ಪುಟ:Mysore-University-Encyclopaedia-Vol-4-Part-2.pdf/೫೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಠರಾವಕಾಶ ವ್ಯಕ್ತಪಡಿಸುವ ರಚನೆಯನ್ನೂ ಆಧಾರಮಾಡಿಕೊಂಡು ಮೇಲಿನ ವರ್ಗೀಕರಣವನ್ನು ಮಾಡಿದೆ.

೧ ಹೈಡ್ರೊಜ಼ೋವ:ಸಾಗರದ ಹೈಡ್ರಾಯಿಡ್ ಗಳು,ಹೈಡ್ರೊಮೆಡೂಸಗಳು(ಹೈಡ್ರೊಜ಼ೋವನ್ ಅಂಬಲಿಮೀನು),ಸಿಹಿನೀರಿನ ಹೈಡ್ರಾಯಿಡ್ ಗಳನ್ನು ಫೈಸೇಲಿಯ ಇತ್ಯಾದಿ ಪ್ರಾಣಿಗಳು ಈ ವರ್ಗಕ್ಕೆ ಸೇರಿವೆ.ಇವುಗಳು ಜಠರಾವಕಾಶ ಸರಳವಾಗಿದ್ದು ಅದರ ಟೊಳ್ಳುಭಾಗ ಸ್ಪರ್ಶ ತಂತುಗಳಿಗೂ ಹಾದು ಹೋಗಿರುತ್ತದೆ;ಜಠರಾವಕಾಶ ನಾಲ್ಕು ಅಥವಾ ಹೆಚ್ಚು ನಾಳಗಳಾಗಿ ಕವಲೊಡೆದಿರುತ್ತದೆ.ಈ ನಾಳಗಳು ಜಠರದ ಕೇಂದ್ರದಿಂದ ತ್ರಿಜ್ಯಮುಖವಾಗಿ ಹಾದು ಹೋಗುತ್ತವೆ;ಸಾಮಾನ್ಯವಾಗಿ ಗಂಟೆಯಂಥ ಅವುಗಳ ದೇಹದ ಅಂಚಿನಲ್ಲಿ ಸುತ್ತಲೂ ಉಂಗುರದಂತೆ ಹಾದಿರುವ ನಾಳವಿದ್ದು ಎಲ್ಲ ತ್ರಿಜ್ಯನಾಳಗಳನ್ನೂ ಅದು ಕೂಡಿಸಿಕೊಂಡಿರುತ್ತದೆ.ಹೈಡ್ರಾಯಿಡ್ ರೂಪವೇ ಕೆಲವು ಪ್ರಾಣಿಗಳ ಪ್ರೌಢಾವಸ್ಥೆಯೆನಿಸುತ್ತದೆ.ಇನ್ನುಳಿದ ಪ್ರಾಣಿಗಳಲ್ಲಿ ಹೈಡ್ರಾಯಿಡ್ ರೂಪ ಅವುಗಳ ಕಿಶೋರಾವಸ್ಥೆ ಮಾತ್ರವಾಗಿರುತ್ತದೆ.ಅದು ಆಲಿಂಗ ರೀತಿಯಲ್ಲಿ ಅಂಬಲಿಮೀನುಗಳನ್ನು ಉತ್ಪತ್ತಿಮಾಡಿ ವಂಶಾಭಿವೃದ್ಧಿ ಮಾಡುತ್ತದೆ.ಸಾಗರದಲ್ಲಿ ವಾಸಿಸುವ ಅನೇಕ ಹೈಡ್ರೊಜ಼ೋವಗಳು ಬಹುರೂಪಿ ಜೀವಿಗಳಾಗಿರುತ್ತವೆ.

೨ ಸ್ಕೈಫೊಜ಼ೋವ:ಇವೆಲ್ಲ ಆಳವಿಲ್ಲದ ಸಮುದ್ರದಲ್ಲಿ ವಾಸಿಸುವ ದೊಡ್ದ ಅಂಬಲಿಮೀನುಗಳು,ಒಂದು ಜಾತಿಮಾತ್ರ ಆಳವಾದ ಸಾಗದಲ್ಲೂ ವಾಸಿಸುತ್ತದೆ.ಆದರೆ ಸಿಹಿನೀರಿನಲ್ಲಿ ಜೀವಿಸುವ ಪ್ರಾಣಿಗಳಾವುವೂ ಇದರಲ್ಲಿ ಸೇರಿಲ್ಲ.ಜಠರಾವಕಾಶ ದೇಹದ ಗೋಡೆಗಳಿಂದ ನಾಲ್ಕು ಭಾಗವಾಗಿ ವಿಭಾಗವಾಗಿದೆ.ಈ ಗೋಡೆಗಳ ಪಕ್ಕದ ಚಾಚುಭಾಗಗಳಲ್ಲಿ ಅಲ್ಲಲ್ಲಿ ಸ್ಪರ್ಶತಂತುಗಳು ಗುಂಪುಗಳಿರುತ್ತವೆ.ಜಠರ ಕೋಶದಲ್ಲಿ ಕುಟುಕುಕಣಗಳಿವೆ.ಈ ಪ್ರಾಣಿಗಳ ಅಂಬಲಿಮೀನುಗಳ ಕೊಡೆಯ ಅಂಚಿನಲ್ಲಿ ಎಂಟು ಅಥವಾ ಹೆಚ್ಚು ರೋಪೇಲಿಯ ಎಂಬ ಸಂವೇದನಾಂಗಗಳಿವೆ(ಜ್ಞಾನೇಂದ್ರಿಯ).ಬಾಯಿಯನ್ನು ಹೊತ್ತಿರುವಂತೆ ವೀಲಂ ಕೊಳವೆಯಿರುವುದಿಲ್ಲ.ಜಠರದ ಮಧ್ಯದಿಂದ ತ್ರಿಜ್ಯನಾಳಗಳು ಕೊಡೆಯಾಕೃತಿಯ ದೇಹದ ಅಂಚಿಗೆ ಸಾಗಿ ಅಂಚಿನ ಸುತ್ತ ಹಾದಿರುವ ಉಂಗುರದ ನಾಳಕ್ಕೆ ಸೇರುತ್ತವೆ.ತ್ರಿಜ್ಯನಾಳಗಳು ಬೇಕಾದ ಹಾಗೆ ಕವಲೊಡೆದಿದ್ದು ಒಂದಕ್ಕೊಂದಕ್ಕೆ ಸಂಬಂಧಿಸಿಕೊಂಡಿರುತ್ತವೆ.ಈ ವರ್ಗದ ಎಲ್ಲ ಪ್ರಾಣಿಗಳೂ ನೀರಿನಲ್ಲಿ ಈಜಿಕೊಂಡು ಹೋಗಬಲ್ಲವು.ಸ್ಟಾರೊಮೆಡೂಸವೆಂಬ ಒಂದು ಪ್ರಾಣಿ ಮಾತ್ರ ಪಾಲಿಪ್ ಗಳಂತೆ ಪದಾರ್ಥಗಳಿಗೆ ಅಂಟಿಕೊಂಡು ಸ್ಥಾವರ ಜೀವನವನ್ನು ನಡೆಸುತ್ತದೆ.ಜೀವನಚರಿತ್ರೆಯಲ್ಲಿ ಪಾಲಿಪ್ ಕಿಶೋರಾವಸ್ಥೆಯಾಗಿದ್ದು(ಸ್ಕೈಫೊಸ್ಟೋಮ)ಆದರಿಂದ ಪ್ರೌಢಜೀವಿಗಳು ಮೊಗ್ಗೊಡೆದು ಬರುತ್ತವೆ.

೩ ಆಂಥೊಜ಼ೋವ:ಕಡಲಹೂ,ನೈಜಹವಳದ(ರಿಯಲ್ ಕಾರಲ್)ಹುಳು,ಕಡಲಬೀಸಣಿಗೆ,ಕಡಲಗರಿಗಳು(ಸೀ ಫೆದರ್ಸ್),ಕಡಲ ಸಸ್ಯಗಳು(ಸೀ ಪ್ಯಾನ್ಸಿ)ಮುಂತಾದ ಜೀವಿಗಳು ಈ ವರ್ಗದಲ್ಲಿ ಸೇರಿವೆ.ಇವೆಲ್ಲ ವಸ್ತುಗಳಿಗೆ ಅಂಟಿಕೊಂಡು ಸಾಗರದ ತಳದಲ್ಲಿ ಸ್ಥಾವರ ಜೀವನವನ್ನು ನಡೆಸುವ ಪಾಲಿಪ್ ರೂಪಗಳು.ಜಠರದ ಒಳಗೋಡೆಯಲ್ಲಿ ಕುಟುಕುಕಣಗಳಿರುತ್ತವೆ.ಜಠರಾವಕಾಶ ತ್ರಿಜ್ಯಮುಖವಾಗಿ ೬,೮ ಅಥವಾ ಹೆಚ್ಚು ವಿಭಾಗಗಳಿರುತ್ತದೆ.ತಾವು ಕಚ್ಚಿಕೊಂಡಿರುವ ಪದಾರ್ಥದ ಮೇಲೆ ಒಂದೆಡೆಯಿಂದ ಇನ್ನೊಂದೊಡೆಗೆ ಚಲಿಸಲು ಅವುಗಳ ತಳದಲ್ಲಿರುವ ಕಾಲಿಬಿಲ್ಲೆ(ಪೀಡಲ್ ಡಿಸ್ಕ್)ಸಹಕಾರಿಯಾಗಿದೆ.ಕೆಲವು ಪ್ರಭೇದದ ಕಡಲಹೂಗಳು ನೀರಿನಲ್ಲಿ ತೇಲು ಜೀವನ(ಪೆಲ್ಯಾಜಿಕ್)ನಡೆಸುತ್ತವೆ.ಮತ್ತೆ ಕೆಲವು ಪ್ರಭೇದಗಳು ನೀರಿನಲ್ಲಿ ಸುತ್ತಮುತ್ತ ತಿರುಗುತ್ತ ಅನಿರ್ದೇಶಿತ ರೀತಿಯಲ್ಲಿ ಮಾತ್ರ ಚಲಿಸಬಲ್ಲವು.ಡಿಂಭಾವಸ್ಥೆಯಲ್ಲಿ ಈ ವರ್ಗದ ಪ್ರಾಣಿಗಳೆಲ್ಲ ನೀರಿನಲ್ಲಿ ಈಜುತ್ತವೆ.ಲಿಂಗರೀತಿಯಲ್ಲಿ ಉತ್ಪನ್ನವಾಗುವ ಪಾಲಿಪ್ ಗಳು ಮೊಗ್ಗೊಡೆದು ಕವಲುಗಳನ್ನು ಮೂಡಿಸಿಕೊಂಡು ಆ ಮೂಲಕ ಕೂಡುಜೀವನವನ್ನು ಆರಂಭಿಸುತ್ತವೆ.ಕೆಲವು ಪಾಲಿಪ್ ಸಮುದಾಯಗಳು ಬಹುರೂಪತೆಯನ್ನು ಪ್ರದರ್ಶಿಸುತ್ತವೆ.ಹವಳದ ಹುಳುಗಳು ಎಲುಬುಗೂಡನ್ನು ಸಣ್ಣದಿಂದಲೂ ಕಡಲಬೀಸಣಿಗೆಗಳು ಕಠಿಣವಾದರೂ ಬಳುಕುವಂಥ ಸಸಾರಜನಕ ವಸ್ತುಗಳಿಂದಲೂ ರಚಿಸಿಕೊಳ್ಳುತ್ತವೆ.

ಕುಟ್ಟಿ ಕೃಷ್ಣನ್,ಪಿ ಸಿ:೧೯೧೫-. ಮಲಯಾಳಂ ಭಾಷೆಯ ಕಥೆಗಾರ.ಕಾದಂಬರಿಗಳನ್ನೂ ಕವಿತೆಗಳನ್ನೂ ಬರೆದಿದ್ದಾರೆ.ಇವರು ಪಾಲ್ ಘಾಟ್ ಜಿಲ್ಲೆಯ ಪೊನ್ನಾನಿ ಗ್ರಾಮದ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದರು.ಗ್ರಾಮದ ಪ್ರೌಢಶಾಲೆಯಲ್ಲಿ ಓದು ಮುಗಿಸಿ ವಿವಿಧ ಸ್ಥಳಗಳಲ್ಲಿ ನಾನಾರೀತಿಯ ಕೆಲಸ ಮಾಡಿ ಅಮೂಲ್ಯ ಅನುಭವಗಳಿಸಿಕೊಂಡರು.ಭಾರತದ ಆಕಾಶವಾಣಿಯ ಕೋಳಿಕೋಡ್ ಕೇಂದ್ರದಲ್ಲಿ ಕಲಾವಿದರಾಗಿ ಸೇರಿ ಮುಂದೆ ನಿರ್ಮಾಪಕರಾಗಿ ಕೆಲಸ ಮಾಡಿದರು.

ಇವರ ಮೊದಲ ಒಲವು ಕವಿತೆಗಳತ್ತ.ಆನಂತರ ಸಣ್ಣ ಕಥೆಗಳಲ್ಲಿ ತಮ್ಮ ಪ್ರೌಢಿಮೆಯನ್ನು ತೋರಿದರು.ನೀರ್ ಚಲುಗಳ್(ನೀರ ದಾರಿಗಳು)ಎನ್ನುವ ಸಣ್ಣ ಕಥೆಯಿಂದ ಹಿಡಿದು ಇದುವರೆಗೆ ಇವರ ಸಣ್ಣ ಕಥೆಗಳು ಹದಿನೈದು ಸಂಪುಟಗಳಲ್ಲಿ ಬಂದಿವೆ.ವ್ಯಕ್ತಿಗಳ ಮನಹೊಕ್ಕು ನೋಡುವ ಚೈತನ್ಯ,ಹಾಸ್ಯ ಮತ್ತು ಪ್ರಾಸಬದ್ಧ ಪದ್ಯಶೈಲಿಯ ಬರೆಹ ಇವರ ವೈಶಿಷ್ಟ್ಯ ಕವಿ ಹೃದಯವಿಲ್ಲದವರು ಉತ್ತಮ ಕಥೆ,ಕಾದಂಬರಿಗಳನ್ನು ಬರೆಯಲಾರರು ಎಂದು ಇವರ ಅಭಿಮತ.ಇವರ ಕಥೆಗಳಲ್ಲಿ ಗ್ರಾಮಕ್ಕೆ ಸಂಬಂಧಪಟ್ಟ ವಸ್ತುವಿಷಯಗಳೇ ಹೆಚ್ಚು.

ಇವರ ಮೊದಲ ಮತ್ತು ಅತ್ಯುತ್ತಮ ಕಾದಂಬರಿ ಉಮ್ಮಚು(೧೯೫೪)ಪ್ರೀತಿ,ಅಪರಾಧ ಮತ್ತು ದಂಡನೆಗಳಿಂದ ಕೂಡಿದ ಕಥೆಯಿದು.

ಆನಂತರ ಸುಂದರನ್ ಮಾರುಮ್ ಮತ್ತು ಸುಂದರಿಹಳುಮ್ ಎಂಬ ಕಾದಂಬರಿ ೧೯೫೮ರಲ್ಲಿ ಬಂತು.ಇದರಲ್ಲಿ ಕಥೆ ಗ್ರಾಮದಿಂದ ಪಟ್ಟಣ ಮತ್ತು ಪಟ್ಟಣದಿಂದ ಗ್ರಾಮಕ್ಕೆ ಓಡಾಡುತ್ತದೆ.ಇದು ಉಮ್ಮಚುಗಿಂತಲೂ ಹೆಚ್ಚು ವೈವಿಧ್ಯದಿಂದ ಕೂಡಿದೆ.ಇವರು ಇನ್ನೂ ಮೂರು ಕಾದಂಬರಿಗಳನ್ನು ರಚಿಸಿದ್ದಾರೆ.೧೯೫೯-೬೦ರಲ್ಲಿ ಸುಂದರನ್ ಮಾರುಮ್ ಮತ್ತು ಸುಂದರಿಹಳುಮ್ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಬಂತು.ಇವರು ಕೆಲವು ನಾಟಕಗಳನ್ನೂ ಬರೆದಿದ್ದಾರೆ.

ಕೃಷ್ಣನ್ ನಾಸ್ತಿಕರೂ ಅಲ್ಲ.ಯೋಗಿಗಳೂ ಅಲ್ಲ.ಇವರೊಬ್ಬ ಆಶಾವಾದಿ,ವಾಸ್ತವಿಕತೆಗೆ ಹೆಚ್ಚು ಬೆಲೆ ಕೊಡುತ್ತಾರೆ-ಎಂದು ಇವರನ್ನು ತಿಳಿದವರು ಹೇಳುತ್ತಾರೆ.ಮನುಷ್ಯರಲ್ಲಿ ಇವರಿಗಿರುವ ಆಸ್ಥೆ ಅಪಾರ.ಇವರ ಕೃತಿಗಳಲ್ಲಿ ರಾಕ್ಷಸಪಾತ್ರಗಳೇ ಇಲ್ಲ. (ಸಿ.ಆರ್.ಕೆ.)