ಮಂಗಳಗೌರಿ ವ್ರತದ ಕಥೆ
ಒಂದಾನೊಂದು ಕಾಲದಲ್ಲಿ ಜಯಪಾಲನೆಂಬ ರಾಜನು ಮಹಿಷ್ಮತಿ ನಗರವನ್ನು ಆಳುತ್ತಿದ್ದನು. ಆ ರಾಜನು ನಿತ್ಯವೂ ಪ್ರಜೆಗಳ ಯೋಗಕ್ಷೇಮವನ್ನು ತಿಳಿದುಕೊಂಡು ಪ್ರಜೆಗಳ ಅಭಿವೃದ್ಧಿಗಾಗಿಯೇ ಸತ್ಕಾರ್ಯಗಳನ್ನು ಮಾಡಿ ಆದರ್ಶನೆನಿಸಿಕೊಂಡಿದ್ದನು. ಅವನ ರಾಣಿಯೂ ಸಾಧ್ವಿ ಮತ್ತು ಸದ್ಗುಣಸಂಪನ್ನೆಯಾಗಿದ್ದಳು. ಹಾಲು-ಜೇನಿನಂತೆ ಅವರಿಬ್ಬರ ದಾಂಪತ್ಯ. ಸತಿ-ಪತಿಯರಿಬ್ಬರೂ ಅಪಾರ ದೈವಭಕ್ತಿಯುಳ್ಳವರು. ಇಂತಹ ರಾಜನ ಪ್ರಜೆಗಳು ನಿಜವಾಗಿಯೂ ಸಂತಸದ ಧನ್ಯತಾಭಾವವನ್ನು ಹೊಂದಿದ್ದರು.
ಜಯಪಾಲ ರಾಜನಿಗೆ ಎಷ್ಟೆಲ್ಲ ಐಶ್ವರ್ಯ ಸುಖ ಸಂಪತ್ತುಗಳಿದ್ದರೂ ಕಾಡುತ್ತಿದ್ದ ಒಂದೇಒಂದು ಚಿಂತೆಯೆಂದರೆ ರಾಣಿಗೆ ಇನ್ನೂ ಸಂತಾನಪ್ರಾಪ್ತಿಯಾಗದಿದ್ದುದು. ಮಕ್ಕಳಾಗಬೇಕೆಂದು ಅವರು ಎಷ್ಟೋ ವ್ರತನೇಮಗಳನ್ನು ಮಾಡಿದರು, ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿದರು, ಹರಕೆಹೊತ್ತರು, ಅತಿಥಿಸತ್ಕಾರ ದಾನಧರ್ಮಗಳನ್ನೂ ಮಾಡಿದರು. ಕೊನೆಗೂ ಪರಮೇಶ್ವರನಿಗೆ ಆ ಅರಸುದಂಪತಿಯ ಮೇಲೆ ಕನಿಕರ ಹುಟ್ಟಿತು. ಶಿವನು ಒಬ್ಬ ವೃದ್ಧ ಭಿಕ್ಷುಕನ ವೇಷದಲ್ಲಿ ಮಧ್ಯಾಹ್ನದ ಹೊತ್ತಲ್ಲಿ ಅಂತಃಪುರದ ಸನಿಹದಲ್ಲಿ ಬಂದು `ಭವತಿ ಭಿಕ್ಷಾಂ ದೇಹಿ...' ಎಂದು ಕೂಗಿದನು. ಆದರೆ ಅಂತಃಪುರದಿಂದ ರಾಣಿಯು ಭಿಕ್ಷೆಯನ್ನು ತರುವುದರೊಳಗಾಗಿಯೇ ಮುನ್ನಡೆದು ಬಿಟ್ಟನು!
ಮಾರನೆ ದಿನವೂ ಇದೇ ರೀತಿಯಾಯಿತು. ಭಿಕ್ಷೆಯನ್ನು ಸ್ವೀಕರಿಸದೆಯೇ ಭಿಕ್ಷುಕನು ತೆರಳಿದ್ದನ್ನು ಗಮನಿಸಿದ ರಾಣಿ ತುಂಬ ದುಃಖಿತಳಾಗಿ ರಾಜನಲ್ಲೂ ಅದನ್ನು ತೋಡಿಕೊಂಡಳು. ಅದಕ್ಕೆ ರಾಜನು ``ನಾಳೆ ಅದೇ ಹೊತ್ತಿಗೆ ಒಂದಿಷ್ಟು ಸುವರ್ಣನಾಣ್ಯಗಳನ್ನು ಹಿಡಕೊಂಡು ಬಾಗಿಲಿನ ಸಂದಿಯಲ್ಲೇ ನಿಂತಿರು. ಭಿಕ್ಷುಕನು ಬರುತ್ತಲೇ ನಾಣ್ಯಗಳನ್ನು ಅವನ ಜೋಳಿಗೆಗೆ ಹಾಕಿಬಿಡು!" ಎಂದು ಸಲಹೆಯಿತ್ತನು. ಮಾರನೆದಿನ ರಾಣಿ ಹಾಗೆಯೇ ಮಾಡಿದಳು. ಭಿಕ್ಷುಕ ಬಂದು ಭವತಿ ಭಿಕ್ಷಾಂದೇಹಿ ಎನ್ನುವಷ್ಟರಲ್ಲೇ ಅವಳು ಮೊರದ ತುಂಬ ನಾಣ್ಯಗಳನ್ನು ಇನ್ನೇನು ಭಿಕ್ಷುಕನ ಜೋಳಿಗೆಗೆ ಹಾಕುವುದರಲ್ಲಿದ್ದಾಗಲೇ ಭಿಕ್ಷುಕನು ತಡೆದು, ``ಮಕ್ಕಳಿಲ್ಲದ ಹೆಂಗಸು ಕೊಟ್ಟ ಭಿಕ್ಷೆಯನ್ನು ನಾನು ಸ್ವೀಕರಿಸುವುದಿಲ್ಲ" ಎಂಬ ಕಠೋರ ಮಾತುಗಳನ್ನಾಡಿಬಿಟ್ಟನು.
ತನ್ನ ಮುಖನೋಡಿಯೇ ಬಂಜೆಹೆಂಗಸಿವಳು ಎಂಬುದನ್ನು ಕಂಡುಕೊಂಡ ಆ ಭಿಕ್ಷುಕ ಸಾಮಾನ್ಯನಲ್ಲ ಯಾರೋ ಮಹಾಮಹಿಮನಿರಬೇಕು ಎಂದು ಗ್ರಹಿಸಿದ ರಾಣಿಯು ಭಿಕ್ಷುಕನ ಪಾದಗಳಿಗೆರಗಿ, ``ಸ್ವಾಮಿ, ತೇಜೋಮಯರಾದ ನೀವು ಬಡಭಿಕ್ಷುಕರಲ್ಲ, ಜಗದೊಡೆಯ ಜಗದೀಶ್ವರನೇ ಇರಬೇಕು. ನನ್ನ ಅಪರಾಧವನ್ನು ಮನ್ನಿಸಿ ನನಗೆ ಈಗಲಾದರೂ ಮಕ್ಕಳಾಗುವಂತೆ ಅನುಗ್ರಹಿಸಿ" ಎಂದು ಬಿನ್ನವಿಸಿಕೊಂಡಳು.
ಭಿಕ್ಷುಕರೂಪದ ಶಿವನು, ``ತಾಯೇ, ಚಿಂತಿಸಬೇಡ. ನಿನ್ನ ಗಂಡ ಕಪ್ಪುಕುದುರೆಯನ್ನೇರಿ ಕಾಳರಾತ್ರಿಯಲ್ಲಿ ಇಲ್ಲೇ ಸಮೀಪದಲ್ಲಿರುವ ಕಾಡಿನತ್ತ ಸಾಗಲಿ. ಕುದುರೆ ಎಲ್ಲಿ ನಿಲ್ಲುತ್ತದೋ ಅಲ್ಲಿ ಅಗೆದುನೋಡಿದರೆ ಭವಾನಿ ದೇಗುಲ ಕಾಣಬರುವುದು. ಭಯಭಕ್ತಿಗಳಿಂದ ಭವಾನಿಯನ್ನು ಅರ್ಚಿಸಿದರೆ ಅವಳು ವರಪ್ರದಾನ ಮಾಡುವಳು" ಎಂದುಹೇಳಿ ಅಂತರ್ಧಾನನಾದನು. ರಾಜರಾಣಿಯರ ಸಂತಸಕ್ಕೆ ಪಾರವೇ ಇಲ್ಲ. ಅಂದುರಾತ್ರಿಯೇ ಕಪ್ಪುಕುದುರೆಯನ್ನೇರಿ ಜಯಪಾಲ ಅರಣ್ಯಕ್ಕೆ ಹೊರಟನು. ಕುದುರೆ ನಿಂತುಬಿಟ್ಟ ಸ್ಥಳವನ್ನು ಅಗೆಸಿದಾಗ ಭಿಕ್ಷುಕ ಹೇಳಿದ್ದಂತೆಯೇ ಸುಂದರವಾದ ಭವಾನಿ ದೇಗುಲ ಕಂಡುಬಂತು. ಜಯಪಾಲ ಆ ದೃಶ್ಯವೈಭವದಿಂದ ಮೂಕವಿಸ್ಮಿತನಾದನು. ಭಕ್ತಿಯಿಂದ ಭವಾನಿದೇವಿಯನ್ನು ಪೂಜಿಸಿದ ರಾಜನಿಗೆ ದೇವಿ ಪ್ರತ್ಯಕ್ಷಳಾದಳು. ವರವನ್ನು ಬೇಡುವಂತೆ ಕೇಳಿದಳು.
ತಂದೆಯಾಗಬೇಕೆಂಬ ಹಂಬಲದ ರಾಜ ಬೇರೇನನ್ನು ತಾನೆ ಬೇಡಿಯಾನು? ಅದಾದರೂ ಅವನಿಗೆ ಸುಗಮವಾಗಿ ಸಿಕ್ಕಲಿಲ್ಲ. ಮಗು ಹುಟ್ಟುತ್ತದೆ ಎಂದು ದೇವಿಯೇನೊ ವರಕೊಟ್ಟಳು, ಆದರೆ ಅದರಲ್ಲೇ ಕೊಂಚ ಕಸಿವಿಸಿಯನ್ನೂ! ``ಅಲ್ಪಕಾಲದಲ್ಲೇ ವಿಧವೆಯಾಗುವ ಹೆಣ್ಮಗಳು ಬೇಕಾ ಅಥವಾ ಅಲ್ಪಾಯುಷ್ಯಿಯಾದ ಗಂಡುಮಗ ಬೇಕಾ?" ಎಂಬ ದೇವಿಯ ಪ್ರಶ್ನೆಗೆ ಉತ್ತರವಾಗಿ ಗಂಡುಮಗು ಹುಟ್ಟುವಂತೆ ವರವನ್ನೇ ಕೋರಿಕೊಂಡನು ಜಯಪಾಲ. ದೇವಿ ``ತಥಾಸ್ತು. ಈ ದೇವಾಲಯದ ಹಿಂಬದಿಯಲ್ಲಿ ಒಂದು ಮಾವಿನಮರವಿದೆ. ಅದರ ಹಣ್ಣನ್ನು ಕೊಯ್ದು ನಿನ್ನ ರಾಣಿಗೆ ತಿನ್ನಲುಕೊಡು. ಅವಳಿಗೆ ಪುತ್ರಭಾಗ್ಯ ಪ್ರಾಪ್ತಿಯಾಗುತ್ತದೆ" ಎಂದು ಆಶೀರ್ವದಿಸಿ ಮಾಯವಾದಳು.
ಒಡನೆಯೇ ದೇಗುಲದ ಹಿಂಭಾಗಕ್ಕೆ ಧಾವಿಸಿದ ರಾಜ ಅಲ್ಲಿ ಮರದ ತುಂಬ ಪಕ್ವವಾದ ಮಾವಿನಹಣ್ಣುಗಳನ್ನು ಕಂಡು ನಲಿದಾಡಿದನು. ಹಣ್ಣುಗಳನ್ನು ಕೊಯ್ದು, ತಾನೂ ತಿಂದು, ಚೀಲದಲ್ಲಿ ಒಂದಿಷ್ಟನ್ನು ಮಡದಿಗೆ ಒಯ್ಯುವವನಿದ್ದನು. ಆಗಲೂ ಅಲ್ಲೊಂದು ಚಮತ್ಕಾರ ನಡೆಯಿತು. ಚೀಲದಲ್ಲಿ ತುಂಬ ಹಣ್ಣುಗಳನ್ನು ತುಂಬಿಸಿದ್ದರೂ ಅರಮನೆಗೆ ತಲುಪಿದಾಗ ಅದರಲ್ಲಿದ್ದದ್ದು ಒಂದೇ ಒಂದು ಹಣ್ಣು! ಅಷ್ಟಾದರೂ ಇದೆಯಲ್ಲಾ ಅದೇ ಭಾಗ್ಯ ಎಂದುಕೊಂಡು ಅದನ್ನು ರಾಣಿಗೆ ಕೊಟ್ಟನು. ದೇವಿಪ್ರಸಾದವೆಂದು ರಾಣಿ ಅದನ್ನು ಸೇವಿಸಿದಳು.
ಭವಾನಿದೇವಿಯ ಆಶೀರ್ವಾದ ಸುಳ್ಳಾಗಲಿಲ್ಲ. ರಾಣಿ ಗರ್ಭವತಿಯಾದಳು. ನವಮಾಸಗಳ ನಂತರ ಅಂದವಾದ ಗಂಡುಮಗು ಹುಟ್ಟಿತು. `ಶಿವಧರ್ಮ'ವೆಂಬ ಹೆಸರನ್ನು ಮಗುವಿಗಿಟ್ಟು ಇದು ಶಿವಪಾರ್ವತಿಯರ ಅನುಗ್ರಹರೂಪವೆಂದು ರಾಜರಾಣಿ ಸಂತೃಪ್ತರಾದರು. ಮಕ್ಕಳಿಲ್ಲ ಮಕ್ಕಳಿಲ್ಲ... ಎಂಬ ಚಿಂತೆಯಾವರಿಸಿದ್ದ ಅರಮನೆ ಅಂತಃಪುರಗಳಲ್ಲಿ ಶಿವಧರ್ಮನ ಬಾಲಲೀಲೆಗಳಿಂದಾಗಿ ಸಂಭ್ರಮೋಲ್ಲಾಸಗಳ ಬೆಳದಿಂಗಳು ಹರಿಯಿತು. ಪುಟ್ಟ ಬಾಲಕನಿಗೆ ಎಂಟು ವರ್ಷಗಳಾದಾಗ ಅವನ ಉಪನಯನವನ್ನೂ ಮಾಡಿದರು.
ಆದರೆ... ಅಲ್ಪಾಯುಷ್ಯಿಯಾದ ಮಗನನ್ನು ತಾನೆ ಭವಾನಿದೇವಿ ಅನುಗ್ರಹಿಸಿದ್ದು? ರಾಣಿಯ ಕನಸಲ್ಲಿ ಒಂದುದಿನ ಅಜ್ಞಾತವ್ಯಕ್ತಿಯೊಬ್ಬ ಕಾಣಿಸಿಕೊಂಡು ``ನಿನ್ನ ಕುಮಾರನ ಆಯುಷ್ಯ ಇನ್ನೇನು ಮುಗಿಯುತ್ತ ಬಂತು. ಇನ್ನು ಒಂದು ವರ್ಷ ಮಾತ್ರ ಅವನು ಬದುಕಬಹುದು" ಎಂದು ಹೇಳಿದಂತೆ ಭಾಸವಾಯಿತು. ಮತ್ತೆ ದಿಗಿಲುಗೊಂಡ ರಾಣಿ ಇದೇನಪ್ಪಾ ಘೋರ ಅನ್ಯಾಯ ಎಂದು ಹಲುಬಿದಳು. ಮಗನನ್ನು ಅಪ್ಪಿಕೊಂಡು ಮಮ್ಮಲಮರುಗಿದಳು, ಅವಳ ಕಣ್ಣೀರಿನ ಹನಿಗಳು ಶಿವಧರ್ಮನಿಗೆ ಸೋಕಿದವು. ``ಯಾಕಮ್ಮಾ ಅಳುತ್ತಿದ್ದೀ?" ಎಂದು ಆತ ಕೇಳಲು ವಿಧಿಯೋಜಿತವನ್ನೆಲ್ಲ ಅವನಿಗೆ ತಿಳಿಸಿಹೇಳಿದಳು.
``ಅದಕ್ಕೇಕೆ ಚಿಂತಿಸಬೇಕು. ನಾನು ಕಾಶಿಯಾತ್ರೆಗೆ ಹೋಗುತ್ತೇನೆ. ನನ್ನ ಮೆಚ್ಚಿನ ಸೋದರಮಾವನೂ ನನ್ನ ಜತೆಗಿರಲಿ. ನಾವಿಬ್ಬರೂ ಅಲ್ಲಿ ಹೋಗಿ ಗಂಗಾಸ್ನಾನ ಮಾಡಿ ವಿಶ್ವೇಶ್ವರನನ್ನು ಧ್ಯಾನಿಸಿ ಪುಣ್ಯ ಸಂಪಾದಿಸಿ ಆಯುಷ್ಯವನ್ನು ವೃದ್ಧಿಸಿ ಬರುತ್ತೇನೆ" ಎಂದು ಸಮಾಧಾನಿಸಿದ ಶಿವಧರ್ಮ. ಹಾಗೇ ಆಗಲೆಂದು ರಾಜರಾಣಿಯರು ಮಗನನ್ನು ಸೋದರಮಾವನ ಜತೆಯಲ್ಲಿ ಕಾಶಿಯಾತ್ರೆಗೆ ಕಳಿಸಿದರು.
ದಾರಿಯಲ್ಲಿ ಪ್ರತಿಷ್ಠಾಪುರವೆಂಬ ಊರಿನ ಉದ್ಯಾನದಲ್ಲಿ ಅವರು ವಿಶ್ರಾಂತಿಗಾಗಿ ನಿಂತರು. ಆ ಉದ್ಯಾನದ ಒಂದು ಪಕ್ಕದಲ್ಲೇ ಕೆಲವು ಕನ್ನಿಕೆಯರು ಆಟ ಆಡುತ್ತ ಇದ್ದರು. ಕೊನೆಯಲ್ಲಿ ಸಲಿಗೆಯ ಆಟ ಜಗಳವಾಗಿ ಮಾರ್ಪಟ್ಟು ಬೈಗುಳ, ಅವಾಚ್ಯಶಬ್ದಗಳಿಂದ ನಿಂದನೆಗಳೆಲ್ಲ ಶುರುವಾದುವು. ಒಬ್ಬಾಕೆಯಂತೂ `ರಂಡೆ ಮುಂಡೆ...' ಎಂದು ಅರಚುವಷ್ಟು ವ್ಯಗ್ರಳಾಗಿದ್ದಳು. ಅವಳು ಹಾಗೆ ಬೈಯುವುದಕ್ಕೂ, ಸುಶೀಲಾ ಎಂಬ ಕನ್ನಿಕೆ ತನ್ನ ತಂದೆಯೊಡನೆ ಉದ್ಯಾನಕ್ಕೆ ಬರುವುದಕ್ಕೂ ಸರಿಯಾಯಿತು. ``ಹಾಗೆಲ್ಲ ಕೆಟ್ಟ ಮಾತಾಡಬೇಡ. ನನ್ನಮ್ಮ ಮಂಗಳಗೌರಿಯ ಭಕ್ತೆ. ನಮ್ಮ ಮನೆಯಲ್ಲಿ ಅಂಥ ನೀಚರಾರೂ ಇಲ್ಲ" ಎಂದುಬಿಟ್ಟಳು ಸುಶೀಲೆ.
ಸುಶೀಲೆಯ ತಂದೆಗೆ ಅವಳ ವಿವಾಹದ ಬಗ್ಗೆ ಯೋಚನೆ ಇತ್ತು. ಆಗಲೇ ಆಕಾಶವಾಣಿಯೊಂದು ``ಇದೇ ಉದ್ಯಾನದಲ್ಲಿ ಶಿವಧರ್ಮನೆಂಬ ತರುಣನು ವಿಶ್ರಮಿಸುತ್ತಿದ್ದಾನೆ. ಅವನೇ ಸುಶೀಲೆಗೆ ಯೋಗ್ಯನಾದ ವರ!" ಎಂದು ಕೇಳಿಬಂತು. ಸುಶೀಲೆಯ ತಂದೆ ಶಿವಧರ್ಮನನ್ನು ಭೇಟಿಯಾಗಿ ಅವನನ್ನು ವಿವಾಹಕ್ಕೆ ಒಲಿಸಿ, ಅವನ ಸೋದರಮಾವನ ಒಪ್ಪಿಗೆಯನ್ನೂ ಪಡೆದು, ಮಗಳನ್ನು ಧಾರೆಯೆರೆದುಕೊಟ್ಟನು.
ಅಂದು ಸುಶೀಲಾ-ಶಿವಧರ್ಮರ `ಮೊದಲ ರಾತ್ರಿ'. ಸುಶೀಲೆಯ ಕಣ್ಣೆದುರು ಮಂಗಳಗೌರಿ ಪ್ರತ್ಯಕ್ಷಳಾದಂತಾಗಿ ``ನಿನ್ನ ಕೈಹಿಡಿದವ ಅಲ್ಪಾಯುಷ್ಯಿ. ಇವತ್ತಿಗೆ ಅವನ ಇಹಲೋಕಯಾತ್ರೆ ಸಮಾಪ್ತವಾಗುವುದು. ಇನ್ನು ಕೆಲವೇ ಕ್ಷಣಗಳಲ್ಲಿ ಕೃಷ್ಣಸರ್ಪವೊಂದು ಬಂದು ಅವನನ್ನು ಕಚ್ಚಿ ಸಾಯಿಸುತ್ತದೆ. ಆದರೆ ನೀನು ಹಾಗಾಗದಂತೆ ನೋಡಿಕೋ. ಸರ್ಪ ಬಂದಾಗ ಹಾಲು ತುಂಬಿದ ಕಲಶವನ್ನು ಅದರೆದುರಿಗೆ ಹಿಡಿ. ಹಾಲು ಕುಡಿಯಲು ಅದರೊಳಗೆ ಸರ್ಪ ಇಣುಕಿಗಾಗ ಬಟ್ಟೆಯಿಂದ ಬಿಗಿಯಾಗಿ ಅದನ್ನು ಮುಚ್ಚಿ ಬಂಧಿಸಿಬಿಡು. ನಾಳೆ ಬೆಳಿಗ್ಗೆ ಆ ಕಲಶವನ್ನು ನಿನ್ನ ಅಮ್ಮನಿಗೆ ಬಾಗಿನವಾಗಿ ಕೊಡು. ಹೀಗೆ ಮಾಡುವುದರಿಂದ ನಿನ್ನ ಗಂಡನ ಅಯುಷ್ಯ ನವೀಕರಣಗೊಳ್ಳುತ್ತದೆ!" ಎಂದಳು.
ಅದಾದಮೇಲೆ ಕೆಲ ಕ್ಷಣಗಳಲ್ಲೇ ಬಂದೇಬಿಟ್ಟಿತು ಭುಸುಗುಡುತ್ತ ಹೆಡೆಯೆತ್ತುತ್ತ ಕೃಷ್ಣಸರ್ಪ! ಸುಶೀಲೆಯಾದರೂ ಒಂದಿನಿತೂ ಭಯಪಡದೆ ಮಂಗಳಗೌರಿಯ ಆಜ್ಞೆಯಂತೆಯೇ ಆ ಸರ್ಪವನ್ನು ಕಲಶದೊಳಗೆ ಬಂಧಿಸುವುದರಲ್ಲಿ ಯಶಸ್ವಿಯಾದಳು. ಅದುವರೆಗೂ ಮೂರ್ಛೆಹೋದಂತಿದ್ದ ಶಿವಧರ್ಮ ಮೆಲ್ಲಗೆ ಚೇತರಿಸಿ ತನಗೆ ಹಸಿವೆಯಾಗುತ್ತಿದೆ ಎಂದನು. ಬೆಳ್ಳಿಬಟ್ಟಲಲ್ಲಿ ಲಡ್ಡು ಮತ್ತಿತರ ಉಪಾಹಾರವನ್ನು ಅವನಿಗೆ ತಂದುಕೊಟ್ಟಳು ಸುಶೀಲೆ. ಉಪಾಹಾರ ತಿಂದು ಸಂತೃಪ್ತನಾದ ಶಿವಧರ್ಮನು ತನ್ನ ಉಂಗುರವನ್ನು ಸುಶೀಲೆಗೆ ಉಡುಗೊರೆಯಾಗಿ ಕೊಟ್ಟನು. ಅದನ್ನು ಬಟ್ಟಲಲ್ಲೇ ಇಟ್ಟು ಆಮೇಲೆ ಸುಖಿಸಿ ಶಯನಗೈದರು ಸತಿಪತಿಯರು.
ಥಟ್ಟನೆ ಕಾಶಿಯಾತ್ರೆಯ ನೆನಪಾದ ಶಿವಧರ್ಮ ನಸುಕಾಗುವುದರೊಳಗೆ ಎದ್ದು ದಡಬಡನೆ ಓಡಿ ತನ್ನ ಸೋದರಮಾವನನ್ನೂ ಹುಡುಕಿಕೊಂಡು ಹೊರನಡೆದೇ ಬಿಟ್ಟ. ಸುಶೀಲೆ ಎದ್ದಾಗ ಗಂಡನ ಪತ್ತೆಯೇ ಇಲ್ಲ. ಅವಳಿಗೆ ಗಾಬರಿಯಾಯಿತು. ಜತೆಯಲ್ಲೇ ಹಿಂದಿನರಾತ್ರಿ ಮಂಗಳಗೌರಿದೇವಿಯು ಹೇಳಿದ್ದ ಬಾಗಿನದ ನೆನಪಾಯಿತು. ಹಾವನ್ನು ಹಿಡಿದಿಟ್ಟಿದ್ದ ಕಲಶವನ್ನು ದೇವಿಯಪ್ಪಣೆ ಪ್ರಕಾರ ತನ್ನ ಅಮ್ಮನಿಗೆ ಒಯ್ದುಕೊಟ್ಟಳು. ಆಗ ಅಲ್ಲಿ ಮತ್ತೊಂದು ಚಮತ್ಕಾರ ನಡೆಯಿತು. ಸುಶೀಲೆಯ ಅಮ್ಮ ಆ ಕಲಶವನ್ನು ತೆರೆದುನೋಡಿದಾಗ ಅದರೊಳಗೆ ಹಾವಿನ ಬದಲಿಗೆ ರತ್ನದ ಹಾರ ಇತ್ತು! ಇದೆಲ್ಲ ದೇವಿಯ ಮಹಿಮೆ ಎಂದು ಧನ್ಯಭಾವದಿಂದ ಅದನ್ನವಳು ಸುಶೀಲೆಗೇ ತೊಡಿಸಿದಳು.
ಗಂಡನ ಸುಳಿವಿಲ್ಲದೆ ಚಿಂತಾಕ್ರಾಂತಳಾದ ಸುಶೀಲೆ ತನ್ನ ತಂದೆಯೊಡನೆ ಸಮಾಲೋಚಿಸಿದಳು. ಅವರಿಬ್ಬರು ಒಂದು ಅನ್ನಛತ್ರವನ್ನು ಆರಂಭಿಸುವ ನಿರ್ಧಾರ ಕೈಗೊಂಡರು. ಅಲ್ಲಿಗೆ ಬರುವ ಅತಿಥಿ-ಅಭ್ಯಾಗತರನ್ನು ಅನ್ನ-ವಸ್ತ್ರ-ತಾಂಬೂಲಗಳಿಂದ ಸತ್ಕರಿಸುವ ಕೈಂಕರ್ಯ ಮಾಡತೊಡಗಿದರು. ಒಂದಲ್ಲ ಒಂದು ದಿನ ಆ ದಾರಿಯಾಗಿ ಶಿವಧರ್ಮ ಬರಬಹುದು, ಆಗ ಮತ್ತೆ ಅವನನ್ನು ತಾನು ಸೇರಬಹುದು ಎಂಬುದು ಸುಶೀಲೆಯ ನಿರೀಕ್ಷೆ. ಹಾಗೆಯೇ ಆಯಿತು, ಕಾಶಿಯಾತ್ರೆ ಮುಗಿಸಿದ ಶಿವಧರ್ಮ ತನ್ನ ಸೋದರಮಾವನೊಂದಿಗೆ ಹಿಂದಿರುಗುತ್ತ ಮತ್ತೆ ಪ್ರತಿಷ್ಠಾಪುರದ ಅದೇ ಉದ್ಯಾನಕ್ಕೆ ವಿಶ್ರಾಂತಿಗಾಗಿ ಬಂದನು. ಈ ಸಮಾಚಾರವನ್ನು ತಿಳಿದ ಸುಶೀಲೆ ಅವನನ್ನು ಗುರುತಿಸಿ ಅನ್ನಛತ್ರಕ್ಕೆ ಬರಮಾಡಿಕೊಂಡಳು.
ಸುಶೀಲೆ ಯಾರೆಂದು ಶಿವಧರ್ಮನಿಗೆ ಒಂದೊಮ್ಮೆ ಗುರುತು ಸಿಗಲಿಲ್ಲವಾದರೂ ಶೋಭನರಾತ್ರಿಯಂದು ಅವನು ಕೊಟ್ಟಿದ್ದ ಉಂಗುರವನ್ನು ತೋರಿಸಿದಾಗ ಎಲ್ಲವೂ ನೆನಪಾಯಿತು. ಸುಶೀಲೆ ಶಿವಧರ್ಮನೊಂದಿಗೆ ತನ್ನ ತಂದೆತಾಯಿ ಇದ್ದಲ್ಲಿಗೆ ಹೋಗಿ ಅವರಿಗೆ ವಿಷಯವನ್ನೆಲ್ಲ ತಿಳಿಸಿದಳು. ದೇವಿಮಹಿಮೆಯಿಂದ ಹೃದಯತುಂಬಿ ಬಂದ ಅವರು ಇನ್ನೊಮ್ಮೆ ಮಂಗಳಗೌರಿ ಪೂಜೆಯನ್ನೇರ್ಪಡಿಸಿದರು. ಆಮೇಲೆ ಸುಶೀಲೆಯನ್ನು ಗಂಡ ಶಿವಧರ್ಮನೊಂದಿಗೆ ಅತ್ತೆ-ಮಾವರ ಮನೆಗೆ ಹರಸಿ ಕಳಿಸಿದರು. ಮಹಿಷ್ಮತಿ ನಗರದಲ್ಲೂ ರಾಜ ಜಯಪಾಲ ತನ್ನ ರಾಣಿಯೊಂದಿಗೆ ಮಗ-ಸೊಸೆಯನ್ನು ಪ್ರೀತಿಯಿಂದ ಬರಮಾಡಿಕೊಂಡನು. ಕಳೆದ ಒಂದು ವರ್ಷದಲ್ಲಿ ನಡೆದ ಘಟನೆಗಳನ್ನೆಲ್ಲ ಶಿವಧರ್ಮ-ಸುಶೀಲೆಯರಿಂದ ತಿಳಿದುಕೊಂಡನು.
ಮದುವೆಯಾಗಿ ಐದು ವರ್ಷಗಳಾಗುವವರೆಗೂ ಶ್ರಾವಣಮಾಸದ ಪ್ರತಿ ಮಂಗಳವಾರದಂದು ಸುಶೀಲೆ ಮಂಗಳಗೌರಿ ವ್ರತವನ್ನಾಚರಿಸಿದಳು. ಅಷ್ಟೈಶ್ವರ್ಯ ಸಕಲ ಸೌಭಾಗ್ಯಗಳು ಅವಳಿಗೆ ಮತ್ತು ಅವಳ ಕುಟುಂಬವರ್ಗಕ್ಕೆಲ್ಲ ಪ್ರಾಪ್ತಿಯಾದುವು. ಸುಶೀಲೆಯ ನಂತರ, ನವಿವಿವಾಹಿತ ಹೆಣ್ಣು ಮೊದಲ ಐದು ವರ್ಷ ಮಂಗಳಗೌರಿ ವ್ರತವನ್ನಾಚರಿಸುವ ಸಂಪ್ರದಾಯ ಲೋಕರೂಢಿಗೆ ಬಂತು. ಭಕ್ತಿಭಾವಗಳಿಂದ ವ್ರತವನಾಚರಿಸುವವರಿಗೆ ಮಂಗಳಗೌರಿಯ ಅನುಗ್ರಹ ಕಟ್ಟಿಟ್ಟ ಬುತ್ತಿಯೆಂದು ಪ್ರತೀತಿಯಾಯಿತು.
|| ಶ್ರೀರಸ್ತು ಶುಭಮಸ್ತು ಐಶ್ವರ್ಯಮಸ್ತು ||