ವಿಷಯಕ್ಕೆ ಹೋಗು

ಪುಟ:Mysore-University-Encyclopaedia-Vol-6-Part-4.pdf/೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾಂಜಾ ಗಿಡ ಕಾಂಡಭಾಗವೆಲ್ಲ ಟೊಳ್ಳಷ್ಟೆ;ಕಾಂಡದ ಎಪಿಡರ್ಮಿಸ್ ಮತ್ತು ಕೇಂಬಿಯಮುಗಳ ನಡುವೆ ಇರುವ ಆಹಾರಸಾಗಣೆಯ ಅಂಗಾಂಶವಾದ ಫ್ಲೋಯೆಮ್ ಅಂಗಾಂಶವೇ ಗಾಂಜಾಗಿಡದ ನಾರು.ಗಂಡು ಹೂಗಳು ಗಾತ್ರದಲ್ಲಿ ಹೆಣ್ಣು ಹೂಗಳಿಗಿಂತ ದೊಡ್ಡವಾದ್ದರಿಂದ ಸುಲಭವಾಗಿ ಕಣ್ಣಿಗೆ ಬೀಳುತ್ತವೆ.ಅದೇ ಹೆಣ್ಣು ಹೂಗಳು ತುಂಬಾ ಚಿಕ್ಕವಾದುದರಿಂದ ಗಮನವನ್ನು ಸೆಳೆಯವು.ಕಾಂಡದ ತುದಿ ಭಾಗಗಳಲ್ಲಿ ಮತ್ತು ಕಾಂಡದುದ್ದಕ್ಕೆ ಪ್ರತಿ ಗೆಣ್ಣೆನಲ್ಲು ಹೂಗಳು ಗೊಂಚಲು ಗೊಂಚಲಾಗಿ ಬಿಡುತ್ತವೆ.ಬೀಜಗಳು ಗಾತ್ರದಲ್ಲಿ ಗೋದಿ ಕಾಳಿನಷ್ಟಿದ್ದು ಕೊಂಚ ಗುಂಡಾಗಿರುತ್ತದೆ.ಅವು ಪೂರ್ಣ ಬಲಿಯಲು ಇಷ್ಟೇ ಕಾಲ ಹಿಡಿಯುತ್ತದೆಂದು ಹೇಳಲು ಸಾಧ್ಯವಿಲ್ಲ.

      ನಾರಿನ ಉತ್ಪಾದನೆಗೋಸ್ಕರ ಈ ಗಿಡದ ಸಾಗುವಳಿ ವಿಧಾನಗಳು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆಯಾದರೂ ಎಲ್ಲ ಕಡೆಗೂ ಅನುಸರಿಸುವ ಕೆಲವು ಸಾಮನ್ಯ ಕ್ರಮಗಳಿವೆ.ಸಕಾಲದಲ್ಲಿ ಬೀಜ ಬಿತ್ತುವುದು,ಅಚ್ಚುಕಟ್ಟಾಗಿ ಹದ ಮಾಡಿದ ಭೂಮಿಯನ್ನೇ ಉಪಯೊಗಿಸುವುದು,ಫಲವತ್ತಾಗಿಲ್ಲದಲ್ಲಿ ಸಾಕಷ್ಟು ಗೊಬ್ಬರ ಕೊಡುವುದು ಹಾಗೂ ದಟ್ಟವಾಗಿ ಬೀಜ ಬಿತ್ತುವುದು ಎಲ್ಲೆಡೆಗಳಲ್ಲೂ ವಾಡಿಕೆ.ಒಂದು ಎಕರೆಗೆ ೧೫-೨೦ ಕೆಜಿ.ಬೀಜ ಬೇಕಾಗುತ್ತದೆ.ಬೆಲ್ಜಿಯಂ ಮತ್ತು ಫ಼್ರಾನ್ಸಿನ ಉತ್ತರದ ಪ್ರದೇಶಗಳಲ್ಲಿ ಎಕರೆಗೆ ೪೦ ಕೆಜಿ.ಬೀಜವನ್ನು ಬಿತ್ತುವುದುಂಟು.ಭೂಮಿಯ ಮೇಲ್ಮೈಯಲ್ಲಿ ಎಂದರೆ ೧-೨.೫ ಸೆಂ.ಮೀ ಆಳದಲ್ಲಿ ಬೀಜ ನೆಡುತ್ತಾರೆ.ಬಿತ್ತಿದ ಆನಂತರ ಆರೈಕೆ ಅಷ್ಟಾಗಿ ಬೇಕಿಲ್ಲ.ಯೂರೋಪಿನ ಕೆಲವು ಭಾಗಗಳಲ್ಲಿ ಕೈಯಿಂದ ಗಿಡಗಳನ್ನು ಬುಡುಸಮೇತ ಕೀಳುವುದು ರೂಢಿಯಲ್ಲಿದೆ.ಉಳಿದ ದೇಶಗಳ ಬಹುಭಾಗಗಳಲ್ಲಿ ಗಿಡವನ್ನು ನೆಲದಿಂದ ಕೊಂಚ ಮೇಲಕ್ಕೆ ಕುಡುಗೋಲಿನಿಂದ ಕತ್ತರಿಸುತ್ತಾರೆ.
      ಗಿಡಗಳ ಕಟಾವಾದ ಬಳಿಕ ಅವುಗಳಿಂದ ನಾರು ತೆಗೆಯಲು ಅವನ್ನು ಕೊಳೆಸಬೇಕು.ಕೊಳೆಸುವಿಕೆಯಲ್ಲಿ ಮುಖ್ಯವಾಗಿ ಎರಡು ವಿಧಾನಗಳಿವೆ:ನೀರಿನಲ್ಲಿ ಅದ್ದಿಟ್ಟು ಕೊಳೆಸುವುದು ಅಥವಾ ಇಬ್ಬನಿಯಲ್ಲಿ ಗಿಡಗಳನ್ನು ಹರವಿಟ್ಟು ಕೊಳೆಸುವುದು.ಅಮೆರಿಕದಲ್ಲಿ ಇಬ್ಬನಿಯಿಂದ ಕೊಳೆಸುವುದು ಸಾಮಾನ್ಯ.ನೀರಿನಲ್ಲಿ ಅದ್ದಿಟ್ಟು ಕೊಳೆಸುವುದು ಇತರ ದೇಶಗಳಲ್ಲಿ ಅನುಸರಿಸುವ ಮಾರ್ಗ.ಇಬ್ಬನಿಯಲ್ಲಿ ಕಟಾವಾದ ಗಿಡಗಳನ್ನು ಹೊಲಗಳಲ್ಲೇ ಕೊಳೆಯಲು ಬಿಡುತ್ತಾರೆ.ಕೆಲವು ಏಕಾಣು ಜೀವಿಗಳು ಹಾಗೂ ಶಿಲೀಂಧ್ರಗಳು ನಾರಿನ ಸುತ್ತಲಿರುವ ಸಸ್ಯಾಂಶವನ್ನು ಹೊಕ್ಕು ಅವನ್ನು ಕೊಳೆಸುತ್ತವೆ.ಹೀಗೆ ಸಸ್ಯಾಂಶ ಮಾತ್ರ ಕೊಳೆಯುವುದರಿಂದ ನಾರನ್ನು ಸುಲಭವಾಗಿ ಬೇರ್ಪಡಿಸಬಹುದು.ಕೊಳೆಯಲು ಬೇಕಾಗುವ ಕಾಲಾವಧಿ ಹವಾ ಪರಿಸ್ಥಿತಿಯನ್ನು ಅವಲಂಬಿಸಿ ಒಂದು ವಾರದಿಂದ ಕೆಲವು ತಿಂಗಳುಗಳಷ್ಟು ವ್ಯತ್ಯಾಸವಾಗುತ್ತದೆ. 
      ನೀರಿನಲ್ಲಿ ಅದ್ದಿ ಕೊಳೆಸುವ ಕ್ರಮದಲ್ಲಿ ಮೊದಲು ಕಟಾವಾದ ಗಿಡಗಳನ್ನು ಪೂರ್ಣವಾಗಿ ಒಣಗಿಸಬೇಕು.ಆನಂತರ ಇವನ್ನು ನೀರಿನಲ್ಲಿ ಅದ್ದಿಡಬೇಕು.ಏಕಾಣುಜೀವಿಗಳು ಹಾಗೂ ನೀರು ಇವೆರಡರಿಂದಾಗಿ ನಾರಿನ ಸುತ್ತಲಿರುವ ಸಸ್ಯಾಂಶ ಕೊಳೆಯಲು ಅವಕಾಶವಾಗುತ್ತದೆ. ಈ ಕ್ರಮದಿಂದ ನಾರು ಪಡೆಯಲು ೧೦-೨೦ ದಿವಸಗಳಾಗುತ್ತವೆ.ಕೊಳೆಯಲು ಬೇಕಾಗುವ ಅವಧಿ ನೀರಿನ ಉಷ್ಣತೆಯನ್ನು ಸೂಕ್ತವಾಗಿ ನಿಯಂತ್ರಿಸಿದರೆ ಕೇವಲ ೩-೫ ದಿವಸಗಳಲ್ಲಿ ಕೊಳೆಯುತ್ತದೆ.ಇದಕ್ಕೆ ಬೇಕಾಗುವ ಸೂಕ್ತ ಉಷ್ಣತೆ ೯೦* ಫ್ಯಾ.
      ಇಬ್ಬನಿಯಿಂದ ಕೊಳೆಸಿದ ಗಿಡಗಳನ್ನು ಕೆಲವು ಪ್ರದೇಶಗಳಲ್ಲಿ ಕಂತೆ ಕಟ್ಟುವುದಿಲ್ಲ.ಅಮೆರಿಕ ಸಂಯುಕ್ತಸಂಸ್ಥಾನದ ಉತ್ತರ ಭಾಗಗಳಲ್ಲಿ ಗಿಡಗಳನ್ನು ಒಟ್ಟಿಗೆ ಸೇರಿಸಿ ಯೊಂತ್ರಗಳಿಂದ ಕಂತೆ ಕಟ್ಟುತ್ತಾರೆ.ಇದಾದ ಆನಂತರ ಕಂತೆಗಳನ್ನು ಒಣಗಿಸಲು ಯಾವ ವಿಶಿಷ್ಟಾಕ್ರಮವನ್ನೂ ಸಾಮಾನ್ಯವಾಗಿ ಅನುಸರಿಸುವುದಿಲ್ಲ.ಅವೇ ಒಣಗುತ್ತವೆ. ಆದರೆ ಅಮೆರಿಕ ಸಂಯುಕ್ತಸ್ಥಾನಗಳಲ್ಲಿ ಹಲವಾರು ಸಾಧನಗಳನ್ನು ಉಪಯೋಗಿಸಿ ಕೃತಕ ರೀತಿಯಲ್ಲಿ ಒಣಗಿಸುತ್ತಾರೆ.
      ಕೊಳತೆ ಗಿಡಗಳು ಸಾಕಷ್ಟು ಒಣಗಿದ ಆನಂತರ ನಾರನ್ನು ಬೇರ್ಪಡಿಸಲು ವಿವಿಧ ರೀತಿಯ ಯಂತ್ರ ಸಾಧನಗಳನ್ನು ಉಪಯೋಗಿಸಲಾಗುವುದು.ಈ ಸಾಧನೆಗಳಿಗೆ ಜಜ್ಜಿ ತುಂಡರಿಸುವ(ಬ್ರೇಕರ್ಸ್)ಸಾಧನಗಳು ಎಂದು ಹೆಸರು.ಏಕೆಂದರೆ ಇವು ಸಸ್ಯಾಂಶವೆಲ್ಲವನ್ನು ಕಬ್ಬಿನ ಗಾಣದಂತೆ ಜಜ್ಜಿ ತುಂಡರಿಸುತ್ತವೆ.ಈ ಸಂಸ್ಕಾರವಾದ ಆನಂತರ ನಾರನ್ನು ಇವುಗಳಿಂದ ಬೇರ್ಪಡಿಸಲಾಗುವುದು.ಒದರುವುದು,ಕೂರ್ಚ ಹೊಡೆಯುವುದು ಹಾಗೂ ಚಾಚುವುದರಿಂದ ನಾರನ್ನು ಬೇರ್ಪಡಿಸಿ ಚೊಕ್ಕ ಮಾಡುತ್ತಾರೆ.ಸಾಮಾನ್ಯವಾಗಿ ಈ ಕಾರ್ಯಗಳನ್ನು ಕೈಗಳಿಂದಲೇ ಮಾಡಿದರೂ ಅನೇಕ ಕಡೆ ಯಂತ್ರ ಸಾಧನಗಳನ್ನೂ ಉಪಯೊಗಿಸುವುದುಂಟು.ಈ ಸಾಧನಗಳನ್ನು ಉಪಯೋಗಿಸಿದಾಗ ನಾರು ತುಂಡಾಗುವ ಸಂಭವ ಉಂಟು.
      ಉತ್ಪಾದನಾ ಪರಿಮಾಣ:ಎಕರೆಗೆ ಉತ್ಪಾದನೆಯಾಗುವ ನಾರಿನ ಪರಿಮಾಣದಲ್ಲಿ ದೇಶದಿಂದ ದೇಶಕ್ಕೆ ವ್ಯತ್ಯಾಸ ಕಂಡುಬರುತ್ತದೆ.ಸಾಮನ್ಯವಾಗಿ ಇಳುವರಿ ಒಂದು ಎಕರೆಗೆ ೨೨೫-೮೨೦ ಕೆಜಿ.ಗಳವರೆಗೂ ಇರುವುದುಂಟು.ಎಕರೆಗೆ ಅತ್ಯಂತ ಕನಿಷ್ಠ ಉತ್ಪಾದನೆ ರಷ್ಯದಲ್ಲಿ ಹಾಗೂ ಅತ್ಯಂತ ಅಧಿಕ ಉತ್ಪಾದನೆ ಉತ್ತರ ಇಟಲಿಯಲ್ಲಿ.ಅಮೆರಿಕ ಸಂಯುಕ್ತಸ್ಥಾನಗಳಲ್ಲಿ ೯೦೦ ಕೆಜಿ.ನಾರು ಉತ್ಪಾದನೆಯಾದ ದಾಖಲೆಯಿದೆಯಾದರೂ ಸರಾಸರಿ ಉತ್ಪಾದನೆ ೪೦೦ ಕೆಜಿ.ಯನ್ನು ಮೀರಿಲ್ಲ.
      ಉಪಯೋಗಗಳು:ನಾರನ್ನು ಏಷ್ಯ ಮತ್ತು ಯೂರೋಪುಗಳಲ್ಲಿ ವಿವಿಧ ರೀತಿಯ ನೇಯ್ಗೆ ಸುರುಕುಗಳಿಗಾಗಿ ಒಂದಲ್ಲ ಒಂದು ಕಾಲದಲ್ಲಿ ಬಳಸಲಾಗಿದೆ.ಇದರಿಂದ ಅತ್ಯಂತ ನವುರಾದ ದಾರ ಹಾಗೂ ದಪ್ಪ ಹುರಿಗಳನ್ನು ತಯಾರಿಸಬಹುದು.ಅಮೆರಿಕ ಸಂಯುತಸ್ಥಾನಗಳಲ್ಲಿ ಗಾಂಜಾ ನಾರಿನಿಂದ ಟ್ವೈನ್ ದಾರವನ್ನು ತಯಾರಿಸುತ್ತಿದ್ದರು.ಕೃತಕ ಸ್ಪಂಜ್ ಮಾಡಲು ಈ ನಾರನ್ನು ೧೯೫೦ರ ಆನಂತರ ಉಪಯೋಗಿಸಿ ಕೊಳ್ಳಲಾಗುತ್ತದೆ.
   ಈ ಗಿಡದ ಬೀಜದಿಂದ ಎಣ್ಣೆಯೊಂದನ್ನು ತೆಗೆಯಬಹುದು.ಬೀಜದಲ್ಲಿ ಶೇ.೩೦ ಭಾಗ ಎಣ್ಣೆ ಉಂಟು.ಇದನ್ನು ಬಣ್ಣ,ವಾರ್ನಿಶ್ ಮತ್ತು ಸಾಬೂನು ತಯಾರಿಕೆಯಲ್ಲಿ ಬಳಸುತ್ತಾರೆ.ಅಲ್ಲದೆ ಬೀಜಗಳನ್ನು ಸಾಕುಪಕ್ಷಿಗಳ ಆಹಾರವಾಗಿ ಉಪಯೋಗಿಸುವುದಿದೆ.
         ಗಾಂಜಾ ಸೇವನೆ:ಗಾಂಜಾಗಿಡದ ಕುಡಿ ಹೂ,ಎಳೆಯಕಾಂಡ,ಎಲೆ ಮತ್ತು ಬೀಜಗಳಲ್ಲಿ ಔಷಧೀಯ ಗುಣವಿದೆ.ಈ ಪದಾರ್ಥವನ್ನೇ ಗಾಂಜಾ ಎನ್ನುವುದೂ ಉಂಟು.ಗಾಂಜಾದ ಮಾದಕ ಗುಣಕ್ಕೆ ಅದರಲ್ಲಿನ ಎಣ್ಣೆಯೇ ಕಾರಣ.ತೀವ್ರತೆಗೆ ತಕ್ಕಂತೆ ಗಾಂಜಾ ಮೂರು ಬಗೆಯದಾಗಿದೆ.
   ೧.ಅತ್ಯಂತ ಪ್ರಭಾವಶಾಲಿ ಮತ್ತೇರಿಸುವ ಬಗೆಃ ಬಲಿತಿರುವ ಹೆಣ್ಣು ಗಿಡಗಳ ಕುಡಿಗಳಿಂದ ಬರುವ ಗೋಂದಿನಿಂದ ಇದನ್ನು ತಯಾರುಮಾಡುತ್ತಾರೆ.ಉತ್ತರ ಆಫ಼್ರಿಕ,ಮಧ್ಯಪ್ರಾಚ್ಯ ಪ್ರದೇಶಗಳಲ್ಲಿ ಇದಕ್ಕೆ ಹಶೀಶ್ ಎನ್ನುತ್ತಾರೆ.ಇದನ್ನೇ ಭಾರತದಲ್ಲಿ ಚರಸ್ ಎನ್ನುವುದು.
   ೨.ಪ್ರಭಾವ ಅಷ್ಟು ಹೆಚ್ಚೂ ಅಲ್ಲ,ಕಡಿಮೆಯೂ ಅಲ್ಲ,ಮಧ್ಯಮ ರೀತಿಯ ಬಗೆ ಇದೇ ಗಾಂಜಾ ಎಂದು ಬಳಕೆಯಿದೆ.ಸಾಗುವಳಿ ಮಾಡಿದ ಗಿಡಗಳ ಕುಡಿಗಳಲ್ಲಿ ಬಿಡುವ ಹೂ ಮತ್ತು ಎಲೆಗಳಿಂದ ಇದನ್ನು ಪಡೆಯಲಾಗುತ್ತದೆ.
   ೩.ಪ್ರಭಾವ ಅತ್ಯಲ್ಪವಾಗಿರುವುದು ಮೂರನೆಯ ವಿಧ.ಇದನ್ನು ಭಾಂಗ್(ಭಂಗಿ)ಎಂದು ಕರೆಯುತ್ತಾರೆ. ಕಾಡುಗಿಡಗಳಂತೆ ಬೆಳೆದಿರುವ ಗಿಡಗಳ ಒಣ ಎಲೆಗಳು ಹಾಗೂ ಹೂ ಬಿಡುವ ಕೊಂಬೆಗಳನ್ನು ಕತ್ತರಿಸಿ ಇದನ್ನು ತೆಗೆಯಲಾಗುತ್ತದೆ.
           ಗಾಂಜಾ ಗಿಡದ ಯಾವ ಭಾಗಕ್ಕೆ ಆಗಲಿ ಅಥವಾ ಯಾವ ಭಾಗದಿಂದ ತೆಗೆದ ವಸ್ತುವಿಗಾಗಲಿ ಅಮೆರಿಕದಲ್ಲಿ ಮ್ಯಾರವಾನ ಎಂಬ ಸಾಮಾನ್ಯ ಹೆಸರು ರೂಢಿಯಲ್ಲಿದೆ.ಅಂದರೆ ಈ ವಸ್ತುವನ್ನು ಸೇವಿಸಿದರೆ ವ್ಯಕ್ತಿಯ ಶರೀರಕ್ರಿಯೆ ಹಾಗೂ ಮನಸ್ಸಿನ ಮೇಲೆ ಪರಿಣಾಮ ಬೀರುವಂತಿರಬೇಕು.ಮ್ಯಾರವಾನ ಪದ ಪೋರ್ಚುಗೀಸ್ ಭಾಷೆಯ ಮರಜಿ ಆಂಗೋ(ಮಾದಕವಸ್ತು ಎಂದು ಅರ್ಥ)ಎಮ್ಬುದರಿಂದ ಬಂದಿದೆ ಎಂದು ಊಹಿಸಲಾಗಿದೆ.ಅಮೆರಿಕದಲ್ಲಿ ಎಲ್ಲೆಡೆಗಳಲ್ಲೂ ಸುಲಭವಾಗಿ ಹಾಗೂ ಅತಿ ಕಡಿಮೆ ಬೆಲೆಗೆ ದೊರಕುವ ವಸ್ತು ಭಂಗಿ.ಅಶುದ್ಧ ಹಾಗೂ ಕೀಳುದರ್ಜೆಯ ವಸ್ತುವಿದು.ಇದರಿಂದ ಕೆಲವು ರೋಗಗಳೂ ಬರಬಹುದೆಮ್ದು ಹೇಳಲಾಗಿದೆ.
          ಗಾಂಜಾ ಮೊಟ್ಟಮೊದಲು ಔಷಧರೂಪದಲ್ಲಿ ಬಳಕೆಗೆ ಬಂದುದು ಪ್ರಾಚೀನ ಚೀನದಲ್ಲಿ.ಇದನ್ನು ಭಾರತ,ಆಫ಼್ರಿಕ,ಆನಂತರ ಯೂರೋಪು ದೇಶಗಳಲ್ಲೂ ಉಪಯೊಗಿಸಲಾಗುತ್ತಿತ್ತು ಮತ್ತು ಮಧ್ಯ ಮತ್ತು ದಕ್ಷಿಣ ಅಮೆರಿಕ ದೇಶಗಳ ಆದಿವಾಸಿಗಳಿಗೂ ಇದರ ಉಪಯೋಗ ಚೆನ್ನಾಗಿ ತಿಳಿದಿತ್ತು.ಇದನ್ನು ನೋವು ಮತ್ತು ಸಣ್ಣಪುಟ್ಟ ರೋಗಗಳಿಗೆ ಶಿಫಾರಸು ಮಾಡುತ್ತಿದ್ದರು.ಗಾಂಜಾದ ಬಗ್ಗೆ ೧೯೩೮ರ ಆನಂತರ ಗಮನಾರ್ಹವಾದ ಸಂಶೋಧನೆಗಳು ನಡೆದಿವೆ.ಇದರ ರಾಸಾಯನಿಕ ಸ್ವರೂಪ ಅತಿ ಜಟಿಲವಾದದ್ದು.ಇದರ ಪೂರ್ಣ ಅರಿವು ನಮಗಿನ್ನೂ ಆಗಿಲ್ಲ.ಟೆಟ್ರಹೈಡ್ರೊಕ್ಯನಾಬಿನಲ್(ಟಿ.ಎಚ್.ಸಿ.)ಎಂಬುದು ಗಾಂಜಾದ ಕ್ರಿಯಾಂಶ(ಆಕ್ಟಿವ್ ಪ್ರಿನ್ಸಿಪಲ್)ಎಂದು ವಿಜ್ಞಾನಿಗಳು ನಂಬಿದ್ದಾರೆ.ಕ್ಯಾನಾಬಿನಾಲಿನಲ್ಲಿ ಅನೇಕ ಸ್ವರೊಪಗಳಿವೆ.ಪ್ರತಿಯೊಂದು ಒಂದು ನಿರ್ದಿಷ್ಟ ರೀತಿಯ ಮಾದಕಾವಸ್ಥೆಗೆ ಕಾರಣವಾಗಬಹುದು.