ಪುಟ:Mysore-University-Encyclopaedia-Vol-4-Part-2.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧೨

ಕಸ್ತೂರಿ೧

ರವರೊಂದಿಗೆ ಹಳ್ಳಿಹಳ್ಳಿಗಳನ್ನು ಸುತ್ತುತ್ತಿದ್ದುದನ್ನು ಕಂಡು ನೊಂದ ತಾಯಿಯೊಬ್ಬಳಿಗೆ ಬಾ ಹೇಳಿದರು : ನಿನಗೆ ಒಬ್ಬನೇ ಮಗನ ಯೋಚನೆ. ನನಗಾದರೋ ಮೂರು ಮಕ್ಕಳಿದ್ದಾರೆ. ಆದರೆ ಎಲ್ಲರೂ ದೂರವಿದ್ದಾರೆ. ಅವರು ದೇಶಕ್ಕಾಗಿ ದುಡಿಯುತ್ತಿದ್ದಾರೆಂಬುದೇ ನನಗೆ ತೃಪ್ತಿ. ಮರೆಹೊಕ್ಕವರನ್ನು ಮೃದುವಾದ ಮಾತುಗಳಿಂದ ಸಂತೈಸುವ ಜಾಣ್ಮೆ ಆಕೆಯಲ್ಲಿತ್ತು. ಆಕೆಯ ಮಾತುಗಳು ಜನತೆಗೆ ಅಮೃತಸೇಚನ ಮಾಡುತ್ತಿದ್ದವು. ದೇಹಾರೋಗ್ಯವಿಲ್ಲದಿದ್ದರೂ ಬಾ ದುರ್ಗಮವಾದ ದಾರಿಗಳಲ್ಲಿ ನಡೆದು, ಹಳ್ಳಿಹಳ್ಳಿಗೆ ಹೋಗಿ, ಜನರಲ್ಲಿ ಉತ್ಸಾಹ ಚೈತನ್ಯಗಳನ್ನು ತುಂಬುತ್ತಿದ್ದರು; ಅವರಿಗೆ ಅಗತ್ಯವಾದ ಸೇವೆ ಸಲ್ಲಿಸುತ್ತಿದ್ದರು. ಅವರಲ್ಲಿದ್ದ ದೃಢನಿರ್ಧಾರ, ಆತ್ಮಸಂಯಮಗಳು ದೇಹ ದೌರ್ಬಲ್ಯವನ್ನು ಮೆಟ್ಟಿ ನಿಂತವು. ಈ ಅವಿರತವಾದ ದೇಶಪರ್ಯಟನೆಯಲ್ಲಿ ಅವರು ತಮ್ಮ ನಿತ್ಯನಿಯಮಗಳನ್ನೆಂದು ಮೀರಿ ನಡೆದವರಲ್ಲ. ಆಶ್ರಮದಲ್ಲಿದ್ದಾಗ ನಡೆಯುತ್ತಿದ್ದಂತೆಯೇ ಪ್ರಾತಃಕಾಲ ನಾಲ್ಕು ಗಂಟೆಗೇ ಎದ್ದು ದೇವರ ಪ್ರಾರ್ಥನೆ ಮಾಡಿ, ತಮ್ಮ ಬಟ್ಟೆಗಳನ್ನು ತಾವೇ ಒಗೆದುಕೊಳ್ಳುತ್ತಿದ್ದರು. ಅವರ ಆಹಾರ ಜೋಳದ ರೊಟ್ಟಿ ಮತ್ತು ಉಪ್ಪಿಲ್ಲದ ಒಂದಿಷ್ಟು ತರಕಾರಿ. ಸರಳತೆ ಅವರ ಬದುಕಿನ ಜೀವಾಳ. ಅಬ್ಬರ ಆಡಂಬರಗಳಿಗೂ ಅವರಿಗೂ ಬಹುದೂರ. ದಿಕ್ಕುಗೆಟ್ಟ ಜನರನ್ನು ಹುರಿದುಂಬಿಸಿ ಒಟ್ಟುಗೂಡಿಸುವ ಶಕ್ತಿ, ಹಿಡಿದ ಕಾರ್ಯದಲ್ಲಿ ಶ್ರದ್ಧೆಭಕ್ತಿಗಳನ್ನಿಟ್ಟು ಅದನ್ನು ನಿರ್ವಹಿಸುವ ಸಾಮರ್ಥ್ಯ, ಸರಸವಾಗ ಮಾತಾಡಿ ಜನರನ್ನು ಗೆಲ್ಲುವ ಬಲ್ಮೆ, ನಿರಾಶೆಯಲ್ಲಿ ಮಂಕು ಕವಿದು ಕಾರ್ಯಭಂಗವಾಗದಂತೆ ಮುಂದುವರಿಯುವ ಮೇಲ್ಮೆ, ಗುರಿಯನ್ನಾಗಲಿ ಗಂಡ ಹಾಕಿಕೊಟ್ಟ ಮೇಲ್ಪಂಕ್ತಿಯನ್ನಾಗಲಿ ಮರೆಯದಂತೆ ತಪ್ಪದೆ ನೆರವೇರಿಸುವ ನಿಷ್ಠೆ-ಈ ಎಲ್ಲ ಗುಣಗಳು ಅವರ ರಾಷ್ಟ್ರಸೇವಾಕಾರ್ಯದಲ್ಲಿ ಬೆಳಕಿಗೆ ಬಂದುವು.

ಈ ಎಲ್ಲ ಚಟುವಟಿಕೆಗಳಲ್ಲಿ ತೊಡಗಿದ್ದಾಗ ೧೯೩೨ ರಲ್ಲಿ ಕಸ್ತೂರ ಬಾ ಸೆರೆಮನೆಗೆ ಹೋಗಬೇಕಾಯಿತು. ಬಾರ್ದೋಲಿಯ ಸೆರೆಮನೆಯಲ್ಲಿ ಆರು ತಿಂಗಳ ಕಠಿಣ ಕಾರಾಗೃಹ ವಾಸವನ್ನೂ ಧೈರ್ಯದಿಂದ ಎದುರಿಸಿದರು.

೧೯೩೫ರ ಅನಂತರ ಗಾಂಧೀಜಿ ಚಳವಳಿ ನಿಲ್ಲಿಸಿ ವರ್ಧಾ ಬಳಿ ಸೇವಾಗ್ರಾಮದಲ್ಲಿ ತಮ್ಮ ಹೊಸ ಆಶ್ರಮ ಸ್ಥಾಪಿಸಿದರು. ಕಸ್ತೂರ ಬಾ ಅವರೇ ಆಶ್ರಮದ ಮೇಲ್ವಿಚಾರಣೆಯ ಹೊಣೆ ಹೊತ್ತರು. ಆ ವೇಳೆಗೆ ವಯಸ್ಸು ಮಾರ್ಪಾಡುಗಳನ್ನುಂಟುಮಾಡಿದ್ದರೂ ಮನಸ್ಸು ಮಾತ್ರ ಚಿರತಾರುಣ್ಯದ ಚಿಲುಮೆಯಾಗಿತ್ತು. ಆನಾರೋಗ್ಯದಿಂದ ದೇಹದಾರ್ಢ್ಯ ಕುಗ್ಗಿದರೂ ಉತ್ಸಾಹ ತಗ್ಗಿರಲಿಲ್ಲ. ಆಶ್ರಮದ ನಿತ್ಯಕಾರ್ಯಗಳಲ್ಲಿ ಮಗ್ನರಾಗಿರುತ್ತಿದ್ದ ಅವರನ್ನು ನೋಡಿದರೆ ಆಕೆ ಒಬ್ಬ ಆದರ್ಶ ಗೃಹಿಣಿಯಂತೆ ಕಂಡುಬರುತ್ತಿದ್ದರೇ ಹೊರತು ದೇಶಕ್ಕಾಗಿ ಜೀವವನ್ನೇ ಮುಡುಪಿಟ್ಟು ಸಹಸ್ರಾರು ಸಂಕಷ್ಟಗಳನ್ನನ್ನುಭವಿಸಿದ ನಾಯಕಿಯಂತೆ ಕಂಡುಬರುತ್ತಿರಲಿಲ್ಲ.

ಇಷ್ಟರಲ್ಲಿ ಕಸ್ತೂರ ಬಾ ಮಾತೃ ಹೃದಯಕ್ಕೆ ದೊಡ್ಡ ಆಘಾತವನ್ನುಂಟುಮಾಡಿದ ಒಂದು ಸನ್ನಿವೇಶ ಒದಗಿತು. ಅದು ಆಕೆಯ ಮಗ ಹೀರಾಲಾಲ್ ಚಾರಿತ್ರ್ಯ ಹೀನನಾಗಿ ಮುಸಲ್ಮಾನ್ ಮತಕ್ಕೆ ಸೇರಿದ್ದು. ಆ ಸಮಯದಲ್ಲಿ ಆಕೆ ಮಗನಿಗೆ ಬರೆದ ದೀರ್ಘಪತ್ರದಲ್ಲಿ ಮಾತೃಹೃದಯದ ವೇದನೆ ವ್ಯಕ್ತವಾಗುತ್ತದೆ. ಆಕೆಯ ಮಮತೆ ಕುರುಡಾಗಿರಲಿಲ್ಲ. ಅವರು ಬಿಚ್ಚುಹೃದಯದಿಂದ ಮಗನ ವರ್ತನೆಯನ್ನು ಅದರಲ್ಲಿ ಖಂಡಿಸಿದ್ದಾರೆ. ಅದರಲ್ಲಿ ಕೋಪದ ಬಿಸಿಯಿಲ್ಲ, ಪಶ್ಚಾತ್ತಾಪದ ಕಣ್ಣೀರಿದೆ. ಬಾ ಅಪೂರ್ವ ಸಹನೆಯಿಂದ ಸಂಕಟವನ್ನು ನುಂಗಿದರು; ದೇಶಕ್ಷೇಮದಲ್ಲಿ ಮೈಮರೆತರು.

೧೯೩೯ರಲ್ಲಿ ರಾಜಕೋಟೆಯಲ್ಲಿ ಮತ್ತೆ ಆಂದೋಲನ ನಡೆದಾಗ ಕಸ್ತೂರ ಬಾರ ದೇಹ ದುರ್ಬಲವಾಗಿದ್ದರೂ ಅವರು ಚಳವಳಿಯಲ್ಲಿ ಭಾಗವಹಿಸಿ ಮತ್ತೆ ಸೆರೆಸೇರಿದರು. ಆ ಕಾಲದಲ್ಲೇ ಗಾಂಧೀಜಿ ಅಮರಣಾಂತ ಉಪವಾಸ ಕೈಗೊಂಡಿದ್ದು. ಇರದಿಂದ ಮೊದಲಿಗೆ ಬಾ ತಳಮಳಗೊಂಡರೂ ಅನಂತರ ಪತಿಯ ಕ್ಷೇಮಕ್ಕಾಗಿ ಭಗವಂತನಲ್ಲಿ ಸಂಪೂರ್ಣ ಶರಣಾದರು. ಗಾಂಧೀಜಿ ಉಪವಾಸ ಕೈಗೊಂಡಾಗಲಿಲ್ಲ ಅವರು ಭಗವಂತನಲ್ಲಿ ಮೊರೆ ಹೋಗುತ್ತಿದ್ದರು. ಭಗವಂತನಲ್ಲಿದ್ದ ಅವರ ಈ ಅಚಲವಾದ ಶ್ರದ್ಧಾಭಕ್ತಿಗಳು ಗಾಂಧೀಜಿಗೆ ವಜ್ರಕವಚದಂತಿದ್ದುವು. ರಾಜಕೋಟೆಯ ಪ್ರಕರಣ ಮುಗಿದ ಮೇಲೆ ಗಾಂಧೀದಂಪತಿಗಳು ಮತ್ತೆ ಸೇವಾಗ್ರಾಮವನ್ನು ಸೇರಿದರು.

೧೯೪೨ರಲ್ಲಿ ಸ್ವಾತಂತ್ರ್ಯ ಚಳವಳಿಯ ಜ್ವಾಲೆ ಮತ್ತೊಮ್ಮೆ ದೇಶವನ್ನೆಲ್ಲ ವ್ಯಾಪಿಸಿತು. ಆಗಸ್ಟ್ ೯ರಂದು ಗಾಂಧೀಜಿಯಾದಿಯಾಗಿ ದೇಶದ ನಾಯಕರೆಲ್ಲ ಸೆರೆ ಸೇರಿದರು. ಅದೇ ಸಂಜೆ ಗಾಂಧೀಜಿ ಬೊಂಬಾಯಿಯ ಶಿವಾಜಿ ಪಾರ್ಕಿನಲ್ಲಿ ಉಪನ್ಯಾಸ ಮಾಡಬೇಕಾಗಿತ್ತು. ಪತಿಯ ಪ್ರತಿನಿಧಿಯಾಗಿ ಕಸ್ತೂರ ಬಾ ಆ ಕೆಲಸವನ್ನು ನಿರ್ವಹಿಸಲು ನಿರ್ಧರಿಸಿದರು. ಆದರೆ ಅಷ್ಟರಲ್ಲಿಯೇ ಪೋಲೀಸರು ಆಕೆಯನ್ನು ಬಂಧಿಸಿ ಆಗಾಖಾನ್ ಅರಮನೆಗೆ ಒಯ್ದರು. ಅಲ್ಲಿಂದ ಅವರಿಗೆ ಮತ್ತೆ ಬಿಡುಗಡೆಯಾಗಲಿಲ್ಲ. ಮೃತ್ಯ ಅವರನ್ನು ಈ ಪ್ರಪಂಚದಿಂದಲೇ ಶಾಶ್ವತವಾಗಿ ಬಿಡುಗಡೆ ಮಾಡಿತು. ೧೯೪೩ರ ಮಾರ್ಚ್ ೧೨ ರಂದು ಕಸ್ತೂರ ಬಾ ಎರಡು ಬಾರಿ ಹೃದಯವೇದನೆಗೊಳಗಾದರು. ಅಲ್ಲಿಂದಾಚೆಗೆ ಅವರ ಆರೋಗ್ಯ ಕ್ಷೀಣಿಸುತ್ತ ಬಂತು. ೧೯೪೪ರ ಫೆಬ್ರವರಿ ೨೨ರ ಮಹಾಶಿವರಾತ್ರಿಯಂದು ಪತಿಯ ತೊಡೆಯ ಮೇಲೊರಗಿದ್ದಂತೆಯೇ ಬಾರ ಆತ್ಮ ಅನಂತದಲ್ಲಿ ಲೀನವಾಗಿ ಹೋಯಿತು. ಆ ಮಹಾಸತಿಯ ಪಾರ್ಥಿವಶರೀರ ಕಣ್ಮರೆಯಾದರೂ ಆಕೆಯ ಕೀರ್ತಿ ಅಜರಾಮರವಾಯಿತು.

ಕಸ್ತೂರ ಬಾ ಆದರ್ಶ ಹಿಂದೂ ನಾರಿಯ ಪ್ರತೀಕವಾಗಿದ್ದಾರೆ. ಸಹನೆ ಸಂಯಮ ಔದಾರ್ಯಗಳು ಆಕೆಯಲ್ಲಿ ಮುಪ್ಪುರಿಗೊಂಡಿದ್ದುವು. ಎಲ್ಲಕ್ಕೂ ಮಿಗಿಲಾಗ ಪತಿಭಕ್ತಿಯೇ ಆಕೆಗೆ ಮುಕ್ತಿಸಾಧನವಾಯಿತು. ಯಾವ ಮಹತ್ವಾಕಾಂಕ್ಷೆಯಾಗಲೀ, ಕೀರ್ತಿಕಾಮನೆಯಾಗಲಿ ಅವರಲ್ಲಿರಲಿಲ್ಲ. ಗಂಡನ ಧ್ಯೇಯಸಾಧನೆಯೇ ತಮ್ಮ ಪವಿತ್ರ ಕರ್ತವ್ಯವೆಂದು ಬಗೆದು ಅವರು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಚಾಚೂ ತಪ್ಪದಂತೆ ಅನುಸರಿಸುತ್ತ ಅದರಲ್ಲೇ ತಮ್ಮ ಪ್ರಾಣವನ್ನು ತೆತ್ತ ಮಹಾಸಾಧ್ವಿಯವರು. ಮಾನವ ಸಹಜವಾದ ದೌರ್ಬಲ್ಯಗಳು ಅವರಲ್ಲಿರಲಿಲ್ಲವೆಂದಲ್ಲ. ಆದರೆ ಅವನ್ನು ಗೆದ್ದು ಎಲ್ಲರಿಗಾಗಿ ಬಾಳಿದ್ದು ಅವರ ದೊಡ್ಡತನ. ಸ್ತ್ರೀ ಸಹಜವಾದ ಸಂಕುಚಿತ ಸಂಸಾರದ ಅನುರಾಗ ಅಭಿಮಾನಗಳನ್ನು ತೊರೆದು ವಿಶ್ವಕುಟುಂಬದ ಹೊಣೆ ಹೊತ್ತು ದೇಶಸೇವೆಗಾಗಿ ಗಂಡ ಮತ್ತು ಮಕ್ಕಳನ್ನು ಬಿಟ್ಟುಕೊಟ್ಟು ಅನನ್ಯತ್ಯಾಗವನ್ನು ಮೆರೆದರು. ಮಹಾತ್ಮನ ಪತ್ನಿಯಾಗುವುದೇನೂ ಸುಲಭವಲ್ಲ. ಅವರು ಹೆಜ್ಜೆಹೆಜ್ಜೆಗೂ ಪತಿಯೊಡ್ಡಿದ ಪರೀಕ್ಷೆಗಳ ಅಗ್ನಿಕುಂಡದಿಂದ ಪಾರಾಗಿ ಬಂದು ಥಳಥಳಿಸುವ ಹೊನ್ನಾಗಿ ಬೆಳಗಿದರು. ಆ ಹೊನ್ನು ಭಾರತಮಾತೆಯ ಮುಡಿಗೆ ಶೃಂಗಾರವಾಯಿತು.

ಗಾಂಧೀಜಿಯವರು ಬಾ ಅವರನ್ನು ಕುರಿತು ಆಡಿರುವ ಮಾತುಗಳು ಆಕೆಯ ವ್ಯಕ್ತಿತ್ವದ ಪ್ರೋಜ್ವಲತೆಗೆ ಸಾಕ್ಷಿಯಾಗಿವೆ: ಕಸ್ತೂರ ಬಾ ಉದ್ದಕ್ಕೂ ನನ್ನ ಪೋಷಕಳಾಗಿದ್ದಳು. ಆಕೆಯಿಲ್ಲದಿದ್ದರೆ ನಾನು ಅನಾಥನಾಗುತ್ತಿದ್ದೆ. ಜಗತ್ತಿನಲ್ಲಿ ಮತ್ತಾವ ಹೆಣ್ಣೂ ನನ್ನನ್ನು ಹಾಗೆ ಮಿಡಿಯಲಾರಳು. ಆಕೆಯ ಸಹನೆ ಅದ್ವಿತೀಯ. ಆ ಸಹನೆಯೇ ನನಗೆ ಅಹಿಂಸೆಯ ಪಾಠವನ್ನು ಕಲಿಸಿತು. ಅದೇ ನನ್ನ ತಾರಕ ಮಂತ್ರವಾಯಿತು. ತನ್ನ ಸಹನೆಯ ಬೆಲೆ ಆಕೆಗೇ ಗೊತ್ತಿರಲಿಲ್ಲ. ನಾನು ಅದರ ಅಮಿತವಾದ ಬೆಲೆಯನ್ನರಿತು ಅನುಸರಣೆಗೆ ತಂದೆ. ಆದ್ದರಿಂದ ಈ ವಿಚಾರಲ್ಲಿ ಆಕೆ ನನಗೆ ಎಂದೆಂದಿಗೂ ಗುರುಸಮಾನಳು. (ಜೆ.ಎಸ್.ಸಿ.)

ಕಸ್ತೂರಿ೧: ಹುಬ್ಬಳ್ಳಿಯಿಂದ ಪ್ರಕಟವಾಗುವ ಕನ್ನಡ ಮಾಸ ಪತ್ರಿಕೆ; ಸಾರಸಂಗ್ರಹ. ಸಂಕ್ಷೇಪಿತ ಲೇಖನಗಳನ್ನೊಳಗೊಂಡ ಈ ಬಗೆಯ ಪತ್ರಿಕೆಗಳದು ೨೦ನೆಯ ಶತಮಾನದ ಪತ್ರಿಕಾ ವ್ಯವಸಾಯದಲ್ಲಿ ಒಂದು ಹೊಸ ಪ್ರಕಾರ. ಇಂಥ ಮಾಸ ಪತ್ರಿಕೆಗಳು ಒಂದನೆಯ ಮಹಾಯುದ್ಧದ ಅನಂತರದ ಕಾಲದಿಂದ ತಕ್ಕಮಟ್ಟಿಗೆ ಯಶಸ್ವಿಯಾಗಿ ನಡೆದು ಬಂದಿವೆ. ಇಂಗ್ಲಿಷಿನ ಅತ್ಯಂತ ಯಶಸ್ವಿ ಪತ್ರಿಕೆಯಾದ ರೀಡರ್ ಡೈಜಸ್ಟ್ ಮಾದರಿಯನ್ನನುಸರಿಸಿ ಕನ್ನಡದ ನೆಲನೀರುಗಳಿಗೆ ಅಗತ್ಯವಾದ ಕೆಲವು ಬದಲಾವಣೆಗಳೊಂದಿಗೆ ಪ್ರಪ್ರಥಮ ಮಾಸಿಕ ಸಾರಸಂಗ್ರಹವಾಗಿ ೧೯೫೬ರ ಸೆಪ್ಟೆಂಬರಿನಲ್ಲಿ ಈ ಪತ್ರಿಕೆಯ ಪ್ರಕಟಣೆ ಆರಂಭವಾಯಿತು. ೧೯೫೮ರ ಆಗಸ್ಟ್ಮ್‍ವರೆಗೆ ಮೊಹರೆ ಹಣಮಂತರಾಯರು ಇದರ ಸಂಪಾದಕರಾದ ರಂಗನಾಥ ದಿವಾಕರರೇ ಇದರ ಪ್ರಧಾನ ಸಂಪಾದಕರೂ ಆದರು. ಲೋಕ ಶಿಕ್ಷಣ ಟ್ರಸ್ಟಿನ ಪ್ರಕಟಣೆಯಿದು.

ಪತ್ರಿಕೆ ೭ ½″ × ೫″ ಆಕಾರದ ೧೫೨ ಪುಟಗಳನ್ನೊಳಗೊಂಡಿರುತ್ತದೆ. ಮುಖಚಿತ್ರ ವರ್ಣರಂಜಿತವಾದದ್ದು. ಪತ್ರಿಕೆಯ ಬಿಡಿ ಪ್ರತಿಯ ಬೆಲೆ ಮೊದಲು ೭೫ ಪೈಸೆಯಿತ್ತು. ಪ್ರತಿ ಸಂಚಿಕೆಯಲ್ಲೂ ೨೫-೩೦ ವಿಷಯಗಳಿರುತ್ತವೆ. ಇವುಗಳಲ್ಲಿ ೩.೪ ಮಾತ್ರ ಕಥೆಗಳು;