ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಫೀಮು

ವಿಕಿಸೋರ್ಸ್ದಿಂದ

ಅಫೀಮು

ಗಸಗಸೆ ಗಿಡದ ಅಪಕ್ವ ಹಣ್ಣಿಗೆ ಕಚ್ಚುಮಾಡಿದಾಗ ಸ್ರವಿಸುವ ಹಾಲನ್ನು ಶೇಖರಿಸಿ ಒಣಗಿಸಿ ಪಡೆಯಲಾಗುವ ವಸ್ತು. ಗಸಗಸೆ ಪೆಪಾವರೇಸೀ ಕುಟುಂಬದ ಪೆಪಾವರ್ ಸೋಮ್ನಿಫರಮ್ ಜಾತಿಯ ಒಂದು ಪ್ರಭೇದ. ಈ ಗಿಡದ ತವರು ಏಷ್ಯ ಮೈನರ್. ಈಗ ಗಸಗಸೆಗಿಡವನ್ನು ಭಾರತ, ಚೀನ, ಪರ್ಷಿಯ, ತುರ್ಕಿ ದೇಶಗಳಲ್ಲಿ ವಿಶೇಷವಾಗಿ ಬೆಳೆಯುತ್ತಾರೆ. ಇದು ಏಕವಾರ್ಷಿಕ ಗಿಡ. ಇದರಲ್ಲಿ ಮೂರು ಮುಖ್ಯ ಜಾತಿಗಳಿವೆ. ಸೆಟಿಜರ್ಮ್, ಗ್ಲೇಬ್ರಮ್ ಮತ್ತು ಆಲ್ಬಮ್.

ಸೆಟಿಜರ್ಮ್ ವನ್ಯ ಸಸ್ಯ. ಭೂಮಧ್ಯಸಮುದ್ರದ ಉತ್ತರ ತೀರದಲ್ಲೂ ಬೆಳೆಸಲಾಗುತ್ತದೆ. ಎಲೆಗಳಿಗೆ ಗರಗಸದಂಥ ಹಲ್ಲಿನ ಏಣಿರುತ್ತದೆ. ಅದರ ಅಲಗು ಮೊನಚಾಗಿದ್ದು ತುದಿ ಸಣ್ಣ ಮುಳ್ಳುಗಳಿಂದ ಆವೃತವಾಗಿದೆ. ಎಲೆ ಸಂಪೂರ್ಣವಾಗಿ ಕೂದಲಿನಂಥ ಸಣ್ಣ ಮುಳ್ಳುಗಳ ಹೊದಿಕೆ ಹೊಂದಿದೆ. ಹೂಕಾಂಡ, ಪುಷ್ಪ ಪತ್ರ, ಹೂದಳಗಳಲ್ಲೂ ಅಂಥ ಕೂದಲಿರುತ್ತವೆ. ಅವುಗಳಿಗೆ 7 ಅಥವಾ 8 ಪುಷ್ಪ ಪತ್ರಗಳಿರುತ್ತವೆ. ದಳಗಳು ಅಗಲವಾಗಿ ಆಕರ್ಷಕವಾಗಿದ್ದು ಕಾಯಿ ಬಲಿತಂತೆ ಉದುರಿಹೋಗುತ್ತವೆ.

ಗ್ಲೇಬ್ರಮ್ ಏಷ್ಯ ಮೈನರ್ ಮತ್ತು ಈಜಿಪ್ಟ್ ದೇಶದ ಬೆಳೆ. ಇದರ ಹಣ್ಣುಗಳು ಗೋಳಾಕಾರವಾಗಿರುತ್ತವೆ. ಪುಷ್ಪಪತ್ರಗಳ ಸಂಖ್ಯೆ 10-12. ಹಣ್ಣು ಮತ್ತು ಎಲೆಗಳು ರೋಮರಹಿತವಾಗಿ ನುಣುಪಾಗಿರುವುದರಿಂದ ಈ ಹೆಸರು ಪಡೆದಿದೆ. ಆಲ್ಬಮ್ ಪರ್ಶಿಯದ ಬೆಳೆ. ಹಣ್ಣು ಅಂಡಾಕಾರವಾಗಿದೆ. ಕಾಯಿ ಪಕ್ವವಾದಾಗ ಅದರ ತಳಭಾಗದ ರಂಧ್ರಗಳು ತೆರೆಯುವುದಿಲ್ಲ. ಇದು ಸಾಮಾನ್ಯವಾಗಿ ಬಿಳಿಯ ಹೂವಿನ ಬೀಜದ ಜಾತಿ. ಕೆಲವು ವೇಳೆ ಕೆಂಪು ಅಥವಾ ನೀಲಿ ಬಣ್ಣದ ಹೂಗಳಿದ್ದು ಪಾಚಿ ಬಣ್ಣದ ಬೀಜವಿರುತ್ತವೆ.

ಗಸಗಸೆಗಿಡದ ಬೆಳಸಿಗೆ ಹೆಚ್ಚಿನ ನೀರಿನ ಆವಶ್ಯಕತೆಯಿಲ್ಲ. ಉಷ್ಣಾಂಶ ಹೆಚ್ಚಿರಬೇಕು. ಇದನ್ನು ಸಮಶೀತೋಷ್ಣ ವಾಯುಗುಣವಿದ್ದೆಡೆಯಲ್ಲೂ ಬೆಳೆಯಬಹುದು. ಆದರೆ ಉತ್ಪನ್ನ ಕಡಿಮೆ; ಲಾಭದಾಯಕವೂ ಅಲ್ಲ. ವಿವಿಧ ದೇಶಗಳಲ್ಲಿ ಅಲ್ಲಿನ ಸನ್ನಿವೇಶಗಳಿಗನುಗುಣವಾಗಿ ಇದರ ವ್ಯವಸಾಯಕ್ರಮವೂ ಬೇರೆ ಬೇರೆಯಾಗಿರುತ್ತದೆ.

ಔಷಧಿಯ ಅಫೀಮು ತುರ್ಕಿ ದೇಶದಲ್ಲಿ ಮಾತ್ರ ಉತ್ಪನ್ನವಾಗುವುದು. ರೈತರೇ ಅದನ್ನು ಬೆಳೆಸುತ್ತಾರೆ. ಒಳ್ಳೆಯ ಫಲವತ್ತಾದ ನೀರು ಹೀರಬಲ್ಲ ಆದರೆ ಸುಲಭವಾಗಿ ಬಸಿಯುವಂಥ ಭೂಮಿಗಳಲ್ಲಿ ಬೆಳಸು ಹಸನಾಗಿ ಬರುತ್ತದೆ. ಜೊತೆಗೆ ಸಾಕಷ್ಟು ನೀರು, ಗೊಬ್ಬರ ಒದಗಿಸುತ್ತಾರೆ. ಭೂಮಿಯನ್ನು ಚೆನ್ನಾಗಿ ಹದಗೊಳಿಸಿ ಬಿತ್ತಬೇಕು. ಬೀಜ ಅತಿ ಸೂಕ್ಷ್ಮವಾದ್ದರಿಂದ 1 ಭಾಗಕ್ಕೆ 4 ಭಾಗದಷ್ಟು ಮರಳು ಮಿಶ್ರಮಾಡಿ ಬಿತ್ತುವುದು ವಾಡಿಕೆ. ಇದರಿಂದ ಬೀಜ ದಟ್ಟವಾಗದೆ ಸರಿಸಮವಾಗಿ ಹಂಚಿಕೆಯಾಗುತ್ತದೆ. ತಲೂಮಿಗೆ ಅಂದರೆ 16,000 ಚ. ಗ. ಪ್ರದೇಶಕ್ಕೆ 1/4 ಪೌಂಡಿ ನಿಂದ 1 ಪೌಂಡು ಬೀಜ ಸಾಕು. ಬೆಳೆ ಎಳಸಾಗಿದ್ದಾಗ ಹಿಮ, ಮಿಡತೆ ಮತ್ತು ಮಳೆಯ ಅಭಾವಾದಿಗಳಿಂದಾಗಿ ನಷ್ಟವಾಗಬಹುದಾದ್ದರಿಂದ ಪ್ರತಿ ಪಾತಿಯಲ್ಲೂ ಅಕ್ಟೋಬರ್ ನಿಂದ ಮಾರ್ಚ್ ತಿಂಗಳವರೆಗೆ ಮೂರು ಸಲ ಬಿತ್ತನೆ ಮಾಡುತ್ತಾರೆ. ಇದರಿಂದ ವಿವಿಧ ಹಂತದ ಬೆಳಸು ಬೆಳೆದು ಏರ್ಪಡಬಹುದಾದ ನಷ್ಟ ಬಹುಮಟ್ಟಿಗೆ ಕಡಿಮೆಯಾಗುತ್ತದೆ. ತಗ್ಗು ಪ್ರದೇಶದಲ್ಲಿ ಮೇ ತಿಂಗಳಲ್ಲೂ ಎತ್ತರ ಪ್ರದೇಶದಲ್ಲಿ ಜುಲೈ ತಿಂಗಳ ವೇಳೆಗೂ ಹೂಬಿಡಲು ಪ್ರಾರಂಭವಾಗುತ್ತದೆ. ಹೂ ಅರಳಿದ 9-15 ದಿನಗಳಲ್ಲೇ ಕಾಯಿ ಬಲಿಯಲಾರಂಭಿಸಿ, ತಿಳಿಹಸಿರು ಬಣ್ಣದವಾಗಿ, ಕೈಯಿಂದ ಹಿಸುಕಲು ಸಾಧ್ಯವಾಗುವಷ್ಟು ಮೃದುವಾಗಿರುತ್ತವೆ. ಅದೇ ಅಫೀಮು ತೆಗೆಯಲು ಸರಿಯಾದ ಸಮಯ. ಅದನ್ನು ಎತ್ತಿ ತೋರುವಂತೆ ಕೌಗತ ಎಂಬ ಹೊದಿಕೆ ಕಾಯ ಮೇಲ್ಭಾಗದಲ್ಲಿ ಸುಮಾರು 1 1/2" ಕಾಣಿಸಿಕೊಳ್ಳುತ್ತದೆ.

ಆಗ ಎಚ್ಚರಿಕೆಯಿಂದ ಕಾಯಿ ಸುತ್ತಲೂ ಸುಮಾರು 2/3ರಷ್ಟು ಭಾಗದಲ್ಲಿ ಚುಚ್ಚಿ ತೂತು ಮಾಡುತ್ತಾರೆ. ಇವು ಆಳವಾಗಿರುವುದಿಲ್ಲ. ಚುಚ್ಚುವ ಈ ಕೆಲಸ ಮಧ್ಯಾಹ್ನಾನಂತರ ಪ್ರಾರಂಭವಾಗಿ ಸಂಜೆಯೊಳಗೆ ಮುಗಿಯಬೇಕು. ಎಲೆಗಳನ್ನೇ ಬಟ್ಟಲುಗಳನ್ನಾಗಿ ಬಳಸಿ ಮರುದಿನ ಮುಂಜಾನೆಯವರೆಗೆ ಸ್ರವಿಸುವ ಗಟ್ಟಿಯಾದ ರಸವನ್ನು ಶೇಖರಿಸುತ್ತಾರೆ. ಕೆರೆಯುವಾಗ ಚಾಕುವಿಗೆ ರಸವೆಲ್ಲ ಅಂಟಿಕೊಳ್ಳದಂತೆ ಆಗಿಂದಾಗ್ಗೆ ಅಲಗಿಗೆ ಎಂಜಲು ಸವರುವುದು ವಾಡಿಕೆ. ಎಲೆಮಡಿಕೆಯಲ್ಲಿ ಸಾಕಷ್ಟು ರಸ ಶೇಖರವಾದೊಡನೆ ಅದನ್ನು ಬಹುದಿನಗಳ ಕಾಲ ನೆರಳಲ್ಲಿಟ್ಟು ಒಣಗಿಸುತ್ತಾರೆ. ಕಚ್ಚು ಆಫೀಮು ಮುದ್ದೆ, ಇಟ್ಟಿಗೆ, ರೊಟ್ಟಿ, ಬೆರಣಿಗಳ ಆಕಾರದಲ್ಲಿರಬಹುದು. ತೀರ ಒಣಗಿದಾಗ ಪುಡಿಯಾಗುತ್ತದೆ. ಕೆಲವು ಬಗೆಯವು ತೀರ ಕಪ್ಪಾಗಿರುವುದರಿಂದ ಅವನ್ನು ಕರೆಮದ್ದು ಎಂದೇ ಕರೆಯುತ್ತಾರೆ. ಅಫೀಮು ಓಕರಿಕೆ ಹುಟ್ಟಿಸುವಷ್ಟು ಕಹಿ. ವಾಸನೆ ಕಟು.

ಕಾಯಿಗಳನ್ನೆಲ್ಲ ಒಂದೇ ಸಾರಿ ಕಚ್ಚು ಮಾಡಿ ರಸ ತೆಗೆಯಬಹುದಾದರೂ ವಿವಿಧ ಹಂತದಲ್ಲಿ ಕಾಯಿ ಹದಕ್ಕೆ ಬರುವುದರಿಂದ ಎರಡು ಮೂರು ಸಲ ಈ ಕಾರ್ಯ ಕೈಗೊಳ್ಳಬೇಕಾಗುತ್ತದೆ. ಪ್ರತಿ ಸಲ ಆಫೀಮಿನ ಸರಾಸರಿ ಉತ್ಪನ್ನ 1.62 ಪೌಂಡು, ಬೀಜದ ಉತ್ಪನ್ನ 4 ಬುಷಲ್. ಬೀಜದಿಂದ 35%-42% ಎಣ್ಣೆ ಸಿಗುತ್ತದೆ. ಈ ಎಣ್ಣೆಯ ಬೆಲೆ ಅಧಿಕ. ಅಂದರೆ ಅಫೀಮಿನ 2/3ರಷ್ಟಿರುತ್ತದೆ.

ಮ್ಯಾಸಿಡೋನಿಯ ಅಫೀಮು: ಇದರಲ್ಲಿ ನಾಲ್ಕು ವಿಧಗಳಿವೆ. ಎರಡಕ್ಕೆ ಬಿಳಿ ಹೂ ಮತ್ತು ಅಂಡಾಕಾರದ ಕೋಶಗಳಿವೆ. ಬೀಜ ಬಿಳುಪು ಅಥವಾ ಹಳದಿ. ಇನ್ನೆರಡು ವಿಧಗಳು ಕೆಂಪು ಅಥವಾ ನೀಲಿ ವರ್ಣದ ಹೂ ಮತ್ತು ಕಂದು ವರ್ಣದ ಬೀಜಗಳನ್ನು ಹೊಂದಿವೆ. ಇದರಲ್ಲಿ ಒಂದಕ್ಕೆ ಕೋಶ ಬಲು ಸಣ್ಣ. ಬಿಳಿ ಜಾತಿಯವು ಹಳದಿ ವರ್ಣದವಕ್ಕಿಂತ ಹೆಚ್ಚು ಅಫೀಮು ಉತ್ಪನ್ನ ಮಾಡುತ್ತವೆ. ಹಳದಿ ಬೀಜಗಳಲ್ಲಿ ಎಣ್ಣೆ ಹೆಚ್ಚು.

ಭಾರತದ ಅಫೀಮು: ಇದು ಬಿಳಿ ಹೂವಿನ ಜಾತಿಯದು. ಹಿಮಾಲಯ ಪ್ರದೇಶದಲ್ಲಿ ಮಾತ್ರ ಕೆಂಪು ಹೂ ಮತ್ತು ಕರೀ ಬೀಜದ ತಳಿಯನ್ನು ಬೆಳೆಸಲಾಗಿದೆ. ಎರಡನೆಯ ಬೆಳೆಯಾಗಿಯೆ ಇದನ್ನು ಬೆಳೆಸುತ್ತಾರೆ. ಹೆಚ್ಚಿನ ಗಮನವಿಯಬೇಕಾದ್ದರಿಂದ ಹಳ್ಳಿಯ ಪಕ್ಕದಲ್ಲಿನ ಸಾವಯವ ಪದಾರ್ಥ ಹೆಚ್ಚಾಗಿರುವ ಫಲವತ್ತಾದ ಭೂಮಿಗಳನ್ನೇ ಆರಿಸಲಾಗುತ್ತದೆ. ನವೆಂಬರ್ ತಿಂಗಳ ಮೊದಲರ್ಧ ಭಾಗದಲ್ಲೇ ಬಿತ್ತನೆ ನಡೆಯುತ್ತದೆ. ನೀರು ಒದಗಿಸಬೇಕಾದ್ದರಿಂದ ಸಾಮಾನ್ಯವಾಗಿ 3 ಚ.ಮೀ. ಮಡಿಗಳನ್ನು ಮಾಡಿ ಬಿತ್ತನೆ ಮಾಡುವರು. ಸಸಿ 5-8 ಸೆಂ.ಮೀ. ಬೆಳೆದಾಗ ಮಧ್ಯ ಬೇಸಾಯ ಮಾಡಿ ಹೆಚ್ಚಿನ ಗೊಬ್ಬರ ಒದಗಿಸಿ ಸಸಿಗಳು ಒತ್ತಾಗಿದ್ದಲ್ಲಿ ತೆಗೆದುಹಾಕುವರು. ಸಸಿ ಬೆಳೆದಂತೆ ಹಿಮದಿಂದ ಬೂಷ್ಟು ರೋಗ ಮತ್ತು ಬೇರಿಗೆ ತಗಲುವ ಓರೋಬಾಂಕೆ ಇಂಡಿಕ ಎಂಬ ಪರೋಪಜೀವಿಯಿಂದ ತೊಂದರೆ ಹೆಚ್ಚಾಗುತ್ತದೆಯಾಗಿ ಅವುಗಳ ನಿರೋಧಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಫೆಬ್ರವರಿ ತಿಂಗಳಲ್ಲಿ ಹೂ ಕಾಣುತ್ತದೆ. ಉದುರಿದ ದಳಗಳನ್ನು ಶೇಖರಿಸಿಟ್ಟು ಹಾಸಿ ಅದರಮೇಲೆ ಅಫೀಮು ಕಾಯಿಗಳನ್ನು ಹರಡಿ ಒಣಗಿಸುತ್ತಾರೆ. ಈ ಅಫೀಮನ್ನು ಉಂಡೆಯಾಗಿ ಶೇಖರಿಸಿಡುವುದರಿಂದ ಅದನ್ನು ಫಿರಂಗಿ ಗುಂಡಿನ ಅಫೀಮು ಎಂದು ಕರೆಯುತ್ತಾರೆ.

ಯೂರೋಪಿನ ಅಫೀಮು: ಮಾರ್ಫೀನ್ ಹೆಚ್ಚಾಗಿರುವುದರಿಂದ 2-15 ಭಾಗ ಅಮಲು ಹೆಚ್ಚು. ಸಸಿಗಳನ್ನು ಹೆಚ್ಚಿನ ಆರೈಕೆಯಿಂದ ಸೊಂಪಾಗಿ ಬೆಳೆಸಿ ಸಸಿಯ ತುದಿಯಲ್ಲಿ ಮುಂಜಾನೆಯ ವೇಳೆ ಕಚ್ಚುಮಾಡಿ ರಸವನ್ನು ಬೆರಳಿನಿಂದಲೇ ತೆಗೆದು ಶೇಖರಿಸಿ ಹೊಗೆಯಾಡಿಸಿ ಕೂಡಿಡುವರು.

ರಾಸಾಯನಿಕವಾಗಿ ಅಫೀಮು ಒಂದು ಅಂಟುರಾಳ (ಗಂ ರೆಸಿನ್). ಅದರಲ್ಲಿ ಮಾರ್ಫೀನ್ ಮತ್ತು ಕೋಡೀನ್ ಅಂಶಗಳಿವೆ. ಅತಿಸೂಕ್ಷ್ಮ ಪ್ರಮಾಣದಲ್ಲಿ ಅವನ್ನು ಔಷಧವಾಗಿ ಬಳಸುತ್ತಾರೆ. ಅದರಲ್ಲಿರುವ ಇತರ ಸಸ್ಯಕ್ಷಾರಗಳಲ್ಲಿ ಥೆಬಾಯಿನ್ ಮತ್ತು ನಾರ್ಶಿಯನ್ ಮುಖ್ಯವಾದುವು. ಅವುಗಳ ಉಪಯೋಗ ಅಪಾಯಕರ. ಆಫೀಮಿನಲ್ಲಿರುವ ಥೆಬಾಯಿನ್ ಬೆನ್ನುಹುರಿಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಚಿಕ್ಕಮಕ್ಕಳಿಗೆ ಕೊಟ್ಟಲ್ಲಿ ಬೆನ್ನುಹುರಿ ಸಂಕುಚಿತವಾಗಿ ಬಹಳ ಕೆಡಕಾಗುತ್ತದೆ.

ಮಧ್ಯಪ್ರಾಚ್ಯದಿಂದ ಏಷ್ಯದ ಎಲ್ಲ ಮೂಲೆಗೂ ಅರಬ್ಬಿ ವರ್ತಕರೇ ಆಫೀಮಿನ ಸೇವನೆಯನ್ನು ಹರಡಿದರು. ಮುಂದೆ ಅದು ಗ್ರೀಸ್ ಮೊದಲಾದ ಕಡೆ ಹರಡಿತು.

ಭಾರತದಲ್ಲಿ ಅಫೀಮು ಬೆಳೆ ಮತ್ತು ಮಾರಾಟಗಳನ್ನು ನಿಯಂತ್ರಿಸುವುದಕ್ಕೆ ಕಟ್ಟು ನಿಟ್ಟಾದ ನಿಬಂಧನೆಗಳಿವೆ. ಅದನ್ನು ಬೆಳೆಯುವುದಕ್ಕೆ ಸರ್ಕಾರದ ಅನುಮತಿ ಬೇಕು; ಬೆಳೆಯೂ ಕೆಲವೇ ರಾಜ್ಯಗಳಿಗೆ ಸೀಮಿತವಾಗಿದೆ. ಬೆಳೆಯನ್ನು ಸರ್ಕಾರವೇ ನಿಗದಿಯಾದ ಬೆಲೆಗೆ ಕೊಳ್ಳುತ್ತದೆ. ಘಾಸಿಪುರ ನೀಮಜ್ ಗಳಲ್ಲಿರುವ ಕಾರ್ಖಾನೆಗಳು ಅದನ್ನು ಪರಿಷ್ಕರಿಸುತ್ತವೆ; ವೈದ್ಯಕೀಯ ಉಪಯೋಗಕ್ಕಾಗಿ ಮಾತ್ರ ಒಂದು ಭಾಗವನ್ನು ದೇಶದಲ್ಲಿಟ್ಟುಕೊಂಡು ಉಳಿದುದನ್ನು ರಫ್ತು ಮಾಡಲಾಗುತ್ತದೆ. 1857 ಮತ್ತು 1878ರ ಅಫೀಮು ಕಾನೂನುಗಳು, 1930ರ ಅಪಾಯಕರ ಔಷಧಪದಾರ್ಥದ ಕಾನೂನು, ಇಂಥ ಕಾನೂನುಗಳಿಂದ ನಿಯಂತ್ರಣ ಕಾರ್ಯ ನಡೆದಿದೆ. ರಫ್ತಾಗುವುದು ಹೆಚ್ಚಾಗಿ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಗ್ರೇಟ್ ಬ್ರಿಟನ್ ಗಳಿಗೆ. ರಫ್ತಾದ ಅಫೀಮಿನ ಬಹುಭಾಗ ಹಿಂದೆ ಚೀನಕ್ಕೆ ಹೋಗುತ್ತಿತ್ತು. 1928ರಿಂದೀಚೆಗೆ ಭಾರತ ಸರ್ಕಾರ ಔಷದಿ ತಯಾರಿಕೆಗೆ ಹೊರತು ಬೇರೆ ಉಪಯೋಗಗಳಿಗೆ ಅಫೀಮು ರಫ್ತು ಮಾಡುವುದನ್ನು ನಿಲ್ಲಿಸಿದೆ.

ಅಫೀಮಿನ ಸೇವನೆಯಿಂದ ಮನಸ್ಸಿಗೆ ನೆಮ್ಮದಿ ದೊರೆತಂತೆ ತೋರುವುದು. ಆದರಿಂದಲೇ ಅದನ್ನು ಜನ ಹೆಚ್ಚಾಗಿ ಸೇವಿಸುವುದು. ಆದರೆ ಆ ಪರಿಣಾಮ ಸ್ವಲ್ಪ ಕಾಲ ಮಾತ್ರವಿರುವುದರಿಂದ, ಅದೇ ರೀತಿಯ ತೃಪ್ತಿ ಹೊಂದಲು, ಪುನಃ ಪುನಃ ಸೇವಿಸಬೇಕಾಗುತ್ತದೆ. ಭಾರತದಲ್ಲಿ ದಿನಂಪ್ರತಿ ಒಬ್ಬ ಎರಡು ಔನ್ಸಿನಷ್ಟು ಅಫೀಮು ಸೇವಿಸುತ್ತಿದ್ದ ದಾಖಲೆಯಿದೆ; ಬರಬರುತ್ತ ಇದರ ಸೇವನೆ ಒಂದು ಚಟವಾಗಿ, ಶರೀರದ ಸಾಮಾನ್ಯ ಚಟುವಟಿಕೆಗಳು ಅಸ್ತವ್ಯಸ್ತಹೊಂದುತ್ತವೆ. ಬರೇ ಆರು ತಿಂಗಳ ಸೇವನೆಯಿಂದ ಅದು ಬಿಡಲಾರದ ಚಟವಾಗಿ ಜೀವನವಿಡೀ ಬೆಳೆಯುತ್ತ ಹೋಗಿ ಮುಂದೆ ಮಾರಕವಾಗಬಹುದು.

ಆದ್ದರಿಂದ ಅಫೀಮನ್ನು ಔಷಧಕ್ಕಾಗಿ ಮಾತ್ರ ಉಪಯೋಗಿಸಬೇಕೆಂದು ಅಫೀಮು ಬೆಳೆಯುವ ಮುಖ್ಯ ರಾಷ್ಟ್ರಗಳು ಔಷಧ ತಯಾರಿಕೆಯ ರಾಷ್ಟ್ರಗಳೊಡನೆ ಒಪ್ಪಂದ ಮಾಡಿಕೊಂಡಿವೆ. ವಿಶ್ವಸಂಸ್ಥೆಗೆ ಅಫೀಮಿನ ಉತ್ಪತ್ತಿ ಮತ್ತು ಬೇಡಿಕೆಯನ್ನು ಎಲ್ಲ ರಾಷ್ಟ್ರಗಳೂ ಸಲ್ಲಿಸಬೇಕು, ಅವರು ನಿರ್ದಿಷ್ಟ ಮಾಡಿದಷ್ಟು ಮಾತ್ರ ಬೆಳೆಸಬೇಕು ಎಂಬುದು ಈಗಿನ ಸಾರ್ವತ್ರಿಕ ಒಪ್ಪಂದವಾಗಿದೆ.

ಅಫೀಮಿನ ಉತ್ಪನ್ನ ಮತ್ತು ವ್ಯಾಪಾರ ನಿಯಂತ್ರಿತವಾದದ್ದು 1700ರ ಅನಂತರವೇ. ಅದನ್ನು ಔಷಧಕ್ಕಾಗಿ ಅಥವಾ ವೈಜ್ಞಾನಿಕ ಉದ್ದೇಶಗಳಿಗಾಗಿ ಮಾತ್ರ ಬೆಳೆಸಬೇಕೆಂದು ಅಜ್ಞೆಯಾಗಿತ್ತು. ಅದರೂ 20ನೆಯ ಶತಮಾನದವರೆಗೂ ಚೀನದಲ್ಲಿ ಅದು ಅತಿ ಹೆಚ್ಚಾಗಿ ಬೆಳೆಯುತ್ತಿತ್ತಲ್ಲದೆ ಅದರ ಅತಿಯಾದ ಸೇವನೆಯಿಂದ ದುಷ್ಟರಿಣಾಮಗಳು ಹೆಚ್ಚಿ 1906ರಲ್ಲಿ ಅಲ್ಲಿನ ಸರ್ಕಾರ ಅದನ್ನು ಖಂಡಿಸಲು ನಿರ್ಧರಿಸಿತು. 13 ಪ್ರಬಲರಾಷ್ಟ್ರಗಳ ಸಮಿತಿಯೊಂದು ಅದಕ್ಕೆ ನೆರವಾಗಿ ನಿಂತು ಅಫೀಮಿನ ವ್ಯಾಪಾರ ಹಾಗೂ ಇತರ ಕರಾರುಗಳ ಕಾರ್ಯನಿರ್ವಹಣೆಯನ್ನು ರಾಷ್ಟ್ರಗಳ ಒಕ್ಕೂಟಕ್ಕೆ (ಲೀಗ್ ಆಫ್ ನೇಷನ್ಸ್) ವಹಿಸಿಕೊಟ್ಟಿತು. ಅದರ ನಿಯಮಾವಳಿ 1931ರಲ್ಲಿ ಪ್ರಚುರವಾಗಿ ಅಫೀಮಿನ ಉತ್ಪನ್ನ ಮತ್ತು ಮಾರಾಟ ಮುಂತಾದುವುಗಳ ಮೇಲ್ವಿಚಾರಣೆಯನ್ನು ಈಗ ವಿಶ್ವಸಂಸ್ಥೆ ನಿರ್ವಹಿಸುತ್ತದೆ. ಇದರಂತೆ ಮೊದಲು ಔಷಧ ತಯಾರಿಸುವ ರಾಷ್ಟ್ರಗಳ ಕೋರಿಕೆಯನ್ನು ಪರಿಶೀಲಿಸಿ, ಬೆಳೆಯುವ ರಾಷ್ಟ್ರಗಳಿಗೆ ಪರಿಮಾಣವನ್ನು ನಿರ್ಧರಿಸಿ ತಿಳಿಸಲಾಗುತ್ತದೆ. ಇದರಿಂದ ಅನಗತ್ಯವಾಗಿ ಅದರ ಅಧಿಕ ಬೆಳಸು ಆಗುತ್ತಿಲ್ಲ. (ಎಂ.; ಡಿ.ಪಿ.) (ಪರಿಷ್ಕರಣೆ: ಕೆ ಬಿ ಸದಾನಂದ)