ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಗಾರ್ (ಅಗಾರ್-ಅಗಾರ್)

ವಿಕಿಸೋರ್ಸ್ದಿಂದ

ಅಗಾರ್ (ಅಗಾರ್-ಅಗಾರ್)

[ಸಂಪಾದಿಸಿ]

ಲೋಳೆಯಂತೆ ಜಿಗುಟಾದ ಜೆಲಟಿನ್ನಿನಂಥ ರಾಸಾಯನಿಕ ವಸ್ತು. ಆಲ್ಗೆ ಗುಂಪಿಗೆ ಸೇರಿದ ಜೆಲಿಡಿಯಂ ಮತ್ತು ಪ್ರಾಸಿಲೇರಿಯ, ಅನ್ಫೆಟಿಯ ಮತ್ತು ಟೆರೊಕ್ಲಾಡಿಯ ಎಂಬ ಕೆಂಪುಪಾಚಿ ಸಸ್ಯಗಳಿಂದ ತಯಾರಿಸುತ್ತಾರೆ. ವಾಡಿಕೆಯಲ್ಲಿ ಇದಕ್ಕೆ ಚೈನ ಗ್ರಾಸ್ ಎಂದು ಕರೆಯುತ್ತಾರೆ. ಸಮುದ್ರದ ಜೊಂಡುಗಳೆನಿಸುವ ಈ ಸಸ್ಯಗಳನ್ನು ಮೊದಲು ಚೆನ್ನಾಗಿ ಕುದಿಸಿ ಹೊರಬರುವ ಮೆತುಪಾಕದಂತಿರುವ ವಸ್ತುವನ್ನು ವಿಶೇಷ ರೀತಿಯಲ್ಲಿ ಒಣಗಿಸಿ ಕಡ್ಡಿಗಳ ಅಥವಾ ಸಣ್ಣ ಸಣ್ಣ ಇಟ್ಟಿಗೆಗಳ ರೂಪದಲ್ಲಿ ಡಬ್ಬಗಳಲ್ಲಿ ಶೇಖರಿಸುತ್ತಾರೆ.

ಈ ವಸ್ತು ತಣ್ಣೀರಿನಲ್ಲಿ ಕರಗುವುದಿಲ್ಲ. ಆದರೆ ಬಿಸಿನೀರಿನಲ್ಲಿ ಕರಗಿ ಮತ್ತೆ ಆರಿದಾಗ ತನ್ನ ತೂಕದ 20ರಷ್ಟು ನೀರನ್ನು ಹೀರಿಕೊಂಡು ಘನೀಭೂತವಾಗಿ ಅಸ್ಫಟಿಕದ್ರಾವಣ ಅಥವಾ ಜೆಲ್ ಆಗುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರಣದಿಂದಾಗಿ ಇದಕ್ಕೆ ಅನೇಕ ಪೋಷಕ ಆಹಾರಪದಾರ್ಥಗಳನ್ನು ಸೇರಿಸಿ ಈ ವಸ್ತ್ತುವಿನಲ್ಲಿ ಬ್ಯಾಕ್ಟೀರಿಯಗಳ (ಏಕಾಣುಜೀವಿಗಳ) ತಳಿಯೆಬ್ಬಿಕೆಯ ಅಥವಾ ಜೀವಾಣುವರ್ಧನದ ಮಧ್ಯವರ್ತಿಯಾಗಿ ಇದನ್ನು ಬಳಸಲಾಗುತ್ತಿದೆ. ಶೇ.1ರ ಅಗಾರ್ದ್ರಾವಣ ಸು. 104º ಫ್ಯಾ. ಶಾಖದಲ್ಲಿ ಗಟ್ಟಿಯಾಗುವುದಾದರೂ ಮೊದಲೇ ಗಟ್ಟಿಯಾಗುವ ಅದರ ಜೆಲ್ ರೂಪ ಮಾತ್ರ 203º ಫ್ಯಾ. ಶಾಖವನ್ನು ಮುಟ್ಟುವ ತನಕ ಕರಗುವುದಿಲ್ಲ. ಜಡತ್ವಗುಣಕ್ಕೆ (ಹಿಸ್ಟೆರಿಸಿಸ್) ಇದು ಒಳ್ಳೆಯ ಉದಾಹರಣೆ. ಹಲ್ವ ಮುಂತಾದ ಖಾದ್ಯ ಪದಾರ್ಥಗಳನ್ನು ತಯಾರಿಸುವಾಗ ಇದನ್ನು ಉಪಯೋಗಿಸುತ್ತಾರಾದರೂ ಸ್ವತಃ ಇದರಲ್ಲಿ ಯಾವ ಆಹಾರದ ಗುಣವೂ ಇಲ್ಲ. ಔಷಧ ಮತ್ತು ಅಂಗರಾಗ ವಸ್ತುಗಳ ತಯಾರಿಕೆಯಲ್ಲೂ ಇದನ್ನು ಉಪಯೋಗಿಸುತ್ತಾರೆ. ಇವಲ್ಲದೆ ಮಾಂಸವನ್ನು ಡಬ್ಬಿಯಲ್ಲಿ ತುಂಬಲೂ ಮೃದುವಿರೇಚಕದ ತಯಾರಿಕೆಗಳಲ್ಲೂ ಹಲ್ಲಿನ ಅಚ್ಚು ತೆಗೆಯುವ ಮೂಲವಸ್ತುವಾಗಿಯೂ ತಂತಿಯನ್ನು ಎಳೆಯುವ ಕಾರ್ಯದಲ್ಲಿ ಮೃದುಚಾಲನಸಹಾಯಕ ವಸ್ತುವಾಗಿಯೂ ಇದನ್ನು ಬಳಸಲಾಗುತ್ತದೆ.

ರಾಸಾಯನಿಕವಾಗಿ ಇದು ಕಾರ್ಬೊಹೈಡ್ರೇಟ್ನಲ್ಲಿನ ಪಾಲಿಸ್ಯಾಕರೈಡ್ ಗುಂಪಿಗೆ ಸೇರಿದ ವಸ್ತು. ಗ್ಯಾಲಾಕ್ಟೋಸ್ ಎಂಬ ಸಕ್ಕರೆಯ ಅಣುಗಳು ಮತ್ತು ಅಲ್ಲಲ್ಲೇ ಚದುರಿದ ಸಲ್ಫ್ಯೂರಿಕ್ ಆಮ್ಲದ ಅಣುಗಳು (53 ಗ್ಯಾಲಾಕ್ಟೋಸ್ಗೆ ಒಂದು ಸಲ್ಫ್ಯೂರಿಕ್ ಆಮ್ಲದ ಅಣು-ಈ ಅನುಪಾತದಲ್ಲಿದೆ ಒಂದಕ್ಕೊಂದು ಸೇರಿ ಇದರ ಅಣುವಿನ ರಚನೆಯಾಗಿದೆ. ಇದರ ಜೆಲ್ ರೂಪದಲ್ಲಿ ಋಣವಿದ್ಯುದಂಶವನ್ನು ಹೊತ್ತಿರುವ ಸಣ್ಣ ಸಣ್ಣ ಕಣಗಳಿರುತ್ತವೆ. ಜೆಲ್ ರೂಪದಲ್ಲಿರುವ ಇತರ ವಸ್ತುಗಳಂತೆ ಇದೂ ಸಹ ಕಣವನ್ನು ಒಗ್ಗೂಡಿಸುವ (ಸೈನೆರಿಸೆಸ್) ಗುಣವನ್ನು ಪ್ರದರ್ಶಿಸುತ್ತದೆ. ರಾಸಾಯನಿಕವಾಗಿ ಹೇಳುವುದಾದರೆ ಇದು ಗ್ಯಾಲಾಕ್ಟಾನಿನ ಸಲ್ಫ್ಯೂರಿಕ್ ಎಸ್ಟರ್. ಸ್ವಾಭಾವಿಕವಾಗಿ, ಅಗಾರ್ ಜೀವಿ ಸಸಿಗಳ ಜೀವಕಣದ ಒಂದು ಅಂಗಾಂಶ ರೂಪದಲ್ಲೋ ಅಥವಾ ಅದರ ಕ್ಯಾಲ್ಷಿಯಂ ಲವಣವಾಗಿಯೋ ಕ್ಯಾಲ್ಷಿಯಂ-ಮೆಗ್ನೀಷಿಯಮ್ಗಳ ಸಂಯುಕ್ತ ಲವಣವಾಗಿಯೋ ಇದು ದೊರೆಯುತ್ತದೆ. ಇದನ್ನು ಮುಖ್ಯವಾಗಿ ಜಪಾನ್ ದೇಶದಲ್ಲೂ ಮಿಕ್ಕಂತೆ ಚೀನ, ರಷ್ಯ, ಅಮೆರಿಕ, ದಕ್ಷಿಣಆಫ್ರಿಕ, ನ್ಯೂಜಿ಼ಲೆಂಡ್, ಆಸ್ಟ್ರೇಲಿಯ ಮತ್ತು ಭಾರತದಲ್ಲೂ ತಯಾರಿಸುತ್ತಾರೆ.