ಮಹಾಕ್ಷತ್ರಿಯ/ಶಿಬಿಕೋತ್ಸವ

ವಿಕಿಸೋರ್ಸ್ ಇಂದ
Jump to navigation Jump to search

==೩೬.ಶಿಬಿಕೋತ್ಸವ==

ಶಿಬಿಕೋತ್ಸವದ ದಿನವು ಬಂತು. ಸಪ್ತರ್ಷಿಗಳು ಬಂದರು. ಅವರನ್ನು ಇಬ್ಬರು ಇಂದ್ರರೂ ಸ್ವಾಗತಿಸಿ, ಅಮರಾವತಿಯಲ್ಲೆಲ್ಲ ಮೆರವಣಿಗೆ ಮಾಡಿಸಿಕೊಂಡು ಬಂದು, ಅವರಿಗಾಗಿ ನಿರ್ಮಿತವಾಗಿದ್ದ ಮಂದಿರದಲ್ಲಿ ಇಳಿಸಿದರು.

ಇವೊತ್ತು ಇಂದ್ರನರಮನೆಯಲ್ಲಿ ಅವರಿಗೆ ಅರ್ಚನೆ. ಇಬ್ಬರು ಇಂದ್ರರಲ್ಲಿ ಒಬ್ಬನು ಐರಾವತದ ಮೇಲೆ ಇನ್ನೊಬ್ಬನು ಉಚ್ಛೈಃಶ್ರವದ ಮೇಲೆ ಕುಳಿತು ಹೋಗಿ ಅವರನ್ನು ಅರಮನೆಗೆ ಕರೆತಂದಿದ್ದಾರೆ. ಅವರೆಲ್ಲರಿಗೂ ವಿರಜಾದೇವಿ, ಶಚೀದೇವಿಯರು ದೇವಪತ್ನಿಯರೊಡನೆ ವಿಧಿವಿಹಿತವಾದ ಉಪಚಾರಗಳನ್ನೆಲ್ಲ ಸಮರ್ಪಿಸುತ್ತಿದ್ದಾರೆ. ಸಪ್ತರ್ಷಿಗಳೂ ಪೂಜಾಪರಿಚರ್ಯೆಗಳಿಂದ ಸಂತೃಪ್ತರಾಗಿದ್ದಾರೆ.

ಅಮರಾವತಿಯು ಅಭೂತಪೂರ್ವವಾಗಿ ಶೃಂಗಾರವಾಗಿದೆ; ಅಲ್ಲಿನ ದೇವಜನಕ್ಕೆಲ್ಲ ಮರೆಯಾಗಿದ್ದ ಇಂದ್ರನು ಬಂದುದೊಂದು, ಎಂದೂ ಇಲ್ಲದ ಶಿಬಿಕೋತ್ಸವವು ನಡೆಯುವುದೊಂದು, ಹೀಗೆ ಎರಡು ಸಂತೋಷಗಳು. ಆಹೂತರಾಗಿ ಬಂದಿರುವವರಿಗೆಲ್ಲ ಆ ಸಂತೋಷವನ್ನು ಹಂಚಿಕೊಡಬೇಕೆಂದೋ ಎಂಬಂತೆ, ಅಮರಾವತಿಯವರು ಪ್ರಕಟವಾಗಿ ಆ ಸಂತೋಷವನ್ನು ಅಲಂಕಾರ ವೈಭವದಲ್ಲಿ ತೋರಿಸುತ್ತಿದ್ದಾರೆ. ಉತ್ಸವವು ಬರುವ ಬೀದಿಗಳಲ್ಲಿ ಇರಲಿ, ಅಕ್ಕಪಕ್ಕದ ಬೀದಿಗಳಲ್ಲೂ ಉತ್ಸವದ ವೈಭವವು ಕಣ್ಣಿಗೆ ಕಾಣಿಸುತ್ತಿದೆ. ಎಲ್ಲೆಲ್ಲೂ ಚಿಕ್ಕ ಚಿಕ್ಕ ಪತಾಕೆಗಳು, ತೋರಣಗಳು ಲೆಕ್ಕವಿಲ್ಲದೆ ಮೆರೆಯುತ್ತಿವೆ. ಒಂದೆಡೆ ಪೀತಾಂಬರದ ಪತಾಕೆಗಳ ತೋರಣಗಳಾದರೆ ಇನ್ನೊಂದೆಡೆ ಹಸಿರಿಂದ ಆದವು ; ಮತ್ತೊಂದೆಡೆ ಹೂವಿನಿಂದ ಆದವು ; ಮಗದೊಂದೆಡೆ ರತ್ನಗಳಿಂದ ಆದವು.

ಉತ್ಸವ ವೀಧಿಗಳಲ್ಲಿ ಈ ಕಡೆಯಿಂದ ಆ ಕಡೆಯವರೆಗೂ ನಂದನವನದಿಂದ ತಂದಿರುವ ಸುಂದರ ಪುಷ್ಪಗಳನ್ನು ಹರಡಿದ್ದಾರೆ. ಪ್ರತಿಯೊಂದು ಕಡೆಯಲ್ಲೂ ಸುಳಿಯುವ ಮಂದಮಾರುತನು ಸುಗಂಧಿಯಾಗಿಯೇ ಬರುವಂತೆ ಏರ್ಪಾಟು ಮಾಡಿದ್ದಾರೆ.

ವಿದ್ಯುನ್ಮಾಲಾವಿರಾಜಿತಳಾದ ಶ್ವೇತಮೇಘಗಳು ಆ ಉದ್ದದಿಂದ ಈ ಉದ್ದಕ್ಕೆ ಮೇಲ್ಕಟ್ಟು ಕಟ್ಟಿದಂತೆ ಬಿಸಿಲಿಲ್ಲದ ಬೆಳಕನ್ನು ಚೆಲ್ಲುತ್ತಾ ಮೆರೆಯುತ್ತಿವೆ.

ಈ ಕೊನೆಯಿಂದ ಆ ಕೊನೆಯವರೆಗೂ ಎಲ್ಲೆಲ್ಲೂ ಎಲ್ಲರೂ ನಗುನಗುತ್ತ ಉತ್ಸಾಹದಿಂದ ವಿರಾಜಿತವಾಗಿ ಬರುತ್ತಿದ್ದಾರೆ.

ಯಥಾಕಾಲದಲ್ಲಿ ಶಿಬಿಕೆಯು ಅರಮನೆಯ ಮುಂದೆ ಬಂತು. ಸುರಗುರುಗಳು ಶಿಬಿಕೆಯನ್ನು ಅರ್ಚಿಸಿದರು. ಶಿಬಿಕೆಯನ್ನು ಪುಷ್ಪವಸನರತ್ನಗಳಿಂದ ಇಂದ್ರವೈಭವಕ್ಕೆ ತಕ್ಕಂತೆ ಅಲಂಕರಿಸಿದ್ದಾರೆ. ಅಲಂಕಾರಕಾರ್ಯವನ್ನು ಶಚೀಂದ್ರರು ವಹಿಸಿ, ಇನ್ನಿಲ್ಲ ಎಂಬಂತೆ ಮಾಡಿದ್ದಾರೆ.

ಸಪ್ತರ್ಷಿಗಳು ಬಂದು ನಹುಷನನ್ನು ಹಸ್ತಲಾಘವ ಕೊಟ್ಟು ಕರೆದುಕೊಂಡು ಹೋಗಿ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿದರು. ಆತನಿಗೆ ಅವರ ಹಸ್ತವನ್ನು ಮುಟ್ಟುತ್ತಲೇ ದೇಹಭಾವವು ಮರೆತುಹೋಗಿ ನಿರ್ವಿಕಲ್ಪ ಸಮಾಧಿಯು ಬರುತ್ತದೆ. ಆತನಿಗೆ ಅಂಗಾಂಗಗಳಲ್ಲೂ ರತ್ನಾಭರಣಗಳನ್ನು ಶೃಂಗರಿಸಿದ್ದಾರೆ. ಅರಸನ ಮುಖವೊಂದು ಬಿಟ್ಟು ಇನ್ನೇನೂ ಕಾಣುವಂತಿಲ್ಲ. ಅಲ್ಲಿ ಕುಳಿತಿರುವುದು ರತ್ನಾಭರಣ ರಂಜಿತವಾದ ಪುತ್ಥಳಿಯೋ, ಜೀವಂತವಾದ ವ್ಯಕ್ತಿಯೊ, ಅದೂ ಹೇಳುವಂತಿಲ್ಲ. ಬಹುಶಃ ಸಪ್ತರ್ಷಿಗಳ ಸಂಕಲ್ಪವಿರಬೇಕು, ಆತನ ದೇಹವನ್ನು ಪಲ್ಲಕ್ಕಿಯಲ್ಲಿ ಕರೆದುಕೊಂಡು ಹೋಗಿ ಕುಳ್ಳಿರಿಸಿದುದು.

ಪಲ್ಲಕ್ಕಿಯ ಬಲಮಗ್ಗುಲಲ್ಲಿ ಸ್ವಯಂ ಇಂದ್ರನು ವಾಯುವಿನೊಡನೆ ಪಲ್ಲಕ್ಕಿಯನ್ನು ಹಿಡಿದು ನಡೆದನು. ಪಲ್ಲಕ್ಕಿಯ ಎಡಮಗ್ಗುಲಲ್ಲಿ ಮಧ್ಯಮಲೋಕದ ಚಕ್ರವರ್ತಿಯಾದ ಯಯಾತಿಯು ಅಗ್ನಿಯೊಡನೆ ನಡೆದನು. ಸುರಗುರುವು ಪಲ್ಲಕ್ಕಿಯ ಮುಂದೆ ಕೊಂಬನ್ನು ಹಿಡಿದು ನಡೆದನು. ಪಲ್ಲಕ್ಕಿಯ ಹಿಂದೆ ಪುಟ್ಟರಥದಲ್ಲಿ ವಿರಜಾದೇವಿಯನ್ನು ಕುಳ್ಳಿರಿಸಿಕೊಂಡು ಶಚೀದೇವಿಯು ಸಾರಥಿಯಾಗಿ ಬಂದಳು. ಐರಾವತವೂ ಉಚ್ಛೈಶ್ರವವೂ ರಾಜಮರ್ಯಾದೆಗಳೊಡನೆ ಮುಂದೆ ನಡೆದುವು. ಚತುರಂಗ ಸೈನ್ಯವು ಹಿಂದೆಮುಂದೆ ನಡೆಯಿತು. ಗಂಧರ್ವಗಣವು ಸಂಗೀತವನ್ನು ಹಾಡಿತು. ಶುಕ್ರಾಚಾರ್ಯನು ಸ್ವಯಂ ನಿಂತು, ಋಷಿಗಣಗಳಿಂದ ಸಾಮವನ್ನು ಹಾಡಿಸುತ್ತ ವಿರಜಾದೇವಿಯ ರಥದ ಹಿಂದೆ ಬಂದನು.

ಅಂದಿನ ಶಿಬಿಕೋತ್ಸವದ ವೈಭವವನ್ನು ವರ್ಣಿಸಲು ಯಾರಿಗೂ ಸಾಧ್ಯವಿಲ್ಲ. ಜ್ಞಾನಚಕ್ಷುಗಳಾದವರು ಮೇಲಿನಿಂದ ಪುಣ್ಯಾಹ ಶಕ್ತಿಗಳು, ತರಂಗ ತರಂಗವಾಗಿ ಇಳಿದು ಎಲ್ಲರಿಗೂ ಎಲ್ಲಕ್ಕೂ ನೆಲಕ್ಕೂ ಅಭಿಷೇಕಮಾಡಿ, ಪಾಪಶಕ್ತಿಗಳನ್ನು ಕಬಳಿಸುತ್ತಿರುವುದನ್ನು ನೋಡಿ, ‘ನಿಜ, ಸತ್ಪುರುಷರ ವೈಭವವು ಲೋಕಕಲ್ಯಾಣ ಕಾರಕವೆಂಬುದು ನಿಜ’ ಎಂದು ತಲೆದೂಗಿದರು. ಅಕಾರಣವಾಗಿ ಹರ್ಷವು ಎಲ್ಲೆಲ್ಲೂ ವರ್ಧಿಸುತ್ತಿದೆ. ದುಃಖವನ್ನು ಹೃದಯ ಮನಸ್ಸುಗಳಿಂದ ಸಮೂಲವಾಗಿ ಕಿತ್ತೆಸೆದಂತೆ ಆಗಿದೆ. ಲೋಕಲೋಕವು ಮಂಗಳಮಯವಾಗಿದೆ. ಮರಗಿಡಬಳ್ಳಿಗಳೂ ಹೊಸಮಳೆಯಲ್ಲಿ ನೆಂದಂತೆ ಮಂಗಳವಾದ ಮನೋಹರವಾದ ರೂಪವನ್ನು ಧರಿಸಿವೆ. ಹಕ್ಕಿಗಳು ಸಂತೋಷದಿಂದ ಹಾಡಿ ನರ್ತಿಸುತ್ತಿವೆ. ಮಾರುತವು ಮಂದವಾಗಿ ಬೀಸುತ್ತ ಆನಂದವನ್ನು ಹೊತ್ತು ತಂದು ಬೀರುತ್ತಿರುವಂತೆ ಮಂಗಲವಾಗಿದೆ. ಅಷ್ಟೇನು? ಮಾಂಗಲ್ಯದೇವಿಯು ಲೋಕಗಳನ್ನು ತನ್ನ ಮಂದಿರ ಮಾಡಿಕೊಂಡಂತಿದೆ. ಮನೆಗಳಲ್ಲಿ ಹಚ್ಚಿಟ್ಟ ದೀಪಗಳ, ಹೊತ್ತಿಟ್ಟ ಬೆಂಕಿಗಳೂ ಪ್ರಕಾಶಮಾನವಾಗಿ ಪ್ರಸನ್ನವಾಗಿವೆ.

ಶಿಬಿಕೋತ್ಸವವು ಹೀಗೆ ಲೋಕಮಂಗಳಕಾರಕವಾಗಿ ಆರು ದಿನ ನಡೆಯಿತು. ಒಂದೇ ಸಮನಾಗಿ ಚೊಕ್ಕವಾದ ರಾಜಭೋಜನವನ್ನು ಮಿತಿಯಿಲ್ಲದೆ ಭುಜಿಸಿದ ಹೊಟ್ಟೆಬಾಕನು ತೃಪ್ತಿಯಾದಂತೆ, ಲೋಕದಲ್ಲಿ ಎಲ್ಲೆಲ್ಲೂ ಆಗಿದೆ. ಹಗಲು ತೀವ್ರವಾದ ಬಿಸಿಲು, ರಾತ್ರಿ ಮುಸಲಧಾರೆಯ ಮಳೆಯಾದರೆ, ಭೂಮಿಯಲ್ಲಿ ಎಲ್ಲೆಲ್ಲೂ ಸಣ್ಣಗೆ ನೀರು ಅಲ್ಲಲ್ಲಿ ನಿಂತು, ಇನ್ನಲ್ಲಲ್ಲಿ ಓಡುತ್ತಾ ಮನೋಹರವಾಗಿರುವಂತೆ ಭೂಮಿಯು ತಾನು ಎಷ್ಟು ನೀರು ಕುಡಿಯಬಹುದೋ ಅಷ್ಟೂ ಕುಡಿದು ಹೆಚ್ಚು ನೀರನ್ನು ಪ್ರವಾಹಗಳಿಗೆ ಕೊಟ್ಟು ಇನ್ನೂ ಇರುವ ನೀರನ್ನೂ ಸೂರ್ಯಕಿರಣಗಳಿಗೆ ಬಾಷ್ಪವಾಗಿ ಕೊಡುವಂತೆ, ಲೋಕಲೋಕಗಳೂ ಮಾಂಗಲ್ಯವನ್ನು ಆಕಂಠಪೂರ್ತಿಯಾಗಿ ಅನುಭವಿಸಿ ಈಚೆಗೆ ಕಕ್ಕುತ್ತಿರುವಂತೆ ಎಲ್ಲೆಲ್ಲಿಯೂ ಮಾಂಗಲ್ಯವು ತಾಂಡವವಾಡುತ್ತಿದೆ. ಸ್ತ್ರೀಯರ ಮುಖದಲ್ಲಿ ಪುರುಷರ ಹೃದಯದಲ್ಲಿ ಹಕ್ಕಿಗಳ ಕಂಠದಲ್ಲಿ ಹಸುಗಳ ಕೆಚ್ಚಲಲ್ಲಿ ಮರಗಿಡಗಳ ಪರ್ಣರಾಜಿಯಲ್ಲಿ ಎಲ್ಲೆಲ್ಲೂ ಮಾಂಗಲ್ಯ. ಸೃಷ್ಟಿಗೆ ಸೃಷ್ಟಿಯೇ ಮಂಗಲಗಾನವನ್ನು ಮುದ್ದಾಗಿ ಹಾಡಬೇಕೆಂದು ಸಂಕಲ್ಪಪೂರ್ವವಾಗಿ ಹಾಡುವಂತಿದೆ. ಪೂರ್ಣವು ಪೂರ್ಣವಾಗಿ ಭೋಗನಾಶಗಳಿಂದ ಪೂರ್ಣವಾಗಿಯೇ ಇರುವಂತೆ ಎಲ್ಲವನ್ನೂ ತುಂಬಿ ತಾನೇ ತಾನಾಗಿದೆ.

ಏಳನೆಯ ದಿನ ಬಂತು. ಅರಸನು ತನ್ನ ನಿತ್ಯಕರ್ಮಗಳನ್ನು ಮುಗಿಸಿಕೊಂಡು ಲಕ್ಷ್ಮೀನಾರಾಯಣ ಪೂಜೆಯನ್ನು ಮಾಡಿಕೊಂಡು ಶಿಬಿಕಾಪೂಜೆಗಾಗಿ ಹೊರಡುತ್ತಿದ್ದ ಹಾಗೆಯೇ ಉಟ್ಟಿದ್ದ ಪಂಚೆಯು ತೊಡರಿ ಮುಗ್ಗರಿಸುವಂತಾಯಿತು. ರಾಜನು ಹಾಗೆಯೇ ನಿಂತು, ‘ಸರಿ. ಇದು ಏಳನೆಯ ದಿನ’ ಎಂದು ಮನಸ್ಸಿನಲ್ಲಿ ಎಂದುಕೊಂಡು ಮುಂದೆ ಹೊರಟನು. ಆತನಿಗೆ ಇದು ದುಶ್ಯಕುನ ಎನ್ನಿಸಲಿಲ್ಲ. ಮುಂದೆ ಆಗಬೇಕಾದುದನ್ನು ಸೂಚಿಸುವ ಶಕುನವಿದು ಎನ್ನಿಸಿತೇ ಹೊರತು, ಇದು ದುಷ್ಟವೆನಿಸಲಿಲ್ಲ. ಮನಸ್ಸು ತನ್ನ ಕಾಮಕ್ರೋಧಗಳನ್ನೂ ಬಿಟ್ಟು ಶುದ್ಧವಾಗಿ ಸರ್ವವನ್ನು ಶುಭವನ್ನಾಗಿಯೇ ಕಾಣುವ ಸಂಕಲ್ಪವನ್ನು ವಹಿಸಿಕೊಂಡಿರುವಾಗ ಬುದ್ಧಿಯು ತಾನು ಪ್ರತ್ಯೇಕವಾಗಿರುವೆನು ಎಂಬುದನ್ನು ಮರೆತು ಸೃಷ್ಟಿಯೆಲ್ಲವನ್ನೂ ಏಕಾಂತವಾಗಿ ನೋಡುತ್ತಿರುವ ಸುಸಮಯದಲ್ಲಿ ಸುಖದುಃಖ ಭೇದವೆಲ್ಲಿಂದ ಬರಬೇಕು?

ಅರಸನು ಶಿಬಿಕಾಪೂಜೆಯನ್ನು ಮಾಡಿಕೊಂಡು, ಸಪ್ತರ್ಷಿಗಳ ಮಂದಿರಕ್ಕೆ ಹೋಗಿ, ಅವರನ್ನು ಪೂಜಿಸಿಕೊಂಡು ಬಂದನು. ಅವರನ್ನು ‘ಶಿಬಿಕೆಯಲ್ಲಿರುವಾಗ ಶಿಥಿಲ ಸಮಾಧಿಯಾದರೆ ಏನಾಗುವುದು?” ಎಂದು ಕೇಳಬೇಕು ಎನ್ನಿಸಿತು. ‘ಏನಾದರೂ ಆಗಲಿ, ಅನುಭವಿಸುವುದಕ್ಕೆ ಸಿದ್ಧವಾಗಿರುವಾಗ ಕೇಳಬೇಕಾದುದೇನು? ಉಪಾಧಿಗ್ರಸ್ಥನಾಗಿರುವಾಗ ಸಂಭವಿಸುವುದೆಲ್ಲ ಶುಭ ಇಲ್ಲದಿದ್ದರೆ ಅಶುಭ, ಎರಡರಲ್ಲಿ ಒಂದು. ಅವು ಏನಿದ್ದರೂ ಉಪಾಧಿಗೆ ಸಂಬಂಧಪಟ್ಟವು. ಅನುಭವಿಸಿ ತೀರಬೇಕಾದವು. ಅದೃಷ್ಟವಶದಿಂದ ಅವಕ್ಕೆ ವಶನಾಗದಿರುವ ಸ್ಥಿತಿಯು ಲಭಿಸಿದ ಮೇಲೂ ಅವುಗಳಿಗೆ ಒದ್ದಾಡುವುದೇ?’ ಎಂದು ತನ್ನ ಸಂಕಲ್ಪವನ್ನು ತಾನೇ ಹಾಸ್ಯಮಾಡಿಕೊಳ್ಳುತ್ತ ಹಿಂತಿರುಗಿದನು. ಅವರು ಆತನ ಮನೋಭಾವವನ್ನು ಹಿಡಿದು ಮಾತನಾಡಲು ಸಾಧ್ಯವಿಲ್ಲದಂತಹ ಪೂರ್ಣಸ್ಥಿತಿಯಲ್ಲಿದ್ದರು.

ಅಲ್ಲಿಂದ ಬರುವ ವೇಳೆಗೆ ಶಚೀಂದ್ರರೂ ಅಗ್ನಿ ವಾಯುಗಳೂ ಗುರುದ್ವಯರೂ ಯಯಾತಿಯೂ ಬಂದು ಕಾದಿದ್ದಾರೆ. ಅರಸನು ವಿರಜಾಸಮೇತನಾಗಿ ಬಂದು ಆಚಾರ್ಯರುಗಳಿಗೆ ನಮಸ್ಕಾರಮಾಡಿ, ಇಂದ್ರ ಅಗ್ನಿವಾಯುಗಳಿಗೆ ಆಲಿಂಗನವನ್ನು ಕೊಟ್ಟು ನಗುನಗುತ್ತಾ ಎಲ್ಲರನ್ನೂ ಆಸನಗಳಲ್ಲಿ ಕುಳ್ಳಿರಿಸಿ ತಾನು ಕುಳಿತುಕೊಳ್ಳುತ್ತಾನೆ. ಸುರಗುರುವು ಅರಸನ ಮುಖವನ್ನು ನೋಡುತ್ತಾನೆ. ಅರಸನು ಮಂದಹಾಸದಿಂದ “ಹೌದು, ನಾವೂ ಶುಭವರ್ತಮಾನವನ್ನು ಕೇಳಲು ಕಾತರರಾಗಿದ್ದೇವೆ. ನಮ್ಮ ಅವಧಿಯು ತೀರಿ ಏಳು ದಿನವಾಯಿತು. ಆದರೂ ತಮ್ಮೆಲ್ಲರ ಸೌಜನ್ಯದಿಂದ ಇಂದ್ರಪದವಿಯಲ್ಲಿ ಇದ್ದೇವೆ. ನಿತ್ಯೇಂದ್ರನಿಗೆ ಇಂದ್ರತ್ವವನ್ನು ವಹಿಸಿಕೊಟ್ಟು ಶಚೀಸಮೇತವಾಗಿ ಆತನು ಸಿಂಹಾಸನದಲ್ಲಿ ಕುಳಿತು ವಿರಾಜಿಸುವುದನ್ನು ನೋಡಿ, ಕಾಣಿಕೆಯೊಪ್ಪಿಸಿ, ಆತನಪ್ಪಣೆ ಪಡೆದು, ನಾವಿಬ್ಬರೂ ತಪಸ್ಸಿಗೆ ಹೋಗುವುದು ಎಂದುಕೊಂಡಿದ್ದೇವೆ. ಆದರೆ ದೈವಚಿತ್ತ ಹೇಗಿದೆಯೋ? ಯಾರು ಬಲ್ಲರು?”

ಅದರರ್ಥವು ಯಾರಿಗೂ ಆಗಲಿಲ್ಲ. ಆದರೂ ಆಚಾರ್ಯರು ಪರಸ್ಪರ ಮುಖ ನೊಡಿಕೊಂಡರು. ಸುರಾಚಾರ್ಯನ ಅಭಿಮತದಿಂದ ಅಸುರಾಚಾರ್ಯನೆದ್ದು “ಏನೂ ವಿಘ್ನವಿದ್ದಂತಿಲ್ಲ. ಅಥವಾ ಹಠಾತ್ತಾಗಿ ಏನಾದರೂ ತಲೆದೋರಿದರೆ, ಅದನ್ನು ದೂರದಲ್ಲಿಡಲು ತಪಸ್ವಿಗಳು ತಮ್ಮ ಸನ್ನಿಧಾನದಲ್ಲಿದ್ದಾರೆ” ಎಂದು ಕೋರಿಕೆ ಮಾಡಿದನು. ಅರಸನು ನಕ್ಕು “ಮಂಗಳವು ತಾನೇತಾನಾಗಿದೆ. ಅಮಂಗಲವು ಸಂಭವಿಸಿದರೂ, ಈ ಮಂಗಳ ಸಮುದ್ರದಲ್ಲಿ ಅದು ನೀರಿನಲ್ಲಿ ಬಿದ್ದ ಉಪ್ಪಿನ ಬೊಂಬೆಯಾಗುವುದು ಅಲ್ಲವೇ?” ಎಂದು ಮತ್ತೆ ನಗುತ್ತಾನೆ. ಆ ನಗುವು ಆ ಮಾತನ್ನೇ ಮರೆಸಿ ಬೇರೆ ಪ್ರಸಂಗಕ್ಕೆ ಹಾದಿಮಾಡಿಕೊಡುತ್ತದೆ.

ಶಚಿಯು ಪತಿಯ ಮುಖವನ್ನು ನೋಡಿದಳು. ಆತನು ಅರ್ಥಮಾಡಿಕೊಂಡು ಸುರಗುರುವಿನ ಮುಖವನ್ನು ನೋಡಿದನು. ಆತನು ಪ್ರಕಟವಾಗಿ “ಶಚೀಂದ್ರರು ಸನ್ನಿಧಾನದಲ್ಲಿ ಏನೋ ವಿಜ್ಞಾಪಿಸಬೇಕೆಂದಿರುವಂತೆ ಕಾಣುತ್ತದೆ.” ಎಂದನು. ಅರಸನು ನಗುತ್ತಾ “ಅಂದೇ ಹೇಳಿದ್ದೆನಲ್ಲ ; ಅವರು ನಿತ್ಯರು, ನಾವು ನೈಮಿತ್ತಿಕರು. ಅಲ್ಲದೆ, ನಿತ್ಯಕ್ಕೆ ನೈಮಿತ್ತಿಕ ಬಾಧೆ ತಪ್ಪಿ ಆಗಲೇ ಒಂದು ವಾರವಾಯಿತು. ಅವರು ಮಾಡಬೇಕಾದುದು ವಿಜ್ಞಾಪನೆಯಲ್ಲ. ಆಜ್ಞೆ’ ಎಂದನು.

ಶಚಿಯು ಇಂದ್ರನನ್ನು ನೋಡಿ ಆತನ ಅಭಿಮತವನ್ನು ಪಡೆದು ಕೈಮುಗಿದು ಹೇಳಿದಳು : “ದೇವ ತಾವು ಸಪತ್ನೀಕರಾಗಿ ತಪೆÇೕಲೋಕಕ್ಕೆ ಹೋಗಿ ವಾನಪ್ರಸ್ಥವನ್ನು ಅವಲಂಬಿಸಬೇಕೆಂದಿದ್ದರೆ ಅದು ತಮ್ಮ ಸ್ವೇಚ್ಛೆ. ಹಾಗೆಯೇ ಪರೇಚ್ಛೆಯನ್ನೂ ಗೌರವಿಸಿ, ತಾವಿಬ್ಬರು ದಿವ್ಯದೇಹವನ್ನು ಧರಿಸಿಕೊಂಡು, ಇಲ್ಲಿ ನಾವಿರುವವರೆಗು ಇಂದ್ರಸಖರಾಗಿ ಇರಬೇಕೆಂದು ನಮ್ಮ ಪ್ರಾರ್ಥನೆ. ಅದನ್ನು ಸ್ತ್ರೀಮುಖದಿಂದ ತಮ್ಮ ಸನ್ನಿಧಾನದಲ್ಲಿಟ್ಟರೆ ತಪ್ಪದೆ ವರವಾಗಿ ತಮ್ಮ ಅನುಗ್ರಹವು ಲಭಿಸಿಯೇ ಲಭಿಸುವುದೆಂದು ಹೀಗೆ ಮಾಡಿದೆ. ವರವು ನಮಗೆ ಲಭಿಸಬೇಕು.”

“ಏನು ವಿರಜಾದೇವಿಯವರೆ, ನಾವು ಬೇಡವೆಂದರೂ ಭೋಗಲಕ್ಷ್ಮಿಯು ನಮ್ಮನ್ನು ಬಿಡುವಂತಿಲ್ಲ. ಓಹೋ ! ತಮಗು ಸಮ್ಮತವಾದಂತಿದೆ. ಹುಂ ಆಗಲಿ, ದೇವರಾಜನ ಆಜ್ಞೆಯು ಸರ್ವರಿಗೂ ಶಿರೋಧಾರ್ಯವಾಗಿರಲು, ನಾವೇಕೆ ಅದನ್ನು ಅಗೌರವಿಸಬೇಕು ?”

ಶಚೀಂದ್ರರು ಆ ವರವನ್ನು ಅಂಗೀಕರಿಸಿ ಅಗ್ನಿಯ ಮುಖವನ್ನು ನೋಡಿದರು. ಆತನು ಎದ್ದುಹೋಗಿ ಹರಿವಾಣಗಳನ್ನು ತೆಗೆಸಿಕೊಂಡು ಬಂದನು. ಐದು ಹರಿವಾಣಗಳ ತುಂಬಾ ರತ್ನಭೂಷಣಗಳು, ವಸನಗಳು, ಗಂಧಮಾಲ್ಯಗಳು, ಅವೆಲ್ಲವನ್ನು ಶಚೀಂದ್ರರು ವಿರಜಾ-ನಹುಷರಿಗೆ ಕಾಣಿಕೆ ಮಾಡಿದರು. ಆತನು ನಗುತ್ತಾ, `ನಾಳೆ ನಮ್ಮ ಕಾಣಿಕೆ ಇಂದು ನಿಮ್ಮ ಕಾಣಿಕೆ’ ಎಂದು ಒಪ್ಪಿಕೊಂಡು ಅದೆಲ್ಲವನ್ನೂ ಮಗನಿಗೆ ಕೊಟ್ಟು “ಯಯಾತಿ, ಇದಿಷ್ಟೂ ನಿನಗೆ ಆಶೀರ್ವಾದಗಳು ಎಚ್ಚರವಿರಲಿ. ಇದಿಷ್ಟೂ ಧರ್ಮಾಚರಣೆ ಫಲ. ಮನುಷ್ಯರಿಗೆ ದಾನಕ್ಕಿಂತ ಧರ್ಮವಿಲ್ಲ. ಅದರಿಂದ ಕೊಡು ಕೊಡು, ಕೊಟ್ಟು ಬದುಕು, ಇದೇ ನಿನಗೆ ನನ್ನ ಸಂದೇಶ” ಎಂದು ಪಾದಗಳಿಗೆ ತಲೆಯಿಟ್ಟಿರುವ ಮಗನಿಗೆ ಮನಃಪೂರ್ವಕವಾಗಿ ಆಶೀರ್ವಾದ ಮಾಡಿದನು. ವಿರಜಾದೇವಿಯಂತೂ ಮಗನಿಗೆ ತನ್ನ ಹೃದಯವನ್ನೇ ಆಶೀರ್ವಾದವಾಗಿ ಕೊಟ್ಟಳು.

ಅರಸನು ಕೊನೆಯದಾಗಿ ಅಗ್ನಿ ವಾಯುಗಳ ಕಡೆಗೆ ತಿರುಗಿದನು : “ನಮ್ಮ ಆಳ್ವಿಕೆಯಲ್ಲಿ ತಮಗೆ ಏನಾದರೂ ಕಷ್ಟವಾಗಿದ್ದರೆ, ಅದನ್ನು ದಯೆಯಿಂದ ಕ್ಷಮಿಸಬೇಕು” ಎಂದು ಕೈಮುಗಿದನು. ಅವರಿಬ್ಬರೂ ಅರಸನಿಗೆ ಕೈಮುಗಿದು. “ದೇವ, ಮನುಷ್ಯರು ಅನುಗ್ರಾಹ್ಯರು ಎಂಬ ಅಹಂಕಾರವು ನಮಗಿತ್ತು. ತಮ್ಮ ಸನ್ನಿಧಾನದಲ್ಲಿದ್ದು ನಮಗೆ ಈ ಅಹಂಕಾರವು ಕಳೆಯಿತು. ಧರ್ಮಾಚರಣದಿಂದ ಮಾನವರು ದೇವತೆಗಳಾದರೆ ಅವರು ಅತೀದೇವಮಾನವರಾಗುವರು ಎಂದು ತಿಳಿಯಿತು. ಇನ್ನು ನಾವೂ ಅವರೂ ಪರಸ್ಪರ ಸಂಭಾವನೆಯಿಂದ ಕ್ಷೇಮವಾಗಿರುವೆವು. ಹೀಗೆ ನಮ್ಮ ಕಣ್ಣಿಗೆ ಅಂಜನಹಾಕಿದ ತಮ್ಮನ್ನು ನಾವು ಗುರು ಗೌರವದಿಂದ ನೋಡಲು ಅಪ್ಪಣೆಯಾಗಬೇಕು. ಕೊನೆಯದಾಗಿ ಒಂದು ಮಾತು. ನಮಗಿಬ್ಬರಿಗೂ ವಿಶ್ವರೂಪಾಧಿಕಾರವುಂಟು. ಆಗ ವಿಶ್ವವೆಲ್ಲವೂ ನಾವು ಹೇಳಿದಂತೆ ಕೇಳಬೇಕು. ಇದು ನಮಗೆ ಗೊತ್ತಿತ್ತು. ಆದರೆ ಇಂದ್ರನು ಹತ್ಯಾಭೀತನಾಗಿ ಕಣ್ಮರೆಯಾದಾಗ ನಾವು ವಿಶ್ವರೂಪಧಾರಣಮಾಡಿ ಆತನನ್ನು ಉಳಿಸಬಹುದು ಎಂಬುದು ಮಾತ್ರ ನಮಗೆ ಮರೆತುಹೋಗಿತ್ತು. ಅದನ್ನು ಮತ್ತೆ ನೆನಪಿಗೆ ತಂದವರು ತಾವು. ಹೀಗೆ ನಮ್ಮ ನಮ್ಮ ಆತ್ಮಶಕ್ತಿಯ ಪರಿಚಯ ಮಾಡಿಕೊಟ್ಟು ಕಾಪಾಡಿದ ತಾವು ಗುರುಗಳಲ್ಲದೆ ಇನ್ನೇನು ?” ಎಂದು ಮುಂತಾಗಿ ನಾನಾವಿಧವಾಗಿ ಹೊಗಳಿ ಬೇಡ ಬೇಡವೆನ್ನುತ್ತಿದ್ದರೂ ಆತನಿಗೆ ನಮಸ್ಕಾರ ಮಾಡಿದರು.

ಅಂದು ಶಿಬಿಕೋತ್ಸವದ ಕೊನೆಯ ದಿನ. ಎಲ್ಲೂ ಇಲ್ಲದ ಜನ. ಸಪ್ತರ್ಷಿಗಳು ನಹುಷನನ್ನು ಕೈಹಿಡಿದು ಕರೆದುಕೊಂಡು ಬಂದು, ಪೂಜೆಯನ್ನು ಒಪ್ಪಿಸಿಕೊಂಡು ಅಲಂಕೃತವಾಗಿ ಸಿದ್ಧವಾಗಿದ್ದ ಶಿಬಿಕೆಯಲ್ಲಿ ಕೂರಿಸಿದರು. ಆತನು ಅಲ್ಲಿ ಸುರಕ್ಷಿತವಾಗಿ ಸುಸ್ಥಿತನಾಗಿ ಕುಳಿತ ಮೇಲೆ, ಪಲ್ಲಕ್ಕಿಯನ್ನು ಎತ್ತಿಕೊಂಡು ನಡೆದರು. ಅದುವರೆಗೆ, ಇತರರು ನೂರಾರು ಜನ ಸೇವಕರು ಪಲ್ಲಕ್ಕಿಯನ್ನು ಹೊರುತ್ತಿದ್ದು ಸಪ್ತರ್ಷಿಗಳು ನೆಪಕ್ಕೆ ಹೆಗಲು ಕೊಡುತ್ತಿದ್ದರು. ಇಂದು ಸಪ್ತರ್ಷಿಗಳು ಎಲ್ಲರನ್ನೂ ನಿವಾರಿಸಿ ತಾವೇ ಪಲ್ಲಕ್ಕಿಯನ್ನು ಎತ್ತಿಕೊಂಡರು. ರತ್ನಖಚಿತವಾದ ಪಲ್ಲಕ್ಕಿ ಆನೆಗಿಂತ ತೂಕವಾದುದು. ಆದರೂ ಶಿಬಿಕಾಧಿದೇವಿಯು ಹೊರುತ್ತಿರುವವರು ಸಪ್ತರ್ಷಿಗಳೆಂದು ತನ್ನ ಭಾರವನ್ನೆಲ್ಲಾ ತಾನೇ ವಹಿಸಿಕೊಂಡಳು. ಸಪ್ತರ್ಷಿಗಳು ಅಂದು ಜಗ್ಗುಹಾಕಿಕೊಂಡು ನಡೆಯುತ್ತಿದ್ದಾರೆ. ಎಲ್ಲರೂ ಆಶ್ಚರ್ಯ- ನೂರಾರು ಮಂದಿ ಹೊತ್ತಿದ್ದಾಗ ಮಂದಗಮನದಲ್ಲಿ ಹೋಗುತ್ತಿದ್ದ ಪಲ್ಲಕ್ಕಿಯು ಅದಕ್ಕೆ ರೆಕ್ಕೆಗಳು ಹುಟ್ಟಿದಂತೆ ಓಡುವಂತೆ, ತೀವ್ರಗಾಮಿನಿಯಾಗಿದೆ.

ಅರ್ಧದೂರ ಬಂದಿದೆ. ಎಲ್ಲರೂ ಶಿಬಿಕೆಯಲ್ಲಿರುವ ಅರಸನನ್ನು ನೋಡಿ “ಈ ಮುದ್ರಿಕೆ ಇತರರಿಗೆ ಸಾಧ್ಯವೇ?” ಎಂದು ಆಶ್ಚರ್ಯಪಡುತ್ತಿದ್ದಾರೆ. ಇಂದ್ರನೂ “ಇಂತಹ ಭಾಗ್ಯವು ಇನ್ನು ಯಾರಿಗುಂಟು?” ಎಂದು ವಿಸ್ಮಿತನಾಗಿದ್ದಾನೆ. ಹೀಗೆ ಎಲ್ಲರೂ ವಿಸ್ಮಯಾವಿಷ್ಟರಾಗಿರುವಾಗ, ಅರಸನಿಗೆ ಸಮಾಧಿಯು ಶಿಥಿಲವಾಯಿತು. ಸಪ್ತರ್ಷಿಗಳು ‘ಓಂ’ ಎಂದು ಸಿಂಹನಾದ ಮಾಡಿ, ತಾವು ಹೊತ್ತಿದ್ದ ಪಲ್ಲಕ್ಕಿಯನ್ನು ಅತ್ತ ಎಸೆದರು. ಪಲ್ಲಕ್ಕಿಯಲ್ಲಿದ್ದ ಅರಸನು ಮೂರು ಉರುಳು ಉರುಳಿ ಭೂಗತನಾದನು.

ಎಲ್ಲರೂ ಹಾಹಾ ಎಂದು ಓಡಿಬಂದರು. ಇಂದ್ರ, ವಾಯು, ಯಯಾತಿ, ಅಗ್ನಿ, ಸುರಗುರು, ಶುಕ್ರಾಚಾರ್ಯ, ಶಚಿ, ವಿರಜ, ಎಲ್ಲರೂ ಓಡಿ ಬಂದು ಅರಸನನ್ನು ಸುತ್ತಿಕೊಂಡರು. ಸಪ್ತರ್ಷಿಗಳು ನಿಶ್ಯಂಕರಾಗಿ ಮೌನವಾಗಿ ನಿಂತಿದ್ದಾರೆ. ಇಂದ್ರಾದಿಗಳು “ಏನಾಯಿತು” ಎಂದು ಅವರನ್ನು ಕೇಳಿದರು. ಅವರು ನಹುಷನನ್ನು ತೋರಿಸಿದರು. ಅರಸನು ಆ ವೇಳೆಗೆ ಆಕಸ್ಮಿಕವಾಗಿ ಬಿದ್ದ ಘಾತದ ಪ್ರತಿಕ್ರಿಯೆಯನ್ನು ಸಂರೋಧಮಾಡಿಕೊಂಡು ಎದ್ದಿದ್ದಾನೆ. “ಈ ಅಪಘಾತದ ಪ್ರತಿಯಾಗಿ ಇನ್ನೇನು ಆಗಿಹೋಗುವುದೋ !” ಎಂದು ಎಲ್ಲರೂ ಹೆದರಿದ್ದಾರೆ. ಅರಸನು ಮೈ ಕೈ ಒರೆಸಿಕೊಳ್ಳುತ್ತಾ “ಸಪ್ತಋಷಿಗಳು ಮಾಡಿದುದು ಸರಿ” ಎಂದು ಅವರಿಗೆ ಕೈಮುಗಿಯುತ್ತಾನೆ.

ಎಲ್ಲರೂ ಇನ್ನೂ ಅಷ್ಟು ವಿಸ್ಮಿತರಾದರು. ಅರಸನು ಅವರೆಲ್ಲರನ್ನೂ ಸಮಾಧಾನಮಾಡುತ್ತ “ಶಿಬಿಕಾರೋಹಣ ಕಾಲದಲ್ಲಿ ನಿರ್ವಿಕಲ್ಪ ಸಮಾಧಿಯಲ್ಲಿ ಇರಬೇಕು ಎಂದು ನನಗೆ ಅಪ್ಪಣೆಯಾಗಿತ್ತು. ಏಳು ದಿನದ ಶಿಬಿಕೋತ್ಸವವು ಪರಿಪೂರ್ಣವಾಗಕೂಡದೆಂದು ನಿಯತಿದೇವಿಯು ವಿಧಿಸಿದ್ದಳು. ಅದರಂತೆ ಈ ದಿನ ಶಿಬಿಕೋತ್ಸವವು ಪೂರ್ಣವಾಗುವುದಕ್ಕಿಂತ ಮುಂಚೆ, ನನಗೆ ಸಮಾಧಿಯು ಶಿಥಿಲವಾಯಿತು. ಶಿಥಿಲ ಸಮಾಧಿಯಾದವನು ಸಪ್ತಋಷಿಗಳು ಹೊತ್ತಿರುವ ಶಿಬಿಕೆಯಲ್ಲಿ ಕುಳಿತಿರುವಂತಿಲ್ಲ. ಅದರಿಂದ ಅವರು ಶಿಬಿಕೆಯನ್ನೇ ಎತ್ತಿ ಎಸೆದರು. ಶಿಬಿಕೆಗೇನಾಗಿದೆಯೋ ನೋಡಿ” ಎಂದನು. ಶಿಬಿಕೆಯು ಕುಂದಣದ ಕೆಲಸದಿಂದ ಆದುದು, ಅದಕ್ಕೆ ಏನೂ ಆಗಿರಲಿಲ್ಲ.

ಅರಸನು ನೇರವಾಗಿ ಸಪ್ತರ್ಷಿಗಳ ಬಳಿಗೆ ಹೋದನು. ನಮಸ್ಕಾರಮಾಡಿ ಕೈಮುಗಿದುಕೊಂಡು ಹೇಳಿದನು : “ಆದ ದ್ರೋಹವನ್ನು ಕ್ಷಮಿಸಬೇಕು. ಶಿಥಿಲ ಸಮಾಧಿಯಾದ ಅಪರಾಧಕ್ಕೆ ಶಿಕ್ಷೆಯೇನೋ ವಿಧಿಸೋಣವಾಗಲಿ. ಭೂತಪನವಷ್ಟೇಯೋ? ಇನ್ನೂ ಏನಾದರೂ ಉಂಟೋ?”

ಸಪ್ತರ್ಷಿಗಳು ಮುಸಿಮುಸಿ ನಗುತ್ತ ‘ನಾವು ಅಪರಾಧವನ್ನು ತೋರಿಸಿದೆವು. ದಂಡಿಸುವ ಕೆಲಸ ನಿನ್ನದು. ನಿನ್ನ ದಂಡವು ಸರಿಯಿಲ್ಲದೆ ಹೋದರೆ ಆಮೇಲೆ ನಾವು’ ಎಂದರು.

ಅರಸನು ಸರಿಯೆಂದು ವಿಚಾರಗ್ರಸ್ಥನಾಗಿ ಅಲ್ಲಿಯೇ ನಿಂತನು. ಒಂದು ಗಳಿಗೆ ಯೋಚಿಸಿ “ನಹುಷನ ಅಪರಾಧವು ಗುರುತರವಾದುದು. ಈ ಅಪರಾಧಕ್ಕೆ ಶಿಕ್ಷೆಯು ಹೀಗಿರಬೇಕು. ಚೇತನವನ್ನು ಜಡವು ಅಲ್ಲಾಡಿಸಿ ಹೊರಕ್ಕೆ ಎಳೆಯಿತು. ಅದರಿಂದ ಜಡದಲ್ಲಿ ಜಡವಾದ ಅವಸ್ಥೆಯು ಈತನಿಗೆ ಪ್ರಾಪ್ತವಾಗಬೇಕು. ಆದರೆ ಇದು ವಿಧಿನಿಯತವಾಗಿ ಬಂದುದರಿಂದ ಖನಿಜ ಉದ್ಭಿಜ್ಜಗಳಲ್ಲದ ತಿರ್ಯಗ್ಯೋನಿಯಲ್ಲಿ ಹುಟ್ಟಬೇಕು. ಈತನು ಇಂದ್ರನಾಗಿದ್ದಾಗ ಈ ಕಾರ್ಯವು ನಡೆಯಿತಾಗಿ ಈತನು ಎಲ್ಲದಕ್ಕಿಂತ ಮಿಗಿಲಾದ ಅಜಗರವಾಗಿ ಹುಟ್ಟಬೇಕು. ಶಿಕ್ಷೆಯು ಸರಿಯಾಗಿದೆ ತಾನೇ?”

ಎಲ್ಲರೂ ಆತನ ವಿಲಕ್ಷಣ ಸ್ಥೈರ್ಯವನ್ನು ನೋಡಿ ಆಶ್ಚರ್ಯಪಡುತ್ತಾರೆ. “ಇದೇನಿದು ? ತನ್ನ ಅಪರಾಧಕ್ಕೆ ತಾನೇ ಶಿಕ್ಷೆಯನ್ನು ವಿಧಿಸಿಕೊಳ್ಳುವಾಗ ಈತನು ಇನ್ನೊಬ್ಬ ಅಪರಾಧಿಯನ್ನು ಪರಿಗಣಿಸುವಷ್ಟು ನಿರಂಜನನಾಗಿ ಸ್ಥಿರನಾಗಿರುವನಲ್ಲ!” ಎಂದು ಹೆದರಿದ್ದಾರೆ.

ಇಂದ್ರನು ಮುಂದೆ ಬಂದು ಕಣ್ಣೀರು ಒರೆಸಿಕೊಳ್ಳುತ್ತಾ “ಶಿಕ್ಷೆಯು ಸರಿಯಾಗಿದೆ” ಎಂದನು. ಸಪ್ತಋಷಿಗಳಲ್ಲಿ ಒಬ್ಬ ಭಗವಾನರು ಬಂದು ‘ಅಪರಾಧಿಯು ಬ್ರಹ್ಮಜ್ಞನು ಇಂದ್ರನು. ಅದರಿಂದ ಆತನಿಗೆ ಅಜಗರತ್ವ ಪ್ರಾಪ್ತವಾದರೂ ಇಂದ್ರಾನಂದವೂ ಜಾತಿಸ್ಮರತ್ವವೂ ಇರತಕ್ಕದ್ದು’ ಎಂದು ಕೈಯೆತ್ತಿ ಹೇಳಿದರು.

ಶಚಿಯು ಮುಂದೆ ಬಂದು ಅವರಿಗೆ ನಮಸ್ಕರಿಸಿ ಸೆರಗೊಡ್ಡಿ ಬೇಡಿದಳು: “ಈತನು ಸಪತ್ನೀಕನಾಗಿ ತಪೋಲೋಕಕ್ಕೆ ವಾನಪ್ರಸ್ಥನಾಗಿ ಹೋಗಿ ತಪಸ್ಸು ಮಾಡಬೇಕೆಂದಿದ್ದನು. ಇಲ್ಲಿ ವಿರಜಾದೇವಿಯೊಡನೆ ಇಂದ್ರಸಖನಾಗಿ ಕೊನೆಯವರೆಗೂ ಇರುವುದಾಗಿ ನಮಗೆ ವರಕೊಟ್ಟಿದ್ದನು....” ಮುಂದಕ್ಕೆ ಆಕೆಯ ಬಾಯಲ್ಲಿ ಮಾತು ಹೊರಡಲಿಲ್ಲ. ದುಃಖದಿಂದ ಗಂಟಲು ಕಟ್ಟಿಹೋಯಿತು.

ಭಗವಾನರು ಮತ್ತೆ ಹೇಳಿದರು : “ಆತನು ಇನ್ನೂ ಇಂದ್ರ. ಆತನು ಸರಿಯಾಗಿ ಶಿಕ್ಷೆ ವಿಧಿಸಿದನೋ ಇಲ್ಲವೋ ನೋಡುವುದಷ್ಟೇ ನಮ್ಮ ಕೆಲಸ. ಬೇಕಾದರೆ ಆತನೇ ಅಥವಾ ನಾಳೆ ಇಂದ್ರನಾಗುವ ನಿನ್ನ ಪತಿ ಯಾರು ಬೇಕಾದರೂ, ಈ ಶಿಕ್ಷೆಯನ್ನು ವಿಲೋಪ ಮಾಡಬಹುದು. ಆತನಿಗೂ ಸ್ವರ್ಗವಾಸವೂ ತಪೋಲೋಕವಾಸವೂ ತಪ್ಪಿದ್ದಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಆತನು ಬ್ರಹ್ಮಜ್ಞನು. ನಿರ್ವಿಕಲ್ಪಸಮಾಧಿಗೆ ಹೋಗಬಲ್ಲನು. ಆತನು ಎಲ್ಲಿದ್ದರೆ ಅದು ಬ್ರಹ್ಮಲೋಕಕ್ಕೆ ಮಿಗಿಲಾಗುವುದು” ಎಂದು ಎಲ್ಲರನ್ನೂ ಆಶೀರ್ವಾದ ಮಾಡಿ ಸಪ್ತಋಷಿಗಳು ಅಂತರ್ಧಾನರಾದರು.

ಇಂದ್ರನು ಮುಂದೆ ಬಂದು ನಹುಷನ ಕೈಹಿಡಿದುಕೊಂಡು, “ದೇವಾ ಅಪ್ಪಣೆಯಾದರೆ ನಾನು ಈ ಶಿಕ್ಷೆಯನ್ನು ವಿಲೋಪಮಾಡುವೆನು” ಎಂದನು. ನಹುಷನು ನಗುತ್ತಾ ಆತನ ಕೈಹಿಡಿದು “ಅಪರಾಧಿಯು ನಿನ್ನ ಬಳಿ ಬಂದು ಕೇಳಿಕೊಂಡಾಗ ಆ ಕೆಲಸ. ಅದುವರೆಗೆ ಏನವಸರ ?” ಎಂದು ವಿರಜಾದೇವಿಯ ಕಡೆ ತಿರುಗಿದನು. ಆಕೆ ವಿಸ್ಮಯ ಭೀತಿಗಳಿಂದ ನಿಶ್ಚೇತನಳಾದಂತೆ ಇದ್ದಾಳೆ. ಮಗನ ಆಸರೆಯಿಲ್ಲದಿದ್ದರೆ ಆಕೆಯು ದೇಹಭಾರವನ್ನು ಹೊತ್ತು ನಿಂತೂ ಇರಲಾರಳು. ನಹುಷನು ನೇರವಾಗಿ ಹೋಗಿ ಮಗನ ಭಾರವನ್ನು ತಾನು ವಹಿಸಿಕೊಂಡು ಆಕೆಯನ್ನು ತನಗೆ ಒರಗಿಸಿಕೊಂಡು ಹೇಳಿದನು : “ಈ ಜನ್ಮಾಂತರ ಲಾಭವು ನಿನಗೇನೂ ಇಲ್ಲ ವಿರಜಾ : ನನಗೆ ಮಾತ್ರ. ಯಯಾತಿ, ಈ ಜನ್ಮವು ಭೂಲೋಕದಲ್ಲಿ ಹಿಮಾಲಯ ಪ್ರಾಂತದ ದೇವಭೂಮಿಯಲ್ಲಾಗುವುದು. ಆಗ ನೀನು ಅಭಿಮಾನ ವಹಿಸಿ ಉಪಚಾರಮಾಡಲು ಯತ್ನಿಸಬೇಡ. ಅಲ್ಲಿ ಅಜಗರವಾದಾಗ, ನನಗೆ ಕಷ್ಟವಾಗುವುದು ಎಂದುಕೊಳ್ಳಬೇಡ. ದೇಹವು ತಾನಲ್ಲ ಎಂದು ಬಲ್ಲವನಿಗೆ ಉಪಾಧಿಯ ಕಷ್ಟಗಳಿರುವುದಿಲ್ಲ. ಇನ್ನು ಯಾವಾಗ ಅಲ್ಲಿಂದ ಮುಕ್ತಿ ಎನ್ನುವಿಯೇನೋ ? ಹುಟ್ಟಿದ್ದಕ್ಕೆಲ್ಲ ಕೊನೆಯುಂಟು. ಇಲ್ಲಿ ಸ್ವರ್ಗದಲ್ಲಿ ಪಡುವ ಭೋಗಕ್ಕೆ ಕೊನೆ ಬೇಡ ; ಅಜಗರಜನ್ಮದಲ್ಲಿ ಪಡುವ ಕಷ್ಟಕ್ಕೆ ಕೊನೆಯಿರಲಿ ಎನ್ನುವುದು ಸರಿಯಾದ ಮಾತಲ್ಲ. ಆ ಜನ್ಮವೆತ್ತಿದಾಗ ಆ ಜನ್ಮದ ಆಯುಸ್ಸು ಗೊತ್ತಾಗುವುದು. ನಮ್ಮ ನಿಜರೂಪವು ಇನ್ನು ಮುಂದೆ ತಪೋಲೋಕದಲ್ಲಿ ವಾನಪ್ರಸ್ಥರಾಗಿ, ಇನ್ನೊಂದು ಇಲ್ಲಿ ಇಂದ್ರಸಖರಾದ ದಂಪತಿಗಳಾಗಿ ಮತ್ತೊಂದು. ಅದನ್ನು ನಾನು ಮಾತ್ರ ಪಡೆಯುವೆನು. ಭೂಲೋಕದಲ್ಲಿ ಅಜಗರವಾಗಿ- ಇನ್ನು ಇದನ್ನು ಇಲ್ಲಿಗೇ ಬಿಡೋಣ. ನಾಳೆಯ ಇಂದ್ರಾಭಿಷೇಕದಲ್ಲಿ ಆನಂದಪಡಲು ಸಿದ್ಧರಾಗೋಣ.”

ಎಲ್ಲರಿಗೂ ಹೃದಯವು ಚಿಂತಾಭರವೂ ಆಗಿತ್ತು ; ಸೌಖ್ಯಪೂರ್ಣವೂ ಆಗಿತ್ತು. ಯಾರೂ ಮಾತನಾಡದೆ ಮೌನದಿಂದ ಇಂದ್ರನ ಆಣತಿಯನ್ನು ಸ್ವೀಕರಿಸಿದರು.

ಉಪಸಂಹಾರ[ಸಂಪಾದಿಸಿ]

ಇದರಂತೆಯೇ ಸಂಹಿತೆ, ಇತಿಹಾಸ, ಪುರಾಣಗಳಲ್ಲಿ ಬಂದಿರುವ ಕಥೆಗಳು ಇನ್ನೂ ಎಷ್ಟೋ ಇವೆ. ಅವುಗಳನ್ನು ಅಧ್ಯಯನ ಮಾಡಿ ಉಪಬೃಂಹಣ ಮಾಡಿ, ವಿಸ್ತಾರವಾಗಿ, ಸಮಂಜಸವಾಗಿ ಹೇಳುವ ಪುಣ್ಯವಂತರ ಪಡೆಯು ಹೆಚ್ಚಾಗಲಿ. ಭಾರತೀಯ ಪೂರ್ವವೈಭವವು ಮತ್ತೆ ಗೋಚರಿಸಲಿ.

* * * *