ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರುಣಾಚಲ

ವಿಕಿಸೋರ್ಸ್ದಿಂದ

ಅರುಣಾಚಲ : ಈಗಿನ ತಿರುವಣ್ಣಾಮಲೈ. ಅರುಣಗಿರಿ ಎಂಬ ಹೆಸರೂ ಇದೆ. ವಿಳ್ಳುಪುರಂ-ಕಾಟ್ಪಾಡಿ ರೈಲು ಮಾರ್ಗದಲ್ಲಿದೆ. ಇಲ್ಲಿನ ಅರುಣಾಚಲೇಶ್ವರ ದೇವಸ್ಥಾನ ಪಂಚ ಮಹಾಲಿಂಗಗಳಲ್ಲಿ ಒಂದಾದ ಜ್ಯೋತಿರ್ಲಿಂಗವಿರುವ ಸ್ಥಾನ. ವಿಷುವಿಗೂ ಬ್ರಹ್ಮನಿಗೂ ನಾ ಹೆಚ್ಚು ತಾ ಹೆಚ್ಚು ಎಂಬ ವಿವಾದ ಹುಟ್ಟಿದಾಗ ಅವರ ಅಹಂಕಾರ ಮುರಿಯಲು ಶಿವ ಅನಂತ ತೇಜೋಲಿಂಗವಾಗಿ ಬೆ¼ದು ತನ್ನ ನಖಶಿಖಗಳನ್ನು ಗುರುತಿಸುವಂತೆ ಅವರನ್ನು ಕೇಳಿದನಂತೆ.

ವಿಷ್ಣು ವರಾಹನಾಗಿ ಶಿವನ ಅಡಿಯನ್ನೂ ಬ್ರಹ್ಮ ಹಂಸನಾಗಿ ಶಿವನ ಮುಡಿಯನ್ನೂ ಹುಡುಕಿ ಕಾಣಲಾಗದೆ ಶಿವ ತಮ್ಮಿಬ್ಬರಿಗಿಂತ ದೊಡ್ಡವನೆಂಬ ಸತ್ಯವನ್ನು ಕಂಡರಂತೆ. ಇದು ನಡೆದದ್ದು ಮಾಘಕೃಷ್ಣ ಚತುರ್ದಶಿ. ಬ್ರಹ್ಮ ವಿಷ್ಣುಗಳಿಗೆ ಶಿವಾನುಗ್ರಹ ದೊರೆತದ್ದು ಕಾರ್ತಿಕ ಪೂರ್ಣಿಮೆಯ ದಿನ. ಆ ದಿನದ ಉತ್ಸವ ಅರುಣಾಚಲದಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ. ಈ ದೇವಾಲಯದ ಪಕ್ಕದಲ್ಲಿರುವ 914 ಮೀ ಎತ್ತರದ ಪರ್ವತ ಲಿಂಗಾಕಾರವಾಗಿದ್ದು, ಅದೇ ಶಿವಸ್ವರೂಪವೆಂದು ಪ್ರಸಿದ್ಧವಾಗಿದೆ. ದೇವಾಲಯ ವಿಶಾಲವಾಗಿದ್ದು, ಶಿಲ್ಪಕಲಾಸಂಪನ್ನ ವಾಗಿದೆ. ಪಾರ್ವತಿ ಇಲ್ಲಿಯೇ ಶಿವನ ವಾಮಾರ್ಧಕ್ಕಾಗಿ ತಪಸ್ಸು ಮಾಡಿದಳಂತೆ. ಸುಬ್ರಹ್ಮಣ್ಯ ಭಕ್ತನಾದ ಅರುಣಗಿರಿನಾಥನಿಗೆ ಇದು ಜನ್ಮಸ್ಥಳ. ರಮಣ ಮಹರ್ಷಿಗಳು ಇಲ್ಲಿ ವಾಸವಾಗಿದ್ದು ಕ್ಷೇತ್ರದ ಪ್ರಖ್ಯಾತಿಗೆ ಕಾರಣರಾದರು. (ಎಸ್.ಕೆ.ಆರ್.; ಜಿ.ಎಚ್.; ಎ.ಕೆ.)