ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಚಣ್ಣ

ವಿಕಿಸೋರ್ಸ್ದಿಂದ

"ಆಚಣ್ಣ":- ಕಾಲ ಕ್ರಿ.ಶ.ಸು. 1195. ವರ್ಧಮಾನಪುರಾಣದ ಕರ್ತೃ. ಶಿಕಾರಿಪುರ 119, 123, 155, 192 ಮತ್ತು ಅರಸೀಕೆರೆ 77ನೆಯ ಶಾಸನಗಳಲ್ಲಿ ಹೊಗಳಿಸಿಕೊಂಡಿರುವ, ವಸುಧೈಕ ಬಾಂಧವನೆಂಬ ಬಿರುದು, ರೇಚಣಚಮೂಪ ಆಶ್ರಯದಲ್ಲಿದ್ದ. ಈತನಿಗೆ ಆಚರಾಜ ಎಂಬ ಮತ್ತೊಂದು ಹೆಸರೂ ಇದೆ. ಭಾರದ್ವಾಜ ಗೋತ್ರೋದ್ಭವ. ತಂದೆ ಕೇಶಿರಾಜ, ತಾಯಿ ಮಲ್ಲಾಂಬಿಕೆ. ತಾರೇಶೋಜ್ವಳಕೀರ್ತಿ ಜೈನರುಚಿ-ಎಂದು ವಿಶೇಷಿಸಿಕೊಂಡಿರುವುದರಿಂದ ಕವಿ ಪ್ರಖ್ಯಾತನೆಂದೂ ಜಿನಮತದಲ್ಲಿ ಬಹು ಶ್ರದ್ಧೆಯುಳ್ಳವನೆಂದೂ ಪರಿಶುದ್ಧವಾದ ಆಚಾರವಂತನೆಂದೂ ಗೊತ್ತಾಗುತ್ತದೆ. ಈತನಿಗೆ ವಾಣೀವಲ್ಲಭನೆಂಬ ಬಿರುದಿತ್ತು.

  • "ವರ್ಧಮಾನಪುರಾಣ" ೧೬ ಆಶ್ವಾಸಗಳಲ್ಲಿ 24ನೆಯ ತೀರ್ಥಂಕರನಾದ ಶ್ರೀವರ್ಧಮಾನ ಮಹಾವೀರನ ಪಾವನ ಚರಿತವಾಗಿದೆ. ಇದೊಂದು ಉತ್ತಮ ಚಂಪೂಕಾವ್ಯ, ಮಹಾಪುರಾಣ. ಬಂಧ ಪ್ರೌಢವಾಗಿಯೂ ಸಂಸ್ಕøತಪದಭೂಯಿಷ್ಠವಾಗಿಯೂ ಇದೆ. ಪ್ರಾಸಯಮಕಾದಿ ಶಬ್ದಾಲಂಕಾರಗಳನ್ನು ಪ್ರಯೋಗಿಸುವುದರಲ್ಲಿ ಆಚಣ್ಣನಿಗೆ ತುಂಬ ಪ್ರೀತಿ. ಶೈಲಿ ನಿರರ್ಗಳವಾಗಿ ಓಡುತ್ತದೆ. ತನ್ನ ಕಾವ್ಯ ಸದಳಂಕಾರದಾಗರಂ, ಉದ್ಭರಸಭಾವಾನೀಕದೋಕಂ, ಸದರ್ಥದ ಸಾರ್ಥಂ, ವರಶಬ್ದವೃಂದದ ವಿರಾಜನ್ಮಂದಿರಂ, ಮೃದು ಸಂದರ್ಭದ ಗರ್ಭಂ ಎಂದು ಮುಂತಾಗಿ ಹೇಳಿಕೊಂಡಿರುವುದು ಅತಿಶಯೋಕ್ತಿಯಲ್ಲ.

ರಸಭಾವಗಳನ್ನು ಮನಮುಟ್ಟುವಂತೆ ವರ್ಣಿಸುವ ಕವಿತಾಸಾಮಥ್ರ್ಯ ಆಚಣ್ಣನಿಗಿತ್ತು. ಅದಕ್ಕೆ ಅನುಕೂಲವಾದ ಶಬ್ದ ಸಂಪತ್ತಿಯಿತ್ತು. ಸುಂದರ ನುಡಿಗಟ್ಟುಗಳೂ ಸಂದರ್ಭೋಚಿತ ಗಾದೆಯ ಮಾತುಗಳೂ ಆತನ ಶೈಲಿಗೆ ಮೆರುಗು ಕೊಟ್ಟಿವೆ.

  • "ಶ್ರೀಪಾದಶೀತಿ" ಎಂಬ ಸುಮಾರು 94 ಕಂದಗಳಿರುವ ಮತ್ತೊಂದು ಪುಟ್ಟ ಗ್ರಂಥವನ್ನೂ ಆಚಣ್ಣ ರಚಿಸಿದ್ದಾನೆ. ಇದು ಪಂಚಪದಗಳ ಮಹಿಮೆಯನ್ನು ತಿಳಿಸುವ ಒಂದು ಕೃತಿ. ಇದರಲ್ಲಿ ಅರ್ಹಂತ ಸಿದ್ಧ ಸಾಧು ಉಪಾಧ್ಯಾಯ ಆಚಾರ್ಯ- ಇವರ ಮಹಿಮಾವರ್ಣನೆ ಅಡಕವಾಗಿದೆ.
  (ಎಂ.ಎಂ.)