ಪುಟ:Mysore-University-Encyclopaedia-Vol-2-Part-3.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಗಿ ಉತ್ಪಾದಕಗಳು

ಮೇಲೆ ಎತ್ತರದಲ್ಲಿರುವ ತೊಲೆಗಳಿಂದ ಸರಳುಗಳ ಮೂಲಕ ಇಳಿಬಿಟ್ಟು ಕೆಳಭಾಗದಲ್ಲಿ ಅದರ ಸುತ್ತಲೂ ಇಟ್ಟಿಗೆಯ ಕಟ್ಟಡವನ್ನು ರಚಿಸಿರುತ್ತಾರೆ. ಪಿಪಾಯಿಗಳೊಳಗೆ ನೀರು ಅತಿ ಎತ್ತರದಲ್ಲಿರುವ ನಾಳಕ್ಕಿಂತ 3ಹಿ-4" ಮೇಲ್ಮಟ್ಟದಲ್ಲಿರುತ್ತದೆ.

ಸ್ವಯಂಚಲನ ಆವಿಗೆ(ಲೋಕೊಮೋಟಿವ್ ಬಾಯ್ಲರ್): ಇದು ನೇರ ಧೂಮನಾಳಿ ಮಾದರಿಯ ಒಳಗೆ ಉರಿ ಪೆಟ್ಟಿಗೆಯುಳ್ಳ ಆವಿಗೆ, ಹೆಚ್ಚಿನ ಉಷ್ಣಪ್ರವಾಹ ಕ್ಷೇತ್ರವೂ ಕಲ್ಲಿದ್ದಲನ್ನು ಅತ್ಯಂತ ರಭಸದಿಂದ ಉರಿಸಬಲ್ಲ ಕುಲುಮೆಯೂ ಇಲ್ಲಿ ಆವಶ್ಯಕ ಅಂಶಗಳು. ಅನೇಕ ನಾಳಿಗಳನ್ನು ಕ್ರಮರಹಿತ ರೀತಿಯಲ್ಲೋ ಎಂಬಂತೆ ಇದರಲ್ಲಿ ಜೋಡಿಸಿದೆ. 130 ವರ್ಷಗಳಿಗಿಂತಲೂ ಹಳೆಯದಾದ ಸ್ಟೀಫನ್ ಸನ್ನನ ಕಲ್ಪನೆಯಾದ ಈ ಆವಿಗೆ ಒಂದು ದಕ್ಷ ಸಾಧನೆ.

ಸಾಮಾನ್ಯ ಮಾದರಿಯೊಂದರ ರೂಪ ವಿವರ ಹೀಗಿದೆ: ಉಕ್ಕಿನ ತಗಡುಗಳಿಂದ ರಚಿತವಾದ ಕೊಳವೆಗಳನ್ನು ಜೋಡಿಸಿ ಮಾಡಿದ ಸುಮಾರು 5" ವ್ಯಾಸದ ದೊಡ್ಡ ಪಿಪಾಯಿ, ಇದರೊಳಗೆ ಮುಂಭಾಗದಲ್ಲಿ ಹೊಗೆ ಪೆಟ್ಟಿಗೆಯನ್ನೂ ಹಿಂಭಾಗದಲ್ಲಿ ಉರಿ ಪೆಟ್ಟಿಗೆಯನ್ನೂ ಬೇರ್ಪಡಿಸುವಂತೆ ಎರಡು ನಾಳ ಫಲಕಗಳು, ಇವುಗಳಲ್ಲಿ ನೂರಾರು ನಾಳ ರಂಧ್ರಗಳು, ಈ ರಂಧ್ರಗಳ ಮುಖಾಂತರ ತೂರಿಸಿ ಎರಡೂ ಅಂಚುಗಳಲ್ಲಿ ಫಲಕದೊಡನೆ ಬಿಗಿದ ಅಷ್ಟೇ ಸಂಖ್ಯೆಯ ಮತ್ತು 1 1/4"-3 1/2" ವ್ಯಾಸದ 12"-19" ಉದ್ದದ ಸಣ್ಣ ಕೊಳವೆಗಳು. ಇವು ಸಂಖ್ಯೆಯಲ್ಲಿ 120-500ರ ವರೆಗೂ ಇರಬಹುದು. ಉರಿ ಪೆಟ್ಟಿಗೆಗಳನ್ನು ಒಳಗೊಂಡಿರುವ ಆವಿಗೆಯ ಹಿಂಭಾಗವನ್ನು ಒಂದು ಸುತ್ತುಫಲಕ. ತುದಿಫಲಕ ಹಾಗೂ ಕಂ‌ಟಫಲಕಗಳಿಂದ ಮಾಡಿದೆ. ಇದನ್ನು ಆವಿಗೆಯ ಉಳಿದ ಪಿಪಾಯಿ ಭಾಗಕ್ಕೆ ಬೆಸೆಯಲಾಗಿದೆ. ಉರಿಪೆಟ್ಟಿಗೆಯನ್ನು ಮೊದಲು ಸಾಮಾನ್ಯವಾಗಿ ತಾಮ್ರದಿಂದ ರಚಿಸುತ್ತಿದ್ದರು. ಈಗ ಉಕ್ಕಿನಿಂದ ಪ್ರತ್ಯೇಕವಾಗಿ ತಯಾರಿಸಲಾಗುತ್ತಿದೆ. ಇದು ಆಯಾಕಾರದ ಅಷ್ಟು ಎತ್ತರವಲ್ಲದ ಒಂದು ಪೆಟ್ಟಿಗೆ, ಇದರ ನೆತ್ತಿ, ಸುತ್ತು ಹಾಗೂ ಫಲಕಗಳನ್ನು ಸುತ್ತುವರಿದಿರುವ ಆವಿಗೆಯ ಫಲಕಗಳೊಡನೆ ಅನೇಕ ಆಧಾರಬಂಧನಗಳಿಂದ ಬಿಗಿಪಡಿಸಿರುತ್ತಾರೆ. ಒಳಗಿನ ಫಲಕಗಳಿಗೂ ಹೊರಗಿನದಕ್ಕೂ ನಡುವಿನ ಜಾಗ ನೀರಿನಿಂದ ತುಂಬಿದೆ. ಕೆಳಭಾಗದಲ್ಲಿ ಕೆಸರು ಬಳೆ ಅಥವಾ ಪಾಯದ ಬಳೆಯೆಂದು ಕರೆಯುವ ಉಕ್ಕಿನ ಬಳೆಯೊಂದು ಮುಚ್ಚಿದೆ. ಇದರ ಮೇಲೆ ಒಂದು ರಂಧ್ರವನ್ನೂ ನೆತ್ತಿ ಫಲಕದ ಸಮಕ್ಕೆ ಇನ್ನೊಂದು ರಂಧ್ರವನ್ನೂ ಹೊರಗಿನ ಫಲಕಗಳಲ್ಲಿ ಮಾಡಿ ಮುಚ್ಚಿರುತ್ತಾರೆ. ಒಳಗೆ ಚೊಕ್ಕಟಗೊಳಿಸಬೇಕಾದಾಗ ಇವುಗಳ ಉಪಯೋಗವಿದೆ. ಉರಿ ಪೆಟ್ಟಿಗೆಯ ಮುಂಭಾಗದ ಹಿಂದಿನ ಫಲಕ ಹಾಗೂ ಆವಿಗೆಯ ತುದಿ ಫಲಕಗಳೆರಡರಲ್ಲೂ ಸೇರಿಸಿದಂತೆ ಮಾಡಿರುವ ದುಂಡು ರಂಧ್ರವೇ ಕುಲುಮೆಯ ಬಾಗಿಲು. ಉರಿ ಪೆಟ್ಟಿಗೆಯ ಒಳಗೆ ಕಬ್ಬಿಣದ ಪಟ್ಟಿಗಳಿಂದ ಮಾಡಿದ ಕುಲುಮೆಯೂ ಅದಕ್ಕೆ ಸ್ವಲ್ಪ ಮೇಲೆ ಕಾವಿಟ್ಟಿಗೆಯೂ ಕಮಾನೂ ಕುಲುಮೆಯ ಕೆಳಗೆ ಬೇಕಾದಾಗ ತೆಗೆಯಲಾಗುವಂತೆ ಕೀಲು ಬಾಗಿಲುಗಳಿರುವ ಬೂದಿ ಸಂಗ್ರಾಹಿಯೂ ಇವೆ.

ಸ್ಕಾಚ್ ನೌಕಾ ಆವಿಗೆ(ಸ್ಕಾಚ್ ಮರೀನ್ ಬಾಯ್ಲರ್): ಇದು ವ್ಯಾಪಾರೀ ನೌಕೆಗಳಲ್ಲಿ ಸಾಧಾರಣವಾಗಿ ಯಾವಾಗಲೂ ಬಳಕೆಯಲ್ಲಿರುವ ಆವಿಗೆ. ಆಕ್ರಮಿಸಿಕೊಳ್ಳುವ ಜಾಗಕ್ಕೆ ಹೋಲಿಸಿದಾಗ ಉಷ್ಣಪ್ರವಾಹ, ವಿಸ್ತಾರ ಹೆಚ್ಚಾಗಿರುವುದೂ ಯಾವ ಬಗೆಯ ಇಟ್ಟಿಗೆಯ ಆವರಣವೂ ಬೇಕಿಲ್ಲದೆ ಸ್ವಯಂಪೂರ್ಣವಾಗಿರುವುದೂ ಇದರ ಗುಣವಿಶೇಷಗಳು.

ಲಂಬಸನಾಳಿ ಆವಿಗೆಗಳು(ವರ್ಟಿಕಲ್ ಟ್ಯೂಬ್ಯುಲರ್ ಬಾಯ್ಲರ್ಸ್): ಈ ಬಗೆಯ ಆವಿಗೆಗಳು ತಮ್ಮ ಅಶ್ವಸಾಮರ್ಥ್ಯದ ಪ್ರಮಾನಕ್ಕೆ ವ್ಯಾಪಿಸುವ ಜಾಗ ಬಲುಕಡಿಮೆ. ಕೇವಲ 3ಅಶ್ವ ಸಾಮರ್ಥ್ಯದ ಹೊರಗೆಲಸಕ್ಕೆ ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುವ ಅನುಕೂಲವಾದ ಸಣ್ಣ ಮಾದರಿಗಳಿರುವಂತೆಯೇ 500ಅಶ್ವ ಸಾಮರ್ಥ್ಯವುಳ್ಳವು ಇರುತ್ತದೆ. ಅಧಿಕೋಷ್ಣದ ಉಗಿಯನ್ನು ಪಡೆಯುವ ಸೌಕರ್ಯವಿದ್ದರೂ ಸಾಮಾನ್ಯವಾಗಿ ಇವು ಅಲ್ಪ ದಕ್ಷತೆಯವು. ಮ್ಯಾನಿಂಗ್ ಮಾದರಿಯ ಇಂಥ ಒಂದು ಆವಿಗೆಯ ಚಿತ್ರ ಕೊಟ್ಟಿದೆ. ಮೂರು ವರಸೆಯ ಲಂಬವಾದ ಪಿಪಾಯಿಯಲ್ಲಿ ಕೆಳಗಿನದರ ಒಳಗೆ ಉರಿಪೆಟ್ಟಿಗೆ ಅಡಕವಾಗಿದೆ. ಮೇಲಿನ ವರಸೆಗೆ ಒಂದು ಹೊಗೆಪೆಟ್ಟಿಗೆಯನ್ನು ಸೇರಿಸಿ ಅಲ್ಲಿಂದ ಹೊಗೆ ಕೊಳವೆಗೆ ಮಾರ್ಗವನ್ನು ರಚಿಸಿದೆ. ಉರಿಪೆಟ್ಟಿಗೆಯ ಸುತ್ತಿನ ದುಂಡು ಫಲಕವನ್ನು ಅದರ ಹೊರಗಿನ ಪಿಪಾಯಿಗಳ ಫಲಕಕ್ಕೆ ಆಧಾರ ಬಂಧನಗಳಿಂದ ಬಿಗಿದಿರುತ್ತದೆ. ಇಲ್ಲಿ ಮೇಲಿನವಕ್ಕಿಂತ ಕೆಳಗಿನ ವರಸೆ ಕೊಂಚ ದೊಡ್ಡದಾಗಿದ್ದರೂ ಸರಳತೆಗಾಗಿ ಸಮವ್ಯಾಸದ ಪಿಪಾಯಿಯನ್ನೂ ಉಪಯೋಗಿಸುವುದುಂಟು. ಉರಿ ಪೆಟ್ಟಿಗೆಯ ಸುತ್ತ ಇರುವ ನೀರುಚಾಚಿನ ಕೆಳಭಾಗವನ್ನು ಪಾಯದ ಬಳೆಯೊಂದು ಮುಚ್ಚಿರುತ್ತದೆ. ಇದರ ಮೇಲೆ ಮುಚ್ಚಿರುವ ಒಂದು ಕೆಸರುಗಂಡಿ ಇದೆ. ಹೊಗೆ ಪೆಟ್ಟಿಗೆಯ ತಳ ಫಲಕಕ್ಕೂ ಉರಿಪೆಟ್ಟಿಗೆಯ ನತ್ತಿ ಫಲಕಕ್ಕೂ ನಡುವೆ ಹಲವಾರು ಧೂಮನಾಳಗಳಿದ್ದು ಇವೇ ಅವೆರಡನ್ನೂ ಬಿಗಿದಿರುತ್ತವೆ. ಉರಿ ಪೆಟ್ಟಿಗೆಯೊಳಗಣ ಕುಲುಮೆಯಿಂದ ಹೊರಟ ಅನಿಲಗಳು ಈ ಕೊಳವೆಗಳ ಮುಖಾಂತರ ಹಾದು ಹೊಗೆ ಪೆಟ್ಟಿಗೆಯನ್ನು ತಲುಪುತ್ತದೆ. ಪಿಪಾಯಿಯ ಮುಕ್ಕಾಲು ಮಟ್ಟದವರೆಗೂ ನೀರಿದ್ದು, ನಾಳಗಳ ಅಲ್ಲಿಯವರೆಗಿನ ಮೇಲ್ಮೈ ವಿಸ್ತಾರ ಆವಿ-ಉತ್ಪಾದಕವಾಗಿಯೂ ಅದರಿಂದ ಮೇಲಿನದು ಅಧಿಕೋಷ್ಣಕವಾಗಿಯೂ ಕಾರ್ಯ ನಿರ್ವಹಿಸುತ್ತವೆ. ವಾಡಿಕೆಯ ಆವರಣವೇನೂ ಈ ಬಗೆಯ ಆವಿಗೆಗಳಿಗೆ ಬೇಕಿಲ್ಲ: ಸಿಮೆಂಟ್ ಕಾಂಕ್ರೀಟ್ ಪಾಯದ ಮೇಲೆ ಎರಕದ ಕಬ್ಬಿಣದ ಪೀಠವೊಂದನ್ನಿಟ್ಟು ಅದರ ಮೇಲೆ ಇದನ್ನು ನಿಲ್ಲಿಸಿರುತ್ತಾರೆ. ಆ ಪೀಠವೇ ಕುಲುಮೆಗೆ ಆಧಾರವನ್ನೂ ಕೆಳಗೆ ಬೂದಿ ಗುಂಡಿಯನ್ನೂ ಒದಗಿಸುತ್ತದೆ.

ಲಂಬಸನಾಳಿ ಆವಿಗೆಗಳಲ್ಲಿ ಕಾಕ್ರೇನ್ ಆವಿಗೆ ಎಂಬುದೂ ಹೆಚ್ಚು ಬಳಕೆಯಲ್ಲಿದೆ. ಇದರಲ್ಲಿ ಧೂಮನಾಳಗಳು ಲಂಬವಾಗಿರದೆ ಮಟ್ಟವಾಗಿದ್ದು, ದಹನಕೋಶಕ್ಕೂ ಹೊಗೆಪೆಟ್ಟಿಗೆಗೂ ಸಂಪರ್ಕವೇರ್ಪಡಿಸಿವೆ. ಈ ವಿವರದಲ್ಲಿ ಸ್ಕಾಚ್ ನೌಕಾ ಆವಿಗೆಯ ರಚನೆಯನ್ನು ಇದು ಹೋಲುತ್ತದೆ.

ಏಕ ಕೊಪ್ಪರಿಗೆಯ ನೇರನಾಳದ ಆವಿಗೆಗಳು (ಸಿಂಗಲ್ ಡ್ರಂ ಸ್ಟ್ರೇಟ್ ಟ್ಯೂಬ್ ಬಾಯ್ಲರ್ಸ್): ಇದುವರೆಗೆ ಆವಿಗೆಗಳು ಬೆಳೆದುಬಂದ ಬಗೆ ಹೀಗೆದೆ. ಉಗಿಸಂಮರ್ದ, ಉಷ್ಣತೆ ಏರಿ ಯಾಂತ್ರಿಕ ಬಲೋತ್ಪಾದನೆ ವೃದ್ಧಿಯಾಯಿತು: ಇದರೊಂದಿಗೆ ಕಡಾಯಿ, ನಳಿಗೆ ಮುಂತಾದುವು ಸರಿಯಾಗಿ ಬೆಳೆಯದೆ ತಪ್ಪುಗಾಲಿಕ್ಕಿ ದಾಗ ಅಪಾಯ, ಅಸಾಮರ್ಥ್ಯ್ ತಲೆದೋರಿದುವು. ಈ ನ್ಯೂನತೆಗಳನ್ನು ಮನಗಂಡ ವಿಲ್ಕಾಕಾಕ್ಸ ಎಂಬಾತ 1850 ರಲ್ಲಿ ಬಳಕೆಗೆ ತಂದು ಮುಂದೆ ಬ್ಯಾಬ್ಕಾಕ್ ಎಂಬಾತನೊಡನೆ ಸಹಕರಿಸಿ ನೂತನ ಪರಿಷ್ಕೃತಿ ಸಾಧನವೇ ಏಕಕೊಪ್ಪರಿಗೆಯ ನೇರನಾಳದ ಆವಿಗೆ.

ಬಹುಕೊಪ್ಪರೆಗೆಯ ಬಾಗು ನಾಳದ ಆವಿಗೆಗಳು(ಮಲ್ಟಿಪಲ್ ಡ್ರಮ್ ಬೆಂಟ್ ಟ್ಯೂಬ್ ಬಾಯ್ಲರ್ಸ್): ನೇರನಾಳದ ಆವಿಗೆಗಳನ್ನು ಸುಲಭವಾಗಿ ಪರೀಕ್ಷಿಸುವ ಮತ್ತು ಚೊಕ್ಕಟಗೊಳಿಸುವ ಸೌಲಭ್ಯವೇನೋ ಇದೆ. ಆದರೆ ಇದೇ ಕಾರಣದಿಂದ ಆವಿಗಳಲ್ಲಿ ಒಂದು ಕೊರತೆ ತಲೆದೋರಿದೆ-ನಾಳಗಳ ತುದಿಗಳಲ್ಲಿ ತಲೆಪೆಟ್ಟಿಗೆಗಳನ್ನು ಅಳವಡಿಸಬೇಕು. ಬಾಗಿರುವ ನಾಲಗಳನ್ನು ಉಪಯೋಗಿಸುವುದರಿಂದ ನೇರನಾಳದ ಆವಿಗೆಯ ಅನುಕೂಲತೆಗಳು ಮೊಟಕಾಗುವುವಾದರೂ ತಲೆಪೆಟ್ಟಿಗೆಗಳ ಅಗತ್ಯವಿರುವುದಿಲ್ಲ: ಕೊಳವೆಗಳನ್ನು ಕೊಪ್ಪರಿಗೆಗಳಿಗೆ ಸೇರಿಸುವಲ್ಲಿ ಸಿಕ್ಕುವ ಹಿಚ್ಚಿನ ಸ್ವಾತಂತ್ರ್ಯ, ಕೊಳವೆಗಳ ಗಾತ್ರವನ್ನು ಕಡಿಮೆ ಮಾಡಿ ಸಂಖ್ಯೆಯನ್ನು ಹೆಚ್ಚಿಸಬಹುದಾದ ಸಾಧ್ಯತೆ ಇದೆ; ಅಲ್ಲದೆ ಹೆಚ್ಚು ಪ್ರಯೋಜನಕರವಾಗಿ ಉಷ್ಣಪ್ರವಾಹ ವಿಸ್ತಾರವನ್ನು ಬಳಸಲು ನಾಳ ಸಮೂಹದ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಬಹುದು. ಅತ್ಯಧಿಕ ಸಂಮರ್ಧ ಹಾಗೂ ಉತ್ಪಾದನೆಯ ಆಧುನಿಕ ಆವಿಗೆಗಳೆಲ್ಲ ಈ ದಿಕ್ಕಿನಲ್ಲೇ ಮುಂದುವರಿಯುತ್ತಿರುವುದನ್ನು ನಾವು ಕಾಣಬಹುದು.