ಪುಟ:Mysore-University-Encyclopaedia-Vol-4-Part-2.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಂಗ್ರೆಸ್,ಭಾರತ ರಾಷ್ಟ್ರೀಯ ಅನೇಕ ಆಡಳಿತ ಸುಧಾರಣೆಗಳೂ ಜಾರಿಗೆ ಬಂದುವು,ಪಂಚಾಯಿತಿಗಳು ಪುನರುದ್ಧಾರವಾದುವು.ಗ್ರಾಮಕೈಗಾರಿಕೆಗಳಿಗೆ ಹೆಚ್ಚಿನ ಉತ್ತೇಜನ ಸಿಕ್ಕಿತು.ರೈತರ ಮತ್ತು ಕೂಲಿಕಾರರ ಹಿತ ಸಾಧಿಸಲು ಅನೇಕ ಶಾಸನಗಳು ಸ್ವೀಕೃತವಾದುವು.ಕಾಂಗ್ರೆಸ್ ಸರ್ಕಾರಗಳು ಯಶಸ್ವಿಯಾಗಿ ಆಡಳಿತ ನಡೆಸಿದರೂ ಗವರ್ನರುಗಳಿಂದ ಅಡ್ಡಿ ಆತಂಕಗಳು ಬಾರದೆ ಇರಲಿಲ್ಲ. ಆಳರಸರ ಕೈವಾಡವನ್ನು ಪ್ರತಿಭಟಿಸಿ ಎಷ್ಟೋ ವೇಳೆ ಅಧಿಕಾರಕ್ಕೆ ಶರಣುಹೊಡೆದ ಸನ್ನಿವೇಶಗಳೂ ಬಂದಿದ್ದುವು.ಗವರ್ನರುಗಳಿಗೂ ಮಂತ್ರಿಗಳಿಗೂ ಆಗಾಗ ಘರ್ಷಣೆಗಳಾಗುತ್ತಿದ್ದುವು.ಅಂಥ ಪ್ರಸಂಗಗಳಲ್ಲಿ ಕಾಂಗ್ರೆಸ್ ಸಹನೆಯಿಂದ ವರ್ತಿಸಿದ ಉದಾಹರಣೆಗಳು ಅನೇಕ ಇವೆ.ಕಾಂಗ್ರೆಸು ರಾಜನೀತಿ ನೈಪುಣ್ಯದಿಂದ ವರ್ತಿಸಿ ಪ್ರಜಾಸೇವೆ ಮಾಡಿತು;ಚಿಕ್ಕಪುಟ್ಟ ವಿಷಯಗಳಿಗಾಗಿ ಅಧಿಕಾರತ್ಯಾಗ ಮಾಡದೆ ಬಹು ಜಾಣತನದಿಂದ ವರ್ತಿಸಿತು.ಅತ್ತ ರಾಜ್ಯಯಂತ್ರನಿಂತೀತೆಂಬ ಭಯದಿಂದ ಗವರ್ನರ್ ಗಳೂ ಗವರ್ನರ್-ಜನರಲ್ ನ ಅನುಮತಿಯಿಲ್ಲದೆ ಮೇಲಿಂದ ಮೇಲೆ ಅಡ್ಡಿಗಳನ್ನು ತಂದೊಡ್ಡುತ್ತಿರಲಿಲ್ಲ.ಆದರೆ ಗವರ್ನರ್-ಜನರಲ್ ಇಚ್ಛಿಸಿದರೆ,ಗವರ್ನರುಗಳು ೧೯೩೫ರ ಕಾಯಿದೆಯ ೧೨೬ನೆಯ ಕಲಮಿನನ್ವಯ ಮಂತ್ರಿಗಳ ಸಲಹೆಗಳನ್ನು ತಳ್ಳಿಹಾಕುತ್ತಿದ್ದರು.ತತ್ಪರಿಣಾಮವಾಗಿ ಮಂತ್ರಿಮಂಡಲ ನಿರಾಯುಧವಾಗಿ ಕುಳಿತುಕೊಳ್ಳಬೇಕಾಗಿತ್ತು,ಇಲ್ಲವೆ ರಾಜೀನಾಮೆ ಕೊಡಬೇಕಾಗುತ್ತಿತ್ತು.ಬಿಹಾರ, ಸಂಯುಕ್ತ ಪ್ರಾಂತ್ಯಗಳಲ್ಲಿ ಸಣ್ಣಪುಟ್ಟ ಕಾರಣಗಳಿಗಾಗಿ ಗವರ್ನರರು ಮಂತ್ರಿ ಮಂಡಲಗಳೊಡನೆ ಸಹಕರಿಸಲಿಲ್ಲವಾದುದರಿಂದ ಅಲ್ಲಿ ಮಂತ್ರಿಗಳು ರಾಜೀನಾಮೆ ಕೊಟ್ಟು ಹೊರಬಂದರು.ಗವರ್ನರುಗಳು ಹಸ್ತಕ್ಷೇಪ ಘಟನಾಸಂಪ್ರದಾಯಕ್ಕೆ ವಿರುದ್ಧವಾಗಿತ್ತು. ಇದೆಲ್ಲವನ್ನೂ ಸಹಿಸಿಕೊಂಡು ಹಲವಾರು ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಮಂತ್ರಿಮಂಡಲಗಳೂ ರಾಜಕೀಯ ಜಾಣ್ಮೆ ಹಾಗೂ ಮುತ್ಸದ್ದಿತನವನ್ನು ವ್ಯಕ್ತಪಡಿಸಿದುವು. ಹೋರಾಟದ ಕೊನೆಯ ಘಟ್ಟ:೧೯೩೯ರಲ್ಲಿ ಬ್ರಿಟಿಷರು ಭಾರತೀಯರೊಂದಿಗೆ ಸಮಾಲೋಚಿಸದೆಯೇ ಭಾರತವನ್ನು ಎರಡನೆಯ ಮಹಾಯುದ್ಧದಲ್ಲಿ ನೂಕಿದರು. ಇದು ಕಾಂಗ್ರೆಸ್ ಧೋರಣೆಗೆ ವಿರೋಧವಾಗಿತ್ತು.ಗುಲಾಮದೇಶವಾಗಿ ಭಾರತ ಬ್ರಿಟಿಷರೊಡನೆ ಯುದ್ಧದಲ್ಲಿ ಸಹಕರಿಸುವುದಿಲ್ಲ ಎಂದು ಕಾಂಗ್ರೆಸ್ ಸಂಸ್ಥೆ ತಿಳಿಸಿತು. ಭಾರತವೂ ಯುದ್ಧದಲ್ಲಿ ಭಾಗವಹಿಸಿ ಫ್ಯಾಸಿಸ್ಟ್ ಶಕ್ತಿಯ ವಿರುದ್ಧ ಹೋರಾಡಬೇಕಾದರೆ ಅದು ಮೊದಲು ಸ್ವತಂತ್ರವಾಗಬೇಕು. ಇದಕ್ಕೆ ಬ್ರಿಟಿಷ್ ಸರ್ಕಾರ ಒಪ್ಪದ್ದಕ್ಕಾಗಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಆಜ್ನೆಯಂತೆ ಎಲ್ಲ ಕಾಂಗ್ರೆಸ್ ಮಂತ್ರಿಮಂಡಲಗಳೂ ಅಧಿಕಾರಕ್ಕೆ ರಾಜೀನಾಮೆಯನ್ನಿತ್ತು ತಮ್ಮ ಅಸಹಕಾರ ಪ್ರದರ್ಶಿಸಿದುವು. ಸ್ವಾತಂತ್ರ್ಯವಿಲ್ಲದೆ ಯುದ್ಧದಲ್ಲಿ ಭಾರತದ ಸಹಕಾರವಿಲ್ಲ ಎಂದು ಕಾಂಗ್ರೆಸ್ ಸಾರಿತು. ಆಗ ಭಾರತೀಯರ ಮನವೊಲಿಸುವುದಕ್ಕಾಗಿ ೧೯೪೦ರ ಆಗಸ್ಟ್ ೮ರಂದು ತಮ್ಮ ಹೇಳಿಕೆಯೊಂದರಲ್ಲಿ ಆಗಿನ ವೈಸ್ ರಾಯಿ ಕೆಲವು ಸುಧಾರಣೆಗಳನ್ನು ಪ್ರಕಟಿಸಿದ.ಆದರೆ ಈ ಸುಧಾರಣೆಗಳು ಕಾಂಗ್ರೆಸ್ ಸಂಸ್ಥೆಯ ಹಾಗೂ ಭಾರತೀಯರ ಬಯಕೆಯನ್ನು ಈಡೇರಿಸಲು ಎಳ್ಳಷ್ಟೂ ಸಹಾಯಕವಾಗಿಲ್ಲ. ಆದ್ದರಿಂದ ಕಾಂಗ್ರೆಸ್ ಹಾಗೂ ಸರ್ಕಾರಗಳ ಮಧ್ಯೆ ತೇವ್ರ ಭಿನ್ನಭಿಪ್ರಾಯ ಉಂಟಾಗಿ ಕಾಂಗ್ರೆಸ್ ಪುನಃ ಕಾನೂನುಭಂಗ ಚಳವಳಿ ಪ್ರಾರಂಭಿಸಿತು. ಬ್ರಿಟಿಷರು ಬಿತ್ತಿದ ಜಾತಿವಿಷಬೀಜದ ಮೇಲೆ ೧೯೪೦ರಲ್ಲಿ ಮುಸ್ಲಿಂ ಲೀಗ್ ದ್ವಿರಾಷ್ಟ್ರ ಸಿದ್ಧಾಂತ ಬೆಳೆಸಿ ಪ್ರತ್ಯೇಕ ಪಾಕಿಸ್ತಾನದ ಬೇಡಿಕೆಯನ್ನು ಮುಂದಿರಿಸಿತು. ಬರ್ಮದಲ್ಲಿ ಜಪಾನೀ ಆಕ್ರಮಣ ಆರಂಭವಾಯಿತು. ಬ್ರಿಟಿಷರು ೧೯೪೨ರಲ್ಲಿ ಸ್ಟಾಫರ್ಡ್ ಕ್ರಿಪ್ಸನ ನಾಯಕತ್ವದಲ್ಲಿ ಆಯೋಗವೊಂದನ್ನು ಸಂಧಾನಕ್ಕಾಗಿ ಭಾರತಕ್ಕೆ ಕಳುಹಿಸಿದರು. ಕ್ರಿಪ್ಸನ ಸಂಧಾನ ಫಲಕಾರಿಯಾಗಲಿಲ್ಲ (ನೋಡಿ-ಕ್ರಿಪ್ಸ್,ರಿಚರ್ಡ್ ಸ್ಟ್ಯಾಫರ್ಡ್). ಬ್ರಿಟಿಷರು ಭಾರತಕ್ಕೆ ಪೂರ್ಣ ಅಧಿಕಾರ ಕೊಡದಿದ್ದರೆ ಯುದ್ಧದಲ್ಲಿ ಸಹಕಾರವಿಲ್ಲ ಎಂದು ಕಾಂಗ್ರೆಸ್ ಸಾರಿತು. ಇದಾವುದಕ್ಕೂ ಸರ್ಕಾರ ಕಿವಿಗೊಡಲಿಲ್ಲ. ಯುದ್ಧದ ಬಿಸಿ ಭಾರತದ ಬಾಗಿಲಿಗೆ ಬಂತು. ಮುಂದಿನ ಕಾರ್ಯಕ್ರಮ ನಿರ್ಧರಿಸಲು ಆಗಸ್ಟ್ ೭ ಮತ್ತು ೮ ರಲ್ಲಿ ಬೊಂಬಾಯಿಯಲ್ಲಿ ಕಾಂಗ್ರೆಸ್ ಅಧಿವೇಶನ ಸೇರಿತು. ಬ್ರಿಟಿಷರು ಭಾರತ ಬಿಟ್ಟು ತೊಲಗಬೇಕೆಂಬ ಚರಿತ್ರಾರ್ಹ ಯುದ್ಧ ಘೋಷಣೆಯ ನಿರ್ಣಯ ಸ್ವೀಕರಿಸಿತು. ನಿರ್ಣಯವನ್ನು ಕಾರ್ಯಗತ ಮಾಡುವ ಮುನ್ನ ವೈಸ್ ರಾಯಿಯನ್ನು ಕಂಡು ಕೊನೆಯ ಸಂಧಾನ ಮಾಡಬೇಕೆಂಬುದು ಗಾಂಧೀಜಿಯ ಇಚ್ಛೆಯಾಗಿತ್ತು. ಆದರೆ ನಿರ್ಣಯದ ಮರುದಿನ ಅರುಣೋದಯದೊಡನೆಯೇ ಕಾಂಗ್ರೆಸಿನ ಎಲ್ಲ ಮುಂದಾಳುಗಳನ್ನೂ ಬಂಧಿಸಲಾಯಿತು. ಕಾಂಗ್ರೆಸ್ ನಾಯಕರ ಮಾರ್ಗದರ್ಶನವಿಲ್ಲದೆ ಜನ ಮುಂಗಾಣದಾದರು. ಆದರೂ ಉಕ್ಕುತ್ತಿದ್ದ ಸ್ವಾತಂತ್ರದ ಉತ್ಸಾಹ,ನಾಯಕರನ್ನು ಸೆರೆಹಿಡಿದ ರೋಷ, ದುಡಿ ಇಲ್ಲವೇ ಮಡಿ ಎಂಬ ಗಾಂಧೀಜಿಯವರ ಸಂದೇಶ, ಇವೆಲ್ಲವೂ ಜನರನ್ನು ಕಾರ್ಯೋನ್ಮುಖರನ್ನಾಗಿ ಮಾಡಿದುವು. ಸರ್ಕಾರವೇ ದುಡುಕಿ ಮಹಾಕ್ರಾಂತಿಗೆ ಸ್ವಾಗತ ಕೊಟ್ಟಂತಾಯಿತು. ಹೀಗೆ ಸೆಪ್ಟೆಂಬರ್ ಕೊನೆಯ ತನಕ ಕಾಂಗ್ರೆಸ್ ಚಳವಳಿ ಬಹಿರಂಗವಾಗಿ ಪ್ರಚಂಡವಾಗಿ ನಡೆಯಿತು. ಅನೇಕ ಕಡೆ ಸರ್ಕಾರಕ್ಕೂ ಜನತೆಗೂ ಘರ್ಷಣೆ ನಡೆದು ರಕ್ತ ಹರಿಯಿತು.ಕಾಂಗ್ರೆಸಿನಿಂದ ಹೊರಬಿದ್ದ ಸುಭಾಷ್ ಚಂದ್ರ ಬೋಸ್ ಜರ್ಮನಿ ಜಪಾನ್ ಗಳೊಡನೆ ಸಂಬಂಧ ಬೆಳೆಸಿ ಆಜ಼ಾದ್ ಹಿಂದೆ ಸೈನ್ಯವನ್ನು ಸಿದ್ಧಪಡಿಸಿ ಬ್ರಿಟಿಷರನ್ನು ಭಾರತದಿಂದ ಹೊರದೂಡಲು ಪ್ರಯತ್ನಿಸಿದರು. ಆದರೆ ಜಪಾನಿನ ಸೋಲಿನೊಂದಿಗೆ ಸುಭಾಷರ ಸೈನ್ಯದ ಶಕ್ತಿಗುಂದಿತು. ಭಾರತೀಯರ ಸ್ವಾತಂತ್ರ್ಯದ ಕೂಗಿನ ಚಳವಳಿಯನ್ನು ಹತ್ತಿಕ್ಕಲು ಸರ್ಕಾರ ಬಹಳ ಪ್ರಯತ್ನಿಸಿತು.೧೯೪೪ರಲ್ಲಿ ಗಾಂಧೀಜಿಯವರ ಬಿಡುಗಡೆಯಾದಾಗ ಅವರು ಕಾಂಗ್ರೆಸಿನ ಏಕಮೇವ ಪ್ರತಿನಿಧಿಯಾಗಿ ಮುಸ್ಲಿಂ ಲೀಗ್ ಅಧ್ಯಕ್ಷ ಜಿನ್ನಾನೊಡನೆ ಮಾತುಕತೆ ನಡೆಸಿ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಲು ಪ್ರಯತ್ನಿಸಿದರು. ಆದರೆ ಅದು ವ್ಯರ್ಥವಾಯಿತು. ೧೯೪೫ರಲ್ಲಿ ಬ್ರಿಟನ್ನಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಲೇಬರ್ ಪಕ್ಷ ಬಹುಮತಗಳಿಸಿ ಸರ್ಕಾರ ರಚಿಸಿತು. ಆ ಸರ್ಕಾರ ಭಾರತದ ಸಮಸ್ಯೆಯನ್ನು ಬಿಡಿಸಲು ಮನಃ ಪೂರ್ವಕವಾಗಿ ಪ್ರಯತ್ನಿಸಿತು. ತನ್ನ ಧೋರಣೆಗನುಗುಣವಾಗಿ ಆ ಸರ್ಕಾರ ಮೇ ೧೯೪೬ರಲ್ಲಿ ಸಂಪುಟ ಸದಸ್ಯರ ನಿಯೋಗವೊಂದನ್ನು ಭಾರತಕ್ಕೆ ಕಳಿಸಿತು. ಅವರ ಯೋಜನೆಯ ತಾತ್ಕಾಲಿಕ ಸರ್ಕಾರ