ಪುಟ:Mysore-University-Encyclopaedia-Vol-6-Part-7.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬೨

ಬೆಳೆಸುವುದಕ್ಕಾಗಿ ಪ್ರಜಾಮತ ವಾರಪತ್ರಿಕೆ ಪ್ರಕಟಿಸಲು ಗುಪ್ತ ಅವ್ರು ನಿರ್ಧರಿಸಿದರು. ಆದರೆ ಮಿರ್ಜಾ ಇಸ್ಮಾಯಿಲ್ ದಿವಾನರಾಗಿದ್ದ ಮೈಸೂರು ಸರ್ಕಾರ ಅದಕ್ಕೆ ಅನುಮತಿ ಕೊಡಲಿಲ್ಲ. ಗುಪ್ತ ಅವರು ಮದರಾಸಿಗೆ ಹೋಗಿ ೧೯೨೯ರಲ್ಲಿ ಪ್ರಜಾಮತ ಪ್ರಾರಂಭಿಸಿದರಲ್ಲದೆ ಎರಡು ವರ್ಷಗಳ ಅನಂತರ (೧೯೩೧) ಜನವಾಣಿ ದಿನಪತ್ರಿಕೆಯನ್ನು ಪ್ರಾರಂಭಿಸಿದರು. ಜನವಾಣಿಯಲ್ಲಿ ಪ್ರಕಟವಾದ ಒಂದು ಲೇಖನದಿಂದಾಗಿ ಆ ಪತ್ರಿಕೆ ನಿಂತುಹೋಯಿತು. ಅಷ್ಟರಲ್ಲಿ ಮಿರ್ಜಾ ಅವರು ಆ ಪತ್ರಿಕೆಗಳನ್ನು ಬೆಂಗಳೂರಿನಲ್ಲಿ ಪ್ರಕಟಿಸಲು ಅನುಮತಿ ನೀಡಿದ್ದರಿಂದ ೧೯೩೩ರಲ್ಲಿ ಅವೆರಡೂ ಬೆಂಗಳೂರಿನಿಂದ ಪ್ರಕಟವಾಗಲಾ ರಂಭಿಸಿದುವು. ಬೆಂಗಳೂರಿಗೆ ಹಿಂದಿರುಗಿದ ಕೂಡಲೆ ಗುಪ್ತ ಅವರು ಮೈಸೂರು ಕಾಂಗ್ರಸ್ ಸ್ಥಾಪನೆಗಾಗಿ ಹೋರಾಡಲು ಪ್ರಾರಂಭಿಸಿದರು. ತಾವೇ ಹಿಂದೆ ಸ್ಥಾಪಿಸಿದ್ದ ಪ್ರಜಾಪಕ್ಷದ ವಿರುದ್ಧವಾಗಿಯೇ ಅಭ್ಯರ್ಥಿಗಳನ್ನು ನಿಲ್ಲಿಸ ಬೇಕಾಯಿತು. ಗುಪ್ತ ಅವರ ರಾಜಕೀಯ ಚಟುವಟಿಕೆಗಳು ಹೆಚ್ಚಾದಾಗ, ಅವರು ಮೈಸೂರಿನವರಲ್ಲವೆಂಬ ಕಾರಣವನ್ನು ನೀಡಿ, ಇಪ್ಪತ್ನಾಲ್ಕು ಗಂಟೆಗಳೊಳಗಾಗಿ ಸಂಸ್ಥಾನವನ್ನು ಬಿಟ್ಟು ಹೋಗುವಂತೆ ಮೈಸೂರು ಸರ್ಕಾರ ಆಜ್ಞೇ ಮಾಡಿತು. ಗುಪ್ತ ಅವರು ಹುಬ್ಬಳ್ಳಿಗೆ (ಆಗ ಹುಬ್ಬಳ್ಳಿ ಮುಂಬೈ ಪ್ರಾಂತ್ಯಕ್ಕೆ ಸೇರಿತು.) ತೆರಳಿ (೧೯೩೬) ಅಲ್ಲಿಂದ ಪ್ರಜಾಮತವನ್ನು ಪ್ರಕಟಿಸಲು ಪ್ರಾರಂಭಿಸಿದರು. (ಆ ವೇಳೆಗೆ ಜನವಾಣಿಯನ್ನು ಅವರು ಬೇರೆಯವರಿಗೆ ಕೊಟ್ಟಿದ್ದರು.) ಸಂಸ್ಥಾನದೊಳಕ್ಕೆ ಪ್ರಜಾಮತ ಬರಕೂಡದೆಂದು ಮೈಸೂರು ಸರ್ಕಾರ ಬಹಿಷ್ಕಾರ ಹಾಕಿತು. ಸಂಸ್ಥಾನದ ಹೊರಗೆ ಪ್ರಜಾಮತವೆಂಬ ಹೆಸರಿನಲ್ಲೇ ಪತ್ರಿಕೆ ನಡೆಯುತ್ತಿದ್ದರೂ ಇನ್ನೊಂದು ಹೆಸರಿನಲ್ಲಿ ಆ ಪತ್ರಿಕೆ ಸಂಚಿಕೆಗಳನ್ನು ಮೈಸೂರು ಸಂಸ್ಥಾನಕ್ಕೆ ಕಳುಹಿಸಲು ಗುಪ್ತ ಅವರು ಪ್ರಾರಂಭಿಸಿದರು. ಆ ಹೆಸರಿನ ಪತ್ರಿಕೆಗೂ ಸರ್ಕಾರ ಬಹಿಷ್ಕಾರ ಹಾಕಿತು.ಮತ್ತೆ ಪತ್ರಿಕೆಯ ಹೆಸರನ್ನು ಬದಲಾಯಿಸಲಾಯಿತು. ಮತ್ತೆ ಸರ್ಕಾರದ ಬಹಿಷ್ಕಾರಮ್ ನತ್ತೆ ಹೆಸರಿನ ಬದಲಾವಣೆ; ಹೀಗೆಯೇ ಸಾಗಿತು. ಇನ್ನು ಬಹಿಷ್ಕಾರ ಹಾಕುವುದರಿಂದ ಪ್ರಯೊಜನವಿಲ್ಲವೆಂದು ಸರ್ಕಾರ ಸುಮ್ಮನಾಯಿತು. ೧೯೩೮ರಲ್ಲಿ ಮಿರ್ಜಾ ಅವರು ಮತ್ತೆ ಗುಪ್ತ ಅವರನ್ನು ಬೆಂಗಳೂರಿಗೆ ಆಹ್ವಾನಿಸಿದರು. ಬೆಂಗಳೂರಿಗೆ ಹಿಂದಿರುಗಿದ ಮೇಲೆ ಗುಪ್ತ ಅವರು ಜನವಾಣಿಯನ್ನು ಪಡೆದುಕೊಂಡರು. ಬಹಿಷ್ಕಾರಗಳಿಂದಾಗಿ ಪ್ರಜಾಮತ ಪತ್ರಿಕೆ ಸ್ಥಳಾಂತರವಾಗುತ್ತಿದ್ದರೂ ಒಂದು ವಾರವೂ ಅದು ನಿಲ್ಲದೆ ಪ್ರಕಟವಾಗುತ್ತಿತ್ತು. ೧೯೪೮ರಲ್ಲಿ ಗುಪ್ತರು ಇವೆರಡು ಪತ್ರಿಕೆಗಳನ್ನೂ ಮಾರಿದರು. ಪ್ರಜಾಮತ ಆ ವೇಳೆಗೆ ೩೬,೦೦೦ ಪ್ರತಿಗಳ ಪ್ರಸಾರ ಸಂಖ್ಯೆಯನ್ನು ಮುಟ್ಟಿದ್ದ ಪಥಮ ಕನ್ನಡ ವಾರಪತ್ರಿಕೆಯಾಗಿತ್ತು. ಅನಂತರ ೧೯೫೯ರಲ್ಲಿ ಅವರು ಜನಪ್ರಗತಿ ವಾರಪತ್ರಿಕೆಯನ್ನು ಕೊಂಡರು. ೧೯೬೧ರಲ್ಲಿ ಮಲ್ಲಿಗೆ ಮಾಸಪತ್ರಿಕೆಯನ್ನು ಸ್ಥಾಪಿಸಿದರು. ೧೯೭೧ರ ವರೆಗೂ ನಡೆಸಿಕೊಂಡುಬಂದು ಅನಂತರ ಬೇರೆಯವರಿಗೆ ವಹಿಸಿಕೊಟ್ಟರು. ಗುಪ್ತ ಅವರು ರಾಜಕೀಯ, ಪತ್ರಿಕೋದ್ಯಮ, ವಾಣಿಜ್ಯ-ಈ ಮೂರು ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದವರು. ೧೯೪೨ರಿಂದ ೧೯೪೬ರ ವರೆಗೆ ಅವರು ಬೆಂಗಳೂರು ಪೌರಸಭೆಯ, ೧೯೪೮ರಿಂದ ಮೈಸೂರು ವಿಶ್ವವಿದ್ಯಾನಿಲಯದ ಸೆನೇಟಿನ, ೧೯೪೯ರಿಂದ ಮೈಸೂರು ವಿಶ್ವವಿದ್ಯಾನಿಲಯ ಕೌನ್ಸಿಲಿನ, ೧೯೪೫ರಿಂದ ೧೯೪೯ರ ವರೆಗೆ ಮೈಸೂರಿನ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ, ಆ ಸಭೆಯಲ್ಲಿ ಕಾಂಗ್ರಸ್ ಪಕ್ಷದ ಉಪನಾಯಕರಾಗಿ ಇದ್ದರು. ಮೈಸೂರು ಬ್ಯಾಂಕಿನ ಮತ್ತು ಅನೇಕ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳ ನಿರ್ದೇಶಕರಾಗಿದ್ದರು. ಚಲನಚಿತ್ರ ಕ್ಷೇತ್ರದಲ್ಲಿ ವಿಜಯಾ ಟಾಕೀಸ್ ಡಿಸ್ಟ್ರಿಬ್ಯೂಟರ್ಸ್ ನ ಪಾಲುದಾರರಾಗಿದ್ದರು. ಇದರ ಒಡೆತನದಲ್ಲಿ ಕೆಲವು ಚಿತ್ರಮಂದಿರಗಳೂ ಇದ್ದುವು. ಇವರ ಪ್ರಗತಿ ಪ್ರಕಟನಾಲಯ ಎಂಬತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದೆ. ಇವರು ಜಪಾನ್ ಮ್ತ್ತು ಐರೋಪ್ಯ ದೇಶಗಳ ಪ್ರವಾಸ ಮಾಡಿದ್ದಾರೆ. ಇವರು ಅಖಿಲ ಭಾರತ ಉತ್ಪಾದಕ ಸಂಘದ ಉಪಾಧ್ಯಕ್ಷರಾಗಿಯೂ ಅದರ ರಾಜ್ಯಶಾಖೆಯ ಅಧ್ಯಕ್ಷರಾಗಿಯೂ ಇದ್ದರು. ವಿಶ್ವೇಶ್ವರಯ್ಯ ತಾಂತ್ರಿಕ ವಸ್ತು ಸಂಗ್ರಹಾಲಯ ಸ್ಥಾಪನೆಗೆ ಮುಖ್ಯ ಕಾರಣರು ಇವ್ರು.

ಬಿ.ಎನ್. ಗುಪ್ತರದು ಧರ್ಮಕಾರ್ಯಗಳಿಗೆ ಪ್ರಸಿದ್ಧವಾದ ವಂಶ . ಅವರ ತಾತನವರು ಮದರಾಸಿನ ಬೈಸಾನಿ ಮಾಧವಚೆಟ್ಟಿ ಚಾರಿಟೀಸಿನ ಸ್ಥಾಪಕರು. ಗುಪ್ತರು ಅದಕ್ಕೆ ಅಧ್ಯಕ್ಷರಾಗಿದ್ದರು ೧೯೭೦ರಲ್ಲಿ ಗುಪ್ತರು ಜನ್ಮಭೂಮಿ ಟ್ರಸ್ಟ್ ಸ್ಥಾಪಿಸಿದರು. ಪತ್ರಿಕೋಧ್ಯಮ ಮತ್ತು ಕನ್ನಡ ಸಾಹಿತ್ಯಗಳ ಬೆಳವಣಿಗೆಯೂ ಈ ಕ್ಷೇತ್ರಗಳಲ್ಲಿ ದುಡಿದಿರುವ ಮಹನೀಯರ ಸನ್ಮಾನವೂ ಈ ನ್ಯಾಸದ ಉದ್ದೇಶಗಳು. ಇದರಿಂದ ಮೈಸೂರು ಬೆಂಗಳೂರು ವಿಶ್ವವಿದ್ಯಾನಿಲಯಗಳಿಗೆ ಗುಪ್ತರು ದತ್ತಿಗಳನ್ನು ನೀಡಿದ್ದಾರೆ. ಸದಾಕ್ರಿಯಾಶಿಲರಾಗಿದ್ದು ಗುಪ್ತ ೧೯೭೬ರ ಜುಲೈ ೨೮ರಂದು ನಿಧನರಾದರು. ಗುಪ್ತ, ಪರಮೇಶ್ವರಿಲಾಲ್: ೧೯೧೪-೨೦೦೧. ಭಾರತದ ಹೆಸರಾಂತ ನಾಣ್ಯಶಾಸ್ತ್ರ ತಜ್ಞರು. ಭಾರತೀಯ ನಾಣ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನೆ ಸಂಸ್ಥೆಯ ಸಂಸ್ಥಾಪಕರು. ಉತ್ತರ ಪ್ರದೇಶದ ಆಜಮ್ ಗಡ್ ನಲ್ಲಿ ಜನಿಸಿದರು. ೮ನೆಯ ತರಗತಿಯಲ್ಲಿದ್ದಾಗ ಜವಹರಲಾಲ್ ನೆಹರು ಬಂಧಿತರಾದಾಗ ಶಾಲೆಯನ್ನು ಬಹಿಷ್ಕರಿಸಿದರು. ಶಾಲೆ ಇವರಿಗೆ ದಂಡವನ್ನು ವಿಧಿಸಿತು. ಆದರೆ ಇವರು ದಂಡವನ್ನು ಕೊಡಲು ನಿರಾಕರಿಸಿದಾಗ ಇವರನ್ನು ಶಾಲೆಯಿಂದ ಹೊರಹಾಕಲಾಯಿತು. ಅನಂತರ ಇವರು ಭಾರತ ರಾಷ್ಟ್ರೀಯ ಕಾಂಗ್ರೆಸ್ ಸೇರಿ ಕಾನೂನು ಭಂಗ ಚಳವಳಿಯ ನೇತೃತ್ವ ವಹಿಸಿದರು. ಇದರ ಪರಿಣಾಮವಾಗಿ ತಮ್ಮ ಪ್ರದೇಶದಲ್ಲಿ ಆಜಮ್ ಗಟ್-ಕ-ನೆಹರು ಎಂದು ಪ್ರಸಿದ್ಧರಾದರು. ಸ್ವಾತಂತ್ರ್ಯ ಬಂದ ಅನಂತರ ರಾಜಕೀಯದಿಂದ ದೂರಸರಿದು ಶಾಸ್ತ್ರೀಯ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ೧೯೪೮ರಿಂದ (೧೮ ವರ್ಷಗಳ ಅನಂತರ) ತಮ್ಮ ವಿದ್ಯಾಭ್ಯಾಸ ಮುಂದುವರೆಸಿದರು. ಬಾಹ್ಯವಿದ್ಯಾರ್ಥಿಯಾಗಿ ಪದವಿ ಹಾಗೂ ಎಂ.ಎ. ಪದವಿಯನ್ನು ಮೊದಲ ಶ್ರೇಣಿಯಲ್ಲಿ ಪಡೆದರು. ಪಂಚ್ ಮಾರ್ಕ್ಡ್ ಕಾಯಿನ್ಸ್ ಇನ್ ಏನ್ಷೆಂಟ್ ಇಂಡಿಯಾ - ಇವರ ಪಿ.ಹೆಚ್.ಡಿ ಪ್ರಬಂಧ. ಈ ಸಂಶೋಧನೆ ಇವರಿಗೆ ಒಳ್ಳೆಯ ಹೆಸರನ್ನು ತಂದಿತು. ೧೯೫೩ರಲ್ಲಿ ಬೊಂಬಾಯಿನ ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂನಲ್ಲಿ ಶಾಸನತಜ್ಞರಾಗಿ ನೇಮಕಗೊಂಡರು. ೧೯೬೨ರ ತನಕ ಅಲ್ಲಿ ಕೆಲಸ ಮಾಡಿದರು. ೬ ತಿಂಗಳು ಬ್ರಿಟಿಷ್ ಮ್ಯೂಸಿಯಂನಲ್ಲಿ ಕೆಲಸ ಮಾಡಿದರು. ೧೯೬೩ರಲ್ಲಿ ಪಾಟ್ನ ವಸ್ತುಸಂಗ್ರಾಹಾಯದ ನಿರ್ದೇಶಕರಾದರು. ೧೯೭೨ರಲ್ಲಿ ನಿವೃತ್ತಿ ಹೊಂದಿದರು. ಇವರ ಪ್ರಶಂಸನೀಯ ಕಾರ್ಯವೆಂದರೆ ನಾಸಿಕದಲ್ಲಿಯ ಆಂಜನೇರಿ ಬಳಿ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ರಿಸರ್ಚ್ ಇನ್ ನ್ಯೂಮಿಸ್ ಮ್ಯಾಟಿಕ್ ಸ್ಟಡೀಸ್ ಸಂಸ್ಥೆಯನ್ನು ತನ್ನ ಶಿಷ್ಯ ಕೆ.ಕೆ. ಮಹೇಶ್ವರಿಯವರನ್ನು ಪ್ರೇರೇಪಿಸಿ ಸ್ಥಾಪನೆ ಮಾಡಿದ್ದು. ಇದಕ್ಕೆ ತಮ್ಮ ಗ್ರಂಥ ಭಂಡಾರವನ್ನು ದಾನ ಮಾಡಿದರು. ಶಿಷ್ಯನ ಕೋರಿಕೆಯ ಮೇರೆಗೆ ಈ ಸಂಸ್ಥೆಯ ಮುಖ್ಯಸ್ಥರಾದರು. ಅನಾರೋಗ್ಯದಿಂದ ೧೯೮೯ರಲ್ಲಿ ಈ ಜವಾಬ್ದಾರಿಯಿಂದ ಬಿಡುಗಡೆ ಹೊಂದಿದರು. ೨೦೦೧ ಜುಲೈ ೨೭ರಂದು ನಿಧನರಾದರು. ಇವರು ನಾಣ್ಯಗಳನ್ನು ಕುರಿತು ಸು. ೨೫೦ಕ್ಕೂ ಹೆಚ್ಚು ಲೇಖನಗಳನ್ನೂ ಪುಸ್ತಕಗಳನ್ನೂ ಬರೆದಿದ್ದಾರೆ. ರಾಷ್ಟ್ರೀಯ ಪುಸ್ತಕ ಪ್ರಾಧಿಕಾರ ಪ್ರಕಟಿಸಿದ ಕಾಯಿನ್ಸ್ ಇವರ ಒಂದು ಮುಖ್ಯ ಕೃತಿ. ಇವರಿಗೆ ಯು.ಕೆ.ಯ ದಿ ರಾಯಲ್ ನ್ಯೂಮಿಸ್ ಮ್ಯಾಟಿಕ್ ಸೊಸೈಟಿಯ ಹಂಟಿಂಗ್ ಟನ್ ಪ್ರಶಸ್ತಿ, ಭಾರತದ ನ್ಯೂಮಿಸ್ ಮ್ಯಾಟಿಕ್ ಸೊಸೈಟಿ ಆಫ್ ಇಂಡಿಯಾದ ಚಕ್ರವಿಕ್ರಮ ಪದಕ(೧೯೫೪), ಏಷ್ಯಾಟಿಕ್ ಸೊಸೈಟಿ ಆಫ್ ಕಲ್ಕತ ಸಂಸ್ಥೆಯ ಜದುನಾಥ್ ಸರ್ಕಾರ್ ಪದಕ ಮೊದಲಾದ ಪ್ರತಿಷ್ಠಿತ ಪ್ರಶಸ್ತಿ ಪದಕಗಳು ಲಭಿಸಿವೆ. ೧೯೬೯-೮೬ರ್ ವರೆಗೆ ಹಲವಾರು ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳು ಇವರಿಗೆ ವಿಶಿಷ್ಟ ಪದಕಗಳನ್ನು ನೀಡಿಮ್ ತಮ್ಮ ಸಂಸ್ಥೆಗಳ ಗೌರವ ಸದಸ್ಯರನ್ನಾಗಿ ಮಾಡಿಕೊಂವವು.