ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಷ್ಟಾದಶ ಉಪಪುರಾಣಗಳು

ವಿಕಿಸೋರ್ಸ್ದಿಂದ

ಉಪಪುರಾಣಗಳು ನೂರಕ್ಕೂ ಹೆಚ್ಚಾಗಿವೆ. ಆದರೆ ಅವುಗಳಲ್ಲಿ ಸನತ್ಕುಮಾರೋಕ್ತವಾದ ಆದ್ಯ, ನಾರಸಿಂಹ, ಕುಮಾರಪ್ರೋಕ್ತವಾದ ಸ್ಕಾಂದ, ನಂದೀಶೋಕ್ತವಾದ ಶಿವಧರ್ಮ, ದೂರ್ವಾಸೋಕ್ತವಾದ ಆಶ್ಚರ್ಯ (?), ನಾರದೀಯ, ಕಾಪಿಲ, ವಾಮನ, ಉಶನಸೇರಿತ, ಬ್ರಹ್ಮಾಂಡ, ವಾರುಣ, ಕಾಲಿಕಾ, ಮಾಹೇಶ್ವರ, ಸಾಂಬ, ಸೌರ, ಪರಾಶರೋಕ್ತ, ಮಾರೀಚ, ಮತ್ತು ಭಾರ್ಗವ-ಎಂಬಿವು ಅಷ್ಟಾದಶ ಉಪಪುರಾಣಗಳೆಂದು (ಹದಿನೆಂಟು) ಕೂರ್ಮಪುರಾಣದ ಹೇಳಿಕೆ. ಬೇರೆ ಬೇರೆ ಗ್ರಂಥಗಳು ಬೇರೆ ಬೇರೆ ಹದಿನೆಂಟರ ಪಟ್ಟಿಗಳನ್ನು ಕೊಟ್ಟಿವೆ. ವೈದಿಕಧರ್ಮದ ಪುನರುತ್ಥಾನಕ್ಕಾಗಿ ಸ್ಮಾರ್ತವರ್ಗ ಉಪಪುರಾಣಗಳನ್ನು ಬರೆಯುತ್ತಾ ಹೋಯಿತು. ಉಪಪುರಾಣಗಳು ಮಹಾಪುರಾಣಗಳಿಗೆ ಪೂರಕಗಳೆಂದು ಗಣಿಸಲಾಗಿದ್ದರೂ ಇವುಗಳಲ್ಲೆಷ್ಟೋ ಸ್ವತಂತ್ರವೂ ಸಾಕಷ್ಟು ಪ್ರಾಚೀನವೂ ಆಗಿವೆ. ಮಹಾಪುರಾಣಗಳಲ್ಲಾದಹಾಗೇ ಹಲಕೆಲವು ಉಪಪುರಾಣಗಳಲ್ಲೂ ಕಾಲಕಾಲಕ್ಕೆ ಪ್ರಕ್ಷಿಪ್ತಗಳು ಸೇರುತ್ತ ಬಂದುವು. ಆದರೆ ಇವುಗಳ ಪ್ರಕ್ಷೇಪದ ಸರದಿಗಳೂ ಕಡಿಮೆ, ಸ್ವರೂಪಗಳೂ ಅಷ್ಟು ವಿಜಾತೀಯವಲ್ಲ. ಭಾರತದ ಧರ್ಮ, ಸಂಸ್ಕೃತಿಗಳ ಇತಿಹಾಸದ ಮತ್ತು ಕಳೆದುಹೋದ ಎಷ್ಟೋ ಶಾಸ್ತ್ರಗಳ ಹಾಗೂ ಕಾವ್ಯಗಳ ಪುನಾರಚನೆಯ ದೃಷ್ಟಿಯಿಂದ ಉಪಪುರಾಣಗಳು ಬಹುಮುಖ್ಯ. ಉಪಲಬ್ಧ ಉಪಪುರಾಣಗಳಲ್ಲಿ ಗಣ್ಯವಾದವುಗಳ ರಚನಾಯುಗ ಪ್ರ.ಶ. 650-800ರ ನಡುವೆ ಎನ್ನಬಹುದು. ಉಪಪುರಾಣ ಸಾಹಿತ್ಯದ ಕೆಲವು ಮಾದರಿಗಳು ಹೀಗಿವೆ :


ಸಾಂಬೋಪಪುರಾಣ[ಸಂಪಾದಿಸಿ]

ಸೌರವರ್ಗಕ್ಕೆ ಸೇರಿದ್ದು. ಮುದ್ರಿತವಾದ ಸುಮಾರು 15 ಉಪಪುರಾಣಗಳಲ್ಲಿ ಒಂದು. ಇದರಲ್ಲಿ 84 ಅಧ್ಯಾಯಗಳಿವೆ. ಸೂರ್ಯವಂದನೆ, ಕುತೂಹಲ ಕರವಾದ ವಿವಿಧ ಕಥೆಗಳು, ಕೃಷ್ಣಪುತ್ರ ಸಾಂಬ ಸೂರ್ಯಾರಾಧಕನಾಗಿ ಪರಿಣಮಿಸಿ, ಸೂರ್ಯವಿಗ್ರಹವನ್ನು ಸಂಸ್ಥಾಪಿಸಿದ ದೊಡ್ಡ ಕಥೆ, ಭೂಮಿ ಮೊದಲಾದ ಮೇಲಿನ ಏಳು ಲೋಕಗಳು, ಮೇರುವಿನ ಅಳತೆ, ಸೂರ್ಯನ ಏಕಚಕ್ರರಥದ ವರ್ಣನೆ, ಮಳೆ, ಚಂದ್ರನ ವರ್ತನೆ, ಸೂರ್ಯಚಂದ್ರಗ್ರಹಣಗಳು, ಸಕಲ, ನಿಷ್ಕಲ ಸೂರ್ಯನ ಆರಾಧಕರಾದ ಮಗ, ಯಾಜಕರು, ಯೋಗಮಾರ್ಗ, ತ್ರೈವಿದ್ಯ, ಸೂರ್ಯಸಿದ್ಧಾಂತಗಳು, ಸೂರ್ಯಲೋಕ ಪ್ರಾಪ್ತಿ, ಸೂರ್ಯ ವಿಗ್ರಹ ಲಕ್ಷಣಗಳು, ಸೂರ್ಯ ದೇವಾಲಯ ನಿರ್ಮಾಣ, ಸಪ್ತವಿಧ ಸೂರ್ಯವಿಗ್ರಹಗಳು, ಸೂರ್ಯವಿಗ್ರಹಪ್ರತಿಷ್ಠೆ, ಧ್ವಜಸ್ತಂಭಗಳು, ಸಾಂವತ್ಸರೀ ಪೂಜೆ, ವಾರ್ಷಿಕ ರಥೋತ್ಸವ, ಗ್ರಹಶಾಂತಿ, ಮಾನಸಪುಜೋತ್ಸವ, ಇತರ ಅಂತರಿಕ್ಷ ದೇವತೆಗಳು, ಆದಿತ್ಯಹೃದಯ, ಹೋಮ, ಸೂರ್ಯಭಕ್ತ ಲಕ್ಷಣಗಳು, ದ್ವಾದಶದಲಪದ್ಮಮಂಡಲದ ರಚನೆ, ಮಂತ್ರವರ್ಣಗಳ ಅರ್ಥ, ಸದಾಚಾರ, ಸಪ್ತವಿಧಸಪ್ತಮೀ ತಿಥಿಯ ಆಚರಣೆ, 12 ಬಗೆಯ ಶುಕ್ಲಸಪ್ತಮಿಗಳು, ನ್ಯಾಸ, ಮುದ್ರೆಗಳಿಂದ ಕೂಡಿದ ಮಂತ್ರಯುಕ್ತ ಸೂರ್ಯಾರಾಧನೆ, ಅಭಿಚಾರ, ಸಂನ್ಯಾಸವಿಧಿ, ಯೋಗವಿಧಾನ, ಕರ್ಮವಿಪಾಕ, ದಕ್ಷಿಣೆ, ಸೂರ್ಯಸ್ತೋತ್ರಗಳು ಇದರಲ್ಲಿ ಬಂದಿವೆ. ಇದರಲ್ಲಿ ಸೂರ್ಯನೇ ಪರಬ್ರಹ್ಮ. ಆತ ಏಕ, ಅನೇಕ, ತ್ರಿಗೋಣೋಪೇತ, ತ್ರಿಗುಣಾತೀತ, ಕ್ಷೇತ್ರಜ್ಞ, ಕರ್ಮವಿಪಾಕರಹಿತ, ವಿಷಯವಿದೂರ, ವಿಶ್ವಾಂತರ್ಯಾಮಿ, ವಿಶ್ವಪಾಲಕ, ವಿಶ್ವನಿಯಾಮಕ. ಇದು ವಿವಿಧ ಕವಿಗಳಿಂದ ರಚಿತವಾದ ಕೃತಿ. ಇದರ ತಿರುಳು ಪ್ರ.ಶ. 500 ಮತ್ತು 800 ನಡುವಿನದು. ಕೆಲ ಅಧ್ಯಾಯಗಳು ಭವಿಷ್ಯ, ಬ್ರಹ್ಮ, ಸ್ಕಂದ ಮಹಾಪುರಾಣಗಳಿಗೆ ಸಮಾನವೆನ್ನಿಸಿವೆ.


ಕಾಲಿಕೋಪಪುರಾಣ[ಸಂಪಾದಿಸಿ]

ಇದರಲ್ಲಿ ಶಿವಪತ್ನಿಯಾದ ಪಾರ್ವತಿಯ ಗಿರಿಜಾ, ದೇವೀ, ಭದ್ರಕಾಲೀ, ಕಾಲೀ ರೂಪಗಳ ಮಾಹಾತ್ಮ್ಯವಿದೆ. ಇದರದು ಶಾಕ್ತಪಂಥ. ಬ್ರಹ್ಮ ಸರಸ್ವತಿಯರ ಪ್ರೇಮ, ಶಿವ ಪಾರ್ವತಿಯರ ವಿವಾಹ, ದಕ್ಷಯಜ್ಞ, ಸತೀ ಪ್ರಾಣತ್ಯಾಗ, ಭೈರವ, ಬೇತಾಳರ ಉತ್ಪತ್ತಿ, ದೇವಿಪುಜಾ ವಿಧಾನ. ರಕ್ತಬಲಿ ಕಾಮರೂಪತೀರ್ಥದ ನದೀ ಪರ್ವತಗಳ, ಕಾಮಾಕ್ಷಿ ದೇವಾಲಯದ ವರ್ಣನೆ ಮುಂತಾದವು ಇದರ ವಿಷಯಗಳು. ಶಾಕ್ತ, ತಾಂತ್ರಿಕ ಪಂಥಗಳ ಆವಾಸದ ಅಸ್ಸಾಮಿನಲ್ಲಿ ಅಥವಾ ಬಂಗಾಲದ ಈಶಾನ್ಯಭಾಗದಲ್ಲಿ ಇದು ರಚಿತವಾಗಿರಬೇಕು. ವಿವಿಧ ಸಂಶೋಧಕರ ಕಾಲನಿರ್ಣಯ ಈ ಪುರಾಣದ ವಿಷಯದಲ್ಲಿ 700 ರಿಂದ 1200ರ ವರೆಗೆ ಹೋಗುತ್ತದೆ. ಹಳೆಯ ಕಾಲಿಕಾ ಪುರಾಣವೊಂದಿತ್ತೆಂದೂ ಅದು ಸಿಕ್ಕಿಲ್ಲವೆಂದೂ ಕೆಲವರ ಮತ.


ಕಲ್ಕಿ ಉಪಪುರಾಣ[ಸಂಪಾದಿಸಿ]

ಭಾಗವತ ಮಹಾಪುರಾಣದ ಅನುಬಂಧವೆಂದು ತಾನೇ ಹೇಳಿಕೊಂಡಿದೆ. ಕಲಿಯುಗದ ಅಂತ್ಯದಲ್ಲಿ ವಿಷ್ಣು ಕಲ್ಕಿ ಅವತಾರವನ್ನು ತಾಳಿ ಮಾಡುವ ಮಹತ್ಕಾರ್ಯಗಳನ್ನಿದು ಬಣ್ಣಿಸಿದೆ. ಶಂಭಲಗ್ರಾಮನಿವಾಸಿಗಳಾದ ವಿಷ್ಣುಯಶಸ್ ಮತ್ತು ಸುಮತಿ ಎಂಬ ದಂಪತಿಗಳಿಗೆ ಮಗನಾಗಿ ಕಲ್ಕಿ ಹುಟ್ಟುವನು. ಅವನ ಪರಾಕ್ರಮಗಳಲ್ಲಿ ಬೌದ್ಧರನ್ನೂ ಮ್ಲೇಚ್ಛರನ್ನೂ ಜಯಿಸಿದ್ದು ಅತ್ಯಂತ ಗಣ್ಯ. ಅವತಾರವನ್ನು ಮುಗಿಸಿ ಕಲ್ಕಿ ಸ್ವರ್ಗಾರೋಹಣ ಮಾಡುವುದರ ಉಲ್ಲೇಖವೂ ಇಲ್ಲಿದೆ. ಕಾಲ ಪ್ರ.ಶ. 1800.


ಪುರೋಷೋತ್ತಮೋಪಪುರಾಣ[ಸಂಪಾದಿಸಿ]

ಒರಿಸ್ಸದಲ್ಲಿಯ ಪುರೀ ಕ್ಷೇತ್ರದ ಪ್ರಶಂಸೆಗೆ ಮೀಸಲಾ ಗಿದೆ. ಕೃಷ್ಣ, ಬಲರಾಮ, ಸುಭದ್ರೆಯರ ಪೂಜೆಯನ್ನು ಹೇಗೆ ಮಾಡಬೇಕೆಂಬುದನ್ನಿದು ಬಿತ್ತರಿಸಿದೆ. ಇದಿನ್ನೂ ಅಮುದ್ರಿತ. ಕಾಲ ಪ್ರ.ಶ. 1200.


ಬೃಹದ್ಧರ್ಮೋಪಪುರಾಣ[ಸಂಪಾದಿಸಿ]

ಧರ್ಮಮಾಹಾತ್ಮ್ಯವನ್ನು ಹೇಳುವ ಗ್ರಂಥ. ಇಡೀ ಜಗತ್ತು ಶಿವ, ಶಕ್ತಿಯರನ್ನಾಧರಿಸಿದೆ ಎಂಬುದಿದರ ಸಿದ್ಧಾಂತ. ಮಾತಾ, ಪಿತೃ, ಗುರು, ಹಿರಿಯರ ಬಗ್ಗೆ ಮಾಡತಕ್ಕ ಕರ್ತವ್ಯಗಳನ್ನು ಉಲ್ಲೇಖಿಸುವ ಸಂದರ್ಭದಲ್ಲಿ ಧರ್ಮವ್ಯಾಧನ ಕಥೆ ಬಂದಿದೆ. ಅನಂತರ ತೀರ್ಥಗಳನ್ನು ವರ್ಣಿಸುವಾಗ ರಾಮಕಥೆ, ಮಹಾಭಾರತದ ಪ್ರಶಂಸೆ, ಅದರ ಗಣ್ಯ ಪರ್ವಗಳ ಹೆಸರುಗಳನ್ನೊಳಗೊಂಡ ಪ್ರಾರ್ಥನೆ, ಗಂಗೋತ್ಪತ್ತಿ, ವಿಷ್ಣುವಿನ ಕಪಿಲ, ವಾಲ್ಮೀಕಿ, ವ್ಯಾಸ, ಬುದ್ಧಾವತಾರಗಳು, ಶಿವಕೃತ ವಿಷ್ಣುಸ್ತೋತ್ರ, ಗಂಗಾಧರ್ಮ, ಗಣೇಶೋತ್ಪತ್ತಿ, ವರ್ಣಾಶ್ರಮಧರ್ಮ, ಸ್ತ್ರೀಧರ್ಮ-ಮುಂತಾದುವನ್ನು ಇಲ್ಲಿ ವಿಶದಪಡಿಸಲಾಗಿದೆ. ಇದರ ಭಾಗಗಳು ಮೂರು. ಪ್ರಭುತ್ವವನ್ನು ಇಂದ್ರನಿಂದ, ಶಕ್ತಿಯನ್ನು ಅಗ್ನಿಯಿಂದ, ಕ್ರೌರ್ಯವನ್ನು ಯಮನಿಂದ, ಸುದೈವವನ್ನು ಚಂದ್ರನಿಂದ, ಐಶ್ವರ್ಯವನ್ನು ಕುಬೇರನಿಂದ, ಸೌಜನ್ಯವನ್ನು ಜನಾರ್ದನನಿಂದ ಪಡೆದು ಅವುಗಳ ಸಂಯೋಗದಿಂದ ಬ್ರಹ್ಮ ರಾಜನನ್ನು ಸೃಜಿಸಿದ. ರಾಜನಿಲ್ಲದ ರಾಜ್ಯ ವಿಧವೆಗೆ ಸಮ. ಪ್ರಜಾಪಾಲನೆ ಸಾವಿರ ಅಶ್ವಮೇಧಯಾಗಗಳಿಗೆ ಸರಿ. ನ್ಯಾಯವಾದ ರಾಜ್ಯಭಾರ ನಡೆಸುವುದರಿಂದ ರಾಜನಿಗೆ ಪ್ರಜೆಗಳ ಪುಣ್ಯದಲ್ಲಿ ಆರನೆಯ ಒಂದು ಅಂಶ ಸಿಗುತ್ತದೆ. ಅನೀತಿವಂತನಾದ ಅರಸ ಇದ್ದರೂ ಇಲ್ಲದಂತೆಯೇ. ರಾಜದಂಡದ ಭಯವಿಲ್ಲದಲ್ಲಿ ಪ್ರಜೆಗಳು ಮನಸ್ವಿಯಾಗಿ ನಡೆದುಕೊಳ್ಳವರು. ಜಗತ್ತಿನ ಮೂಲವಾದ ಧರ್ಮವನ್ನು ತ್ರಿಕರಣಪುರ್ವಕವಾಗಿ ಆಚರಿಸಿ ಪ್ರಚುರಪಡಿಸುವ ಬ್ರಾಹ್ಮಣ ಸರ್ವಾಧಾರ. ಅವನನ್ನೆಂದೂ ನೋಯಿಸಬಾರದು ಎಂಬೀ ವಿಚಾರಗಳು ಬೃಹದ್ಧರ್ಮೋಪಪುರಾಣದಲ್ಲಿ ಗಮನಾರ್ಹವೆನ್ನಿಸಿವೆ.


ವಿಷ್ಣುಧರ್ಮೋಪಪುರಾಣ[ಸಂಪಾದಿಸಿ]

ವಿಷ್ಣುಧರ್ಮ ಪ್ರತಿಪಾದನೆ ಇದರ ಉದ್ದೇಶ. ಅಧ್ಯಾಯ ಗಳು 105. ಅಮುದ್ರಿತ. ಶ್ಲೋಕಸಂಖ್ಯೆ 4000ಕ್ಕೂ ಹೆಚ್ಚು. ಪುರಾಣದ ಮುಖ್ಯ ಲಕ್ಷಣಗಳು ಇದರಲ್ಲಿಲ್ಲ. ನಾರಾಯಣ ಸಂತರ್ಪಣರೂಪದ ಕ್ರಿಯಾಯೋಗ, ಅಂಬರೀಷನ ಕಥೆ, ಪ್ರಹ್ಲಾದನ ಕಥೆ, ವಿವಿಧ ವೈಷ್ಣವ ವ್ರತಗಳು, ನರಕ, ದಾನ, ಮೌನಾದಿ ಸಂಯಮ ಸಾಧನಗಳು, ಗಾಯತ್ರೀಪಠಣದಲ್ಲಿ ನಿರತನಾದ ಬ್ರಾಹ್ಮಣನ ಪ್ರಶಂಸೆ, ಬ್ರಾಹ್ಮಣನಿಂದಾಸ್ತುತಿಗಳ ಫಲ, ತಪಸ್, ಸತ್ಯ. ಅನೃತಗಳ ವಿಚಾರ, ಏಕಾದ ಶೀವ್ರತ, ಉಪವಾಸ, ವರ್ಣಧರ್ಮಪಾಲನ, ಅದರ ತ್ಯಾಗಗಳಿಂದಾಗುವ ಉದ್ಧಾರ, ಅಧಃಪಾತಗಳು, ಅಡಿಯಹಿಂದಿಡದ ವೀರನ ಪ್ರಶಂಸೆ, ಅಹಿಂಸಾವ್ರತ ಮಾಂಸಭಕ್ಷಣತ್ಯಾಗ, ದಂಡನೀತಿ, ವಿಷ್ಣುವಿನ ಕುರಿತಾದ ಭಕ್ತಿ ಮತ್ತು ಅವನ ಅವತಾರ, ಸ್ಮರಣೆ, ನಾಮಜಪ, ಭಕ್ತಲಕ್ಷಣ, ಸುದರ್ಶನ ಶಕ್ತಿ, ದೇವಾಲಯ ರಚನೆ, ವಿಗ್ರಹ ನಿರ್ಮಾಣ,ಆದಿಕಾರಣತ್ವ, ಪಂಜರಸ್ತೋತ್ರ, ಅಷ್ಟಕ, ಸುದರ್ಶನ ಸ್ತೋತ್ರ ಮುಂತಾದ ವಿಷಯಗಳಲ್ಲದೆ ಸ್ವಧರ್ಮಾ ಚಾರ, ಸದ್ಗುಣ, ಗ್ರಾಮ್ಯಸಂಗ ಮತ್ತು ವಿಧರ್ಮಗಳ ವರ್ಜನ, ಯೋಗ, ಅದ್ವೈತ, ಸಾರಸ್ವತಸ್ತವ, ಕೃಷ್ಣಸ್ತುತಿ, ಪಾಷಂಡನಿಂದೆ, ಕಾಲಮಾನಕ್ರಮ, ಕಲಿಯುಗದ ಪಾಪ, ಪಾಪಪ್ರಶಮನಸ್ತವ-ಮುಂತಾದ ವಿಷಯಗಳನ್ನೂ ಶೌನಕನಿಲ್ಲಿ ಶತಾನೀಕನಿಗೆ ಹೇಳುತ್ತಾನೆ. ಅಗ್ನಿಪುರಾಣ ಈ ವಿಷಯಗಳಲ್ಲಿ ಇದಕ್ಕೆ ಋಣಿ. ಕಾಲ ಪ್ರ.ಶ. 200-300ರ ನಡುವೆ.


ವಿಷ್ಣುಧರ್ಮೋತ್ತರ ಉಪಪುರಾಣ[ಸಂಪಾದಿಸಿ]

ವಿಶ್ವಕೋಶಲಕ್ಷಣವುಳ್ಳದ್ದು. ಖಂಡಗಳು ಮೂರು. ಇವುಗಳಲ್ಲಿ ವಿವಿಧ ಕಥೆ. ಸೃಷ್ಟಿ ವಿವರಣೆ-ಭೂಗೋಳ, ಖಗೋಳಶಾಸ್ತ್ರ, ಜ್ಯೋತಿಶ್ಶಾಸ್ತ್ರ, ಕಾಲವಿಭಾಗ, ಗ್ರಹನಕ್ಷತ್ರಶಾಂತಿ, ಶಕುನಶಾಸ್ತ್ರ, ರಾಜ ಹಾಗೂ ಋಷಿಗಳ ವಂಶಾವಳಿ, ರೂಢಿ, ಸಂಪ್ರದಾಯ, ತಪ, ಕರ್ಮಫಲ, ವ್ರತ, ಶ್ರಾದ್ಧ, ದಾನಸ್ತುತಿ, ಧರ್ಮ, ರಾಜನೀತಿ, ಯುದ್ಧವಿದ್ಯೆ, ಶರೀರಾವಯನಗಳ ವಿವರ, ಔಷಧ, ಮಾನವರ ಮತ್ತು ಪ್ರಾಣಿಗಳ ಚಿಕಿತ್ಸೆ, ಪಾಕಶಾಸ್ತ್ರ, ಸುಗಂಧದ್ರವ್ಯ ನಿರ್ಮಾಣ, ಉದ್ಯಾನಕೃಷಿ, ನೃತ್ಯ, ಕಂಠದ ಮತ್ತು ಯಂತ್ರದ ಸಂಗೀತಗಳು, ಮೂರ್ತಿ-ವರ್ಣ-ವಾಸ್ತುಶಿಲ್ಪಗಳೂ ವೈಷ್ಣವ ದೇವತಾತತ್ತ್ವ ವಿಜ್ಞಾನ-ಇವು ವಿವೃತವಾಗಿದೆ. ಕಾಲ 628-1000ಗಳ ನಡುವೆ. ಸತ್ಯಧರ್ಮಪರಾಯಣನಾದ ಅರಸನನ್ನಾಯ್ದು ಪ್ರಜೆಗಳವನಿಗೆ ಪಟ್ಟಾಭಿಷೇಕ ಮಾಡಬೇಕು. ರಾಜನ ವ್ರತ ಸುಜನರಕ್ಷಣೆಯೇ. ಅಪಹೃತವಸ್ತುಗಳನ್ನು ಕಳೆದುಕೊಂಡವರಿಗೆ ಕೊಡಿಸುವುದು ಅವನ ಆದ್ಯ ಕರ್ತವ್ಯ. ಸಂಯಮ, ದುರ್ವ್ಯಸನವರ್ಜನ, ಶಾಸ್ತ್ರಜ್ಞತೆ, ಯೋಗ್ಯಭೃತ್ಯಯೋಜಕತ್ವಗಳು ಅವನಲ್ಲಿರಬೇಕಾದ ಗುಣಗಳು. ಪ್ರಜೆಗಳಿಗೆ ಹಿತವಾದದ್ದು ರಾಜನಿಗೆ ಪ್ರಿಯ. ರಾಜನಂತೆ ಪ್ರಜೆಗಳು ಇರುತ್ತಾರೆ. ಉಪೇಕ್ಷೆ, ಮಾಯಾ, ಇಂದ್ರಜಾಲ, ಸಾಮ, ದಾನ, ಭೇದ, ದಂಡ, ಸಪ್ತೋಪಾಯಗಳು, ದಂಡನೆಯಲ್ಲಿ ಸ್ವದೇಶೀಯ-ವಿದೇಶೀಯ ಎಂಬ ಭೇದಗಳು, ವಿದೇಶೀಯ ಅಪರಾಧಿಗಳ ಶಿಕ್ಷೆ ಗುಪ್ತ ಅಥವಾ ಪ್ರಕಟವೆಂಬ ಭೇದಗಳು, ಪ್ರಭು, ಮಂತ್ರ, ಉತ್ಸಾಹ ದಿವ್ಯಶಕ್ತಿಗಳು ರಾಜನಲ್ಲಿರಬೇಕು. ರಾಜ ಶತ್ರುವಿಗೂ ನ್ಯಾಯ ತೋರಿಸಬೇಕು. ಧರ್ಮ ವಿಜಯಿಯೆನ್ನಿಸಬೇಕು-ಎಂಬೀ ಅಂಶಗಳು ವಿಷ್ಣುಧರ್ಮೋತ್ತರದ ರಾಜನೀತಿಯ ಸ್ವರೂಪಕ್ಕೆ ಉಪಲಕ್ಷಣಗಳು. ಇದರ ಹಲವು ಅಧ್ಯಾಯಗಳನ್ನು ಮತ್ಸ್ಯಮಹಾಪುರಾಣ ಎರವಲು ತೆಗೆದುಕೊಂಡಿದೆ. ಕಾಲ ಪ್ರ.ಶ. ಸು. 400-500ರ ನಡುವೆ.


ನರಸಿಂಹೋಪಪುರಾಣ[ಸಂಪಾದಿಸಿ]

ಪ್ರಾಚೀನ ವೈಷ್ಣವೋಪಪುರಾಣಗಳಲ್ಲಿ ಇದು ಗಣ್ಯ. ವ್ಯಾಸಶಿಷ್ಯ ಲೋಮಹರ್ಷಣಸೂತ ಇದನ್ನು ಪ್ರಯಾಗದಲ್ಲಿ ಭಾರದ್ವಾಜಾದಿ ಋಷಿಗಳಿಗೆ ಹೇಳಿದನೆನ್ನಲಾಗಿದೆ. ನರಸಿಂಹಸ್ತೋತ್ರ, ಸಾಂಖ್ಯಸೃಷ್ಟಿವಿವರಣೆ, ಕಾಲವಿಭಾಗ, ಬ್ರಹ್ಮೋತ್ಪತ್ತಿ, ರುದ್ರಸಂಭವ, ದಕ್ಷದಂಪತೀಸೃಷ್ಟಿ, ಸ್ವಾಯಂಭುವ ಜನನ, ಮರೀಚ್ಯಾದಿ ದಶಋಷಿಗಳ ಹುಟ್ಟು, ಋಷಿಸೃಷ್ಟಿ, ದಕ್ಷಸುತಾ ಸಂತಾನ, ಸಂಸಾರವೃಕ್ಷ ವರ್ಣನೆ, ಮುಕ್ತಿಕರವಾದ ವಿಷ್ಣುಬ್ರಹ್ಮರ ಧ್ಯಾನ, ಅಷ್ಟಾಕ್ಷರೀಜಪ, ಆದಿತ್ಯಾಷ್ಟೋತ್ತರಶತನಾಮ, ಸೂರ್ಯ ಚಂದ್ರ ವಂಶಜರ ಚರಿತ್ರೆ, ತ್ರೈಕಾಲಿಕ ಮನುಗಳು, ಮನ್ವಂತರಗಳು, ಭೂವಿವರಣೆ, ಗುರುಹಿರಿಯರ ಬಗ್ಗೆ ಮಾಡತಕ್ಕ ಕರ್ತವ್ಯ, ಬ್ರಾಹ್ಮಣಪುಜಾಪ್ರಶಂಸೆ, ನರಸಿಂಹ ದೇವಾಲಯ ರಚನೆ, ಕಲಿಯುಗದ ದುರಾಚಾರಗಳು, ವರ್ಣಾಶ್ರಮಧರ್ಮ, ಸಂನ್ಯಾಸಯೋಗ, ವೈಷ್ಣವ ಪುಣ್ಯಕ್ಷೇತ್ರಗಳ ಪ್ರಶಂಸೆ-ಮುಂತಾದ ವಿವಿಧವಿಷಯಗಳಲ್ಲಿ ಬಂದಿವೆ. ಕಾಲ ಪ್ರ.ಶ. 400-500ರ ನಡುವೆ.


ಕ್ರಿಯಾಯೋಗಸಾರ ಉಪಪುರಾಣ[ಸಂಪಾದಿಸಿ]

ಸ್ವತಂತ್ರ ಕೃತಿಯಾದರೂ ಪದ್ಮ ಮಹಾಪುರಾಣಕ್ಕೆ ಅನುಬಂಧವೆಂದು ಇದನ್ನು ಕೊಡಲಾಗಿದೆ. ಲಕ್ಮೀಪತಿಯ ವಂದನೆ, ಸೃಷ್ಟಿ ವಿವರಣೆ, ಭೂವಿವರಣೆ, ಮಧುಕೈಟಭರ ವಧೆ, ಕ್ರಿಯಾಯೋಗ ಪ್ರಶಂಸೆ, ಗಂಗಾಪ್ರಶಂಸೆ, ಗಂಗಾಯಾತ್ರೆಯ ವಿಧಿ, ವಿಷ್ಣುಪೂಜೆ, ವೈಷ್ಣವ ನಿತ್ಯ ಕರ್ಮ, ಮುದ್ರಾಪ್ರಶಂಸೆ, ವಿಷ್ಣುನೈವೇದ್ಯ, ಏಕಾದಶೀವ್ರತ, ತುಲಸೀಪೂಜೆ, ಧಾತ್ರೀಪ್ರಶಂಸೆ-ಮುಂತಾದುವು ಇದರ ವಿಷಯಗಳು. ಕಾಲ ಪ್ರ.ಶ. 9-10ನೆಯ ಶತಮಾನದ ಅಂತ್ಯ ಮತ್ತು ಹತ್ತನೆಯ ಶತಮಾನದ ಆದಿಗಳ ನಡುವೆ.


ಆದ್ಯುಪಪುರಾಣ[ಸಂಪಾದಿಸಿ]

ಆದ್ಯುಪಪುರಾಣಗಳೆರಡಿವೆ. ಇವುಗಳಲ್ಲಿ ವೈಷ್ಣವ ಸಂಪ್ರದಾಯದ ಪ್ರಾಚೀನ ಆದ್ಯುಪಪುರಾಣ ಸಿಕ್ಕಿಲ್ಲ. ಅದರಲ್ಲಿ ನಾಲ್ಕು ವರ್ಣಗಳವರಿಗೆ ಯೋಗ್ಯವಾದ ಸ್ಥಳ, ಸಾಂಪ್ರದಾಯಕ ಸದಾಚಾರ, ಜನನ, ಮರಣ, ಶುದ್ಧೀಕರಣ, ದಾನ, ವ್ರತ, ಶಕುನ-ಮುಂತಾದ ವಿಷಯಗಳಿದ್ದವೆಂದು ಅನ್ಯಗ್ರಂಥಗಳಿಂದ ತಿಳಿದುಬರುತ್ತದೆ. ಅರ್ವಾಚೀನ ಆದ್ಯುಪಪುರಾಣ ಮುದ್ರಿತವಾಗಿದೆ. ಇದರಲ್ಲಿ ಕೃಷ್ಣಚರಿತಾಮೃತ ವಿಸ್ತಾರವಾಗಿ ಬಂದಿದೆ. ಕಾಲ ಪ್ರ.ಶ. 600.


ನಾರದೀಯೋಪಪುರಾಣ[ಸಂಪಾದಿಸಿ]

ನಾರದೀಯ ಮಹಾಪುರಾಣ ಮತ್ತು ಬೃಹನ್ನಾರದೀಯ ಉಪಪುರಾಣಗಳಿಂದ ಭಿನ್ನ. ಇದರಲ್ಲಿ ಉದಾತ್ತಚರಿತನೆನ್ನಲಾದ ರುಕ್ಮಾಂಗದರಾಯನ ಕಥೆಯನ್ನು 40 ಅಧ್ಯಾಯಗಳಲ್ಲಿ ಹೇಳಲಾಗಿದೆ.


ಬ್ರಹ್ಮೋತ್ತರ ಉಪಪುರಾಣ[ಸಂಪಾದಿಸಿ]

ಬ್ರಹ್ಮಮಹಾಪುರಾಣದ ಉತ್ತರಖಂಡ. 3000 ಶ್ಲೋಕಗಳಲ್ಲಿ ಮಾರವಾಡದಲ್ಲಿರುವ ಬಾನಾಸ್ ಅಥವಾ ಬಲಜಾ ಎಂಬ ನದಿಯ ಮಹಾತ್ಮ್ಯವನ್ನು ಬಣ್ಣಿಸುತ್ತದೆ. ಇದು ಬ್ರಹ್ಮಪುರಾಣದಲ್ಲಿ ಪ್ರಕ್ಷಿಪ್ತವಾದ ಗ್ರಂಥ.


ಸೌರೋಪಪುರಾಣ[ಸಂಪಾದಿಸಿ]

ಕೆಲವೊಮ್ಮೆ ಆದಿತ್ಯಪುರಾಣವೆನ್ನುತ್ತಾರೆ. ಆದರೆ ಇದರಿಂದ ಭಿನ್ನವಾದ ಇನ್ನೊಂದು ಆದಿತ್ಯಪುರಾಣವಿದೆಯೆಂದು ತಿಳಿದುಬಂದಿದೆ. ಇದು ಬ್ರಹ್ಮಮಹಾ ಪುರಾಣದ ಖಿಲ ಅಥವಾ ಅನುಬಂಧ. ಕಾಲ 1230-50ರ ನಡುವೆ. ಲಿಂಗಪುಜಾವಿಧಿ ಯನ್ನು ಹೇಳುತ್ತದೆ. ಇಲ್ಲಿ ಶಿವನೂ ಸೂರ್ಯನೂ ಒಂದೇ. ಕೆಲ ಅಧ್ಯಾಯಗಳಲ್ಲಿ ರಾಜರ ವಂಶಾವಳಿಯನ್ನು ಕೊಡಲಾಗಿದೆ. ಯದುವಂಶಚರಿತೆಯನ್ನು ಹೇಳುವಾಗ ಊರ್ವಶೀ ಕಥೆಯ ಒಂದು ಪಾಠವಿಲ್ಲಿ ಸಿಗುತ್ತದೆ. ವೇದಾಂತದಂತೆ ವಿಶ್ವಾತ್ಮನೆಂದು ಹೇಳಿ, ಸಾಂಖ್ಯಾನು ಸಾರವಾಗಿ ಪ್ರಕೃತಿಯನ್ನು ಇದು ಜಗತ್ತಿನ ಉಪಾದಾನಕಾರಣವೆನ್ನುತ್ತದೆ. ಇದರಲ್ಲಿ ಮಧ್ವಸಿದ್ಧಾಂತದ ಖಂಡನೆಗೆ 3 ಅಧ್ಯಾಯಗಳು ಮೀಸಲಾಗಿವೆ. ಇದಲ್ಲದೆ ಪ್ರ.ಶ. 950ರ ಈಚೆಗಿನ ಪಾಶುಪತ ಸಂಪ್ರದಾಯದ ಇನ್ನೊಂದು ಸೌರೋಪಪುರಾಣವೂ ಇದೆ.


ದೇವೀಭಾಗವತ ಉಪಪುರಾಣ[ಸಂಪಾದಿಸಿ]

ಇದಕ್ಕೆ ದೇವೀಭಾಗವತ, ಶ್ರೀ ಭಗವತೀ ಪುರಾಣ ವೆಂದು ಎರಡು ಹೆಸರು. ಮೊದಲಿನದರ ಭಾಗಗಳನ್ನು ಅಂಶಗಳೆನ್ನುತ್ತಿದ್ದರು. ಅವನ್ನೀಗ ಸ್ಕಂಧಗಳೆನ್ನುತ್ತಾರೆ. ದೇವಿಯ ಪರಾಕ್ರಮ, ಸ್ತೋತ್ರ, ಪೂಜೆಗಳು ಇದರ ವಸ್ತು. ಕಾಲ ಪ್ರ.ಶ. 7ರಿಂದ 11ನೆಯ ಶತಮಾನದವರೆಗೂ ಹೋಗುತ್ತದೆ.


ಭವಿಷ್ಯೋತ್ತರ ಉಪಪುರಾಣ[ಸಂಪಾದಿಸಿ]

ಮತ್ಸ್ಯಮಹಾಪುರಾಣದ ಪ್ರಕಾರ ಒಂದು ಉಪಪುರಾಣ. ಕೆಲ ಹಳೆಯ ದಿವ್ಯ ಮಾನುಷ ಕಥೆಗಳೂ ಧರ್ಮಾಚಾರದ ವಿವರಗಳೂ ಇದರ ವಸ್ತು. ಭವಿಷ್ಯಮಹಾಪುರಾಣದ ಅನುಬಂಧ. ಅಸಂಖ್ಯ ಮಾಹಾತ್ಮ್ಯಗಳೂ ಇತರ ಆಧುನಿಕ ಪಠ್ಯಗಳೂ ಭವಿಷ್ಯ ಭವಿಷ್ಯೋತ್ತರಗಳ ಅಂಗಗಳೆಂದುಕೊಳ್ಳುತ್ತವೆ.


ಶಿವೋಪಪುರಾಣ[ಸಂಪಾದಿಸಿ]

ದೊಡ್ಡ ಉಪಪುರಾಣಗಳಲ್ಲೊಂದು. ಶಿವೋತ್ತಮತ್ವವನ್ನೂ ದಾನಧರ್ಮವನ್ನೂ ಬೋಧಿಸುತ್ತದೆ. ಹಿಂದೆ ಒಂದು ಲಕ್ಷ ಶ್ಲೋಕಗಳಿದ್ದವೆಂದೂ ಆಗ ಇದು ಮಹಾಪುರಾಣವೆನ್ನಿಸಿತ್ತೆಂದೂ ಹೇಳಲಾಗಿದೆ. ಇದರ ವಾಯವೀಯ ಸಂಹಿತೆಯ ಶ್ಲೋಕ ಸಂಖ್ಯೆ ನಾಲ್ಕು ಸಾವಿರ. ಶಿವೋತ್ತಮತ್ವವನ್ನು ಹೇಳುವಾಗ ಇದರಲ್ಲಿ ಶಿವಪೂಜೆ, ಲಿಂಗಪುಜಾವಿಧಾನ, ಉಪವಾಸ, ಹಬ್ಬ, ಸಹಸ್ರನಾಮಗಳು ಬರುತ್ತವೆ. ಗಾತ್ರ ದೊಡ್ಡದು. ವಸ್ತುಸಂವಿಧಾನದಲ್ಲಿ ಏಕಸೂತ್ರತೆಯಿಲ್ಲ. ಅತಿಶಯೋಕ್ತಿಗಳಿಂದ ಇದು ಭೂಮಿ ಸ್ವರ್ಗಗಳನ್ನು ಬಣ್ಣಿಸುತ್ತದೆಯಲ್ಲದೆ ತಾಂತ್ರಿಕ ಆಚಾರಗಳನ್ನೂ ವಿವರಿಸುತ್ತದೆ.


ಶಿವಧರ್ಮೋಪಪುರಾಣ[ಸಂಪಾದಿಸಿ]

ಶಿವಧರ್ಮವೆಂಬುದೊಂದು ಉಪ ಪುರಾಣ. ಶಿವಧರ್ಮೋತ್ತರ ಇದರ ಉತ್ತರಭಾಗವೆಂದು ಹೇಳಿಕೊಳ್ಳುತ್ತದೆ. ಶಿವಧರ್ಮೋತ್ತರವನ್ನು 12000 ಶ್ಲೋಕಗಳಲ್ಲಿ ಕುಮಾರ ಅಗಸ್ತ್ಯಋಷಿಗೆ ಹೇಳಿದನಂತೆ. ಅಗಸ್ತ್ಯಋಷಿ ಅದರ ಸಾರವನ್ನು 12 ಅಧ್ಯಾಯಗಳಲ್ಲಿ ಸಂಗ್ರಹಿಸಿದಂತೆ. ಶಿವಧರ್ಮವನ್ನು ಮೊದಲು ಪಾರ್ವತಿ, ಷಣ್ಮುಖ, ನಂದಿಕೇಶ್ವರ ಮತ್ತು ಇತರರಿಗೆ ಶಿವ ಹೇಳಿದನೆಂಬ ಉಲ್ಲೇಖವಿದೆ.


ಏಕಾಮ್ರಪುರಾಣ, ಯುಗಪುರಾಣ, ಗಣೇಶಪುರಾಣ, ಚಂಡಿಕಾಪುರಾಣ, ಸ್ವಲ್ಪ ಮತ್ಸ್ಯಪುರಾಣ ಮುಂತಾದ ಎಷ್ಟೋ ಉಪಪುರಾಣಗಳೂ ಸಿಗುತ್ತವೆ. ಇವುಗಳಲ್ಲದೆ ನಿಬಂಧಾದಿ ಗ್ರಂಥಗಳ ಉಲ್ಲೇಖಗಳಿಂದ ಅನುಪಲಬ್ಧವಾದ ಹಲವು ಉಪಪುರಾಣಗಳ ಹೆಸರುಗಳೂ ಅವುಗಳಲ್ಲಿಯ ಕೆಲ ವಿಷಯಗಳೂ ತಿಳಿದುಬರುತ್ತವೆ.