ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅನುಭವ 1

ವಿಕಿಸೋರ್ಸ್ ಇಂದ
Jump to navigation Jump to search

ಅನುಭವ 1

ಕೆಲವು ವಿಷಯಗಳು ಪ್ರತ್ಯಕ್ಷವಾಗಿ ಅಂದರೆ ಅಪರೋಕ್ಷವಾಗಿ ತಿಳಿಯುತ್ತವೆ. ಇನ್ನು ಕೆಲವು ಪರೋಕ್ಷವಾಗಿ ತಿಳಿಯುತ್ತವೆ. ಪ್ರತ್ಯಕ್ಷವಾಗಿ ತಿಳಿದ ವಿಷಯಗಳು ಸಾಕ್ಷಾತ್ತಾಗಿ ಮುಂದೆ ಇರುತ್ತವೆಯಾದ್ದರಿಂದ ಆ ತಿಳಿವಿಗಾಗಿ ಅದರಿಂದ ಹೊರಗಿನ ಯಾವುದನ್ನೂ ಆಶ್ರಯಿಸಬೇಕಾಗಿಲ್ಲ. ಪರೋಕ್ಷವಾಗಿ ತಿಳಿದ ವಿಷಯಗಳಾದರೋ ಸಾಕ್ಷಾತ್ತಾಗಿ ಮುಂದೆ ಇರುವುದಿಲ್ಲವಾದ್ದರಿಂದ ಅವುಗಳನ್ನು ತಿಳಿಯಲು ಬೇರೆಯದರ ಆಶ್ರಯವನ್ನು ಪಡೆಯಬೇಕಾಗುತ್ತದೆ. ಇತರರು ಹೇಳಿದ್ದನ್ನು ಕೇಳಿ ತಿಳಿಯುವುದು ಅಥವಾ ಸ್ಮøತಿ ಅಥವಾ ನೆನಪಿನಿಂದ ತಿಳಿಯುವುದು ಪರೋಕ್ಷ ಜ್ಞಾನಕ್ಕೆ ಉದಾಹರಣೆಗಳು. ಅಂತಿಮದಲ್ಲಿ ಇತರರ ಹೇಳಿಕೆಗೂ ತನ್ನ ನೆನಪಿಗೂ ಪ್ರತ್ಯಕ್ಷಾನುಭವವೇ ಆಧಾರವಾದ್ದರಿಂದ ಪ್ರತ್ಯಕ್ಷಾನುಭವ ಎಲ್ಲಕ್ಕೂ ಮೂಲಾಧಾರ.

ಅನುಭವವಾದಿಗಳೆಂದು ಕರೆದುಕೊಳ್ಳುವ ಒಂದು ಗುಂಪಿನ ತಾತ್ತ್ವಿಕರು ಅನುಭವಕ್ಕೆ (ಎಕ್ಸ್‍ಪೀರಿಯನ್ಸ್ ; ಕಾನ್ಷಸ್‍ನೆಸ್ ; ಅವೇರ್‍ನೆಸ್) ಸಂಕುಚಿತ ಅರ್ಥ ಕೊಡುತ್ತಾರೆ. ಅನುಭವ ಎಂದರೆ ಕೇವಲ ಇಂದ್ರಿಯಪ್ರತ್ಯಕ್ಷವೆಂದು ಇವರು ಭಾವಿಸಿರುತ್ತಾರೆ. ಇನ್ನೊಂದು ಗುಂಪಿನವರು ಅನುಭವಕ್ಕೆ ಇನ್ನೂ ವಿಶಾಲವಾದ ಅರ್ಥ ಕೊಡುತ್ತಾರೆ. ಪ್ರತ್ಯಕ್ಷಾನುಭವ ಇಂದ್ರಿಯಾನುಭವ ಮಾತ್ರವೇ ಅಲ್ಲ. ಏಕೆಂದರೆ ಇಂದ್ರಿಯ ವಿಷಯಗಳಲ್ಲದೆ ಬುದ್ಧ್ಯಾರೂಢವಿಷಯಗಳ ಪ್ರತ್ಯಕ್ಷಾನುಭವವಿದೆ. ಇವರು ಈ ಪ್ರತ್ಯಕ್ಷಾನುಭವಕ್ಕೆ ಕೊಟ್ಟಿರುವ ಹೆಸರು ಮಾನಸಿಕ ಪ್ರತ್ಯಕ್ಷ. ಆತ್ಮ ಮತ್ತು ಆತ್ಮಚೇತನಾಂತರ್ಗತ ಭಾವನೆಗಳು (ಇನ್ನೇಟ್ ಐಡಿಯಾಸ್) ಮಾನಸಿಕ ಪ್ರತ್ಯಕ್ಷಾನುಭವಕ್ಕೆ ಉದಾಹರಣೆಗಳು. ಈ ಬಗೆಯ ತಾತ್ತ್ವಿಕರು ಭಾವನಾವಾದಿಗಳು.

ಬೇರೆ ಕೆಲವರು ಅನುಭವಕ್ಕೆ ಇನ್ನೂ ವಿಶಾಲಾರ್ಥ ಕೊಟ್ಟಿರುತ್ತಾರೆ. ನಮ್ಮ ಅನುಭವ ಕೇವಲ ಇಂದ್ರಿಯಾರೂಢಜ್ಞಾನಕ್ಕಾಗಲಿ. ಬುದ್ಧ್ಯಾರೂಢಜ್ಞಾನಕ್ಕಾಗಲಿ ಸೀಮಿತವಾಗಿಲ್ಲ. ನಮಗೆ ರಮ್ಯ, ಜುಗುಪ್ಸಿತ, ಉದಾರ, ನೀಚ, ಉಗ್ರ, ಪ್ರಸಾದಿ, ಗಹನ, ವಿಕೃತ ಮುಂತಾದ ಭಾವಗಳ ಸಾಕ್ಷಾತ್ ಅನುಭವವಿದೆ. ವೇದನೆ (ಸೆನ್‍ಸೇಷನ್) ಭಾವನೆ (ಐಡಿಯ) ಮತ್ತು ಭಾವ (ಫೀಲಿಂಗ್) ಈ ಎಲ್ಲವೂ ಪ್ರತ್ಯಕ್ಷಾನುಭವ ವಿಷಯಗಳು. ಎ. ಎನ್. ವೈಟ್ಹೆಡ್ ಹೇಳುವಂತೆ ಅನುಭವ ಜಾಗ್ರತ್, ಸುಷುಪ್ತಿ, ಸ್ವಪ್ನ ರೂಪವಾಗಿರಬಹುದು. ಅದು ವಿವೇಕವಾಗಿರಬಹುದು. ಅವಿವೇಕವಾಗಿರಬಹುದು. ಅಪಸ್ಮಾರವಾಗಿರಬಹುದು. ಹೀಗೆ ತುಂಬ ವಿಶಾಲವ್ಯಾಪ್ತಿಯುಳ್ಳ ಅನುಭವವನ್ನು ತತ್ತ್ವಶಾಸ್ತ್ರ ಆಧಾರವಾಗಿ ಮಾಡಿಕೊಳ್ಳಬೇಕು ಎಂದು ಈ ತಾತ್ತ್ವಿಕನ ನಿಲವು. ಈ ವಿಶಾಲಾನುಭವಾರೂಢತತ್ತ್ವದಿಂದ ನಮ್ಮ ತಾತ್ತ್ವಿಕದೃಷ್ಟಿ ಹೆಚ್ಚು ವಿಶಾಲವಾಗುತ್ತದೆ ಎಂದು ಇವನ ಭಾವನೆ. ಇದು ಗಮನಾರ್ಹವಾದ ಅಂಶ. (ಜಿ.ಎಚ್.)