ಮಹಾಕ್ಷತ್ರಿಯ/ರೇವು ಸಿಕ್ಕಿತು

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

೭.ರೇವು ಸಿಕ್ಕಿತು[ಸಂಪಾದಿಸಿ]

ಇಂದ್ರಾಣಿಯು ತನ್ನ ದೇವಮಂದಿರದಲ್ಲಿ ಕುಳಿತು ದೇವದೂತನಾದ ಯಜ್ಞೇಶ್ವರನನ್ನು ನಿರೀಕ್ಷಿಸುತ್ತಿದ್ದಾಳೆ. ಸುವರ್ಣಮಯವಾದ ಆಸನದಲ್ಲಿ ಕುಳಿತು ತಾನೂ ಒಂದು ಅರಿಶಿನ ಮುದ್ದೆಯೋ ಎಂಬಂತೆ, ಪೀತಾಂಬರವನ್ನುಟ್ಟು ಹೇಮಮಯವಾದ ವಿಭೂಷಣಗಳನ್ನಿಟ್ಟು ತನ್ನ ಇಂದ್ರಾಣಿ ಪದ-ಸೂಚಕವಾದ ಪದಕವನ್ನೂ ಕಿರೀಟವನ್ನೂ ಮಾತ್ರ ಧರಿಸಿ, ಅಲ್ಪಾಭರಣ ಸುಂದರಿ ಯಾಗಿದ್ದಾಳೆ. ಪ್ರಹರಿಯು ಬಂದು ಯಜ್ಞೇಶ್ವರನ ಆಗಮನವನ್ನೂ ಸೂಚಿಸಿದಳು. ಇಂದ್ರಾಣಿಯು ಯಜ್ಞೇಶ್ವರನನ್ನು ಬರಮಾಡಿಕೊಂಡಳು. ಸಮಯೋಚಿತವಾಗಿ ಎರಡು ಮಾತನಾಡಿ ಬೃಹಸ್ಪತ್ಯಾಚಾರ್ಯನ ವಿಷಯವನ್ನು ಕೇಳಿದಳು. ಯಜ್ಞೇಶ್ವರನು “ಆತನು ಈಗ ಬ್ರಹ್ಮಲೋಕದಲ್ಲಿರುವನು. ಬೇಕೆಂದರೆ ಅಲ್ಲಿಗೆ ಹೋಗಿ ಆತನನ್ನು ನೋಡಿಕೊಂಡು ಬರಬಹುದು” ಎಂದನು.

ಇಂದ್ರಾಣಿಗೆ ಏನೋ ಭಾರವಿಳಿದಂತಾಯಿತು. ಯಜ್ಞೇಶ್ವರನನ್ನು ಕೇಳಿದಳು- “ನಾನು ಆತನನ್ನು ನೋಡಬೇಕಲ್ಲ.”

“ದೇವರಾಜ್ಞಿ, ನೀನಲ್ಲದೆ ಇನ್ನು ಯಾರು ಬೇಕಾದರೂ ಆತನನ್ನು ನೋಡಬಹುದು.”

“ಹಾಗೆಂದರೆ ?”

“ಹೌದು. ನಿಜ ದೇವರಾಜ್ಞಿಯು ದೇವರಾಜನ ಅಪ್ಪಣೆಯಿಲ್ಲದೆ ಈ ಲೋಕವನ್ನು ಬಿಟ್ಟುಹೋಗುವಂತಿಲ್ಲ. ಆತನು ತಾನಾಗಿ ಈ ದೇವಲೋಕವನ್ನು ಬಿಟ್ಟು ಹೋಗಿರುವನಾಗಿ ಮತ್ತೆ ದೇವೇಂದ್ರನ ಅಪ್ಪಣೆಯಿಲ್ಲದೆ ಈ ಲೋಕಕ್ಕೆ ಬರುವಂತಿಲ್ಲ. ಅದರಿಂದ ನೀವಿಬ್ಬರೂ ಒಬ್ಬರನ್ನೊಬ್ಬರು ನೋಡುವುದು ಅಸಾಧ್ಯ.”

“ನೋಡಲೇ ಬೇಕಾಗಿದ್ದರೆ ಏನು ಮಾಡಬೇಕು ಅದನ್ನು ಹೇಳು.”

“ದೇವರಾಜನ ಅಪ್ಪಣೆಯನ್ನು ಪಡೆದರೆ, ನೀನಾದರೂ ಅಲ್ಲಿಗೆ ಹೋಗಬಹುದು. ಅಥವಾ ಆತನಾದರೂ ಇಲ್ಲಿಗೆ ಬರಬಹುದು. ಆದರೆ ಎರಡೂ ಅನರ್ಥಕಾರಿಗಳು.”

“ಅದೇನು ಹಾಗೆನ್ನುವೆ ಯಜ್ಞೇಶ್ವರ ?”

“ಹೌದೋ ಅಲ್ಲವೋ ನೋಡು. ನೀನು ಅವ್ಯಾಪಾರಿಯಂತೆ, ತಲೆಮರೆಸಿ ಕೊಂಡು ಏಕಾಂಗಿಯಾಗಿ ಬ್ರಹ್ಮಲೋಕಕ್ಕೆ ಹೋಗುವಂತಿಲ್ಲ. ಅಥವಾ ಆತನೇ ಬಂದರೂ, ಏಕಾಂತದಲ್ಲಿ ನಿನ್ನನ್ನು ಕಂಡರೂ ಅದು ದೇವಲೋಕದಲ್ಲೆಲ್ಲಾ ಗುಲ್ಲೋ ಗುಲ್ಲಾಗುವುದು. ಈಗ ತಾನೇ ವಿಶ್ವರೂಪಾಚಾರ್ಯನು ದೇವರಾಜನನ್ನು ಸೂರಾಪಾನ ವಿಚಾರದಲ್ಲಿ ತಿರಸ್ಕರಿಸಿರುವನು. ಈ ದಿನ ನಿಮ್ಮ ನಿಮ್ಮ ಸಂದರ್ಶನವಾದರೆ, ಅರ್ಥವೇನು ? ನೀನೇ ಹೇಳು ?”

“ಆಯಿತು. ಇದನ್ನು ಸಾಧಿಸುವ ದಾರಿ ಯಾವುದು ಹೇಳು ?”

“ಬೇರೇ ಸಾಧನವೇ ಇಲ್ಲ, ಇದು ದೂತಮುಖವಾಗಿಯೇ ಆಗಬೇಕು”

“ಹಾಗಾದರೆ, ನಿನ್ನಿಂದಲೇ ಆಗಬೇಕು ಎಂದಾಯಿತು.”

“ನಾನು ಬೇಡ. ಇನ್ನು ಯಾರಾದರೂ ಹೋಗಿಬರಲಿ. ನಾನು ಹೋಗಿ ಬಂದರೆ ಅದನ್ನು ಗುಟ್ಟಾಗಿಟ್ಟಿರಲು ಸಾಧ್ಯವಿಲ್ಲ.

“ನಾನು ಕೇಳಬೇಕೆಂದಿರುವ ವಿಚಾರವನ್ನು ನಿನಗಲ್ಲದೆ ಇನ್ನು ಯಾರಿಗೂ ಹೇಳುವಂತಿಲ್ಲ.”

“ನಾನು ಬಲ್ಲೆ. ನೀನು ಕೇಳಬೇಕೆಂದಿರುವುದಿಷ್ಟು ; ನೀನು ಮತ್ತೆ ಯಾವಾಗ ಬಂದು ದೇವಾಚಾರ್ಯತ್ವವನ್ನು ವಹಿಸಿಕೊಳ್ಳುವೆಯೆಂದು ಕೇಳಬೇಕು. ಹೌದೋ ಅಲ್ಲವೋ ?”

“ನೀನು ಜಾತವೇದ, ಕೇಳಬೇಕೆ ? ಮುಖವನ್ನು ನೋಡುತ್ತಿದ್ದ ಹಾಗೆಯೇ ಭಾವವನ್ನು ಗ್ರಹಿಸುವೆ. ಆಯಿತು. ಇದಕ್ಕೆ ಮತ್ತೆ ಯಾರನ್ನು ವಿನಿಯೋಗಿಸೋಣ? ಹೇಳು.”

“ವಾಯುವನ್ನು ಕೇಳು. ಆತನು ಮಾತರೀಶ್ವನು. ಒಂದು ಕ್ಷಣದಲ್ಲಿ ಮನೋವೇಗದಿಂದ ಎಲ್ಲೆಂದರಲ್ಲಿಗೆ ಹೋಗಿಬರಬಲ್ಲವನು.”

“ಆಗಬಹುದು.”

ಯಜ್ಞೇಶ್ವರನು ಎದ್ದು ಕೈಮುಗಿದು, ಆಕಾಶದಲ್ಲಿ ಮುಷ್ಠಿಮಾಡಿ ಒಂದು ಆಸನದ ಮೇಲೆ ಆ ಮುಷ್ಠಿಯನ್ನು ಇಟ್ಟನು. ಅಲ್ಲೊಂದು ಪುರುಷಾಕೃತಿಯು ಕಾಣಿಸಿತು. ಅದು ಎದ್ದು ಇಂದ್ರಾಣಿಗೆ ಅಭಿವಂದನೆ ಮಾಡಿ “ನಾನು ವಾಯು. ನನ್ನಿಂದ ಏನಾಗಬೇಕು ? ಅಪ್ಪಣೆಯಾಗಲಿ’ ಎಂದಿತು.

ಇಂದ್ರಾಣಿಯು ಯಜ್ಞೇಶ್ವರನ ಮುಖ ನೋಡಿದಳು. ಯಜ್ಞೇಶ್ವರನು “ಮಿತ್ರ ಬೃಹಸ್ಪತಿಯ ಬಳಿಗೆ ಹೋಗಿ, ಆತನು ದೇವಲೋಕಕ್ಕೆ ಬಂದು ಧರ್ಮಾಚಾರ್ಯತ್ವವನ್ನು ಯಾವಾಗ ಪರಿಗ್ರಹಿಸುವನು ಎಂದು ಕೇಳಿಕೊಂಡು ಬರಬೇಕು. ಇದು ಸರ್ವವ್ಯಾಪಿಯಾದ ನಿನ್ನಿಂದ ಮಾತ್ರ ಸಾಧ್ಯ. ಅದಕ್ಕಾಗಿ ನಿನ್ನನ್ನು ಈಗ ಬರಮಾಡಿಕೊಂಡುದು.”

“ಇಂದ್ರಾಣಿಯ ಅಪ್ಪಣೆಯಾದರೆ ಆಗಬಹುದು. ನೀನು ಮಾಡಿದರೆ ಆಗುತ್ತಿರಲಿಲ್ಲವೇನೋ ?”

“ನಾನು ಮಾಡಿದರೆ, ಎಲ್ಲರಿಗೂ ತಿಳಿದು ಹೋಗುವುದು. ಅದರಿಂದ, ಅಲ್ಲವೆ, ಒಂದು ಮಾತು ಹೇಳಿ ಹೋಗು. ನಿನ್ನೆ ವಿಶ್ವರೂಪಾಚಾರ್ಯನಿಗೂ ದೇವರಾಜನಿಗೂ ಆದ ಮನಃಕ್ಷೋಭದ ವಿಚಾರವಾಗಿ ದಾನವಲೋಕದಲ್ಲಿ ಏನೇನು ಪ್ರತಿಕ್ರಿಯೆಗಳಾಗಿವೆ?”

“ಇದುವರೆಗೆ ವಿಶ್ವರೂಪಾಚಾರ್ಯನು ಬೆಳೆಸಿಕೊಟ್ಟಿರುವ ತೇಜಸ್ಸು ಒಬ್ಬ ಅಸುರಶ್ರೇಷ್ಠನಾಗಲು ಸಾಕಾಗಿದೆ. ಅದನ್ನು ಅವರು ಮುಂದುಮಾಡಿಕೊಂಡು ದೇವಲೋಕದ ಮೇಲೆ ನುಗ್ಗಬೇಕೆಂದಿದ್ದರು. ಆದರೆ ಆತನೇ ಕೊಟ್ಟಿರುವ ನಾರಾಯಣ ಕವಚವು ಅಭೇದ್ಯವೆಂದು ಅವರು ಹೆದರಿ ತಡೆದಿದ್ದರು. ನಿನ್ನೆ ಆಚಾರ್ಯನು ‘ನನ್ನ ಜೀವನದ ಅನಂತರ ಆ ತೇಜಸ್ಸು ಒಟ್ಟುಗೂಡುವುದು’ ಎಂದುದರಿಂದ ದಾನವರಿಗೆ ಹೊಸ ಚೇತನ ಬಂದಿದೆ. ಆದರೆ ವಿಶ್ವರೂಪಾಚಾರ್ಯನು ಎಂದಿಗೆ ಸತ್ತಾನೋ ಎಂದು ಒಳಗೊಳಗೇ ಯೋಚಿಸುತ್ತಿದ್ದಾರೆ. ಅಲ್ಲದೆ, ಅವರು ಶುಕ್ರಾಚಾರ್ಯನನ್ನು ಏಕಾಂತದಲ್ಲಿ ಕಂಡು ಮತ್ತೆ ತಮ್ಮ ಅಭ್ಯುದಯಕಾಲವು ಯಾವಾಗ ಎಂದು ಕೇಳಿದರೆಂದೂ, ಆತನು ಭವಿಷ್ಯತ್ತನ್ನು ನೋಡಿ ಇನ್ನೂ ಕೊಂಚ ಕಾಲ ಕಳೆಯಬೇಕು ಎಂದನೆಂದೂ ವದಂತಿ. ಸಾಲದೆ, ನಿನ್ನೆ ದೇವರಾಜನು ರೇಗಿ ವಿಶ್ವರೂಪನನ್ನು ಘಾತಿಮಾಡುವನು ಎಂದೇ ಅವರ ನಂಬಿಕೆಯಿತ್ತು. ಅಂತೂ ಇನ್ನು ಕೆಲವು ಕಾಲವಾದ ಮೇಲಾದರೂ ಅದು ಆಗಿಯೇ ತೀರುವುದೆಂದು ಅವರ ನಂಬಿಕೆ.”

“ಇದಿಷ್ಟೂ ದೇವರಾಜನಿಗೆ ವರದಿಯಾಗಿದೆಯೇ ?”

“ಹೌದು. ಆಗಿದೆ” -ಎನ್ನುತ್ತಾ ದೇವರಾಜನೇ ಒಳಗೆ ಬಂದನು. ಮೂವರು ಸಂಭ್ರಮದಿಂದ ದೇವರಾಜನಿಗೆ ಅಭಿವಂದಿಸಿ, ಆತನು ಕುಳಿತ ಮೇಲೆ ಆತನಪ್ಪಣೆಯಿಂದ ಸ್ವಸ್ಥಾನಗಳಲ್ಲಿ ಕುಳಿತರು. ಶಚಿಯಪ್ಪಣೆಯಿಂದ ಯಜ್ಞೇಶ್ವರನು ತಾವು ಮಾಡಬೇಕೆಂದಿರುವುದನ್ನು ಹೇಳಿದನು.

ದೇವೇಂದ್ರನು ಹೇಳಿದನು : “ಬ್ರಹ್ಮಲೋಕದಲ್ಲಿ ಬೃಹಸ್ಪತಿಯು ಪ್ರಕಟವಾಗಿರುವನೆಂದು ನನಗೂ ಈಗ ವಾರ್ತೆಯು ಬಂತು. ಅದರಿಂದ, ಅಗ್ನಿವಾಯುಗಳಲ್ಲಿ ಒಬ್ಬರನ್ನು ಕಳುಹಿಸು ಎಂದು ಹೇಳಲು ನಾನು ಇಲ್ಲಿಗೆ ಬಂದೆನು. ಅಗ್ನಿಗಿಂತ ಈ ದೌತ್ಯಕ್ಕೆ ವಾಯುವೇ ಸರಿ. ಹೋಗಿ ಬರಲಿ. ನಾನೇನು ಮಾಡಬೇಕೆಂದಿದ್ದೆ ಬಲ್ಲೆಯಾ, ಯಜ್ಞೇಶ್ವರ ? ಉಪಶ್ರುತಿ ದೇವಿಯನ್ನು ಕಳುಹಿಸಿ ಬೃಹಸ್ಪತಿಯನ್ನು ಹುಡುಕಿಸಬೇಕು ಎಂದಿದ್ದೆ.”

“ಆಯಿತು ನಿನ್ನೆಯ ಸಮಾಚಾರವೇನು ?” ಅಗ್ನಿವಾಯುಗಳಿಬ್ಬರು ಸಣ್ಣ ದನಿಯಲ್ಲಿ ಕೇಳಿದರು.

ಇಂದ್ರನು ತಾನು ಹಿಂದಿನ ದಿನ ಅನುಭವಿಸಿದ ಚಿತ್ತಕ್ಷೋಭವನ್ನು ತೋರಿಸುವವನಂತೆ ಹುಬ್ಬುಗಂಟಿಕ್ಕಿಕೊಂಡು, “ನಿನ್ನೆ ಬಹು ಕಷ್ಟದಿಂದ ತಡೆದುಕೊಂಡೆ. ಎರಡು ಸಲ ಆಯುಧವನ್ನು ಹಿರಿದು ಹಾಗೆಯೇ ಹೊಡೆದುಹಾಕಬೇಕೆಂದಿದ್ದೆ. ಕೊನೆಯ ಮಾತಂತೂ ಅದೆಷ್ಟು ನಿಷ್ಠುರ ! ‘ಇತರರಿಗೆ ರಕ್ಷೆಯನ್ನು ಕೊಡಬಲ್ಲವರು ಆತ್ಮರಕ್ಷೆಯನ್ನೂ ಬಲ್ಲರು.’ ಇಂದ್ರನು ರೇಗಿದರೆ ಯಾರ ಆತ್ಮರಕ್ಷೆಯು ಎದುರಾಗುವುದು ನೋಡೋಣೆನ್ನಿಸಿತು. ಅದರೆ ನಾನಾಗಿ ವರಿಸಿದ ಧರ್ಮಾಚಾರ್ಯನೆಂದು ಸುಮ್ಮನಾದೆ. ಅಂತೂ ನನ್ನ ಪಾಲಿಗೆ ಬ್ರಹ್ಮಹತ್ಯೆ ತಪ್ಪಿದುದಲ್ಲ. ಇನ್ನು ಯಾವಾಗಲಾದರೂ ಈತನು ಹೀಗೆ ಮತ್ತೆ ರೇಗಿಸಿದರೆ ಏನಾಗುವುದೋ ಹೇಳಲಾರೆ.”

“ಆಯಿತು ಹಾಗಾದರೆ ಬೃಹಸ್ಪತ್ಯಾಚಾರ್ಯರ ಬಳಿಗೆ ಹೋಗಿಬರಬಹುದಷ್ಟೆ?”

“ಹೋಗಿ ಬನ್ನಿ ಬೃಹಸ್ಪತ್ಯಾಚಾರ್ಯರು ಬರುವುದಾದರೆ, ನನಗೆ ಬ್ರಹ್ಮಹತ್ಯೆಯು ತಪ್ಪಿದುದಲ್ಲ. ಅದನ್ನು ಹೇಗೆ ನಿವಾರಿಸಿಕೊಳ್ಳಬೇಕು, ಅದನ್ನು ನೀವು ಮೂವರೇ ಗೊತ್ತುಮಾಡಿಟ್ಟಿರಿ.”

“ಅದೇನು ಅಷ್ಟು ದೊಡ್ಡ ವಿಷಯವಲ್ಲ. ಪಾಪವು ಅಖಂಡವಾಗಿರದಂತೆ ಒಡೆಯುವುದು. ವರವು ಬೇಕೆಂದವರಿಗೆ ಅದನ್ನೂ ವರವನ್ನೂ ಕೊಡುವುದು.”

‘ಸರಿ. ವಾಯು, ಇನ್ನು ಹೊರಡು. ಬೃಹಸ್ಪತ್ಯಾಚಾರ್ಯರ ಬಳಿಗೆ ಹೋಗಿ ಬಾ. ನಿನಗೆಂದು ನಾವು ಎಷ್ಟು ಹೊತ್ತು ಕಾಯ್ದಿರಬೇಕು ?”

“ಕಾಯಬೇಕಾಗಿಲ್ಲ. ಅಲ್ಲಿ ಅವರು ಮಾತಾಡಿದುದೆಲ್ಲ ಇಲ್ಲಿ ನಿಮಗೆ ಕೇಳಿಸುವಂತೆ ಮಾಡುವೆನು.”

“ಅದು ಸರಿ.”

ವಾಯುವು ಬ್ರಹ್ಮಲೋಕಕ್ಕೆ ಹೋದನು. ಇನ್ನೊಂದು ಕ್ಷಣವಿರಬಹುದು. ಅಷ್ಟರೊಳಗಾಗಿ ಮಾತು ಕೇಳಿಸಿತು. ಮೊದಲು ಆಚಾರ್ಯರಿಗೂ ವಾಯುದೇವನಿಗೂ ಕುಶಲ ಪ್ರಶ್ನಗಳಾಯಿತು. ಆನಂತರ ವಾಯುದೇವನು ಗಂಭೀರವಾಗಿ ಕೇಳಿದನು.

“ಇನ್ನೆಷ್ಟು ದಿನ ಅಜ್ಞಾತವಾಸದಲ್ಲಿರುವಿರಿ ?”

“ನಾನು ಸಂಕಲ್ಪಿಸಿದ್ದ ಕಾಲವಾಯಿತು. ಆದರೆ, ಈಗ ದೇವಲೋಕಕ್ಕೆ ಬರುವುದೆಂತು ? ಇನ್ನೊಬ್ಬ ಧರ್ಮಚಾರ್ಯನಿರುವನಲ್ಲ ?”

“ತಾವು ಬರುವುದಾದರೆ ದೇವೇಂದ್ರನು ಆತನನ್ನು ಕಿತ್ತೆಸೆಯುವನು.”

“ಅದಷ್ಟು ಸುಲಭವಲ್ಲ. ಅಲ್ಲದೆ ಕಿತ್ತೆಸೆಯುವ ಕಾರ್ಯವು ಸಕಾರಣವಾಗಿರಬೇಕು.”

“ಆತನು ದಾನವ ಪಕ್ಷಪಾತಿಯೆಂಬ ಕಾರಣವಿದೆ. ಅಲ್ಲದೆ, ಆತನು ನಮ್ಮನ್ನು ಕುರಿತು ಬಹಳ ನಿಷ್ಠುರವಾಗಿ ಆಡುತ್ತಾನೆ.”

“ಅದನ್ನು ನಾನು ಮೊದಲಿಂದಲೂ ಬಲ್ಲೆ. ಆತನನ್ನು ತೆಗೆದುಹಾಕಿದ ಮರುಕ್ಷಣವೇ ನಾನು ಅಲ್ಲಿರುತ್ತೇನೆ. ಆದರೆ ಇದು ಪರಮರಹಸ್ಯವಾಗಿರಬೇಕು.

“ಹಾಗೆಯೇ ತಾವೂ ದೇವಲೋಕದಲ್ಲಿ ಪ್ರಕಟವಾಗುವವರೆಗೂ ಯಾರಿಗೂ ದರ್ಶನಾದಿಗಳನ್ನು ಕೊಡದೆ ಗೋಪ್ಯವಾಗಿರಬೇಕು”

“ಹಾಗೂ ಆಗಬಹುದು. ಅತ್ತಕಡೆ ಕೇಳುತ್ತಿರುವವರನ್ನು ಬಿಟ್ಟು ಇನ್ನು ಯಾರಿಗೂ ಈ ವಿಷಯವು ತಿಳಿಯದು ತಾನೇ ?”

“ತಿಳಿಯದು”

“ಹಾಗಾದರೆ ಸರಿ.”

ಮತ್ತೊಂದು ಕ್ಷಣದೊಳಗಾಗಿ ವಾಯುವು ಅಲ್ಲಿ ಪ್ರತ್ಯಕ್ಷನಾದನು. ಇಂದ್ರನು ಆತನನ್ನು ಬಾಚಿ ತಬ್ಬಿಕೊಂಡು “ಮಹತ್ಕಾರ್ಯವನ್ನು ಸಾಧಿಸಿದೆ” ಎಂದು ಭುಜ ತಟ್ಟಿದನು. ವಾಯುವು “ಏನು ಮಹತ್ಕಾರ್ಯವನ್ನು ಸಾಧಿಸಿದೆನೋ ! ನಾವು ಸ್ವಭಾವತಃ ತೇಜೋದೇಹಿಗಳು. ಅಲ್ಲದೆ ಆಕಾಶವಿರುವೆಡೆಯಲ್ಲೆಲ್ಲ ವ್ಯಾಪ್ತಿಯುಳ್ಳವರು. ಸಂಕಲ್ಪ ಮಾತ್ರದಿಂದ ಎಲ್ಲೆಂದರಲ್ಲಿಗೆ ಹೋಗಿಬರಬಲ್ಲವರು. ಹೀಗಿರಲು ಬ್ರಹ್ಮಲೋಕಕ್ಕೆ ಹೋಗಿಬಂದುದು ಒಂದು ಸಾಹಸವೇ ?” ಎಂದು ತಲೆದೂಗಿದನು.

ಇಂದ್ರನು “ಕೊಂಚ ಕಾಲ ತಡೆ. ಈಗ ಬಂದಿರುವ ಈ ವಿಶ್ವರೂಪ ಸ್ವರೂಪದ ಆಪತ್ತು ಕಳೆಯಲಿ. ಆ ನಂತರ ನೀನು ದೇವಕುಲಕ್ಕೆ ಎಂತಹ ಉಪಕಾರ ಮಾಡಿದೆ ಎನ್ನುವುದು ತಿಳಿಯುವುದು” ಎಂದನು.

ಅಗ್ನಿಯು “ಅನರ್ಥವಾಗದಂತೆ ನೋಡಿಕೋ ಇಂದ್ರ !” ಎಂದನು.

ಇಂದ್ರನು ಲೊಚಗುಟ್ಟಿ “ಅದರ ಯೋಚನೆ ಆಮೇಲೆ, ಈಗೇಕೆ” ಎಂದನು.

* * * *