ಪುಟ:Vimoochane.pdf/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹಾಗೆ,ನನ್ನ ಹಾಗೆ.

ಪ್ರತಿ ದಿನವು ಬೆಳಿಗ್ಗೆ ಈತ ಸೆರೆಮನೆಯ ಒಳಗೆ ಒಂದು ಸುತ್ತು ಬರಬೇಕು. ಸಮಾಜದಿಂದ ಬಾಹಿರರಾದ, ಸಮಾಜ ರಕ್ಷಕರು ಗೊತ್ತು ಮಾಡಿದ ನೀತಿ ನಿಯಮಗಳಿಗೆ ವ್ಯತಿರಿಕ್ತವಾಗಿ ನಡೆದ, ರೋಗಿಗಳನ್ನು ಆತ ಪರೀಕ್ಷಿಸಬೇಕು. ಆ ಮನಸ್ಸಿನ ಒಳಹೊಕ್ಕು ಆತನ ಮನೋ ವ್ಯಾಪಾರಗಳನ್ನು ತಿಳಿದುಕೊಳ್ಳಲು ನಾನು ಯತ್ನಿಸಿದ್ದುಂಟು. ಆತನ ಪಾಲಿಗೆ ಇವೆಲ್ಲವು ಸಾಮಾನ್ಯ ವಿಷಯಗಳಾಗಿದ್ದವು. ರೋಗಿಗಳು ಕೈದಿಗಳಾಗಿದ್ದರೇನು ? ಸ್ವತಂತ್ರರಾಗಿದ್ದರೇನು ? ಅವನ ಪಾಲಿಗೆ ಎಲ್ಲರೂ ಒಂದೇ. ಇಲ್ಲಿಯೂ ಆತ ಗೆಳತನದಿಂದ ಸಿರಿವಂತಿಕೆಯಿಂದ ನಡೆನುಡಿಯಿಂದ ಪ್ರಭಾವಿತನಾಗುತ್ತಾನೆ,ಈತ ನನ್ನ ವಕೀಲರ ಸ್ನೇಹಿತ-ಸೆರೆ ಮನೆಯ ಅಧಿಕಾರಿ ಇರುವ ಹಾಗೆ. ಆ ಕಾರಣ ದಿಂದಲೇ ನನ್ಸ ಬಗೆಗೆ ಇಲ್ಲದ ಆಸಕ್ತಿ ಅವನಿಗೆ.

"ಹಲೋ ಚಂದ್ರಶೇಖರ್-ಹೇಗಿದೀರಾ?"

"ಇದೀನಿ ಡಾಕ್ಟರೆ-ಹೀಗೇ ಇದೀನಿ. ನಿಮ್ಮ ಕೃಪೆ ಇರು ವಾಗ ಚಿಂತೆ ಯಾತರದು?

"ಏನಂತಾ ಇದೆ ನಿಮ್ಮ ಕರುಳು?""

"ಓ ಬಿಡಿ,ಡಾಕ್ಟರೆ. ಕರುಳಿಗೇನು? ಅದರ ಗೋಳು ನನಗೆ ತೀರಾ ಸಾಮಾನ್ಯವಾಗಿದೆ."

"ಹಾಗನ್ಬಾರದು ಇವರೆ. ಒಂದು ಸಾರಿ ಸರಿಯಾಗಿ ಪರೀಕ್ಷೆ ಮಾಡೋಣ. ವೈದ್ಯವೃತ್ತಿಗೇ ಸವಾಲು ಹಾಕೊ ಕಾಹಿಲೆ ಅದೆಂ ಥದೋ ನೋಡೋಣ."

ಹಾಗೆ ಹೇಳುವಾಗ ಆತನ ಮುಖ ಗಂಭೀರವಾಯಿತು. ಸೋಲ ನ್ನೊಪ್ಪಿಕೊಳ್ಳಲು ಯಾವ ಡಾಕ್ಟರೂ ಇಷ್ಟಪಡುವುದಿಲ್ಲ...

ಡಾಕ್ಟರು ಮುಂದೆ ಹೋದಮೇಲೆ ಮತ್ತೆ ಅದೇ ಮೌನ. ಯಾರ ತೊಂದರೆಯೂ ಇಲ್ಲದೆ ಬರೆಯುತ್ತ ಹೋಗುವ ಅವಕಾಶ.

ಈ ದಿನ ಶುಕ್ರವಾರ. ನನ್ನ ಜೀವನವೃತ್ತದ ದೀರ್ಘ ಪಯಣದಲ್ಲಿ ಬಾಲ್ಯದ ಹರದಾರಿಗಳನ್ನು ಹಾದು ಬಂದಿದ್ದೇನೆ.