ಪುಟ:Rangammana Vathara.pdf/೪೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
ರಂಗಮ್ಮನ ವಠಾರ
39
 

ರಂಗಮ್ಮನಿಗೆ ತೃಪ್ತಿಯಾಯಿತು. ಬಾಗಿದ ದೇಹದಿಂದ ತಲೆಯನ್ನಷ್ಟೆ ಮೇಲ
ಕ್ಕೆತ್ತಿ ಆತನನ್ನು ನೋಡುತ್ತ ಆಕೆ ಹೇಳಿದರು:
"ಹೋಗ್ಬಿಟ್ಟು ಬರ್ತೀರಾ ಹಾಗಾದ್ರೆ? ನಾಳೆ ಬರ್ತೀರಾ?"
ಆತ 'ಹೂಂ'ಗುಟ್ಟಿದ. ಹಿಂಬಾಲಿಸಿ ಬಂದ ಎಲ್ಲರ ದೃಷ್ಟಿಗಳನ್ನೂ ಹಿಂದೆ
ಬಿಟ್ಟು, ಅಂಗಳಕ್ಕಿಳಿದು, ಕಾಲಿಗೆ ಚಪ್ಪಲಿ ಸಿಕ್ಕಿಸಿಕೊಂಡ. ರಂಗಮ್ಮ ಅಂಗಳದ ವರೆಗೂ
ಬಂದರು.
ಪರೀಕ್ಷೆಯಲ್ಲಿ ಉತ್ತರ ಕೊಟ್ಟು ಬಸವಳಿದು ಬಂದಿದ್ದ ಶಂಕರನಾರಾಯಣಯ್ಯ
ಜುಬ್ಬದ ಜೇಬಿನಿಂದ ಕರವಸ್ತ್ರ ಹೊರತೆಗೆದು ಮುಖ ಒರೆಸಿದ...ಆ ಕ್ಷಣ ಏನನ್ನೋ
ನಿರೀಕ್ಷಿಸಿ ಆತನ ಕಣ್ಣಿ ವೆಗಳು ಕುಣಿದುವು.
"ಒಂದು ವಿಷಯ ನಿಮ್ಮನ್ನ ಕೇಳ್ಬೇಕಾಗಿದೆಯಲ್ಲಮ್ಮ."
"ಏನಪ್ಪಾ ಅದು?"
"ಖಾಲಿ ಮನೇಲಿ ವಾಸವಾಗಿದ್ದೋರು ಅದನ್ನ ಬಿಟ್ಟು ಹೋಗಿ ಎಷ್ಟು ಸಮಯ
ವಾಯ್ತು?"
"ಒಂದು ಎರಡು ವಾರ,ಅಷ್ಟೇ. ಯಾಕಪ್ಪಾ?"
"ಅವರು ಮನೆ ಖಾಲಿ ಮಾಡಲು ಕಾರಣ?"
ರಂಗಮ್ಮನಿಗೆ ಉಗುಳು ಗಂಟಲಲ್ಲಿ ಸಿಲುಕಿಕೊಂಡಿತು. ತಮ್ಮನ್ನು ಮೀರಿಸಿದ
ಜಾಣರಿಲ್ಲ ಎಂದು ಭಾವಿಸಿದ್ದುದಕ್ಕೆ ಇದೀಗ ಶಿಕ್ಷೆ ಎಂದುಕೊಂಡರು. ನಿಜ ಹೇಳಿದರೆ
ಈತ ಬರದೇ ಹೋಗಬಹುದೆಂದು ಅವರಿಗೆ ಭಯವಾಯಿತು. ಸಾವು ಸಂಭವಿಸಿದ
ಮನೆಯಲ್ಲಿ ಸಂಸಾರ ಹೂಡಲು ತಾವಾಗಿಯೇ ಇಷ್ಟಪಡುವವರು ಯಾರು?
ರಂಗಮ್ಮ ಉತ್ತರ ಕೊಡಲು ಅನುಮಾನಿಸುತ್ತಿದ್ದುದನ್ನು ಕಂಡು ಆತನೇ
ಮುಂದುವರಿಸಿದ:
"ಹೇಳಿ. ಪರವಾಗಿಲ್ಲ."
"ಬಡವ....ಇಷ್ಟು ಬಾಡಿಗೆ ಕೊಡೋದು ಕಷ್ಟವಾಯ್ತೂಂತ___"
ಆತ ನಕ್ಕುಬಿಟ್ಟ.
"ನೋಡಿಮ್ಮಾ, ನಾನು ಬರದೇ ಹೋಗ್ಬಹುದೂಂತ ನೀವು ಮುಚ್ಚುಮರೆ
ಮಾಡ್ತಿದೀರ."
"ಹಾಗೇನಿಲ್ಲ....ಅದು... ಈ..."
"ಅಲ್ಲೇ ಕೆಳಗೆ ಹೋಟೆಲಿನವರನ್ನ ಕೇಳ್ದೆ-ಯಾವುದಾದರೂ ಮನೆ ಖಾಲಿ
ಇದೆಯೇ ಅಂತ. ರಂಗಮ್ಮನ ವಠಾರದಲ್ಲೊಂದು ಖಾಲಿ ಇರಬೇಕು-ಅಲ್ಲಿ ಯಾರೋ
ಮೊನ್ನೆ ಸತ್ತರೂಂತ ಆತ ಅಂದ."
"ಹಾಂಗದ್ನೆ? ಅಯ್ಯೋ ಪರಮಾತ್ಮಾ!"
"ಯಾಕೆ? ಯಾರೂ ಸಾಯಲಿಲ್ವೇನು?"