ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅತ್ಯಲ್ಪ ಸಿಲಿಕಾಂಶಶಿಲೆಗಳು

ವಿಕಿಸೋರ್ಸ್ದಿಂದ

ಅತ್ಯಲ್ಪ ಸಿಲಿಕಾಂಶಶಿಲೆಗಳು 45% ಕ್ಕಿಂತ ಕಡಿಮೆ ಸಿಲಿಕಾಂಶವಿರುವ ಶಿಲೆಗಳಿಗೆ ಈ ಹೆಸರಿದೆ (ಅಲ್ಟ್ರ ಬೇಸಿಕ್ ರಾಕ್ಸ್). ಸಾಮಾನ್ಯವಾಗಿ ಈ ಶಿಲೆಗಳ ಬಣ್ಣ ಕಪ್ಪು. ಇವುಗಳಲ್ಲಿ ಫೆಲ್ಸ್ಪ್‍ರ್ ಖನಿಜಗಳಿರುವುದಿಲ್ಲ; ಇದ್ದರೂ ಪ್ರಮಾಣ ಬಹಳ ಅಲ್ಪ. ಕ್ಯಾಲ್ಸಿಯಂ ಅಧಿಕವಿರುವ ವಿಧಗಳು ಮಾತ್ರ ಇರುತ್ತವೆ. ಈ ವರ್ಗದ ಶಿಲೆಗಳಲ್ಲಿ ಮುಖ್ಯವಾಗಿ ಆಲಿವೀನ್ ಪೈರಾಕ್ಸೀನ್ ಮತ್ತು ಅದುರು ಖನಿಜಗಳಿವೆ. ಹಾರನ್‍ಬ್ಲೆಂಡ್ ಮತ್ತು ಅಭ್ರಕಗಳು ಕೆಲವು ಬಗೆಯಲ್ಲಿರುತ್ತವೆ. ನೆಫೆಲೀನ್, ಮೆಲಿಲೈಟ್-ಮುಂತಾದ ಫೆಲ್ಸ್ಪ್‍ತಾಯಿಡಲ್ ಖನಿಜಗಳು ಇರುವುದುಂಟು. ರೂಪಾಂತರಗೊಂಡ ಶಿಲೆಗಳಲ್ಲಿ ಸರ್ಪೆಂಟೇನ್ ಮತ್ತು ಟಾಲ್ಕ್, ಕ್ಲೋರೈಟ್ ಮತ್ತು ಟ್ರೆಮೊಲೈಟ್-ಮುಂತಾದ ಜಲಸಂಯೋಜಿತ ಖನಿಜಗಳೂ ಇರುತ್ತವೆ.

ಶಿಲಾವಿಧಗಳು: ಮೇಲೆ ತಿಳಿಸಿದ ಬೇರೆ ಬೇರೆ ಖನಿಜಗಳಿರುವ ಅಥವಾ ಖನಿಜಗಳು ವಿವಿಧ ಪ್ರಮಾಣದಲ್ಲಿರುವ ಶಿಲೆಗಳಿಗೆ ಬೇರೆ ಬೇರೆ ಹೆಸರಿದೆ. ಈ ಗುಂಪಿನ ಶಿಲೆಗಳಲ್ಲಿ ಸ್ಥೂಲಕಣಶಿಲೆಗಳು. ಸೂಕ್ಷ್ಮಕಣಶಿಲೆಗಳು ಎಂದು ಎರಡು ಗುಂಪು. ಸ್ಥೂಲಕಣಶಿಲೆಗಳಲ್ಲಿ 1. ಡನೈಟ್, 2. ಪೆರಿಡೊಟೈಟ್, 3. ಪೈರಾಕ್ಸಿನೈಟ್, 4. ಫೆಲ್ಸ್ಪ್‍ತಾಯಿಡಲ್ ಖನಿಜಗಳಿರುವ ಶಿಲೆಗಳು ಮತ್ತು 5. ಸರ್ಪೆಂಟಿನೈಟ್ ಇವು ಮುಖ್ಯವಾಗಿವೆ.

ಸ್ಥೂಲಕಣಶಿಲೆಗಳು: 1. ಡನೈಟ್: ಈ ವಿಧದ ಶಿಲೆಯನ್ನು ಮೊದಲು ನ್ಯೂಜಿóಲೆಂಡಿನ ಡನ್ ಪರ್ವತದಲ್ಲಿ ಕಂಡುಹಿಡಿದುದರಿಂದ ಈ ಹೆಸರು ಬಂದಿದೆ. ಇದರಲ್ಲಿ ಬಹುಭಾಗ ಆಲಿವೀನ್ ಇರುತ್ತದೆ; ಅಲ್ಲದೆ ಕ್ರೋಮೈಟ್ ಮತ್ತು ಪಿಕೊಟೈಟ್‍ಗಳು ವಿವಿಧ ಪ್ರಮಾಣಗಳಲ್ಲಿರುತ್ತವೆ. ಇವಲ್ಲದೆ ಮ್ಯಾಗ್ನಟೈಟ್, ಇಲ್ಮನೈಟ್, ಪಿರ್ಹೋಟೈಟ್ , ಪ್ಲಾಟಿನಂನ ಕಣಗಳು, ಎನ್‍ಸ್ಟಟೈಟ್ ಮತ್ತು ಡಯಲೇಜ್ ಖನಿಜಗಳು ಅಲ್ಪ ಪ್ರಮಾಣದಲ್ಲಿರುತ್ತವೆ.

2. ಪೆರಿಡೊಟೈಟ್: ಈ ಶಿಲೆಯಲ್ಲಿ ಆಲಿವೀನ್‍ನೊಂದಿಗೆ ಪೈರಾಕ್ಸೀನ್ ಖನಿಜವೂ ಸಪ್ರಮಾಣದಲ್ಲಿರುತ್ತದೆ. ಅಲ್ಲದೆ ಕ್ರೋಮೈಟ್, ಕಬ್ಬಿಣದ ಅದುರಿನ ಕಣಗಳು, ಡಯಾಪ್ಸೈಡ್ ಮತ್ತು ಫೆಲ್ಸ್ಪಾರ್ ಅಲ್ಪ ಪ್ರಮಾಣದಲ್ಲಿರುತ್ತವೆ. ಮಾರ್ಪಾಡಿನಿಂದಾದ ಸರ್ಪೆಂಟೇನ್, ಆಂಫಿಬೋಲ್ ಮತ್ತು ಕಾರ್ಬೋನೇಟುಗಳೂ ಇರುವುದುಂಟು. ಪೈರಾಕ್ಸೀನ್‍ಗೆ ಬದಲಾಗಿ ಅಥವಾ ಅದರೊಂದಿಗೆ ಇತರ ಖನಿಜಗಳು ಸಪ್ರಮಾಣದಲ್ಲಿರಬಹುದು. ಹಾರನ್‍ಬ್ಲೆಂಡ್ ಇದ್ದರೆ ಹಾರನ್-ಬ್ಲೆಂಡ್ ಪೆರಿಡೊಟೈಟ್ ಎಂದೂ ಅಭ್ರಕವಿದ್ದರೆ ಅದಕ್ಕೆ ಮೈಕ ಪೆರಿಡೊಟೈಟ್ ಅಥವಾ ಕಿಂಬರ್ಲೈಟ್ ಎಂದೂ ಹೆಸರು.

3. ಪೈರಾಕ್ಸಿನೈಟ್: ಇವುಗಳಲ್ಲಿ ಬಹುಭಾಗ ಪೈರಾಕ್ಸೀನ್ ಖನಿಜಗಳಿರುತ್ತವೆ. ಆಲಿವೀನ್ ಅಲ್ಪ ಪ್ರಮಾಣದಲ್ಲಿ ಅಪೂರ್ವವಾಗಿರುತ್ತದೆ. ಅಲ್ಲದೆ ಮ್ಯಾಗ್ನಟೈಟ್, ಕ್ರೋಮೈಟ್, ಪಿಕೊಟೈಟ್, ಫೆಲ್ಸ್ಪಾರ್, ಅಪಟೈಟ್- ಮುಂತಾದ ಖನಿಜಗಳು ಅಲ್ಪಪ್ರಮಾಣದಲ್ಲಿರುತ್ತವೆ. ಈ ಶಿಲೆಯಲ್ಲಿ ಕ್ಲೈನೊಪೈರಾಕ್ಸೀನ್ ಬಹುಭಾಗವಿದ್ದರೆ ಕ್ಲೈನೋಪೈರಾಕ್ಸಿನೈಟ್ ಎಂದೂ ಆರ್ಥೋಪೈರಾಕ್ಸೀನ್ ಬಹುವಾಗಿದ್ದರೆ ಆರ್ಥೋಪೈರಾಕ್ಸಿನೈಟ್ ಎಂದೂ ಹೆಸರು.

4. ಫೆಲ್ಸ್ಪ್‍ತಾಯಿಡಲ್ ಖನಿಜಗಳಿರುವ ವಿಧಗಳು: ಅತ್ಯಲ್ಪ ಸಿಲಿಕಾಂಶ ಶಿಲೆಗಳು ಲೈಮ್‍ಸ್ಟೋನ್ ಅಥವಾ ಡಾಲೊಮೈಟ್ ಶಿಲೆಗಳ ಸಮೀಪದಲ್ಲಿ ರೂಪುಗೊಂಡರೆ ಸಿಲಿಕಾಂಶ ಅತ್ಯಂತ ಕಡಿಮೆಯಾಗಿ ಫೆಲ್ಸ್ಪ್‍ತಾಯಿಡಲ್ ಖನಿಜಗಳು ಸ್ಫಟಿಕೀಕರಿಸುತ್ತವೆ. ಇವುಗಳಲ್ಲಿ ಮುಖ್ಯವಾದವು ಮೆಲಿಲೈಟ್ ಮತ್ತು ಪೈರಾಕ್ಸೀನ್ ಪ್ರಧಾನವಾಗಿರುವ ಅನ್‍ಕಂಪಾಗ್ರೈಟ್ ಹಾಗೂ ಪೈರಾಕ್ಸೀನ್ ಮತ್ತು ನೆಫಿಲೀನ್ ಪ್ರಧಾನವಾಗಿರುವ ಮೆಲ್ಟಿಗೈಟ್ ಎಂಬುವು.

5. ಸರ್ಪೆಂಟಿನೈಟ್ ಬೃಹದಾಕಾರದ ಸಿಲ್‍ಗಳಾಗಿಯೂ ಮಸೂರಾಕಾರಗಳಲ್ಲಿಯೂ ಇವು ಪರ್ವತಪಂಕ್ತಿಗಳಲ್ಲಿ ಹರಡಿರುತ್ತವೆ. ಪರ್ವತ ರೂಪುಗೊಳ್ಳುವ ಪ್ರಾರಂಭದೆಸೆಯಲ್ಲಿಯೇ ಅಂತಸ್ಸರಣವಾದ ಮತ್ತು ಜಲೋಷ್ಣಕಾರ್ಯಗತಿಯಿಂದ ರೂಪುಗೊಂಡ ಡನೈಟ್ ಮತ್ತು ಪೆರಿಡೊಟೈಟ್‍ಗಗಳೆಂದು ಇವನ್ನು ಪರಿಗಣಿಸಲಾಗಿದೆ. ಇವುಗಳ ರೂಪಾಂತರಕ್ಕೆ ಕಾರಣವಾದ ದ್ರವಗಳೆಲ್ಲಿದ್ದವೆಂಬುದರ ವಿಚಾರದಲ್ಲಿ ಒಮ್ಮತವಿಲ್ಲ. ಈ ಶಿಲೆಯಲ್ಲಿ ಪೂರ್ಣವಾಗಿ ಸರ್ಪೆಂಟೈನ್ ಗುಂಪಿಗೆ ಸೇರಿದ ಖನಿಜಗಳಿರುತ್ತವೆ. ಈ ಖನಿಜಗಳು ಜಲೋಷ್ಣ ಪರಿಸ್ಥಿತಿಯಲ್ಲಿ 5000 ಸೆಂ.ಗ್ರೇ. ಗಿಂತ ಕಡಿಮೆ ಉಷ್ಣಾಂಶದಲ್ಲಿ ಆಲಿವೀನ್ ಮತ್ತು ಪೈರಾಕ್ಸೀನ್ ಖನಿಜಗಳ ಬದಲಾವಣೆಯಿಂದಾದುವು. ಒತ್ತಡ ಪರಿಸ್ಥಿತಿಯಲ್ಲಿ ರೂಪುಗೊಂಡ ಏಂಟಿಗೊರೈಟ್ ಮತ್ತು ಒತ್ತಡರಹಿತ ಸ್ಥಿತಿಯಲ್ಲಿ ರೂಪುಗೊಂಡ ಕ್ರೈಸೊಟೈಲ್ ಈ ಗುಂಪಿನ ಮುಖ್ಯ ಖನಿಜಗಳು. ಇವುಗಳೊಂದಿಗೆ ಟಾಲ್ಕ್, ಕ್ಲೋರೈಟ್, ಕ್ರೋಮೈಟ್, ಮ್ಯಾಗ್ನಟೈಟ್ ಖನಿಜಗಳು ವಿವಿಧ ಪ್ರಮಾಣಗಳಲ್ಲಿರುತ್ತವೆ.

ಸೂಕ್ಷ್ಮಕಣಶಿಲೆಗಳು: ಇವು ಬಹಿಸ್ಸರಣವಾದ ಅತ್ಯಲ್ಪ ಸಿಲಿಕಾಂಶಶಿಲೆಗಳು. ಇವು ಅಪೂರ್ವ. ಇವಲ್ಲಿ ಫೆಲ್ಸ್ಪ್‍ರ್ ಬಹಳ ಕಡಿಮೆ ಇರುವುದಲ್ಲದೆ, ಫೆಲ್ಸ್ಪ್‍ತಾಯಿಡಲ್ ಖನಿಜಗಳೂ ಇರುತ್ತವೆ. ಅವುಗಳಲ್ಲಿ ಅಂಕಾರಮೈಟ್, ಲಿಂಬರ್ಗೈಟ್ ಎಂಬ ಶಿಲೆಗಳು ಪ್ರಮುಖವಾದುವು.

ಅತ್ಯಲ್ಪ ಸಿಲಿಕಾಂಶಶಿಲೆಗಳು ರೂಪುಗೊಳ್ಳುವಿಕೆ: ಅತ್ಯಲ್ಪ ಸಿಲಿಕಾಂಶಶಿಲೆಗಳು ಸಾಮಾನ್ಯವಾಗಿ ದಪ್ಪವಾದ ಸಿಲ್‍ಗಳ (ಉದಾ: ಗ್ರೀನ್‍ಲೆಂಡಿನಲ್ಲಿರುವುವು) ಮತ್ತು ಲ್ಯಾಕೊಲಿತ್‍ಗಳ ಹರವಿನ ತಳಭಾಗದಲ್ಲಿ (ಉದಾ: ದಕ್ಷಿಣ ಆಫ್ರಿಕ ಪ್ರದೇಶದಲ್ಲಿರುವ ಪ್ರಖ್ಯಾತವಾದ ಬುಷಾವೆಲ್ಡ್ ಶಿಲಾತೊಡಕು, ಉತ್ತರ ಅಮೆರಿಕದಲ್ಲಿರುವ ಸ್ಟಿಲ್‍ವಾಟರ್ ತೊಡಕು ಮತ್ತು ಒರಿಸ್ಸಾದಲ್ಲಿರುವ ಕಿಯೊಂಜಹಾರ್ ಶಿಲಾತೊಡಕು-ಮುಂತಾದುವು) ರೂಪುಗೊಳ್ಳುತ್ತವೆ. ಶಿಲಾರಸ ಸ್ಫಟಿಕೀಕರಿಸುವಾಗ ಮೊದಲು ರೂಪುಗೊಂಡ ಹರಳುಗಳು ತಳದಲ್ಲಿ ಶೇಖರವಾಗುವುದರಿಂದ ಇವು ಆಗಿವೆ. ಮೊದಲು ಸ್ಫಟಿಕೀಕರಿಸಿ ಶೇಖರವಾದ ಪದರುಗಳು ಪುನಃ ದ್ರವಿಸಿ ಬೇರೆ ಬೇರೆ ಕಡೆ ಡೈಕುಗಳ ರೂಪದಲ್ಲಿ ನಿಂತಾಗ ಇನ್ನೂ ಕೆಲವು ರೂಪುಗೊಂಡವು. ಉಳಿದ ಕೆಲವು ಮೊದಲೆ ರೂಪುಗೊಂಡಿದ್ದ ಮತ್ತು ಅಧಿಕ ಸಿಲಿಕಾಂಶಗಳಿರುವ ಶಿಲೆಗಳ ಮೆಟಸೊಮ್ಯಾಟಿಕ್ ರೂಪಾಂತರದಿಂದಾದುವು. ಮಸೂರಾಕಾರದ ದೊಡ್ಡ ಸರ್ಪೆಂಟಿನೈಟ್ ಹರವುಗಳು ಪರ್ವತೋತ್ಪತ್ತಿ ಕಾರ್ಯಾಚರಣೆಯ ಪ್ರಾರಂಭದೆಸೆಯಲ್ಲಿ ಅಂತಸ್ಸರಣವಾದ ಡನೈಟ್ ಮತ್ತು ಪೆರಿಡೊಟೈಟ್‍ಗಳ ರೂಪಾಂತರದಿಂದಾದುವು. ಇದರಿಂದ ಈ ಶಿಲಾವರ್ಗದ ಹರವಿಗೂ ಪರ್ವತಪಂಕ್ತಿಗಳ ಓಟಕ್ಕೂ ಇರುವ ನಿಕಟ ಸಂಬಂಧವನ್ನು ಬೆನ್ಸನ್ ಮತ್ತು ಹೆಸ್ ತಿಳಿಸಿರುವರು. ಡಾ.ಎಂ.ಎಸ್.ಕೃಷ್ಣನ್ ಭಾರತದಲ್ಲಿರುವ ಅತ್ಯಲ್ಪ ಸಿಲಿಕಾಂಶಶಿಲಾಹರವನ್ನು ವಿವರಿಸುತ್ತ, ಅವು 5 ಪರ್ವತೋತ್ಪತ್ತಿ ಕಾಲಗಳನ್ನು ಸೂಚಿಸುತ್ತವೆಂದು ತಿಳಿಸಿರುವರು. (ಎಸ್.ವಿ.)