ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಸಿಟೋನ್

ವಿಕಿಸೋರ್ಸ್ದಿಂದ

ಅಸಿಟೋನ್

ಆಲಿಫ್ಯಾಟಿಕ್ ಕೀಟೋನುಗಳಲ್ಲಿ ಇದು ಮೊದಲನೆಯದು. ಇದರ ಸೂತ್ರ CH3COCH3. ಎರಡು ಮಿಥೈಲ್ ಗುಂಪುಗಳು ಕಾರ್ಬನಿಲ್ ಅಥವಾ ಕೀಟೋ ಗುಂಪಿಗೆ ಸೇರಿವೆ. ಇದು ರಕ್ತದಲ್ಲಿ ಮತ್ತು ಸಾಮಾನ್ಯ ಮೂತ್ರದಲ್ಲಿ ಲೇಶ ಮಾತ್ರ ಇರುವುದೆಂದು ತಿಳಿದಿದೆ. ಸಿಹಿ ಮೂತ್ರ ರೋಗದಿಂದ (ಡಯಾಬಿಟೀಸ್ ಮೆಲಿಟಸ್) ನರಳುವವರ ಮೂತ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಸಿಟೋನು ಇರುವುದು. ಹದಗೆಟ್ಟ ಮೆಟಬಾಲಿಸಂನಲ್ಲಿ ಉತ್ಪತ್ತಿಯಾದ ಸಂಯುಕ್ತಗಳು ಸಂಪೂರ್ಣವಾಗಿ ಉತ್ಕರ್ಷಣ ಹೊಂದದೆ ಕೀಟೋನು ಉತ್ಪತ್ತಿಯಾಗಿ ರಕ್ತ ಮತ್ತು ಮೂತ್ರಗಳಲ್ಲಿ ಶೇಖರವಾಗುವುವು. ಹೀಗೆ ಕೀಟೋನು ಶೇಖರವಾಗುವ ಸ್ಥಿತಿಗೆ ಕೀಟೋನೂರಿಯ ಎಂದು ಹೇಳುವರು. ಇವುಗಳಲ್ಲಿ ಅಸಿಟೊ ಅಸಿಟಿಕ್ ಆಮ್ಲ, (- ಹೈಡ್ರಾಕ್ಸಿ ಬ್ಯೂಟರಿಕ್ ಆಮ್ಲ ಮುಂತಾದವುಗಳು ಇರುವುವು. ಕಟ್ಟಿಗೆ, ಸೆಲ್ಯುಲೋಸು ಮತ್ತು ಸಕ್ಕರೆ ಇವುಗಳ ವಿಧ್ವಂಸಕ ಭಟ್ಟಿಯಿಂದ ಉತ್ಪತ್ತಿಯಾಗುವ ಸಂಯುಕ್ತಗಳಲ್ಲಿ ಇದೂ ಒಂದು. ಅಶುದ್ಧ ವುಡ್‍ಸ್ಪಿರಿಟ್ ಎಂಬ ಮಿಥೈಲ್ ಆಲ್ಕೋಹಾಲಿನಲ್ಲಿ ಇದು ಇದೆ. ಭಿನ್ನಾಂಕ ಬಟ್ಟಿಯಿಂದ (ಫ್ರಾಕ್ಷನಲ್ ಡಿಸ್ಟಿಲೇಷನ್) ವುಡ್‍ಸ್ಪಿರಿಟ್‍ನಿಂದ ಅಸಿಟೋನನ್ನು ಹೆಚ್ಚು ಪ್ರಮಾಣಗಳಲ್ಲಿ ಪಡೆಯಬಹುದು. ಕ್ಯಾಲ್ಸಿಯಂ ಅಸಿಟೇಟಿನ ಶುಷ್ಕ ಬಟ್ಟಿಯಿಂದಲೂ ಅಸಿಟೋನನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯುವರು. ಒತ್ತರಿಸಿದ ಬೇರಿಯಂ ಕಾರ್ಬನೇಟ್ ಮತ್ತು ಪ್ಯೂಮೀಸ್ ಕಲ್ಲು ಇವುಗಳ ಮಿಶ್ರಣವಿರುವ ತಿರುಗುವ ಕಬ್ಬಿಣದ ಉರುಳೆಯನ್ನು (ಸಿಲಿಂಡರ್) 500-600 ಸೆ. ಉಷ್ಣತೆಯಲ್ಲಿ ಕಾಯಿಸಿ ಇದರ ಮೂಲಕ ಅಸಿಟಿಕ್ ಆಮ್ಲದ ಆವಿಯನ್ನು ಹಾಯಿಸಿದಾಗ ಅಸಿಟೋನು, ನೀರು ಉಂಟಾಗುವುವು. ಅಸಿಟೋನು, ನೀರು ಮತ್ತು ಉಳಿದ ಅಸಿಟಿಕ್ ಆಮ್ಲ ಇವುಗಳ ಆವಿಯನ್ನು ತಂಪು ಮಾಡುವ ಪಾತ್ರೆಯಲ್ಲಿ ಹಾಯಿಸಿದರೆ ಅಸಿಟಿಕ್ ಆಮ್ಲ, ನೀರು ತಂಪಾಗಿ ಶೇಖರವಾಗುವುವು. ಇನ್ನೂ ಆವಿ ರೂಪದಲ್ಲಿರುವ ಅಸಿಟೋನು ಇನ್ನೊಂದು ಪಾತ್ರೆಗೆ ಹಾಯಿಸಿ ತಂಪು ಮಾಡಿದರೆ ಅಸಿಟೋನ್ ದ್ರವ ಉಂಟಾಗುವುದು. ಸೋಡಿಯಂ ಬೈಸಲ್ಫೈಟನ್ನು ಬಳಸಿ ಅಸಿಟೋನನ್ನು ಶುದ್ಧೀಕರಿಸಬಹುದು. ಉತ್ತರ ಅಮೆರಿಕದಲ್ಲಿ ಬೆಂಜಿûೀನು ಮಾತ್ರ ಪ್ರೊಪಿಲೀನ್ ಇವುಗಳಿಂದ 60%ರಷ್ಟು ಫಿನಾಲನ್ನು ತಯಾರಿಸುವಾಗ 30%ರಷ್ಟು ಉಪಸಂಯುಕ್ತವಾಗಿ ಅಸಿಟೋನ್ ಉತ್ಪತ್ತಿಯಾಗುವುದು. ಫಾಸ್‍ಫಾರಿಕ್ ಆಮ್ಲದ ಸಂಪರ್ಕದಲ್ಲಿ ಬೆಚಿಜಿûೀನು ಮತ್ತು ಪ್ರೊಪಿಲೀನ್ ಸಂಯೋಜಿಸಿ ಕ್ಯುಮೀನ್ ಬರುವುದು. ಇದನ್ನು ಉತ್ಕರ್ಷಿಸಿ ದುರ್ಬಲ ಗಂಧಕಾಮ್ಲದ ಸಂಪರ್ಕದಲ್ಲಿ ಕೆಳಗಿನ ಉಷ್ಣತೆಯ ಮಟ್ಟದಲ್ಲಿ ಬೆಚ್ಚಗೆ ಮಾಡಿದಾಗ ಫಿನಾಲ್ ಮತ್ತು ಅಸಿಟೋನ್ ಉತ್ಪತ್ತಿಯಾಗುವುವು.

ಚಿತ್ರ-1-ಅಸಿಟೋನ್-ಉತ್ಪತ್ತಿ

ಕಟ್ಟಿಗೆಯ ವಿಧ್ವಂಸಕ ಬಟ್ಟಿಯಿಂದ ಬರುವ ಪೈರೊಲಿಗ್ನಿಯಸ್ ಆಮ್ಲದಲ್ಲಿ 0.5%ರಷ್ಟು ಅಸಿಟೋನು ಇರುವುದು. ಮೊದಲು ಅಸಿಟಿಕ್ ಆಮ್ಲವನ್ನು ಬೇರ್ಪಡಿಸಿ ಅಸಿಟೋನು ಮತ್ತು ಮೀಥೈಲ್ ಆಲ್ಕೋಹಾಲ್ ಇವುಗಳನ್ನು ಭಿನ್ನಾಂಕ ಬಟ್ಟಿಯಿಂದ ಬೇರ್ಪಡಿಸುವರು. 1914-18ರ ಮಹಾಯುದ್ಧದ ಸಮಯದಲ್ಲಿ ಮುಸುಕಿನಜೋಳ ಆಲೂಗಡ್ಡೆ ಇವುಗಳನ್ನು, ಫರ್ನ್‍ಬ್ಯಾಕ್ ಬ್ಯಾಸಿಲನ್ ಸಹಾಯದಿಂದ 30-35 ಸೆ. ಉಷ್ಣತೆಯಲ್ಲಿ ಅನೆರೋಬಿಕ್ ರೀತಿಯಲ್ಲಿ (ಆಕ್ಸಿಜನ್ನಿನ ಸಹಾಯವಿಲ್ಲದೆ ಹುಳಿ ಹಿಡಿಯುವುದು) ಹುಳಿ ಹಿಡಿಸಿದಾಗ ಟಿ-ಬ್ಯೂಟೈಲ್ ಆಲ್ಕೋಹಾಲ್, ಈಥೈಲ್ ಆಲ್ಕೋಹಾಲ್ ಮತ್ತು ಅಸಿಟೋನು ಇವುಗಳು ಕ್ರಮವಾಗಿ 6:1:3ರ ಪ್ರಮಾಣದಲ್ಲಿ ಉತ್ಪತ್ತಿಯಾದುವು. 1911ರಲ್ಲಿ ವೈeóïಮನ್ ಎಂಬಾತ ಕಂಡುಹಿಡಿದ ವಿಧಾನದಿಂದ ಭಾರತದಲ್ಲಿ ಸಿ ಅಸಿಟೊ ಬ್ಯೂಟೈಲಿಕಮ್‍ನಿಂದ ಕಾಟೆಬೆಲ್ಲವನ್ನು ಹುಳಿ ಹಿಡಿಸಿ ಟಿ-ಬ್ಯೂಟೈಲ್ ಆಲ್ಕೋಹಾಲ್ ಮತ್ತು ಅಸಿಟೋನು ಇವುಗಳನ್ನು ಉತ್ಪತ್ತಿಮಾಡಿ ಬೇರ್ಪಡಿಸುವರು. 400 ಸೆ. ನಲ್ಲಿ ಸತುವಿನ ಆಕ್ಸೈಡ್‍ನ ಮೇಲೆ ಅಸಿಟಿಲೀನ್ ಮತ್ತು ನೀರಾವಿಗಳನ್ನು ಹಾಯಿಸಿದಾಗ ಅಸಿಟೋನು ಉಂಟಾಗುವುದು. ಮಕ್ರ್ಯೂರಿಕ್ ಲವಣಗಳ ಸಂಪರ್ಕದಲ್ಲಿ ಮೀಥೈಲ್ ಅಸಿಟಿಲೀನ್ ನೀರಿನೊಡನೆ ವರ್ತಿಸಿ ಅಸಿಟೋನನ್ನು ಕೊಡುವುದು.

ಚಿತ್ರ-2

56.1 ಸೆ. ಉಷ್ಣತೆಯಲ್ಲಿ ಕುದಿಯುವ ಬಣ್ಣರಹಿತ ದ್ರವ. ಸ್ವಲ್ಪ ಆರೊಮ್ಯಾಟಿಕ್ ವಾಸನೆಯನ್ನು ಹೊಂದಿರುವುದು. ನೀರು, ಆಲ್ಕೋಹಾಲ್ ಮತ್ತು ಈಥರ್ ಇವುಗಳಲ್ಲಿ ಎಲ್ಲ ಪ್ರಮಾಣಗಳಲ್ಲಿಯೂ ವಿಲೀನವಾಗುವುದು. ಇದರ ಸಾಪೇಕ್ಷ ಸಾಂದ್ರತೆ 0.7915. 10% ಮೀಥೈಲ್ ಆಲ್ಕೋಹಾಲಿನಲ್ಲಿ ಇದು ನಿಯತವಾಗಿ ಕುದಿಯುವ ಮಿಶ್ರಣ (ಕಾನ್ಸ್‍ಟೆಂಟ್ ಬಾಯ್‍ಲಿಂಗ್ ಮಿಕ್‍ಶ್ಚರ್). ಇದನ್ನು ಮೀಥೈಲ್ ಆಲ್ಕೋಹಾಲಿನಿಂದ ಬೇರ್ಪಡಿಸುವುದು ಸ್ವಲ್ಪ ಕಷ್ಟ. ಅಸಿಟೋನು ಹೈಡ್ರೊಜನ್ ಸಯನೈಡಿನೊಡನೆ ವರ್ತಿಸಿ ಅಸಿಟೋನ್ ಸಯನೊ ಹೈಡ್ರಿನ್‍ನನ್ನು ಕೊಡುವುದು. ಅದೇ ರೀತಿ ಸೋಡಿಯಂ ಬೈಸಲ್ಫೇಟ್ ಉಂಟಾಗುವುದು. ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣದಲ್ಲಿ ಅಸಿಟೋನು ಕ್ಲೋರಿನ್‍ನೊಡನೆ ವರ್ತಿಸಿ ಕ್ಲೋರೊಫಾರಂಗಳನ್ನು ಕೊಡುವುದು. ಇದೇ ರೀತಿ ಬ್ರೋಮೊಫಾರಂ ಮತ್ತು ಅಯಡೊಫಾರಂಗಳನ್ನು ತಯಾರಿಸಬಹುದು. ಅಸಿಟೋನನ್ನು ಪ್ಲಾಟಿನಂ ಮತ್ತು ಹೈಡ್ರೋಜನ್ ಸಮಪರ್ಕದಲ್ಲಿ ಅಪಕರ್ಷಿಸಿದಾಗ ಐಸ್‍ಪ್ರೊಪೈಲ್ ಆಲ್ಕೋಹಾಲ್ ಉಂಟಾಗುವುದು. ಆದರೆ ಸೋಡಿಯಂ ಅಮಾಲ್ಗಮ್ಮಿನ ಸಂಪರ್ಕದಲ್ಲಿ ಪಿನ್‍ಕಾಲ್ ಉಂಟಾಗುವುದು.

ಚಿತ್ರ-3-ಪಿನಾಕಲ್-ಉತ್ಪತ್ತಿ

ಆಲ್ಡಿಹೈಡು ಆಲ್ಕೋಹಾಲಿನೊಡನೆ ವರ್ತಿಸುವ ಹಾಗೆ ಅಸಿಟೋನು ವರ್ತಿಸುವುದಿಲ್ಲ. ಆದರೆ ಥಯೊ ಆಲ್ಕೋಹಾಲಿನೊಡನೆ ವರ್ತಿಸಿ ಥಯೊಕಿಟಾಲ್ ಕೊಡುವುದು.

ಚಿತ್ರ-4-ಥಯೋಕಿಟಾಲ್-ಉತ್ಪತ್ತಿ

ಹೈಡ್ರಾಕ್ಸಿಲಮೀನ್, ಫಿನೈಲ ಹೈಡ್ರಜೀóನ್ ಇವುಗಳೊಡನೆ ಅಸಿಟೋನ್ ವರ್ತಿಸಿ ಕ್ರಮವಾಗಿ ಅಸಿಟೋನಾಕ್ಸಿಮ್ ಮತ್ತು ಅಸಿಟೋನ್ ಫಿನೈಲ್ ಹೈಡ್ರಜೋನ್ ಘನ ಸಂಯುಕ್ತಗಳನ್ನು ಕೊಡುವುದು. ಈ ಘನಸಂಯುಕ್ತಗಳಿಗೆ ನಿರ್ದಿಷ್ಟ ಕರಗುವ ಬಿಂದುಗಳಿರುವುದರಿಂದ ಅಸಿಟೋನನ್ನು ಗುರುತಿಸಬಹುದು. ಆಲ್ಡಿಹೈಡಿನ ಹಾಗೆ ಇದು ಪೊಲಿಮರೈಜ್ (ಸಂಘಟಿತ ಅಣುಗಳಿಂದ ದೊಡ್ಡ ಅಣುವಾಗುವ ಸ್ಥಿತಿಗೆ ಪೊಲಿಮರೈಜೇಷನ್ ಎಂದು ಹೆಸರು) ಆಗುವುದಿಲ್ಲ. ಆಲ್ಡಿಹೈಡನ್ನು ಉತ್ಕರ್ಷಿಸಿದಾಗ ಆಲ್ಡಿಹೈಡು ಛಿದ್ರವಾಗದೆ ಸಮಾನ ಇಂಗಾಲದ ಪರಮಾಣುಗಳುಳ್ಳ ಆಮ್ಲ ಉತ್ಪತ್ತಿಯಾಗುವುದು. ಆದರೆ ಕಿಟೋನ್‍ಗಳು ಉತ್ಕರ್ಷಿಸಿದಾಗ ಛಿದ್ರವಾಗಿ ಕಡಿಮೆ ಸಂಖ್ಯೆಯ ಇಂಗಾಲದ ಪರಮಾಣುಗಳುಳ್ಳ ಆಮ್ಲ ಉಂಟಾಗುವುದು. ಅಲ್ಯೂಮಿನಿಯಮ್ ಟರ್ಷರಿ ಬ್ಯೂಟಾಕ್ಸೈಡ್, ಸೆಕೆಂಡರಿ ಆಲ್ಕೋಹಾಲ್ ಮತ್ತು ಅತ್ಯಧಿಕ ಪ್ರಮಾಣದಲ್ಲಿ ಅಸಿಟೊನ್ ಇವುಗಳ ಮಿಶ್ರಣವನ್ನು ಕಾಯಿಸಿದಾಗ ಆಲ್ಕೋಹಾಲ್ ಉತ್ಕರ್ಷಣ ಹೊಂದಿ ಕೀಟೋನ್ ಆಗುವುದು. ಸೆಕೆಂಡರಿ ಆಲ್ಕೊಹಾಲಿನ ಎರಡು ಹೈಡ್ರೋಜನ್ನಿನ ಪರಮಾಣುಗಳು ಅಸಿಟೋನ್‍ನನ್ನು ಕೂಡಿಕೊಂಡು ಐಸೊಪ್ರೊಪೈಲ್ ಆಲ್ಕೋಹಾಲಾಗಿ ಪರಿವರ್ತಿತವಾಗುವುದು. ಇದಕ್ಕೆ ಅದನ್ನು ಕಂಡುಹಿಡಿದ (1937) ವಿಜ್ಞಾನಿಯ ಹೆಸರಿನಿಂದ ಓಪೆನಾಯರ್ [ಔಠಿಠಿeಟಿಚಿueಡಿ] ರಾಸಾಯನಿಕ ಕ್ರಿಯೆಯೆಂದು ಹೇಳುತ್ತಾರೆ.

ಚಿತ್ರ-5-ಒಪೆನಾಯರ್-ಕ್ರಿಯೆ

ಸೆಕೆಂಡರಿ ಆಲ್ಕೋಹಾಲಿನ ಅಣುಗಳ ಇಂಗಾಲಗಳು ಅಪರ್ಯಾಪ್ತ ಅಥವಾ ಅಪೂರ್ತವಾಗಿದ್ದರೂ ತೊಂದರೆ ಇಲ್ಲದೆ ಆಲ್ಕೋಹಾಲನ್ನು ಉತ್ಕರ್ಷಿಸಿ ಕೀಟೋನನ್ನು ಪಡೆಯಬಹುದು. ಶುಷ್ಕ ಹೈಡ್ರೊಜನ್ ಸಂಪರ್ಕದಲ್ಲಿ ಎರಡು ಅಸಿಟೊನ್ ಅಣುಗಳು ವರ್ತಿಸಿ ಮೆಸಿಟೈಲ್ ಆಕ್ಸೈಡ್‍ನ್ನು ಕೊಡುವುವು. ಇದು ಸಂಯುಕ್ತ ಆಕ್ಸೈಡ್ ಅಲ್ಲ; ಹಾಗೆಂದು ತಪ್ಪಾಗಿ ಕರೆಯುವರು. ಸರಿಯಾದ ಹೆಸರು (, ( ಅಪರ್ಯಾಪ್ತ ಕೀಟೋನ್.

ಚಿತ್ರ-6

1310 ಸೆ. ಉಷ್ಣತೆಯಲ್ಲಿ ಕುದಿಯುವ ಈ ಬಣ್ಣರಹಿತ ಆಕ್ಸೈಡಿಗೆ ಪೆಪರ್‍ಮಿಂಟಿನ ವಾಸನೆ ಇದೆ. ಮೂರು ಅಸಿಟೋನು ಅಣುಗಳು ಕೂಡಿ ಫೋರಾನ್ ಎಂಬ ಸಂಯುಕ್ತ ವಸ್ತುವನ್ನು ಕೊಡುವುದು. ಈ ಸಂಯುಕ್ತ ವಸ್ತು ಮತ್ತು ಕ್ಯಾಂಪರ್ ಇವುಗಳಲ್ಲಿ ಸಂಘಟಿತ ಮೂಲವಸ್ತುಗಳ ಪರಮಾಣುಗಳ ಪ್ರಮಾಣ [ಎಂಪಿರಿಕಲ್ ಫಾರ್ಮುಲ] ಒಂದೇ ಆಗಿರುವುದರಿಂದ [Cam PHOR+acetONE=PEORONE] ಫೋರೋನ್ ಎಂದು ಕರೆಯುವರು. ಬೇರಿಯಮ್ ಹೈಡ್ರಾಕ್ಸೈಡಿನ ಸಂಪರ್ಕದಲ್ಲಿ ಅಸಿಟೋನನ್ನು ಕಾಯಿಸಿದಾಗ ಎರಡು ಅಸಿಟೋನ್ ಅಣುಗಳು ಕೂಡಿ 166 ಸೆ. ಉಷ್ಣತೆಯಲ್ಲಿ ಕುದಿಯುವ ಡೈ ಅಸಿಟೋನ್ ಆಲ್ಕೋಹಾಲ್ ಉಂಟಾಗುವುದು.

ಚಿತ್ರ-7

ಷಿಫ್ಸ್ ದ್ರಾವಣ, ಫೆಲಿಂಗ್ ದ್ರಾವಣ ಮತ್ತು ಟಾಲ್ಲೆನ್ ದ್ರಾವಣಗಳೊಡನೆ ಅಸಿಟೊನ್ ವರ್ತಿಸುವುದಿಲ್ಲ. ಷಿಫ್ಸ್ ದ್ರಾವಣ, [Schiff's solution], ಫೆಲಿಂಗ್ ದ್ರಾವಣ [Fehling solution], ಟಾಲ್ಲೆನ್ ದ್ರಾವಣ[Tollen's solutions], ಸೋಡಿಯಂ ನೈಟ್ರೋಪ್ರಸ್ಸೈಡಿನೊಡನೆ ವರ್ತಿಸಿ ಮಾಸಲು ಊದಾ ಬಣ್ಣವನ್ನು ಕೊಡುವುದು. ಅಯನೋನ್ ಪರಿಮಳ ವಸ್ತುವಿನ ತಯಾರಿಕೆಯಲ್ಲಿ ಇದನ್ನು ಬಳಸುವರು. ಮತ್ತು ನಿದ್ರೆ ಬರಿಸುವ ಸಲ್ಫೋನಾಲ್ ಸಂಯುಕ್ತದ ತಯಾರಿಕೆಯಲ್ಲಿಯೂ ಉಪಯೋಗಿಸುವರು. ಕಾರ್ಡೈಟ್ ಎಂಬ ಹೊಗೆ ಆಡದ ಸಿಡಿಮದ್ದಿನ ತಯಾರಿಕೆಯಲ್ಲಿ, ಛಿದ್ರವಾಗದ ಪ್ಲಾಸ್ಟಿಕ್ ಆದ ಮಿಥೈಲ್ ಮಿಥಾ ಅಕ್ರಿಲೇಟ್ ಪ್ಲಾಸ್ಟಿಕ್‍ನ [ಪ್ಲೆಕ್ಸಿಗ್ಲಾಸ್] ತಯಾರಿಕೆಯಲ್ಲಿ ಉಪಯೋಗಿಸುವರು. ಪ್ರಯಾಣ ಕಾಲದಲ್ಲಿ ಉಂಟಾಗುವ ದೈಹಿಕ ಆಯಾಸವನ್ನು [ಮೋಷನ್ ಸಿಕ್‍ನೆಸ್] ತಡೆಯಲು ಉಪಯೋಗಿಸುವ ಕ್ಲೋರೋಟೋನ್ ತಯಾರಿಕೆಯಲ್ಲಿ ಸಹ ಉಪಯೋಗಿಸುವರು. ಸೆಲುಲಾಯ್ಡ್ ಪ್ಲಾಸ್ಟಿಕ್‍ನಲ್ಲಿ, ಕೃತಕ ರೇಷ್ಮೆ ತಯಾರಿಕೆಯಲ್ಲಿ ವಿಲೀನಗೊಳಿಸುವ ದ್ರವವಾಗಿ [ಸಾಲ್‍ವೆಂಟ್] ಅಸಿಟೋನನ್ನು ಉಪಯೋಗಿಸುವರು.

ಚಿತ್ರ-8

ಅಸಿಟಿಲೀನ್ ಆಸ್ಫೋಟಕ ಸಂಯುಕ್ತವನ್ನು ಉರುಳೆಗಳಲ್ಲಿ ಸಾಗಿಸಲು ಅಸಿಟೋನನ್ನು ದ್ರಾವ್ಯವಾಗಿ ಉಪಯೋಗಿಸುವರು. ಕೃತಕ ನೀಲಿ ತಯಾರಿಕೆಯಲ್ಲಿ ಇದನ್ನು ಬಳಸುವರು. ಉಸಿರು ಕಟ್ಟಿದಾಗ [Dyspnoea] ಇದನ್ನು ಆಗಾಗ ಬಳಸುವರು.

(ಜಿ.ವಿ.ಸಿ.)