ಪುಟ:Mysore-University-Encyclopaedia-Vol-6-Part-14.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರಂಥಾಲಯ. ಮೂವತ್ತು ವರ್ಷಗಳ ಹಿಂದೆ-ಎಂಬ ಶಿರೋನಾಮೆಯಡಿಯಲ್ಲಿ ಆಗಿನ ಮಹತ್ತ್ವದ ಘಟನೆಗಳನ್ನು ಕುರಿತು ಸಂಕ್ಷಿಪ್ತ ಸುದ್ದಿಯನ್ನು ಮರುಪ್ರಕಟಿಸುತ್ತಿವೆ. ಇವೆಲ್ಲವೂ ಹಿಂದಿನಿಂದಲೂ ಸಂಗ್ರಹಿಸಿಟ್ಟ ಸಂಪುಟಗಳಿಂದಲೋ ಮೈಕ್ರೊಫಿಲ್ಮ್ ಪ್ರತಿಗಳಿಂದಲೋ ತೆಗೆದವಾಗಿರುತ್ತದೆ.

ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ನಿಯತಕಾಲಿಕೆಗಳನ್ನು ಸಂಗ್ರಹಿಸುವುದು ಪತ್ರಿಕಾ ಗ್ರಂಥಾಲಯಗಳ ಒಂದು ಮುಖ್ಯ ಕೆಲಸ. ವೃತ್ತಿನಿಯತಕಾಲಿಕೆಗಳ ಪೈಕಿ ನ್ಯೂಸ್ ಪೇಪರ್ ವರ್ಲ್ಡ್ ಹಾಗೂ ವರ್ಲ್ಡ್ಸ್ ಪ್ರೆಸ್ ನ್ಯೂಸ್ ಅತ್ಯಂತ ಅನಿವಾರ್ಯ ಪತ್ರಿಕೆಗಳು.

೪. ಸರ್ಕಾರೀ ಪ್ರಕಟಣೆಗಳು ಮತ್ತು ಕರಪತ್ರಗಳು: ಇವು ಸರ್ಕಾರದ ನೀತಿಯ ಎಲ್ಲ ಮುಖಗಳ ಬಗೆಗೂ ಅಧಿಕೃತವಾದ ವಿವರಗಳನ್ನೂ ರಾಷ್ಟ್ರದ ಸಾಮಾಜಿಕ ಹಾಗೂ ಆರ್ಥಿಕ ಜೀವವನ್ನು ಕುರಿತು ಪ್ರಾಮಾಣಿಕವಾದ ಅಧಿಕೃತ ಅಂಕಿಅಂಶಗಳನ್ನೂ ಒದಗಿಸುತ್ತವೆ. ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಗಳಿಂದ ಹೊರಬರುವ ಗಣನೀಯ ಪ್ರಮಾಣದ ಕರಪತ್ರಗಳನ್ನೂ ಪತ್ರಿಕಾ ಗ್ರಂಥಾಲಯ ಪಡೆಯುತ್ತವೆ. ಅಮೂಲ್ಯ ವಿಷಯ ವಿವರಗಳನ್ನು ಕೊಡುವಂಥವನ್ನು ಮಾತ್ರವೇ ದಾಖಲು ಮಾಡಿಟ್ಟುಕೊಂಡು ಮಿಕ್ಕವನ್ನು ತ್ಯಜಿಸಲಾಗುತ್ತದೆ.

೫. ಛಾಯಚಿತ್ರಗಳು, ಪಡಿಯಚ್ಚು, ಇತ್ಯಾದಿ : ಇವನ್ನು ಅನೇಕ ಸುದ್ದಿಸಂಸ್ಥೆಗಳಿಂದ ಶುಲ್ಕ ಕೊಟ್ಟು ತರಿಸಿಕೊಳ್ಳಲಾಗಿತ್ತದೆ. ಪ್ರತಿನಿತ್ಯವೂ ಬರುವ ಛಾಯಚಿತ್ರಗಳ ಶೀರ್ಷಿಕೆಯನ್ನು ತಾಳೆ ನೋಡಲಾಗುತ್ತಲ್ಲದೆ ಅವನ್ನು ದಾಖಲು ಮಾಡಿಕೊಂಡು ಅನಂತರ ಆ ತಾರೀಖನ್ನು ಚಿತ್ರದ ಹಿಂಬದಿಯಲ್ಲಿ ನಮೂದಿಸಲಾಗುತ್ತದೆ. ಪತ್ರಿಕೆಯಲ್ಲಿ ಚಿತ್ರವನ್ನು ಉಪಯೋಗಿಸಿದರೆ ಆ ಚಿತ್ರದ ಅಡಿಬರೆಹದ ತುಣುಕೊಂದನ್ನು ಕತ್ತರಿಸಿ ಆ ಛಾಯಚಿತ್ರದ ಹಿಂಬದಿಯಲ್ಲಿ ಅಂಟಿಸಲಾಗುತ್ತದೆ.

ಪಡಿಯಚ್ಚುಗಳು ವೃತ್ತಪತ್ರಿಕೆಗಳಿಗೆ ಅತ್ಯಂತ ಉಪಯುಕ್ತವಾದ ಕಾರಣ ಅವನ್ನು ಕಾಪಾಡಿಡುವುದರಿಂದ ಮತ್ತೆ ಮತ್ತೆ ಒಂದೇ ವಸ್ತುವನ್ನು ಕುರಿತು ಹೊಸದಾಗಿ ಪಡಿಯಚ್ಚನ್ನು ತಯಾರಿಸುವುದು ತಪ್ಪುತ್ತದೆ. ತುರ್ತುಸಂದರರ್ಭದಲ್ಲಿ ಪತ್ರಿಕೆಗಳಿಗೆ ಬೇಕಾಗುವ ಚಿತ್ರವನ್ನು ಹೊಂದಿಸಲು ಇಂಥ ಪಡಿಯಚ್ಚುಗಳು ಬಹಳ ಸಹಾಯಕವಾಗುತ್ತವಾಗಿ ಪಡಿಯಚ್ಚುಗಳ ಜೋಪಾನಿಕೆ ಅವಶ್ಯವಾಗುತ್ತದೆ. ರಾಷ್ಟ್ರಪ್ರಮುಖರಿಗೆ, ಪ್ರತಿಷ್ಠಿತ ವ್ಯಕ್ತಿಗಳಿಗೆ ಸಂಬಂಧಿಸಿದ ಪಡಿಯಚ್ಚುಗಳನ್ನು ಜೋಪಾನಿಸಿಡುವುದು ವಾಡಿಕೆ.

ವರ್ಗೀಕರಣ, ಜೋಡಣೆ ಮತ್ತು ವಸ್ತುಗಳ ದಫ್ತರಿಕೆ: ಪತ್ರಿಕಾ ಗ್ರಂಥಾಲಯಕ್ಕೂ ಇತರ ಗ್ರಂಥಾಲಯಗಳಿಗೂ ಇರುವ ಮೂಲಭೂತ ವ್ಯತ್ಯಾಸಗಳಿಂದಾಗಿ ಪ್ರತಿಯೊಬ್ಬ ಪತ್ರಿಕಾ ಗ್ರಂಥಾಪಾಲನೂ ತನಗೆ ಸೂಕ್ತವೆನಿಸಿದ ರೀತಿಯಲ್ಲಿ ವರ್ಗೀಕರಣ ವಿಧಾನವನ್ನು ರೂಪಿಸಿಕೊಳ್ಳುತ್ತಾನೆ. ಈ ವಿಧಾನಗಳು ಆಯಾ ಪತ್ರಿಕೆಯ ಅಗತ್ಯಕ್ಕೆ ತಕ್ಕಂತೆ ಬೇರೆಬೇರೆಯಾಗಿರಲು ಸಾಧ್ಯ.

ದಫ್ತರಿಕೆ: ವಿದೇಶಗಳಲ್ಲಿನ ಪತ್ರಿಕಾ ಗ್ರಂಥಾಲಯಗಳಲ್ಲಿ ಪತ್ರಿಕಾ ತುಣುಕುಗಳನ್ನು ಜೀವನಚರಿತ್ರೆ, ಸಾಮಾನ್ಯವಿಷಯಗಳು ಮತ್ತು ಹೊರರಾಷ್ಟ ವಿಷಯಗಳು-ಎಂಬ ಮೂರು ಮುಖ್ಯ ವಿಭಾಗಗಳಲ್ಲಿ ದಫ್ತರಿಸುತ್ತಾರೆ. ಟೈಂಸ್ ಆಫ್ ಇಂಡಿಯಾ ಗ್ರಂಥಾಲಯದಲ್ಲಿ ದಫ್ತರಗಳನ್ನು ಸಾಮಾನ್ಯ, ಗೃಹ ವಿದೇಶ ಮತ್ತು ಜೀವನಚರಿತ್ರೆ ಎಂಬ ನಾಲ್ಕು ಮುಖ್ಯ ಗುಂಪುಗಳಾಗಿ ವಿಂಗಡಿಸಿದ್ದಾರೆ. ಸಾಮಾನ್ಯ ವಿಷಯಗಳ ದಫ್ತರಗಳು ಸ್ವದೇಶ ಹಾಗೂ ವಿದೇಶಗಳಲ್ಲಿ ನಡೆಯುವ ಘಟನೆಗಳಿಗೆ ಸಂಬಂಧಿಸಿದ್ದು ಭೌಗೋಳಿಕ ಅಂಶಗಳಿಗೆ ಅತೀತವಾಗಿರುತ್ತವೆ. ಈ ತುಣುಕುಗಳ ಜೋಡಣೆಯಲ್ಲಿ ಸಾಮಾನ್ಯವಾಗಿ ನಿಘಂಟಿನ ಕ್ರಮವನ್ನೇ ಅನುಸರಿಸಲಾಗುತ್ತದೆ. ಕೆಲವು ಗ್ರಂಥಾಲಯಗಳಲ್ಲಿ ಎರಡೂ ಪದ್ಧತಿಗಳನ್ನು ಬಳಸುವುದುಂಟು. ಯಾವುದೇ ವಿಧಾನದಲ್ಲಿ ಸಾಕಷ್ಟು ಪ್ರಮಾಣದ ಸೂಚಿ ಉಲ್ಲೇಖಗಳಿರಬೇಕಾದದ್ದು ಅಗತ್ಯ. ಗೃಹವಿಷಯಗಳ ದಫ್ತರುಗಳನ್ನು ಮುಖ್ಯ ವರ್ಗಗಳಾಗಿಯೂ ಅನಂತರ ಉಪ ವಿಭಾಗಗಳಾಗಿಯೂ ವಿಂಗಡಿಸುವುದುಂಟು. ಟೈಂಸ್ ಆಫ್ ಇಂಡಿಯಾ ಗ್ರಂಥಾಲಯದಲ್ಲಿ ಈ ವಿಭಾಗಗಳನ್ನು ಅಕ್ಷರಾನುಕ್ರಮನವಾಗಿ ಜೋಡಿಸಲಾಗಿದೆ. ವಿಶೇಷ ವಿಷಯಗಳ ದಫ್ತರುಗಳಿಲ್ಲಿ ಪ್ರತಿಯೊಂದು ರಾಷ್ಟ್ರಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ದಫ್ತರುಗಳಿರುತ್ತವೆ. ಇವನ್ನೂ ಅಕ್ಷರಾನುಕ್ರಮವಾಗಿ ಜೋಡಿಸಲಾಗುತ್ತದೆ. ಆಮೇಲೆ ಪ್ರತಿಯೊಂದು ರಾಷ್ಟ್ರದ ದಫ್ತರದಲ್ಲಿ ವಿಷಯ ಹಾಗೂ ಅದಾ ಉಪವಿಭಾಗಗಳ ಪ್ರಕಾರ ವರ್ಗೀಕರಣ ನಡೆದಿರುತ್ತದೆ. ಕಾಮನ್‍ವೆಲ್ತ್ ಅಥವಾ ಏಷ್ಯನ್ ವ್ಯವಹಾರಗಳನ್ನು ಕುರಿತ ವಿಶಿಷ್ಟ ಗ್ರಂಥಾಲಯಗಳು ಆ ವಿಷಯಗಳ ಮೇಲೆ ಅತ್ಯಂತ ವ್ಯಾಪಕವಾದ ವರ್ಗೀಕರಣಕ್ಕೆ ಅವಕಾಶ ಮಾಡಿಕೊಂಡಿರುತ್ತದೆ. ಜೀವನ ಚರಿತ್ರೆಗೆ ಸಂಬಂಧಿಸಿದ ದಫ್ತರುಗಳನ್ನು ಪ್ರತಿಯೊಬ್ಬ ವ್ಯಕ್ತಿಗೆ ಸಂಬಂಧಪಟ್ಟಂತೆ ತುಣುಕುಗಳನ್ನು ತೆಗೆದು ಸಂಗ್ರಹಿಸಿ ಬೇರೆ ಬೇರೆ ಮಡಿಕೆಗಳಲ್ಲಿ ಅಕ್ಷರಾನುಕ್ರಮದಲ್ಲಿ ಇಡಲಾಗಿತ್ತದೆ. ಕೆಲವು ಗ್ರಂಥಾಲಯಗಳಲ್ಲಿ ಸಂಖ್ಯಾ ಪದ್ಧತಿ ಇದ್ದು, ನಿರ್ದಿಷ್ಟ ವ್ಯಕ್ತಿಗೆ ಒಂದು ನಿರ್ದಿಷ್ಟ ಸಂಖ್ಯೆಯನ್ನು ನಿಗದಿ ಮಾಡಲಾಗುತ್ತದೆ.

ಸರ್ಕಾರಿ ಪ್ರಕಟಣೆಗಳು, ಕರಪತ್ರಗಳು ಮತ್ತು ವರದಿಗಳು ಭಾರೀ ಗಾತ್ರವಾಗಿಲ್ಲದಾಗ ಸೂಕ್ತ ಮಡಿಕೆಯಲ್ಲಿ ಅವನ್ನು ಇತರ ತುಣುಕುಗಳೊಂದಿಗೆ ಇಡುವುದು ಸಾಮಾನ್ಯ ಪದ್ಧತಿ. ರಾಯ್‍ಟರ್ ಮತ್ತು ದಿ ಪ್ರೆಸ್ ಅಸೋಸಿಯೇಷನ್ ಹೀಗೆ ಮಾಡುತ್ತವೆ. ಪ್ರಕಟಣೆಗಳು ಭಾರಿ ಗಾತ್ರದವಾದಾಗ ಪಟ್ಟಿಗೆ ದಫ್ತರ ಪದ್ಧತಿಯನ್ನು ಅನುಸರಿಸುತ್ತಾರೆ.

ಒಬ್ಬ ವ್ಯಕ್ತಿಯ ಛಾಯಚಿತ್ರವನ್ನು ಆತನ ಹೆಸರಿನಡಿಯಲ್ಲಿ ದಫ್ತರಿಸಲಾಗುತ್ತದೆ. ಸಮೂಹಚಿತ್ರವಾದರೆ, ಆ ಸಮೂಹದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯಾರಿದ್ದರೋ ಅವರ ಹೆಸರಿನಲ್ಲಿ ಫೈಲು ಮಾಡಿ, ಮಿಕ್ಕವರಿಗೆ ಸೂಚಿ ಉಲ್ಲೇಖಗಳನ್ನು ಕೂಡಲಾಗುತ್ತದೆ. ಚಿತ್ರಸ್ವದೇಶದ ಒಂದು ಘಟನೆಯನ್ನೋ ವಿಷಯವನ್ನೋ ತಿಳಿಸುವುದಿದ್ದರೆ, ಆಗ ಆ ಚಿತ್ರವನ್ನು ಸಾಮಾನ್ಯ ವಿಷಯಗಳ ವಿಭಾಗದಲ್ಲಿ ಆ ನಿರ್ದಿಷ್ಟ ಘಟನೆ ಅಥವಾ ವಿಷಯದ ಅಡಿಯಲ್ಲಿ ಜೋಡಿಸಲಾಗುತ್ತದೆ.


ಸುದ್ದಿಸೂಚಿಗಳು ಮತ್ತು ಸೂಚೀಕರಣ: ಯಾವುದೇ ವೃತ್ತಪತ್ರಿಕಾ ಗ್ರಂಥಾಲಯದಲ್ಲಿ ಸುದ್ದಿಗೆ ಸಾಕಷ್ಟು ಪ್ರಮಾಣದ ಸೂಚಿಗಳನ್ನು ಒದಗಿಸುವುದು ಅನಿವಾರ್ಯ. ಆದರ್ಶರೀತಿಯ ಸೂಚೀಕರಣದಲ್ಲಿ ಬರಲಿರುವ ಘಟನೆಗಳ ಪ್ರಸಕ್ತ ಸುದ್ದಿಗಳ ಮತ್ತು ಆಗಿಹೋದ ಘಟನೆಗಳು, (ಸ್ವದೇಶ ಹಾಗು ವಿದೇಶಗಳದ್ದು) ಇತರ ವೃತ್ತಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ವಿಷಯಗಳನ್ನು ಕುರಿತ ಪ್ರಕಟಿತ ಸೂಚಿಗಳು, ಸ್ವಂತ ವೃತ್ತಪತ್ರಿಕೆಯ ವಿಷಯಗಳ ಸೂಚಿ, ಗ್ರಂಥಾಲಯದಲ್ಲಿನ ವಿಷಯ ಮೂಲಗಳಿಗೆ ಸಾಮಾನ್ಯ ಹಾಗೂ ವಿಶಿಷ್ಟ ಸೂಚಿಗಳು-ಹೀಗೆ ವಿವಿಧ ಬಗೆಯ ಸೂಚಿಗಳು ಇರುವುದುಂಟು. ಬರಲಿರುವ ಘಟನೆಗಳನ್ನು ಕುರಿತು ಕಮಿಂಗ್ ಇವೆಂಟ್ ಇನ್ ಬ್ರಿಟೆನ್ ಎಂಬ ಹೆಸರಿನಲ್ಲಿ ಬ್ರಿಟಿಷ್ ಟ್ರಾವ್ಯಲ್ ಅಂಡ್ ಹಾಲಿಡೇಸ್ ಅಸೋಸಿಯೇಷನ್ ಪ್ರಕಟಿಸುತ್ತದೆ. ಬುಲೆಟಿನ್ ಆಫ್ ದಿ ಯುನೈಟೆಡ್ ನೇಷನ್ ಎಂಬುದು ಮುಂದೆ ಬದರಲಿರುವ ಅಂತಾರಾಷ್ಟ್ರೀಯ ಸಮ್ಮೇಳನಗಳ ತಾರೀಕುಗಳನ್ನು ಒದಗಿಸುತ್ತದೆ.

ಪ್ರಸಕ್ತ ಘಟನೆಗಳನ್ನು ಕುರಿತಂತೆ ಕೀಸಿಂಗ್ಸ್ ಕಾಂಟೆಂಪೊರರಿ ಆರ್ಕೈವ್ಸ್ ರೆಕಾರ್ಡ್ಸ್ ಅಂಡ್ ಸ್ಟ್ಯಾಟಿಸ್ಟಿಕ್ಸ್ ಎಂಬುದು ಎಕಾನಮಿಸ್ಟ್ ಪತ್ರಿಕೆಗೆ ಪುರವಣಿಯಾಗಿ ಪ್ರಕಟವಾಗುತ್ತಿದೆ. ಇವಲ್ಲದೆ ಗತವರ್ಷಗಳಲ್ಲಿ ಸಂದ ಘಟನೆಗಳನ್ನು ಅಂಕಿಅಂಶಗಳ ಸಮೇತ ನೀಡುವಂಥ ವಾರ್ಷಿಕ ಪುಸ್ತಕಗಳನ್ನು ಗ್ರಂಥಾಲಯ ಒಳಗೊಂಡಿರುತ್ತದೆಯಲ್ಲದೆ ಅವುಗಳ ಸೂಕ್ತ ವರ್ಗೀಕರಣ, ಸೂಚೀಕರಣ, ದಫ್ತರಿಕೆಗಳು ನಡೆದಿರುತ್ತವೆ.

ಪ್ರತಿವರ್ಷವೂ ಪತ್ರಿಕಾ ತುಣುಕುಗಳ ಹೊಸ ಸರಣಿಯನ್ನು ಪ್ರಾರಂಭಿಸುವುದು ಪತ್ರಿಕಾ ಗ್ರಂಥಾಲಯಗಳ ಒಂದು ಪದ್ಧತಿ. ಹಿಂದಿನ ವರ್ಷದ ತುಣುಕುಗಳಲ್ಲಿ ಬೇಡವಾದದ್ದೆಲ್ಲವನ್ನು ತೆಗೆದುಹಾಕಿ, ಮುಖ್ಯವಾದವನ್ನು ಉಗ್ರಾಣಕ್ಕೆ ಸಾಗಿಸಿ, ಹೊಸ ಸರಣಿಗೆ ಸ್ಥಳಾವಕಾಶ ಮಾಡಲಾಗುತ್ತದೆ. (ಎಚ್.ಎ.ಕೆ.)

9. ಚಲನಚಿತ್ರ ಗ್ರಂಥಾಲಯಗಳು: ಗ್ರಂಥಗಳನ್ನು ಹೇಗೋ ಹಾಗೆ ಹಲವಾರು ವಿಷಯಗಳಿಗೆ ಸಂಬಂಧಿಸಿದ ಚಲನಚಿತ್ರಗಳ ಫಿಲ್ಮುಗಳನ್ನೂ ಸಂಗ್ರಹಿಸಿ, ವರ್ಗೀಕರಿಸಿ, ವಿತರಣೆ ಮಾಡಲು ಏರ್ಪಟ್ಟ ಸಂಸ್ಥೆ. ಮಕ್ಕಳಿಗೆ ಆಸಕ್ತಿ ಹುಟ್ಟಿಸುವಂಥ ಬೋಧಪ್ರದವಾದ ವಿಷಯವನ್ನೋ ಅಥವಾ ಸಾರ್ವಜನಿಕರ ಬೌದ್ಧಿಕ ಪ್ರಜ್ಞೆಯನ್ನು ಉದ್ದೀಪನಗೊಳಿಸುವ ಇನ್ನಾವುದೇ ವಿಷಯವನ್ನೋ ಅಥವಾ ಐತಿಹಾಸಿಕ ಸಾಮಾಜಿಕ ಘಟನೆಗಳನ್ನು ಕುರಿತಂಥ ಚಲನಚಿತ್ರಗಳಿಗೆ ಅಗತ್ಯವಿರುವ ಕೆಲವಾರು ಸರ್ವೇಸಾಮಾನ್ಯ ಚಿತ್ರವಿಷಯಗಳನ್ನೋ ಕುರಿತಂತೆ ಪೂರ್ಣ ಮಾಹಿತಿಗಳನ್ನು ಒದಗಿಸುವಂಥ ಚಲನಚಿತ್ರಗಳನ್ನು ಕಾಪಾಡಿಡಬೇಕಾಗುತ್ತದೆ. ಇಂಥ ಚಲನಚಿತ್ರಗಳ ಪ್ರದರ್ಶನದ ಅಗತ್ಯ ಆಗಾಗ ಕಂಡುಬರುವುದುಂಟು. ಆರ್ಥಿಕ ದೃಷ್ಠಿಯಿಂದ, ಸಮಯದ ದೃಷ್ಠಿಯಿಂದ ಮತ್ತು ಬೇಡಿಕೆಯ ದೃಷ್ಠಿಯಿಂದ ಇಂಥವನ್ನು ಬೇಕಾದ ಸಮಯದಲ್ಲಿ ತಯಾರಿಸುವುದು ದುಸ್ತರವಾಗಬಹುದು. ಆದ ಕಾರಣ ಒಮ್ಮೆ ತಯಾರಾದ ಚಲನಚಿತ್ರಗಳನ್ನು-ಅಂದರೆ ಫಿಲ್ಮುಗಳನ್ನು (ನೆಗೆಟಿವ್ಸ್-ವಿಷಯಮಪ್ರತಿಗಳು) ಬೇಡಿಕೆಗೆ ತಕ್ಕಂತೆ ಬೇಕಾದಷ್ಟು ಪ್ರತಿ ಮಾಡಿಟ್ಟುಕೊಳ್ಳಬಹುದು. ಚಲನಚಿತ್ರಸುರುಳಿಗಳ (ನೆಗೆಟಿವ್ ರೋಲ್ಸ್) ಸಂಗ್ರಹಣೆ, ವರ್ಗೀಕರಣ ಮತ್ತು ಅಗತ್ಯ ಬಿದ್ದಾಗ ಪ್ರದರ್ಶನಕ್ಕೋಸ್ಕರ ಎರವಲು ನೀಡುವುದು-ಇವೇ ಗ್ರಂಥಾಲಯದ ಪ್ರಮುಖ ಕರ್ತವ್ಯಗಳು.

ಚಲನಚಿತ್ರ ಗ್ರಂಥಾಲಯ ವ್ಯವಸ್ಥೆ ಚಲನಚಿತ್ರೋದ್ಯಮದಷ್ಟೆ ಹಳೆಯದು. ಈ ಗ್ರಂಥಾಲಯಗಳನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಿದ್ದು ಕೇವಲ ಏಳು ದಶಕಗಳ ಹಿಂದೆ. 1935ರಲ್ಲಿ ಸ್ಥಾಪನೆಯಾದ ಗ್ರೇಟ್ ಬ್ರಿಟನ್ನಿನ ರಾಷ್ಟ್ರೀಯ ಚಲನಚಿತ್ರ ಗ್ರಂಥಾಲಯದ ಸಂಗ್ರಹದಲ್ಲಿ 25,000ಕ್ಕೂ ಹೆಚ್ಚಿನ ಚಲನಚಿತ್ರಗಳಿದ್ದವು. ಭಾರದಲ್ಲಿ ಇಂಥ ವ್ಯವಸ್ಥೆ ಆದದ್ದು ಎರಡನೆಯ ಮಹಾಯುದ್ಧದ ಮುಕ್ತಾಯದ ವೇಳೆಗೆ ಹೀಗೆ ರೂಪುಗೊಂಡ ಗ್ರಂಥಾಲಯವನ್ನು ಸಾಕ್ಷ್ಯಚಿತ್ರಗಳನ್ನೂ ವಾರ್ತಾಚಿತ್ರಗಳನ್ನೂ ತಯರಿಸುತ್ತಿರುವ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಶಾಖೆಯ ಚಲನಚಿತ್ರ ವಿಭಾಗಕ್ಕೆ ಸೇರಿಸಿದ್ದು 1948ರಲ್ಲಿ.