ವಿಷಯಕ್ಕೆ ಹೋಗು

ಪುಟ:Mysore-University-Encyclopaedia-Vol-6-Part-4.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೭೦ 'ಗಾಂಧೀ, ಮೋಹನ್ ದಾಸ್ ಕರಮ್ ಚಂದ್'

ಅಲ್ಲಿಯ ರೈತರು ದೀರ್ಘಕಾಲದಿಂದ ಐರೋಪ್ಯ ಮತ್ತು ಭಾರತೀಯ ಭೂಮಾಲೀಕರ ಶೋಷಣೆಗೆ ಒಳಗಾಗಿದ್ದರು. ಗಾಂಧಿಯವರು ರಾಜೇಂದ್ರ ಪ್ರಸಾದರೊಂದಿಗೆ ಅಲ್ಲಿಯ ರೈತರ ಸ್ಥಿತಿಯನ್ನು ಕುರಿತು ವಿಚಾರಣೆಯಲ್ಲಿ ತೊಡಗಿದ್ದರು. ಬ್ರಿಟಿಷ್ ಸರ್ಕಾರ ಇದನ್ನು ಸಹಿಸಲಿಲ್ಲ. ಗಾಂಧಿಯವರು ಆ ಜಿಲ್ಲೆಯಿಂದ ಹೊರಗೆ ಹೋಗಬೇಕೆಂಬ ಆಜ್ಞೆ ಜಾರಿಯಾಯಿತು. ಗಾಂಧಿಯವರು ಅದನ್ನು ಉಲ್ಲಂಘಿಸಿದರು. ಭಾರತದಲ್ಲಿ ಮೊಟ್ಟೆ ಮೊದಲನೆಯ ಸತ್ಯಾಗ್ರಹವಿದು. ನ್ಯಾಯಾಲಯದಲ್ಲಿ ಅವರ ವಿಚಾರಣೆಯಾಯಿತು. ತಾವು ಆಜ್ಞೋಲ್ಲಂಘನೆ ಮಾಡಿದ್ದುಂಟೆಂದು ಗಾಂಧಿಯವರು ಒಪ್ಪಿಕೊಂಡರು. ಗವರ್ನರ್ ನಡುವೆ ಪ್ರವೇಶಿಸಿ, ವಿಚಾರಣಾ ಸಮಿತಿಯೊಂದನ್ನು ನೇಮಕ ಮಾಡಿದರು. ಗಾಂಧಿಯವರೂ ಸದಸ್ಯರಾಗಿದ್ದ ಆ ಸಮಿತಿಯ ಶಿಫಾರಸುಗಳು ಮೇರೆಗೆ ಚಂಪಾರಣ್ ರೈತರ ಸುಧಾರಣೆಗಾಗಿ ಕಾಯಿದೆ ಜಾರಿಗೆ ಬಂತು. ಅನಂತರ ಗಾಂಧಿಯವರ ಗಮನ ಅಹಮದಾಬಾದಿನ ಗಿರಿಣಿ ಕಾರ್ಮಿಕರತ್ತ ಹರಿಯಿತು. ಅವರಿಗೆ ನ್ಯಾಯವಾದ ವೇತನ ದೊರಕಬೇಕೆಂದು ಅವರು ಇಪ್ಪತ್ತೊಂದು ದಿನಗಳು ಮುಷ್ಕರವನ್ನು ಸಂಘಟಿಸಿದರು. ಅದೂ ಫಲಪ್ರದವಾಯಿತು.

ಬ್ರಿಟಿಷ್ ನ್ಯಾಯದಲ್ಲಿ ವಿಶೇಷ ನಂಬಿಕೆ ಇಟ್ಟಿದ್ದ ಮಹಾತ್ಮ ಗಾಂಧಿಯವರು ವೈಸ್ ರಾಯ್ ಲಾರ್ಡ್ ಚೆಮ್ಸ್ ಫರ್ಡನ ಅಪೇಕ್ಷೆಯಂತೆ ಒಂದನೆಯ ಮಹಾಯುದ್ಧದಲ್ಲಿ ಬ್ರಿಟನಿಗೆ ತಮ್ಮ ಬೆಂಬಲ ನೀಡಿದರು. ಆದರೆ ಅವರ ಈ ನಂಬಿಕೆ ಅಲುಗುವಂಥ ಘಟನೆಯೊಂದು ಅಷ್ಟರಲ್ಲಿ ಸಂಭವಿಸಿತು. ಜನರ ರಾಜಕೀಯ ಆಶೋತ್ತರಗಳನ್ನು ಸರ್ಕರ ಈಡೇರಿಸುವ ಬದಲು ಅವನ್ನು ಹತ್ತಿಕ್ಕುವ ಕ್ರಮ ಕೈಗೊಂಡಿತು. ಬ್ರಿಟಿಷ್ ಸರ್ಕಾರಕ್ಕೆ ವಿರುದ್ಧವಾದ ಕಲಾಪಗಳಲ್ಲಿ ತೊಡಗಿರುವರೆಂಬ ಸಂಶಯಕ್ಕೆ ಒಳಗಾದವರನ್ನು ವಿಚಾರಣೆಯಿಲ್ಲದೆ ಬಂಧನದಲ್ಲಿಡಲು ಸರ್ಕಾರಕ್ಕೆ ಅಧಿಕಾರ ನೀಡುವ ರೌಲತ್ ಕಾಯಿದೆ ಜಾರಿಗೆ ಬಂದಿತು. ಗಾಂಧಿಯವರು ಇದನ್ನು ಪ್ರತಿಭಟಿಸಿದರು. ಏಪ್ರಿಲ್ 6ರಂದು ಹರತಾಳವನ್ನಾಚರಿಸಬೇಕೆಂದು ಕರೆ ಇತ್ತರು. ಅವರು ದೆಹಲಿಗೆ ಹೋಗುತ್ತಿದ್ದಾಗ ಹಾದಿಯಲ್ಲಿ ದಸ್ತಗಿರಿಯಾದರು. ಇದರಿಂದ ಮುಳಿದ ಜನ ಹಿಂಸಾಚರಣೆ ಮಾಡಿದರು. ಗಾಂಧಿಯವರು ಸತ್ಯಾಗ್ರಹವನ್ನು ನಿಲ್ಲಿಸಬೇಕಾಯಿತು. ಅದೇ ಸಮಯದಲ್ಲಿ ಇನ್ನೊಂದು ಮಹಾ ದುರ್ಘಟನೆ ನಡೆಯಿತು. ಅಮೃತಸರದ ಜಲಿಯನ್ ವಾಲಾಬಾಗಿನಲ್ಲಿ ಸೇರಿದ್ದ ನಿಶ್ಯಸ್ತ್ರಜನರ ಮೇಲೆ ಸರ್ಕಾರ ಮಷೀನ್-ಗನ್ ಪ್ರಯೋಗಿಸಿತು. ಪಂಜಾಬಿನಲ್ಲಿ ಲಷ್ಕರಿ ಕಾನೂನು ಜಾರಿಗೆ ಬಂತು. ಇದರಿಂದ ಇಡೀ ಭಾರತದಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ಕ್ರೋಧ ಹಬ್ಬಿತು.

ಈ ಸಮಯದಲ್ಲಿ ಮಹಾತ್ಮ ಗಾಂಧಿಯವರು ಜನರಿಗೆ ಅಹಿಂಸೆಯನ್ನೂ ನಿರ್ಭಯನ್ನೂ ಬೋಧಿಸಿದರು. ಇದಕ್ಕಾಗಿಯೇ ಇಂಗ್ಲಿಷಿನಲ್ಲಿ ಯಂಗ್ ಇಂಡಿಯ ಎಂಬ ಪತ್ರಿಕೆಯೂ ಗುಜರಾತಿಯಲ್ಲಿ ನವಜೀವನ ಎಂಬ ಪತ್ರಿಕೆಯೂ ಆರಂಭವಾದುವು(1919). ಯಂಗ್ ಇಂಡಿಯ ಪತ್ರಿಕೆಯಲ್ಲಿ ಇವರ ಕೊನೆಯ ಮಗ ದೇವದಾಸ್ ಗಾಂಧೀ ಕೆಲಸ ಮಾಡುತ್ತಿದ್ದರು.

1920ರಲ್ಲಿ ಆರಂಭವಾದ ಒಂದು ಮುಖ್ಯ ಚಳವಳಿ ಖಿಲಾಫತ್. ತುರ್ಕಿಯ ಖಲೀಪನ ಅಧಿಕಾರಕ್ಕೆ ಚ್ಯುತಿ ಬಾರದಂತೆ ಬ್ರಿಟನಿಗೆ ಒತ್ತಾಯ ಹಾಕಲು ಭಾರತೀಯ ಮುಸ್ಲಿಮರು ಆರಂಭಿಸಿದ್ದ ಚಳವಳಿಯಿದು. ಮುಸ್ಲಿಮರ ಮನಸ್ಸನ್ನು ಕಲಕಿದ್ದ ಈ ಚಳವಳಿಯಲ್ಲಿ ಹಿಂದುಗಳು ಸಹಾನುಭೂತಿಯಿಂದ ಪಾಲ್ಗೊಳ್ಳಬೇಕೆಂಬುದು ಗಾಂಧಿಯವರ ಅಭಿಮತವಾಗಿತ್ತು. ಹಿಂದೂ ಮುಸ್ಲಿಂ ಐಕ್ಯ ಸಾಧನೆ ಇದರ ಉದ್ದೇಶ. ಬ್ರಿಟಿಷ್ ಸಾಮ್ರಾಜ್ಯಾಧಿಕಾರದ ಸಂಕೇತವಾದ ಎಲ್ಲ ಬಿರುದುಗಳನ್ನೂ ಗೌರವಗಳನ್ನೂ ಭಾರತೀಯರು ಹಿಂದಕ್ಕೊಪ್ಪಿಸಬೇಕು. ಶಾಲೆ ಕಾಲೇಜು ನ್ಯಾಯಾಲಯ ವಿಧಾನಸಭೆಗಳನ್ನು ಬಹಿಷ್ಕರಿಸಬೇಕು-ಎಂದು ಗಾಂಧಿಯವರು ಕರೆ ಕೊಟ್ಟರು. ತಮಗೆ ಬ್ರಿಟಿಶ್ ಸತ್ತೆಯಿಂದ ದತ್ತವಾಗಿದ್ದ ಪದಕವೇ ಮುಂತಾದವನ್ನೆಲ್ಲ ಅವರು ಹಿಂದುರುಗಿಸಿದರು. ಸತ್ಯಾಗ್ರಹ ಆರಂಭವಾಯಿತು. ಭಾರತದ ಜನರನ್ನು ಅವರು ಅಹಿಂಸಾತ್ಮಕ ಹೋರಾಟದ ಪಥದಲ್ಲಿ ಕೊಂಡೊಯ್ಯಲು ಸತತವಾಗಿ ಯತ್ನಿಸಿದರು. ಚರಖಾ ಅವರ ಸ್ವರಾಜ್ಯದ ಪ್ರತೀಕವಾಯಿತು. ಚರಖಾ ಅನಾರ್ಥಿಕವೆನ್ನಬಹುದು. ಆದರೆ ಇದು ಅತ್ಯಂತ ಅಗ್ಗ. ನಿರುದ್ಯೋಗಿಗಳಿಗೆ ಇದರಿಂದ ಇಷ್ಟಷ್ಟಾದರೂ ಉದ್ಯೋಗ ದೊರಕುತ್ತದೆ. ಭಾರತವನ್ನು ಲ್ಯಾಂಕಷೈರಿನ ಯಂತ್ರದ ಹಿಡಿತದಿಂದ ಬಿಡಿಸಲು ಇದೊಂದೇ ಮಾರ್ಗ. ಬೇರೆಲ್ಲ ವಿದೇಶೀ ವಸ್ತುಗಳನ್ನು ಬಹಿಷ್ಕರಿಸಿದರೂ ವಸ್ತ್ರಕ್ಕಾಗಿ ಅನ್ಯರನ್ನು ಅವಲಂಬಿಸಬೇಕಾದ ಪರಿಸ್ಥಿತಿಯನ್ನು ತಪ್ಪಿಸಲಿಕ್ಕಾಗಿ ಇದು ಅಗತ್ಯ-ಎಂಬುದು ಗಾಂಧಿಯವರ ವಾದ.