ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಷ್ಟಪಾದಿ

ವಿಕಿಸೋರ್ಸ್ದಿಂದ

ಮೃದ್ವಂಗಿ (ಮಾಲಸ್ಕ) ವಂಶ, ಶಿರಪಾದಿ (ಸೆಫಲೊಪೊಡ) ವರ್ಗಕ್ಕೆ ಸೇರಿದ ಕಡಲಜೀವಿ (ಅಕ್ಟೋಪಸ್). ಪಾದವು ಶಿರದೊಂದಿಗೆ ಸೇರ್ಪಟ್ಟು 8 ಕರಬಳ್ಳಿಗಳಿರುವು ದರಿಂದ ಅಷ್ಟಪಾದಿ (octopoda) ಎಂದು ಕರೆಯಲಾಗಿದೆ. ಕರಬಳ್ಳಿಗಳ ಒಳಭಾಗಕ್ಕೆ ಹೀರು ಬಟ್ಟಲುಗಳಿವೆ; ದೇಹವು ದುಂಡಗೆ ಮಾಂಸ ಯುತವಾಗಿದೆ. ಇವು ಶೀಘ್ರಗಾಮಿಗಳು. ಸೂಪರ್ ಸಾನಿಕ್ ಜೆಟ್‌ಗಳಂತೆ ತಮ್ಮ ವಿಶೇಷವಾದ ಶರೀರಭಾಗದಲ್ಲಿ ನೀರನ್ನು ಒಳಗೆಳೆದುಕೊಂಡು ಸೈಫನ್ ಎಂಬ ಮತ್ತೊಂದು ವಿಶೇಷ ಅಂಗದಿಂದ ಆ ನೀರನ್ನು ರಭಸದಿಂದ ಹೊರದೂಡುತ್ತಾ ಚಲಿಸುತ್ತವೆ.

ಅಷ್ಟಪಾದಿ

ರಾಕೆಟ್‌ನಂತೆ ಛಂಗನೆ ನೀರಿನ ಮೇಲ್ಭಾಗಕ್ಕೆ ಏರಬಲ್ಲವು. ಕಡಲ ತಡಿಗಳಲ್ಲಿ ಕರಬಳ್ಳಿಗಳ ಸಹಾಯದಿಂದ ನಡೆಯಬಲ್ಲವು.


ಚುರುಕು ಕಣ್ಣುಗಳಿಂದ ಬೇಟೆಯಾಡುವುವು. ದೈತ್ಯಾಕಾರ. ಬಿಗಿ ಹಿಡಿತದಿಂದ ಬೇಟೆಯಾಡುವುದರಿಂದ ಇವನ್ನು ದೆವ್ವಮೀನು (ಡೆವಿಲ್‌ಫಿಶ್‌) ಎಂದೂ ಕರೆಯುತ್ತಾರೆ. ಇವುಗಳ ಕಣ್ಣುಗಳು ಕಶೇರುಕ ಕಣ್ಣುಗಳ ರಚನೆಯನ್ನೇ ಹೊಂದಿವೆ. ಇವುಗಳ ಕಣ್ಣಿನ ಪಾಪೆ ಆಯತಾಕಾರದಲ್ಲಿರುವುದರಿಂದ ಹೆಚ್ಚು ಪ್ರಕಾಶದ ಬೆಳಕಿನಲ್ಲಿ ಸಣ್ಣ ಸೀಳಿನಂತೆ ತೆರೆದರೆ ಮಂದ ಬೆಳಕಿನಲ್ಲಿ ಅಗಲವಾಗಿ ತೆರೆಯಬಲ್ಲದು.


ಶತ್ರುಗಳಿಂದ ಪಾರಾಗಲು ಮಂಕು ಕವಿಸುವ ತಂತ್ರವನ್ನು ಹೂಡುತ್ತದೆ. ಅಕ್ಟೊಪಸ್ ಅಥವಾ ಅಷ್ಟಪಾದಿ ತನ್ನನ್ನು ಬೆದರಿಸುವ ಪ್ರಾಣಿ ಎದುರಾದಾಗ ತನ್ನಲ್ಲಿರುವ ವಿಶೇಷ ಮಸಿಗ್ರಂಥಿಯಿಂದ ಕಪ್ಪುಮಸಿಯನ್ನು ಹೊರಸೂಸಿ ಮೋಡದಂತಹ ರಚನೆ ಸೃಷ್ಟಿಸುತ್ತದೆ. ಮೋಸಗೊಂಡ ಶತ್ರು ಅತ್ತಿತ್ತ ಬೆರಗಾಗಿ ನೋಡುವಾಗ ಅದು ಅಲ್ಲಿಂದ ತಪ್ಪಿಸಿಕೊಂಡು ಮಾಯವಾಗುತ್ತದೆ.


ಇವು ಅಂಡಜಗಳು. ದ್ರಾಕ್ಷಿ ಹಣ್ಣಿನ ಗೊಂಚಲಿನಂತಿರುವ ಮೊಟ್ಟೆಗಳನ್ನು ಇಡುತ್ತವೆ. ಅಷ್ಟಪಾದಿಯನ್ನು ಆಹಾರವಾಗಿಯೂ ಬಳಸುತ್ತಾರೆ.