ಪುಟ:Putina Samagra Prabandhagalu.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦

ಪು.ತಿ.ನ ಸಮಗ್ರ


ನೆಮ್ಮದಿಯು ನನ್ನಾತ್ಮವನ್ನು ಮೆಲ್ಲಮೆಲ್ಲನೆ ಸೋಕಿತು. ಒಂಟಿತನದ ಔತ್ಸುಕ್ಯವು ಸಡಲಿ ಪ್ರೇಮದಲ್ಲಿ ನಚ್ಚುದಿಸಿತು. ನನ್ನ ಬಾಳಿನ ಡೊಂಕುಗಳನ್ನು ಅರಿತು, ತನ್ನ ಬಾಳನ್ನು ಅದಕ್ಕೆ ಹೊಂದಿಸಿಕೊಂಡು ಬೆರೆದಿರುವ ಸಹೃದಯಳಾದ ಪ್ರೇಮಪರಿಪೂರ್ಣಳಾದ ಕೆಳದಿಯೊಬ್ಬಳ ಸಾನ್ನಿಧ್ಯದಲ್ಲಿರುವಂತೆ ನನಗೆ ಅನುಭವವಾಯಿತು.

ನನ್ನ ಮನಸ್ಸು ಹೀಗೆ ಪೋಮಸಾನ್ನಿಧ್ಯದ ನೆಮ್ಮದಿಯನ್ನು ಅನುಭವಿಸುತ್ತಿರುವಾಗ ಮೃದುಮಂಜುಳವಾದ ದಿವ್ಯವಾಣಿಯೊಂದು "ಮಗು" ಎಂದು ಸಂಬೋಧಿಸಿದುದು ನನ್ನನ್ನು ಅಷ್ಟು ಚಕಿತನನ್ನಾಗಿ ಮಾಡಲಿಲ್ಲ. ಆ ಸನ್ನಿವೇಶಕ್ಕೂ ನನ್ನ ಅಂದಿನ ಮನೋಭಾವಕ್ಕೂ ಈ ಸಂಬೋಧನೆಯು ಸ್ವಾಭಾವಿಕವಾಗಿರುವಂತೆ ತೋರಿತು. ಸಹಜವಾದ ಕುತೂಹಲದಿಂದ ಆ ವಾಣಿ ಬಂದೆಡೆಗೆ ತಿರುಗಿದೆ. ನನ್ನ ಬೆನ್ನ ಹಿಂದೆ ನೆಲವನ್ನು ಮುಟ್ಟಿಯೂ ಮುಟ್ಟದ ಹಾಗೆ ನಿಂತಿದ್ದ ದೇವ ಕಿಶೋರಿಯೊಬ್ಬಳನ್ನು ಕಂಡೆ-ಕಂಡು ಆಶ್ಚರ್ಯ ಮುಗ್ಧನಾದೆ.

ನನಗೆ ವ್ಯಕ್ತವಾಗಿ ಕಂಡುದು ಅವಳ ಮುಖ ಮಾತ್ರ. ಇತರ ಅಂಗಗಳೆಲ್ಲವೂ ಅವಳ ನಿಬಿಡಕೃಷ್ಣ ಕೇಶರಾಶಿಯಲ್ಲಿ ಮುಳುಗಿಹೋಗಿದ್ದವು. ಅಷ್ಟು ಹೇರಳವಾದ ಕೂದಲನ್ನು ನಾನು ಹಿಂದೆ ಎಂದೂ ಕಂಡವನಲ್ಲ.. ಹ್ಞಾ, ಹಾಗೆ ಹೇಳಲಾರೆ. ಹಿಂದೆ ಎಂದೋ ಬಾಳಿನ ಮಬ್ಬಿನಲ್ಲಿ ಇಂಥ ಕೇಶರಾಶಿಯೊಂದು ನನ್ನ ಭುಜವನ್ನು ಸೋಕಿದ್ದ ಜ್ಞಾಪಕ. ಕುತೂಹಲದಿಂದ ಮುಖವನ್ನು ದೃಷ್ಟಿಸಿ ನೋಡಿದೆ. ಏನು ಅದ್ಭುತ ಸೌಂದರ್ಯವದು! ಈ ರೂಪು ನನಗೆ ಚಿರಪರಿಚಿತವಾದಂತೆ ತೋರಿತು. ಬಾಳನ್ನು ಕಳವಳಗೊಳಿಸಿ, ಅರಕೆಗಳನ್ನು ಎತ್ತಿ ತೋರಿಸಿ, ಹಾಗೂ, ಮೋದಗಳ ಅಣೆಕಟ್ಟೊಡೆದು, ಅಮೃತದ ಮಳೆಗರೆದು, ಭಾವಗಳಿಂದ ಹೃದಯವನ್ನು ಉಲ್ಲೋಲಕಲ್ಲೋಲ ಮಾಡಿದ, ನಾನು ಹಿಂದೆ ಎಂದೋ ಕೇಳಿದ ಗಾನದ ಸ್ಮೃತಿಯಂತೆ ಈ ಕಿಶೋರಿಯ ರೂಪು ನನ್ನ ಹೃದಯವನ್ನು ವಿಚಿತ್ರ ರೀತಿಯಲ್ಲಿ ಕಲಕಿ ಬಿರುಗಾಳಿ ಮಿಂಚುಗಳನ್ನು ಸುಳಿಸಿತು. ಈ ಸಂಪಗೆ ಎಸಳಿನ ಮೂಗು, ಪೂಣಯದ ಹುಚ್ಚು ಪೂವಾಹಕ್ಕೆ ಅಣೆಕಟ್ಟಿದಂತಿರುವ ಪುಟ್ಟಬಾಯಿ, ಅದರ ಕಿಂಡಿಯಂತಿರುವ ತುಟಿಗಳು, ಸ್ನೇಹಪೂರ್ಣವಾದ ತುಂಟುನಗೆಬೆಳಕಿನ ಕಣ್ಣುಗಳು, ಈ ಭ್ರೂಭಂಗಿ, ಈ ಕೇಶರಾಶಿ ! ಹಾಗಾದರೆ ಇವಳಾರು ?