ಪುಟ:Mysore-University-Encyclopaedia-Vol-6-Part-9.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೂರ್ನಿಯ - ಗೂಳಿ ಗೂರ್ನಿಯ : ಪೂರ್ವ ಮೆಡಿಟರೇನಿಯನ್ ಸಮುದ್ರದಲ್ಲಿರುವ ಕ್ರೀಟ್ ದ್ವೀಪದ ಪೂರ್ವ ಭಾಗದಲ್ಲಿಯ ಮೆರಬೆಲ್ಲೊ ಖಾರಿ ಪ್ರದೇಶದಲ್ಲಿರುವ ಒಂದು ಉನ್ನತ ಸ್ಥಳ ಮತ್ತು ಸಾಧಾರಣ ಬಂದರು. ಕಂಚಿನ ಯುಗದ ಮಿನೋವನ್ ಸಂಸ್ಕೃತಿಯ ಕೊನೆಯ ಹಂತದ (ಪ್ರ.ಶ.ಪೂ. 1400-1100) ಅವಶೇಷಗಳು 1901-04ರಲ್ಲಿ ಇಲ್ಲಿ ಶೋಧಿಸಲ್ಪಟ್ಟವು. ಈ ದ್ವೀಪದ ನಾಸನ್ ಎಂಬಲ್ಲಿ ಅರ್ಥರ್ ಜಾನ್ ಎವಾನ್ಸ್ 1899ರಲ್ಲಿ ನಡೆಸತೊಡಗಿದ ಉತ್ಖನನಗಳಿಂದ ಈ ಸಂಸ್ಕೃತಿ ಮೊದಲು ಬೆಳಕಿಗೆ ಬಂತು. ಗೂರ್ನಿಯದಲ್ಲಿ ಎತ್ತರದಲ್ಲಿ ಮುಂಚಾಚಿದ ಕಲ್ಲುಬಂಡೆಯ ಕೆಳಗೆ ಮಿನೋವನ್ ಸಂಸ್ಕೃತಿಯ ಆದಿ (ಪ್ರ.ಶ. ಪೂ. 2500-2000) ಮತ್ತು ಮಧ್ಯ ಹಂತದ ಶ್ಮಶಾನವೂ ಸುತ್ತಣ ಪ್ರದೇಶದಲ್ಲಿ ಇತರ ಅವಶೇಷಗಳೂ ಇವೆ. ಒಂದು ದಿಣ್ಣೆಯ ಮೇಲೆ ಪ್ರ.ಶ.ಪೂ.ಸು. 1750-1550ರ ಕಾಲದ ಚದರ ಕಲ್ಲುಗಳಿಂದ ಕಟ್ಟಿದ ಅರಮನೆಯಿತ್ತು. ಇದರ ವಾಸ್ತು ನಾಸನ್ ನಲ್ಲಿಯ ಅರಮನೆಯನ್ನು ಹೋಲುವಂಥದ್ದು. ಇದು ಹಾಳು ಬಿದ್ದ ಮೇಲೆ ಇದರ ಸುತ್ತಲಿನ ಪ್ರದೇಶ ಒಂದು ಕೈಗಾರಿಕಾ ನಗರವಾಗಿ (ಪ್ರ.ಶ.ಪೂ. 1500-1450) ಬೆಳೆಯಿತು. ಇಲ್ಲಿ ಸಣ್ಣ ಕಲ್ಲುಗಳಿಂದ ಕಟ್ಟಿದ ಎರಡು ಅಂತಸ್ತುಗಳ ಮನೆಗಳಿದ್ದವು. ನಗರದ ಮಧ್ಯದ ಎತ್ತರ ಪ್ರದೇಶದಿಂದ ಲಂಬಕೋಣದಲ್ಲಿ ಛೇದಿಸಿದ ಬೀದಿಗಳು, ಒಳಗೂ ಹೊರಗೂ ಹೋಗಿ ಬರಲು ಅನುಕೂಲವಾಗುವ ಹಾಗೆ, ನಗರದ ಕೊನೆಯವರೆಗೂ ಬೆಳಕಿನ ಕಿರಣಗಳಂತೆ ಹಬ್ಬಿದ್ದುವು. ಒಂದು ಮನೆಯಲ್ಲಿ ಎಣ್ಣೆ ಕಡಾಯಿಯೂ ಇನ್ನೊಂದರಲ್ಲಿ ಬಡಗಿಯ ಉಪಕರಣಗಳೂ ಮತ್ತೊಂದರಲ್ಲಿ ಕುಂಬಾರರ ಚಕ್ರವೂ ದೊರಕಿವೆ. ಸಣ್ಣ ಗುಡಿಯಲ್ಲಿ ಮನೆದೇವತೆಯಾದ ಹೆಣ್ಣುದೇವರ, ಪಾರಿವಾಳಗಳ ಮಣ್ಣಿನ ಮೂರ್ತಿಗಳು, ಹಾವಿನಾಕಾರದ ಕೊಳವೆ, ವೇದಿಕೆ, ಕುಂಡ ಮುಂತಾದ ಪೂಜಾಸಾಮಗ್ರಿಗಳಿದ್ದುವು. ಅಷ್ಟಪಾದಿ ಮುಂತಾದ ಜಲಚರ ಪ್ರಾಣಿಗಳ ವರ್ಣಾಚಿತ್ರಗಳಿಂದ ಅಲಂಕರಿಸಲ್ಪಟ್ಟ ಮೃತ್ ಪಾತ್ರೆಗಳು ಗಮನಾರ್ಹ. ಪ್ರ.ಶ.ಪೂ. ಸು. ೧೪೦೦ರಲ್ಲಿ ಭೂಕಂಪದಿಂದ ಸಂಭವಿಸಿದ ಬೆಂಕಿಯಿಂದ ಈ ನಗರ ಸುಟ್ಟುಹೋಯಿತು. ಜಲಚರ ಪ್ರಾಣಿ ಚಿತ್ರಗಳನ್ನು ಮೃತ್ ಪಾತ್ರೆಯ ಮೇಲೆ ಬಿಡಿಸುವ ಕಲಾಪದ್ಧತಿ ಇಲ್ಲಿಯೇ ಪ್ರಾರಂಭವಾಯಿತೆಂದು ತೋರುತ್ತದೆ. ಗೂವನ್ : ಕೋಳಿಯನ್ನು ಹೆಚ್ಚು ಕಡಿಮೆ ಹೋಲುವ ಒಂದು ಹಕ್ಕಿ. ಗ್ಯಾಲಿಫಾರ್ಮೀಸ್ ಗಣಕ್ಕೂ ಕ್ರ್ಯಾಸಿಡೀ ಕುಟುಂಬಕ್ಕೂ ಸೇರಿದೆ. ಇದು ಮಧ್ಯ ಹಾಗೂ ಉತ್ತರ ಅಮೆರಿಕದ ಕೆಲವು ಪ್ರದೇಶಗಳಲ್ಲಿ ವಿರಳವಾಗಿಯೂ ದಕ್ಷಿಣ ಅಮೆರಿಕಾದಲ್ಲಿ ಹೇರಳವಾಗಿಯೂ ಕಂಡುಬರುತ್ತದೆ. ಇದು ಸುಮಾರು ೧/೪ಮೀ ಉದ್ದಕ್ಕೆ ಬೆಳೆಯುವ ಮಧ್ಯಮಗಾತ್ರದ ಹಕ್ಕಿ. ದೇಹದ ಬಣ್ಣ ಕಂದು ಇಲ್ಲವೆ ಆಲಿವ್ ಹಸುರು. ಕತ್ತು ಮತ್ತು ತಲೆಗಳ ಮೇಲೆ ಗರಿಗಳೇ ಇಲ್ಲ. ಆದರೆ ನೆತ್ತಿಯ ಮೇಲೆ ಮಾತ್ರ ಬಿಳಿಯ ಬಣ್ಣದ ಪುಕ್ಕಗಳ ಕಿರೀಟವಿದೆ. ಕತ್ತಿನ ಮುಂಭಾಗದಲ್ಲಿ ಜೋಲಾಡುವ ಮಾಂಸದ ಪಟಲವೊಂದಿದೆ. ಕೊಕ್ಕು ಚಿಕ್ಕದು, ದೃಢವಾಗಿದೆ. ಕಾಲುಗಳು ಬಲವಾಗಿದ್ದು ಭೂಮಿಯ ಮೇಲೆ ಓಡಾಡುವುದಕ್ಕೂ ಕ್ರಿಮೀ, ಕೀಟ ಮತ್ತು ಧಾನ್ಯಕ್ಕಾಗಿ ನೆಲವನ್ನು ಕೆರೆಯುವುದಕ್ಕೂ ನೆರವಾಗುತ್ತದೆ. ಕಾಲಿನಲ್ಲಿ ಐದು ಬೆರಳುಗಳಿವೆ. ಇವುಗಳಲ್ಲಿ ಒಂದು ಹಿಮ್ಮುಖವಾಗಿ ಬೆಳೆದಿರುವುದು ಈ ಕೋಳಿಗಳಲ್ಲಿನ ಮುಖ್ಯ ಲಕ್ಷಣಗಳಲ್ಲೊಂದು. ವನ್ಯವೃಕ್ಷಗಳ ತುದಿಗಳಲ್ಲೇ ಇದರ ವಾಸ. ಸದ್ದುಗದ್ದಲ ಮಾಡದೆ ಮರದಿಂದ ಮರಕ್ಕೆ ಸಾಗುತ್ತ ಹಣ್ಣು ಹಂಪಲನ್ನು ತಿಂದು ಬದುಕುತ್ತದೆ. ಇವು ದೊಡ್ಡ ಗುಂಪುಗಳಲ್ಲಿರುವುದು ಸಾಮಾನ್ಯವಾದರೂ ಸಂತಾನೋತ್ಪತ್ತಿಯ ಕಾಲದಲ್ಲಿ ಗಂಡು ಮತ್ತು ಹೆಣ್ಣು ಹಕ್ಕಿಗಳು ಗುಂಪಿನಿಂದ ಬೇರೆಯಾಗಿ ಜೋಡಿಗಳಲ್ಲಿ ವಾಸಿಸತೊಡಗುತ್ತವೆ. ಗೂವನ್ ಹಕ್ಕಿಗಳಲ್ಲಿ ಅನೇಕ ಬಗೆಗಳಿವೆ. ಇವುಗಳಲ್ಲಿ ಪೆನೆಲೊಪೆ, ಅಬೂರಿಯ, ಕ್ಯಾಮೀಪೆಟಿಸ್ ಮತ್ತು ಓರಿಯೋಫ್ಯಾಸಿಸ್ ಎಂಬವು ಮುಖ್ಯವಾದವು. ಗೂಳಿ : ದನಗಳಲ್ಲಿ ಬೀಜದ ಹೋರಿಗೆ ಈ ಹೆಸರುಂಟು (ಬುಲ್). ಬೀಜ ಒಡೆದದ್ದು ಎತ್ತು ಅನ್ನಿಸಿಕೊಳ್ಳುತ್ತದೆ. ವ್ಯವಹಾರದಲ್ಲಿ ತಳಿ ಉತ್ಪನ್ನಕ್ಕೆಂದೇ ಸಾಕಿರುವ ಹೋರಿಯನ್ನು ಅದೇ ಹೆಸರಿನಿಂದಲೂ ಗೂಳಿ ಎಂಬ ಹೆಸರಿನಿಂದಲೂ ನಿರ್ದೇಶಿಸುತ್ತಾರೆ. ಈ ಪದ ಸಾಮಾನ್ಯವಾಗಿ ಆರ್ಟಿಯೋಡ್ಯಾಕ್ಟಿಲ ಉಪಗಣದ ಬೋವಿಡೀ ಕುಟುಂಬಕ್ಕೆ ಸೇರಿದ ದನದ (ಬಾಸ್) ಜಾತಿಯ ಪ್ರಾಣಿಗಳ ಗಂಡುಗಳಿಗೂ ಇದೇ ಹೆಸರಿದೆ. ಸಾಮಾನ್ಯವಾಗಿ ಗೂಳಿಯ ಎತ್ತರ 1.5 ಮೀ. ತೂಕ 200-500 ಕಿಗ್ರಾಂ. ಮೈ ಮೇಲೆ ಸಣ್ಣಗಿನ ಹಾಗೂ ನಯವಾದ ಕೂದಲೂ ಬಾಲದ ತುದಿಯಲ್ಲಿ ಕೂದಲಿನ ಕುಚ್ಚೂ ಇವೆ. ದನಗಳಲ್ಲಿ ಹಿಳಲು ಜಾತಿಯ ದನಗಳು ಕಾಣಬರುತವೆ. ಇಂಥವುಗಳಲ್ಲಿ ಗೂಳಿಯ ಹಿಳಲು, ಎತ್ತು ಮತ್ತು ಹಸುಗಳ ಹಿಳಲಿಗಿಂತ ಪುಷ್ಟವಾಗಿಯೂ ಎತ್ತರವಾಗಿಯೂ ಇದ್ದು ಶೋಭಾಯಮಾನವಾಗಿರುತ್ತದೆ. ಪಾಶ್ಚಾತ್ಯ ದೇಶಗಳಲ್ಲಿ ಫ್ರೀಸಿಯನ್ಸ್, ಐರ್ ಷೈರ್, ಶಾರ್ಟ್ ಹಾರ್ನ್, ಜರ್ಸಿ, ಬ್ರೌನ್ ಸಿಸ್ ಮತ್ತು ಗಯರನ್ ಸೆ ತಳಿಗಳಿವೆ. ಮಾಂಸಕ್ಕೋಸ್ಕರ ಬೆಳೆಸುವ ತಳಿಗಳಲ್ಲಿ ಅದರ ಒಟ್ಟು ಲಕ್ಷಣಗಳು ಮುಖ್ಯ ಆಬರ್ಡೀನ್ ಮತ್ತು ಶಾರ್ಟ್ ಹಾರ್ನ್ ತಳಿಗಳು ಮಾಂಸಕ್ಕಾಗಿ ಸಾಕುವ ತಳಿಗಳಲ್ಲಿ ಹೆಸರಾದವು. ತಳಿ ಪ್ರಯೋಗಗಳಿಂದ ಒಳ್ಳೆಯ ರಾಸುಗಳನ್ನು ಬೆಳೆಸಲು ಸಾಧ್ಯವಾಗಿದೆ. ಭಾರತದಲ್ಲೂ ಕೆಲವು ಪಶುಸಂಗೋಪನ ಕೇಂದ್ರಗಳಲ್ಲಿ ಪಾಶ್ಚಾತ್ಯ ಮತ್ತು ಸ್ಥಳೀಯ ತಳಿಗಳ ಸಂಕರಗಳಿಂದ ಹೆಚ್ಚು ಹಾಲು ಕೊಡುವ ತಳಿಗಳನ್ನು ಪಡೆದಿದ್ದಾರೆ. ಭಾರತದಲ್ಲಿ ಸುಮಾರು 26 ತಳಿಗಳಿವೆ. ಇವನ್ನು ಹಾಲು ಉತ್ಪಾದಕ, ಬೇಸಾಯದ ಮತ್ತು ಸಾಮಾನ್ಯ ಬಳಕೆಯ ತಳಿಗಳೆಂದು 3 ವಿಧಗಳಾಗಿ ವಿಂಗಡಿಸಬಹುದು. ೧. ಹಾಲು ಉತ್ಪಾದಕ ಹಸುಗಳನ್ನು ಪಡೆಯಲು ಬಳಸುವ ತಳಿಗಳು ; ಈ ಗುಂಪಿನಲ್ಲಿ ಗಿರ್, ಸಾಹಿವಾಲ್, ಕೆಂಪು ಸಿಂಧಿ ಮತ್ತು ದೇವೊನಿ ತಳಿಗಳು ಉತ್ಕೃಷ್ಟವಾದುವು. ಗಿರ್ ತಳಿ ದಕ್ಷಿಣ ಕಾಠಿಯಾವಾಡಿನ ಗಿರ್ ಪ್ರದೇಶ, ದಕ್ಷಿಣ ರಾಜಸ್ತಾನ, ವಡೋದರ ಪ್ರದೇಶಗಳಲ್ಲಿ ಕಾಣಬರುತ್ತದೆ. ಸಾಹಿವಾಲ್ ತಳಿ ಪಂಜಾಬ್ ಮತ್ತು ಉತ್ತರ ಪ್ರದೇಶಗಳಲ್ಲಿದೆ. ಕೆಂಪು ಸಿಂಧಿ ತಳಿ ಅಸ್ಸಾಂ, ಒರಿಸ್ಸ, ಕೇರಳ ಮತ್ತು ತಮಿಳುನಾಡು ಪ್ರಾಂತ್ಯದ ಕೆಲವು ಸ್ಥಳಗಳಲ್ಲಿದೆ. ದೇವೊನಿ ತಳಿ ಆಂಧ್ರ ಪ್ರದೇಶದ ಪಶ್ಚಿಮ ಮತ್ತು ಉತ್ತರ ಭಾಗಗಳಲ್ಲಿ ಕಾಣಬರುತ್ತದೆ. ಇದು ಗಾತ್ರದಲ್ಲಿ ಗಿರ್ ರಾಸನ್ನು ಹೋಲುತ್ತದೆ. ೨. ಬೇಸಾಯದ ತಳಿಗಳು : ಇವುಗಳಲ್ಲಿಮೋಟು ಕೊಂಬಿನವು, ಲೈರ್ ರೀತಿ ಕೊಂನವು, ಮೈಸೂರು ಮಾದರಿಯವು ಮತ್ತು ಚಿಕ್ಕ ಗಾತ್ರದ ಕೆಂಪು ಬಿಳಿ ಮಚ್ಚೆಗಳಿರುವ ಮೋಟು ಅಥವಾ ಲೈರ್ ರೀತಿ ಕೊಂಬಿನವು ಎಂಬ ೪ ವಿಧಗಳುಂಟು. (a) ಮೋಟು ಕೋಡಿನ ಗುಂಪಿನ ನಾಗೋರಿ ಬಚೌರ್ ತಳಿ ದರ್ಭಾಂಗದ ಬಚೌರ್ ಪರಗಣ, ಭಾಗಲ್ ಪುರ್ ಮತ್ತು ರಾಜಸ್ತಾನದ ಕೆಲವು ಪ್ರದೇಶಗಳಲ್ಲೂ ಬಿಹಾರಿನ ಚಂಪಾರಣ್ಯ ಪ್ರದೇಶಗಳಲ್ಲೂ ಇವೆ. (b) ಲೈರ್ ರೀತಿ ಕೊಂಬಿನ ತಳಿಯಲ್ಲಿ ಹೆಸರು ಪಡೆದ ಕೆಂಕಾಥ ಅಥವಾ ಕೆನ್ವಾರಿ ರಾಸುಗಳು ಉತ್ತರ ಪ್ರದೇಶದ ಬಂಡ ಜಿಲ್ಲೆಯ ಕೆನ ನದಿ ಪ್ರದೇಶದಲ್ಲಿ ಮತ್ತು ಮಧ್ಯ ಪ್ರದೇಶ್ದ ಕೆಲವು ಭಾಗಗಳಲ್ಲಿ, ಮಾಳ್ವಿ ತಳಿ ರಾಸುಗಳು ಮಧ್ಯ ಪ್ರದೇಶದ ಮಾಳ್ವ ಮತ್ತು ಹೈದರಾಬಾದ್ ನಲ್ಲಿ ಮತ್ತು ಖೇರಿಫರ್ ತಳಿ ರಾಸುಗಳು ಲಖಿಂಪೂರ್ ಮತ್ತು ಖೇರಿ ಜಿಲ್ಲೆಗಳಲ್ಲೂ (ಉತ್ತರ ಪ್ರದೇಶ)