ಪುಟ:Mysore-University-Encyclopaedia-Vol-4-Part-1.pdf/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕದ ಶಾಸನಗಳು ಮೇಲೆ ಹೇಳಿದ ಮ್ಯಾಕದೋನಿ ಶಾಸನದಿಂದಲೂ ಬಳ್ಳಾರಿ ಜಿಲ್ಲೆಯ ಹಿರೇಹಡಗಲಿ ಎಂಬಲ್ಲಿ ದೊರೆತ ಪಲ್ಲವ ರಾಜ ಶಿವಸ್ಕಂದ ವರ್ಮನ ಪ್ರಾಕೃತಭಾಷೆಯ ತಾಮ್ರಶಾಸನದಿಂದಲೂ ಬಳಾರಿಯ ಬಹುಭಾಗ ಸಾತವಹನಿಹಾರ ಅಥವಾ ಸಾತಹನಿರಟ್ಠ ಅಂದರೆ ಸಾತವಾಹನ ರಾಷ್ಟ್ರ ಎಂಬ ಪ್ರಾಂತವನ್ನೊಳಗೊಂಡಿತ್ತೆಂಬುದಾಗಿ ತಿಳಿಯುತ್ತದೆ.ಸಾತವಾಹನರ ತರುವಾಯ ಈ ಭಾಗ ಪಲ್ಲವರ ವಶದಲ್ಲಿತ್ತೆಂಬ ವಿಷಯವೂ ಈ ತಾಮ್ರಶಾಸನದಿಂದ ವಿಶದವಾಗುವುದು.೩-೪ನೆಯ ಶತಮಾನದ ಈ ಶಾಸನ ಭಾರತದಲ್ಲಿ ಇದುವರೆಗೆ ದೊರೆತ ಅತ್ಯಂತ ಪ್ರಾಚೀನ ತಾಮ್ರದಾನಪತ್ರವಾಗಿರುತ್ತದೆ.

ನಾಲ್ಕನೆಯ ಶತಮಾನದ ಆದಿಭಾಗದಲ್ಲಿ ಪಲ್ಲವರನ್ನು ಸೋಲಿಸಿ ಕರ್ನಾಟಕದಲ್ಲಿ ಮೊಟ್ಟಮೊದಲಿಗೆ ಸ್ವತಂತ್ರವಾದ ರಾಜ್ಯವನ್ನು ಸ್ಥಾಪಿಸಿದವರು ಕದಂಬರು.ಈ ವಂಶದ ಮೂಲಪುರುಷ ಮಯೂರಶರ್ಮನ ಶಾಸನವೊಂದು ಚಿತ್ರದುರ್ಗ ಜಿಲ್ಲೆಯ ಚಂದ್ರವಳ್ಳಿಯ ಬಳಿ ಬಂಡೆಗಲ್ಲಿನ ಮೇಲಿದೆ.ಇದು ಸು. ನಾಲ್ಕನೆಯ ಶತಮಾನದ ಬ್ರಾಹ್ಮೀ ಲಿಪಿಯಲ್ಲಿ ಮತ್ತು ಪ್ರಾಕೃತ ಭಾಷೆಯಲ್ಲಿದೆ.ಹೀಗೆ ಕರ್ನಟಕದಲ್ಲಿ ಅಶೋಕನ ಕಾಲದಿಂದ ಮಯೂರಶರ್ಮನ ಕಾಲದವರೆಗೆ ದೊರೆತ ಎಲ್ಲಾ ಶಾಸನಗಳೂ ಬ್ರಾಹ್ಮೀಲಿಪಿಯಲ್ಲಿ ಮತ್ತು ಪ್ರಾಕೃತ ಭಾಷೆಯಲ್ಲಿವೆ.ಆದುದರಿಂದ ಜನಸಾಮಾನ್ಯರ ಭಾಷೆ ಕನ್ನಡವಾದರೂ ಸುಶಿಕ್ಷಿತರಿಗೆ ಪ್ರಾಕೃತ ಭಾಷೆ ತಿಳಿಯುತ್ತಿತ್ತೆಂದು ತೋರುತ್ತದೆ.

ನಾಲ್ಕನೆಯ ಶತಮಾನದಿಂದ ೧೬-೧೭ನೆಯ ಶತಮಾನದವರೆಗಿನ ನಾಡಿನ ಚರಿತ್ರೆಯನ್ನು ತಿಳಿದುಕೊಳ್ಳಲು ಸಹಸ್ರಾರು ಶಾಸನಗಳು ಮೂಲಾಧಾರವಾಗಿವೆ.ಕದಂಬ,ಬಾದಾಮಿ ಚಾಲುಕ್ಯ,ರಾಷ್ಟ್ರಕೂಟ,ಕಲ್ಯಾಣ ಚಾಳುಕ್ಯ,ಕಳಚುರ್ಯ,ಸೇವುಣ,ಹೊಯ್ಸಳ,ವಿಜಯನಗರದ ಅರಸರು ಮುಂತಾದ ಅರಸುಮನೆತನಗಳ ಮತ್ತು ಅಧೀನ ಅರಸುಮನೆತನಗಳ ಚರಿತ್ರೆಯನ್ನು ರೂಪಿಸಲು ಶಾಸನಗಳು ಬಹಳ ಉಪಯುಕ್ತವಾಗಿವೆ.ಅರಸುಮನೆತನಗಳ ವಂಶಾವಳಿ-ಚರಿತ್ರೆಯಷ್ಟೇ ಅಲ್ಲದೇ ನಾಡಿನ ಸಂಸ್ಕೃತಿಯ ಪರಂಪರೆಯನ್ನು ತಿಳಿದುಕೊಳ್ಳಲೂ ಶಾಸನಗಳು ಅತ್ಯಮೂಲ್ಯ ಸಾಧನಗಳಾಗಿವೆ.ಆಯಾ ಕಾಲದ ರಾಜಕೀಯ,ಧಾರ್ಮಿಕ,ಸಾಮಜಿಕ,ಆರ್ಥಿಕ,ಶೈಕ್ಷಣಿಕ,ಭೌಗೋಲಿಕ ಮುಂತಾದ ಅನೇಕ ವಿಶಯಗಳ ಬಗ್ಗೆ ಶಾಸನಗಳು ವಿಪುಲವಾದ ಹಾಗು ನಿರ್ದುಷ್ಟವಾದ ಸಾಮಗ್ರಿಗಳನ್ನು ಒದಗಿಸುತ್ತದೆ.ಆಡಳಿತ ಕ್ಷೇತ್ರದಲ್ಲಿ ರಾಜ್ಯದ ವಿವಿಧ ಮಟ್ಟಗಳಲ್ಲಿರುವ ಆಡಳಿತ ವ್ಯವಸ್ಥೆ,ಆಡಳಿತಾಧಿಕಾರಿಗಳು,ಸೈನ್ಯಾಧಿಕಾರಿಗಳು,ಆದಾಯ,ತೆರಿಗೆ,ಸುಂಕ-ಸಾರಿಗೆ,ಸ್ವಾಯತ್ತೆ ಪಡೆದಿರುವ ಸಂಘ-ಸಂಸ್ಥೆಗಳು,ನ್ಯಾಯವಿತರಣೆ,ಭೂಮಿಯ ಸಾಗುವಳಿ,ಒಕ್ಕಲತನ,ನೀರಾವರಿ,ಬೆಳೆ ಮುಂತಾದ ವಿಷಯಗಳ ಬಗ್ಗೆಯೂ ಶಾಸನಗಳಿಂದ ವಿವರಗಳು ದೊರಕುತ್ತವೆ.

ಮೇಲೆ ಉಲ್ಲೇಖಿಸಿದ ಕದಂಬ ಮಯೂರಶರ್ಮನ ಚಂದ್ರವಳ್ಳಿ ಶಾಸನವನ್ನುಳಿದು ಈ ವಂಶದ ರಾಜರ ಎಲ್ಲಾ ಶಾಸನಗಳು ಸಂಸ್ಕೃತ ಭಾಷೆಯಲ್ಲಿವೆ.ರಾಜಸ್ಥಾನದ ಭಾಷೆ ಸಂಸ್ಕೃತವಿದ್ದುದರಿಂದ ಈ ಶಾಸನಗಳು ಸಂಸ್ಕೃತ ಭಾಷೆಯಲ್ಲಿ ಬರೆಯಲ್ಪಟ್ಟಿವೆ.ಆದರೆ ೫ನೆಯ ಶತಮಾನದ ಕನ್ನಡ ಲಿಪಿಯಲ್ಲಿ ಬರೆದ ಹಲ್ಮಿಡಿ ಶಾಸನದಲ್ಲಿ ಆರಂಭದ ಶ್ಲೋಕ ಸಂಸ್ಕೃತ ಭಾಷೆಯಲ್ಲಿಯೂ ಉಳಿದ ಭಾಗ ಕನ್ನಡದಲ್ಲಿಯೂ ಬರೆಯಲ್ಪಟ್ಟಿವೆ.ಇದೇ ಇದುವರೆಗೆ ದೊರೆತ ಅತ್ಯಂತ ಪ್ರಾಚೀನ ಕನ್ನಡ ಶಾಸನ.ಭಾಷಾದೃಷ್ಟಿಯಿಂದ ಕರ್ನಾಟಕದ ಶಾಸನಗಳನ್ನು ಪ್ರಾಕೃತ,ಸಂಸ್ಕೃತ,ಕನ್ನಡ ಹಾಗು ಮಿಶ್ರ ಭಾಷೆಯ ಶಾಸನಗಳೆಂದು ವಿಂಗಡಿಸಬಹುದು.ಕದಂಬರ ತರುವಾಯ ಕರ್ನಾಟಕದಲ್ಲಿ ರಾಜ್ಯವಾಳಿದ ಅರಸರ ಶಾಸನಗಳಲ್ಲಿ ತಾಮ್ರ ಶಾಸನಗಳು ಸಂಸ್ಕೃತ ಭಾಷೆಯಲ್ಲಿಯೂ ಶಿಲಾಶಾಸನಗಳು ಕನ್ನಡ ಭಾಷೆಯಲ್ಲಿಯೂ ಇವೆ.ರಾಷ್ಟ್ರಕೂಟರ ತಾಮ್ರಶಾಸನಗಳಲ್ಲಿ ಈಗ ಬ್ರಿಟಿಷ್ ವಸ್ತುಸಂಗ್ರಹಾಲಯದಲ್ಲಿರುವ ಮೂರನೆಯ ಗೋವಿಂದನ ೮೦೪ರ ತಾಮ್ರಪತ್ರವೊಂದು ಮಾತ್ರ ಕನ್ನಡದಲ್ಲಿದೆ.ಇದೇ ಕನ್ನಡದ ಅತ್ಯಂತ ಪ್ರಾಚೀನ ತಾಮ್ರ ಶಾಸನ,ಬಾದಾಮಿ ಚಾಲುಕ್ಯರ ೨ನೆಯ ಪುಲಿಕೇಶಿಯನ್ನು ಸೋಲಿಸಿದ ಪಲ್ಲವ ನರಸಿಂಹವರ್ಮನ ಶಿಲಾಶಾಸನವೊಂದು ಬಾದಾಮಿಯಲ್ಲಿ ದೊರೆತಿದೆ.ಇದು ಸಂಸ್ಕೃತ ಭಾಷೆಯಲ್ಲಿ ಪಲ್ಲವರ ಗ್ರಂಥ ಲಿಪಿಯಲ್ಲಿದೆ.ಇನ್ನು ಕರ್ನಾಟಕದ ನೆರೆಹೊರೆಯ ಪ್ರಾಂತ್ಯಗಳಾದ ಮಹಾರಾಷ್ಟ,ಆಂಧ್ರಪ್ರಧೇಶ,ತಮಿಳುನಾಡು ಮತ್ತು ಕೇರಳದ ಗಡಿ ಪ್ರದೇಶಗಳು ಫ್ರಾಚೀನ ಕರ್ನಾಟಕದಲ್ಲಿ ಸಮಾವೇಶವಾಗಿದ್ದುದರಿಂದ ಅಲ್ಲಿ ಕರ್ನಾಟಕದ ಅರಸುಮನೆತನಗಳಿಗೆ ಸಂಬಂಧಿಸಿದ ಅನೇಕ ಶಾಸನಗಳು ಸಂಸ್ಕೃತ ಕನ್ನಡ ಮತ್ತು ಇವೆರಡರ ಮಿಶ್ರಭಾಷೆಯಲ್ಲಿಯೂ ದೊರಕಿವೆ.ಹಾಗೂ ರಾಯಚೂರು ಬಳ್ಳಾರಿ,ಬೆಂಗಳೂರು ಮತ್ತುಮೈಸೂರು ಜಿಲ್ಲೆಗಳಲ್ಲಿ ತಮಿಳು ಭಾಷೆಯ ಅನೇಕ ಶಾಸನಗಳು ದೊರಕಿವೆ. ಕರ್ನಾಟಕದ ಶಾಸನಗಳನ್ನು ತಾಮ್ರಶಾಸನ ಮತ್ತು ಶಿಲಾಶಾಸನ ಎಂದು ಎರಡು ವಿಧವಾಗಿ ವಿಂಗಡಿಸಬಹುದು.ತಾಮ್ರಶಾಸನಗಳು ಸಾಮಾನ್ಯವಾಗಿ ರಾಜರಿಂದ ಮನ್ನಣೆ