ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಲಹಾಬಾದ್

ವಿಕಿಸೋರ್ಸ್ದಿಂದ
ಅಲಹಾಬಾದ್

ಭಾರತದ ಉತ್ತರ ಪ್ರದೇಶ ರಾಜ್ಯದ ಒಂದು ಜಿಲ್ಲೆ ಹಾಗೂ ಆಡಳಿತ ಕೇಂದ್ರ ನಗರ. ಗಂಗಾ ಮತ್ತು ಯಮುನಾ ನದಿಗಳ ಸಂಗಮಕ್ಷೇತ್ರ. ಇದನ್ನು ಪ್ರಯಾಗವೆಂದೂ ಕರೆಯುವರು. ವಿಸ್ತೀರ್ಣ 5482 ಚ.ಕಿಮೀ. ಜನಸಂಖ್ಯೆ 4936105 (2001). ತ್ರಿವೇಣೀ ಸಂಗಮವೆಂದು ಧಾರ್ಮಿಕ ಪ್ರಸಿದ್ಧಿ ಗಳಿಸಿದೆ. ಪವಿತ್ರವಾದ ಮೂರು ನದಿಗಳು ಅಂದರೆ ಗಂಗಾ, ಯಮುನಾ ಮತ್ತು ಗುಪ್ತಗಾಮಿನಿಯಾದ ಸರಸ್ವತೀ ನದಿಗಳು ಇಲ್ಲಿ ಸೇರುತ್ತವೆ ಎಂಬುದಾಗಿ ಪುರಾಣದಿಂದ ಗೊತ್ತಾಗುತ್ತದೆ. ಪ್ರತಿವರ್ಷವೂ ನಡೆಯುವ ಮಾಘಮೇಳಕ್ಕೂ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳಕ್ಕೂ ಭಾರತದ ನಾನಾ ಭಾಗಗಳಿಂದ ಜನರನ್ನು ಆಕರ್ಷಿಸುತ್ತಿರುವ ತೀರ್ಥಕ್ಷೇತ್ರ. ಅಕ್ಬರನ ಆಳ್ವಿಕೆಯಲ್ಲಿ ಉತ್ತರ ಭಾರತದ ಮೂರನೆಯ ಪ್ರಮುಖ ಸೈನ್ಯಕೇಂದ್ರವಾಗಿತ್ತು. ಅಕ್ಬರ್ ಆಳ್ವಿಕೆಯಲ್ಲಿ ನಿರ್ಮಿಸಿದ ಕೋಟೆಯಿದೆ. ರಸ್ತೆ, ಜಲ ಮತ್ತು ರೈಲುಮಾರ್ಗಗಳು ಅಲಹಾಬಾದನ್ನು ಕೇಂದ್ರಸ್ಥಳವಾಗಿ ಮಾರ್ಪಡಿಸಿವೆ. ಗಂಗಾ ಮೈದಾನದ ಮಧ್ಯದಲ್ಲಿ ನೆಲೆಸಿರುವುದರಿಂದ ಸಾಮಗ್ರಿಗಳ ಶೇಖರಣೆಗೆ, ಹಂಚಿಕೆಗೆ ಪ್ರಸಿದ್ಧಿ ಪಡೆದಿದೆ. ದಕ್ಷಿಣ, ಪಶ್ಚಿಮ ಮತ್ತು ಪುರ್ವಭಾರತದಿಂದ ಬರುವ ರೈಲುಗಳು ಇಲ್ಲಿ ಸಂಧಿಸುತ್ತವೆ. ಹಿಂದಿನಿಂದಲೂ ಬೆಳೆದು ಬಂದಿರುವ ಅನೇಕ ಕೈಗಾರಿಕೆಗಳಿವೆ. ವಿಶ್ವವಿದ್ಯಾನಿಲಯದ ಕ್ಷೇತ್ರವಾಗಿರುವುದಲ್ಲದೆ, ಉತ್ತರ ಪ್ರದೇಶದ ಮುಖ್ಯ ನ್ಯಾಯಲಯವನ್ನು ಹೊಂದಿದೆ. ಪುರಾತನ ಪಟ್ಟಣವಾದರೂ ಇತ್ತೀಚಿನ ಅನೇಕ ಮಾಪಾರ್ಡುಗಳಿಂದ ಆಧುನಿಕವಾಗುತ್ತಿದೆ. ಜವಹರ್‍ಲಾಲ್‍ ನೆಹರುರವರ ತವರೂರು ಅವರ ನಿವಾಸ ಆನಂದಭವನ ಇಲ್ಲಿದೆ. ಅದು ಇಂದು ವಸ್ತು ಸಂಗ್ರಹಾಲಯವಾಗಿದೆ.