ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅವಳಿಗಳು(ಅವಳಿತನ)

ವಿಕಿಸೋರ್ಸ್ ಇಂದ
Jump to navigation Jump to search

ಮಾನವ ಸಂತಾನವರ್ಧನೆಯಲ್ಲಿ ಒಂದು ಹೆರಿಗೆಗೆ ಒಂದು ಮಗು ಸಹಜವಾದದ್ದು. ಕೆಲವು ಬಾರಿ ಒಂದೇ ಗರ್ಭದಲ್ಲಿ ಎರಡು, ಮೂರು, ಕೆಲವೊಮ್ಮೆ ನಾಲ್ಕು ಕೂಸುಗಳೂ ಬೆಳೆಯುವುದು ಉಂಟು (ಆರು ಮಕ್ಕಳು ಒಂದೇ ಹೆರಿಗೆಯಲ್ಲಿ ಜನಿಸಿದ್ದು ಕೂಡ ದಾಖಲಾಗಿದೆ).


ಎರಡು ಮಕ್ಕಳು ಒಂದೇ ಗರ್ಭದಲ್ಲಿ ಬೆಳೆಯುವುದನ್ನು ಅವಳಿ ಎಂದು ಕರೆಯುತ್ತಾರೆ. ಅದರಲ್ಲಿ ಎರಡು ವಿಧ. ಸಾಧಾರಣವಾಗಿ ಹೆಣ್ಣಿನಲ್ಲಿ ಒಂದು ಮಾಸಿಕ ಚಕ್ರದಲ್ಲಿ ಒಂದು ಅಂಡಾಣು ಫಲಿತವಾಗಿ ಯುಗ್ಮಜವಾಗುತ್ತದೆ. ಕೆಲವೊಮ್ಮೆ ಈ ಒಂದೇ ಯುಗ್ಮಜ ಒಂದು ಮಗುವಾಗಿ ಬೆಳೆಯುವ ಬದಲು ಎರಡಾಗಿ ಕವಲೊಡೆದು ಅವಳಿ ಮಕ್ಕಳಾಗುತ್ತವೆ. ಇವುಗಳನ್ನು ಒಂದೇ ಅಂಡಾಣುವಿನ ಅವಳಿ (ಮಾನೋಸೈಗೊಟಿಕ್) ಸಮರೂಪಿ ಎಂದು ಹೆಸರಿದೆ. ಇವು ಒಂದೇ ರೂಪದ, ಒಂದೇ ಲಿಂಗದ ಅವಳಿಗಳಾಗುತ್ತವೆ. ರೂಪ, ಆಕಾರ, ಬಣ್ಣ, ಆಂತರಿಕ ಶಕ್ತಿ, ಮನೋಭಾವ ಎಲ್ಲದರಲ್ಲಿಯೂ ಒಂದನ್ನೊಂದು ಹೋಲುತ್ತವೆ. ಮಾಸುವಿನಲ್ಲಿರುವ ರಕ್ತನಾಳಗಳು ಎರಡೂ ಶಿಶುಗಳಿಗೂ ರಕ್ತಪೂರೈಕೆ ಮಾಡುತ್ತವೆ. ತೀರ ಪ್ರಾರಂಭಿಕ ಹಂತದಲ್ಲಿ ಯುಗ್ಮಜವು ಎರಡಾದರೆ, ಪರಿಪೂರ್ಣ ಅವಳಿ ಜವಳಿಗಳು ಬೆಳೆಯುತ್ತವೆ. ಆದರೆ ಬೆಳೆವಣಿಗೆಯು ವಿವಿಧ ಹಂತ ಪೂರೈಸಿದ ಭ್ರೂಣ ಎರಡಾಗಿ ಸೀಳಿದರೆ ಸಯಾಮಿ ಅವಳಿಗಳು ಆಗುವುವು. ಇವು ತಲೆ, ಎದೆ, ಬೆನ್ನು ಅಥವಾ ಸೊಂಟದ ಬಳಿ ಒಂದನ್ನೊಂದು ಅಂಟಿಕೊಂಡಿರುತ್ತವೆ. ಒಂದು ದೇಹ, ಎರಡು ತಲೆ ಇರುವ ಸಾಧ್ಯತೆಗಳು ಇವೆ. ಕೆಲವೊಮ್ಮೆ ಒಂದು ಅವಳಿಯ ಹೊಟ್ಟೆಯೊಳಗೆ ಇನ್ನೊಂದು ಮಗು ಸೇರಿಹೋಗಿರುವ ಸಾಧ್ಯತೆಯೂ ಇದೆ. ಒಂದು ಮಗು ಬಹಳ ಚೆನ್ನಾಗಿ ಬೆಳೆದು ಮತ್ತೊಂದು ಮಗು ತೆಳುವಾಗಿ ಬೆಳೆಯುವುದೂ ಉಂಟು. ರಕ್ತಸಂಚಾರ ಬಹಳಷ್ಟು ವ್ಯತ್ಯಯವಾದರೆ ಒಂದು ಮಗು ತೀರ ಕೃಶವಾಗಿ ಬರಿಯ ಪಳೆಯುಳಿಕೆ ಮಾತ್ರವಾಗಿರಬಹುದು. ಈ ರೀತಿಯ ಅವಳಿಗಳು ಮಾನವರಲ್ಲಿ ಹೆಚ್ಚು. ಮತ್ತೊಂದು ರೀತಿಯ ಅವಳಿಗಳು ಅಸಮ ರೂಪಿಗಳು. ಎರಡು ಪ್ರತ್ಯೇಕ ಅಂಡಾ ಣುಗಳು ಒಂದೇ ಮಾಸಿಕ ಚಕ್ರದಲ್ಲಿ ಫಲಿಸುತ್ತವೆ. ಎರಡು ಭ್ರೂಣಗಳು ಗರ್ಭದಲ್ಲಿ ಬೇರೆ ಬೇರೆ ಜಾಗದಲ್ಲಿ ನಾಟಿಯಾಗುತ್ತವೆ. ಮಾಸು, ಗರ್ಭ ಚೀಲ ಎಲ್ಲವೂ ಪ್ರತಿ ಭ್ರೂಣಕ್ಕೂ ಪ್ರತ್ಯೇಕವಾಗಿರುತ್ತವೆ. ಈ ರೀತಿಯ ಅವಳಿಗಳನ್ನು (ಡೈಸೈಗೊಟಿಕ್) ಎರಡು ಅಂಡಾಣುವಿನವು ಎನ್ನುತ್ತಾರೆ. ಅವಳಿ ಗಳು ಒಂದನ್ನೊಂದು ಹೋಲುವು ದಿಲ್ಲ. ಒಂದು ಹೆಣ್ಣು ಮಗು ಒಂದು ಗಂಡು ಮಗು ಆಗುವುದೂ ಉಂಟು. ಇಲ್ಲಿ ಸಯಾಮಿ ಅವಳಿಗಳಾಗುವ ಸಾಧ್ಯತೆ ಇಲ್ಲ. ಎರಡು ಮಕ್ಕಳ ತೂಕದ ಲ್ಲಿಯೂ ಹೆಚ್ಚಿನ ವ್ಯತ್ಯಾಸ ಇರುವುದಿಲ್ಲ. ಮಾಸುವಿನಿಂದ ಪ್ರತ್ಯೇಕವಾಗಿಯೇ ರಕ್ತ ಪೂರೈಕೆ ಇರುತ್ತದೆ.

ಅವಳಿ ಕೂಸುಗಳ ಬಗೆಗಳು

ಅವಳಿಗಳು ಹುಟ್ಟುವುದು ಅಪರೂಪವಲ್ಲ. ಮದರಾಸಿನ ಎಗ್ಮೋರ್ ಹೆರಿಗೆ ಆಸ್ಪತ್ರೆಯಲ್ಲಿ 25904 ಹೆರಿಗೆಗಳಲ್ಲಿ ಹದಿಮೂರು ಅವಳಿಗಳು ಹುಟ್ಟಿದವು. ಅಂದರೆ 62 ಹೆರಿಗೆಗಳಲ್ಲಿ ಒಂದು. 5 ತ್ರಿವಳಿಗಳು ಹುಟ್ಟಿದವು. ಅವಳಿಗಳಾಗುವ ಸಂಭವ ಒಂದೊಂದು ನಾಡು ಜನಾಂಗಗಳಲ್ಲಿಯೂ ಒಂದೊಂದು ಬಗೆ. ಬಡಗಣ ಯುರೋಪಿನಲ್ಲಿ ಬಲು ಹೆಚ್ಚು. ಮಂಗೋಲತೆರ (ಮಂಗೋಲಾಯ್ಡ್‌) ಜನರಲ್ಲಿ ತೀರಾ ಕಡಿಮೆ. ಒಂದೇ ಅಂಡಾಣು ಅವಳಿಗಳ ಪೈಕಿ 80 ಹೆರಿಗೆ ಪ್ರಸವಗಳಿಗೆ ಒಂದು ಅವಳಿ ಜನಿಸಿದರೆ, 80x80=6400 ಹೆರಿಗೆಗೆ ಒಂದು ತ್ರಿವಳಿಗಳು ಜನಿಸಬಹುದು, 80x80x80= 512000 ಹೆರಿಗೆಗೆ ಒಂದು ನಾಲ್ವಳಿ ಆಗಬಹುದು (ಸ್ಥೂಲವಾಗಿ ಈ ಅನುಪಾತವನ್ನು ತಜ್ಞರು ಗುರುತಿಸಿದ್ದಾರೆ).


ಗರ್ಭದಲ್ಲಿ ಅವಳಿ ಮಕ್ಕಳ ಇರುವಿಕೆಯನ್ನು ಗುರುತಿಸುವುದು ಹೇಗೆ? ಸಾಧಾರಣ ಎರಡನೆಯ ತಿಂಗಳಲ್ಲಿ ಮಾಡುವ ಶ್ರವಣಾತೀತ ಧ್ವನಿ ತರಂಗ (ಅಲ್ಟ್ರಾಸೋನೋಗ್ರಫಿ) ಪರೀಕ್ಷೆಯಿಂದ ಗುರುತಿಸಬಹುದು. 4-5ನೆಯ ತಿಂಗಳಲ್ಲಿಯಾದರೆ ಗರ್ಭಕೋಶ ಹೆಚ್ಚು ಪ್ರಮಾಣದಲ್ಲಿ ಹಿಗ್ಗಿರುತ್ತದೆ. 7ನೆಯ ತಿಂಗಳ ವೇಳೆಗೆ ತಜ್ಞರ ಕೈಗಳಿಗೆ ಗರ್ಭಕೋಶದಲ್ಲಿರುವ ಶಿಶುಗಳ ಎರಡು ತಲೆಯನ್ನು ಗುರುತಿಸುವುದು ಸಾಧ್ಯ (ಹಿಂದೆ ಎರಡು ಹೃದಯಗಳ ಬಡಿತವನ್ನು ಏಕಕಾಲದಲ್ಲಿ ಇಬ್ಬರು ತಜ್ಞರು ಆಲಿಸಿ ಅವಳಿಗಳ ಇರುವಿಕೆ ದೃಢೀಕರಿಸ ಬೇಕಾಗಿತ್ತು).


ತೊಂದರೆಗಳು[ಸಂಪಾದಿಸಿ]

ಮಾನವ ಸೃಷ್ಟಿಕ್ರಿಯೆ ಒಂದು ಮಗುವಿನ ಬೆಳೆವಣಗೆಗೆ, ಹೆರಿಗೆಗೆ ಅತ್ಯಂತ ಸೂಕ್ತವಾಗಿದೆ. ಅವಳಿಗಳು ಹುಟ್ಟುವುದು ಅಪರೂಪವಲ್ಲ. ಆದರೆ ತಾಯಿಗೂ ಮಕ್ಕಳಿಗೂ ಅಪಾಯ ಅಡ್ಡಿ ಆತಂಕಗಳು ಹೆಚ್ಚುತ್ತವೆ. ರಕ್ತಹೀನತೆ, ಏರಿದ ರಕ್ತದೊತ್ತಡ, ಗರ್ಭಜಲ, ಹೆಚ್ಚಾಗಿ ಹೊಟ್ಟೆ ಉಬ್ಬರಿಸುವುದು, ದಿನತುಂಬುವ ಮುನ್ನವೇ ಹೆರಿಗೆ, ಮಧುಮೇಹ ಕಾಯಿಲೆ ಇವೆಲ್ಲ ಬರುವ ಸಾಧ್ಯತೆ ಇದೆ. ಮಕ್ಕಳು ತಲೆ ಮೊದಲಾಗಿ ಇಲ್ಲವೇ ಪೀಠಸ್ಥಾನ ಮೊದಲಾಗಿ ಹೆರಿಗೆಯಾಗದೆ ಇದ್ದರೆ ಶಸ್ತ್ರ ಚಿಕಿತ್ಸೆ ಅಗತ್ಯ ಇದೆ. ಮೊದಲು ಕಾಲುಮುಂದಾಗಿ ಹೆರಿಗೆಯಾದ ಶಿಶುವಿನ ತಲೆಗೆ ಅನಂತರ ಬರುವ ಶಿಶುವಿನ ತಲೆ ಕೊಂಡಿಯಂತೆ ಸಿಕ್ಕಿಕೊಂಡರೆ ಎರಡು ಮಕ್ಕಳ ಹಾಗೂ ತಾಯಿಯ ಜೀವಕ್ಕೂ ಅಪಾಯವಿದೆ. ಅತಿಯಾಗಿ ಗರ್ಭಕೋಶ ಹಿಗ್ಗಿರುವುದರಿಂದ ಹೆರಿಗೆಯಾದ ಮೇಲೆ ಅತಿರಕ್ತಸ್ರಾವ ಸಾಮಾನ್ಯ. ಕೆಲವೊಮ್ಮೆ ಗರ್ಭಕೋಶ ಕುಗ್ಗದೆ ತಾಯಿಯ ಜೀವಕ್ಕೆ ಅಪಾಯಕರ ಸ್ಥಿತಿ ಇದ್ದರೆ ಗರ್ಭಕೋಶವನ್ನೇ ತೆಗೆಯಬೇಕಾಗಬಹುದು. ಅವಳಿಗಳಾಗಲು ಕಾರಣವನ್ನು ಇಂದಿಗೂ ಸಿದ್ಧಪಡಿಸಿಲ್ಲ. ಕೆಲವು ತಲೆಮಾರುಗಳಲ್ಲಿ ಹೆಚ್ಚು ಕಾಣಬಹುದು. ಬಂಜೆತನ ನಿವಾರಣಾ ವಿಧಾನಗಳಿಂದಲೂ ಅವಳಿಗಳಾಗಬಹುದು. ತಾಯಿಯ ಕಡೆಯ ಅನುವಂಶೀಯತೆಯೂ ಕಾರಣವಾಗಬಹುದು. ಚಾಂಗ್-ವಿಂಗ್ ಹೆಸರಿನಲ್ಲಿ ಬಾಳಿದ್ದ ಸಯಾಮಿ ಅವಳಿಗಳು (1811-74) ಹೊಟ್ಟೆಯ ಮೇಲ್ಭಾಗದಲ್ಲಿ ಅಂಟಿಕೊಂಡಿದ್ದರು. ತೀರ ಇತ್ತೀಚೆಗೆ ಹೆಸರಾದ ಇರಾನೀ ಸೋದರಿಯರು ಹಿಂದಲೆಯಲ್ಲಿ ಅಂಟಿಕೊಂಡಿದ್ದರು. ಇಬ್ಬರೂ ಬೇರೆಯಾಗುವ ತವಕದಿಂದ ಅಪಾಯಕಾರಿ ಯಾದ ಶಸ್ತ್ರಚಿಕಿತ್ಸೆಗೆ ಒಡ್ಡಿಕೊಂಡು ತಾವೆ ಆಹುತಿಯಾದರು.


ಗಂಗಾ, ಜಮುನಾ ಮುಂದಲೆ ಅಂಟಿಕೊಂಡಿದ್ದ ನೇಪಾಳಿ ಸೋದರಿಯರು. ಮೂರೂವರೆ ದಿನಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ಮೂಲಕ ಇಬ್ಬರನ್ನು ಬೇರ್ಪಡಿಸಲಾಯಿತು.


ತ್ರಿವಳಿ, ನಾಲ್ವಳಿ ಮಕ್ಕಳಾಗುವುದರಲ್ಲಿನ ಅಪಾಯ ಗುರುತಿಸಿ ಇತ್ತೀಚೆಗೆ ಆರೋಗ್ಯವಾಗಿ ಒಂದೇ ಮಗು ಬೆಳೆಯಲಿ ಎಂದು ಉದ್ದೇಶಿಸಿ ಭ್ರೂಣ ಇಳಿಕೆ ಚಿಕಿತ್ಸೆ ಮಾಡಲಾಯಿತು. ಇಲ್ಲಿ ಬೇಡವಾದ ಶಿಶುವಿನ ಹೃದಯ ಬಡಿತವನ್ನು ಸ್ಕ್ಯಾನಿಂಗ್ ಪರೀಕ್ಷೆಯ ಮೂಲಕ ಗುರುತಿಸುತ್ತಾರೆ. ಹೃದಯಕ್ಕೆ ಪೊಟಾಶಿಯಂ ಕ್ಲೋರೈಡ್ ಅನ್ನು ಚುಚ್ಚುಮದ್ಡಿನ ಮೂಲಕ ಸ್ಕ್ಯಾನಿಂಗ್ ಮಾಡಿಕೊಂಡೇ ಕರಾರುವಾಕ್ಕಾಗಿ ಕೊಡಲಾಗುತ್ತದೆ. ಆ ಭ್ರೂಣ ಸಾಯುತ್ತದೆ, ಉಳಿಯುವ ಭ್ರೂಣ/ ಪಿಂಡಗೂಸು ಆರೋಗ್ಯವಾಗಿ ಬೆಳೆಯುತ್ತದೆ.

ವ್ಯಕ್ತಿತ್ವ ಬೆಳೆವಣಿಗೆಯಲ್ಲಿ ಪರಿಸರದ ಪಾತ್ರವನ್ನು ಕಂಡುಕೊಳ್ಳಲು ಅವಳಿಗಳನ್ನು ಬಹುವಾಗಿ ಬಳಕೆ ಮಾಡಲಾಗಿದೆ.