ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅನರ್ಘರಾಘವ
ಅನರ್ಘರಾಘವ ಏಳು ಅಂಕಗಳ ಸಂಸ್ಕøತ ದೃಶ್ಯಕಾವ್ಯ. ಕರ್ತೃ ಮುರಾರಿ. ಇವನ ಕಾಲ ನಿರ್ಧಾರವಾಗಿಲ್ಲ. ಪ್ರಾಯಶಃ ಭವಭೂತಿಗಿಂತ ಈಚೆಗೂ ರತ್ನಾಕರನಿಗಿಂತ (9ನೆಯ ಶತಮಾನ) ಆಚೆಗೂ ಇದ್ದಿರಬೇಕು. ಕೆಲವರು 11ನೆಯ ಶತಮಾನದವನೆನ್ನುತ್ತಾರೆ. ರಾಜಶೇಖರನ ನಾಟಕಗಳ ಪ್ರಸ್ತಾವನೆಗೂ ಅನರ್ಘರಾಘವದ ಪ್ರಸ್ತಾವನೆಗೂ ಹಲವು ಅಂಶಗಳಲ್ಲಿ ಸಾದೃಶ್ಯವಿರುವುದರಿಂದ ರಾಜಶೇಖರನ ಸಮಕಾಲೀನ ಎನ್ನುತ್ತಾರೆ. ರತ್ನಾಕರ ತನ್ನ ಹರವಿಜಯದವಿಜಂ ಹರವಿಜಂ ಹರವಿಜಂ.1135) ತನ್ನ ಶ್ರೀಕಂಠಚರಿತ್ರೆಯಲ್ಲೂ ಈತನನ್ನು ಹೊಗಳಿದ್ದಾರೆ. ಈತ ನರ್ಮದಾತೀರದ ಮಾಹೀಷ್ಮತೀ ನಗರದ ಕಾಲಚೂರ್ಯ ರಾಜನೊಬ್ಬನ ಆಶ್ರಯದಲ್ಲಿದ್ದು ತನ್ನ ನಾಟಕವನ್ನು ರಚಿಸಿದ. ಇವನದು ಮೌದ್ಗಲ್ಯ ಗೋತ್ರ; ತಂದೆ ತಾಯಿಗಳು ಭಟ್ಟವರ್ಧಮಾನ ಮತ್ತು ತಂತುಮತೀ; ತನ್ನನ್ನು ಬಾಲವಾಲ್ಮೀಕಿ ಎಂದು ಕರೆದುಕೊಂಡಿದ್ದಾನೆ. ಎ.ಬಿ.ಕೀತ್ ಮೊದಲಾದ ಪಂಡಿತರ ಅಭಿಪ್ರಾಯದಂತೆ ಈತ ದ್ವಿತೀಯ ದರ್ಜೆಯ ಕವಿ. ಈತನ ಶೈಲಿ ಮತ್ತು ಭಾವನಾತರಂಗಗಳನ್ನು ಸಿದ್ಧಾಂತಕೌಮುದಿಯಲ್ಲಿ ಹೊಗಳಿದೆ. ನಾಟಕದ ಕಥಾವಸ್ತು ರಾಮಾಯಣ. ಶ್ರೀರಾಮನಂಥ ಉದಾತ್ತ ನಾಯಕನಿಗೆ ಸಲ್ಲಬೇಕಾದ ಭಕ್ತಿ ಗೌರವಗಳನ್ನು ಆವರೆಗೆ ಯಾರೂ ಸಲ್ಲಿಸದಿದ್ದ ಕಾರಣ ತಾನು ಈ ಅನರ್ಘರಾಘವ ಬರೆಯಬೇಕಾಯಿತೆಂದು ಹೀಗೆ ಹೇಳಿದ್ದಾನೆ : ಯದಿ ಕ್ಷುಣ್ಣಂ ಪೂರ್ವೈರಿತಿ ಜಹತಿ ರಾಮಸ್ಯ ಚರಿತಂ
ಗುಣೈರೇತಾವದ್ಭಿರ್ಜಗತಿ ಪುನರನ್ಯೋ ಜಯತಿ ಕಃ ಸ್ವಮಾತ್ಮಾನಂ ತತ್ತದ್ಗುಣಗರಿಮಗಂಭೀರ ಮಧುರ ಸ್ಫುರದ್ವಾಗ್ಬ್ರಹ್ಮಾಣಃ ಕಥಮುಪಕರಿಷ್ಯಂತಿ ಕವಯಃ
ಭವಭೂತಿಯಲ್ಲದೆ ಮತ್ತಾವ ಪೂರ್ವಕವಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಮಾತುಗಳನ್ನು ಹೇಳಿದ್ದಾನೋ ತಿಳಿಯದು. ನಾಟಕದ ಏಳು ಅಂಕಗಳ ಮುಖ್ಯ ವಿಷಯಗಳಿವು: 1. ವಿಶ್ವಾಮಿತ್ರ ರಾಮಲಕ್ಷ್ಮಣರನ್ನು ಕರೆತರುತ್ತಾನೆ; 2. ತಾಟಕಾಸಂಹಾರ; 3. ಹರಧನುರ್ಭಂಗ; ರಾವಣನಿಗಾಗಿ ಸೀತೆಯನ್ನು ಕೇಳಲು ಬಂದ ಶೌಷ್ಕಲ ಇದನ್ನು ಅವನಿಗೆ ತಿಳಿಸಲು ಹೋಗುವನು; 4. ಪರಶುರಾಮಪರಾಜಯ; ರಾಮಾದಿಗಳ ಅರಣ್ಯಗಮನ; 5. ಸೀತಾಪಹರಣ; ವಾಲಿವಧ; 6. ವಿದ್ಯಾಧರರಿಂದ ರಾವಣವಧ ವರ್ಣನೆ; 7. ವಿಮಾನದಲ್ಲಿ ರಾಮಾದಿಗಳ ಪುನರಾಗಮನ.
ಕಥಾಸಂಕ್ಷೇಪದಲ್ಲಿ ನೈಪುಣ್ಯವಿದೆ. ನಾಟಕದಲ್ಲಿ ಒಟ್ಟು 567 ಪದ್ಯಗಳಿವೆ.
ಮುರಾರಿಯ ದಾರಿ ಮೂರನೆಯ ದಾರಿ-ಮುರಾರೆಸ್ತøತೀಯಃಪಂಥಾಃ-ಎಂದು ಹೇಳುವುದುಂಟು. ಇದು ಅವನು ಹೇಳಿಕೊಳ್ಳುವ ಮಾತುಕಥೆಗಳ ಗಂಭೀರತೆಯನ್ನು ನಿರ್ದೇಶಿಸುತ್ತದೆ. ಅವನದು ಜಯದೇವ ಮುಂತಾದವರಿಗಿಂತ ಘನಿಷ್ಠವಾದ ಪಾಂಡಿತ್ಯ. ಅವನ ಪಾತ್ರಗಳು ಪಾಂಡಿತ್ಯಪೂರ್ಣವಾಗಿ ಮಾತನಾಡುತ್ತವೆ. ವರ್ಣನೆಗಳು ಹೆಚ್ಚು. ಅಪೂರ್ವಪದಗಳೂ ಕ್ಲಿಷ್ಟವ್ಯಾಕರಣಪ್ರಯೋಗಗಳೂ ಉಂಟು. ಶೈಲಿ ಜಟಿಲ. ವಾಲಿ ಎನ್ನುವ ಕಡೆ ವಿಕರ್ತನತನಯ, ಶಿವಧನುಸ್ಸು ಎಂಬ ಕಡೆ ಕಾತ್ಯಾಯನಿಕಾಮುಕಕಾರ್ಮುಕ ಎಂದರೇ ಕವಿಗೆ ಸಂತೋಷ. ಈ ಕಾರಣದಿಂದಾಗಿ ಅವನು ಪಂಡಿತಪ್ರಿಯನಾಗಿದ್ದಾನೆ. ಮುರಾರಿಯ ಮುಂದೆ ಭವಭೂತಿ ಏಕೆ ಎನ್ನುವ ಒಂದು ಪ್ರಶಂಸೆಯ ಶ್ಲೋಕ ಕೂಡ ಇದೆ.
ಮುರಾರಿ ಪದ ಚಿಂತಾಯಾಂ ಭವಭೂತೇಸ್ತು ಕಾ ಕಥಾ |
ಭವಭೂತಿಂ ಪರಿತ್ಯಜ್ಯ ಮುರಾರಿ ಮುರರೀಕುರು || ಒಟ್ಟಿನಲ್ಲಿ ಮುರಾರಿ ತನ್ನದೇ ದಾರಿಯಲ್ಲಿ ನಡೆದು ಸಾಮಾನ್ಯ ದರ್ಜೆಯ ಕವಿಗಳ ಸಾಲನ್ನು ಬಿಟ್ಟು ತನ್ನದೇ ಆದ ಸ್ಥಾನವೊಂದನ್ನು ಕಾವ್ಯ ಪ್ರಪಂಚದಲ್ಲಿ ಗಳಿಸಿದ್ದಾನೆ. (ಜಿ.ಎಂ.)