳ ದೃಷ್ಟಿಯನ್ನು ವ್ಯಕ್ತಪಡಿಸುತ್ತವೆ. ಐನ್-ಎ-ಅಕ್ಬರಿಯಂಥ ಕೃತಿಗಳು ಆ ಕಾಲಕ್ಕೆ ಸಂಬಂಧಿಸಿದ ವಿಷಯದ ಗಣಿ.

ಭಾರತಕ್ಕೆ ಐರೋಪ್ಯರು ಬಂದಾಗ ಮೊದಲು ಅವರು ಚರಿತ್ರೆಯನ್ನು ಮತಧರ್ಮಶಾಸ್ತ್ರದ ಒಂದು ಮುಖವೆಂದೇ ಪರಿಗಣಿಸಿದ್ದರು. ಕಡಲ ಬಳಿಯ ಏಷ್ಯ ಪ್ರದೇಶದ ಆವಿಷ್ಕಾರ, ಪರಿಶೋಧನೆ ಹಾಗೂ ಆಕ್ರಮಣಗಳಿಂದ ಅವರ ಬರೆಹಗಳ ಸ್ವರೂಪವೇ ಪರಿವರ್ತನೆ ಹೊಂದಿತು. ಮತದ ಧರ್ಮಶಾಸ್ತ್ರದ ಅಂಶ ಹೋಗಿ ರಾಜಕೀಯ ಉದ್ದೇಶ ಪ್ರಬಲವಾಯಿತು. ಸ್ಥಳಗಳ ಮತ್ತು ಜನರ ವರ್ಣನೆಯಿಂದ ಅವರು ತೃಪ್ತರಾಗಲಿಲ್ಲ. ರಾಜಕೀಯವಾಗಿ ಮಹತ್ತ್ವವುಳ್ಳ ಕೃತಿಗಳನ್ನು ಪ್ರಕಟಿಸಿ ಸರ್ಕಾರದ ಧ್ಯೇಯಧೋರಣೆಗಳ ಮೇಲೆ ಪ್ರಭಾವ ಬೀರತೊಡಗಿದರು. ಇದು ಚಿಂತನೆಯ ಅನೇಕ ಪಂಥಗಳ ಉಗಮಕ್ಕೆ ಕಾರಣವಾಯಿತು. ಅವುಗಳಲ್ಲಿ ಜೇಮ್ಸ್ ಮಿಲ್ಲನದೊಂದು ಪಂಥ. ಆತ ಭಾರತಕ್ಕೆ ಒಂದು ಫಲವಾದಿ ಸಿದ್ಧಾಂತವನ್ನು ಅನ್ವಯಿಸಲು ಪ್ರಯತ್ನಿಸಿದ. ಜಾತೀಯತೆ, ಹಕ್ಕು, ಅವಿಚಾರಾಭಿಪ್ರಾಯ ಮುಂತಾದವುಗಳು ಭಾರತವನ್ನಾವರಿಸಿವೆ. ಪ್ರಬುದ್ಧ ನಿರಂಕುಶಾಡಳಿತದಿಂದ ಮಾತ್ರವೇ ಅದನ್ನು ಸುಧಾರಿಸಬಹುದು ಎಂಬುದು ಅವನ ದೃಷ್ಟಿ. ಕಾನೂನು ಮತ್ತು ಸರ್ಕಾರಗಳ ಪ್ರಾಮುಖ್ಯವನ್ನು ಕುರಿತು ಅವನು ಬರೆದ. ಸರ್ ವಿಲಿಯಂ ಜೋನ್ಸ್, ಕನಿಂಗ್‍ಹ್ಯಾಂ, ವಿಲ್ಕಿನ್ಸ್, ಮನ್ರೊ, ಮ್ಯಾಲ್ಕೋಂ ಮತ್ತು ಎಲ್ಫಿನ್‍ಸ್ಟೈನ್ ಎಂಬುವರದು ಇನ್ನೊಂದು ಪಂಥ. ಭಾರತೀಯ ಸಮಾಜದ ಬಗ್ಗೆ ಇವರ ಧೋರಣೆ ಸ್ವಲ್ಪ ವಾಸಿ. ಭಾರತೀಯ ಸಂಸ್ಥೆಗಳನ್ನು ಚೆನ್ನಾಗಿ ಅರಿತು ಅದರ ಸಾಮಾಜಿಕ ಹಾಗೂ ರಾಜಕೀಯ ಪರಿಸ್ಥಿತಿಗಳನ್ನು ಸಹಾನುಭೂತಿಯಿಂದ ಚಿತ್ರಿಸಲು ಇವರು ಯತ್ನಿಸಿದರು. ಷೋರ್, ಗ್ರಾಂಟ್ ಮುಂತಾದ ಕ್ರೈಸ್ತ ಭಕ್ತಿವಾದಿಗಳದು ಇನ್ನೊಂದು ಪಂಥ. ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ ದೈವನಿಯೋಜಿತ. ಇದು ಪತಿತ ಜನಾಂಗವೊಂದರ ಉದ್ಧಾರಕ್ಕಾಗಿ ಮೊದಲೇ ನಿಯುಕ್ತವಾದ ಯೋಜನೆ ಎಂಬುದನ್ನು ಇವರು ಪಾದ್ರಿಗಳ ನೆರವಿನಿಂದ ವಾದಿಸಿದರು. ಕ್ರೈಸ್ತಧರ್ಮಪ್ರಸಾರದಿಂದಲೂ ಬೋಧನೆಯಿಂದಲೂ ತಮ್ಮ ಉದ್ದೇಶ ಸಾಧಿಸತೊಡಗಿದರು. ಆಲ್ಫ್ರೆಡ್ ಲೈಯಾಲ್, ಹೆನ್ರಿ ಮೇನ್, ವಿಲಿಯಂ ಹಂಟರ್ ಮುಂತಾದ ವಿದ್ವಾಂಸರದು ನಾಲ್ಕನೆಯ ಪಂಥ, ಪಾಶ್ಚಾತ್ಯ ಹಾಗೂ ಪ್ರಾಚ್ಯ ಶಕ್ತಿಗಳು ಪರಸ್ಪರ ಸಂಧಿಸಿದ್ದರ ಫಲವೇ ಬ್ರಿಟಿಷ್ ಆಡಳಿತವೆಂದು ಇವರ ಭಾವನೆ. ಭಾರತೀಯ ಆಡಳಿತ ಮತ್ತು ಸಮಾಜದ ವಿಷಯದಲ್ಲಿ ಇವರಿಗೆ ತೀವ್ರ ಆಸಕ್ತಿ. ಪಿ.ಇ. ರಾಬಟ್ರ್ಸ್, ಟಿ.ಜಿ.ಪಿ. ಸ್ಪಿಯರ್, ಸಿ.ಎಚ್. ಫಿಲಿಪ್ಸ್, ಹಾಲ್ಡನ್ ಫರ್ಬರ್ ಮತ್ತು ಬಾಲ್ ಹ್ಯಾಚೆಟ್ ಮುಂತಾದ ಆಧುನಿಕ ವಿದ್ವಾಂಸರದು ಐದನೆಯ ಪಂಥ. ಆಧುನಿಕ ವಿಮರ್ಶಜ್ಞಾನದ ನೆರವಿನಿಂದ ಇತಿಹಾಸದ ರಚನೆ ಮಾಡಲು ಇವರು ಯತ್ನಿಸಿದರು. ಈ ದೃಷ್ಟಿಗಳು ಆಧುನಿಕ ಭಾರತೀಯ ವಿದ್ವಾಂಸರನ್ನು ಬೆರಗುಗೊಳಿಸುತ್ತವೆ. ಏಕೆಂದರೆ ಮೊದಮೊದಲು ಅವರಿಗೆ ಚರಿತ್ರೆಯ ಸಂಪ್ರದಾಯ ಯಾವುದೂ ಇಲ್ಲದಿದ್ದ ಫಲವಾಗಿ ಬ್ರಿಟಿಷರ ಹೆಜ್ಜೆಯನ್ನೇ ಅನುಸರಿಸಿ ನಡೆದರು. ಆದರೆ ಈಸ್ಟ್ ಇಂಡಿಯ ಕಂಪನಿಯ ಅಥವಾ ಅದರ ಉತ್ತರಾಧಿಕಾರಿಯಾದ ಬ್ರಿಟಿಷ್ ಚಕ್ರಾಧಿಪತ್ಯದ ಚಟುವಟಿಕೆಗಳೇ ಬ್ರಿಟಿಷರ ಕಾಲದ ಭಾರತದ ನಿಜವಾದ ಚರಿತ್ರೆಯಲ್ಲವೆಂಬುದನ್ನು ಅವರು ಬಲು ಬೇಗ ಕಂಡುಕೊಂಡರು. ಪರಿಸ್ಥಿತಿಯ ಕರೆಗೆ ಓಗೊಟ್ಟು, ಸುಸಂಘಟಿತರಾಗಿ ಆಡಳಿತದಲ್ಲಿ ಸಮಪಾಲು ಬೇಕೆಂದು ಕೇಳಿ, ತಲೆತಲಾಂತರದಿಂದ ಬಂದ ದುಷ್ಟ ಪದ್ಧತಿಗಳನ್ನೆಲ್ಲ ತೊರೆದು, ಬ್ರಿಟಿಷ್ ಸಾಮ್ರಾಜ್ಯವಾದಿ ಗಳು ಯುದ್ಧದಲ್ಲಿ ವಿಜಯಿಗಳಾಗಿದ್ದಾಗಲೇ ಸೋಲೊಪ್ಪಿ ಭಾರತೀಯರ ಕೈಗೆ ಅಧಿಕಾರ ಕೊಡುವಂತೆ ಮಾಡುವ ಕಲೆಯನ್ನು ಕಲಿತ ಭಾರತೀಯರ ಚಟುವಟಿಕೆಗಳೇ ಚರಿತ್ರೆಯೆಂಬು ದನ್ನು ಇವರು ಅರಿತರು. ಭಾರತೀಯರ ಸ್ವಪ್ರಯತ್ನದಿಂದಲೇ ಸಂಭವಿಸುತ್ತಿರುವ ಭಾರತೀಯ ಸಮಾಜದ ಪರಿವರ್ತನೆಯೇ ಭಾರತದ ಇತಿಹಾಸದ ಸತ್ತ್ವವೆಂಬ ಈ ದೃಷ್ಟಿಯ ಪ್ರತಿಪಾದಕರೆಂದರೆ ಸರ್ದಾರ್ ಕೆ.ಎಂ. ಪಣಿಕ್ಕರ್ ಮುಂತಾದ ಈಚಿನ ರಾಷ್ಟ್ರೀಯ ಇತಿಹಾಸಕಾರರು. ಆದರೆ ಅದಕ್ಕೆ ಮೊದಲು ಭಾರತೀಯ ವಿದ್ವಾಂಸರು ಈ ಸಮಸ್ಯೆಗೆ ಬೇರೆ ರೀತಿಯಲ್ಲಿ ಪ್ರತಿಕ್ರಿಯೆ ತೋರಿಸಿದರು. ನಾರಾಯಣ ಬೋಸ್, ಚಂದ್ರನಾಥ ಬಸು, ಬಂಕಿಮ ಚಂದ್ರನಾಥ ಚಟರ್ಜಿ, ಎ.ಸಿ. ದಾಸ್, ಕೆ. ಪಿ. ಜಯಸ್ವಾಲ್, ಬಾಲಗಂಗಾಧರ ತಿಲಕ್, ವಿ.ಡಿ. ಸಾವರಕರ್ ಮತ್ತಿತರರು ಪಾಶ್ಚಾತ್ಯ ಸಂಸ್ಕøತಿಗಿಂತ ಹಿಂದೂ ಸಂಸ್ಕತಿ ಹಿರಿದಾದದ್ದೆಂದು ವಾದಿಸಿದರು. ಇವರದೊಂದು ವಿಚಾರಶೀಲ ಪಂಥ, ರಾಜೇಂದ್ರಲಾಲ್ಮಿ ತ್ರ, ಆರ್.ಸಿ. ದತ್ ಮತ್ತು ಆರ್.ಜಿ. ಭಂಡಾರಕರ್ ಇವರು ರಾಷ್ಟ್ರೀಯ ಭಾವನೆಯಲ್ಲಿ ತನ್ಮಯರಾಗದೆ ಘಟನೆಗಳನ್ನು ವಸ್ತುನಿಷ್ಠೆಯಿಂದ ನೋಡಿ ಭಾರತೀಯ ಇತಿಹಾಸಕ್ಕೆ ಐರೋಪ್ಯರಿಂದ ಸಂಭವಿಸಿದ ನಿರೂಪಣೆಗಳನ್ನು ಸರಿಪಡಿಸಲೆತ್ನಿಸಿದರು. ಮೂರನೆಯ ಪಂಥಕ್ಕೆ ಸೇರಿದವರು ಮೇಜರ್ ಡಿ. ಬಸು, ಎಸ್. ಮಜುಂದಾರ್, ಸಿ.ವೈ. ಚಿಂತಾಮಣಿ ಮತ್ತು ಸತೀಂದ್ರನಾಥ ಬ್ಯಾನರ್ಜಿ. ಬ್ರಿಟಿಷರು ಭಾರತದಲ್ಲಿ ಮಾಡಿದ ಆರ್ಥಿಕ ಸುಲಿಗೆಯನ್ನಿವರು ಬಯಲಿಗೆಳೆದರು. ಬ್ರಿಟಿಷರು ಆಳ್ವಿಕೆಯನ್ನು ಆದಷ್ಟು ಬೇಗ ಕೊನೆಗೊಳಿಸುವುದು ಸಾಧ್ಯವಾಗು ವಂತೆ ಸ್ವಾತಂತ್ರ್ಯ ಹೋರಾಟಗಾರರಿಗೆ ಶಕ್ತಿನೀಡುವುದು ಇವರ ಉದ್ದೇಶ. ಹಿರೇನ್ಮು ಖರ್ಜಿ, ಆರ್. ಪಾಮ್ಮೆದತ್, ಕೋಸಾಂಬಿ ಮುಂತಾದವರದು ನಾಲ್ಕನೆಯ ಪಂಥ. ಮಾಕ್ರ್ಸನ ಚಿಂತನೆಯಿಂದ ಪ್ರಭಾವಿತರಾಗಿದ್ದ ಇವರು ಆ ವಿಶಿಷ್ಟ ನಿಲುವಿನಿಂದ ವಿಶ್ಲೇಷಣೆ ಮಾಡಲು ಯತ್ನಿಸಿದರು. ಚಂದ್ರನಾಥ ಸರ್ಕಾರ್, ಎಸ್.ಎನ್.ಸೇನ್, ಷಫತ್ ಅಹಮದ್‍ಖಾನ್, ಡಾ. ಎಸ್. ಕೃಷ್ಣಸ್ವಾಮಯ್ಯಂಗಾರ್, ಶ್ರೀನಿವಾಸಾಚಾರಿಯರ್ ಮುಂತಾದವರು ಯಾವ ಪಂಥದಿಂದಲೂ ಆಕರ್ಷಿತರಾಗಲಿಲ್ಲ. ಭೂತಕಾಲವನ್ನು ವಾಸ್ತವಿಕವಾಗಿ ಪುನಾರಚಿಸುವುದು ಇವರ ಪ್ರಯತ್ನ.

ಕಳೆದ ಅರ್ಧ ಶತಮಾನದಲ್ಲಿ ಅನೇಕ ಚರಿತ್ರಕಾರರು ಭಾರತದ ಚರಿತ್ರೆಯನ್ನು ತಮ್ಮ ತಾಯಿನುಡಿಗಳಲ್ಲೂ ಇಂಗ್ಲಿಷಿನಲ್ಲೂ ಬರೆದಿದ್ದಾರೆ. ಪ್ರೂಫೆಸರ್ ಆರ್.ಸಿ. ಮಜುಂದಾರ್, ಎಸ್.ಎನ್.ಸೇನ್ ಮುಂತಾದ ಸುಪ್ರಸಿದ್ಧ ವಿದ್ವಾಂಸರು ಎರಡು ಭಾಷೆಗಳಲ್ಲೂ ಧಾರಾಳವಾಗಿ ಬರೆದಿದ್ದಾರೆ. ಅಥವಾ ಮೊದಲು ಇಂಗ್ಲಿಷಿನಲ್ಲಿ ಬರೆದು ಆಮೇಲೆ ಅವು ತಮ್ಮ ತಾಯಿನುಡಿಗೆ ಅನುವಾದವಾಗುವಂತೆ ಮಾಡಿದ್ದಾರೆ. ಆಧುನಿಕವೂ ಸ್ವೀಕೃತವೂ ಆದ ಚಾರಿತ್ರಿಕ ಭಾವನೆಗಳನ್ನೂ ತಂತ್ರಗಳನ್ನೂ ಅವರು ಬಳಸಿದ್ದಾರೆ. ಆದ್ದರಿಂದ ಅವರ ಇಂಗ್ಲಿಷ್ ಕೃತಿಗಳಿಗೂ ಮಾತೃಭಾಷೆಯ ಕೃತಿಗಳಿಗೂ ಹೆಚ್ಚಿನ ವ್ಯತ್ಯಾಸ ಇಲ್ಲ.

ದೇಶೀಯ ಭಾಷೆಗಳಲ್ಲಿ ಬಂದಿರುವ ಚಾರಿತ್ರಿಕ ಬರೆವಣಿಗೆಗಳಲ್ಲಿ, ನಾವು ಇನ್ನೂ ರಾಜಕೀಯ ಹಾಗೂ ಚಾರಿತ್ರಿಕ ಪ್ರಜ್ಞೆಯುಳ್ಳ ವಿವಿಧ ಪಂಥಗಳ ಬೆಳವಣಿಗೆಯನ್ನು ಕಾಣುತ್ತಿಲ್ಲ. ದೇಶಭಾಷೆಗಳಲ್ಲಿ ಮರಾಠಿಯೊಂದೇ 17ನೆಯ ಶತಮಾನದ ಬಖೈರು ದಾಖಲೆಗಳನ್ನು ಮುಂದುವರಿಸಿ ತಕ್ಕಮಟ್ಟಿಗೆ ಬಲವಾದ ಒಂದು ಸಂಪ್ರದಾಯ ಹೊಂದಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದಮೇಲೆ ಜನರಿಗೆ ತಾಯ್ನುಡಿಗಳ ಸಾಂಸ್ಕøತಿಕ ಮಹತ್ವದ ಅರಿವು ಬಂದಿದೆ. ಆಗಲೇ ಸಾಧಿತವಾಗಿದ್ದ ಪಕ್ವತೆಗೆ ದೆಹಲಿಯ ಸಾಹಿತ್ಯ ಅಕಾಡೆಮಿ ಮುಂತಾದ ಸಂಸ್ಥೆಗಳು ಪ್ರಜ್ಞಾಪೂರ್ಣ ರಾಷ್ಟ್ರೀಯ ನೀತಿಯಿಂದ ಬೆಂಬಲ ದೊರಕುತ್ತಿದೆ. ಅದು ಈ ಗತಿಯನ್ನು ಹೆಚ್ಚಿಸಿ ಮಾತೃಭಾಷೆಗಳಲ್ಲಿ ಚಾರಿತ್ರಿಕ ಬರೆವಣಿಗೆಗಳ ಬೌದ್ಧಿಕಾಂಶ ವನ್ನು ಹೆಚ್ಚು ಹೆಚ್ಚು ನಿಶ್ಚಿತಗೊಳಿಸುತ್ತಿದೆ. ಭಾರತದ ಕಿರಿಯ ಇತಿಹಾಸಕಾರರು ಪ್ರಾದೇಶಿಕ ಭಾಷೆಗಳಲ್ಲಿಯೇ ತಮ್ಮ ಕೃತಿಗಳನ್ನು ಬರೆದು ಪ್ರಕಟಿಸಲು ಹೆಚ್ಚು ಹೆಚ್ಚಾಗಿ ಬಯಸುತ್ತಿದ್ದಾರೆ.

ಇತಿಹಾಸ ಸಾಹಿತ್ಯ:ಪ್ರ.ಶ.ಪೂ. 5ನೆಯ ಶತಮಾನದಲ್ಲಿದ್ದ ಗ್ರೀಕರಿಂದಲೇ ನಿಜವಾದ ಇತಿಹಾಸದ ಚರಿತ್ರೆ ಆರಂಭವಾಗುತ್ತದೆ. ಇತಿಹಾಸಕ್ಕೆ ಇಂಗ್ಲಿಷಿನಲ್ಲಿ ಸಮಾನಪದವಾದ ಹಿಸ್ಟರಿ ಎಂಬುದು ಹಿಸ್ಟೊರಿಯ ಎಂಬ ಗ್ರೀಕ್ ಪದದಿಂದ ಬಂದದ್ದು. ಪೊರೆಯನ್ನು ಅಥವಾ ಬಲೆಯನ್ನು ನೇಯುವುದು, ಅರಳಿಸುವುದು ಎಂದು ಅದರ ಅರ್ಥ. ಗ್ರೀಕರೇ ಮೊಟ್ಟಮೊದಲಿಗೆ ಗತಕಾಲದ ಕಡೆಗೆ ತರ್ಕಬದ್ಧವಾಗಿ ವಿಚಾರ ಹರಿಸಿದವರು. ಅವರು ಕಾರ್ಯಕಾರಣ ಸಂಬಂಧಗಳನ್ನು ಪರಿಶೀಲಿಸಿ ಅವುಗಳ ದೃಷ್ಟಿಯಲ್ಲಿ ಗತಕಾಲದ ಘಟನೆಗಳನ್ನು ಸುಸಂಬದ್ಧವಾಗಿ ನಿರೂಪಿಸಲು ಯತ್ನಿಸಿದರು. ಹೀರಡಟಸ್ ತನ್ನ ಕೃತಿಯನ್ನು ಒಂದು ಇತಿಹಾಸವೆಂದು ಕರೆದ. ಇತಿಹಾಸಕಾರ ತನಗೆ ತೋಚಿದ ರೀತಿಯಲ್ಲಿ ವಸ್ತುವನ್ನು ಮಾರ್ಪಡಿಸಬಾರದು ಎಂಬುದು ಅವನ ಮತ.