ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಧುನಿಕ ಪಾಶ್ಚಾತ್ಯತತ್ತ್ವದ ಮುನ್ನಡೆ

ವಿಕಿಸೋರ್ಸ್ದಿಂದ

ಆಧುನಿಕ ಪಾಶ್ಚಾತ್ಯತತ್ತ್ವದ ಮುನ್ನಡೆ

ಇಲ್ಲಿ ತಿಳಿಸಿರುವುದು ಮುಖ್ಯವಾಗಿ ಆಧುನಿಕ ತತ್ತ್ವದ ದೃಷ್ಟಿಯನ್ನು, ಅದರ ಬಗೆಬಗೆಯ ರೂಪಗಳನ್ನು, ಮುಖ್ಯವಾದ ವಾದಗಳ ಮುನ್ನಡೆಯನ್ನು, ಇದು ಪಾಶ್ಚಾತ್ಯ ತತ್ತ್ವದ ಚರಿತ್ರೆಯಲ್ಲ. ಆಧುನಿಕ ತಾತ್ತ್ವಿಕರ ಜೀವನಚರಿತ್ರೆಯನ್ನೂ ಅವರವರ ತತ್ತ್ವವನ್ನೂ ಇಲ್ಲಿ ವಿವರಿಸಿಲ್ಲ. ಒಬ್ಬೊಬ್ಬರ ಜೀವನಚರಿತ್ರೆಯನ್ನೂ ತತ್ತ್ವವನ್ನೂ ಅವಕ್ಕೆ ಮೀಸಲಾಗಿಟ್ಟಿರುವ ಪ್ರತ್ಯೇಕ ಲೇಖನಗಳಲ್ಲಿ ವಿವರಿಸಿದೆ.

ಪ್ರಾಚೀನ ಪಾಶ್ಚಾತ್ಯತತ್ತ್ವ ಪ್ರಕೃತಿಕೇಂದ್ರವಾದುದು, ಮಧ್ಯಯುಗದ ತತ್ತ್ವ ಈಶ್ವರಕೇಂದ್ರವಾದುದು, ಆಧುನಿಕತತ್ತ್ವ ಜೀವಕೇಂದ್ರವಾದುದು ಎಂದು ಹೇಳುವುದು ವಾಡಿಕೆಯಾಗಿದೆ. ಆಧುನಿಕ ಪಾಶ್ಚಾತ್ಯತತ್ತ್ವವನ್ನು ಜೀವತತ್ತ್ವ ಕೇಂದ್ರವಾದುದೆಂದು ಕರೆಯುವುದಕ್ಕಿಂತ ಮಾನವಕೇಂದ್ರವಾದುದೆಂದಲ್ಲಿ ಹೆಚ್ಚು ಸಂಗತ. ಪ್ರಾಚೀನ ಗ್ರೀಕ್ ತಾತ್ತ್ವಿಕರು ಪ್ರಕೃತಿಗೆ ಸಂಬಂಧಪಟ್ಟ ತತ್ತ್ವಕ್ಕೆ ಹೆಚ್ಚು ಗಮನ ಕೊಟ್ಟರು. ಮಧ್ಯಯುಗದ ತಾತ್ತ್ವಿಕರು ಈಶ್ವರನಿಗೆ ಸಂಬಂಧಪಟ್ಟ ತತ್ತ್ವಕ್ಕೆ ಹೆಚ್ಚು ಗಮನ ಕೊಟ್ಟರು. ಆಧುನಿಕ ತತ್ತ್ವಜ್ಞರಾದರೂ ಮಾನವ ಜೀವನಕ್ಕೆ ಸಂಬಂಧಪಟ್ಟ ತತ್ತ್ವಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಟ್ಟರು, ಕೊಡುತ್ತಿದ್ದಾರೆ.

ಆಧುನಿಕ ತತ್ತ್ವದ ಆರಂಭ ಕಾಲ ಕ್ರಿ.ಶ. ಹದಿನಾರನೆಯ ಶತಮಾನ. ಇದು ಪ್ರತಿಭಟನೆಯ ಕಾಲ. ಕಲೆ, ರಾಜಕೀಯ, ಮತ, ತತ್ತ್ವ ಈ ಎಲ್ಲ ವಿಚಾರಗಳಲ್ಲೂ ಮಧ್ಯಯುಗದ ರೀತಿನೀತಿಗಳಿಗೆ ಪ್ರತಿಭಾಶಾಲಿಗಳಾದವರು ಎದುರು ಬಿದ್ದ ಕಾಲ. ಕ್ರೈಸ್ತಗುರು ಪೋಪನ ಅಧಿಕಾರವನ್ನು ಯೂರೋಪಿನ ರಾಜರೂ ಜನರೂ ಸೇರಿ ಪ್ರತಿಭಟಿಸಿ ಮಠದ ಆಶ್ರಯವನ್ನು ಕೋರದೆ, ರಾಜಕೀಯವನ್ನು ಲೌಕಿಕವಾಗಿ ಮಾರ್ಪಡಿಸಲು ಪಣತೊಟ್ಟರು. ಕೇವಲ ಲೌಕಿಕ ದೃಷ್ಟಿಯಿಂದ ರಾಜಕೀಯ ತತ್ತ್ವವನ್ನು ನಿರೂಪಿಸಲು ಮೊಟ್ಟಮೊದಲಿಗೆ ಪ್ರಯತ್ನ ಮಾಡಿದವ ನಿಕೊಲೊ ಮೆಕಿಯವೆಲ್ಲಿ (1469-1527). ಆತ ಬರೆದ ಪ್ರಿನ್ಸ್ (ರಾಜಕುಮಾರ) ಎಂಬ ಗ್ರಂಥದಲ್ಲಿ ರಾಜಕೀಯದಲ್ಲೂ ಜ್ಞಾನಾನ್ವೇಷಣಕಾರ್ಯದಲ್ಲೂ ಮತಾಧಿಕಾರಿಗಳ ಅತಿಕ್ರಮ ಪ್ರವೇಶವನ್ನು ಖಂಡಿಸಿದ. ರಾಷ್ಟ್ರದ ಮತ್ತು ಜನರ ಮುಖಂಡನಾದ ರಾಜನ ಸ್ವಾತಂತ್ರ್ಯವನ್ನು ಎತ್ತಿಹಿಡಿದ. ಜೀನ್‍ಬೋಡಿನ್ (1530-1596) ಎಂಬ ರಾಜ್ಯಶಾಸ್ತ್ರಜ್ಞ ಜನರು ರಾಜರೊಡನೆ ಏರ್ಪಡಿಸಿಕೊಂಡ ಒಪ್ಪಂದವೇ ರಾಜನ ಅಧಿಕಾರಕ್ಕೆ ಆಶ್ರಯವೆಂದು ಸಾರಿದ. ಜೊಹಾನಸ್ ಆಲ್‍ತೂಸಿಯಸ್ (1557-1638) ಜನರೊಡನೆ ಮಾಡಿಕೊಂಡ ಒಪ್ಪಂದವನ್ನು ಮುರಿದ ರಾಜನನ್ನು ಜನ ಪಟ್ಟದಿಂದ ಉರುಳಿಸಬಹುದೆಂದೂ ಗಲ್ಲಿಗೇರಿಸಬಹುದೆಂದೂ ಘೋಷಿಸಿದ. ನ್ಯಾಯದ ಹಕ್ಕು ಮಾನವನಿಗೆ ಸ್ವಾಭಾವಿಕವಾದ ಹುಟ್ಟುಹಕ್ಕು. ದೇವರಿಗೆ ಕೂಡ ಆ ಹಕ್ಕನ್ನು ಕಸಿದುಕೊಳ್ಳುವ ಹಕ್ಕಿಲ್ಲವೆಂದು ಹ್ಯೂಗೊ ಗ್ರೋಸಿಯಸ್ (1583-1645) ವಾದಿಸಿದ. ಮಾನವರು ಪಾಪಿಗಳು. ಮಾನವನ ಲೌಕಿಕಜೀವನ ಹೇಯವಾದ ಜೀವನವೆಂಬ ಭಾವನೆಗಳನ್ನು ತೊರೆದು ಕವಿಗಳು ಕಲೆಗಾರರು ಸಾಂಸಾರಿಕ ಜೀವನವನ್ನು ತಮ್ಮ ಕಾವ್ಯ ಮತ್ತು ಕಲೆಗಳ ವಸ್ತುವಾಗಿ ಮಾಡಿಕೊಂಡರು. ಅಂಥ ಜೀವನವನ್ನು ಪ್ರತಿಬಿಂಬಿಸಿದ ಗ್ರೀಕ್ ಸಾಹಿತ್ಯಕ್ಕೆ ಮತ್ತು ಕಲೆಗೆ ಪ್ರಾಶಸ್ತ್ಯ ಬಂತು. ಹದಿನಾಲ್ಕನೆಯ ಶತಮಾನದ ಒಬ್ಬ ಸಾಹಿತಿ ಪೆಟ್ರಾರ್ಚ್ ಲ್ಯಾಟಿನ್ ಭಾಷೆಯನ್ನು ಬಿಟ್ಟು ಮಾತೃಭಾಷೆಯಲ್ಲಿ ಕಾವ್ಯಗಳನ್ನು ಬರೆದ. ಲಿಯೊನಾರ್ಡೋ ಡಾ ವಿಂಚಿ (1452-1519), ಕೋಪರ್ನಿಕಸ್ (1473-1543), ಗೆಲಿಲಿಯೊ (1564-1641) ವಿಚಾರ ಸ್ವಾತಂತ್ರ್ಯವನ್ನು ಎತ್ತಿಹಿಡಿದರು. ಕ್ರೈಸ್ತಮತ ವಿಚಾರದಲ್ಲೂ ಮತಾಧಿಕಾರಿಗಳ ಹಂಗಿಲ್ಲದೆ ನೇರವಾಗಿ ಯೇಸುಕ್ರಿಸ್ತನ ಮಾತುಗಳಿಂದಲೇ ಪ್ರಚೋದನೆ ಪಡೆಯುವ ಹಕ್ಕು ಉಂಟೆಂದು ಮಾರ್ಟಿನ್ ಲೂಥರ್ (1483-1546) ಸಾರಿದ. ಜೀವನದಲ್ಲಿ ಉತ್ಸಾಹ, ವ್ಯಕ್ತಿತ್ವದಲ್ಲಿ ನೆಚ್ಚಿಕೆ, ಸ್ವಪ್ರಯತ್ನದಲ್ಲಿ ಭರವಸೆ, ಸ್ವಾತಂತ್ರ್ಯದಲ್ಲಿ ಪ್ರೀತಿ, ಅನ್ವೇಷಣದಲ್ಲಿ ಆಸಕ್ತಿ-ಈ ಭಾವಗಳ ಹಿನ್ನೆಲೆಯಲ್ಲಿ ಆಧುನಿಕತತ್ತ್ವ ಉದಯಿಸಿತು.

ಆಧುನಿಕ ತತ್ತ್ವ ಮಧ್ಯಯುಗದ ತತ್ತ್ವವನ್ನು ಪ್ರತಿಭಟಿಸಿ ಸ್ವತಂತ್ರ ವಿಚಾರ ಪಥದಲ್ಲಿ ಮುನ್ನಡೆಯಲು ಸಂಕಲ್ಪಿಸಿದರೂ ಅದು ಮಧ್ಯಯುಗದ ಕುರುಡು ನಂಬಿಕೆಗಳ ಸಂಕೋಲೆಯಿಂದ ಬಹುಕಾಲದವರೆಗೂ ಪೂರ್ಣವಾಗಿ ಬಿಡಿಸಿಕೊಳ್ಳಲಾಗಲಿಲ್ಲ. ಬೇಕನ್, ಡೇಕಾರ್ಟ್, ಲಾಕ್, ಬಾಕ್ರ್ಲೆ ಮತ್ತು ಲೈಬ್ನಿಜ್ ಮುಂತಾದವರ ತತ್ತ್ವದಲ್ಲಿ ಮಧ್ಯಯುಗದ ನಂಬಿಕೆಗಳ ಅವಶೇಷಗಳು ಇವೆ. ಕ್ರೈಸ್ತಮತದ ಮುಖ್ಯ ಭಾವನೆಗಳನ್ನು ತಮ್ಮ ಮೂಲ ತರ್ಕಕ್ಕೆ ಆಧಾರವೆಂದು ಅವರು ಒಪ್ಪಿಕೊಂಡಿರುತ್ತಾರೆ. ಅವುಗಳ ಮೇಲಿನ ಅಭಿಮಾನ ಈಗಲೂ ಬಿಟ್ಟುಹೋಗಿಲ್ಲ. ಇಂದಿನ ತಾತ್ತ್ವಿಕರಾದ ಮ್ಯಾರಿಟೈನ್, ಗಿಲ್ಸನ್ ಮುಂತಾದವರು ಅದಕ್ಕೆ ಹೊಸ ರೂಪಕೊಟ್ಟು ಹೊಸದಾದ ವಾದಸರಣಿಯನ್ನು ಏರ್ಪಡಿಸಿಕೊಂಡು ಅವುಗಳನ್ನು ಪುನರುತ್ಥಾನ ಮಾಡಲು ಯತ್ನಿಸುತ್ತಿದ್ದಾರೆ.

ಆಧುನಿಕ ತತ್ತ್ವ ಹುಟ್ಟಿದ ತರುಣದಲ್ಲಿ ಪ್ರಬಲವಾಗಿದ್ದುವು ಎರಡು ವಾದಗಳು : ಬುಧ್ಯಾರೂಢವಾದ (ರ್ಯಾಷನಲಿಸಂ) ಮತ್ತು ಅನುಭವಾರೂಢವಾದ (ಎಂಪಿರಿಸಿಸಂ). ಬುಧ್ಯಾರೂಢ ಅನುಭವಾರೂಢ ಎಂಬ ಮಾತುಗಳ ಅರ್ಥ ಸಂದಿಗ್ಧ. ಶ್ರುತಿಯನ್ನು ನೆಚ್ಚದೆ ಬುದ್ಧಿಪೂರ್ವಕವಾದ ವಿಚಾರವೇ ತತ್ತ್ವಕ್ಕೆ ಆಧಾರವೆಂಬ ವಾದವೇ ಬುಧ್ಯಾರೂಢವೆಂದು ಹೇಳುವುದಾದರೆ ಆಧುನಿಕ ತತ್ತ್ವಗಳನ್ನೆಲ್ಲ ಬುಧ್ಯಾರೂಢವಾದಗಳೆಂದು ಪರಿಗಣಿಸಬೇಕಾಗುತ್ತದೆ. ಅವುಗಳಲ್ಲಿ ಕೆಲವು ಬುದ್ಧಿಗಿಂತ ಭಾವವೇ (ಫೀಲಿಂಗ್) ಅಥವಾ ಪ್ರತಿಭೆಯೇ ಪ್ರಧಾನವೆಂದು ಹೇಳಿದರೂ ಆ ಹೇಳಿಕೆಯನ್ನು ವಾದದ ಮೂಲಕ, ಎಂದರೆ ಬೌದ್ಧಿಕವಾಗಿ ಸಮರ್ಥಿಸುತ್ತಾರೆ. ಬೌದ್ಧಿಕ ವಾದವೆಂದರೆ ಗಣಿತಶಾಸ್ತ್ರದ ಅನುಮತಿಗಳಂತೆ ಎಲ್ಲ ಬಗೆಯ ಅನುಮತಿಗಳೂ ನಿಶ್ಚಿತವಾಗಿರಬೇಕಾದುದೇ ಬುಧ್ಯಾರೂಢವೆಂದು ಬಗೆದರೂ ಆ ಧ್ಯೇಯವನ್ನು ಎಲ್ಲ ಆಧುನಿಕ ತಾತ್ತ್ವಿಕರೂ ಒಪ್ಪಿಕೊಳ್ಳುತ್ತಾರೆ. ಅಂಥ ನಿಶ್ಚಿತ ಜ್ಞಾನ ಸಾಧ್ಯವೆಂದು ಕೆಲವರು ಹೇಳಿದರೆ ಇನ್ನೂ ಕೆಲವರು ಅದು ಅಸಾಧ್ಯವೆನ್ನುತ್ತಾರೆಯೇ ಹೊರತು ಅದು ಒಳ್ಳೆಯ ಆದರ್ಶವೆಂಬ ವಿಚಾರದಲ್ಲಿ ಭಿನ್ನಾಭಿಪ್ರಾಯವಿಲ್ಲ. ಈ ಎರಡು ವಾದಗಳ ಜೊತೆಗೆ ಇನ್ನೊಂದು ವಾದವಿದೆ. ಅದೇ ಈಗ ನಮಗೆ ಪ್ರಸಕ್ತವಾದದ್ದು. ಈ ಬುಧ್ಯಾರೂಢವಾದಕ್ಕೆ ವಿಶಿಷ್ಟವಾದ ಮುಖ್ಯ ಅಂಶಗಳು ಇವು : ಇಂದ್ರಿಯಾನುಭವ ನಂಬತಕ್ಕ ಅನುಭವವಲ್ಲ. ಸ್ವತಸ್ಸಿದ್ಧವಾದ ಭಾವನೆಗಳು ಇಂದ್ರಿಯಾನುಭವದ ಹಂಗಿಲ್ಲದವು. ಅವು ಬುದ್ಧಿಗೆ ಆಂತರಿಕವಾದವು ಅಥವಾ ಸಹಜವಾದವು. ಹೀಗೆ ಸಹಜವಾದುದರಿಂದಲೇ ಅವು ಸ್ಪಷ್ಟ ಮತ್ತು ನಿರ್ದಿಷ್ಟವಾಗಿರುವುದು. ಸ್ಪಷ್ಟ ಮತ್ತು ನಿರ್ದಿಷ್ಟ ಭಾವನೆಗಳು ನಿತ್ಯಸತ್ಯಗಳು. ಅವು ಉಳಿದೆಲ್ಲ ಸತ್ಯಗಳಿಗೂ ಆಧಾರವಾದ ಸತ್ಯಗಳು.

ಇದಕ್ಕೆ ಪ್ರತಿಯಾದದ್ದು ಆಧುನಿಕವಾದ ಅನುಭವಾರೂಢವಾದ (ಎಂಪಿರಿಸಿಸಂ). ಇದರ ಅಂಶಗಳು ಹೀಗಿವೆ : ಅನುಭವಾರೂಢವಾದ ಅಥವಾ ಅನುಭವಪ್ರಧಾನವಾದವೂ ಒಂದು ನಿಟ್ಟಿನಿಂದ ನೋಡಿದರೆ ಎಲ್ಲ ಆಧುನಿಕ ತತ್ತ್ವಜ್ಞರಿಗೂ ಸಾಮಾನ್ಯವಾದದ್ದು, ಸಂಗತವಾದದ್ದು ಎಂದು ಹೇಳಬಹುದು. ಜ್ಞಾನಕ್ಕೆ ಅನುಭವ ಆಶ್ರಯವೆಂಬುದನ್ನು ಯಾವ ಆಧುನಿಕ ತಾತ್ತ್ವಿಕನೂ ನಿರಾಕರಿಸಿಲ್ಲ. ಅನುಭವಕ್ಕಿಂತ ಅಧಿಕಾರವಾಣಿ ಶ್ರೇಷ್ಠವೆಂದೂ ಅದೇ ಪರಮ ಪ್ರಮಾಣವೆಂದೂ ಹೇಳುತ್ತಿದ್ದ ಮಧ್ಯಯುಗದ ತಾತ್ತ್ವಿಕರನ್ನು ಪ್ರತಿಭಟಿಸಿ ಹುಟ್ಟಿದ ತತ್ತ್ವ ಆಧುನಿಕತತ್ತ್ವ. ಅನುಭವವೇ ಜ್ಞಾನಕ್ಕೆ ಆಧಾರ. ಅದನ್ನು ವಿಚಾರ ಮಾಡಿ ಅದರ ಎಲ್ಲ ಅಂಶಗಳನ್ನೂ ಸಂಗತಗೊಳಿಸುವುದೇ ತತ್ತ್ವಶಾಸ್ತ್ರದ ಪ್ರಾರಂಭ ಕಾಲದಲ್ಲಿ ಹುಟ್ಟಿದ ಅನುಭವವಾದ. ಈ ಸರ್ವಸಮ್ಮತಾವಾದ ಅನುಭವಕ್ಕಿಂತ ಕೆಲವು ಅಂಶಗಳಲ್ಲಿ ಭಿನ್ನವಾಗಿದೆ. 1. ಬುದ್ಧಿಗೆ ಸಹಜವಾದ ಅದಕ್ಕೆ ಆಂತರಿಕವಾದ, ಭಾವನೆಗಳು ಇಲ್ಲವೇ ಇಲ್ಲ. 2. ಇಂದ್ರಿಯ ಪ್ರತ್ಯಕ್ಷವೇ ಜ್ಞಾನಕ್ಕೆ ಆಶ್ರಯ. ಎಲ್ಲ ಜ್ಞಾನವೂ ಹುಟ್ಟುವುದು ಇಂದ್ರಿಯಾನುಭವದಿಂದಲೇ. 3. ಬುದ್ಧಿಯ ಭಾವನೆಗಳು ಇಂದ್ರಿಯಾನುಭವದಿಂದ ಪಡೆದ ಅದರ ನಕಲುಗಳು. ಇವು ಇಂದ್ರಿಯಾನುಭವದಷ್ಟು ಬಲಿಷ್ಠವಾದುವಲ್ಲ. ಅದರಷ್ಟು ಲವಲವಿಕೆ ಇವಕ್ಕೆ ಇಲ್ಲ. 4. ಇವುಗಳಲ್ಲಿ ಗಣಿತಶಾಸ್ತ್ರಕ್ಕೆ ಸಂಬಂಧಪಟ್ಟ ಮೂಲಭೂತ ಭಾವನೆಗಳು ಮಾತ್ರ ಇಂದ್ರಿಯಾನುಭವಕ್ಕೆ ಒಳಪಡದೆ ಸ್ವತಂತ್ರವಾಗಿ ಬುದ್ಧಿಯಿಂದ ಏರ್ಪಡಿಸಿಕೊಂಡವು. ನೇರವಾದ ಗೆರೆಗೆ ಸಮಾನವಾದ ವಾಸ್ತವ ವಿಷಯ ಇರಲಿ. ಇಲ್ಲದಿರಲಿ, ಆ ಭಾವನೆ ಮಾತ್ರ ಸ್ಪಷ್ಟ ಮತ್ತು ಸ್ವತಃಸಿದ್ಧ. ಅದು ಸಂಪೂರ್ಣವಾಗಿ ನೆಚ್ಚಬಲ್ಲ ಭಾವನೆ. ಉಳಿದೆಲ್ಲ ಭಾವನೆಗಳು ಸ್ವತಃ ಸಿದ್ಧವಾದುವಲ್ಲ, ಸಂಪೂರ್ಣವಾಗಿ ನೆಚ್ಚಬಲ್ಲ ಸತ್ಯಗಳಲ್ಲ. 5. ಅವುಗಳ ಸತ್ಯ ಕೇವಲ ಸಂಭವನೀಯ ಸತ್ಯ. ಈ ವಿಧವಾದ ಅನುಭವವಾದ ಮೇಲೆ ತಿಳಿಸಿರುವ ಬುಧ್ಯಾರೂಢವಾದಕ್ಕೆ ಪ್ರತಿಯಾದದ್ದು ವಿರುದ್ಧವಾದದ್ದು. ಮೊಟ್ಟಮೊದಲಿಗೆ ನಿರೂಪಿಸಿದವನೇ ಡೇಕಾರ್ಟ್. ಆಧುನಿಕ ಅನುಭವಾರೂಢವಾದವನ್ನು ನಿರೂಪಿಸಿದವ ಜಾನ್ ಲಾಕ್.

ರನೆ ಡೇಕಾರ್ಟ್ : (1596-1650). ಫ್ರಾನ್ಸಿನ ಪ್ರಸಿದ್ಧವಾದ ತಾತ್ತ್ವಿಕ. ಆಧುನಿಕ ತತ್ತ್ವಶಾಸ್ತ್ರದ ಜನಕ. ಕೆಲವರು ಆ ಪಟ್ಟ ನ್ಯಾಯವಾಗಿ ಫ್ರಾನ್ಸಿಸ್ ಬೇಕನ್‍ಗೆ (1561-1626) ಸಲ್ಲಬೇಕೆಂದು ಅಭಿಪ್ರಾಯಪಟ್ಟಿರುತ್ತಾರೆ. ಬೇಕನ್ ಡೇಕಾರ್ಟ್‍ಗಿಂತ ಮುಂಚೆ ಹುಟ್ಟಿದವ. ಇಬ್ಬರಿಗೂ ಸಾಮಾನ್ಯವಾದ ಕೆಲವು ಭಾವನೆಗಳಿವೆ. ಆದರೂ ಬೇಕನ್ ತತ್ತ್ವಶಾಸ್ತ್ರದ ಮುಖ್ಯ ಸಮಸ್ಯೆಗಳನ್ನು ಡೇಕಾರ್ಟ್‍ನಷ್ಟು ಸ್ಪಷ್ಟವಾಗಿ ನಿರೂಪಣೆ ಮಾಡಲಿಲ್ಲ. ವಿಶೇಷವಾಗಿ ವಿಜ್ಞಾನಕ್ಕೂ ವೈಜ್ಞಾನಿಕ ಅನುಗಮನ ವಿಧಾನಕ್ಕೂ (ಇಂಡಕ್ಷನ್) ಹೆಚ್ಚು ಗಮನ ಕೊಟ್ಟ ಆಗಿನ ಕಾಲದಲ್ಲಿ ಅವನ ಪ್ರಭಾವ ವಿಶೇಷವಾಗಿ ಕಾಣಿಸಿಕೊಂಡದ್ದು ಆಧುನಿಕ ತರ್ಕಶಾಸ್ತ್ರದಲ್ಲಿ ಮಾತ್ರ. ಪರತತ್ತ್ವ (ಮೆಟಫಿಕ್ಸ್) ಜ್ಞಾನಮೀಮಾಂಸೆ (ಎಪಿಸ್ಟಿಮಾಲಜಿ) ಮತಮೀಮಾಂಸೆ (ಫಿಲಾಸಫಿ ಆ¥sóï ರಿಲಿಜನ್) ಈ ಮೂರರ ಮೇಲೆ ಇವನ ಪ್ರಭಾವ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಈ ಮೂರರ ಮೇಲೆ ಹೆಚ್ಚು ಪ್ರಭಾವ ಬೀರಿದವ ಡೇಕಾರ್ಟ್ ಆದ್ದರಿಂದ ಡೇಕಾರ್ಟ್. ಆಧುನಿಕ ತತ್ತ್ವಶಾಸ್ತ್ರದ ಜನಕನೆಂದು ಹೇಳುವುದರಲ್ಲಿ ಹೆಚ್ಚು ಔಚಿತ್ಯವಿದೆ.

ಡೇಕಾರ್ಟ್‍ನ ಮೂಲ ಸಮಸ್ಯೆ ಇದು : ತತ್ತ್ವಶಾಸ್ತ್ರ ಮಾನವ ತಿಳಿಯಬಹುದಾದ ಎಲ್ಲದರ ಸರ್ವತೋಮುಖವಾದ ವಿಚಾರ ಶಾಸ್ತ್ರ ಸ್ವತಂತ್ರವಾಗಿ ಅನ್ವೇಷಣೆ ನಡೆಸಿ ನಿಶ್ಚಿತವಾದ ಭಾವನೆಗಳ ತಳಹದಿಯ ಮೇಲೆ ಕಟ್ಟಿದ ಸುಭದ್ರವಾದ ಜ್ಞಾನಸೌಧ. ಮಧ್ಯಯುಗದ ತಾತ್ತ್ವಿಕರು ಕಟ್ಟಿದ ಜ್ಞಾನಸೌಧ ಭದ್ರವಲ್ಲ. ಅನ್ವೇಷಣೆ ನಡೆಸಿ ನಿಶ್ಚಿತವಾದ ಭಾವನೆಗಳ ತಳಹದಿಯ ಮೇಲೆ ಕಟ್ಟಿದ್ದಲ್ಲ. ಮರಳಿನ ಮೇಲೆ ಕಟ್ಟಿದ ಮನೆಯಂತೆ ವಿಚಾರ ಪ್ರವಾಹಕ್ಕೆ ಸಿಕ್ಕಿದಾಗ ಕುಸಿದುಬೀಳುವಂಥದು. ನಿಶ್ಚಿತವಾದ ಭಾವನೆಗಳೆಂದರೆ ಗಣಿತಶಾಸ್ತ್ರಕ್ಕೆ ಆಧಾರವಾದಂಥ ಸರಳ, ಸ್ಪಷ್ಟ, ನಿರ್ದಿಷ್ಟ ಮತ್ತು ಸ್ವತಃ ಸಿದ್ಧ ಭಾವನೆಗಳು. ಆ ಸರಳ ಭಾವನೆಗಳನ್ನು ಸೇರಿಸಿ ಸಂಕೀರ್ಣವಾದ ಭಾವನೆಗಳನ್ನು ಏರ್ಪಡಿಸಿರುವ ಗಣಿತವಿಧಾನ ಆದರ್ಶಪ್ರಾಯವಾದದ್ದು. ಭೌತಶಾಸ್ತ್ರ ಗಣಿತದ ಆದರ್ಶವನ್ನು ಅನುಸರಿಸಿದುದರಿಂದಲೇ ಅದಕ್ಕೆ ನಿರ್ದಿಷ್ಟವಾದ ಭೌತನಿಯಮಗಳನ್ನು ಏರ್ಪಡಿಸಲು ಸಾಧ್ಯವಾದದ್ದು. ತತ್ತ್ವಾನ್ವೇಷಣೆಯೂ ಗಣಿತದ ಜಾಡು ಹಿಡಿದರೆ ಅದೂ ನಿಶ್ಚಿತ ಮತ್ತು ನಿರ್ದಿಷ್ಟ ಜ್ಞಾನವಾಗಿ ಪರಿಣಮಿಸುತ್ತದೆ.

ನಿಸ್ಸಂದೇಹಕರವಾದ ಸರಳ, ಸ್ಪಷ್ಟ, ನಿರ್ದಿಷ್ಟ ಭಾವನೆಗಳನ್ನು ಪಡೆಯುವುದು ಹೇಗೆ ಎಂಬುದು ಮೊಟ್ಟಮೊದಲಿನ ಸಮಸ್ಯೆ. ಹಿಂದಿನವರಾದ ಕ್ರೈಸ್ತಮತ ಮುಖಂಡರ ಭಾವನೆಗಳನ್ನು ಆಶ್ರಯಿಸಿದರೆ ಅಂಥಾ ನಿಶ್ಚಿತ ಭಾವನೆಗಳು ದೊರೆಯುವುದಿಲ್ಲ. ಇತರರ ಭಾವನೆಗಳಿಗೆ ಮಾರುಹೋಗುವುದು, ಶರಣಾಗುವುದು ವಿಜ್ಞಾನದ ಮಾರ್ಗವಲ್ಲ. ಇತರರ ಭಾವನೆಗಳು ಸರ್ವಸಮ್ಮತವೂ ಅಲ್ಲ. ಅವು ಅನೇಕ ವೇಳೆ ಪರಸ್ಪರ ವಿರುದ್ಧವಾಗಿವೆ. ಬಾಲ್ಯದಿಂದ ಹಿರಿಯರು ಮಕ್ಕಳಲ್ಲಿ ಬಿತ್ತಿದ ಇಂಥ ಪೂರ್ವಕಲ್ಪಿತ ಭಾವನೆಗಳಿಂದ ಬಿಡುಗಡೆ ಪಡೆಯಬೇಕು. ಸಂಶಯಕ್ಕೆ ಒಳಪಡಿಸಿ ಇವುಗಳಲ್ಲಿರುವ ಸಂಶಯಾತ್ಮಕ ಅಂಶಗಳನ್ನು ಬೇರ್ಪಡಿಸಿ, ನಿಸ್ಸಂಶಯವಾದ ಅಂಶಗಳನ್ನು ಕಂಡುಹಿಡಿಯಬೇಕು. ಸಂಶಯಪಡಬೇಕೆಂದರೆ, ಸಂಶಯಾತ್ಮರಾಗಿ ಸಂಶಯದಲ್ಲೇ ಮುಳುಗಿ ಹೋಗುವುದೆಂದು ಭಾವಿಸಕೂಡದು. ಸಂಶಯ ಮಾರ್ಗದ ಉದ್ಧೇಶ ಸಂಶಯಕರವಾದುವನ್ನು ಬಿಟ್ಟು ನಿಸ್ಸಂಶಯವಾದುವನ್ನು ಬೇರ್ಪಡಿಸಿ ಬೆಳಗಿಸುವುದಾಗಿದೆ.

ಸಂಶಯಕ್ಕೆ ಒಳಪಡಿಸಬೇಕಾದದ್ದು ಇತರರ ಅಭಿಪ್ರಾಯಗಳನ್ನು ಮಾತ್ರವೇ ಅಲ್ಲ, ಇಂದ್ರಿಯಗಳ ಮೂಲಕ ಬಂದ ಅನುಭವಗಳನ್ನೂ, ಇಂದ್ರಿಯ ಜ್ಞಾನ ಭ್ರಮೆಗೆ ಒಳಗಾಗಿರುತ್ತದೆ ಎಂಬುದು ಲೋಕಪ್ರಸಿದ್ಧ. ಎರಡು ಸಾವಿರ ವರ್ಷಗಳ ಹಿಂದೆ ಪ್ಲೇಟೊ ಅದನ್ನು ಸಾರಿದ್ದ. ಅವನ ಮಾತು ಇಂದಿಗೂ ಅನುಭವಸಿದ್ಧವಾದದ್ದು. ಇಂದ್ರಿಯದಿಂದ ಹುಟ್ಟಿದ ಅನುಭವ ತಪ್ಪಿಗೆ ಎಡೆಕೊಡುವ ಸಂಭವವಿರುವುದರಿಂದ ಅಲ್ಲವೇ ಆಧುನಿಕ ವಿಜ್ಞಾನಿಗಳು ಇಂದ್ರಿಯ ಅನುಭವವನ್ನು ಸೂಕ್ಷ್ಮವಾದ ಪರೀಕ್ಷೆಗೆ ಒಳಪಡಿಸಿದ್ದು.

ಹೀಗೆ ಇತರರು ಅಭಿಪ್ರಾಯಗಳನ್ನೂ ಇಂದ್ರಿಯಜ್ಞಾನವನ್ನೂ ಜ್ಞಾಪಿಸಿಕೊಂಡ ವಿಷಯಗಳನ್ನೂ ನಾವು ನೆಚ್ಚದಿರಬಹುದು. ಎಲ್ಲವೂ ಸಂದೇಹಕರವಾದುವೆಂದು ಹೇಳಬಹುದು. ಆದರೆ ಸಂದೇಹವೇ ಸಂದೇಹಕರವೆಂದು ಹೇಳಲಾಗುವುದಿಲ್ಲ. ಸಂದೇಹಪಡುವ ನಾನು ಎಂಬುದಂತೂ ನಿಶ್ಚಿತ. ಸಂದೇಹವೂ ಒಂದು ಬಗೆಯ ಆಲೋಚನೆ. ಆ ಯೋಚನೆ ಮಾಡುವ ಕಾಲದಲ್ಲೇ ಆಲೋಚಿಸುವವನಿದ್ದಾನೆಂಬುದೂ ವಿಶದವಾಗುತ್ತದೆ. ನಾನು ಆಲೋಚಿಸುತ್ತೇನೆ, ಆದರೆ ನಾನು ಇಲ್ಲ ಎಂದು ಹೇಳುವುದು ಪರಸ್ಪರ ವಿರುದ್ಧ ಪ್ರತಿಜ್ಞೆಗಳು. ನಾನು ಯೋಚಿಸುತ್ತಿದ್ದೇನೆ ಆದ್ದರಿಂದ ಇದ್ದೇನೆ (ಅogiಣo eಡಿgo sum) ಎಂಬುದು ನಿಸ್ಸಂದೇಹಕರ, ನಿಶ್ಚಿತಸತ್ಯ. ಇದು ಸಂಪೂರ್ಣವಾಗಿ ವಿಶದವಾದದ್ದು, ನಿರ್ದಿಷ್ಟವಾದದ್ದು. ಈ ಬಗೆಯ ಭಾವನೆಯೇ ನಿರ್ದುಷ್ಟಸತ್ಯ. ಈ ರೀತಿಯಾಗಿ ವಿಶದವಾಗಿ ನಿರ್ದಿಷ್ಟವಾಗಿ ಇರುವ ಭಾವನೆಯೇ ಪ್ರಮಾಣ. ಈ ಪ್ರಮಾಣವೇ ಎಲ್ಲ ಭಾವನೆಗಳನ್ನೂ ಅಳೆಯಲು ಯೋಗ್ಯವಾದ ಮಾನದಂಡ.

ಯೋಚಿಸುವ ಚೇತನ ಸ್ವತಃಸಿದ್ಧವಾದುದಕ್ಕೆ ಕಾರಣವೇನು? ಬಾಹ್ಯ ವಸ್ತುಗಳ ಸಂಪರ್ಕವನ್ನು ಬಿಟ್ಟಂತೆ ಅದನ್ನು ತಿಳಿದ್ದಿದ್ದರಿಂದಲೇ ಅಲ್ಲವೆ ಅದು ಅಷ್ಟು ಸ್ಪಷ್ಟವೂ ನಿರ್ದಿಷ್ಟವೂ ಆದದ್ದು? ಇಂದ್ರಿಯ ವಸ್ತುಗಳಿಗಿರುವ ವಾಸನೆ, ಬಣ್ಣ, ರುಚಿ ಮುಂತಾದುವಕ್ಕೆ ಈ ನಿರ್ದಿಷ್ಟ ಗುಣಗಳಿಲ್ಲ. ನಿರ್ದಿಷ್ಟ, ಸ್ಪಷ್ಟ, ಆಂತರಿಕ ಭಾವನೆಗಳ ಸ್ವರೂಪ ಕೇವಲ ತಿಳಿವಿನ ಸ್ವರೂಪ (ಪ್ಯೂರ್ ಥಾಟ್). ಅದು ನಿಷ್ಕಳಂಕವಾದ ತಿಳಿವು. ಅದೊಂದು ಸ್ವಚ್ಛವಾದ ದ್ರವ್ಯ. ತಿಳಿವೇ ಅದರ ಆಂತರಿಕಗುಣ. ಯಾವುದು ಒಂದಕ್ಕೆ ಆಂತರಿಕವಾದದ್ದೋ ಯಾವುದನ್ನು ಬಿಟ್ಟು ಅದು ಇರಲಾರದೋ ಅದೇ ಅದರ ನಿಜಗುಣ. ಆಂತರಿಕವಾದದ್ದರಿಂದ ಅದು ಎಂದೆಂದಿಗೂ ಬದಲಾಯಿಸುವುದಿಲ್ಲ. ಬದಲಾವಣೆ ಹೊಂದುವುದು ಅದರ ವಿವಿಧ ರೂಪಗಳು (ಮೋಡ್ಸ್) ಮಾತ್ರವೇ. ಈ ರೂಪಗಳಿಗೆ, ದ್ರವ್ಯಕ್ಕೆ ಆಂತರಿಕವಾದ ಶುದ್ಧಗುಣ ಆಶ್ರಯ. ಬದಲಾಯಿಸುವ ರೂಪಗಳು ಅದಕ್ಕೆ ಆಶ್ರಯಗಳಿಲ್ಲ. ಬದಲಾಯಿಸುವ ವಿವಿಧ ರೂಪಗಳು ಆ ಮೂಲಗುಣದಿಂದ ಗಮ್ಯವಾದುವು. ಅವಕ್ಕೆ ಆಧಾರವಾದ ಗುಣವಾಗಲಿ, ದ್ರವ್ಯವಾಗಲಿ, ಅವುಗಳಿಂದ ಗಮ್ಯವಾಗಲಾರವು. ಯೋಚಿಸುವ ಚೈತನ್ಯವೇ ನಮ್ಮ ಸಕಲ ಆಲೋಚನೆಗಳಿಗೂ ಸ್ಥಿರವಾದ ಆಸ್ತಿಭಾರ.

ನಾವು ತತ್ತ್ವವಿಚಾರದಲ್ಲಿ ವಿಜಯಿಗಳಾಗಬೇಕಾದರೆ ಯೋಚಿಸುವ ಈ ದ್ರವ್ಯದಲ್ಲಿ ಅಡಗಿರುವ ಭಾವನೆಗಳನ್ನು ತಿಳಿದುಕೊಂಡು ಅವುಗಳ ಆಧಾರದ ಮೇಲೆ ನಮ್ಮ ತತ್ತ್ವಸೌಧವನ್ನು ಕಟ್ಟಬೇಕು. ಅಂಥ ಒಳಭಾವಗಳು ಯಾವುವು, ಎಂಬುದು ಮುಂದಿನ ಪ್ರಶ್ನೆ. ಕೆಲವು ಭಾವನೆಗಳು ತಿಳಿವಿಗೆ ಆಂತರಿಕವಾದುವು. ಯಾವ ಭಾವನೆಗಳನ್ನು ಬಿಟ್ಟರೆ ಆಲೋಚನೆ ಮಾಡುವುದೇ ಅಸಾಧ್ಯವಾಗುತ್ತದೆಯೋ ಅಂಥ ಭಾವನೆಗಳು ಆಂತರಿಕ ಭಾವನೆಗಳು. ಇತರ ಭಾವನೆಗಳು ಕೃತಕ ಮತ್ತು ಕಲ್ಪಿತ. ಅನೇಕ ಭಾವನೆಗಳು ನಮ್ಮ ಯತ್ನವಿಲ್ಲದೆಯೇ ಹೊರಗಿನಿಂದ ಬಂದು ಹೊರಗಿನ ವಸ್ತುಗಳ ನಕಲುಗಳಾಗಿ ನಮ್ಮ ಮನಸ್ಸಿನ ಉಳಿದುದೆಲ್ಲ ಕೇವಲ ಭ್ರಮೆಯಾಗಬಹುದು. ನಮ್ಮ ತಿಳಿವಿಗೆ ಆಂತರಿಕ ಭಾವನೆಗಳು ಇವು : ದ್ರವ್ಯಭಾವನೆ, ಗುಣಭಾವನೆ, ಕಾರ್ಯಕಾರಣ ಭಾವನೆ, ಸ್ವಾತಂತ್ರ್ಯ ಭಾವನೆ, ಅನಂತತಾ ಭಾವನೆ.

ಇವುಗಳಲ್ಲಿ ಕಾರಣಕಾರ್ಯಭಾವ ಪ್ರಸಕ್ತವಾದದ್ದು. ಯಾವುದಾದರೂ ಇರಬೇಕಾದರೆ ಅದಕ್ಕೆ ಕಾರಣವಿರಬೇಕು. ಇರುವುದಕ್ಕೆ ಇರುವುದೇ ಕಾರಣವಾಗಬಲ್ಲುದೇ ಹೊರತು, ಇಲ್ಲದ್ದು ಕಾರಣವಾಗಲಾರದು. ಇಲ್ಲದ್ದರಿಂದ ಇರುವುದು ಹುಟ್ಟುವುದಿಲ್ಲ. ಇದು ಸ್ವತಃಸಿದ್ಧವಾದ ಭಾವನೆ. ಕಾರಣ ಕಾರ್ಯದಷ್ಟಾದರೂ ನಿಜವಾಗಿಯೇ ಇರಬೇಕು. ಕಾರಣ ನಿಜವಾಗದಿದ್ದರೆ ಕಾರ್ಯ ನಿಜವಾಗುವುದೆಂತು?

ನನ್ನ ಮನಸ್ಸಿನಲ್ಲಿ ಅನಂತವಾದದ್ದು (ಇನ್‍ಫಿನಿಟ್) ಪರಿಪೂರ್ಣವಾದದ್ದು (ಪರ್‍ಫೆಕ್ಟ್) ಎಂಬ ಭಾವನೆ ಇದೆ. ಈ ಭಾವನೆಗೆ ನಾನೇ ಕಾರಣವಲ್ಲ. ಏಕೆಂದರೆ ನಾನು ಮಿತಿ ಇರುವವನು, ಅಪರಿಪೂರ್ಣ. ಮಿತಿ ಇರುವುದು ಅಪರಿಪೂರ್ಣವಾದದ್ದು. ಅಮಿತವಾದುದಕ್ಕೆ, ಪರಿಪೂರ್ಣವಾದುದಕ್ಕೆ ಮಿತಿ ಇರುವುದು ಕಾರಣವಾಗಲಾರದು. ಈ ಭಾವನೆ ನನ್ನಲ್ಲಿರಬೇಕಾದರೆ ಅದಕ್ಕೆ ಕಾರಣ ಪರಿಪೂರ್ಣವಾದ ವಸ್ತುವೇ ಆಗಿರಬೇಕು. ಆ ವಸ್ತು ನನ್ನನ್ನು ಮೋಸಗೊಳಿಸಲಾರದು. ಏಕೆಂದರೆ ಹಾಗೆ ಮೋಸಗೊಳಿಸುವ ವಸ್ತು ಪರಿಪೂರ್ಣವಾಗಲಾರದು. ನಿಜವಾಗಿಯೂ ಸ್ವತಂತ್ರವಾದ ದ್ರವ್ಯ ಎಂದು ತಿಳಿಯಬೇಕಾದದ್ದು ಇದೊಂದೇ. ಇದು ಅನೇಕವಾಗಿರಲಾರದು. ಏಕೆಂದರೆ ಎರಡು ದ್ರವ್ಯಗಳಿದ್ದರೆ ಒಂದು ಇನ್ನೊಂದನ್ನು ಬಾಧೆಗೊಳಿಸುವುದಿಲ್ಲ. ಅವುಗಳು ಪರಿಪೂರ್ಣವಾಗಿರಲೂ ಸಾಧ್ಯವಿಲ್ಲ. ಪರಿಪೂರ್ಣವಾಗಬೇಕಾದರೆ, ಸ್ವತಂತ್ರವಾಗಿರಬೇಕಾದರೆ ಅದು ಒಂದೇ ಆಗಿರಬೇಕು. ಅದಕ್ಕಿಂತ ಭಿನ್ನವಾದ ದ್ರವ್ಯಗಳಿದ್ದರೆ ಅವು ಅದಕ್ಕೆ ಅಧೀನವಾಗಿಯೇ ಇರಬೇಕು.

ಈ ಪ್ರಧಾನದ್ರವ್ಯಕ್ಕೆ ಅಧೀನವಾದ ಎರಡು ದ್ರವ್ಯಗಳಿವೆ. ಒಂದು ಯೋಚಿಸುವ ದ್ರವ್ಯ (ಮನಸ್ಸು). ಇನ್ನೊಂದು ವಿಸ್ತರಣೆಯುಳ್ಳ (ಎಕ್ಸ್‍ಟೆಂಷನ್) ದ್ರವ್ಯ (ಭೌತವಸ್ತು). ಇವು ಒಂದಕ್ಕಿಂತ ಒಂದು ತೀರ ಭಿನ್ನ. ಯೋಚಿಸುವ ದ್ರವ್ಯಕ್ಕೆ ವಿಸ್ತರಣೆ ಇಲ್ಲ; ವಿಸ್ತರಣೆ ಇರುವುದಕ್ಕೆ ಯೋಚಿಸುವ ಗುಣವಿಲ್ಲ. ಯೋಚನೆ ಆತ್ಮಕ್ಕೆ ಆಂತರಿಕಗುಣವಾಗಿರುವಂತೆ, ವಿಸ್ತರಣೆ ಇಲ್ಲದ ಯಾವ ಭೌತವಸ್ತುವೂ ಇರಲಾರದು. ಈ ಗುಣಗಳ ರೂಪಗಳು ಅನೇಕವಾಗಿರಬಹುದು. ಯೋಚನೆಗಳು ಅನೇಕ ರೂಪದವಾಗಿರುತ್ತವೆ. ವಿಸ್ತರಣೆಯ ರೂಪಗಳು ಅನೇಕವಾಗಿರುತ್ತವೆ. ಗುಣಗಳಿಗೂ ರೂಪಗಳಿಗೂ ಇರುವ ವ್ಯತ್ಯಾಸ ಇದು; ಗುಣಗಳು ನಿತ್ಯರೂಪಗಳು. ಅನಿತ್ಯರೂಪಗಳು ಬದಲಾಯಿಸಬಹುದು, ಹಲವಾಗಿರಬಹುದು. ಅವು ಹುಟ್ಟಬಹುದು, ಅಳಿದು ಹೋಗಬಹುದು. ವ್ಯತ್ಯಾಸಗೊಳ್ಳಬಹುದು. ಆದರೆ ಅವುಗಳಿಗೆ ಆಧಾರವಾದ ಗುಣ ಮಾತ್ರ ಈ ವಿಕಾರಗಳಿಗೆ ಮೀರಿದ್ದು. ಯಾವ ಒಂದು ವಸ್ತುವನ್ನು ಯೋಚಿಸಬೇಕಾದರೂ ಅದರ ಸಾಮಾನ್ಯ ಗುಣವನ್ನು ಬಿಟ್ಟು ಯೋಚಿಸಲಾಗುವುದಿಲ್ಲ. ಸಾಮಾನ್ಯದ ಅರಿವು ಅತ್ಯಗತ್ಯ. ಆದರೆ ಯಾವುದೋ ಪೃಥಕ್ಕಾದ ಒಂದು ರೂಪವನ್ನು ಮಾತ್ರ ಕಡ್ಡಾಯವಾಗಿ ಯೋಚಿಸಬೇಕೆಂಬ ನಿರ್ಬಂಧವಿಲ್ಲ. ಹಾಗೆಯೇ ವಿಸ್ತರಣೆಯೆಂಬ ಸಾಮಾನ್ಯಗುಣದ ನೆರವಿಲ್ಲದೆ ಯಾವ ಒಂದು ವಿಶಿಷ್ಟರೂಪವನ್ನೂ ತಿಳಿಯಲಾಗುವುದಿಲ್ಲ. ಒಂದು ತ್ರಿಕೋನವನ್ನು ಯೋಚಿಸಬೇಕಾದರೆ ವಿಸ್ತರಣೆಯ ಭಾವನೆ ಅಗತ್ಯ. ಆದರೆ ಒಂದು ತ್ರಿಕೋನವನ್ನು ಯೋಚಿಸದ ವಿನಾ ವಿಸ್ತರಣೆಯ ವಿಚಾರವಾಗಿ ಯೋಚಿಸಲೇ ಆಗುವುದಿಲ್ಲವೆಂದು ಹೇಳಲಾಗುವುದಿಲ್ಲ.

ಡೇಕಾರ್ಟ್ ಭೌತಗುಣಗಳನ್ನು ಪ್ರಧಾನ ಮತ್ತು ಗೌಣ ಎಂದು ಎರಡು ವಿಧವಾಗಿ ವಿಂಗಡಿಸಿದ್ದಾನೆ. ತೂಕ, ಉದ್ದ, ಅಗಲ ಮುಂತಾದುವು ಭೌತ ವಸ್ತುವಿನ ಪ್ರಧಾನ ಗುಣಗಳು.

ಇಂಥ ತೀರ ವಿರುದ್ಧ ವಸ್ತುಗಳು ಮನುಷ್ಯನಲ್ಲಿ ಸೇರಿರುವುದು ಹೇಗೆ? ಈ ಸೇರಿಕೆಗೆ ಈಶ್ವರನೇ ಕಾರಣ ಎಂಬುದು ಡೇಕಾರ್ಟನ ಉತ್ತರ. ಈಶ್ವರ ಅಥವಾ ದೇವರು ಭೌತವಸ್ತುವನ್ನು ಸೃಷ್ಟಿಸಿ ಅದರಲ್ಲಿ ಮೊತ್ತವಾಗಿ ಚಲನೆಯನ್ನು ಇಟ್ಟಿರುತ್ತಾನೆ. ಈ ಮೊತ್ತ ಹೆಚ್ಚುವುದೂ ಇಲ್ಲ, ಕಡಿಮೆಯಾಗುವುದೂ ಇಲ್ಲ. ಮೊತ್ತವಾದ ಚಲನೆಯನ್ನು ಭೌತವಸ್ತುವಿನಲ್ಲಿ ಇಟ್ಟ ಮೇಲೆ ದೇವರು ಅದನ್ನು ಯಾವ ರೀತಿಯಲ್ಲೂ ಬದಲಾಯಿಸುವುದಿಲ್ಲ. ಪ್ರಥಮದಲ್ಲಿ ಆತ ಏರ್ಪಡಿಸಿದ ನಿಯಮಾನುಸಾರವಾಗಿ ಅದು ನಡೆಯುತ್ತದೆ. ಒಂದು ಸಲ ಆತ ಭೌತವಸ್ತುವಿಗೆ ಮೊತ್ತವಾದ ಚಲನೆ ಕೊಟ್ಟು ವಿಧಾಯಕ ಮಾಡಿದ ಮೇಲೆ ಅದಕ್ಕೆ ಯಾವ ರೀತಿಯಲ್ಲೂ ಅಡ್ಡಬರುವುದಿಲ್ಲ. ಏಕೆಂದರೆ ದೇವರ ಸಂಕಲ್ಪ ದೃಢವಾದದ್ದು. ಮಧ್ಯಯುಗದ ತಾತ್ತ್ವಿಕರ ದೇವರಂತೆ ಡೇಕಾರ್ಟ್‍ನ ದೈವ ಪವಾಡಗಳನ್ನು ನಡೆಸುವುದಿಲ್ಲ. ಈ ರೀತಿಯಾಗಿ ಡೇಕಾರ್ಟ್ ಮತಾಂಧರ ಪ್ರತಿಬಂಧಕವಿಲ್ಲದೆ ಭೌತಶಾಸ್ತ್ರಜ್ಞರು ಪ್ರಕೃತಿ ಸಂಶೋಧನೆಯನ್ನು ನಡೆಸಲು ದಾರಿಮಾಡಿಕೊಟ್ಟ ಈ ವಿಚಾರಣೆ ತುಂಬ ಕೃತಕವೆಂಬುದು ಸ್ಪಷ್ಟ.

ಭೌತವಾದ ಶರೀರ ಮಾನಸಿಕವಾದ ಆತ್ಮ ಇವೆರಡೂ ಅತ್ಯಂತ ಭಿನ್ನವಾದ್ದರಿಂದ ನ್ಯಾಯವಾಗಿ ಇವೆರಡಕ್ಕೂ ಪರಸ್ಪರ ಸಂಬಂಧವಿರಕೂಡದು. ಶರೀರ ಮನಸ್ಸನ್ನು ಚಲಿಸಲಾರದು. ಹಾಗೆಯೇ ಮನಸ್ಸು ಶರೀರವನ್ನು ಚಲಿಸಲಾರದು. ಇವುಗಳ ಸ್ವಭಾವ ಹೀಗಿದ್ದರೂ ಡೇಕಾರ್ಟ್ ಅವೆರಡಕ್ಕೂ ಹತ್ತಿರ ಸಂಬಂಧವಿದೆಯೆಂದು ತಿಳಿಸಿರುತ್ತಾನೆ. ಎಲ್ಲರ ಅನುಭವಕ್ಕೂ ಬಂದಿರುವ ವಾಸ್ತವಸಂಗತಿಗಳನ್ನು ಆತ ನಿರಾಕರಿಸಲಾಗಲಿಲ್ಲ. ಮಾನವ ಸ್ವತಂತ್ರ ಆತ್ಮನಲ್ಲ. ಅನೇಕ ವೇಳೆ ನಮ್ಮ ಯತ್ನವಿಲ್ಲದೆಯೆ, ನಮಗೆ ತಿಳಿಯದೆಯೇ ನಮ್ಮ ದೇಹದಲ್ಲಿ ಚಲನೆಯುಂಟಾಗುತ್ತದೆ. ಹೊರವಸ್ತುಗಳ ಸಂಪರ್ಕದಿಂದ ನಮಗೆ ಸಿಹಿ, ಕಹಿ, ಮೃದು, ಕಠಿಣ, ಅಹಿತ, ನೋವು, ಸುಖ ಮುಂತಾದ ಅನೇಕ ಇಂದ್ರಿಯಾನುಭವಗಳು ಉಂಟಾಗುತ್ತವೆ. ಶರೀರ ನನಗೆ ತೀರ ಬಾಹಿರವಾಗಿದ್ದರೆ ಹಸಿವು ನನ್ನದಲ್ಲವೆಂದು ತಿಳಿಯಬೇಕಿತ್ತು. ನನ್ನೊಳಗಾಗುವ ಹಸಿವಿನ ಅನುಭವ ನನಗೆ ತುಂಬ ಹತ್ತಿರದ್ದು. ಹಸಿವಾದಾಗ ಇದು ನನ್ನ ಹಸಿವು ಎಂದು ತಿಳಿಯುತ್ತೇನೆ. ಅದರಿಂದ ಬಿಡುಗಡೆಯಾಗಲು ನಾನು ಅನೇಕ ಬಗೆಯಾಗಿ ಯೋಚಿಸುತ್ತೇನೆ, ಯತ್ನ ಮಾಡುತ್ತೇನೆ. ಹೊರವಸ್ತು ನನ್ನ ಮೇಲೆ ಕ್ರಿಯಾಕರವಾಗಿದೆ. ನಾನು ದೇಹದಲ್ಲಿ ಅನೇಕ ವಿಧವಾದ ಕ್ರಿಯೆಗಳನ್ನು ಉತ್ಪತ್ತಿ ಮಾಡುತ್ತೇನೆ. ಹೀಗೆ ಮನಸ್ಸು ದೇಹದ ಮೇಲೂ ಮನಸ್ಸಿನ ಮೇಲೂ ಪರಿಣಾಮವನ್ನುಂಟುಮಾಡುತ್ತವೆಯೆಂಬ ವಾಸ್ತವ ಅನುಭವಗಳನ್ನು ನಿರಾಕರಿಸಲಾಗುವುದಿಲ್ಲ. ಆದರೆ ಮನಸ್ಸು ಚೇತನವಾದದ್ದು, ದೇಹ ಅಚೇತನವಾದದ್ದು. ಇವೆರಡೂ ವಿರುದ್ಧ ಎಂಬುದು ಅವನ ಮೂಲ ಸಿದ್ಧಾಂತ. ಇವೆರಡನ್ನೂ ಹೇಗೆ ಸಂಗತಗೊಳಿಸುವುದು ಎಂಬ ಸಮಸ್ಯೆಯನ್ನು ಪರಿಹರಿಸಲು ಆತ ತುಂಬ ಕಷ್ಟಪಟ್ಟಿದ್ದಾನೆ.

ಈ ಸಮಸ್ಯೆಯನ್ನು ಬಗೆಹರಿಸಲು ಆತ ಕೊಟ್ಟ ಉತ್ತರಗಳಲ್ಲಿ ಇದೂ ಒಂದು; ನಮ್ಮ ಆಲೋಚನೆಗಳನ್ನು ದೇಹದ ಇಂದ್ರಿಯಗಳು ಬಾಧಿಸಬಹುದು. ಆದರೆ ಆ ಬಾಧೆಗಳನ್ನು ಇಂದ್ರಿಯಗಳು ಹುಟ್ಟಿಸುವುದಿಲ್ಲ. ಆ ಬಾಧೆಗೆ ಅವು ಕಾರಣಗಳು ಅಲ್ಲ. ಬಾಧೆಗೆ ಕಾರಣ ನಮ್ಮ ಆತ್ಮಕ್ಕೂ ಇಂದ್ರಿಯಗಳಿಗೂ ಇರುವ ಸಂಸರ್ಗ. ಹೀಗೆ ಆತ್ಮ ಮತ್ತು ಇಂದ್ರಿಯಗಳಿಗೆ ಸಂಸರ್ಗವಿದ್ದರೂ ಅವು ಭಿನ್ನವಾದುವು. ಅವುಗಳ ಸ್ವಭಾವವೂ ಭಿನ್ನವಾದದ್ದು. ಇಂದ್ರಿಯಗಳು ನಮ್ಮನ್ನು ಬಂಧಿಸಿ ಬಾಧಿಸಿದರೂ ಅವುಗಳನ್ನು ಹತೋಟಿಯಲ್ಲಿ ಇಡುವುದು ನಮಗೆ ಸಾಧ್ಯವಾಗದಿದ್ದರೂ ದೇವರಿಗೆ ಅವುಗಳ ಮೇಲೆ ಸಂಪೂರ್ಣ ಹತೋಟಿ ಇದೆ. ಅವುಗಳನ್ನು ಬೇರೆಯಾಗಿಯೇ ಇಡುವ ಶಕ್ತಿ ಅವನಿಗೆ ಇದೆ. ಮನಸ್ಸಿನಲ್ಲಿ ಹುಟ್ಟಿದ ಭಾವನೆಗಳಿಗೂ ಇಂದ್ರಿಯಗಳಿಂದ ಹುಟ್ಟಿದ ಕಾಮ, ನೋವು, ಹೆದರಿಕೆ ಮುಂತಾದ ಭಾವಗಳಿಗೂ ಹೋರಾಟ ನಡೆಯುವುದು ನಿಜ. ಇಂದ್ರಿಯ ಭಾವಗಳು ಆತ್ಮಕ್ಕೆ ಬಾಧೆ ಕೊಡುವುದು ವಾಸ್ತವ. ಆದರೆ ದೇವರು ನಮಗೆ ಯೋಚಿಸುವ ಶಕ್ತಿ ಕೊಟ್ಟಿರುತ್ತಾನೆ. ಅವುಗಳನ್ನು ತಡೆದಿರುವ ಧೈರ್ಯವನ್ನೂ ಸ್ವತಂತ್ರವಾಗುವ ಇಚ್ಛೆಯನ್ನೂ ನಮಗೆ ಕೊಟ್ಟಿರುತ್ತಾನೆ. ಈ ಇಂದ್ರಿಯಗಳ ಕೋಟಲೆಯನ್ನು ನಿವಾರಿಸಿ ಅವುಗಳ ಮೇಲೆ ಸಂಪೂರ್ಣವಾದ ಹತೋಟಿ ಇಟ್ಟುಕೊಳ್ಳುವ ಶಕ್ತಿಯನ್ನು ದೇವರು ಎಲ್ಲ ಮಾನವರಿಗೂ ಕೊಟ್ಟಿರುತ್ತಾನೆ. ಈ ಶಕ್ತಿ ನಮ್ಮಲ್ಲಿ ಹುಟ್ಟುವುದಕ್ಕೆ ಜ್ಞಾನ ಕಾರಣ.

ಇಂದ್ರಿಯಗಳಿಂದ ನೇರವಾಗಿ ಹುಟ್ಟಿದ ಭಾವಗಳನ್ನು ನಾವು ನಮ್ಮ ಮನಸ್ಸಿನಲ್ಲಿ ನೇರವಾಗಿ ಹುಟ್ಟಿದ ಭಾವಗಳೆಂದು ತಿಳಿದುಕೊಂಡಿರುತ್ತೇವೆ. ಇದು ತಪ್ಪು ತಿಳಿವು, ಅಜ್ಞಾನದಿಂದ ಹುಟ್ಟಿದ್ದು. ನೇರವಾಗಿ ನಮ್ಮ ಮನಸ್ಸಿನಲ್ಲಿ ಹುಟ್ಟಿದವು, ಭಾವನೆಗಳು (ಐಡಿಯಾಸ್) ಇಂದ್ರಿಯ ಭಾವಗಳಲ್ಲಿ (ಪ್ಯಾಷನ್). ಅವಕ್ಕೂ ನಮ್ಮ ಮನಸ್ಸಿಗೂ ನೇರ ಸಂಬಂಧವಿಲ್ಲ. ಅದು ಪರೋಕ್ಷ ಸಂಬಂಧ. ಪ್ರತ್ಯಕ್ಷ ಸಂಬಂಧವಿರುವುದು ಭೌತವಾದ ಇಂದ್ರಿಯಗಳಿಗೆ ಮತ್ತು ಭೌತವಾದ ಹೊರವಸ್ತುಗಳಿಗೆ ಮಾತ್ರವೇ. ಪ್ರತ್ಯೇಕ ಸಂಬಂಧವಿರುವುದು ಮನಸ್ಸು ಮತ್ತು ಮಾನಸಿಕ ಭಾವನೆಗಳಿಗೆ ಮಾತ್ರವೇ. ಇಂದ್ರಿಯ ಭಾವಗಳಿಗೂ ಮನಸ್ಸಿನ ಭಾವಗಳಿಗೂ ಪರೋಕ್ಷ ಸಂಬಂಧ ಏರ್ಪಡುವುದು ಮನುಷ್ಯನ ಶರೀರದ ಒಂದೇ ಒಂದು ಭಾಗದಲ್ಲಿ-ಮಿದುಳಿನ ಮೂರನೆಯ ಕುಕ್ಷಿಯ ಹಿಂದುಗಡೆ ಇರುವ ಒಂದು ಗ್ರಂಥಿಯಲ್ಲಿ (ಪೈನಿಯಲ್). ಭೌತವಸ್ತುವಿಗೂ ಇಂದ್ರಿಯಕ್ಕೂ ನೇರವಾದ ಸಂಬಂಧದಿಂದ ಹುಟ್ಟಿದ ಭಾವಗಳು ಈ ಗ್ರಂಥಿಯಲ್ಲಿ ಸೇರುತ್ತವೆ. ಹೀಗೆ ಅಲ್ಲಿ ಬಂದು ಸೇರಿದುವಕ್ಕೂ ಮನಸ್ಸಿಗೂ ಇರುವ ಸಂಬಂಧ ಪರೋಕ್ಷವಾದದ್ದು. ಅದು ಪ್ರತ್ಯಕ್ಷವೆಂದು ಭ್ರಮಿಸುವುದೇ ನಮ್ಮ ಸಂಕಟಗಳಿಗೆ ಕಾರಣ. ಪ್ರತ್ಯಕ್ಷವಲ್ಲವೆಂಬ ಜ್ಞಾನೋದಯವಾದಾಗ ಸಂಕಟದಿಂದ ಪರಿಹಾರ ಮಾರ್ಗವನ್ನು ಯೋಚಿಸಿ ಕರಗತ ಮಾಡಿಕೊಳ್ಳುತ್ತೇವೆ. ಈ ಶೀಲಗಳು ಸದ್ವಿವೇಕದಿಂದ ಸದ್ಗುಣಗಳಿಂದ ಹುಟ್ಟುತ್ತವೆ. ಸದ್ಗುಣ ಆತ್ಮಕ್ಕೆ ಆಂತರಿಕವಾದದ್ದು, ಸ್ವಾಭಾವಿಕವಾದದ್ದು. ಕಾಮ, ಕ್ರೋಧ, ಹೇಡಿತನ-ಇವು ಆತ್ಮಕ್ಕೆ ನೇರವಾಗಿ ಸೇರಿದುವಲ್ಲ. ಅವು ಆತ್ಮದ ಮುಂದೆ ಕೇವಲ ಸುಳಿದಾಡುತ್ತವೆ. ಇದೆಲ್ಲ ಭಗವದಿಚ್ಛೆ, ಪಾಪಿಗಳಾದ ನಮ್ಮನ್ನು ಸನ್ಮಾರ್ಗಕ್ಕೆ ತಿರುಗಿಸಲು ದೇವರು ಏರ್ಪಡಿಸಿದ ನಿಯಮ. ಈ ವಾದಕ್ಕೂ ಮಧ್ಯಯುಗದ ಕ್ರೈಸ್ತ ತಾತ್ವಿಕರ ನಿರ್ವಿಚಾರ (ಡಾಗ್ಮ್ಯಾಟಿಸಂ) ವಾದಕ್ಕೂ ವ್ಯತ್ಯಾಸವಿಲ್ಲ. ಬೌದ್ಧಿಕ ಮಾರ್ಗವೊಂದೇ ತತ್ತ್ವ ಅನುಸರಿಸಬೇಕಾದ ಮಾರ್ಗವನ್ನು ಡೇಕಾರ್ಟ್ ಆಶ್ರಯಿಸಿರುತ್ತಾನೆ. ಬೌದ್ಧಿಕ ತಂದ ವಿಚಾರವಾದದಿಂದ ಪ್ರಾರಂಭವಾದ ಅವನ ತತ್ತ್ವ ನಿರ್ವಿಚಾರ ತತ್ತ್ವದಲ್ಲಿ ಪರಿಸಮಾಪ್ತಿಗೊಂಡಿದೆ.

ಡೇಕಾರ್ಟ್‍ನ ಸ್ವತಂತ್ರ ವಿಚಾರಶ್ರದ್ಧೆ ಜನರನ್ನು ಆಕರ್ಷಿಸಿತು. ಆದರೆ ಅವನ ತತ್ತ್ವದಿಂದ ಹುಟ್ಟಿದ ಸಮಸ್ಯೆಗಳನ್ನು ಕಂಡು ತಲೆ ಕೆರೆದುಕೊಳ್ಳುವಂತಾಯಿತು. 1. ಈಶ್ವರನೂ ಪ್ರಕೃತಿಯೂ ಒಂದಕ್ಕೊಂದು ಪ್ರತಿಯಾದುವಾದರೆ, ಅವುಗಳಿಗೆ ಯಾವ ಬಗೆಯ ಸಂಬಂಧವೂ ಇಲ್ಲದಂತಾಗುತ್ತದೆ. ಶುದ್ಧ ಚೇತನ ಸ್ವರೂಪನೂ ಅಚಲನೂ ಆದ ಈಶ್ವರ ಅಚೇತನವಾದ ಭೌತವಸ್ತುವಿನಲ್ಲಿ ಚಲನೆಯನ್ನು ಏರ್ಪಡಿಸುವುದು ಹೇಗೆ ಸಾಧ್ಯ. 2. ಈಶ್ವರನೊಬ್ಬನೇ ನಿತ್ಯದ್ರವ್ಯವಾದರೆ ಅವನಿಗೆ ಬಾಹಿರವಾದ ಆತ್ಮ ಪದಾರ್ಥವಾಗಲಿ ಭೌತ ಪದಾರ್ಥವಾಗಲಿ ಇರುವುದು ಅನುಚಿತವಾಗುತ್ತದೆ. ದ್ವೈತ ತತ್ತ್ವವನ್ನು ಬಿಡಬೇಕಾಗುತ್ತದೆ. ಈಶ್ವರನೊಬ್ಬನೇ ಸತ್ಯವೆಂಬ ಏಕತೆಯ ತತ್ತ್ವವನ್ನು ಒಪ್ಪಿಕೊಳ್ಳಬೇಕಾಗುತ್ತದೆ. 3. ಮಾನವನ ಆತ್ಮ ಸ್ವತಂತ್ರವಾದದ್ದೆಂದು ಡೇಕಾರ್ಟ್ ಹೇಳುತ್ತಾನೆ. ಈಶ್ವರೊಬ್ಬನೇ ಸ್ವತಂತ್ರನೆಂದೂ ಹೇಳುತ್ತಾನೆ. ಮಾನವ ಸ್ವತಂತ್ರನಾದರೆ ಈಶ್ವರಭಾವನೆ ಅನಗತ್ಯವಾಗುತ್ತದೆ. ಈಶ್ವರನೊಬ್ಬನೇ ಸ್ವತಂತ್ರನೆಂದರೆ ಮಾನವ ಅಸ್ವತಂತ್ರನೆನ್ನಬೇಕಾಗುತ್ತದೆ. ಹೀಗೆ ಆತ್ಮಕ್ಕೂ ಈಶ್ವರನಿಗೂ ಇರುವ ಸಂಬಂಧ ಗೂಢ ಸಮಸ್ಯೆಯಾಗಿ ಪರ್ಯವಸಾನಹೊಂದುತ್ತದೆ. 4. ಶರೀರ ಭೌತವಾದುದಾದರೆ, ಕೇವಲ ಒಂದು ಯಂತ್ರದಂತಿದ್ದರೆ, ಆತ್ಮ ಅದಕ್ಕೆ ವಿರುದ್ಧವಾದ ಕೇವಲ ಚೇತನವಾದರೆ, ಇವೆರಡಕ್ಕೂ ಯಾವ ಸಂಬಂಧವೂ ಇರಕೂಡದು. ಹಾಗೆ ಎರಡಕ್ಕೂ ಸಂಬಂಧವಿರಬೇಕಾದರೆ ಎರಡರ ಸ್ವಭಾವಗಳೂ ವಿರುದ್ಧವಾಗಿರಕೂಡದು.

ಡೇಕಾರ್ಟ್ ಒಂದು ಕಡೆ ಆಧುನಿಕ ಭೌತ ವಿಜ್ಞಾನವನ್ನು ಸಮರ್ಥಿಸಲೂ ಇನ್ನೊಂದು ಕಡೆ ಈಶ್ವರ ಮತ್ತು ಆತ್ಮಗಳ ವಿಚಾರವಾಗಿ ಕ್ರೈಸ್ತರ ನಂಬಿಕೆಗಳನ್ನು ಸಮರ್ಥಿಸಲೂ ಪಣ ತೊಟ್ಟಿದ್ದಾನೆ. ಎರಡು ಸಂಕಲ್ಪಗಳನ್ನೂ ಸೇರಿಸಿ ಸಂಗತಗೊಳಿಸಲು ಆತ ಮಾಡಿದ ಪ್ರಯತ್ನದಿಂದ ಮೇಲೆ ಹೇಳಿದ ಎಲ್ಲ ತೊಂದರೆಗಳೂ ಉದ್ಭವಿಸಿವೆ. ಇವನ ಅನಂತರದಲ್ಲಿ ಬಂದ ತಾತ್ತ್ವಿಕರಲ್ಲಿ ಕೆಲವರು ಇವನ ತತ್ತ್ವದಲ್ಲಿರುವ ಅಸಂಗತ ಅಂಶಗಳನ್ನು ಬಯಲಿಗೆ ಎಳೆದರು. ಇನ್ನೂ ಕೆಲವರು ಆ ದೋಷಗಳನ್ನು ಪರಿಹರಿಸುವ ಮಾರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸಿದರು. ಅವರು ಅನುಸರಿಸಬಹುದಾದ ಮಾರ್ಗಗಳು ಇವು: 1. ದ್ವೈತದ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಪ್ರಕೃತಿಯನ್ನು ಬಿಟ್ಟು ಚೇತನ ವಸ್ತುವೊಂದೇ ಸತ್ಯವಾದದ್ದು, ಸ್ವತಂತ್ರವಾದದ್ದು ಎಂದು ಮಾಲ್ ಬ್ರಾಂಚ್‍ನಂತೆ ವಾದಿಸುವುದು. 2. ಚೇತನವನ್ನು ನಿರಾಕರಿಸಿ ಭೌತವಸ್ತುವೊಂದೇ ಸತ್ಯವೆಂದು ಹಾಬ್ಸ್‍ನಂತೆ ವಾದಿಸುವುದು. 3. ಬೇರೆ ಬೇರೆಯಾದ ಮತ್ತು ಸ್ವತಂತ್ರವಾದ ಚೇತನ ಮತ್ತು ಅಚೇತನಗಳು ವಸ್ತುಗಳಲ್ಲ, ಅವು ಕೇವಲ ಗುಣಗಳು, ಅವು ಒಂದೇ ಆದ ಈಶ್ವರನ ಎರಡು ಗುಣಗಳೆಂದು ಸ್ಟಿನೋಜûನಂತೆ ವಾದಿಸುವುದು. 4. ಆತ್ಮ ಮತ್ತು ಜೀವ ಇವೆರಡೂ ಭಿನ್ನ, ಒಂದರ ಮೇಲೆ ಇನ್ನೊಂದು ಯಾವ ಬಗೆಯಾದ ಬದಲಾವಣೆಯನ್ನೂ ಉಂಟುಮಾಡುವುದಿಲ್ಲ, ಅವೆರಡೂ ಸಮಾನಾಂತರವಾದುವು ಎಂದು ಸ್ಟಿನೋಜóನಂತೆ ವಾದಿಸುವುದು. 5. ಜ್ಞಾನಕ್ಕೆ ಇಂದ್ರಿಯಾನುಭವವೇ ಪ್ರಧಾನ ಆಶ್ರಯ. ಇಂದ್ರಿಯ ಅನುಭವಗಳ ಪರಿಮಿತಿಗೆ ಒಳಪಟ್ಟು ಅವುಗಳ ಸಾಹಚರ್ಯದಿಂದ ಹುಟ್ಟಿದವೇ ಬೌದ್ಧಿಕ ಭಾವನೆಗಳು. ಅವು ಸಂಪೂರ್ಣವಾಗಿ ಇಂದ್ರಿಯಾನುಭವಗಳಿಗೆ ಅಧೀನವಾದುವು; ಇಂದ್ರಿಯಾನುಭವಕ್ಕೆ ಮುಂಚೆ ಮನಸ್ಸಿನಲ್ಲಿ ಆಂತರಿಕ ಭಾವನೆಗಳು ಯಾವುವೂ ಇಲ್ಲ-ಈ ಬಗೆಯಾಗಿ ಲಾಕ್, ಬಾಕ್ರ್ಲೆ, ಹ್ಯೂಮ್ ಮುಂತಾದವರಂತೆ ವಾದಿಸಬಹುದು.

ಈ ಒಂದೊಂದು ತತ್ತ್ವವನ್ನೂ ಡೇಕಾರ್ಟ್‍ನ ತರುವಾಯ ಬಂದ ತಾತ್ತ್ವಿಕರು ಸಮರ್ಥಿಸಲು ಪ್ರಯತ್ನಪಟ್ಟರು. ಡೇಕಾರ್ಟ್ ಪ್ರಾರಂಭಿಸಿದ ಬುಧ್ಯಾರೂಢವಾದವನ್ನು ಬಿಡದೆ ಅದನ್ನೊಪ್ಪಿ ಅದಕ್ಕೆ ಸಂಗತವಾದ ತತ್ತ್ವವನ್ನು ಏರ್ಪಡಿಸಲು ಪ್ರಯತ್ನಪಟ್ಟ ಇಬ್ಬರ ತತ್ತ್ವವನ್ನು ಮಾತ್ರ ಇನ್ನು ಮುಂದೆ ಪರಿಶೀಲಿಸಲಾಗುವುದು. ಇದಾದಮೇಲೆ ಡೇಕಾರ್ಟ್‍ನ ತತ್ತ್ವವನ್ನು ಪ್ರತಿಭಟಿಸಲು ಏರ್ಪಟ್ಟ ಅನುಭವಾರೂಢವಾದವನ್ನೂ ಪರಿಶೀಲಿಸಲಾಗುವುದು.

ಸ್ಪಿನೋಜû : (1632-1677). ಸ್ಪಿನೋಜû ಹಾಲೆಂಡಿನಲ್ಲಿ ಯಹೂದಿ ಮನೆತನದಲ್ಲಿ ಹುಟ್ಟಿದ. ಮತಗ್ರಂಥಗಳನ್ನು ಚೆನ್ನಾಗಿ ತಿಳಿದುಕೊಂಡ. ಆದರೆ ಆ ಮತ ತತ್ತ್ವವೂ ಕ್ರೈಸ್ತಮತ ತತ್ತ್ವದಂತೆ ವಿಜ್ಞಾನಕ್ಕೆ ವಿರುದ್ಧವಾದ ಅಂಶಗಳಿಂದ ಕೂಡಿದ್ದರಿಂದ ಆ ಅಂಶಗಳನ್ನು ಖಂಡಿಸಿದ. ಯೆಹೂದಿಗಳು ಬಹಿಷ್ಕಾರ ಹಾಕಿ ಅವನನ್ನು ತಮ್ಮ ಸಮಾಜದಿಂದ ಹೊರದೂಡಿದರು. ಹೇಗ್‍ನಲ್ಲಿ ನೆಲಸಿ ಕನ್ನಡಕದ ಗಾಜುಗಳನ್ನು ತಯಾರಿಸಿ ಜೀವನ ನಡೆಸಿದ. ಡೇಕಾರ್ಟ್‍ನ ತತ್ತ್ವದಿಂದ ಆಕರ್ಷಿತನಾಗಿ ಅವನ ತತ್ತ್ವವನ್ನು ಕುರಿತು ಒಂದು ಗ್ರಂಥ ಬರೆದ. ಗ್ರೀಸಿನ ಪ್ಲೊಟೈನಸ್, ಅರೇಬಿಯದ ಅವೆರೋಸ್, ಯಹೂದ್ಯ ಮೈಮನೋಡೀಸ್, ಇಟಲಿಯ ಗಯೋರ್ಡಿನೊ, ಬ್ರೂನೊ ಮುಂತಾದ ತಾತ್ವಿಕರಿಂದ ಪ್ರಚೋದನೆ ಪಡೆದ. ಇವರೆಲ್ಲರ ತತ್ವದೃಷ್ಟಿಯಿಂದ ಡೇಕಾರ್ಟ್‍ನ ತತ್ವನ್ನು ಪರೀಕ್ಷಿಸಿ ಅದರಲ್ಲಿದ್ದ ಕೆಲವು ಅಸಂಗತ ಅಂಶಗಳನ್ನು ಬಿಟ್ಟು ಅದನ್ನು ಮಾರ್ಪಡಿಸಿದ. ಅವನಿಗೆ ತತ್ತ್ವ ವಿಚಾರ ಒಂದು ಗಣಿತ ಸಮಸ್ಯೆಯನ್ನು ಪರಿಹರಿಸುವ ಬೌದ್ಧಿಕ ಕ್ರೀಡೆಯಾಗಿರಲಿಲ್ಲ. ಪರಮಸುಖವನ್ನು ಪಡೆಯುವುದೇ ಅವನ ತತ್ತ್ವಚಿಂತನೆಯ ಉದ್ದೇಶ. ಮನಸ್ಸು ಪ್ರಕೃತಿಯಲ್ಲಿ ಲೀನವಾದಾಗ ಹುಟ್ಟಿದ ಜ್ಞಾನವೇ ಪರಮಶ್ರೇಯಸ್ಸಿಗೆ ದಾರಿ. ಪ್ರಕೃತಿಯ ಮರ್ಮಗಳು ಹೆಚ್ಚು ಹೆಚ್ಚಾಗಿ ಮನಗೊಂಡಾಗ ನಿರುಪಯೋಗಿ ವ್ಯಸನಗಳಿಂದ ಮನಸ್ಸನ್ನು ಬಿಡುಗಡೆಮಾಡಲು ಸಾಧ್ಯವಾಗುತ್ತದೆ. ಇದೇ ತತ್ತ್ವದ ಪೂರ್ಣವಿಧಾನ.

1. ಬುದ್ಧ್ಯಾರೂಢವಾದ: ಸ್ಪಿನೋಜû ಡೇಕಾರ್ಟ್‍ನಂತೆ ಬುದ್ಧ್ಯಾರೂಢವಾದಿಯಾದರೂ ಭಾವನೆಗಳು ಅನುಭವ ಹುಟ್ಟುವುದಕ್ಕೆ ಮುಂಚೆ ಬುದ್ಧಿಯಲ್ಲಿ ಅಂತರ್ಗತವಾಗಿರುತ್ತವೆಂದು ಹೇಳಲಿಲ್ಲ. ಆದರೂ ಸ್ಪಷ್ಟ ಮತ್ತು ನಿರ್ದಿಷ್ಟವಾಗಿರುವ ಭಾವನೆಗಳೇ ಪ್ರಾಮಾಣಿಕ ಭಾವನೆಗಳೆಂದು ಡೇಕಾರ್ಟ್‍ನ ಅಭಿಪ್ರಾಯವನ್ನು ಒಪ್ಪಿಕೊಂಡ. ಅವನಂತೆಯೇ ಗಣಿತವಿಧಾನವೇ ತತ್ತ್ವ ಅವಲಂಬಿಸಬೇಕಾದ ವಿಧಾನವೆಂದು ಒಪ್ಪಿದ್ದಲ್ಲದೆ ಎಥಿಕ್ಸ್ ಎಂಬ ತನ್ನ ಮುಖ್ಯಗ್ರಂಥವನ್ನು ಯೂಕ್ಲಿಡ್ ರೇಖಾಗಣಿತವನ್ನು ಬರೆದ ರೀತಿಯಲ್ಲಿ ಬರೆದ. ಡೇಕಾರ್ಟ್ ಜ್ಞಾನವನ್ನು ಇಂದ್ರಿಯಜ್ಞಾನ, ಬೌದ್ಧಿಕಜ್ಞಾನ ಎಂದು ಎರಡಾಗಿ ಮಾತ್ರ ವಿಭಾಗಿಸಿರುತ್ತಾನೆ. ಸ್ಪಿನೋಜû ಇವುಗಳಿಗಿಂತ ಭಿನ್ನವಾದ ಪ್ರತಿಭಾಜ್ಞಾನವನ್ನು ಬೌದ್ಧಿಕಜ್ಞಾನಕ್ಕಿಂತ ಉತ್ಕøಷ್ಟವಾದದ್ದು. ಬೌದ್ಧಿಕ ಭಾವನೆಗಳು ಈ ಬಿಡಿ ಬಿಡಿಯಾದ ಭಾವನೆಗಳು. ಇವುಗಳು ನಮಗೆ ಎಲ್ಲವನ್ನೂ ಒಳಗೊಂಡ ಪರಿಪೂರ್ಣ ವಸ್ತುವಿನ ಜ್ಞಾನವನ್ನು ಕೊಡುವುದಿಲ್ಲ. ಪ್ರತಿಭಾಜ್ಞಾನವಾದರೋ ಪರಮ ವಸ್ತುವಿನ ಎಲ್ಲವನ್ನೂ ಒಳಗೊಂಡ ಪರಿಪೂರ್ಣ ಅಪರೋಕ್ಷ (ಇಮ್ಮೀಡಿಯಟ್) ಜ್ಞಾನವನ್ನು ಕೊಡುತ್ತದೆ. ಅದೇ ಪರಮಜ್ಞಾನ. ಪರಮ ಉತ್ಕøಷ್ಟವಾದ ಜ್ಞಾನವೆಂದು ಪ್ಲೊಟೈನಸ್‍ನಂತೆ ಸ್ಪಿನೋಜûನು ಅದನ್ನು ವರ್ಣಿಸಿರುತ್ತಾನೆ. ಈ ವಿಚಾರದಲ್ಲಿ ಅವನ ಜ್ಞಾನತತ್ತ್ವ ಡೇಕಾರ್ಟ್‍ನದಕ್ಕಿಂತ ಭಿನ್ನ. ಪ್ರತಿಭಾಜ್ಞಾನ ಬೌದ್ಧಿಕ ಜ್ಞಾನಕ್ಕೆ, ವಿಜ್ಞಾನಕ್ಕೆ, ವಿರುದ್ಧವಲ್ಲ. ಅದರ ಲೋಪವನ್ನು ಪರಿಹರಿಸುತ್ತದೆ ಎಂಬುದು ಸ್ಪಿನೋಜûನ ಅಭಿಮತ. ಈ ರೀತಿಯಾಗಿ ಸ್ಪಿನೋಜû ಬುದ್ಧ್ಯಾರೂಢವಾದವನ್ನು ಮಾರ್ಪಡಿಸಿದ್ದಾನೆ. ಈ ಭಾವನೆ ಅವನಿಂದಾಚೆ ಬಂದ ಕ್ಯಾಂಟ್ ಮತ್ತು ಹೆಗೆಲ್ ಮುಂತಾದವರ ತತ್ತ್ವದಲ್ಲಿ ಪುನರುತ್ಥಾಪನೆಯಾಗಿದೆ.

2. ಮೂಲದ್ರವ್ಯ; ಡೇಕಾರ್ಟ್ ದ್ರವ್ಯವನ್ನು ಈ ರೀತಿಯಾಗಿ ನಿರೂಪಿಸಿರುತ್ತಾನೆ: ಬೇರೆ ಯಾವುದರ ಆಶ್ರಯವಿಲ್ಲದೆ ಯಾವುದು ಇರಬಲ್ಲದೋ ಅದು ದ್ರವ್ಯ. ದ್ರವ್ಯಕ್ಕೆ ಡೇಕಾರ್ಟ್ ಸಮ್ಮತವಾಗಿ ತೀರ್ಮಾನ ಮಾಡಿದ. ಅಂಥ ದ್ರವ್ಯ ತನಗೆ ತಾನೇ ಕಾರಣವಾಗಬಹುದೆಂಬುದೇ ಹೊರತು (ಕಾಸಾ ಸುಯಿ) ಬೇರೆ ಯಾವುದೂ ಅದಕ್ಕೆ ಆಶ್ರಯವಾಗಿರಲಾರದು. ಅದು ಸ್ವಾವಲಂಬನ ದ್ರವ್ಯ ತ್ರಿಕೋಣದ ಸ್ವಭಾವದಿಂದ ಅದರ ಎಲ್ಲ ಲಕ್ಷಣಗಳೂ ಗಮ್ಯವಾದಂತೆ, ಈ ಸ್ವಾವಲಂಬನ ದ್ರವ್ಯದ ಗುಣಗಳೆಲ್ಲ ಅದರ ಸ್ವಭಾವದಿಂದಲೇ ಗಮ್ಯ. ಅದಕ್ಕೆ ಯಾವ ಬಗೆಯ ಪುರುಷ ಲಕ್ಷಣವನ್ನೂ ಆರೋಪಿಸಲಾಗದು. ಏಕೆಂದರೆ ಪುರುಷಲಕ್ಷಣಗಳನ್ನು ಆರೋಪಿಸುವುದರಿಂದ ಅದರ ಪರಮ (ಆಬ್ಸ್‍ಟೂಟ್) ಸ್ವಭಾವವನ್ನು ಕುಂಠಿತಗೊಳಿಸಿದಂತಾಗುತ್ತದೆ. (ಆಲ್ ಡಿಟರ್ಮಿನೇಷನ್ ಈಸ್ ನೆಗೇಷನ್) ಮನುಷ್ಯನಿಗಿರುವಂತೆ ಬುದ್ಧಿಯನ್ನಾಗಲೀ ಇಚ್ಛೆಯನ್ನಾಗಲಿ ಆರೋಪಿಸಿದರೆ ಅದರ ಅನಂತತ್ತ್ವಕ್ಕೆ ಚ್ಯುತಿಯುಂಟಾಗುತ್ತದೆ. ದೈವ ಮಾಡುವುದೆಲ್ಲ ಮಾನವ ಧರ್ಮವನ್ನು ಎತ್ತಿಹಿಡಿಯುವುದಕ್ಕಾಗಿ ಎಂದು ಅನೇಕರು ಹೇಳಿರುತ್ತಾರೆ. ಹೀಗೆ ಹೇಳಿದಾಗ ಅವರು ದೈವ ತನಗಿಂತ ಭಿನ್ನವಾದ ಮತ್ತು ಸ್ವತಂತ್ರವಾದ ಯಾವುದೇ ಒಂದು ಮಾದರಿಗನುಸಾರವಾಗಿ ವರ್ತಿಸುವುದೆಂದೂ ಹೇಳಿದಂತಾಗುತ್ತದೆ. ಹೀಗೆ ಭಾವಿಸಿದಾಗ ಅದನ್ನು ವಿಧಿಗೆ ಒಳಪಡಿಸಿದಂತಾಗುತ್ತದೆ. ಎಲ್ಲದರ ತಿರುಳಾದದ್ದನ್ನು ಎಲ್ಲದರ ಸ್ವತಂತ್ರ ಮತ್ತು ಪ್ರಥಮ ಕಾರಣವಾದ ದೈವವನ್ನು ದುರ್ಬಲಗೊಳಿಸುವುದು ತಿಳಿಗೇಡಿತನ.

ದೈವ ವಿಶ್ವದಿಂದ ಬೇರೆಯಾಗಿ ಬಹುದೂರದಲ್ಲಿದ್ದುಕೊಂಡು ಎಲ್ಲವನ್ನೂ ಉಂಟುಮಾಡುವುದಿಲ್ಲ. ಸ್ಪಿನೋಜûನ ಅಭಿಪ್ರಾಯ ಹೀಗಿದೆ: ದೈವ ಸೃಷ್ಟಿಕರ್ತನಲ್ಲ. ಅದು ಪ್ರಕೃತಿಯಲ್ಲಿ ವ್ಯಾಪಕವಾಗಿರುತ್ತದೆ. (ಇಮ್ಮೇನೆಂಟ್). ಪ್ರಕೃತಿ ದೈವದಲ್ಲಿ ಐಕ್ಯವಾಗಿರುತ್ತದೆ (ಪ್ಯಾಂಥೀಯಿಸಂ). ಕಾರ್ಯವಾದ ಪ್ರಕೃತಿ ಕಾರಣವಾದ ದೈವದ ಒಳಗಿನಿಂದಲೇ ಬಂದದ್ದು. ವಿಶ್ವದಲ್ಲಿ ಎಲ್ಲದರ ತಿರುಳಾದದ್ದು, ಅಂತರ್ಯಾಮಿಯಾದದ್ದು. ಕಾರಣರೂಪನಾದ ದೈವವನ್ನು ನ್ಯಾಟುರ ನ್ಯಟುರಾನ್ಸ್ ಎಂದೂ ಕಾರ್ಯರೂಪದ ದೈವವನ್ನು ನ್ಯಾಟುರ ನ್ಯಟುರಾಟ ಎಂದೂ ಆತ ಕರೆದಿದ್ದಾನೆ.

3. ದೈವದ ಗುಣಗಳು: ದೈವದ ಗುಣಗಳು ಅಗಣಿತ. ಆದರೆ ಮಾನವ ಗುರುತಿಸಬಲ್ಲ ಗುಣಗಳು ಎರಡೇ. ಅವು ಯೋಚನೆ ಮತ್ತು ವಿಸ್ತಾರ. ಈ ಎರಡು ಗುಣಗಳು ಮಾನವ ದೈವಕ್ಕೆ ಆರೋಪಿಸಿದ ಗುಣಗಳೆಂದು ಹೆಗೆಲ್‍ನ ಅಭಿಪ್ರಾಯ. ಅವು ದೈವದ ನಿಜವಾದ ಅಭಿವ್ಯಕ್ತ ಗುಣಗಳೆಂದು ಫಿಷರ್‍ನ ಅಭಿಪ್ರಾಯ. ಇಲ್ಲಿ ನಾವು ಒಂದು ನಿರ್ಣಯಕ್ಕೆ ಬರಬೇಕಾದರೆ ಯೋಚನೆ ಎಂಬ ಪದಕ್ಕೆ ಸ್ಪಿನೋಜû ಕೊಟ್ಟ ಅರ್ಥವೇನು ಎಂಬುದನ್ನು ನಿರ್ಧರಿಸಿಕೊಳ್ಳಬೇಕು. ಯೋಚನೆ ಎಂದರೆ ಮಾನವನ ಯೋಚನೆ ಎಂದು ಅರ್ಥಮಾಡಿಕೊಂಡರೆ ಸ್ಪಿನೋಜûನನ್ನು ಭಾವವಾದಿ (ಐಡಿಯಲಿಸ್ಟ್) ಎಂದು ಎಣಿಸಬೇಕಾಗುತ್ತದೆ. ನಾವು ತಿಳಿಯುವುದರಿಂದ ದೈವ ಚೇತನವಾಗುವುದಿಲ್ಲ. ದೈವದಲ್ಲಿ ಬುದ್ಧಿವಂತಿಕೆ ಹುಟ್ಟುವುದಿಲ್ಲ. ದೈವ ಚೇತನ ಸ್ವರೂಪವಾದದ್ದರಿಂದ ಅದರ ರೂಪಾಂತರಗಳಾದ ನಾವು ಬುದ್ಧಿವಂತರಾಗಿರುತ್ತೇವೆ. ದೈವದ ರಚನೆಯೂ ಪ್ರಕೃತಿಯ ರಚನೆಯೂ ಚೇತನಮಯವಾದ್ದರಿಂದ ಆ ಚೇತನದ ಅಂಶ ನಮ್ಮಲ್ಲಿರುವುದರಿಂದ ನಮಗೆ ಪ್ರಕೃತಿಯನ್ನು ತಿಳಿಯಲು ಸಾಧ್ಯವಾಗುವುದು. ಹೀಗೆ ಅರ್ಥಮಾಡಿಕೊಂಡರೆ ಅವನ ತತ್ತ್ವ ಪ್ಲೇಟೋನ ತತ್ತ್ವದಂತೆ ಒಂದು ಬಗೆಯಾದ ವಸ್ತುವಾಗುತ್ತದೆ. ಮಾನವನಿಗೆ ಪ್ರಕೃತಿ ವಾಸ್ತವವಸ್ತು, ಪ್ರಕೃತಿಯಲ್ಲಿರುವುವೆಲ್ಲ ವಾಸ್ತವವಸ್ತುಗಳು. ಅವು ಮಾನವನ ವೈಯಕ್ತಿಕ ಭಾವನೆಗಳಲ್ಲವೆಂಬುದೇ ಸ್ಪಿನೋಜûನ ಸಿದ್ಧಾಂತವಾಗುತ್ತದೆ. ಈ ಸಿದ್ಧಾಂತವೇ ಅವನ ತತ್ತ್ವಕ್ಕೆ ಹೆಚ್ಚು ಸಂಗತವಾದದ್ದು. ಈ ಸಿದ್ಧಾಂತ ಡೇಕಾರ್ಟ್‍ನ ಬುದ್ಧ್ಯಾರೂಢವಾದಕ್ಕಿಂತ ಭಿನ್ನ. ಬಹುಶಃ ಅದು ಮಾರ್ಪಾಟಾದ ಬುದ್ಧ್ಯಾರೂಢವಾದ. ಅದು ಡೇಕಾರ್ಟ್‍ನ ಬುದ್ಧ್ಯಾರೂಢವಾದಕ್ಕಿಂತ ಹೆಚ್ಚು ಸಮರ್ಪಕವಾದದ್ದು.

ದೈವದ ಇನ್ನೊಂದು ಸ್ವರೂಪ ವಿಸ್ತರಣೆ. ಇದು ಡೇಕಾರ್ಟ್‍ನ ವಿಸ್ತರಣೆಯಂತೆ ಭೌತವಸ್ತುವಿನ ಗುಣವಲ್ಲ. ದೈವದ ಸ್ವರೂಪ ಗುಣಗಳು ಬುದ್ಧಿ ಮತ್ತು ವಿಸ್ತರಣೆ. ಇವೆರಡೂ ಒಂದನ್ನೊಂದು ಬಿಡದೆ ಸೇರಿಕೊಂಡ ಗುಣಗಳು. ವಿಸ್ತರಣೆ ಇದ್ದಕಡೆ ಬುದ್ಧಿ ಇದೆ. ಮಾನವನ ಬುದ್ಧಿ ವಿಸ್ತರಣೆಯುಳ್ಳದ್ದು ಎಂದು ಹೇಳಬೇಕಾಗುತ್ತದೆ. ಹೀಗೆ ಬುದ್ಧಿ ಇದ್ದ ಕಡೆ ವಿಸ್ತರಣೆ ಅಥವಾ ಆಕಾಶ ಇದೆ. ಆಕಾಶವಿದ್ದೆಡೆಯಲ್ಲಿ ಬುದ್ಧಿ ಇದೆ ಎಂದು ಹೇಳಿದಮಾತ್ರಕ್ಕೆ ಬುದ್ಧಿಯೂ ಮಾನವನ ಶರೀರವೂ ಒಂದೇ ಎಂದು ಭಾವಿಸಕೂಡದು. ಈ ಒಂದೊಂದನ್ನೂ ಬೇರೆ ಬೇರೆಯಾಗಿ ಗುರುತಿಸಬಹುದು. ಚೇತನಕ್ಕೆ ಚಲನೆ ಇಲ್ಲ, ಚಲನೆ ಇರುವ ದೇಹಕ್ಕೆ ಬುದ್ಧಿ ಇಲ್ಲ. ಚೇತನ ಚಲನೆಯನ್ನು ಹುಟ್ಟಿಸಲಾರದು, ಚಲನೆ ಚೇತನವನ್ನು ಹುಟ್ಟಿಸಲಾರದು. ಒಂದು ಇನ್ನೊಂದಕ್ಕೆ ಕಾರಣವಾಗಲಾರದು. ಬೌದ್ಧಿಕವಾದುದಕ್ಕೆ ಬೌದ್ಧಿಕವಾದುದು ಮಾತ್ರ ಕಾರಣವಾಗಬಲ್ಲುದು. ಭೌತವಾದುದಕ್ಕೆ ಭೌತವಾದುದು ಮಾತ್ರವೇ ಕಾರಣವಾಗಬಲ್ಲುದು. ಎರಡು ವಸ್ತುಗಳಲ್ಲಿ ಎರಡಕ್ಕೂ ಸಮಾನವಾದುದು ಇಲ್ಲವಾದರೆ ಒಂದು ಇನ್ನೊಂದಕ್ಕೆ ಕಾರಣವಾಗಲಾರದು. ಬುದ್ಧಿಯ ವೃತ್ತಿಗಳನ್ನು ಭೌತವಾದಿಗಳು ಹೇಳುವಂತೆ ಭೌತವಸ್ತುವಿಗೆ ಸಹಜವಾದ ನಿಯಮಗಳಿಗೆ ಒಳಪಡಿಸಲಾಗುವುದಿಲ್ಲ. ಭೌತವ್ಯಾಪಾರಗಳನ್ನು ಬುದ್ಧಿಗೆ ಸ್ವಾಭಾವಿಕವಾದ ನಿಯಮಗಳಿಗೆ ಒಳಪಡಿಸಲಾಗುವುದಿಲ್ಲ. ಮಾನವನ ಬುದ್ಧಿಯೂ ದೇಹವೂ ಎರಡೂ ಒಂದೇ ಕಾರಣದ (ದೈವದ) ಕಾರ್ಯಗಳು. ಎರಡೂ ಆ ಮೂಲಕಾರಣಗಳಿಂದ ಗಮ್ಯ. ಕಾರಣರೂಪದಲ್ಲಿ ಒಂದೇ ಆದ ದೈವದ ಸ್ವರೂಪವನ್ನು ಒಂದು ನಿಟ್ಟಿನಿಂದ ನೋಡಿದಾಗ ಅದು ಆಕಾಶವಾಗಿ ಗೋಚರವಾಗುತ್ತದೆ. ಇನ್ನೊಂದು ನಿಟ್ಟಿನಿಂದ ಅಂದರೆ ಬೌದ್ಧಿಕವಾಗಿ ನೋಡಿದಾಗ ಅದು ಬುದ್ಧಿಯಾಗಿ ಗೋಚರವಾಗುತ್ತದೆ. ಇವು ಒಂದೇ ಆದ ಮೂಲವಸ್ತುವಿನ ಎರಡು ಮುಖಗಳು. ಸಮಾನಾಂತರ ಗುಣಗಳು.

4. ಪರ್ಯಾಯಗಳು (ಮೋಡ್ಸ್) : ಮೂಲಗುಣಗಳ ಪರಿಣಾಮಗಳೇ ಪರ್ಯಾಯಗಳು. ಪರ್ಯಾಯಗಳು ಪರಾಶ್ರಯವಾದುವು. ಭೌತವಸ್ತುಗಳೆಲ್ಲ ಆಕಾಶದ ಪರಿಣಾಮಗಳು. ಆಕಾಶದ ಆಶ್ರಯವಿಲ್ಲದೆ ಚಲಿಸುವ ಯಾವ ಭೌತರೂಪವೂ ಇರಲಾರದು. ಬುದ್ಧಿಯನ್ನು ಆಶ್ರಯಿಸದೆ ಬುದ್ಧಿರೂಪವಾದ ಭಾವನೆಗಳೂ ಇರಲಾರವು. ಕೇವಲ ಖಾಲಿಯಾದ ಆಕಾಶವಾಗಲಿ, ಕೇವಲ ಖಾಲಿಯಾದ ಬುದ್ಧಿಯಾಗಲಿ ಎಲ್ಲಿಯೂ ಇಲ್ಲ. ಇರುವುವೆಲ್ಲವೂ ಪೃಥಕ್ಕಾದ ಭೌತವಸ್ತುಗಳು, ಪೃಥಕ್ಕಾದ ಬುದ್ಧಿಗಳು. ಆದರೂ ಪೃಥಕ್ಕಾದ ಭೌತವಸ್ತುಗಳನ್ನು ಅವೆಲ್ಲಕ್ಕೂ ಸಾಮಾನ್ಯವಾದ ಆಕಾಶವನ್ನು ಬಿಟ್ಟು ಭಾವಿಸಲಾಗುವುದಿಲ್ಲ. ಹಾಗೆಯೇ ಪೃಥಕ್ಕಾದ ಬುದ್ಧಿವೃತ್ತಿಗಳನ್ನು ಅವೆಲ್ಲಕ್ಕೂ ಸಾಮಾನ್ಯವಾದ ಬುದ್ಧಿಯನ್ನು ಬಿಟ್ಟು ಭಾವಿಸಲಾಗುವುದಿಲ್ಲ.

ಬುದ್ಧಿಯ ಪರ್ಯಾಯಗಳಾದ ಜೀವಿಗಳು, ಆಕಾಶದ ಪರ್ಯಾಯಗಳಾದ ಭೌತವಸ್ತುಗಳು ಪರಿಮಿತವಾದುವು (ಫೈನೆಟ್), ಕಾಲದೇಶಪರಿಮಿತಿಗಳಿಗೆ ಒಳಗಾದುವು. ಅನಂತಭಾವನೆಗಳ ವ್ಯವಸ್ಥೆ, ಅನಂತಬುದ್ಧಿ, ಅನಂತಭೌತರೂಪಗಳ ವ್ಯವಸ್ಥೆ, ಅನಂತ ಆಕಾಶ, ದೈವದ ಅನಂತಬುದ್ಧಿಯ ವ್ಯವಸ್ಥೆ, ದೈವದ ಅನಂತ ವಿಸ್ತಾರದ ವ್ಯವಸ್ಥೆಗಳು ಸೇರಿ ವಿಶ್ವವಾಗಿದೆ. ಪ್ರಧಾನಗುಣಗಳು ಬದಲಾಯಿಸುವುದಿಲ್ಲ. ಬದಲಾವಣೆ ಹೊಂದುವುವು ಪೃಥಕ್ಕಾದ ಪರ್ಯಾಯಗಳು ಮಾತ್ರವೇ.

ಮೂಲವಾದ ಬುದ್ಧಿಯ ಆಶ್ರಯವಿಲ್ಲದೆ ಯಾವ ಮಾನಸಿಕ ಭಾವನೆಯೂ ಮೂಲವಾದ ಆಕಾಶದ ಆಶ್ರಯವಿಲ್ಲದೆ ಯಾವ ಭೌತರೂಪವೂ ಇರಲಾರವಾದರೂ ಒಂದು ಪ್ರತಿಜ್ಞೆಯಿಂದ ಇನ್ನೊಂದು ಪ್ರತಿಜ್ಞೆಯನ್ನು ನಿಗಮನ ಅನುಮಾನದ ಮೂಲಕ ಪಡೆಯುವಂತೆ ಪಡೆಯಲಾಗುವುದಿಲ್ಲ. ಹಾಗೆಯೇ ಆಕಾಶದಿಂದ ಪೃಥಕ್ಕಾದ ಮಿತಿಯುಳ್ಳ ಯಾವ ಒಂದು ಭೌತರೂಪವನ್ನೂ ಪಡೆಯಲಾಗುವುದಿಲ್ಲ. ಪೃಥಕ್ಕಾದ ಒಂದೊಂದರ ಪರಸ್ಪರ ಸಂಬಂಧಗಳಲ್ಲಿ ಒಂದೊಂದನ್ನು ಅನುಭವದಿಂದಲೇ ವಿಜ್ಞಾನಿಗಳು ತಿಳಿಯುವಂತೆ ತಿಳಿಯಬೇಕು. ಆದರೆ ಅವೆಲ್ಲಕ್ಕೂ ಪರಸ್ಪರ ಸಂಬಂಧವಿದೆ. ಅವೆಲ್ಲ ಒಂದೇ ಆದ ದೈವದ ವ್ಯವಸ್ಥೆಯಲ್ಲಿ ಸೇರಿವೆ-ಎಂಬ ಭಾವನೆ ಮಾತ್ರ ಸ್ವತಃಸಿದ್ಧವಾದದ್ದು. ಅದು ಎಲ್ಲ ಬಗೆಯ ವಿಜ್ಞಾನಕ್ಕೂ ಆಧಾರಭಾವನೆ. ಅದನ್ನು ಪೃಥಕ್ಕಾದ ವೈಜ್ಞಾನಿಕ ಭಾವನೆಗಳಿಂದ ಪಡೆಯಲಾಗುವುದಿಲ್ಲ. ವೈಜ್ಞಾನಿಕ ಭಾವನೆಗಳು ಈ ತಿಳಿವನ್ನು ಹುಟ್ಟಿಸಲು ಯೋಗ್ಯವಾದ ಭಾವನೆಗಳಲ್ಲ. ಅವು ಕಾಲ ದೇಶಕ್ಕೆ ಒಳಪಡದೆ ವಿಷಯಗಳಿಗೆ ಮಾತ್ರ ಅನ್ವಯಿಸಲು ಯೋಗ್ಯವಾದುವು. ವಿಶ್ವದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಸರ್ವಕಾಲದಲ್ಲೂ ದೈವಕ್ಕೆ ನಿಕಟವಾಗಿ ಸೇರಿಕೊಂಡಿರುವುದರಿಂದ ಸಾಕ್ಷಾತ್ತಾಗಿ ಅಂತರಂಗದಲ್ಲಿ ಅದನ್ನು ದರ್ಶಿಸಬಹುದು. ಈ ಭಾವನೆಗೆ ನೇರವಾಗಿ ದೈವಭಾವನೆ ಕಾರಣವೇ ಹೊರತು ಪೃಥಕ್ಕಾದ ಜೀವರುಗಳ, ಪೃಥಕ್ಕಾದ ವಿಷಯಗಳ ಸಂಬಂಧವನ್ನು ಮಾತ್ರ ತಿಳಿಸಬಲ್ಲದಾದ ವಿಜ್ಞಾನ ಕಾರಣವಾಗಲಾರದು. ಈ ದೈವಭಾವನೆಯೊಂದೇ ಅಂಥ ಯೋಗ್ಯತೆಯುಳ್ಳದ್ದು. ಭಾವನೆಯ ಅರಿವನ್ನು ಅಪರೋಕ್ಷ ವಿಜ್ಞಾನ (ಸೈಂಟಿಯ ಇಂಟೂಯಿಟಿವ) ಎಂದು ಸ್ಪಿನೋಜû ಕರೆದಿದ್ದಾನೆ.

ಸ್ಪಿನೋಜû ತತ್ತ್ವಜ್ಞಾನದ ಮತ್ತು ವಿಜ್ಞಾನದ ಮಿತಿಗಳನ್ನು ಸ್ಪಷ್ಟವಾಗಿ ತಿಳಿಸಿರುತ್ತಾನೆ. ತತ್ತ್ವಜ್ಞಾನ ತಿಳಿಸಬಲ್ಲದ್ದನ್ನು ವಿಜ್ಞಾನ ತಿಳಿಸಲಾರದು. ಅದಕ್ಕೆ ಆ ಯೋಗ್ಯತೆ ಇಲ್ಲ. ಹಾಗೆಯೇ ತತ್ತ್ವಜ್ಞಾನಕ್ಕೂ ಪೃಥಕ್ಕಾದ ಪರಿಮಿತರೂಪಗಳ ಪರಸ್ಪರ ಸಂಬಂಧವನ್ನು ತಿಳಿಸುವ ಶಕ್ತಿ ಇಲ್ಲ. ಅವೆರಡೂ ಬುದ್ಧಿಯ ಬೇರೆ ಬೇರೆ ರೂಪಗಳು. ಒಂದು ತೋರಿಸಲಾಗದ್ದನ್ನು ಇನ್ನೊಂದು ತೋರಿಸಿ ಒಂದಕ್ಕೊಂದು ಪೂರಕವಾಗಿವೆ. ಸ್ಪಿನೋಜû ವಿಜ್ಞಾನದ ದ್ವೇಷಿಯೆಂದು ಯಾರೂ ಹೇಳಲಾರರು. ಆದರೆ ಕ್ರೈಸ್ತಮತ ಒಂದೇ ಮತಭಾವನೆಗೆ ಆದರ್ಶಪ್ರಾಯವಾದದ್ದು ಎಂದು ತಿಳಿದುಕೊಂಡಿರುವ ಪಾಶ್ಚಾತ್ಯತಾತ್ತ್ವಿಕರು ಆತ ಮತವಿರೋಧಿಯೆಂದು ಭಾವಿಸುತ್ತಾರೆ.

ಪಾಶ್ಚಾತ್ಯ ತತ್ತ್ವಶಾಸ್ತ್ರಚರಿತ್ರೆಯಲ್ಲಿ ಸ್ಪಿನೋಜûನ ತತ್ತ್ವವನ್ನು ಬುಧ್ಯಾರೂಢವಾದದ ಗುಂಪಿಗಾಗಲಿ ಅನುಭವಾರೂಢವಾದದ ಗುಂಪಿಗಾಗಲಿ ಸೇರಿಸಲಾಗುವುದಿಲ್ಲ. ಕೊನೆಗೆ ಹೆಗೆಲ್ಸ್‍ನ ಪರಮಭಾವವಾದದ (ಆಬ್ಸಲೂಟ್ ಐಡಿಯಲಿಸಂ) ಗುಂಪಿಗೂ ಸೇರಿಸಲಾಗುವುದಿಲ್ಲ. ಅದನ್ನು ವಿಶಿಷ್ಟ ತತ್ತ್ವವನ್ನಾಗಿ ಭಾವಿಸಬೇಕು. ಏಕೆಂದರೆ ಹೆಗೆಲ್ಸ್ ಸ್ಪಿನೋಜûನಂತೆ ಭೌತಗುಣಕ್ಕೆ ಸಮನಾದ ಸ್ಥಾನವನ್ನು ಕೊಟ್ಟಿರುವುದಿಲ್ಲ. ಸ್ಪಿನೋಜûನ ತತ್ತ್ವದ ಈ ಅಂಶವನ್ನು ಇಂದಿನ ರಷ್ಯದ ತಾತ್ತ್ವಿಕರು ಚೆನ್ನಾಗಿ ಗಮನಿಸಿ ಮೆಚ್ಚಿಕೊಂಡಿದ್ದಾರೆ.

ಗಾಟ್‍ಫ್ರಿಡ್ ವಿಲ್ಹೆಲ್ಮ್ ಲೈಬ್ನಿಟ್ಸ್: (1646-1716). ಜರ್ಮನಿಯಲ್ಲಿ ಹುಟ್ಟಿದ ತಾತ್ತ್ವಿಕ. ಈತನನ್ನು ಬುಧ್ಯಾರೂಢವಾದಿಗಳ ಗುಂಪಿಗೆ ಸೇರಿಸುವುದು ವಾಡಿಕೆಯಾಗಿದೆ. ಈತ ಡೇಕಾರ್ಟ್ ಮತ್ತು ಸ್ಪಿನೋಜûರಂತೆ ಗಣಿತ ವಿಧಾನಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಟ್ಟಿರುತ್ತಾನೆ. ಡೇಕಾರ್ಟ್‍ನಂತೆ ಈತನೂ ಪ್ರತಿಭಾಶಾಲಿಯಾದ ಗಣಿತ ಶಾಸ್ತ್ರಜ್ಞ. ಆ ಶಾಸ್ತ್ರದಲ್ಲಿ ತುಂಬ ಪರಿಣಾಮಕಾರಿಯಾದ ಸಂಶೋಧನೆ ನಡೆಸಿ ಇನ್‍ಫಿನಿಟೆಸಿಮಲ್ ಕ್ಯಾಲ್ಕುಲಸ್ ಎಂಬ ಗಣಿತಶಾಸ್ತ್ರ ಸೂತ್ರವನ್ನು ಕಂಡುಹಿಡಿದು ಆ ಶಾಸ್ತ್ರದ ಮುನ್ನಡೆಗೆ ಕಾರಣನಾಗಿರುತ್ತಾನೆ. ಡೇಕಾರ್ಟ್ ಮತ್ತು ಸ್ಪಿನೋಜûರಂತೆ ಭೌತಪ್ರಪಂಚದ ವಸ್ತುಗಳ ಚಲನೆಯನ್ನು ಯಾಂತ್ರಿಕವಾಗಿ ನಿಮಿತ್ತ ಕಾರಣದ ಮೂಲಕ ವಿವರಿಸುವುದೇ ಸಾಧುವೆಂದು ಒಪ್ಪಿಕೊಂಡಿರುತ್ತಾನೆ. ಆದರೆ ಅಂತಿಮಕಾರಣ ಅಸಾಧುವೆಂಬ ಸ್ಪೀನೋಜûನ ವಾದವನ್ನು ಲೈಬ್ನಿಟ್ಸ್ ಒಪ್ಪಲಿಲ್ಲ. ಅಂತಿಮಕಾರಣದ ಆಧಾರದ ಮೇಲೆ ವಿಶ್ವವನ್ನು ವಿವರಿಸುವುದು ಅಗತ್ಯವೆಂದು ಇವನ ಅಭಿಮತ. ಈ ಎರಡು ವಿಧವಾದ ವಿವರಣೆಗಳೂ ಅಗತ್ಯ. ಎರಡನ್ನೂ ಹೇಗೆ ಸಂಗತಗೊಳಿಸಬಹುದು ಎಂಬ ಸಮಸ್ಯೆಯನ್ನು ಬಗೆಹರಿಸಲು ಈತ ಪ್ರಯತ್ನಪಟ್ಟಿರುತ್ತಾನೆ. ಪ್ರಧಾನಗುಣಭೌತವಸ್ತುವಾದರೋ ತ್ರಾಣವುಳ್ಳದ್ದು; ಕ್ರಿಯಾಕಾರಿಯಾದ ಭೌತಶಕ್ತಿಯೇ ವಿಸ್ತರಣೆಗೆ ಮೂಲವಾದದ್ದು. ಕ್ರಿಯೆ ಇಲ್ಲದ್ದು ವಿಸ್ತರಿಸಲಾರದು. ಪ್ರತಿಯೊಂದು ವಸ್ತುವೂ ಒಂದು ಕ್ರಿಯಾಕೇಂದ್ರ. ಆ ಕ್ರಿಯಾಕೇಂದ್ರ ರೇಖಾಗಣಿತದ ಬಿಂದುವಿನಂತೆ ಸ್ಥಾಯಿಯಾದುದಲ್ಲ. ಪರಿಣಾಮ ಹೊಂದುವಂಥದು. ಆ ಕೇಂದ್ರ ಎಂದೆಂದಿಗೂ ವಿನಾಶವಾಗಲಾರದು. ಇಂಥ ಸರಳಕ್ರಿಯಾಕೇಂದ್ರವನ್ನು ಲೈಬ್ನಿಟ್ಸ್ ಮೋನ್ಯಾಡ್ (ಚಿದ್‍ಅಣು) ಎಂದು ಕರೆದಿದ್ದಾನೆ.

ಈ ಮೋನ್ಯಾಡ್ ಎಲ್ಲಕ್ಕೂ ಮೂಲಭೂತವಾದದ್ದು. ಇದೇ ನಿಜವಾದ ದ್ರವ್ಯ. ಬೇರೆ ಯಾವುದನ್ನೂ ಆಶ್ರಯಿಸದೆ ಯಾವುದು ಇರಬಲ್ಲದೋ ಅದು ದ್ರವ್ಯವೆಂದೂ ಅದೇ ದೈವವೆಂದೂ ಸ್ಪಿನೋಜû ಹೇಳಿದ. ದ್ರವ್ಯಕ್ಕೆ ಸ್ಪಿನೋಜû ಕೊಟ್ಟ ವಿವರಣೆಯನ್ನು ಲೈಬ್ನಿಟ್ಸ್ ಒಪ್ಪಿಕೊಂಡು, ಅಂಥ ಲಕ್ಷಣಗಳುಳ್ಳದ್ದು ಮೋನ್ಯಾಡ್ ಮಾತ್ರವೇ ಎಂದು ವಾದಿಸಿದ. ನಿಜವಾಗಿ ಒಂದೇ ಆಗಿರಬಲ್ಲದ್ದು ವ್ಯಕ್ತಿತ್ವವುಳ್ಳ ಕ್ರಿಯಾಕಾರಿಯಾದ ದ್ರವ್ಯ ಈ ಮೋನ್ಯಾಡ್ ಭೌತಾಣುವಿನಂತೆ ಅಚೇತನವಾದುದಲ್ಲ. ಚೇತನವಾದದ್ದು. ಶಕ್ತಿಯುತವಾದದ್ದು. ಅದು ಕೇವಲ ರೇಖಾಗಣಿತದ ಬಿಂದುವಿನಂತೆ ಉದ್ದ, ಅಗಲ, ಆಳಗಳಿಲ್ಲದೆ ನಿರ್ಜೀವವಾದುದಲ್ಲ. ಮೋನ್ಯಾಡ್ ನಮ್ಮ ಆತ್ಮವನ್ನು ಹೋಲುತ್ತದೆ. ಅದರಂತೆ ಅದಕ್ಕೂ ದರ್ಶನವಿದೆ (ಪರ್ಸೆಪ್ಷನ್), ತೃಷೆ ಇದೆ, ತವಕವಿದೆ (ಅಫೆಕ್ಟೇಷನ್). ಅದು ಕುರುಡಾದದ್ದಲ್ಲ. ತನ್ನ ಮುಂದಿನ ಗತಿಯೇನೆಂಬುದನ್ನು ಅದು ದರ್ಶಿಸಬಲ್ಲದು. ತನಗೆ ಆಂತರಿಕವಾದ ಗತಿಯನ್ನು ಸಾಧಿಸಬೇಕೆಂಬ ತವಕ ಅದಕ್ಕೆ ಇದೆ. ಆ ಗತಿ ಮುಟ್ಟುವ ತನಕ ಅದಕ್ಕೆ ಸಮಾಧಾನವಿಲ್ಲ. ಅದಕ್ಕೆ ತಡೆಯಾದುದನ್ನು ಒತ್ತರಿಸಿ ತನಗೆ ಅಂತರಿಕವಾದ ಗುರಿ ಮುಟ್ಟದ ವಿನಾ ಅದು ವಿಶ್ರಾಂತವಾಗುವುದಿಲ್ಲ. ಉಪ್ಪಿನ ದ್ರವ ಉಪ್ಪಿನ ಹರಳಾಗಿ ಪರಿಣಾಮ ಹೊಂದಿದ ವಿನಾ ವಿಶ್ರಮಿಸುವುದಿಲ್ಲ. ಹರಳಾಗಬೇಕೆಂಬ ಅದರ ಹಸಿವು ಅದಮ್ಯ. ಡೇಕಾರ್ಟ್ ಚೇತನ ಅಚೇತನಗಳು ವಿರುದ್ಧವೆಂದು ಹೇಳಿ ಅವೆರಡಕ್ಕೂ ಮಧ್ಯೆ ದಾಟಲಾಗದ ಕಂದರವನ್ನು ಏರ್ಪಡಿಸಿದ. ಸ್ಪಿನೋಜû ಅವೆರಡೂ ಒಂದೇ ವಸ್ತುವಿನ ಎರಡು ಪಾಶ್ರ್ವಗಳೆಂದು ಹೇಳಿದ್ದು ಹೆಚ್ಚು ಸಮರ್ಪಕ. ಆದರೆ ಒಂದರಿಂದ ಒಂದು ಅವಿಚ್ಛಿನ್ನವಾಗಿ ನಿರಂತರವಾಗಿ ಹೇಗೆ ಮುಂದುವರಿಯುತ್ತದೆ ಎಂಬುದನ್ನು ತೋರಿಸಲಿಲ್ಲ. ಲೈಬ್ನಿಟ್ಸ್‍ನ ದೃಷ್ಟಿಯಲ್ಲಿ ನಿರಂತರತೆ ಒಂದು ಮುಖ್ಯ ತತ್ತ್ವ. ಭೌತವೆಂದು ಕರೆಯುವ ವಸ್ತುವಿಗೂ ಚೇತನವೆಂದು ಕರೆಯುವ ವಸ್ತುವಿಗೂ ಅಂತರವಿಲ್ಲ. ಭೌತ ವಸ್ತುವಿನಲ್ಲಿ ಚೇತನ ಅವ್ಯಕ್ತವಾಗಿದೆ. ಸ್ಪಷ್ಟವಾಗಿ ಕಾಣಿಸುವುದಿಲ್ಲ. ಇಂದ್ರಿಯಾನುಭವದಲ್ಲಿರುವ ಅಂಶ ಬುದ್ಧಿಯ ತಿಳಿವಿನಲ್ಲಿರುವ ಅಂಶದಂತೆ ವಿಶದವಲ್ಲ, ನಿರ್ದಿಷ್ಟವಲ್ಲ. ನಾವು ಇಂದ್ರಿಯಾನುಭವದಿಂದ ಮುಂದೆ ಸಾಗಿದಾಗ ಅದರಲ್ಲಿ ಅವ್ಯಕ್ತವಾಗಿದ್ದ ಅಂಶ ವಿಶದವಾಗುತ್ತದೆ. ಇಂದ್ರಿಯ ಪ್ರತ್ಯಕ್ಷಾನುಭವ ಎರಡು ಬಗೆಯಾದುದು; ಕೆಲವು ಅಸ್ಪಷ್ಟ ಪ್ರತ್ಯಕ್ಷಗಳು, ಇನ್ನೂ ಕೆಲವು ವಿಶದಪ್ರತ್ಯಕ್ಷಗಳು, ಯಾವುದು ಒಂದು ಕಾಲದಲ್ಲಿ ಅಸ್ಪಷ್ಟವಾಗಿತ್ತೋ ಅದನ್ನೇ ನಾವು ಗಮನಿಸಿ ನೋಡಿದಾಗ ಕ್ರಮಕ್ರಮವಾಗಿ ಹೆಚ್ಚು ಹೆಚ್ಚು ವಿಶದವಾಗುತ್ತದೆ. ಹೀಗೆ ಇಂದ್ರಿಯಾನುಭವದಲ್ಲಿ ನಿರಂತರತೆ ಇರುವಂತೆ ಮೋನ್ಯಾಡ್‍ಗಳಲ್ಲೂ ನಿರಂತರತೆ ಇದೆ. ಒಂದು ಮೋನ್ಯಾಡ್‍ಗೂ ಇನ್ನೊಂದು ಮೋನ್ಯಾಡ್‍ಗೂ ಇರುವ ಭೇದ ಅಂತಸ್ತಿನದು, ಜಾತಿಯದಲ್ಲ. ಕೆಲವು ಮೋನ್ಯಾಡ್ ಹೆಚ್ಚು ವ್ಯಕ್ತವಾದುವು, ಅವುಗಳ ನೋಟವೂ ಹೆಚ್ಚು ವಿಶದ. ತೀರ ಅವ್ಯಕ್ತ ಮೋನ್ಯಾಡ್‍ನಿಂದ ತೀರ ವ್ಯಕ್ತವಾದ ಮೋನ್ಯಾಡಿನವರೆಗೆ ನಿರಂತರವಾಗಿ, ಅಸಂಖ್ಯಾತ ಅಂತಸ್ತುಗಳಿವೆ. ಪ್ರಕೃತಿಯ ವಸ್ತುಗಳ ಮಧ್ಯೆ ಖಾಲಿಯಾದ ಆಕಾಶ ಇಲ್ಲ. ಕಲ್ಲಿನಲ್ಲಿ ಚೇತನ ತುಂಬ ಅವ್ಯಕ್ತವಾಗಿದೆ. ಅದರ ನೋಟ ಅವಿಶದ, ಅದರಲ್ಲಿ ಚೇತನ ನಿದ್ರಿಸುತ್ತಿದೆ. ಪ್ರಾಣಿಗಳಲ್ಲಿನ ಚೇತನ ಸ್ವಲ್ಪ ಚುರುಕಾಗಿದೆ. ಮಾನವರಲ್ಲಿ ಅದು ಎಚ್ಚೆತ್ತಿದೆ. ಮಾನವರ ದರ್ಶನದಲ್ಲೂ ಅನೇಕ ಅಂತಸ್ತುಗಳಿವೆ. ವಿವೇಚನೆ ಹೆಚ್ಚಿದಂತೆಲ್ಲ ಮಾನವನ ದರ್ಶನ ಹೆಚ್ಚು ವಿಶದವಾಗುತ್ತದೆ. ಮೋನ್ಯಾಡಿಗೆ ದರ್ಶನವಿದೆಯೆಂದು ಹೇಳಿದಾಗ ದರ್ಶನ ಪದಕ್ಕೆ ವಿಶಾಲವಾದ ಅರ್ಥವನ್ನು ಕೊಡಬೇಕು. ಈ ದರ್ಶನ ಯಾವ ಬಗೆಯದು ಎಂಬುದನ್ನು ವೈಟ್ಹೆಡ್ ವಿವರಿಸಿದ್ದಾನೆ.

ಸರಳ ಮೋನ್ಯಾಡುಗಳಿಂದ ಸಂಕೀರ್ಣ ಮೋನ್ಯಾಡ್‍ಗಳು ಬೆಳೆಯುತ್ತವೆ. ಒಂದೊಂದು ಸಂಕೀರ್ಣ ಮೋನ್ಯಾಡ್ ಮೋನ್ಯಾಡುಗಳ ಕಂತೆಯಲ್ಲ; ಅದು ಒಂದು ಸಮಾಜ. ಅದರ ರಚನೆ ವ್ಯವಸ್ಥಿತವಾದುದು. ಪ್ರತಿಯೊಂದು ಸಂಕೀರ್ಣವಾದ ದೇಹದಲ್ಲೂ ಆತ್ಮವಿರುವಂತೆ ಸಂಕೀರ್ಣವಾದ ವಿಶ್ವದಲ್ಲಿ ಒಂದು ಕೇಂದ್ರ ಮೋನ್ಯಾಡ್ ಇದೆ. ಅದು ತನ್ನ ಕೇಂದ್ರದಿಂದ ವಿಸ್ತರಿಸುತ್ತ ಹೋಗುತ್ತದೆ. ಮೋನ್ಯಾಡ್ ಇದೆ. ಅದು ತನ್ನ ಪ್ರತಿಯೊಬ್ಬನಲ್ಲಿರುವ ಕೇಂದ್ರ ಮೋನ್ಯಾಡ್ ಬೆಳೆದಂತೆ ಅದರ ಪರಿಧಿ ವಿಸ್ತಾರವಾಗುತ್ತದೆ. ಅದು ವಿಸ್ತರಿಸುತ್ತ ಹೋದಂತೆಲ್ಲ ಅದರ ಪರಿಧಿಯಲ್ಲಿ ವಿಶ್ವವನ್ನೆಲ್ಲ ಸೇರಿಸಿಕೊಳ್ಳಬಲ್ಲುದು. ಈ ವಿಶ್ವ ಅನಂತಕೇಂದ್ರಗಳುಳ್ಳದ್ದು. ಅದು ಅನಂತ ಪರಿಧಿಗಳನ್ನು ಒಳಗೊಂಡ ಅನಂತವಾದ ಮಹಾಗೋಳ. ಒಂದೊಂದು ತನ್ನದೇ ಆದ ಕೇಂದ್ರದಿಂದ (ಜೈನರು ಹೇಳುವಂತೆ) ದರ್ಶನ ಬೆಳೆದು ಅನಂತದರ್ಶನವಾಗಿ ವಿಸ್ತರಿಸಬಹುದು.

ಒಂದೊಂದು ಮೋನ್ಯಾಡ್ ತನ್ನ ದೃಷ್ಟಿಕೋನದಿಂದ ವಿಶ್ವವನ್ನು ತನ್ನೊಳಗೆ ಪ್ರತಿಬಿಂಬಿಸುತ್ತದೆ. ಹೆಚ್ಚಾಗಿ ಬೆಳೆದಂತೆಲ್ಲ ಬೆಳೆದ ಮೋನ್ಯಾಡ್ ವಿಶ್ವವನ್ನು ಹೆಚ್ಚಿನ ಪ್ರಮಾಣದಲ್ಲಿ ವಿಶದೀಕರಿಸುತ್ತದೆ. ಯಾವುದೊಂದು ಮೋನ್ಯಾಡ್ ಇನ್ನೊಂದರ ಅನುಕರಣವಲ್ಲ. ಯಾವುದೂ ಇನ್ನೊಂದರ ಪಡಿಯಚ್ಚಲ್ಲ. ಪ್ರತಿಯೊಂದು ತನ್ನದೇ ಆದ ವ್ಯಕ್ತಿತ್ತವನ್ನು ಪಡೆದಿರುತ್ತದೆ. ಈ ಮೋನ್ಯಾಡುಗಳಲ್ಲಿ ವ್ಯತ್ಯಾಸವಿರುವುದಕ್ಕೆ ಅವುಗಳಲ್ಲಿನ ಚಟುವಟಿಕೆ ಮತ್ತು ಜಡತ್ವದ ಪರ್ಯಾಯಭೇದ ಕಾರಣ. ಎಲ್ಲಕ್ಕಿಂತ ಕೆಳದರ್ಜೆಯ ಮೋನ್ಯಾಡ್ ತೀರ ಜಡ. ಎಲ್ಲಕ್ಕಿಂತ ಮೇಲಿನ ಮೋನ್ಯಾಡ್ ಪೂರ್ಣವಾಗಿ ಪೂರ್ಣಚಟುವಟಿಕೆಯಿಂದ ಕೂಡಿರುತ್ತದೆ. ಅದನ್ನು ಲೆಬ್ನಿಟ್ ಆಕ್ವಸ್‍ಪ್ಯೂರ ಎಂದು ಕರೆದಿದ್ದಾರೆ. ಈ ಪೂರ್ಣಚೇತನವಾದ ಮೋನ್ಯಾಡ್ ದೇವರು, ಲೆಬ್ನಿಟ್ಸ್ನ ಮೂಲಭಾವನೆಗಳಿಗೆ ದೈವಭಾವ ಸಂಗತವಾಗಬೇಕಾದರೆ ಆ ದೇವರು ಕರ್ತನಾಗಲಾರ. ತನ್ನ ಮೂಲತತ್ತ್ವಕ್ಕೆ ಅಸಂಗತವಾಗಿ ಆತ ಕ್ರೈಸ್ತಮತ ಭಾವನೆಗಳಿಗೆ ಮರುಳಾಗಿ ದೇವರನ್ನು ಕರ್ತನಾಗಿ ಭಾವಿಸಿರುತ್ತಾನೆ. ಅವನು ನಿರ್ವಿಚಾರವಾದಿ. (ಡಾಗ್ಮ್ಯಾಟಿಸ್ಟ್).

ಪ್ರತಿಯೊಂದು ಮೋನ್ಯಾಡಿನಲ್ಲೂ ಅನಂತಚೇತನವಿದೆ. ಆದ್ದರಿಂದ ಅದರ ಬೆಳವಿಗೆ ಮಿತಿ ಇಲ್ಲ. ಅದಕ್ಕೆ ಹೊರಗಿನ ಯಾವುದರ ಪ್ರತಿಭಂದಕವಿಲ್ಲ. ಅದರೊಳಗೆ ಹೊರಗಿನಿಂದ ಯಾವುದೂ ಪ್ರವೇಶಿಸಲಾರದು. ಅದಕ್ಕೆ ಕಿಟಕಿಗಳಿಲ್ಲ. ಆದರೂ ಅದು ಉಳಿದೆಲ್ಲವನ್ನೂ ಪ್ರತಿಬಿಂಬಿಸುತ್ತದೆ. ಯಾವ ವಿಧವಾದ ಘರ್ಷಣೆ ಇಲ್ಲದೆ ಎಲ್ಲವೂ ಹೊಂದಿಕೆಯಾಗಿರುತ್ತದೆ. ಏಕೆಂದರೆ ಲೋಕದಲ್ಲಿ ನಿಯಮವಿದೆ, ಕ್ರಮವಿದೆ. ಆದ್ದರಿಂದ ಅದರ ಭೌತವ್ಯಾಪಾರವನ್ನು ಯಾಂತ್ರಿಕವಾಗಿ ನಿರೂಪಿಸಬಹುದು. ಆದರೆ ಈ ಯಾಂತ್ರಿಕ ನಡೆವಳಿಕೆಯನ್ನು ನಿಯಂತ್ರಿಸುವವ ದೇವರು. ಆತ ಈ ರೀತಿ ಉದ್ದೇಶಿಸಿರುತ್ತಾನೆ. ಎಲ್ಲವೂ ಘರ್ಷಣೆಗೊಳಗಾಗದಂತೆ ಇರಬೇಕೆಂದು ಆಜ್ಞೆ ಮಾಡಿರುತ್ತಾನೆ. ವಿಶ್ವದಲ್ಲಿ ಸಾಂಗತ್ಯವಿರುವಂತೆ ವಿಶ್ವ ಹುಟ್ಟುವುದಕ್ಕೆ ಮೊದಲೇ ಏರ್ಪಡಿಸಿರುತ್ತಾನೆ. ಹೀಗೆ ಆರಂಭದಲ್ಲೇ ಏರ್ಪಡಿಸಿದ ಸಾಂಗತ್ಯವನ್ನು ಪೂರ್ವನಿಯೋಜಿತ ಸಾಂಗತ್ಯ (ಪ್ರಿ ಎಸ್ಟಾಬ್ಲಿಷ್ಡ ಹಾರ್ಮೊನಿ) ಎಂದು ಕರೆಯಲಾಗಿದೆ. ಈ ಮೂಲಕ ಯಾಂತ್ರಿಕವಾದ ಭೌತನಿರೂಪಣೆಗೂ ಉದ್ದೇಶವೇ ಪ್ರಧಾನವಾದ ಮತಧರ್ಮ ನಿರೂಪಣೆಗೂ ಸಾಂಗತ್ಯವೇರ್ಪಟ್ಟಿದೆ ಎಂದು ಆತ ಭಾವಿಸಿರುತ್ತಾನೆ. ಇಲ್ಲೂ ಅವನ ವಾದ ಕುಂಟುತ್ತದೆ. ಮೋನ್ಯಾಡಿಗೆ ದರ್ಶನವಿದೆ, ಆದರೆ ಕಿಟಕಿಗಳಿಲ್ಲವೆಂದು ಹೇಳುವುದು ಅಸಂಗತ. ಎಲ್ಲವೂ ಎಲ್ಲಕ್ಕೂ ತೆರಪಾಗಿದೆ. ಅದು ಅನಂತವಾಗಿ ವಿಸ್ತರಿಸಬಹುದು ಎಂಬ ಅವನ ಮೂಲಭಾವನೆಗೂ ಅಲ್ಲಿ ಕಿಟಕಿಗಳಿಲ್ಲವೆಂಬ ಭಾವನೆಗೂ ವಿರೋಧವಿದೆ.

ಲೈಬ್ನಿಟ್ಸ್ ಪ್ರಾರಂಭಿಸಿದ್ದು ಸ್ವತಂತ್ರವಾದ ಮೋನ್ಯಾಡುಗಳಿಂದ. ಆದರೆ ಅವನ ತತ್ತ್ವ ಕೊನೆಗೊಳ್ಳುವುದು ಸ್ವತಂತ್ರವಾದ ದೈವಭಾವನೆಯಲ್ಲಿ. ಇದಕ್ಕೂ ಸ್ಪಿನೋಜûನ ತತ್ತ್ವಕ್ಕೂ ಅಂತ್ಯದಲ್ಲಿ ಹೆಚ್ಚು ಭೇದವಿಲ್ಲ. ಸ್ಪಿನೋಜûನ ತತ್ತ್ವವನ್ನೇ ತಲೆ ಕೆಳಕಾದಂತೆ ಅವನು ತೋರಿಸುತ್ತಾನೆ. ಭೌತವಾದ ವಸ್ತುವಿಲ್ಲವೆಂದು ಆತ ಪ್ರಾರಂಭಿಸುತ್ತಾನೆ. ಕೊನೆಯಲ್ಲಿ ವಿಶ್ವವೆಲ್ಲ ಯಾಂತ್ರಿಕವಾಗಿ ನಿರೂಪಿಸಬಹುದೆಂದು ತಿಳಿಸುತ್ತಾನೆ. ನೆಂಟರ ಮೇಲಿನ ಇಷ್ಟ ಪೂರೈಕೆಯಾಗಬೇಕಾದರೆ ಅಕ್ಕಿಯ ಮೇಲಿನ ಆಸೆಯನ್ನು ಬಿಡಬೇಕು. ಅಕ್ಕಿಯನ್ನು ಉಳಿಸಿಕೊಳ್ಳಬೇಕಾದರೆ ನೆಂಟರನ್ನು ಮರೆಯಬೇಕು. ಈ ಉಭಯಸಂಕಟಕ್ಕೆ ಲೈಬ್ನಿಟ್ಸ್ ತನ್ನ ತತ್ತ್ವವನ್ನು ಗುರಿಮಾಡಿದ್ದಾನೆ.

ಮೋನ್ಯಾಡ್ ತತ್ವನ್ನು ಸಂಗತಗೊಳಿಸಬೇಕಾದರೆ ಜೈನರಂತೆ ಸೃಷ್ಟಿಕರ್ತನಾದ ದೇವರು ಇಲ್ಲವೆಂದು ಹೇಳಬೇಕಾಗುತ್ತದೆ. ಸೃಷ್ಟಿಕರ್ತನ ಅಗತ್ಯವಿದ್ದರೆ ಮೋನ್ಯಾಡ್‍ಗಳ ವ್ಯಕ್ತಿತ್ವವನ್ನು ನಿರಾಕರಿಸಬೇಕಾಗುತ್ತದೆ. ಲೈಬ್ನಿಟ್ಸ್‍ನ ತತ್ತ್ವದಿಂದ ಈಶ್ವರತತ್ತ್ವವನ್ನು ತೆಗೆದುಹಾಕಿದರೆ ಅದು ಹೆಚ್ಚು ಸಮರ್ಪಕವಾದ ತತ್ತ್ವವಾಗುತ್ತದೆ. ಎಂದು ಇತ್ತೀಚಿನ ಆಂಗ್ಲೇಯ ತಾತ್ವಿಕನಾದ ವಿಲ್ಡನ್‍ಕಾರ್ ಅಭಿಪ್ರಾಯಪಡುತ್ತಾನೆ. ಆ ಕಲ್ಪನೆಯನ್ನು ಬಿಟ್ಟು ತನ್ನ ಆತ್ಮಸಾಕ್ಷಿಗೆ ಒಪ್ಪಿಗೆಯಾದ ತತ್ತ್ವವನ್ನು ಆತ ತನ್ನ ಜೀವಿತಕಾಲದಲ್ಲಿ ಬರೆದು ಅದನ್ನು ತನ್ನ ಮೇಜಿನ ಮೇಲಿಟ್ಟಿದ್ದ. ಆ ಲೇಖನ ಈಚೆಗೆ ಬೆಳಕಿಗೆ ಬಂದು ಈ ಶತಮಾನದ ಆದಿಯಲ್ಲಿ ಪ್ರಕಟನೆಯಾಯಿತು. ಅದರಲ್ಲಿ ಆತ ವ್ಯಕ್ತಿಗೆ ಆಂತರಿಕವಾದ ಸಾಮಾನ್ಯವೇ ಪ್ರಧಾನವಾದದ್ದು, ವರ್ಗಸಾಮಾನ್ಯ ಅದಕ್ಕೆ ಅಧೀನವಾದದ್ದು, ಅದರಿಂದ ಗಮ್ಯವಾದದ್ದು ಎಂಬುದನ್ನು ಸ್ಪಷ್ಟಪಡಿಸಿರುತ್ತಾನೆ. ಈ ವಿಚಾರದಲ್ಲಿ ಅವನ ತತ್ತ್ವ ಜೈನತತ್ತ್ವವನ್ನು ಹೋಲುತ್ತದೆ.

ಲೈಬ್ನಿಟ್ಸ್‍ನ ತತ್ತ್ವದಲ್ಲಿ ನವೀನತೆ ಇದೆ, ಓಜಸ್ಸಿದೆ. ಪಾಶ್ಚಾತ್ಯ ತಾತ್ತ್ವಿಕರಲ್ಲಿ ಅದಕ್ಕೆ ಸಾಟಿಯಾದ ತತ್ತ್ವ ಇತ್ತೀಚಿನವರಿಗೆ ಕಾಣಿಸಿಕೊಂಡಿರಲಿಲ್ಲ. ಬುಧ್ಯಾರೂಢವಾದಕ್ಕೂ ಅನುಭವಾರೂಢವಾದಕ್ಕೂ ಸಾಂಗತ್ಯವೇರ್ಪಡಿಸಿ ಅವನ ಸಮಕಾಲೀನನಾದ ಜಾನ್‍ಲಾಕ್‍ನ ಅನುಭವವಾದದಲ್ಲಿರುವ ದೋಷವನ್ನು ಆತ ತೋರಿಸಿದ. ಇವನ ತತ್ತ್ವ ಇತ್ತೀಚೆಗೆ ಎಚ್. ಡಬ್ಲ್ಯು. ವಿಲ್ಡನ್‍ಕಾರ್, ಎ. ಎನ್. ವೈಟ್ಹ್‍ಡ್ ಮುಂತಾದ ತಾತ್ತ್ವಿಕರನ್ನು ಆಕರ್ಷಿಸಿದೆ. ಬರ್‍ಟ್ರಂಡ್‍ರಸೆಲನ ಗಣಿತ ತತ್ತ್ವದಲ್ಲಿ ಅವನ ಕೆಲವು ಭಾವನೆಗಳು ಸೇರಿವೆ.

ಜಾನ್‍ಲಾಕ್ : (1632-1704). ಅನುಭವಾರೂಢ ಅಥವಾ ಅನುಭವ ಪ್ರಧಾನವಾದ ಮುಖಂಡರು ಜಾನ್‍ಲಾಕ್, ಬಿಷಪ್ ಬಾಕ್ರ್ಲೆ ಮತ್ತು ಡೇವಿಡ್ ಹ್ಯೂಂ. ಮೂವರೂ ಬ್ರಿಟನ್ನಿನವರು. ಅನುಭವಪ್ರಧಾನವಾದವನ್ನು ಪ್ರಸಿದ್ಧಪಡಿಸಿದ ಆಧುನಿಕ ತಾತ್ತ್ವಿಕರಲ್ಲಿ ಜಾನ್‍ಲಾಕ್ ಮೊದಲನೆಯವ. ಇಲ್ಲಿ ನಮಗೆ ಪ್ರಸಕ್ತವಾದ ತತ್ತ್ವಕ್ಕೆ ಆಧಾರವಾದದ್ದು ಆತನ ಎನ್ ಎಸ್ಸೆ ಕನ್ಸರ್ನಿಂಗ್ ಹ್ಯೂಮನ್ ಅಂಡರ್‍ಸ್ಟ್ಯಾಂಡಿಂಗ್ ಎಂಬ ಬೃಹದ್‍ಗ್ರಂಥ.

ಗ್ರಂಥದ ಹೆಸರೇ ತಿಳಿಸುವಂತೆ ಇದು ಮುಖ್ಯವಾಗಿ ಮಾನವನ ಜ್ಞಾನಕ್ಕೆ ಹೆಚ್ಚು ಪ್ರಾಮುಖ್ಯ ಕೊಟ್ಟಿರುತ್ತದೆ. ಜ್ಞೇಯ ವಿಷಯಗಳಾದ ಭೌತವಸ್ತು, ಆತ್ಮ, ಈಶ್ವರ, ಮುಂತಾದುವನ್ನು ವಿಮರ್ಶಿಸಿದರೂ ಅವುಗಳಿಗೆ ಅಷ್ಟು ಪ್ರಾಧಾನ್ಯವಿಲ್ಲ. ಈ ವಿಚಾರದಲ್ಲಿ ಇವನ ತತ್ತ್ವ ಹೆಚ್ಚು ಕಡಿಮೆ ಡೇಕಾರ್ಟ್‍ನ ತತ್ತ್ವವನ್ನೇ ಹೋಲುತ್ತದೆ. ಅಲ್ಲದೆ ಆ ಭಾವನೆಗಳು ಇವನ ಜ್ಞಾನತತ್ತ್ವಕ್ಕೆ ಸಂಗತವೂ ಅಲ್ಲ. ವೈಶಿಷ್ಟ್ಯವಿರುವುದು ಮುಖ್ಯವಾಗಿ ಇವನ ಅನುಭವಪ್ರಧಾನವಾದದಲ್ಲಿ.

ನಮ್ಮ ತಿಳಿವಿನ ಮಿತಿ ಏನು? ನಮ್ಮ ಭಾವನೆಗಳು ಹುಟ್ಟುವುದು ಹೇಗೆ? ಯಾವ ಭಾವನೆಗಳು ಸ್ಪಷ್ಟವಾದುವು, ನಿರ್ದಿಷ್ಟವಾದುವು. ನಿಶ್ಚಿತವಾದುವು? ಇವು ಇವನ ಮುಖ್ಯ ಸಮಸ್ಯೆಗಳು.

ನಮಗೆ ತಿಳಿವಿದೆ, ಅನುಭವವಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ತಿಳಿವಿಗೆ ಮುಂಚೆಯೇ ಅನುಭವಕ್ಕೆ ಮುಂಚೆಯೇ ನಮ್ಮೊಳಗೆ ಆಂತರಿಕ ಭಾವನೆಗಳು ಇವೆ ಎಂದು ಡೇಕಾರ್ಟ್ ಹೇಳಿದ. ಲಾಕ್ ಅಂಥ ಭಾವನೆಗಳನ್ನು ನಿರಾಕರಿಸುತ್ತಾನೆ. ಇದು ನಾವು ಮೊದಲು ವಿಚಾರಮಾಡಬೇಕಾದ ವಿಷಯ. ಇವನ ವಿಚಾರಸರಣಿ ಈ ರೀತಿ ಇದೆ. ಯಾವುದನ್ನಾದರೂ ನಾವು ತಿಳಿದಿದ್ದೇವೆ, ಎಂದು ಹೇಳಿದಾಗ ಆ ವಿಷಯ ನಮ್ಮ ಗಮನಕ್ಕೆ ಬರಬೇಕು. ನಮ್ಮ ಗಮನಕ್ಕೆ ಬಾರದ ಯಾವುದನ್ನಾದರೂ ನಾವು ತಿಳಿದಿದ್ದೇವೆ ಎಂದರೆ ಅದು ಅವಿವೇಕ. ತಿಳಿಯದುದನ್ನು ತಿಳಿವಿಗೆ ಬಾರದುದನ್ನು ನಾವು ತಿಳಿದಿದ್ದೇವೆಂದು ಹೇಳಿದಂತಾಗುತ್ತದೆ.

ಆಂತರಿಕ ಭಾವನೆಗಳೆಂದು ಡೇಕಾರ್ಟ್ ತಿಳಿಸಿರುವ ಭಾವನೆಗಳನ್ನು ಪರಿಶೀಲಿಸೋಣ. ಅವು ಆತ್ಮ, ದ್ರವ್ಯ, ಈಶ್ವರ ಮುಂತಾದುವು. ನಮಗೆ ತಿಳಿವಳಿಕೆ ಹುಟ್ಟುವುದಕ್ಕೆ ಮುಂಚೆಯೇ ಇವು ನಮಗೆ ತಿಳಿದಿವೆಯೇ ? ಹಾಗೆ ತಿಳಿದಿದ್ದರೆ ಈ ಭಾವನೆಗಳು ಮಕ್ಕಳ ಅರಿವಿಗೆ ಮೊಟ್ಟಮೊದಲು ಬರಬೇಕಾಗಿತ್ತು. ಆದಿವಾಸಿಗಳಾದ ಕಾಡುಜನರಲ್ಲೂ ಈ ಭಾವನೆಗಳು ಇದ್ದಿರಬೇಕಾಗಿತ್ತು. ಇವು ಮಾನವನ ತಿಳಿವಿಗೆ ಆಂತರಿಕವಾದ ಭಾವನೆಗಳಾಗಿದ್ದರೆ ಈ ಭಾವನೆಗಳು ವಿಚಾರವಾಗಿ ಭಿನ್ನಾಭಿಪ್ರಾಯಗಳು ಇರಕೂಡದು. ವಾಸ್ತವ ಪರಿಸ್ಥಿತಿ ಇವಕ್ಕೆ ವಿರುದ್ಧವಾಗಿದೆ. ಮಕ್ಕಳಿಗೆ ದ್ರವ್ಯದ ತಿಳಿವಿಲ್ಲ. ದೈವದ ತಿಳಿವಿಲ್ಲ. ಮಕ್ಕಳ ಅನುಭವ ತುಂಬ ಬೆಳೆದ ಮೇಲೆ ಈ ಭಾವನೆಗಳು ಹುಟ್ಟುತ್ತವೆ. ಇವು ಹುಟ್ಟಿದ ಮೇಲೂ ಬಹುವಿಧವಾಗಿರುತ್ತವೆ. ತಮ್ಮ ತಮ್ಮ ಅನುಭವಾನುಸಾರವಾಗಿ ಆ ಭಾವನೆಗಳು ಒಬ್ಬೊಬ್ಬರು ಒಂದೊಂದು ಬಗೆಯಾಗಿ ಕಲ್ಪಿಸಿಕೊಳ್ಳುತ್ತಾರೆ. ಅನಾಗರಿಕನ ದೈವ ನಾಗರಿಕನ ದೈವವಲ್ಲ. ಕ್ರೈಸ್ತರ ದೈವ ಇತರ ಜನರ ದೈವವಲ್ಲ. ಕ್ರೈಸ್ತರಲ್ಲೂ ದೈವದ ವಿಚಾರವಾಗಿ ಭಿನ್ನಾಭಿಪ್ರಾಯಗಳಿವೆ. ಈ ಭಾವನೆಗಳು ಸರಳ ಭಾವನೆಗಳೂ ಅಲ್ಲ. ಅನೇಕಾನೇಕ ಅನುಭವಗಳು ಹುಟ್ಟಿದ ಅನಂತರವೇ ಈ ಎಲ್ಲ ಭಾವನೆಗಳೂ ಹುಟ್ಟುವುದು. ವಿಶ್ವದ ಅನೇಕ ವಿಷಯಗಳನ್ನು ಕಂಡ ಮೇಲಲ್ಲವೇ ನಾವು ವಿಶ್ವಕ್ಕೆ ಕಾರಣವಾಗಿ ದೇವರಿರಬೇಕೆಂದು ಭಾವಿಸುವುದು. ಆದ್ದರಿಂದ ಅನುಭವ ಹುಟ್ಟುವುದಕ್ಕೆ ಮುಂಚೆಯೆ ನಮ್ಮ ಬುದ್ಧಿಯಲ್ಲಿ ಇಂಥ ಭಾವನೆಗಳಿರಲಾರವು.

ನಮಗೆ ಅನುಭವ ಹುಟ್ಟುವುದಕ್ಕೆ ಮುಂಚೆ ನಮ್ಮ ಮನಸ್ಸು ಬರೆಯಲು ಉಪಯೋಗಿಸುವ ಕಪ್ಪು ಹಲಗೆಯಂತೆ, ಕಾಗದದಂತೆ ಖಾಲಿಯಾಗಿರುತ್ತದೆ. (ಡ್ಯಾಬ್ಯುಲರಾಸ್). ಖಾಲಿಯಾದ ಮನಸ್ಸಿನ ಪರದೆಯಮೇಲೆ ಕಾಣಿಸಿಕೊಳ್ಳುವ ಭಾವನೆಗಳೇ ನಮ್ಮ ಅನುಭವದ ಸರ್ವಸ್ವ. ನಮ್ಮ ಅನುಭವದ ಭಾವನೆಗಳು ಎರಡು ಬಗೆಯವು : 1. ಹೊರವಸ್ತುಗಳು ಇಂದ್ರಿಯಗಳ ಮೂಲಕ ಮನಸ್ಸಿನ ಮೇಲೆ ಒತ್ತಿದ ಮುದ್ರೆಗಳು ಅಥವಾ ಪ್ರತಿಬಿಂಬಗಳು. 2. ಅವುಗಳನ್ನು ಅನುಸರಿಸಿ ಪರ್ಯಾಲೋಚನೆಯಿಂದ ಹುಟ್ಟಿದ ಭಾವನೆಗಳು. ಇಂದ್ರಿಯಗಳಿಗೆ ಗೋಚರವಾದ ಪ್ರತಿಬಿಂಬಗಳು ಹೊರ ವಸ್ತುಗಳ ಮುದ್ರೆಗಳು, ಹೊರವಸ್ತ್ತುಗಳು ಮನಸ್ಸಿನ ಮೇಲೆ ಒತ್ತಿದ ಮುದ್ರೆಗಳು, ಹೊರವಸ್ತುಗಳ ನಕಲುಗಳು. ಸಂಶಯವೃತ್ತಿ, ವಿಚಾರವೃತ್ತಿ, ಚಿತ್ತವೃತ್ತಿ-ಇವು ಪರ್ಯಾಲೋಚನೆಯ ಭಾವನೆಗಳು. ಲಾಕ್‍ನ ಅಭಿಪ್ರಾಯದಲ್ಲಿ ಯಾವುದನ್ನು ಮನಸ್ಸು ನೇರವಾಗಿ ಅರಿಯುವುದೋ ಅಥವಾ ಯಾವುದು ಮನಸ್ಸಿಗೆ ಪ್ರತ್ಯಕ್ಷವಾಗಿ ಗೋಚರವಾಗುತ್ತದೋ ಅದು ಭಾವನೆ (ಐಡಿಯ). ಈ ರೀತಿ ನೇರವಾಗಿ ಮೊಟ್ಟಮೊದಲಲ್ಲಿ ಪಡೆದವು ಸರಳಭಾವನೆಗಳು. ಇವನ್ನು ಪುನಶ್ಚರಣೆ ಮಾಡುವುದಕ್ಕೂ ಒಂದರೊಡನೆ ಒಂದನ್ನು ಹೋಲಿಸುವುದಕ್ಕೂ ಅವುಗಳನ್ನು ವಿಧ ವಿಧವಾಗಿ ಸೇರಿಸಿ ಸಂಕೀರ್ಣಭಾವನೆಗಳನ್ನು ರಚಿಸುವುದಕ್ಕೂ ಮನಸ್ಸಿಗೆ ಶಕ್ತಿ ಇದೆ. ಒಂದೊಂದು ಸರಳಭಾವನೆಯೂ ಒಂದೊಂದು ಇಂದ್ರಿಯದ ಮೂಲಕ ಬರುತ್ತದೆ. ಉದಾ : ಬಣ್ಣ, ಶಬ್ದ, ರುಚಿ, ಶಾಖ ಮುಂತಾದುವುಗಳನ್ನು ಕ್ರಮವಾಗಿ ಕಣ್ಣಿನಿಂದ, ಕಿವಿಯಿಂದ, ನಾಲಗೆಯಿಂದ, ಸ್ಪರ್ಶೇಂದ್ರಿಯದಿಂದ ತಿಳಿಯಬಹುದು. ಮನಸ್ಸು ತನ್ನ ಕ್ರಿಯೆಗಳನ್ನು ಪರ್ಯಾಲೋಚನೆಯಿಂದ ತಿಳಿಯುತ್ತದೆ. ಕೆಲವು ಭಾವನೆಗಳನ್ನು (ಉದಾ : ಸುಖ, ದುಃಖ, ಕ್ಲೇಶ ಇತ್ಯಾದಿ) ಇಂದ್ರಿಯಗಳನ್ನು ಮತ್ತು ಪರ್ಯಾಲೋಚನೆ ಎರಡರಿಂದಲೂ ತಿಳಿಯಬಹುದು.

ಕೆಲವು ಇಂದ್ರಿಯ ಭಾವನೆಗಳು ಹೊರವಸ್ತುಗಳಿಗೆ ನೇರವಾಗಿ ಸೇರಿದ ಗುಣಗಳನ್ನು ಪ್ರತಿಬಿಂಬಿಸುತ್ತವೆ. ಆದರೆ ಅನೇಕ ಇಂದ್ರಿಯ ಭಾವನೆಗಳು ಹೊರವಸ್ತುವಿಗೆ ನೇರವಾಗಿ ಸೇರಿದ ಗುಣಗಳನ್ನು ಪ್ರತಿಬಿಂಬಿಸುವುದಿಲ್ಲ. ಮೊದಲನೆಯವನ್ನು ಲಾಕ್ ಪ್ರಧಾನಗುಣಗಳೆಂದೂ, ಎರಡನೆಯವನ್ನು ಗೌಣಗುಣಗಳೆಂದೂ ಕರೆದಿರುತ್ತಾನೆ. ಆಕಾರ, ಚಲನೆ, ಸಂಖ್ಯೆ-ಇವು ಪ್ರಧಾನಗುಣಗಳು. ಈ ಗುಣಗಳನ್ನು ಹೊರವಸ್ತುವಿನಿಂದ ಪ್ರತ್ಯೇಕಿಸಲಾಗುವುದಿಲ್ಲ. ಬಣ್ಣ, ರುಚಿ, ವಾಸನೆ-ಇವು ಗೌಣಗುಣಗಳು. ಇವು ಹೊರವಸ್ತುವಿಗೇ ಸೇರಿದುವೆಂದು ಹೇಳಲಾಗುವುದಿಲ್ಲ. ಹೊರವಸ್ತುವಿನಿಂದ ಪ್ರತ್ಯೇಕವಾಗಿದ್ದಂತೆ ಇವುಗಳನ್ನು ಭಾವಿಸಬಹುದು.

ಮನಸ್ಸು ಸರಳಭಾವನೆಗಳನ್ನು ಪಡೆಯುವವರೆಗೆ ಅದು ನಿಷ್ಕ್ರಿಯವಾಗಿರುತ್ತದೆ. ಪಡೆದಮೇಲೆ ಅವುಗಳನ್ನು ಹೋಲಿಸಿದಾಗ, ಸೇರಿಸಿದಾಗ, ಸಂಕೀರ್ಣಭಾವನೆಗಳನ್ನು ರಚಿಸಿದಾಗ, ಬಿಡಿಸಿ ಪ್ರತ್ಯೇಕಿಸಿದಾಗ, ಅದು ಸಕ್ರಿಯವಾಗುತ್ತದೆ.

ಸಂಕೀರ್ಣಭಾವನೆಗಳನ್ನು ಮೂರು ಗುಂಪುಗಳನ್ನಾಗಿ ವಿಂಗಡಿಸಬಹುದು: 1. ಪರ್ಯಾಯಗಳು, ದ್ರವ್ಯಗಳು ಮತ್ತು ಸಂಬಂಧಗಳು. ಬಣ್ಣ ಮತ್ತು ರೇಖೆಗಳಿಂದ ಕೂಡಿದ ಸೌಂದರ್ಯ, ಅರುವತ್ತು ಸೆಕೆಂಡುಗಳು ಸೇರಿ ಆದ ಮಿನಿಟು, ಇಪ್ಪತ್ತು ನಾಲ್ಕು ತಾಸುಗಳುಳ್ಳ ದಿವಸ, ಹದಿನೈದು ದಿವಸಗಳುಳ್ಳ ಪಕ್ಷ -ಇತ್ಯಾದಿಗಳು. 2. ತೂಕ, ಬಣ್ಣ, ಗಾತ್ರವಿರುವ ದ್ರವ್ಯಗಳು. ಉದಾ : ಸೀಸ, ಚಿನ್ನ, ಉಪ್ಪು-ಮುಂತಾದುವು. ನಮಗೆ ಕಾಣುವುದು ಈ ದ್ರವ್ಯಗಳ ತೂಕ, ಬಣ್ಣ, ಗಾತ್ರ ಮುಂತಾದ ಗುಣಗಳು ಮಾತ್ರವೇ. ಇವು ಯಾವುದರಲ್ಲಿವೆಯೋ ಅದು ದ್ರವ್ಯ. ಅದು ನಮ್ಮ ಕಣ್ಣಿಗೆ ಕಾಣಿಸದ ವಸ್ತು. ಯಾವುದು ಗುಣಗಳಿಗೆ ಆಧಾರವಾಗಿ ಆದರೆ ನಮಗೆ ತಿಳಿಯದೆ ಇದೆಯೋ ಅದು ದ್ರವ್ಯ. ಇದು ದ್ರವ್ಯಕ್ಕೆ ಲಾಕ್ ಕೊಟ್ಟಿರುವ ವಿಚಿತ್ರ ಲಕ್ಷಣನಿರೂಪಣೆ. 3. ಎರಡು-ಅಥವಾ ಅನೇಕ ಸರಳಭಾವನೆಗಳಿಗೆ ಸಂಬಂಧಗಳನ್ನೇರ್ಪಡಿಸಿ, ಸಂಕೀರ್ಣ ಭಾವನೆಗಳನ್ನು ಪಡೆಯಬಹುದು. ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ ಉಷ್ಣ ಮೇಣವನ್ನು ಕರಗಿಸುತ್ತದೆ. ಇವು ಸಂಬಂಧಗಳ ಮೂಲಕ ಏರ್ಪಟ್ಟ ಸಂಕೀರ್ಣಭಾವನೆಗಳಿಗೆ ಉದಾಹರಣೆಗಳು. ಕಾರ್ಯಕಾರಣ ಸಂಬಂಧ ತುಂಬ ವ್ಯಾಪಕವಾದ ಮತ್ತು ಜ್ಞಾನಕ್ಕೆ ಅಗತ್ಯವಾದ ಸಂಬಂಧ.

ಕೆಲವು ಸಂಬಂಧಗಳನ್ನು ನಾವು ಬೇರೆ ಯಾವ ಸಂಬಂಧಗಳ ಮಧ್ಯಸ್ತಿಕೆ ಇಲ್ಲದೆ ನೇರವಾಗಿ ತಿಳಿಯುತ್ತೇವೆ. ಕಪ್ಪು ಬಿಳುಪಲ್ಲ, ಮೂರು ಎರಡಕ್ಕಿಂತ ಹೆಚ್ಚು-ಇಂಥ ಸಂಬಂಧಗಳನ್ನು ನಾವು ಪ್ರತಿಭಾನದಿಂದ ತಿಳಿಯುತ್ತೇವೆ. ಇವು ಪರಮವಿಶದವಾದುವು. ಇವು ಸತ್ಯವೆಂದು ತಿಳಿಯಲು ರುಜುವಾತು ಅನಾವಶ್ಯಕ. ಕೆಲವು ವೇಳೆ ನಾವು ಎರಡು ಭಾವನೆಗಳಿರುವ ಸಂಬಂಧವನ್ನು ಹೀಗೆ ನೇರವಾಗಿ ತಿಳಿಯುವುದಿಲ್ಲ. ಆ ಸಂಬಂಧವನ್ನು ಇತರ ಸಂಬಂಧಗಳ ಮೂಲಕ, ಅಂದರೆ ಮಾಧ್ಯಮಿಕವಾಗಿ ಸ್ಥಾಪಿಸುತ್ತೇವೆ. ಹೀಗೆ ಮಾಧ್ಯಮ ಅನುಮಾನದ ನೆರವಿನಿಂದ ಸ್ಥಾಪಿಸಿದ ಸಂಬಂಧಗಳು ಸಂಪೂರ್ಣವಾಗಿ ನಿಶ್ಚಿತಸತ್ಯಗಳು. ಆದರೆ ಆ ಸಂಬಂಧ ನಮಗೆ ಮೂರು ಎರಡಕ್ಕಿಂತ ಹೆಚ್ಚು ಎಂಬ ಸಂಬಂಧದಂತೆ ತತ್‍ಕ್ಷಣದಲ್ಲಿ ನೇರವಾಗಿ ಸಿದ್ಧವಾಗುವುದಿಲ್ಲ. ಒಂದು ತ್ರಿಕೋಣದ ಎರಡು ಭುಜಗಳು ಸಮಾನವಾಗಿದ್ದರೆ ಅದಕ್ಕೆ ಅಭಿಮುಖವಾಗಿರುವ ಕೋನಗಳು ಸಮನಾಗಿರುತ್ತವೆ-ಎಂಬುದು ನೇರವಾಗಿ ತತ್‍ಕ್ಷಣದಲ್ಲಿ ನಮಗೆ ತಿಳಿಯುವುದಿಲ್ಲ. ಅದನ್ನು ಮಧ್ಯಮಾನುಮಾನದ ಮೂಲಕ ಸ್ಥಾಪಿಸಬೇಕಾಗುತ್ತದೆ. ಗಣಿತ ಸ್ಥಾಪಿಸುವ ಸತ್ಯಗಳು ಈ ಬಗೆಯವು. ಈ ಮಧ್ಯಮಾನುಮಾನದಲ್ಲಿ ಅನೇಕ ಹಂತಗಳಿರುತ್ತವೆ. ಅನುಮಾನದ ಮೂಲಪ್ರತಿಜ್ಞೆಗಳ ತಿಳಿವು ನೇರವಾದದ್ದು. ಆದರೆ ಅವುಗಳ ಮೂಲಕ ಏರ್ಪಟ್ಟ ಅನುಮತಿ (ಕನ್‍ಕ್ಲೂಷನ್) ನಮಗೆ ಮೊದಲೇ ನೇರವಾಗಿ ತಿಳಿದಿರುವುದಿಲ್ಲ. ಅದು ಅನುಮಾನದ ಮೂಲಕ ಸ್ಥಾಪನೆಯಾದ ಸತ್ಯ. ಹೀಗೆ ಸ್ಥಾಪನೆಯಾಗದ್ದು, ರುಜುವಾತಾಗದ್ದು, ಕೇವಲ ಅಭಿಪ್ರಾಯ ಅಥವಾ ನಂಬಿಕೆ (ಫೇತ್). ಅದನ್ನು ನಿಜವಾಗಿ ಜ್ಞಾನವೆಂದು ಎಣಿಸಲಾಗುವುದಿಲ್ಲ.

ಇಂಥ ಕೇವಲ ಅಭಿಪ್ರಾಯ ರೂಪವಾದ ಭಾವನೆಗಳನ್ನು ನಾವು ನಂಬುತ್ತೇವೆ. ಆದರೆ ಅವು ಸ್ಥಿರವಾಗಿ ನಿಸ್ಸಂದೇಹವಾಗಿ ರುಜುವಾತದ ಭಾವನೆಗಳಲ್ಲ. ಅವು ಸತ್ಯವಿರಬಹುದು ಎಂದು ಹೇಳಬಹುದೇ ಹೊರತು ಸತ್ಯವಾಗಿ ಇದ್ದೇ ತೀರಬೇಕೆಂದು ಹೇಳುವಂತಿಲ್ಲ. ನಮ್ಮ ಶರೀರದ ಹೊರಗೆ ಇತರ ವಸ್ತುಗಳಿವೆ ಎಂಬುದನ್ನು ನಾವು ಸಾಧಾರಣವಾಗಿ ಭಾವಿಸುತ್ತೇವೆ. ನಿಶ್ಚಿತವೆಂದೂ ಬಗೆದಿರುತ್ತೇವೆ. ಆದರೆ ಅವು ನಿಶ್ಚಿತ ಸತ್ಯಗಳೆಂದು ಹೇಳಲಾಗುವುದಿಲ್ಲ. ನಮ್ಮ ಹೊರಗಡೆ ವಸ್ತುಗಳಿವೆ ಎಂಬ ಭಾವನೆ ಪೂರ್ಣಸತ್ಯಕ್ಕೆ ತುಂಬ ಹತ್ತಿರವಿರಬಹುದು. ಅದರ ಸಂಭವನೀಯತೆ ತುಂಬ ಹೆಚ್ಚಿನದಾಗಿರಬಹುದು. ಆದರೆ ಅದು ಪೂರ್ಣ ನಿಶ್ಚಿತಜ್ಞಾನವಲ್ಲ.

ನಿಶ್ಚಿತಜ್ಞಾನದ ಎಲ್ಲೆ ತುಂಬ ಪರಿಮಿತ. ಸರಳ ಇಂದ್ರಿಯ ಭಾವನೆಗಳು, ಸರಳ ಪರ್ಯಾಲೋಚನೆಯ ಭಾವನೆಗಳೂ ನಿಶ್ಚಿತವಾದುವು. ನಮಗೆ ಬುದ್ಧಿ ಇದೆ, ಮನಸ್ಸಿದೆ, ಆತ್ಮವಿದೆ ಎಂಬ ಸರಳ ಭಾವನೆಗಳೂ ನಿಶ್ಚಿತ. ಆದರೆ ಹೊರಪ್ರಪಂಚದ ವಸ್ತುಗಳಿವೆ ಎಂಬುದು ಅಷ್ಟು ನಿಶ್ಚಿತವಲ್ಲ. ಆ ಭಾವನೆಯ ಆಧಾರದ ಮೇಲೆ ಏರ್ಪಟ್ಟ ಭೌತವಿಜ್ಞಾನ ಪೂರ್ಣನಿಶ್ಚಿತಜ್ಞಾನವಲ್ಲ. ಈಶ್ವರಭಾವನೆ ಇದೆ. ಆದರೆ ಅದಕ್ಕೆ ಕಾರಣನಾದ ಈಶ್ವರನಿದ್ದೇ ಇರುತ್ತಾನೆ. ಅವನ ಸ್ವಭಾವ ಇಂಥದೇ ಎಂದು ನಿಷ್ಕøಷ್ಟವಾಗಿ ಹೇಳಲಾಗುವುದಿಲ್ಲ. ಈಶ್ವರನಿದ್ದಾನೆ ಎಂದು ಸಾಧಿಸಲು ಹಲವು ಬಗೆಯಾಗಿ ವಾದಿಸಬಹುದು. ಡೇಕಾರ್ಟ್ ಮುಂತಾದವರು ಪ್ರಯತ್ನಿಸಿದಂತೆ ರುಜುವಾತುಗಳನ್ನು ಕೊಡಬಹುದು. ಒಂದು ಇನ್ನೊಂದಕ್ಕಿಂತ ಪ್ರಬಲವಾಗಿರಬಹುದು. ಆದರೆ ಈಶ್ವರನಿದ್ದೇ ಇರುತ್ತಾನೆ ಎಂಬುದಕ್ಕೆ ರುಜುವಾತು ಸಾರಲು ಈಶ್ವರನ ಇರವಿನ ವಿಚಾರವಾಗಿ ನಮ್ಮ ತಿಳಿವು ವಿಚಾರ ಬುದ್ಧಿಗೆ ಮೀರಿದ್ದು. ಭಕ್ತಿಯೇ ಈಶ್ವರ ಭಾವನೆಗೆ ಪರಮ ಆಸರೆ. ಭಕ್ತನಿಗೆ ಸ್ವಲ್ಪವೂ ಸಂಶಯವಿಲ್ಲ. ಆದರೆ ಅಪೌಲರು ಷೇಯ ಸಾಕ್ಷಾತ್ಕಾರ (ರೆವಲೇಷನ್) ಸರಳ ಸಾಧಾರಣ ಭಾವನೆಗಳಿಗೆ ವ್ಯತಿರಿಕ್ತವಾಗಿದ್ದರೆ ಅದು ನೆಚ್ಚತಕ್ಕದ್ದಲ್ಲ. ಅಂಥ ಅನುಭೂತಿ ನಮ್ಮ ಸರಳಭಾವನೆಗಳಷ್ಟು ವಿಶದವಲ್ಲ. ಭಕ್ತಿಗೆ ಮಾತ್ರ ಅದು ವಿಶದವಾಗುತ್ತದೆ.

ಇವನ ವಾದವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಕೆಲವು ಅಸಂದಿಗ್ಧ ಮತ್ತು ಪರಸ್ಪರ ವಿರೋಧಾಂಶಗಳು ಎದ್ದು ಕಾಣುತ್ತವೆ. 1. ಭಾವನೆ (ಐಡಿಯ) ಎಂಬ ಪದಕ್ಕೆ ಕೊಟ್ಟಿರುವ ಅರ್ಥ ಎರಡು ಬಗೆಯಾಗಿದೆ. ಮೊದಲಲ್ಲಿ ಭಾವನೆಗೆ ಮನಸ್ಸಿನ ವೃತ್ತಿಗಳು ಎಂಬ ಅರ್ಥ. ಅಂದರೆ ಇಂದ್ರಿಯ ಸಂವೇದನ, ಪರ್ಯಾಲೋಚನೆ (ರಿಫ್ಲೆಕ್ಷನ್), ಸಂಶಯವೃತ್ತಿ, ಊಹೆ-ಇತ್ಯಾದಿ ಮಾನಸಿಕ ವೃತ್ತಿಗಳೆಂದು ಅರ್ಥ. ಭಾವನೆ ಎಂದರೆ ಸಂವೇದನೆಯ ವಿಷಯ, ಪರ್ಯಾಲೋಚನೆಯ ವಿಷಯ, ಸಂಶಯಕ್ಕೆ ಒಳಗಾದ ವಿಷಯ, ಊಹೆಯ ವಿಷಯ ಎಂದು ಅರ್ಥ ಬದಲಾಯಿಸುತ್ತಾನೆ. ಅಂದರೆ ಮಾನಸಿಕವೃತ್ತಿ ಎಂಬ ಅರ್ಥದಲ್ಲೂ ಮಾನಸಿಕವೃತ್ತಿಯ ವಿಷಯವೆಂಬ ಅರ್ಥದಲ್ಲೂ, ಆ ಪದವನ್ನು ಬಳಸಲಾಗಿದೆ. ಇದು ಅವನ ತತ್ತ್ವದಲ್ಲಿ ಅಸಂದಿಗ್ಧತೆ ಹುಟ್ಟಲು ಕಾರಣ. 2. ಪ್ರಧಾನ ಗುಣಗಳು, ಗೌಣಗುಣಗಳು ಎಂಬುದಾಗಿ ಭೇದವೇರ್ಪಡಿಸಿರುವುದಕ್ಕೆ ಆತ ಕೊಟ್ಟ ಕಾರಣಗಳೂ ಸಮಂಜಸವಲ್ಲ. ಆಕಾರದ ಭಾವನೆ ಹುಟ್ಟುವುದಕ್ಕೆ ಕಣ್ಣೊಂದೇ ಕಾರಣವಲ್ಲ. ಸ್ಪರ್ಶೇಂದ್ರಿಯವೂ ಕಾರಣವೆಂದು ಅವನಿಂದೀಚೆಗೆ ಬಂದ ಬಾಕ್ರ್ಲೆ ಸ್ಪಷ್ಟಪಡಿಸಿದ್ದಾನೆ.

ಆಕಾರ ವಸ್ತುವಿಗೆ ಸೇರಿದ್ದು, ಬಣ್ಣ ವಸ್ತುವಿಗೆ ಸೇರಿದ್ದಲ್ಲವೆಂದು ಹೇಳುವುದು ಸಂಗತವಲ್ಲ. ಒಂದು ಅನಿಲದ ವಾಸನೆ -ಉದಾಹರಣೆಗೆ ಕ್ಲೋರಿನ್‍ನ ವಾಸನೆ-ಅದಕ್ಕೆ ಸೇರಿದ್ದೆಂದೂ ಅದು ಅದರ ನಿಜಗುಣವೆಂದೂ ರಸಾಯನಶಾಸ್ತ್ರಜ್ಞರು ಭಾವಿಸಿದ್ದಾರೆ. ಗುಣಗಳಿಗೂ ಇಂದ್ರಿಯವೇ ಕಾರಣವಾದರೆ, ಇಂದ್ರಿಯಜ್ಞಾನ ನಿಸ್ಸಂದೇಹಸತ್ಯವಾದರೆ, ಪ್ರಧಾನ ಮತ್ತು ಗೌಣ ಗುಣಗಳೆರಡೂ ಏಕರೀತಿಯಾಗಿ ನಿಶ್ಚಿತಸತ್ಯಗಳಾಗುತ್ತವೆ. ಇಂದ್ರಿಯಗಳ ಸಾಕ್ಷ್ಯವನ್ನು ಅವಲಂಬಿಸಿದರೆ ಲಾಕ್ ಏರ್ಪಡಿಸಿದ ಭೇದಕ್ಕೆ ಅವಕಾಶವಿಲ್ಲದಂತಾಗುತ್ತದೆ. ಅವನಿಂದ ಆಚೆಗೆ ಬಂದ ಬಾಕ್ರ್ಲೆ ಇಂದ್ರಿಯಾನುಭವಗಳ ಆಧಾರದ ಮೇಲೆ ಪ್ರಧಾನ ಮತ್ತು ಗೌಣ ಎಂಬ ಭೇದಗಳನ್ನು ಕಲ್ಪಿಸಲು ಅವಕಾಶವಿಲ್ಲವೆಂದು ಸ್ಪಷ್ಟಪಡಿಸಿದ್ದಾನೆ.

ಬಿಷಪ್ ಬಾಕ್ರ್ಲೆ : (1685-1753). ಬಾಕ್ರ್ಲೆ ಐರ್ಲೆಂಡಿನವ. ಕ್ರೈಸ್ತಮತಭಕ್ತ, ಕ್ರೈಸ್ತಮತ ಬೋಧಕ. ಆದ್ದರಿಂದ ದೇವರನ್ನೇ ತನ್ನ ತತ್ತ್ವದ ಅಡಿಗಲ್ಲಾಗಿ ಮಾಡಿಕೊಂಡದ್ದು ಸ್ವಾಭಾವಿಕವೇ. ಈಶ್ವರ (ಆತನ ತತ್ತ್ವದಲ್ಲಿ) ಪ್ರಥಮತತ್ತ್ವವಾದರೂ ಅದಕ್ಕೆ ಆಧಾರವಾಗಿ ಲಾಕ್ ಇಂದ್ರಿಯಪ್ರಧಾನವಾದವನ್ನು ಅನಿರೀಕ್ಷಿತವಾದ ರೀತಿಯಲ್ಲಿ ಉಪಯೋಗಿಸಿಕೊಂಡ. ಲಾಕ್‍ನ ಪ್ರಕಾರ ನಮ್ಮ ಜ್ಞಾನಕ್ಕೆ ಇಂದ್ರಿಯಾನುಭವವೇ ಆಶ್ರಯ. ಆಕಾರ, ಚಲನೆ, ಬಣ್ಣ, ಶಬ್ದ, ವಾಸನೆ, ರುಚಿ ಇವೇ ಮೂಲ ಭಾವನೆಗಳು, ಪರ್ಯಾಲೋಚನೆಯ ಮೂಲಕ ಇವುಗಳನ್ನು ವಿಧವಿಧವಾಗಿ ಸೇರಿಸುತ್ತೇವೆ. ಹಾಗೆ ಸೇರಿಸಿದ ಭಾವನೆಗಳಲ್ಲಿ ಭೌತವಸ್ತು ಒಂದು. ಇದು ಅಪ್ರತ್ಯಕ್ಷ ಅಂದರೆ ಪರೋಕ್ಷಭಾವನೆ. ಭೌತವಸ್ತು ನಮ್ಮ ಇಂದ್ರಿಯಾನುಭವಗಳು ಹುಟ್ಟುವುದಕ್ಕೆ ಕಾರಣ. ಇವು ಮನಸ್ಸಿನಮೇಲೆ ಇಂದ್ರಿಯಗಳ ಮೂಲಕ ಮುದ್ರೆಯೊತ್ತುತ್ತವೆ. ಹೀಗೆ ಒತ್ತಿದ ಮುದ್ರೆಗಳೇ, ನಕಲುಗಳೇ ಇಂದ್ರಿಯಭಾವನೆಗಳು. ಮನಸ್ಸು ಖಾಲಿ ಸ್ಲೇಟಿನಂತೆ ಬರಿದಾದದ್ದು. ಲಾಕ್‍ನ ಈ ಭಾವನೆಗಳಲ್ಲಿ ಕೆಲವನ್ನು ಒಪ್ಪಿಕೊಂಡು. ಇನ್ನು ಕೆಲವನ್ನು ಅಸಾಧುವೆಂದು ಖಂಡಿಸಿ ಬಾಕ್ರ್ಲೆ ತನ್ನ ತತ್ತ್ವವನ್ನು ಬೆಳೆಸಿದ.

1. ಇಂದ್ರಿಯ ಭಾವನೆಗಳು ನಮ್ಮ ತಿಳಿವಿಗೆ ಮೂಲಭೂತವಾದುವು ಎಂಬುದನ್ನು ಒಪ್ಪಿಕೊಂಡ. ಅದನ್ನು ಒಂದು ಸೂತ್ರದಲ್ಲಿ ಅಡಗಿಸಿದ. ಯಾವುದಾದರೂ ಇರಬೇಕಾದರೆ ಅದು ಇಂದ್ರಿಯಭಾವನೆಯಾಗಬೇಕು (ಟು ಬಿ ಈಸ್ ಟು ಬಿ ಪರ್‍ಸೀವ್ಡ್). ಇರವೇ ಇಂದ್ರಿಯದ ಅರಿವು (ಎಸ್ಸೇ-ಪರ್ಸಿಪಿ). ಮನಸ್ಸಿನಲ್ಲಿ ಇರುವುದೆಲ್ಲ ಇಂದ್ರಿಯಾನುಭವಗಳೇ.

2. ಈ ಇಂದ್ರಿಯಾನುಭಗಳಲ್ಲಿ ಕೆಲವು ಪ್ರಧಾನವಾದುವು, ಇನ್ನೂ ಕೆಲವು ಗೌಣವಾದುವು ಎಂದು ಲಾಕ್ ಹೇಳಿದ್ದನ್ನು ಬಾಕ್ರ್ಲೆ ಒಪ್ಪಲಿಲ್ಲ. ಎಲ್ಲವೂ ಇಂದ್ರಿಯದಿಂದಲೇ ಬಂದುವಾದುದರಿಂದ ಇವುಗಳಲ್ಲಿ ಭೇದವೆಣಿಸುವುದು ಅಸಂಗತವೆಂದು ಹೇಳಿದ.

3. ಲಾಕ್‍ನ ತತ್ತ್ವದಲ್ಲಿ ಈ ಬಗೆಯ ಅಸಾಂಗತ್ಯ ಹುಟ್ಟಲು ಅವನು ಭೌತವಸ್ತು ಎಂಬ ಅಮೂರ್ತ ಭಾವನೆಗಳನ್ನು ಕಲ್ಪಿಸಿಕೊಂಡದ್ದೆ ಕಾರಣ. ನಮ್ಮ ಕಣ್ಣಿಗೆ ಕಾಣುವುವೆಲ್ಲ ಮೂರ್ತರೂಪಗಳೇ. ಇದು ಬಣ್ಣ, ಇದು ರುಚಿ, ಇದು ವಾಸನೆಯುಳ್ಳದ್ದು-ಈ ರೀತಿಯಾಗಿಯೇ ಎಲ್ಲವೂ ನಮ್ಮ ಇಂದ್ರಿಯಗಳಿಗೆ ಗೋಚರವಾಗುವುವು. ಇವುಗಳಿಗೆ ತಳಹದಿಯಾದುದೆಂದು ಲಾಕ್ ಹೇಳಿದ ದ್ರವ್ಯ ಇಂದ್ರಿಯಾನುಭವವೇದ್ಯವಲ್ಲ. ಇದು ಅಮೂರ್ತಭಾವನೆ. ಅಮೂರ್ತಭಾವನೆಗಳು ಕೇವಲ ಕೃತಕವಾದ, ಕಲ್ಪಿತಭಾವನೆಗಳು. ಲಾಕ್ ದ್ರವ್ಯಕ್ಕೆ ಕೊಟ್ಟ ಲಕ್ಷಣ ಅಪಹಾಸ್ಯಕರ. ಅದು ಯಾವ ಬಗೆಯಲ್ಲೂ ನಮಗೆ ತಿಳಿಯದಿರುವುದು. ಹೀಗೆ ನಮಗೆ ತಿಳಿಯದೆ, ಕತ್ತಲೆಯಲ್ಲಿ ಒಂದು ಪ್ರೇತ ಅಡಗಿಕೊಂಡಿದೆ ಎಂಬುದು ಅಡುಗಲಜ್ಜಿಯ ಕಥೆ. ಇಂಥ ಅಮೂರ್ತಭಾವನೆಗಳ ಕುರುಡುನಂಬಿಕೆಗಳು. ಆದ್ದರಿಂದ ತತ್ತ್ವಶಾಸ್ತ್ರ ಇಂಥ ಅಮೂರ್ತಭಾವನೆಗಳನ್ನು ಬಿಟ್ಟುಬಿಡಬೇಕು. ಮೊಟ್ಟಮೊದಲು ವರ್ಜಿಸಬೇಕಾದ ಭಾವನೆ-ಭೌತದ್ರವ್ಯ ಇದೆ ಎಂಬ ಭಾವನೆ.

4. ಇರುವುವೆಲ್ಲ ಅನುಭವಕ್ಕೆ ಬಂದ ವಾಸ್ತವಭಾವನೆಗಳು. ಆದರೆ ಅವುಗಳಿಗೆ ಕಾರಣ ಯಾವುದು ಎಂದು ಕೇಳಬಹುದು. ಕಾರಣವಿದೆ. ಕಾರಣವಾಗಬೇಕಾದರೆ ಅದು ಕ್ರಿಯಾಕಾರಿಯಾಗಿರಬೇಕು. ಕ್ರಿಯಾಕಾರಿಯಲ್ಲ-ಆದರೂ ಅದು ಕಾರಣವೆಂದು ಹೇಳುವುದು ಅಸಂಗತ. ಕಾರಣ ಕ್ರಿಯಾಕಾರಿಯಾಗಿರಬೇಕಾದರೆ ಅದು ಜಡವಾದ ಭೌತವಸ್ತುವಾಗಲಾರದು. ಅದು ಚೇತನವಸ್ತುವಾಗಿಯೇ ಇರಬೇಕು. ಅಂಥ ವಸ್ತು ಆತ್ಮ. ತಿಳಿವಿಗೆ ಕಾರಣವಾದಾಗ ಅದನ್ನು ಬುದ್ಧಿಯೆಂದು (ಅಂಡರ್‍ಸ್ಟ್ಯಾಂಡಿಂಗ್) ಕರೆಯುತ್ತೇವೆ. ಅದು ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಂಡಾಗ ಅದನ್ನು ಚಿತ್ತ (ವಿಲ್) ಎಂದು ಕರೆಯುತ್ತೇವೆ. ಇಂದ್ರಿಯಭಾವನೆಗಳು ಕಾರ್ಯ ರೂಪವಾದ್ದರಿಂದ ಅದಕ್ಕೆ ಕಾರಣವಾದ ಆತ್ಮ ಇಂದ್ರಿಯ ರೂಪವಾಗಿರಲಾರದು. ಅದು ಆತ್ಮಕ್ಕೆ ವಿಶಿಷ್ಟವಾದದ್ದು. ಇದನ್ನು ಬಾಕ್ರ್ಲೆ ನೋಷನ್ ಎಂದು ಕರೆದಿರುತ್ತಾನೆ. ಇದನ್ನು ಇಂಗಿತ ಭಾವನೆ, ಭಾವ, ವಿಚಾರ ಎಂದು ಹೇಳಬಹುದು.

5. ಇಂದ್ರಿಯಭಾವನೆಗಳನ್ನು ಆತ್ಮ ಕೂಡಿಸಬಲ್ಲುದೇ ಹೊರತು, ಸೃಷ್ಟಿಸಲಾರದು ಕೆಂಪಾಗಿರುವುದನ್ನು ಕೆಂಪಾಗಿಮಾಡುವುದು ನಮ್ಮ ಚಿತ್ತಕ್ಕೆ ಮೀರಿದ ಕೆಲಸ. ನೋವು ನಮ್ಮ ಇಂದ್ರಿಯದ ಅನುಭವ. ನಮ್ಮನ್ನು ಬಿಟ್ಟು ತೊಲುಗು ಎಂದರೆ ಅದು ತೊಲುಗುವುದಿಲ್ಲ. ಭಾರ ಇಳಿಯಲಿ ಎಂದರೆ ಅದು ಇಳಿದು ಹೋಗುವುದಿಲ್ಲ. ನಾವು ನೋಡದಿದ್ದಾಗಲೂ ಕಣ್ಣುಮುಚ್ಚಿಕೊಂಡಾಗಲೂ ಅವು ಇದ್ದೇ ಇರುತ್ತವೆ. ಇವು ಒಂದು ಕ್ರಮಕ್ಕೆ ಒಂದು ಕಟ್ಟಿಗೆ ಒಳಪಟ್ಟಿವೆ. ಆ ಕ್ರಮ ಕಟ್ಟು ನಾವೇ ಏರ್ಪಡಿಸಿದವುಗಳಲ್ಲ. ನಾವು ಕಣ್ಣುಮುಚ್ಚಿದಾಗಲೂ ಅವು ಇರಬೇಕಾದರೆ, ನಮ್ಮ ಯತ್ನವನ್ನು ಲೆಕ್ಕಿಸದೆ ಅವು ಕ್ರಮಬದ್ಧವಾಗಿದ್ದರೆ, ಅದಕ್ಕೆ ನಾವು ಕಾರಣವಾಗಲಾರೆವು. ಜಡವಸ್ತುವೂ ಕಾರಣ ಆಗಲಾರದು. ಆದ್ದರಿಂದ ಅದು ಒಂದು ಸ್ವತಂತ್ರವಾದ, ಶಕ್ತಿಯುತವಾದ ಚೇತನವಾಗಿರಬೇಕು. ಆ ಚೇತನವೇ ಈಶ್ವರ. ಈ ಈಶ್ವರ ನಮ್ಮ ಇಂದ್ರಿಯಗಳ ಮೇಲೆ ಒತ್ತಿದ ಭಾವನೆಗಳೇ ಇಂದ್ರಿಯ ಭಾವನೆಗಳು. ಅವು ಅವನ ಕಟ್ಟಿಗೆ ಸಿಕ್ಕಿದ ಭಾವನೆಗಳು.

6. ಬಾಕ್ರ್ಲೆಯಲ್ಲಿ ಲಾಕ್‍ನ ತತ್ತ್ವದ ಕೆಲವು ದೋಷಗಳು ಮುಂದುವರಿದಿವೆ. (i) ಆತ ಇಂದ್ರಿಯಭಾವನೆ ಎಂಬ ಪದವನ್ನು ಎರಡರ್ಥಗಳಲ್ಲಿ ಉಪಯೋಗಿಸಿರುತ್ತಾನೆ. ಇಂದ್ರಿಯವೃತ್ತಿ (ಸ್ಟೇಟ್ ಆಫ್ ಸೆನ್‍ಸೇಷನ್) ಎಂಬುದನ್ನು ಇಂದ್ರಿಯಭಾವವೆಂದು ಕರೆದಿದ್ದಾನೆ. ಇಂದ್ರಿಯವಿಷಯವನ್ನು (ಆಬ್ಜಕ್ಟ್ ಆಫ್ ಸೆನ್‍ಸೇಷನ್) ಇಂದ್ರಿಯಭಾವನೆಯೆಂದು ಕರೆದಿದ್ದಾನೆ. ಈ ಅಸಂದಿಗ್ಧತೆ ಇಲ್ಲಿ ಮುಂದುವರಿದಿದೆ.

(ii) ಕಾರ್ಯಕಾರಣಭಾವನೆ ಇಂದ್ರಿಯಭಾವನೆಯಲ್ಲ. ಇಂದ್ರಿಯಭಾವನೆಗಳೇ ಜ್ಞಾನಕ್ಕೆ ಆಶ್ರಯವೆಂಬ ಭಾವನೆ ಲಾಕ್‍ನ ತತ್ತ್ವದ ಮೂಲಭಾವನೆ. ಆದ್ದರಿಂದ ಭೌತವಸ್ತುವಿನ ಭಾವನೆ ಕೇವಲ ಕಲ್ಪನೆ ಎಂಬುದು ಬಾಕ್ರ್ಲೆ ಭಾವಿಸಿದ್ದು ಆ ಮೂಲಭಾವನೆಗೆ ಸಂಗತ. ಆ ತರ್ಕಕ್ಕೆ ವಿರುದ್ಧವಾಗಿ ಇಂದ್ರಿಯಾನುಭವಗಳಿಗೆ ಕಾರಣವಾಗಿ ಚೇತನವಸ್ತುವಿದೆ ಎಂದು ವಾದಿಸಿದ್ದು ಅಸಂಗತ. ಬಿಡಿಬಿಡಿಯಾದ ಇಂದ್ರಿಯಾನುಭವಗಳೇ ಮೂಲವಾದುವು ಎಂದು ಭಾವಿಸಿದರೆ, ಭೌತವಸ್ತುವಿನ ಭಾವನೆಗೂ ಅವಕಾಶವಿಲ್ಲ. ಚೇತನವಸ್ತುವಿನ ಭಾವನೆಗೂ ಅವಕಾಶವಿಲ್ಲ. ಚೇತನವಸ್ತುವಿನ ವಿಚಾರದಲ್ಲಿ ಬಾಕ್ರ್ಲೆ ವಾದದಲ್ಲಿ ಪಕ್ಷಪಾತ ಸ್ಪಷ್ಟವಾಗಿ ಕಾಣಿಸುತ್ತದೆ.

7. ಅವನ ತತ್ತ್ವದಲ್ಲಿ ಈಶ್ವರಭಾವನೆಯಲ್ಲೂ ಅನ್ಯೋನ್ಯಾಶ್ರಯ ದೋಷವಿದೆ. ಈಶ್ವರಭಾವನೆಗೆ ಮಾನವನ ಭಾವನೆಗಳು ಆಶ್ರಯ. ಮಾನವನ ಭಾವನೆಗಳಿಗೆ ಈಶ್ವರಭಾವನೆ ಆಶ್ರಯ. ನಮ್ಮ ಕಣ್ಣಿಗೆ ಕಾಣುವ ಭಾವಗಳೇ ನಿಜವಾದ ಭಾವನೆಗಳಾದರೆ, ನಮ್ಮ ಕಣ್ಣಿಗೆ ಕಾಣದ ಈಶ್ವರಭಾವನೆ ಇದೆ ಎಂದು ಹೇಳಲಾಗುವುದಿಲ್ಲ. ಅದು ಅದಕ್ಕೆ ಆಶ್ರಯವಾಗಲಾರದು. ಹೀಗೆ ಇವನ ವಾದದಲ್ಲಿ ಅನ್ಯೋನ್ಯಾಶ್ರಯ ತರ್ಕಾಬಾಸ (ಫ್ಯಾಲಸಿ ಆಫ್ ಬೆಗ್ಗಿಂಗ್ ದಿ ಕ್ವೆಶ್ಚನ್) ಸ್ಪಷ್ಟವಾಗಿ ಕಾಣಿಸುತ್ತದೆ, ಇದನ್ನು ಅನಂತರ ಬಂದ ಡೇವಿಡ್ ಹ್ಯೂಮ್ ತೋರಿಸಿಕೊಟ್ಟು ಇಂದ್ರಿಯಾನುಭವವೇ ಮೂಲವಾದರೆ ಆತ್ಮ, ಈಶ್ವರ ಮುಂತಾದ ಅಮೂರ್ತ ಭಾವನೆಗೆ ಅವಕಾಶವೇ ಇಲ್ಲವೆಂದು ಸ್ಪಷ್ಟಪಡಿಸಿದ.

ಡೇವಿಡ್ ಹ್ಯೂಮ್ : (1711-1776). ಸ್ಕಾಟ್ಲೆಂಡಿನವ. ಅವನ ಜೀವಿತಕಾಲದಲ್ಲಿ ಜನರಿಗೆ ಮೆಚ್ಚುಗೆಯಾದುವು ಆತನ ಚರಿತ್ರೆಯ ಗ್ರಂಥ ಮತ್ತು ಪ್ರಬಂಧಗಳು. ಅವನ ಹೆಸರು ಸ್ಥಿರವಾಗಿ ಉಳಿದಿರುವುದು ಆತನ ಮುಖ್ಯ ತಾತ್ತ್ವಿಕ ಗ್ರಂಥವಾದ ಟ್ರೀಟೈಸ್ ಆನ್ ಹ್ಯೂಮನ್ ನೇಚರ್‍ನಿಂದ. ಅದನ್ನು ಪ್ರಕಟಿಸಿದಾಗ ಜನ ಅದನ್ನು ಓದಲಿಲ್ಲ. ಅವನೇ ಹೇಳಿರುವಂತೆ, ಮುದ್ರಣಾಲಯದಿಂದ ಹೊರಬಿದ್ದ ಸಮಯದಲ್ಲೇ ಅದು ಸತ್ತಿತು. ಆದರೆ ಅದು ಅವನ ತರುವಾಯ ನಿರ್ವಿಚಾರವಾದಿಯಾಗಿ ತೂಕಡಿಸುತ್ತಿದ್ದ ಕ್ಯಾಂಟ್‍ನನ್ನು ಬಡಿದೆಬ್ಬಿಸಿತು. ಲಾಕ್‍ನಿಂದ ಪ್ರಾರಂಭವಾದ ಅನುಭವ ಪ್ರಧಾನವಾದ ಹ್ಯೂಮ್‍ನ ತತ್ತ್ವದಲ್ಲಿ ಪರಾಕಾಷ್ಠೆಯನ್ನು ಮುಟ್ಟಿತು. ಇಂದ್ರಿಯ ಪ್ರತ್ಯಕ್ಷವೇ ಮೂಲ ಆಸರೆಯಾದರೆ ಭೌತವಸ್ತುವಾಗಲಿ, ಆತ್ಮವಾಗಲಿ, ಈಶ್ವರನಾಗಲಿ ಇರುವುದೆಂದು ಸ್ಥಾಪಿಸಲು ಅಸಾಧ್ಯವಾಗುತ್ತದೆ ಭೌತವಿಜ್ಞಾನ, ಆತ್ಮವಿಜ್ಞಾನ, ಈಶ್ವರನನ್ನು ಕುರಿತ ಮತಜ್ಞಾನ-ಇವೆಲ್ಲವೂ ಸಂದೇಹಗ್ರಸ್ತವಾದುವು. ಈ ನಂಬಿಕೆಗೆ ಇಂದ್ರಿಯಾನುಭವ ಆಶ್ರಯವಾಗಲಾಗದು. ಇಂದ್ರಿಯಾನುಭವವೇ ಪ್ರಾಮಾಣಿಕ ಜ್ಞಾನವಾದರೆ ಈ ನಂಬಿಕೆಗಳನ್ನು ಜ್ಞಾನವೆಂದು ಪರಿಗಣಿಸಲಾಗುವುದಿಲ್ಲ. ಇವು ನಿರ್ವಿಚಾರ (ಡಾಗ್ಮ್ಯಾಟಿಕ್) ನಂಬಿಕೆಗಳಾಗುತ್ತವೆ. ಇವು ಸ್ವತಸ್ಸಿದ್ಧವಲ್ಲ, ಸಂಶಯಗ್ರಸ್ತವಾದುವು.

ಹ್ಯೂಮ್ ಕೇವಲ ಸಂಶಯವಾದಿಯಲ್ಲ. ಈ ಭಾವನೆಗಳೆಲ್ಲ ಸಂಶಯಗ್ರಸ್ತವಾದುವಾದರೂ ಇವು ಜನರ ಬಾಳಿನಲ್ಲಿ ತುಂಬ ಪರಿಣಾಮಕಾರಿಗಳಾಗಿವೆ. ಈ ನಂಬಿಕೆಗಳಿಲ್ಲದಿದ್ದರೆ ನಮ್ಮ ಜೀವನ ವ್ಯವಹಾರವೇ ಕುಸಿದು ಬೀಳುತ್ತವೆ. ಆದ್ದರಿಂದ ಇವು ಅಪ್ರಯೋಜಕವಾದುವು. ಅನಗತ್ಯವಾದುವು ಎಂದು ಭಾವಿಸುವುದೂ ಬೇಕು. ಒಂದು ಬಗೆಯ ನಿರ್ವಿಚಾರವಾದವಾಗುತ್ತದೆ. ತಾತ್ತ್ವಿಕವಾಗಿ ಇವು ನಂಬಲರ್ಹವೆಂದು ಭಾವಿಸಬಹುದೇ ಹೊರತು, ಜೀವನದಲ್ಲಿ ಇವು ವಾಸ್ತವವಾಗಿ ಪರಿಣಾಮಕಾರಿಯಾಗಿರುತ್ತವೆ ಎಂಬುದನ್ನು ನಿರಾಕರಿಸಲಾಗುವುದಿಲ್ಲ. ಇದೂ ಸಂದೇಹಕರವೆಂದು ಹೇಳುವುದು ನಿರ್ವಿಚಾರ ಸಂದೇಹ. ಪ್ರಾಮಾಣಿಕನಾದ ಸಂದೇಹವಾದಿಯಾದವ ತಾನು ಸಂದೇಹಕರವೆಂದು ತಿಳಿದ ತತ್ತ್ವಗಳ ವಿಚಾರದಲ್ಲೂ ತಾನು ನೆಚ್ಚಿದ ತತ್ತ್ವಗಳ ವಿಚಾರವಾಗಿಯೂ ಒಂದೇ ಪ್ರಕಾರ ಶಂಕೆ ಇಟ್ಟುಕೊಂಡಿರುತ್ತಾನೆ-ಎಂದೂ ಹ್ಯೂಮ್ ತನ್ನ ಅಂತರಂಗವನ್ನು ತೆರೆದಿಟ್ಟಿದ್ದಾನೆ. ಬೇರೆ ಯಾವ ಫಲವನ್ನೂ ನಿರೀಕ್ಷಿಸದೇ ತತ್ತ್ವಜಿಜ್ಞಾಸೆಯಲ್ಲಿ ಒಂದು ಬಗೆಯಾದ ಸುಖವಿದೆ. ಅದನ್ನು ಬೇಡವೆನ್ನಲಾಗದು. ಆದರೆ ಅದೊಂದರಿಂದಲೇ ಜೀವನ ನಡೆಯುವುದಿಲ್ಲ. ಜೀವನದ ನಡವಳಿಕೆಯ ದೃಷ್ಟಿಯಿಂದ ನಮಗೆ ಹಿತವಾದದ್ದು ಯಾವುದು ಅಹಿತವಾದದ್ದು ಯಾವುದು, ಎಂಬುದನ್ನು ನಾವು ನಿಶ್ಚಯಿಸಿಕೊಳ್ಳುವುದು ಅಗತ್ಯ. ಈ ವಿಚಾರದಲ್ಲಿ ಪ್ರಯೋಜನವೇ ಪ್ರಮಾಣ. ವಿಚಾರ ದೃಷ್ಟಿಯಿಂದ ಕೆಲವು ಭಾವನೆಗಳು ಸಂದೇಹಾಸ್ಪದವಾದವಾಗಿರಬಹುದು. ಅವುಗಳ ಸತ್ಯ ಸಂಭವನೀಯ ಸತ್ಯವಾಗಿರಬಹುದು. ಆಚರಣೆಯಲ್ಲಿ ಅವು ಸತ್ಪರಿಣಾಮಕಾರಿಯಾದರೆ ಅವುಗಳನ್ನು ತ್ಯಜಿಸಲಾಗದು. ಪ್ರಯೋಜನವಾದಷ್ಟು ಮಟ್ಟಿಗೆ ಅವು ಪ್ರಾಯೋಗಿಕ ಸತ್ಯಗಳು. ಹ್ಯೂಮ್ ಸೂಚಿಸಿದ ಈ ಅಂಶಗಳನ್ನು ಕ್ಯಾಂಟ್ ಬೆಳೆಸಿದ. ಅವನ ತರುವಾಯ ಫಲವಾದಿಯಾದ ವಿಲಿಯಮ್ ಜೇಮ್ಸ್ ಮುಂದುವರಿಸಿದ.

ಲಾಕ್ ಮತ್ತು ಬಾಕ್ರ್ಲೆಗಳ ವಾದಕ್ಕೆ ಮೂಲಭೂತವಾದ ಇಂದ್ರಿಯಭಾವನೆಗಳನ್ನು ಮಾತ್ರ ತನಗೆ ಸಂಗತವೆಂದು ಹ್ಯೂಮ್ ಆಯ್ದುಕೊಂಡ. ಇತರವು ಅಸಂಗತವೆಂದು ನಿರ್ದಾಕ್ಷಿಣ್ಯವಾಗಿ ತೊರೆದುಬಿಟ್ಟ. ಆಯ್ದುಕೊಂಡ ಅಂಶವನ್ನು ಈ ರೀತಿ ತಿಳಿಸಿರುತ್ತಾನೆ.

1. ಮಾನವನ ಪ್ರತ್ಯಕ್ಷ ಅನುಭವಗಳನ್ನು ವಿಭಜಿಸಿದಾಗ ಅವು ಎರಡು ಬಗೆಯಾಗಿರುತ್ತವೆ. ಅವೇ ಮುದ್ರೆಗಳು ಮತ್ತು ಭಾವನೆಗಳು ಅವೆರಡಕ್ಕೆ ಇರುವ ಭೇದ ಕೇವಲ ಪರಿಮಾಣದ್ದು. ಮನಸ್ಸಿನೊಳಕ್ಕೆ ಬಿರುಸಾಗಿ ಬಲವಾಗಿ ಪ್ರವೇಶಿಸುವ ಪ್ರತ್ಯಕ್ಷಾನುಭಗಳನ್ನು ಮುದ್ರೆಗಳು (ಇಂಪ್ರೆಷನ್ಸ್) ಎಂದು ಕರೆಯಬಹುದು. ಈ ನಾಮಧೇಯದಲ್ಲಿ ಮೊಟ್ಟಮೊದಲಿಗೆ ನಮ್ಮ ಮನಸ್ಸಿನಲ್ಲಿ ಕಾಣಿಸಿಕೊಳ್ಳುವ ನಮ್ಮೆಲ್ಲ ಇಂದ್ರಿಯಾನುಭವಗಳನ್ನು, ರಾಗಗಳನ್ನೂ (ಪ್ಯಾಷನ್ಸ್), ಭಾವಗಳನ್ನೂ (ಇಮೋಷನ್ಸ್) ಒಟ್ಟಿಗೆ ಸೇರಿಸಲಾಗಿದೆ. ಭಾವನೆಗಳು (ಐಡಿಯಾಸ್) ಎಂದರೆ ನಾವು ಆಲೋಚಿಸಿದಾಗ ವಿಚಾರ ಮಾಡಿದಾಗ ತೋರುವುವು. ಇವು ಮಸುಕಾದ ಪ್ರತಿಬಿಂಬಗಳು. ಮುದ್ರೆಗಳು ಬಿರುಸಾಗಿ ಬಲವಾಗಿ ಮನಸ್ಸಿನಲ್ಲಿ ನಾಟಿದುವು. ಅವುಗಳನ್ನೇ ನಾವು ಯೋಚಿಸಿದಾಗ ಅವು ಬಲ ಕುಗ್ಗಿದಂತೆ ತೋರುತ್ತವೆ. ವ್ಯತ್ಯಾಸವಿರುವುದು ಬಿರುಸಿನ ಪ್ರಮಾಣದಲ್ಲಿ ಮಾತ್ರ. ನಕಲುಗಳಿಗೆ ಮೂಲದಷ್ಟು ಪ್ರಾಬಲ್ಯವಿಲ್ಲ. 2. ಮುದ್ರೆಗಳು, ಭಾವನೆಗಳು, ಸರಳವಾಗಿರಬಹುದು ಅಥವಾ ಸಂಕೀರ್ಣವಾಗಿರಬಹುದು. ಸರಳ ಭಾವನೆಗಳು ಮುದ್ರೆಗಳ ನಕಲುಗಳು. ಆದರೆ ಸಂಕೀರ್ಣಭಾವಗಳು ಮುದ್ರೆಗಳ ತದ್ವತ್ತಾದ ನಕಲುಗಳಾಗಬೇಕಾಗಿಲ್ಲ. ಸಂಕೀರ್ಣಭಾವನೆಗಳು ಸರಳ ಭಾವನೆಗಳಿಗಿಂತ ಎರಡು ಬಗೆಯಲ್ಲಿ ಭಿನ್ನವಾಗಿರಬಹುದು. ಬೇರೆ ಬೇರೆಯಾಗಿ ಪಡೆದ ಮುದ್ರೆಗಳನ್ನು ಸೇರಿಸಬಹುದು. ರೆಕ್ಕೆಗಳಿರುವ ಕುದುರೆ, ಹಾಗೆ ಸೇರಿಸಿ ಪಡೆದ ಸಂಕೀರ್ಣ ಭಾವನೆಗಳೂ ಒಂದು ಉದಾಹರಣೆ. 3. ಮುದ್ರೆಗಳಲ್ಲಿರುವ ಒಂದನ್ನು ಬಿಟ್ಟು ಒಂದನ್ನು ಭಾವಿಸಬಹುದು. ಉದಾ: ಬಣ್ಣವನ್ನು ಬಿಟ್ಟು ಆಕಾರವನ್ನು ಮಾತ್ರ ಭಾವಿಸಬಹುದು. ಆದರೆ ಮೂಲ ಇಂದ್ರಿಯಾನುಭವವಿಲ್ಲದ ಯಾವುದನ್ನೂ ನಮ್ಮ ಮನಸ್ಸು ಸೃಷ್ಟಿಸಲಾರದು. ಕೇಳದ ಶಬ್ದವನ್ನಾಗಲಿ, ನೋಡದ ಬಣ್ಣವನ್ನಾಗಲಿ, ಆಕಾರವನ್ನಾಗಲಿ, ಅನುಭವಿಸದ ರಾಗವನ್ನಾಗಲಿ ಭಾವಿಸುವುದು ಸಾಧ್ಯವಲ್ಲ.

ಹ್ಯೂಮ್ ನಿರಾಕರಿಸಿದ ಅಂಶಗಳು ಇವು : ಲಾಕ್ ಎರಡು ದ್ರವ್ಯಗಳು (ಭೌತ ಮತ್ತು ಮಾನಸಿಕ) ಒಪ್ಪಿರುತ್ತಾನೆ. ಬಾಕ್ರ್ಲೆ ಮಾನಸಿಕ ದ್ರವ್ಯವನ್ನು ಮಾತ್ರ ಒಪ್ಪಿರುತ್ತಾನೆ. ಹ್ಯೂಮ್ ಯಾವ ಬಗೆಯ ದ್ರವ್ಯವನ್ನೂ ಒಪ್ಪುವುದಿಲ್ಲ. ದ್ರವ್ಯ ಎಂಬ ಭಾವನೆಯನ್ನು ನಾವು ಎಷ್ಟೇ ತೀಕ್ಷ್ಣವಾಗಿ ಚಿಂತಿಸಿದರೂ ಅದು ನಮಗೆ ಕಾಣಿಸುವುದಿಲ್ಲ. ಅದು ಯಾವ ಬಗೆಯಾದ ಇಂದ್ರಿಯದ ಮುದ್ರೆಯ ನಕಲಲ್ಲ. ಯಾವ ಇಂದ್ರಿಯ ಭಾವನೆಯನ್ನೂ ಸೇರಿಸಿದರೂ ಅದು ನಮ್ಮ ಮನಸ್ಸಿನಲ್ಲಿ ಉದ್ಭವವಾಗುವುದಿಲ್ಲ. ಅದನ್ನು ನಾವು ಇಂದ್ರಿಯದ ಮೂಲಕ ಪಡೆಯಬಹುದೆಂದರೆ, ಅದು ಯಾವ ಇಂದ್ರಿಯ? ಕಣ್ಣಿನಿಂದ ಪಡೆದುದಾದರೆ ಅದು ಶಬ್ದವಾಗಿರಬೇಕು. ಅದು ಶಬ್ದವಲ್ಲ. ನಾಲಗೆಯಿಂದ ಪಡೆದುದಾದರೆ ಅದು ರುಚಿಯಾಗಿರಬೇಕು. ಅದು ರುಚಿ ಇಲ್ಲದ್ದು. ದ್ರವ್ಯ ಬಣ್ಣವೆಂದಾಗಲಿ, ರುಚಿಯೆಂದಾಗಲಿ, ಶಬ್ದವೆಂದಾಗಲಿ ಯಾರೂ ಸಾಧಿಸಿ ಹೇಳುವುದಿಲ್ಲ. ಹಾಗೆಯೇ ಪರ್ಯಾಲೋಚನೆಯಿಂದಲೂ ನಮಗೆ ದ್ರವ್ಯವೆಂಬ ಭಾವನೆ ತಿಳಿಯುವುದಿಲ್ಲ. ಮೊದಲಲ್ಲಿ ನಮ್ಮ ಇಂದ್ರಿಯಾನುಭವಕ್ಕೆ ಬಾರದ ಯಾವ ಅಂಶವೂ ಪರ್ಯಾಲೋಚನೆಗೆ ವಿಷಯವಾಗಲಾರದು. ನಮಗೆ ತಿಳಿದಿರುವುದು ಇಂದ್ರಿಯಭಾವನೆಗಳ ಒಂದು ಗುಂಪು ಮಾತ್ರವೇ. ಈ ಅಮೂರ್ತ ದ್ರವ್ಯಭಾವನೆಗಳೂ ಅನುಭವಸಿದ್ಧವಲ್ಲ. ಕಾರ್ಯಕಾರಣಭಾವವೂ ಇಂದ್ರಿಯಾನುಭವದಿಂದ ಪಡೆಯಲಾಗದ ಭಾವನೆ. ಒಂದು ಮುದ್ರೆಯ ಅನಂತರ ಇನ್ನೊಂದು ಮುದ್ರೆ ಬರುತ್ತದೆ. ಇದು ಅನುಭವ ಸಿದ್ಧ, ಪ್ರಸಿದ್ಧ. ಆದರೆ ಹಿಂದಿನದು ಮುಂದಿನದರ ಕಾರಣವೆಂಬ ಭಾವನೆ ನಮ್ಮ ಅನುಭವಕ್ಕೆ ಬಂದ ವಿಷಯವಲ್ಲ. ಈ ಭಾವನೆಗೆ ಸಮನಾದ ಇಂದ್ರಿಯದ ಮುದ್ರೆಯಾಗಲಿ, ತದ್ಗಮ್ಯವಾದ ಭಾವನೆಯನ್ನಾಗಲಿ ಇರುವುದಿಲ್ಲ. ಈ ಭಾವನೆ ಒಂದು ಮನಸ್ಸಿನ ಚಾಳಿ.

ಹಾಗೆಯೇ ಆತ್ಮವಸ್ತುವಿಗೂ ಅದಕ್ಕೆ ಸಮಾನವಾದ ಇಂದ್ರಿಯದ ಮುದ್ರೆಯಾಗಲಿ, ನಕಲಾದ ಭಾವನೆಯಾಗಲಿ ಇರುವುದಿಲ್ಲ. ಆತ್ಮವೆಂದು ನಾವು ಯಾವುದನ್ನು ಕರೆಯುತ್ತೇವೆಯೋ ಅದೂ ಕೂಡ ಒಂದನ್ನೊಂದು ಹಿಂಬಾಲಿಸುವ ಮಾನಸಿಕ ವೃತ್ತಿಗಳ ಒಂದು ಕಂತೆ ತುಂಬ ಸಮೂಹ.

ನಮ್ಮ ಮಾನಸಿಕ ಶಕ್ತಿ ತುಂಬ ಪರಿಮಿತ. ಅದು ಭೌತವಸ್ತು ಮತ್ತು ಆತ್ಮ-ಇಂಥ ಸಾಧಾರಣ ವಿಷಯಗಳನ್ನೇ ತಿಳಿಯಲು ಅಸಮರ್ಥವಾಗಿರುವುದರಿಂದ ಅದಕ್ಕೆ ಈಶ್ವರನನ್ನು ತಿಳಿಯುವ ಬಲ ಎಲ್ಲಿಂದ ಬರಬೇಕು? ಒಂದು ಪಕ್ಷ ಈಶ್ವರನಿದ್ದಾನೆಂದು ಹೇಳಿದರೂ ಆತನ ಪರಿಪೂರ್ಣತೆಯನ್ನಾಗಲಿ, ಸರ್ವಶಕ್ತಿಯನ್ನಾಗಲಿ, ವಿಶ್ವವನ್ನು ಸೃಷ್ಟಿಸಿದ್ದರ ಉದ್ದೇಶವನ್ನಾಗಲಿ ನಾವು ತಿಳಿಯಲು ಸಮರ್ಥರಲ್ಲ. ಅಲ್ಲದೆ ಮಾನವಗುಣಗಳನ್ನು ಈಶ್ವರನಿಗೆ ಆರೋಪಿಸುವುದು ಕೇವಲ ಅನಾಗರಿಕ ಮನೋಭಾವನೆ. ಅವನಿಗೆ ಮಾನವಗುಣಗಳನ್ನು ಆರೋಪಿಸಿದರೆ, ಮಾನವರ ಲೋಪಗಳನ್ನು ಆರೋಪಿಸಿದಂತಾಗುತ್ತದೆ. ಈಶ್ವರ ಪರಿಪೂರ್ಣನಾದರೆ ಅಪರಿಪೂರ್ಣವಾದ ವಿಶ್ವವನ್ನೂ ಮಾನವನನ್ನೂ ಏಕೆ ಸೃಷ್ಟಿಸಿದ? ಪರಿಪೂರ್ಣವಾದ್ದರಿಂದ ಪರಿಪೂರ್ಣವಾದದ್ದು ಹುಟ್ಟಬಹುದೇ ವಿನಾ ಅಪರಿಪೂರ್ಣವಾದ ವಿಶ್ವ ಮತ್ತು ಮಾನವ ಹುಟ್ಟಲು ಸಾಧ್ಯವಿಲ್ಲ. ಈಶ್ವರ ಒಳ್ಳೆಯವ, ದಯಾಮಯ ಎಂದು ಹೇಳುವುದುಂಟು. ಹಾಗಿದ್ದರೆ ಆತ ಸೃಷ್ಟಿಸಿದ ಈ ವಿಶ್ವದಲ್ಲಿ ಇಷ್ಟೊಂದು ದುಃಖವೇಕಿದೆ? ಮಾನವ ಅಜ್ಞ, ದೇವರ ಸ್ವಭಾವವನ್ನು ಅವನ ಉದ್ದೇಶವನ್ನೂ ಅರಿತುಕೊಳ್ಳಲಾರ -ಎಂದು ಹೇಳುವುದುಂಟು. ಅವನಿಗೆ ಆ ಶಕ್ತಿ ಇಲ್ಲ ಎಂಬುದು ನಮಗೂ ಸಮ್ಮತವೇ. ಆದರೆ ತಿಳಿಯದುದರ ವಿಚಾರವಾಗಿ ವಾದವೇಕೆ? ಒಬ್ಬ ತನಗೆ ತಿಳಿದಿರುವುದರ ಆಧಾರದ ಮೇಲೆ ಅನುಮಿತಿಗಳನ್ನು ಏರ್ಪಡಿಸಬೇಕೇ ಹೊರತು ತಿಳಿಯದುದರ ಆಧಾರದ ಮೇಲಲ್ಲ. ಅದು ವಿವೇಕವಲ್ಲ.

ಅಲ್ಲದೆ ಮತದ ಹುಟ್ಟು ಬೆಳೆವಣಿಗೆಗಳನ್ನು ತಿಳಿದುಕೊಂಡಾಗ ದೇವರ ಸ್ವರೂಪವನ್ನು ಎಲ್ಲ ಜನರೂ ಒಂದೇ ರೀತಿಯಾಗಿ ಚಿತ್ರಿಸಿಕೊಂಡಿರುವುದಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಎಲ್ಲ ಮತಗಳೂ ಈಶ್ವರನನ್ನು ನಂಬುವುದಿಲ್ಲ. ಮತಕ್ಕೆ ಇಂಥ ಗುಣಗಳುಳ್ಳ ದೇವರೇ ಅಗತ್ಯವೆಂದು ಹೇಳಲಾಗುವುದಿಲ್ಲ. ಅಲ್ಲದೆ ಮತಭಾವಕ್ಕೆ ತರ್ಕಕಾರಣವೆಂದೂ ಹೇಳಲಾಗುವುದಿಲ್ಲ. ನಮ್ಮ ಜೀವನದಲ್ಲಿ ತರ್ಕಕ್ಕಿಂತಲೂ ನಮ್ಮಲ್ಲಿ ಬೇರೂರಿರುವ ವಾಸನೆಗಳೂ (ಇನ್‍ಸ್ಟಿಂಕ್ಟ್‍ಸ್) ಮತ್ತು ಭಾವಗಳೂ (ಫೀಲಿಂಗ್ಸ್) ಹೆಚ್ಚು ಪ್ರಚೋದನಕಾರಿಗಳು. ಸೌಂದರ್ಯವೇನೆಂದು ನಾವು ತರ್ಕಿಸಿ ತಿಳಿದು ಸವಿಯುವುದಿಲ್ಲ. ಅನೇಕ ವೇಳೆ ತರ್ಕಿಸಿದಾಗ ಸೌಂದರ್ಯಭಾವ ಬತ್ತಿಹೋಗುವ ಸಂಭವವೇ ಹೆಚ್ಚು. ತಾಯಿ ಮಗುವನ್ನು ತರ್ಕದಿಂದ ತಿಳಿದು ಪ್ರೀತಿಸುವುದಿಲ್ಲ. ಮತಭಾವಕ್ಕೂ ಹಾಗೆಯೇ ನಮ್ಮ ಭಾವಗಳು ಮುಖ್ಯ ಕಾರಣಗಳಿರಬಹುದು. ಆ ಮೂಲಭಾವಗಳು ದುಷ್ಪರಿಣಾಮಕಾರಿಗಳಾದಂತೆ ತರ್ಕ ಸ್ವಲ್ಪಮಟ್ಟಿಗೆ ನಮ್ಮನ್ನು ಅವಿವೇಕದಿಂದ ಬಿಡುಗಡೆ ಮಾಡಬಹುದೇ ಹೊರತು ಆ ಭಾವವನ್ನು ಹುಟ್ಟುಹಾಕಲಾರದು. ಯಾವುದು ಧರ್ಮ, ಯಾವುದು ಅಧರ್ಮವೆಂಬುದನ್ನು ನಿರ್ಧರಿಸಲು ಜೀವನದಲ್ಲಿ ಅವುಗಳಿಂದ ಉಂಟಾಗುವ ಸತ್ಪರಿಣಾಮಗಳನ್ನೇ ಪ್ರಮಾಣವಾಗಿ ಆಧರಿಸಬೇಕು. ಧರ್ಮಕ್ಕೆ ಮುಖ್ಯವಾದದ್ದು ಭಾವಶುದ್ಧಿ. ಭಾವಸಿದ್ಧಿ. ಇವುಗಳನ್ನು ಯಾವ ಮತಭಾವನೆ ಏರ್ಪಡಿಸುತ್ತದೆಯೋ ಅದೇ ಒಳ್ಳೆಯ ಮತ. ಆ ಮತ ಜೀವನ ಪರಿಸ್ಥಿತಿ ಬದಲಾಯಿಸಿದಂತೆಲ್ಲ ಬದಲಾಯಿಸಬೇಕು. ಬೆಳೆಯಬೇಕು. ಯಾವುದೋ ಒಂದು ಬುಧ್ಯಾರೂಢವಾದ ಆತ್ಮತತ್ತ್ವ (ರ್ಯಾಷನಲ್ ಸೈಕಾಲಜಿ) ಅಸಾಧ್ಯ. ಕೇವಲ ಬುಧ್ಯಾರೂಢವಾದ ವಿಶ್ವತತ್ತ್ವ (ರ್ಯಾಷನಲ್ ಕಾಸ್ಮಾಲಜಿ) ಅಸಾಧ್ಯ. ಕೇವಲ ಬುಧ್ಯಾರೂಢವಾದ ಮತತತ್ತ್ವವೂ (ರ್ಯಾಷನಲ್ ಥಿಯಾಲಜಿ) ಅಸಾಧ್ಯ. ಈ ಭಾವನೆಗಳು ಕಾಂಟ್ ತತ್ತ್ವವನ್ನು ಪ್ರಚೋದನೆಗೊಳಿಸಿದವು.

ಇಮ್ಯಾನ್ಯುಅಲ್ ಕ್ಯಾಂಟ್ : (1724 -1804). ಹುಟ್ಟಿದ್ದು ಜರ್ಮನಿಯ ನಗರವಾದ ಕೋನಿಗ್ಸ್‍ಬರ್ಗ್‍ನಲ್ಲಿ. ಹುಟ್ಟಿದಂದಿನಿಂದ ಸಾಯುವವರೆಗೂ ಆ ನಗರದ ಸುತ್ತಿನಲ್ಲೇ ಬಾಳಿದ. ವಿದ್ಯಾಭ್ಯಾಸ ಮಾಡಿದ್ದೂ ಅಲ್ಲೇ. ಸಮಾಧಿಯಾದದ್ದೂ ಅಲ್ಲೇ. ವಿಶ್ವವಿದ್ಯಾನಿಲಯದ ಬೋಧಕನಾಗಿದ್ದುದೂ ಅಲ್ಲೇ. ಮಿಗಿಲಾಗಿ ಕಿಟೀಕ್ ಆಫ್ ಪ್ಯೂರ್ ರೀಸನ್, ಕ್ರಿಟೀಕ್ ಆಫ್ ಪ್ರಾಕ್ಟಿಕಲ್ ರೀಸನ್, ಕ್ರಿಟೀಕ್ ಆಫ್ ಜಡ್ಜಮೆಂಟ್ ಎಂಬ ದೊಡ್ಡ ಗ್ರಂಥಗಳನ್ನು ಬರೆದದ್ದೂ ಅಲ್ಲೇ.

ಇದುವರೆಗೂ ಆಧುನಿಕ ತತ್ತ್ವ ಹುಟ್ಟಿದಾರಭ್ಯ ಬುಧ್ಯಾರೂಢವಾದ ಮತ್ತು ಅನುಭವಾರೂಢವಾದಗಳು ಬೆಳೆದು ಒಂದನ್ನೊಂದು ಪ್ರತಿಭಟಿಸಿ ನಿಂತದ್ದನ್ನು ನೋಡಿದ್ದೇವೆ. ಇವೆರಡನ್ನೂ ವಿಮರ್ಶೆಗೆ ಒಳಪಡಿಸಿ ಅವುಗಳಲ್ಲಿರುವ ದೋಷಗಳನ್ನು ಬೇರ್ಪಡಿಸಿ, ಹೊರದೂಡಿ, ಗುಣಗಳನ್ನು ಸಮನ್ವಯಗೊಳಿಸಲು ಕ್ಯಾಂಟ್ ಪ್ರಯತ್ನಿಸಿದ. ಅವನ ತತ್ತ್ವ ಬುದ್ಧಿಪರವಾದವೂ ಅಲ್ಲ, ಅನುಭವಪರವಾದುವೂ ಅಲ್ಲ, ಅವೆರಡರಲ್ಲೂ ಕಾಣಬರುವ ನಿರ್ವಿಚಾರವಾದವೂ ಅಲ್ಲ. ಅದು ಅವೆಲ್ಲದರ ವಿಮರ್ಶನತತ್ತ್ವ. ನ್ಯಾಯಾಧೀಶವಾದಿ ವಿವಾದಿಗಳು ಕೊಟ್ಟ ಸಾಕ್ಷ್ಯವನ್ನು ಪರೀಕ್ಷೆಮಾಡಿ ತೀರ್ಮಾನಕ್ಕೆ ಬರುವಂತೆ ಕ್ಯಾಂಟ್ ಈ ಮೂರು ಪಕ್ಷಗಳನ್ನೂ ವಿಮರ್ಶಿಸಿ ತೀರ್ಪುಕೊಡಲು ಪ್ರಯತ್ನಿಸಿದ್ದಾನೆ. ಅನುಭವವಾದಿಗಳ ಪಕ್ಷ ಇದು: 1. ತಿಳಿವಿಗೆ ಬರುವುದೆಲ್ಲ ಬಿಡಿಬಿಡಿಯಾದ ಇಂದ್ರಿಯಗಳ ಮೇಲೆ ಒತ್ತಿದ ಮುದ್ರೆಗಳು. 2. ಈ ಮುದ್ರೆಗಳು ತಿಳಿವಿನೊಳಗೆ ಬರುವುದಕ್ಕೆ ಮುಂಚೆ ತಿಳಿವಿನಲ್ಲಿ ಇನ್ನೇನೂ ಲವಲವಿಕೆ ಇಲ್ಲ. ಅದು ಬರಿದಾದದ್ದು. 3. ಅದರೊಳಕ್ಕೆ ಪ್ರವೇಶಿಸಿದ ಮುದ್ರೆಗಳ ಅಂಶಗಳನ್ನು ಅದು ಬಿಡಿಸಿ ಬಗೆಬಗೆಯಾಗಿ ಸೇರಿಸಿ ಭಾವನೆಗಳನ್ನು ಏರ್ಪಡಿಸುತ್ತದೆ. ಈ ಭಾವನೆಗಳಿಗೆ ಇಂದ್ರಿಯಾನುಭವಗಳ ಎಲ್ಲೆಯನ್ನು ಮೀರಿ ತಾವೇ ತಾವಾಗಿ ಮೆರೆಯಲು ಅವಕಾಶವಿಲ್ಲ. ಹಾಗೆ ಇಂದ್ರಿಯಾನುಭವದ ಎಲ್ಲೆಯನ್ನು ಮೀರಿದ ಭಾವನೆಗಳು (ಆತ್ಮ, ಭೌತವಸ್ತು, ಈಶ್ವರ) ಬರೀ ಜಳ್ಳು, ಬರಡು. ಇದಕ್ಕೆ ವಿರುದ್ಧವಾದ ಬುದ್ಧಿಪರವಾದ ವಾದದ ಪಕ್ಷ ಹೀಗಿದೆ. 1. ಇಂದ್ರಿಯಾನುಭವಗಳು ನೆಚ್ಚತಕ್ಕವಲ್ಲ. 2. ಬುದ್ಧಿಗೆ ಆಂತರಿಕ ಭಾವನೆಗಳು ನೆಚ್ಚಬಹುದಾದವು. ಇವು ಇಂದ್ರಿಯಾನುಭವ ಹುಟ್ಟುವುದಕ್ಕೆ ಮುಂಚೆಯೇ ಬುದ್ಧಿಯಲ್ಲಿ ಇರತಕ್ಕವು. ಬುದ್ಧಿಗೆ ಆಂತರಿಕವಾದುವು, ಹೊರತಾದುವಲ್ಲ. ಆದ್ದರಿಂದ ಸ್ವತಃಸಿದ್ಧವಾದವು. ಇವುಗಳ ನೆರವಿಲ್ಲದೆ ಜ್ಞಾನ ಸಾಧ್ಯವಿಲ್ಲ. ಇವು ಇಂದ್ರಿಯಗಳಿಗೆ ಅಧೀನವಲ್ಲವಾದ್ದರಿಂದ, ಇಂದ್ರಿಯಾತೀತ ವಿಷಯಗಳನ್ನು, ಆತ್ಮ ದೈವ ಮುಂತಾದ ವಿಷಯಗಳನ್ನು ತಿಳಿಯಲು ಇವಕ್ಕೆ ಮಾತ್ರ ಸಾಧ್ಯ.

ಈ ಪಕ್ಷಗಳನ್ನು ಪರೀಕ್ಷೆಗೆ ಒಳಪಡಿಸಿ ಕ್ಯಾಂಟ್ ತೀರ್ಮಾನಿಸಿದ್ದು ಇದು : ಇವೆರಡು ಪಕ್ಷಗಳೂ ನಿರ್ವಿಚಾರವಾದಗಳೇ? ಜ್ಞಾನಕ್ಕೆ ಇಂದ್ರಿಯಾನುಭವಗಳು ಮಾತ್ರ ಆಧಾರಗಳಲ್ಲ. ಇಂದ್ರಿಯಗಳ ಮುದ್ರೆಗಳು ಬುದ್ಧಿಯನ್ನು ಪ್ರವೇಶಿಸುವುದಕ್ಕೆ ಮುಂಚೆ ಇದೆ ಎಂಬುದನ್ನು ಮರೆಯಕೂಡದು-ಎಂದು ಲೈಬ್ನಿಟ್ಸ್ ಲಾಕ್‍ನಿಗೆ ಎಚ್ಚರಕೊಟ್ಟಿದ್ದು ನ್ಯಾಯ. ಬುದ್ಧಿ ಕೇವಲ ಜಡವಸ್ತುವಲ್ಲ. ಒಂದು ಖಾಲಿ ಚೀಲವಲ್ಲ. ಅದರೊಳಗೆ ಬಂದದ್ದನ್ನು ಅದು ಯಾಂತ್ರಿಕವಾಗಿ ಸುಮ್ಮನೆ ಸ್ವೀಕರಿಸುವುದಿಲ್ಲ. ಗಮನಿಸಿ ನೋಡುತ್ತದೆ, ನಿರ್ದೇಶಿಸುತ್ತದೆ. ಮೂಕವಾಗಿ ಬಂದವುಗಳನ್ನು ಮಾತನಾಡುವಂತೆ ಮಾಡುತ್ತದೆ. ಮನಸ್ಸು ಕೇವಲ ನಿಶ್ಚೇತನವಾದುದಲ್ಲ. ಅದರ ಮುಂದೆ ಬಂದ ವಿಷಯಗಳನ್ನು ವ್ಯವಸ್ಥೆಗೊಳಿಸುವ ಶಕ್ತಿ ಅದಕ್ಕೆ ಇದೆ. ವಿಷಯಗಳು ತನ್ನ ರಚನಾಶಕ್ತಿಗೆ ಒಳಪಟ್ಟ ಹೊರತು ಒಳಕ್ಕೆ ಬರಲು ಅವಕಾಶ ಕೊಡುವುದಿಲ್ಲ. ಲಾಕ್ ಮತ್ತು ಹ್ಯೂಮ್ ಹೇಳಿದಂತೆ ವಿಷಯಗಳು ಒಳಗೆ ಬರುವುದಕ್ಕೆ ಮುಂಚೆ ಅದು ನಿಶ್ಚೇತನವಾಗಿದ್ದು ಅವು ಒಳಕ್ಕೆ ಬಂದು ನೆಲೆಸಿದ ಮೇಲೆ ಕ್ರಿಯಾಕಾರಿಯಾಗುವುದಿಲ್ಲ. ತನ್ನ ರಚನಾಶಕ್ತಿಗೆ ಉಚಿತವಾದ ವಿಷಯಗಳು ತನ್ನ ಮುಂದೆ ಬಂದಾಗಲೇ ಅದು ಅವುಗಳನ್ನು ಗಮನಿಸುವುದು. ನಡೆಸಬೇಕಾದ ವೃತ್ತಿ ಕೂಡುವುದಾಗಿದ್ದರೆ, ಮೂರು, ಮೂರು ಎಂಬ ಅಂಕಿಗಳು ಗೋಚರವಾದ ಕೂಡಲೆ, ವಿಧಿಗೆ ಅನುಸಾರವಾಗಿ ಅವುಗಳನ್ನು ಆರು ಎಂದಾಗಿಸಿಕೊಂಡು ಸ್ವೀಕರಿಸುತ್ತದೆ. ನಡೆಸಬೇಕಾದ ವೃತ್ತಿ ಗುಣಾಕಾರವಾದರೆ, ಅದೇ ಬಿಡಿಯಾದ ವಿಷಯಗಳನ್ನು ಮನಸ್ಸು ಸ್ವೀಕರಿಸಬೇಕಾದರೆ ಒಪ್ಪುವ ವಿಧಿನಿಯಮಗಳು ಅಗತ್ಯ.

ಮನಸ್ಸು ವಿಧಾಯಕ ಮಾಡುವ ಬಗೆಗಳು ಯಾವುವು ಎಂಬುದು ಮೂಲ ಪ್ರಶ್ನೆ. ಈ ಪ್ರಶ್ನೆಯನ್ನು ಕ್ಯಾಂಟ್ ಎರಡಾಗಿ ವಿಂಗಡಿಸಿರುತ್ತಾನೆ. 1. ವಿಷಯಗಳನ್ನು ವಿಧಾಯಕ ಮಾಡುವ ಬಗೆಗಳು. 2. ಚಿಂತನದ ವಿಷಯಗಳನ್ನು ವಿಧಾಯಕ ಮಾಡುವ ಬಗೆಗಳು. ಇಂದ್ರಿಯ ಪ್ರತ್ಯಕ್ಷದ ವಿಷಯಗಳನ್ನು ನಿರ್ಧರಿಸುವ ಬಗೆಗಳು ಯಾವುವು? ಚಿಂತನದ ವಿಷಯಗಳನ್ನು ನಿರ್ಧರಿಸುವ ಬಗೆಗಳು ಯಾವುವು? ಮೊದಲ ಪ್ರಶ್ನೆಗೆ ಉತ್ತರ ಹೇಳಲು ಕ್ರಿಟಿಕ್ ಆಫ್ ಪ್ಯೂರ್ ರೀಸನ್ ಎಂಬ ಗ್ರಂಥದ ಮೊದಲ ಭಾಗವಾದ ಟ್ರಾನ್ಸೆಂಡೆಂಟಲ್ ಈಸ್ತೆಟಿಕ್ ಅನ್ನೂ ಎರಡನೆಯ ಪ್ರಶ್ನೆಗೆ ಉತ್ತರ ಹೇಳಲು ಎರಡನೆಯ ಭಾಗವಾದ ಟ್ರಾನ್ಸೆಂಡೆಂಟಲ್ ಅನಲಿಟಿಕ್‍ಅನ್ನೂ ಮೀಸಲಾಗಿ ಇಟ್ಟಿರುತ್ತಾನೆ.

ಇಂದ್ರಿಯ ಪ್ರತ್ಯಕ್ಷದ ಅಂಶಗಳನ್ನು ವಿಧಾಯಕ ಮಾಡುವ ಬಗೆಗಳು ಎರಡು : ದೇಶ ಮತ್ತು ಕಾಲ. ಯಾವುದೊಂದನ್ನು ತಿಳಿಯಬೇಕಾದರೂ ಅದು ಇಲ್ಲಿದೆ, ಈ ಕಾಲದಲ್ಲಿದೆ ಎಂದು ನಿರ್ದೇಶಿಸಿದ ಹೊರತು ಯಾವ ಇಂದ್ರಿಯ ವಿಷಯಗಳನ್ನೂ ತಿಳಿಯಲಾಗುವುದಿಲ್ಲ. ಕಾಲದೇಶಗಳು ಇಂದ್ರಿಯದ ಮೂಲಕ ಕಂಡ ವಿಷಯಗಳಲ್ಲ; ಅವು ಇಂದ್ರಿಯ ವಿಷಯಗಳನ್ನು ನಿರ್ಧಾರಕವಾಗಿ ಮಾಡುವ ಬಗೆಗಳು. ಅವು ಮನಸ್ಸಿಗೆ ಆಂತರಿಕವಾದುವು. ಆಂತರಿಕವಾದುವು ಎಂದರೆ ವಿಷಯಗಳನ್ನು ತಿಳಿಯುವುದಕ್ಕೆ ಮುಂಚೆಯೇ ಮನಸ್ಸಿನಲ್ಲಿರುವುವೆಂದು ಭಾವಿಸಬಾರದು. ಎಲ್ಲ ಬಗೆಯ ಜ್ಞಾನವೂ ಅನುಭವದಿಂದ ಪ್ರಾರಂಭವಾಗುತ್ತದೆಯಾದರೂ ಅದು ಅನುಭವದಿಂದಲೇ ಹುಟ್ಟಿಬರುವುದಿಲ್ಲ. ಅವು ವಿಷಯಗಳ ತಿಳಿವಿಗೆ ತಳಹದಿಯಾಗಿ ಅವುಗಳೊಡನೆಯೇ ಚೇತನಗೊಳ್ಳುತ್ತವೆ. ಅವುಗಳನ್ನು ಬಿಟ್ಟು ವಿಷಯಗಳನ್ನು ನಾವು ಆಲೋಚಿಸಲಾಗುವುದಿಲ್ಲ. ಆದ್ದರಿಂದ ಅವು ತಿಳಿವಿಗೆ ಅಗತ್ಯವಾದುವು. ಈ ಜ್ಞಾನ ಅವಶ್ಯವಾದ ತಿಳಿವು, ನಿಸ್ಸಂದೇಹಕರವಾದ ತಿಳಿವು. ಹೀಗೆ ಗಣಿತಶಾಸ್ತ್ರಜ್ಞಾನ ನಿಶ್ಚಿತವಾದ ಅಗತ್ಯಜ್ಞಾನವೆಂದು ಸ್ಥಾಪಿಸಿದ.

ಎರಡನೆಯ ಭಾಗವಾದ ಅನಲಿಟಿಕ್‍ನಲ್ಲಿ ಚಿಂತನೆಯ ಬಗೆಗಳೂ ಅದೇ ರೀತಿಯಾಗಿ ಅಗತ್ಯಭಾವನೆಗಳೇ ಎಂಬ ಪ್ರಶ್ನೆಗೆ ಉತ್ತರ ಹೇಳಲು ಪ್ರಯತ್ನಿಸಿದ್ದಾನೆ. ಕಾಲದೇಶಗಳು ಇಂದ್ರಿಯ ವಿಷಯಗಳನ್ನು ಇಂದ್ರಿಯ ಪ್ರತ್ಯಕ್ಷ ಜ್ಞಾನವಾಗಿ ವ್ಯವಸ್ಥೆಗೊಳಿಸುತ್ತವೆ. ಚಿಂತನೆಯ ಬಗೆಗಳು ವ್ಯವಸ್ಥಿತವಾದ ಪ್ರತ್ಯಕ್ಷ ಜ್ಞಾನ ವಿಷಯವನ್ನು ವ್ಯವಸ್ಥೆಗೊಳಿಸುತ್ತವೆ. ಹೀಗೆ ಹೇಳಿದಾಗ ಇಂದ್ರಿಯ ಭಾವನೆಗಳು ಚಿಂತನೆಯ ಭಾವನೆಗಳಿಗಿಂತ ಮುಂಚೆ ಬರುತ್ತವೆಯೆಂದು ತಿಳಿಯಕೂಡದು. ತಳಹದಿಯಾದವು ಎಂದು ಅರ್ಥಮಾಡಿಕೊಳ್ಳಬೇಕು. ಇವು ಒಂದನ್ನೊಂದು ಬಿಟ್ಟು ಇರುವುದಿಲ್ಲ. ಪ್ರತ್ಯಕ್ಷ ಅನುಭವಗಳು ತಾನೇತಾನಾಗಿ ನೆರವಿಲ್ಲದಿದ್ದರೆ ಕುರುಡಾಗಿರುತ್ತವೆ. ಹಾಗೆಯೇ ಚಿಂತನೆ ಪ್ರತ್ಯಕ್ಷದ ನೆರವಿಲ್ಲದಿದ್ದರೆ ನಿರ್ವಿಶೇಷವಾದ ತಿರುಳಿಲ್ಲದ ಜಳ್ಳುಜ್ಞಾನವಾಗುತ್ತದೆ. ಪ್ರತ್ಯಕ್ಷ ಮತ್ತು ಚಿಂತನಗಳು ಎಡೆಬಿಡದೆ ಸೇರಿದಾಗಲೇ ಅಗತ್ಯವೂ ವ್ಯವಸ್ಥಿತವೂ ಆದ ಪ್ರತಿಜ್ಞೆಗಳು ಹುಟ್ಟುವುವು. ಭೌತವಿಜ್ಞಾನ ಅಂಥ ಅಗತ್ಯವೂ ವ್ಯವಸ್ಥಿತವೂ ಆದ ಪ್ರತಿಜ್ಞೆಗಳಿಂದ ಕೂಡಿದ್ದು. ಭೌತವಿಜ್ಞಾನದ ಪ್ರತಿಜ್ಞೆಗಳು ಸಾಧ್ಯವಾಗಿರುವುದು ಪ್ರತ್ಯಕ್ಷ ಬಗೆಗಳ ಮತ್ತು ಚಿಂತನ ಬಗೆಗಳ ಮಿಲನದಿಂದ ಮಾತ್ರವೇ.

ಈ ಪ್ರತಿಜ್ಞೆಗಳನ್ನೂ ಅವುಗಳಿಗೆ ಸಮಾನಾಂತರವಾದ ಚಿಂತನೆಯ ಬಗೆಗಳನ್ನೂ ಈ ರೀತಿಯಾಗಿ ವಿಂಗಡಿಸಲಾಗಿದೆ. ಪ್ರತಿಜ್ಞೆಗಳು ಚಿಂತನೆಯ ಬಗೆಗಳು 1

ಪರಿಮಾಣ 1

ಪರಿಣಾಮ


i ಸಾಮಾನ್ಯ ಪ್ರತಿಜ್ಞೆ

i ಏಕತೆ


ii ಪ್ರತ್ಯೇಕಪ್ರತಿಜ್ಞೆ

ii ಅನೇಕತೆ


iii ವೈಯಕ್ತಿಕ ಪ್ರತಿಜ್ಞೆ

iii ಸಂಪೂರ್ಣತೆ





2

ಗುಣ 2

ಗುಣ


i ಅಸ್ತ್ಯರ್ಥಕ ಪ್ರತಿಜ್ಞೆ

i ಅಸ್ತಿತ್ವ


ii ನಾಸ್ತ್ಯರ್ಥಕ ಪ್ರತಿಜ್ಞೆ

ii ನಾಸ್ತಿತ್ವ


iii ಅನಂತ ಪ್ರತಿಜ್ಞೆ

iii ಪರಿಮಿತಿ


3


ಸಂಬಂಧ

3


ಸಂಬಂಧ


I ನಿರುಪಾಧಿಕ ಪ್ರತಿಜ್ಞೆ

I ಅಂತರ್ಗತ


ii ಔಪಾಧಿಕ ಪ್ರತಿಜ್ಞೆ

ii ಅಧೀನ


iii ಪಕ್ಷಾಂತರ ಪ್ರತಿಜ್ಞೆ

iii ಸಮೂಹ





4

ರೀತಿ 4

ರೀತಿ


I ಸಂಭಾವನಾ ಪ್ರತಿಜ್ಞೆ

I ಸಾಧ್ಯತೆ


ii ಸ್ಥಿರೀಕರಣ ಪ್ರತಿಜ್ಞೆ

ii ವಾಸ್ತವಿಕತೆ


iii ಅಗತ್ಯ ಪ್ರತಿಜ್ಞೆ

iii ಅಗತ್ಯತೆ


ಚಿಂತನೆಯ ಬಗೆಗಳು ಅನುಗಮನತರ್ಕದಿಂದ ಪಡೆದುವಲ್ಲ. ನಿಗಮನದಿಂದಲೂ ಪಡೆದುವಲ್ಲ. ಅವು ಅನುಭವಕ್ಕೆ ಆಧಾರಭಾವನೆಗಳು. ಅವುಗಳಿಲ್ಲದೆ ಅನುಗಮನವೂ ಇಲ್ಲ ನಿಗಮನವೂ ಇಲ್ಲ. ನಮ್ಮ ಚೇತನದ ರಚನೆಯೇ ಆ ಬಗೆಯಾದದ್ದು. ಯಾವುದೊಂದು ಅನುಭವ ಸಾಧ್ಯವಾಗಬೇಕಾದರೂ ಅವುಗಳ ತಳಹದಿಯಾಗಿ ಅವು ಅಗತ್ಯವಾಗಿ ಇದ್ದೇ ಇರಬೇಕು. ಹೀಗಿರಬೇಕು ಎಂದುನಮ್ಮ ಬುದ್ಧಿ ಒತ್ತಾಯಪಡಿಸುತ್ತದೆ. ವಿಧಾಯಕ ಮಾಡುತ್ತದೆ.

ಇಂದ್ರಿಯಾನುಭವದ ಹೊದಿಕೆಗೆ ಬುದ್ಧಿಯ ಹೊಂದಿಕೆ ಆಧಾರ. ಬುದ್ಧಿಯ ಬಗೆಗಳ ಹೊಂದಿಕೆಗೆ ನಮ್ಮ ಅಂತರಂಗಪ್ರಜ್ಞೆಯ ಹೊಂದಿಕೆ ಆಧಾರ. ಇದು ಎಲ್ಲ ಅನುಭವಗಳ ಹಿಂಬದಿಯಲ್ಲಿ ಸೂತ್ರಧಾರನಂತೆ ಇದ್ದು ಎಲ್ಲವೂ ಹೊಂದಿಕೆಯಾಗುವಂತೆ ನಡೆಸುವುದೇ ಅದರ ಪ್ರವೃತ್ತಿ. ಯಾವುದೊಂದು ಅನುಭವ ಹೊಂದಿಕೆಯಾಗಬೇಕಾದರೂ ಅಂತರಂಗ ಚೇತನದ ಆಜ್ಞೆಯನ್ನು ಅನುಸರಿಸಿಯೇ ತೀರಬೇಕು. ನಾನು ಏನನ್ನು ಯೋಚಿಸುತ್ತೇನೆಯೋ ಅದೆಲ್ಲವೂ ನನ್ನ ಅಂತರಂಗದ ಭಾವಗಳನ್ನು ಬಿಟ್ಟು ಇರಲಾರವು. ಇದು ಮಾನವ ಚೇತನದ ಸಹಜವರ್ತನೆ. ಇದಕ್ಕೆ ಒಳಪಟ್ಟು ಮಾತ್ರ ವಿಷಯವನ್ನು ನಾವು ತಿಳಿಯಬಲ್ಲೆವು. ಅದೇ ನಮಗೆ ಪ್ರಕೃತವಾದದ್ದು.

ನಮ್ಮ ಬುದ್ಧಿಯ ಬಗೆಗಳು ಬಾಹ್ಯಪ್ರಪಂಚದ ವಿಷಯಗಳಿಗೆ ಮಾತ್ರ ಅನ್ವಯವಾಗುವಂಥವು. ಉಳಿದ ವಿಷಯಗಳಿಗೆ ಅವು ಅನ್ವಯವಾಗುವುದಿಲ್ಲ. ಉಳಿದವಕ್ಕೂ ಅನ್ವಯವಾಗಬೇಕೆಂದು ಹೇಳುವುದಕ್ಕೆ ಅದಕ್ಕೆ ಯೋಗ್ಯತೆಯೂ ಇಲ್ಲ. ಹಾಗೆ ತನ್ನ ಮಿತಿಯನ್ನು ಮೀರಿ ವರ್ತಿಸಿದರೆ, ಉಳಿದವು ಅದಕ್ಕೆ ವಿಧೇಯವಾಗಿರುವುದೂ ಇಲ್ಲ.

ಇದನ್ನು ಸ್ಪಷ್ಟಪಡಿಸುವುದೇ ಅವನ ಮೊದಲ ಗ್ರಂಥದ ಮೂರನೆಯ ಭಾಗವಾದ ಟ್ರಾನ್ಸೆಂಡೆಂಟಲ್ ಡಯಲೆಕ್ಟಿಕ್‍ನ ಉದ್ದೇಶ. ಕಾರ್ಯಕಾರಣ ಭಾವ ಇಂದ್ರಿಯಗೋಚರವಾದ ಭೌತವಸ್ತುಗಳಿಗೆ ಮಾತ್ರ ಪರಿಮಿತವಾದದ್ದು. ಆ ಭಾವನೆಯನ್ನು ಇಂದ್ರಿಯಾತೀತವಾದ ಆತ್ಮಕ್ಕೂ ಅನಂತವಾದ ಇಡೀ ವಿಶ್ವಕ್ಕೂ ದೈವಕ್ಕೂ ಅನ್ವಯಿಸಿದರೆ ಪರಸ್ಪರ ವಿರುದ್ಧ ಭಾವನೆಗಳ ಗೊಂದಲಗಳು ಉದ್ಭವಿಸುತ್ತವೆ.

ನಿರ್ವಿಚಾರಮ ತತ್ತ್ವ ಇಂಥ ಪರಸ್ಪರ ವಿರುದ್ಧ ಭಾವನೆಗಳ ಗೊಂದಲ. ಇದನ್ನು ಮೂರನೆಯ ಭಾಗದಲ್ಲಿ ಸ್ಪಷ್ಟಪಡಿಸಲಾಗಿದೆ. ಈ ನಿರ್ವಿಚಾರಮತ ತತ್ತ್ವವನ್ನು ಪ್ರಚಾರ ಮಾಡಿದವರು ಬುದ್ಧ್ಯಾರೂಢವಾದಿಗಳು. ಕೇವಲ ತರ್ಕದ ಆಧಾರದ ಮೇಲೆ ಆತ್ಮ, ಅನಂತವಾದ ವಿಶ್ವ, ಸರ್ವಜ್ಞನಾದ ಮತ್ತು ಸರ್ವಸಮರ್ಥನಾದ ಈಶ್ವರ ಈ ಭಾವನೆಗಳನ್ನು ಸ್ಥಾಪಿಸಲು ಪ್ರಯತ್ನಪಟ್ಟರು. ಭೌತಶಾಸ್ತ್ರದ ವಿಷಯಗಳಿಗೆ ಕಾರಣಗಳನ್ನು ತಿಳಿಸಿ ಸ್ಥಾಪಿಸಿದಂತೆ ಈ ವಿಷಯಗಳಿಗೂ ಯುಕ್ತ ಕಾರಣಗಳನ್ನು ಕೊಡಲು ಯತ್ನಿಸಿದರು. ಭೌತ ವಿಷಯಗಳಿಗೆ ಪರಿಮಿತವಾದ ಭಾವನೆಗಳನ್ನು ಆತ್ಮ, ಈಶ್ವರ ಮುಂತಾದ ಅಭೌತಿಕ ವಿಷಯಗಳಿಗೆ ತದ್ವತ್ತಾಗಿ ಅನ್ವಯಿಸಿದರು. ಭೌತ ವಿಜ್ಞಾನದ ಪರಿಮಿತಿ ವಸ್ತುಗಳಿಗೆ ಇರುವ ಸಂಬಂಧವನ್ನು ಮಾತ್ರ ತಿಳಿಸುತ್ತದೆ. ಅಪರಿಮಿತ ವಸ್ತುಗಳಿಗೂ ವಸ್ತುಗಳಿಗೂ ಇರುವ ಸಂಬಂಧವನ್ನು ಅದು ತಿಳಿಯಲು ಪ್ರಯತ್ನಿಸುವುದಿಲ್ಲ. ಅದು ತಿಳಿಸುವುದು ನಿಮಿತ್ತಕಾರಣಗಳನ್ನು ಮಾತ್ರ. ಆದಿ ಮತ್ತು ಅಂತಿಮ ಕಾರಣಗಳು ಅದರ ವಿಚಾರಕ್ಕೆ ಮೀರಿದ ಭಾವನೆಗಳು. ಅವುಗಳನ್ನು ನಿಮಿತ್ತ ಕಾರಣಸರಣಿಗೆ ಒಳಪಡಿಸಿದರೆ ನಮ್ಮ ಯೋಚನೆ ಅಸ್ತವ್ಯಸ್ತವಾಗುತ್ತದೆ. ಒಂದಕ್ಕೆ ಇನ್ನೊಂದು ಕಾರಣ, ಆ ಇನ್ನೊಂದಕ್ಕೆ ಮತ್ತೊಂದು ಕಾರಣ. ಮತ್ತೊಂದಕ್ಕೆ ಮಗದೊಂದು ಕಾರಣ. ಹೀಗೆ ಕಾರಣಗಳಿಗೆ ಕೊನೆಯಿಲ್ಲ. ಇದರಿಂದ ಅವ್ಯವಸ್ಥೆಯ ಪರಿಸ್ಥಿತಿ ಉಂಟಾಗುತ್ತದೆ. ಅನಂತವಾದದ್ದು, ಅಂತ್ಯವಿರುವುದಕ್ಕೆ ಕಾರಣವೆಂದು ಹೇಳುವುದು ಒಂದು ವಿರೋಧಾಭಾಸ ಭಾವ. ಅಂತ್ಯವಿರುವ ಅನಂತ್ಯದಿಂದ ಹುಟ್ಟುವುದು ಹೇಗೆ? ಹುಟ್ಟಿಲ್ಲದ್ದರಿಂದ ಸಾವಿಲ್ಲದ್ದರಿಂದ ಹುಟ್ಟಿರುವುದು ಸಾವಿರುವುದು ಉದ್ಭವಿಸುವುದೆಂತು? ಹೀಗೆ ಕಾಲದಲ್ಲಿ ವಿರುದ್ಧ ಭಾವನೆಗಳು ನಮ್ಮ ಮುಂದೆ ಬಂದು ನಿಲ್ಲುತ್ತವೆ. 1. ವಿಶ್ವಕ್ಕೆ ಮೊದಲಿದೆ, ಕೊನೆ ಇದೆ, ಅದು ಕೊನೆ ಇಲ್ಲದ್ದು, ಮೊದಲಿಲ್ಲದ್ದು. ಅದು ಕಾಲದೇಶಗಳುಳ್ಳದ್ದು. ಅದು ಕಾಲದೇಶಗಳಲ್ಲಿಲ್ಲದ್ದು. 2. ಭೌತ ವಸ್ತುಗಳು ಅನಂತವಾಗಿ ಒಡೆಯಬಹುದಾದವು. ಒಡೆದು ಕೊನೆಯಲ್ಲಿ ಅಣುಗಳನ್ನು ಮುಟ್ಟಿದಾಗ ಆ ಅಣುಗಳು ಅಭೇದ್ಯ ವಸ್ತುಗಳಾಗಿ ತೋರುತ್ತವೆ. ವಿಶ್ವದಲ್ಲಿ ಸ್ವಾತಂತ್ರ್ಯವಿದೆ. ವಿಶ್ವದಲ್ಲಿರುವುದೆಲ್ಲ ಕಾರ್ಯಕಾರಣ ದೈವ ಅದರ ಹೊರಗಡೆಯೂ ಇದೆ. ಅದರೊಳಗಿದ್ದರೆ ಅದರ ಪರಿಮಿತಿಗೆ ಒಳಪಟ್ಟು ಅದರ ಅನಂತತೆಗೆ ಚ್ಯುತಿಯುಂಟಾಗುತ್ತದೆ. ಹೊರಗಿದ್ದು ಅನಂತವಾದರೆ ಅದರಿಂದ ವಿಶ್ವ ಹುಟ್ಟಲು ಅವಕಾಶವೇ ಇಲ್ಲ. ಒಳಗೂ ಇದೆ ಹೊರಗೂ ಇದೆ, ಆದರೂ ಅನಂತವಾಗಿದೆ ಎಂದು ಹೇಳುವುದು ಪರಸ್ಪರ ವಿರುದ್ಧ. ಇವು ಪರಸ್ಪರ ವಿರುದ್ಧ ಪಕ್ಷಗಳು. ಆತ್ಮ ಸ್ವತಂತ್ರವಾದದ್ದು, ಅವಿಭಾಜ್ಯವಾದದ್ದು, ಅಮರವಾದದ್ದು- ಎಂಬುದು ಬುದ್ಧ್ಯಾರೂಢವಾದಿಗಳು ಎತ್ತಿ ಹಿಡಿದ ಪಕ್ಷ. ಆತ್ಮ ಅಸ್ವತಂತ್ರ, ವಿಭಾಜ್ಯ, ಮತ್ತು ವಿನಾಶವುಳ್ಳದ್ದು-ಎಂಬುದು ಅನುಭವರೂಢವಾದಿಗಳು ಎತ್ತಿ ಹಿಡಿದ ಪಕ್ಷ. ಒಂದು ಮತಧರ್ಮಕ್ಕೆ ಅಗತ್ಯವಾದ ಪಕ್ಷ. ಇನ್ನೊಂದು ಭೌತ ವ್ಯಾಪಾರಗಳಿಗೆ ಅಗತ್ಯವಾದ ಪಕ್ಷ. ಒಂದು ನಮ್ಮ ಮತ ಭಾವಗಳಿಗೆ ಸಂಬಂಧಿಸಿದ್ದು, ಭಕ್ತಿಗೆ ಸಂಬಂಧಿಸಿದ್ದು. ಇನ್ನೊಂದು ಲೌಕಿಕ ವಿಷಯಕ್ಕೆ, ವ್ಯವಹಾರಕ್ಕೆ, ಅಗತ್ಯವಾದ ಬುದ್ಧಿಯ ಭಾವನೆಗಳಿಗೆ ಸಂಬಂಧಿಸಿದ್ದು. ಇವೆರಡನ್ನೂ ಬೇರೆ ಬೇರೆಯಾಗಿಡದೆ ಕಲಸಿದರೆ ವಾದದಲ್ಲಿ ಕ್ಲೇಶಗಳು ಕಾಣಿಸಿಕೊಳ್ಳುವುದು ಸಹಜ. ಎರಡೂ ವಿಚಾರ ಚೇತನಕ್ಕೆ ಒಳಪಟ್ಟುವೇ ಆದರೂ ಆ ವಿಚಾರ ವಿಧಾನಗಳನ್ನೂ ಅದರ ಆಧಾರಕಲ್ಪನೆಗಳನ್ನೂ ನಾವು ಸವಿಚಾರವಾಗಿ ವಿಧಿಸಿಕೊಳ್ಳಬೇಕು. ಮತ ಮತ್ತು ಧರ್ಮ ವಿಚಾರಕ್ಕೆ ಆಧಾರಕಲ್ಪನೆಗಳು ಯಾವುವು, ಅವುಗಳ ನಿಯಮಗಳು ಯಾವುವು ಎಂಬುದನ್ನು ಕ್ಯಾಂಟ್ ವಿಚಾರ ಮಾಡಲು ಕ್ರಿಟೀಕ್ ಆಫ್ ಪ್ರಾಕ್ಟಿಕಲ್ ರೀಸನ್ ಎಂಬ ತನ್ನ ಎರಡನೆಯ ಗ್ರಂಥವನ್ನು ಬರೆದ.

ಬುದ್ಧಿಗೆ (ಇಂಟಲೆಕ್ಟ್) ಮೀರಿದ, ಬುದ್ಧಿಯಿಂದ ಏರ್ಪಡಿಸಲಾಗದ ಭಾವನೆಗಳು ಮಾನವನ ಜೀವನಕ್ಕೆ ಅಗತ್ಯವಾದುವು. ಇವುಗಳನ್ನು ನಾವು ಭೌತವಸ್ತುಗಳಂತೆ ಕಾರ್ಯಕಾರಣ ಸಂಬಂಧದ ಮೂಲಕ ತಿಳಿಯಲಾಗದಿದ್ದರೂ ಅವುಗಳಿಗೆ ನೈತಿಕ ಚೇತನದ ಬೆಂಬಲವಿದೆ. ನೀತಿ ಚೇತನಕ್ಕೆ ತನಗೇ ವಿಶಿಷ್ಟವಾದ ನಿಯಮವನ್ನು ವಿಧಾಯಕ ಮಾಡಿಕೊಳ್ಳುವ ಶಕ್ತಿ ಇದೆ. ಧರ್ಮಕರ್ಮಾಚರಣೆಗಳೂ ವಿಧಿವತ್ತಾದುವು. ಆ ವಿಧಿ ಯಾವುದು ಎಂಬುದನ್ನು ನಮ್ಮ ವಿಚಾರ ಚೇತನ ತಿಳಿಯಬೇಕೆಂದು ಒತ್ತಾಯಪಡಿಸುತ್ತದೆ. ಆ ವಿಧಿ, ಆ ನಿಯಮ ಭೌತ ನಿಯಮಗಳಷ್ಟೇ ಅಗತ್ಯ. ಆ ನಿಯಮದ ಸ್ವರೂಪ ಬೇರೆಯಾದದ್ದು. ಅದು ಕರ್ತವ್ಯ ನಿಯಮ. ವಸ್ತುವಾಗಿ ತಿಳಿಯಬೇಕಾದರೆ ಹೀಗಿರಬೇಕು ಎಂದು ಬುದ್ಧಿ ವಿಧಾಯಕ ಮಾಡುವಂತೆಯೇ ಕರ್ತವ್ಯವಾಗಬೇಕಾದರೆ ಅದು ಹೀಗಿರಲೇಬೇಕು ಎಂದು ಧರ್ಮ ಚೇತನ ವಿಧಾಯಕ ಮಾಡುತ್ತದೆ.

ಭೌತ ನಿಯಮ ಹೊರವಸ್ತುವಿಗೆ ವಿಧೇಯವಾದದ್ದು, ಧಾರ್ಮಿಕ ನಿಯಮವಾದರೋ ಹೊರವಸ್ತುವಿಗೆ ವಿಧೇಯವಲ್ಲ. ಅದು ನಮ್ಮ ಆತ್ಮದೊಳಗಿನಿಂದಲೇ ಬಂದದ್ದು. ಆತ್ಮವೇ ವಿಧಾಯಕ ಮಾಡಿಕೊಂಡದ್ದು. ಭೌತನಿಯಮಕ್ಕೆ ಇಂದ್ರಿಯಾರ್ಥಗಳ ಸಾಕ್ಷ್ಯ ಅಗತ್ಯವಾಗಿರುವಂತೆ ಧಾರ್ಮಿಕ ನಿಯಮಕ್ಕೆ ಹೊರಸಾಕ್ಷ್ಯ ಅನಗತ್ಯ. ಅದಕ್ಕೆ ಆತ್ಮವೇ ಸಾಕ್ಷಿ. ಆತ್ಮವೇ ಬೆಳಕು. ಆ ನಿಯಮವನ್ನು ಆತ್ಮವೇ ನಿಯೋಜಿಸಿದ್ದು. ವಿಷಯಾರ್ಜನೆ, ವಿಷಯಸುಖಕ್ಕೆ ಅದು ಅಧೀನವಾದುದಲ್ಲ. ಅದಕ್ಕಾಗಿಯೇ ಅದನ್ನು ಬಯಸುತ್ತೇವೆ. ಸುಳ್ಳು ಹೇಳಕೂಡದು, ನಿಜವನ್ನು ನುಡಿಯಲೇಬೇಕು ಎಂಬ ಕರ್ತವ್ಯನಿಷ್ಠೆ ಇರುವವ ಐಶ್ವರ್ಯವನ್ನು ಲೆಕ್ಕಿಸುವುದಿಲ್ಲ, ವಿಷಯ ಸುಖವನ್ನು ಲೆಕ್ಕಿಸುವುದಿಲ್ಲ. ಲಕ್ಷಗಟ್ಟಲೆ ಆಸ್ತಿ ಹೋಗುತ್ತದೆ, ಆದ್ದರಿಂದ ಸುಳ್ಳು ಹೇಳಿ ಉಳಿಸಿಕೊಳ್ಳಬೇಕು -ಎಂಬ ಲೌಕಿಕ ನಡೆವಳಿಕೆಯನ್ನು ಅದು ಧಿಕ್ಕರಿಸುತ್ತದೆ. ನಿಜ ಹೇಳಿದಾಗ ಕ್ರಿಸ್ತನಿಗೆ ಚಾವಟಿ ಏಟು ಬಿತ್ತು. ಜನ ಅವನ ಮುಖದ ಮೇಲೆ ಉಗುಳಿದರು. ಕಾಲಿನಿಂದ ಒದ್ದರು, ಶಿಲುಬೆಗೆ ಏರಿಸಿ, ಕೈಕಾಲಿಗೆ ಮೊಳೆ ಹೊಡೆದರು. ಪ್ರಾಣ ಹೋಯಿತು. ಅವನು ನಿಜವನ್ನು ಬಿಡಲಿಲ್ಲ. ಇಂಥ ದೃಷ್ಟಾಂತಗಳು ಚರಿತ್ರೆಯುದ್ದಕ್ಕೂ ಇವೆ. ಎಲ್ಲ ಕಾಲಗಳಲ್ಲೂ ಎಲೆಮರೆಯಕಾಯಿಗಳಂತೆ ಎಷ್ಟೋ ಜನ ಬಡತನದಲ್ಲಿದ್ದೂ ಸತ್ಯವಂತರಾಗಿರುತ್ತಾರೆ. ಸಂಖ್ಯಾಬಲ ಈ ನಿಯಮಕ್ಕೆ ಆಧಾರವಲ್ಲ. ಲೋಕದಲ್ಲೆಲ್ಲ ಸತ್ಯ ಹೇಳುವವ ಒಬ್ಬನೇ ಇರಲಿ, ಸಾವಿರ ಜನರಿರಲಿ, ಆ ವಿಧಿಗೆ ಸಂಖ್ಯೆ ಪ್ರಮಾಣವಲ್ಲ. ಅದು ಒಬ್ಬನಲ್ಲಿದ್ದರೂ ಅದು ಎಲ್ಲರಲ್ಲೂ ಇರಬೇಕಾದದ್ದು ಎಂಬ ಕರ್ತವ್ಯ ನಿಯಮವನ್ನು ಮಾತ್ರ ಯಾರೂ ಇಲ್ಲವೆಂದು ಹೇಳುವುದಕ್ಕಾಗುವುದಿಲ್ಲ. ನೀನು ಇರಬೇಕೆಂದಂತೆಯೇ ಇತರರೂ ಇರಬೇಕೆಂದೂ ಇತರರು ನಿನ್ನ ವಿಚಾರದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ಬಯಸುತ್ತಾರೆಯೋ ಅವರಂತೆಯೇ ನೀನೂ ಇತರರ ವಿಚಾರವಾಗಿ ಭಾವಿಸಿ ನಡೆದುಕೊಳ್ಳಬೇಕು-ಎಂದೂ ಸಾರದ ಮತ ಯಾವುದಾದರೂ ಇದೆಯೇ? ಈ ಭಾವನೆ ನಮ್ಮ ಅಂತರಂಗದಲ್ಲಿ ಏಕೆ ಬೇರೂರಿದೆ? ನನ್ನ ಆತ್ಮ ನನಗೆ ಪವಿತ್ರವಾದದ್ದು. ನನ್ನ ಆ ಆತ್ಮದಲ್ಲಿ ನನಗೆ ಗೌರವವಿದೆ ಎಂಬ ಭಾವನೆ, ಕರ್ತವ್ಯಕ್ಕೆ ತಳಹದಿಯಾದ ಭಾವನೆ. ನಿನ್ನಲ್ಲಿರುವ ಆತ್ಮ ಬೇರೊಬ್ಬನಿಗೆ ಅಧೀನವಲ್ಲ. ಅದು ಇನ್ನೊಬ್ಬನಿಗೆ ಉಪಯುಕ್ತವಾದ ಸಾಧನವಲ್ಲ. ನೀನು ನಿನ್ನನ್ನು ಹೇಗೆ ಗೌರವಿಸಿಕೊಳ್ಳುತ್ತೀಯೋ ಅದರಂತೆ ಪ್ರತಿಯೊಬ್ಬನೂ ತನ್ನ ಆತ್ಮವನ್ನು ಗೌರವಿಸಿಕೊಳ್ಳುವ ಹಕ್ಕಿದೆ.

ಕರ್ತವ್ಯಕ್ಕೆ ಫಲ ಮೂಲವಲ್ಲದಿದ್ದರೂ ಕರ್ತವ್ಯಕ್ಕೆ ಫಲವಿದೆ. ಮೂಲಫಲ ಆತ್ಮಲಾಭ, ಆತ್ಮತೃಪ್ತಿ, ಆತ್ಮ ಅಜೇಯವೆಂಬ ನೆಚ್ಚಿಕೆ. ನನ್ನ ದೇಹಬಿದ್ದು ಹೋಗಬಹುದು, ಆದರೆ ನಾನು ಅಮರವಾದ ಆ ಕರ್ತವ್ಯ ಚೇತನದಲ್ಲಿ ಸೇರಿಕೊಳ್ಳುತ್ತೇನೆ ಎಂಬ ದೃಢನಂಬಿಕೆ ಇದೆ. ಈ ಚೇತನ ಅಜೇಯ, ಅಮರ ಮತ್ತು ಅನಂತ. ಇಂಥ ಚೇತನಗಳ ಸಮೂಹವೇ ಸ್ವರ್ಗರಾಜ್ಯ. ಕ್ಯಾಂಟ್ ಅಂದಿನ ನಿರ್ವಿಚಾರ ಮತಭಾವನೆಗಳನ್ನು ಕಟುವಾಗಿ ಟೀಕಿಸಿರುತ್ತಾನೆ. ಆತ ವಿಚಾರ ಸಮ್ಮತವಾದ ಮತ ಯಾವುದು ಎಂಬುದನ್ನು ಕುರಿತು ತನ್ನ ಜೀವನದ ಅಂತ್ಯ ಕಾಲದಲ್ಲಿ ವಿಜ್ಞಾನಕ್ಕೆ ಲೇಖನವನ್ನು ಪ್ರಕಟಿಸಿದ. ಅದರ ಮುಖ್ಯ ಅಂಶಗಳು ಇವು : 1. ಬೈಬಲ್ಲು ವಿಜ್ಞಾನಕ್ಕೆ ವಿರುದ್ಧವಾದ ಪವಾಡಗಳ ಆಧಾರದ ಮೇಲೆ ಮತವನ್ನು ನಿಲ್ಲಿಸಿದರೆ ಮರಳಿನ ಮೇಲೆ ಮನೆ ಕಟ್ಟಿದಂತೆ ಆಗುತ್ತದೆ. 2. ಕರ್ತವ್ಯ ಭಾವನೆಗೆ ವಿರುದ್ಧವಾಗಿ ಬೈಬಲ್ ಏನನ್ನು ಹೇಳಿದರೂ ಅದು ಪ್ರಮಾಣವಾಗಲಾರದು. ಅದಕ್ಕೆ ವ್ಯತಿರಿಕ್ತವಾದ ಪೂಜೆಗಳಿಂದ, ಆಚರಣೆಗಳಿಂದ, ಪ್ರಾರ್ಥನೆಗಳಿಂದ ಮೋಕ್ಷ ಸಿದ್ಧಿಸುವುದಿಲ್ಲ. 3. ಮತ ಚೇತನದ ಸಿದ್ಧಿಗೆ ಚರ್ಚಿನ ಅಧಿಕಾರದ ಮಧ್ಯಸ್ಥಿಕೆ ಅನಗತ್ಯ. ಒಬ್ಬೊಬ್ಬನ ಆತ್ಮಸಾಕ್ಷಿಯೇ ಅಂತಿಮಪ್ರಮಾಣ. ಆದ್ದರಿಂದ ಮತ ವಿಮರ್ಶೆಯ ಮಿತಿಗೆ ಒಳಪಟ್ಟಾಗಲೇ ಸನ್ಮತವಾಗುವುದು. ವಿಚಾರಪೂರ್ಣವಾದ ಈಶ್ವರ ಭಾವನೆ ಎಂಥಾದ್ದಾಗಿರಬೇಕೆಂಬುದನ್ನು ಕ್ಯಾಂಟ್ ತಿಳಿಸಲಿಲ್ಲ.

ಮೊದಲನೆಯ ಎರಡು ಕ್ರಿಟೀಕುಗಳಲ್ಲಿ ಏರ್ಪಡಿಸಿದ ಭಾವನೆಗಳನ್ನು ಕ್ರಿಟೀಕ್ ಆಫ್ ಜಡ್ಜಮೆಂಟ್ ಎಂಬ ಮೂರನೆಯ ಗ್ರಂಥದಲ್ಲಿ ಸಮನ್ವಯ ಮಾಡಲು ಪ್ರಯತ್ನಿಸಿದ್ದಾನೆ. ಮೊದಲ ಗ್ರಂಥದಲ್ಲಿ ಕೇವಲ ಕಾರ್ಯಕಾರಣಕ್ಕೆ ಒಳಪಟ್ಟಂತೆ ಪ್ರಕೃತಿಯ ನಿಯಮಗಳನ್ನು ವಿವರಿಸಿರುತ್ತಾನೆ. ಮಾನವಜೀವನದ ಉದ್ದೇಶ ಪರಿಪೂರ್ಣವಾಗದಿದ್ದರೂ ಉದ್ದೇಶವೆಂಬುದಿದೆ. ಮಾನವನ ನಡತೆಗೆ ಬೆಲೆ ಇರುವುದು ಅದು ನಿಸ್ವಾರ್ಥವಾಗಿ ಕರ್ತವ್ಯವನ್ನು ಈಡೇರಿಸುವುದರಿಂದಲೇ. ನಾವು ಪ್ರಕೃತಿಯನ್ನು ಸ್ವಾರ್ಥದೃಷ್ಟಿಯಿಂದ ಪರೀಕ್ಷಿಸುವುದರಿಂದ ನಮ್ಮ ಉದ್ದೇಶಕ್ಕೂ ಪ್ರಕೃತಿಯ ಚಲನೆಗಳಿಗೂ ವಿರೋಧ ತೋರುತ್ತದೆ. ವಿರುದ್ಧವಾದಂತೆ ನಮಗೆ ತೋರುತ್ತದೆ. ಆದರೆ ಪ್ರಕೃತಿಯನ್ನು ಕೇವಲ ಒಂದು ಉಪಯೋಗವಸ್ತುವೆಂದು ಭಾವಿಸದೆ, ಅದರ ಒಂದೊಂದು ವಸ್ತುವೂ ತನ್ನದೆ ಆದ ಅನುಪಮ ಸ್ವಭಾವವನ್ನು ಪಡೆದಿರುತ್ತದೆ ಎಂಬ ನಿಸ್ವಾರ್ಥದೃಷ್ಟಿಯಿಂದ ನೋಡಿದಾಗ ಅದು ಸುಂದರವಾಗಿ ಕಾಣುತ್ತದೆ. ಅದರಲ್ಲಿ ಒಂದು ಅನುಪಮವಾದ ಕೂಡಿಕೆ, ಸಾಂಗತ್ಯ ತೋರುತ್ತದೆ. ಸೌಂದರ್ಯದ ಅರಿವಾದಾಗ ಭೌತದೃಷ್ಟಿಗೂ ಧರ್ಮದೃಷ್ಟಿಗೂ ಇದ್ದ ಅಸಾಂಗತ್ಯ ತೇಲಿಹೋಗುತ್ತದೆ. ಅಂದರೆ ಈ ಸೌಂದರ್ಯ ದೃಷ್ಟಿ ಮರಳಿದಾಗ ಪುನಃ ಹಿಂದಿನ ನಮಗೆ ಅಸಾಂಗತ್ಯ ಎದ್ದು ಕಾಣುತ್ತದೆ. ಈ ಮೂರು ದೃಷ್ಟಿಗಳೂ ಸಮನ್ವಯವಾದಾಗ ಬಹುಶಃ ವಿಶ್ವವೆಲ್ಲ ಸಂಗತವಾಗಿ ತೋರಬಹುದು. ಆದರೆ ಕ್ಯಾಂಟ್ ಆ ಮೂರನ್ನೂ ಸಮನ್ವಯಗೊಳಿಸದೆ, ಬೇರೆ ಬೇರೆಯಾಗಿ ಉಳಿಸಿದ. ಅವನ ತರುವಾಯ ಬಂದ ಹೆಗೆಲ್ ಸತ್ಯ, ಧರ್ಮ, ಸೌಂದರ್ಯ ಆ ಮೂರನ್ನೂ ಸಂಗತಗೊಳಿಸಲು ಪ್ರಯತ್ನಪಟ್ಟ. ಕ್ಯಾಂಟನ ತತ್ತ್ವ ಒಂದು ಮಹಾಸಂಗಮ ಕ್ಷೇತ್ರ. ಬುದ್ಧ್ಯಾರೂಢ, ಅನುಭವರೂಢವಾದಗಳು ಅದರೊಳಕ್ಕೆ ಬಂದು ಸೇರಿ ರೂಪಾಂತರ ಹೊಂದಿ ಅದು ಹೊಸ ತತ್ತ್ವಗಳಿಗೆ ಪ್ರಚೋದಕವಾಯಿತು. ಆ ಎರಡೂ ವಾದಗಳೂ ಪೂರ್ಣವಾಗಿ ಸಮನ್ವಯವಾದುವೆಂದು ಹೇಳಲಾಗುವುದಿಲ್ಲ. ಆದರೂ ಅವು ಹಿಂದಿನ ರೂಪದಲ್ಲಿ ಉಳಿಯಲಿಲ್ಲ. ಎರಡಾದ ವಾದಗಳನ್ನು ಕ್ಯಾಂಟ್ ಸಮನ್ವಯ ಮಾಡಲು ಪ್ರಯತ್ನಿಸಿದಾಗ ಆ ಪ್ರಯತ್ನದಿಂದ ತತ್ತ್ವಗಳು ಕಾಣಿಸಿಕೊಂಡು ಆ ನಂತರ ಬಂದ ತಾತ್ತ್ವಿಕರನ್ನು ಬಹು ವಿಧವಾಗಿ ಪ್ರಚೋದನೆಗೊಳಿಸಿದವು. ಭೌತಜ್ಞಾನವನ್ನು ಅವನು ಸ್ಥಾಪಿಸಿದ. ಆದರೆ ಆ ಭೌತಜ್ಞಾನವನ್ನು ತಿಳಿಸುವ ವಿಶ್ವ ತೋರಿಕೆಯ ವಿಶ್ವವೆಂಬ ಒಂದು ಪಕ್ಷ ಅವನ ತತ್ತ್ವದಲ್ಲಿ ಕಾಣಿಸಿಕೊಂಡಿತು. ಅವನ ಈಚಿನ ಅನುಯಾಯಿಯಾದ ಮ್ಯಾಕ್ಸ್ ಮುಲ್ಲರ್ ಅದನ್ನು ಶಂಕರಾಚಾರ್ಯರ ಮಾಯಾವಾದಕ್ಕೆ ಹೋಲಿಸಿದ. ಆದರೆ ಹಲವು ಶಾಸ್ತ್ರಗಳು ತೋರಿಸಿದ ತೋರಿಕೆಯ ವಿಷಯವನ್ನು ಸಮನ್ವಯ ಮಾಡಿದಾಗ ಈ ತೋರಿಕೆಗಳ ಲೋಪ, ಕಡಿಮೆಯಾಗುತ್ತದೆಯೆಂದು ಭಾವಿಸಿ ಆತ ಸಮನ್ವಯತತ್ತ್ವವನ್ನು ಬೆಳೆಸಿದ. ವಿಶ್ವ ಸ್ವರೂಪದಲ್ಲಿ ಹೇಗಿದೆ ಎಂಬುದನ್ನು ಬುದ್ಧಿಯಿಂದ ನಾವು ತಿಳಿಯಲಾರೆವು ಎಂಬ ಕ್ಯಾಂಟ್‍ನ ವಾದವನ್ನು ಹರ್ಬರ್ಟ್ ಸ್ಪೆನ್ಸರ್ ಒಪ್ಪಿಕೊಂಡ. ಸದ್ವಸ್ತುವನ್ನು ಸ್ವಸ್ವರೂಪದಲ್ಲಿ ಹೇಗಿದೆ ಎಂಬುದನ್ನು ಬುದ್ಧಿಯಿಂದ ತಿಳಿಯಲಾಗದು. ಆದರೆ ಅದನ್ನು ಪ್ರತಿಭಾನದಿಂದ ತಿಳಿಯಬಹುದೆಂದು ಬರ್ಗಸನ್ ಪ್ರತಿಭಾನತತ್ತ್ವವನ್ನು ಬೆಳೆಸಿದ. ಬುದ್ಧಿಯಿಂದ ತಿಳಿಯಲಾಗದ ಆತ್ಮವನ್ನು ಚಿತ್ತರೂಪವಾದ ಧರ್ಮಚೇತನದಿಂದ ತಿಳಿಯಬಹುದೆಂದು ಕ್ಯಾಂಟ್ ತನ್ನ ಎರಡನೆಯ ಗ್ರಂಥವಾದ ಕ್ರಿಟೀಕ್ ಆಫ್ ಪ್ರಾಕ್ಟಿಕಲ್ ರೀಸನ್ ಮೂಲಕ ಸ್ಥಾಪಿಸಿದ. ಷೋಪೆನ್‍ಹೌರ್ ಆ ಚಿತ್ತವನ್ನೇ ತನ್ನ ತತ್ತ್ವಕ್ಕೆ ಪ್ರಧಾನ ಆಧಾರವಾಗಿ ಇಟ್ಟುಕೊಂಡು ಚಿತ್ತಪ್ರಧಾನ ವಾದವನ್ನು (ವಾಲಂಟೀರಿಸಂ) ಬೆಳೆಸಿದ. ಸತ್ಯವನ್ನು ಕೇವಲ ಯೋಚನೆಯಿಂದ ನಿರ್ಧರಿಸುವುದಕ್ಕಾಗುವುದಿಲ್ಲ. ಜೀವನದ ವ್ಯವಹಾರದಲ್ಲಿ ಯಾವ ಭಾವನೆ ಸತ್ಪಪರಿಣಾಮಕಾರಿಯಾಗಿರುವುದೋ ಅದೇ ಸತ್ಯ. ಸಫಲದಿಂದ ಸತ್ಯವನ್ನು ನಿರ್ಧರಿಸಬೇಕೆಂಬ ಫಲವಾದವನ್ನು (ಪ್ರಾಗ್ಮ್ಯಾಟಿಸಂ) ವಿಲಿಯಂಜೇಮ್ಸ್, ಜಾನ್ ಡ್ಯೂಯಿ ಮುಂತಾದ ಅಮೆರಿಕದ ತಾತ್ತ್ವಿಕರು ಬೆಳೆಸಿದರು. ಬಹುಶಃ ಇಂದಿನ ಎಲ್ಲ ತತ್ತ್ವಗಳೂ ಯಾವುದಾದರೂ ಒಂದು ರೀತಿಯಲ್ಲಿ ಕ್ಯಾಂಟ್ ಮಂಡಿಸಿದ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಲು ಪ್ರಯತ್ನಿಸಿವೆ. ಹೆಗೆಲ್‍ನ ತತ್ತ್ವವಾದರೂ ಕ್ಯಾಂಟ್‍ನ ತತ್ತ್ವಕ್ಕೆ ನೇರವಾಗಿ ಸಂಬಂಧಿಸಿದುದಾಗಿದೆ.

ಜಾರ್ಜ್ ವಿಲ್‍ಹೆಲ್ಮ್ ಹೆಗೆಲ್ : (1770-1831). ಕ್ಯಾಂಟ್‍ನಂತೆ ಜರ್ಮನಿಯಲ್ಲಿ ಹುಟ್ಟಿದವ. ಕ್ಯಾಂಟ್ ಕೋನಿಗ್ಸ್‍ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ಇಪ್ಪತ್ತೇಳು ವರ್ಷಗಳ ಕಾಲ ತತ್ತ್ವಶಾಸ್ತ್ರದ ಅಧ್ಯಾಪಕನಾಗಿದ್ದರೆ ಹೆಗೆಲ್ ಜರ್ಮನಿಯ ಹೈಡಲ್‍ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ಹದಿನೈದು ವರ್ಷಗಳ ಕಾಲ ತತ್ತ್ವಶಾಸ್ತ್ರದ ಅಧ್ಯಾಪಕನಾಗಿದ್ದ. ಇವನ ತತ್ತ್ವವನ್ನು ಪ್ರಚೋದನೆಗೊಳಿಸಿದ್ದು ಕ್ಯಾಂಟ್‍ನ ಮೊದಲನೆಯ ಗ್ರಂಥದ ಮೂರನೆಯ ಭಾಗವಾದ ಟ್ರಾನ್ಸೆಂಡೆಂಟಲ್ ಡಯಲೆಕ್ಟಿಕ್. ಡಯಲೆಕ್ಟಿಕ್ ಎಂದರೆ ವಿರುದ್ಧಾಂಶಗಳ ವಿಮರ್ಶೆ.

ಪಕ್ಷ (ಥೀಸಿಸ್) ಪ್ರತಿಪಕ್ಷಗಳನ್ನು ಕ್ಯಾಂಟ್ ನಿರೂಪಿಸಿದನೇ ಹೊರತು ಅವುಗಳನ್ನು ಸಮನ್ವಯ ಮಾಡಲಿಲ್ಲ. ಅವುಗಳಲ್ಲಿ ಒಂದು ಇನ್ನೊಂದನ್ನು ಬಿಟ್ಟು ತಾನೇ ತಾನಾಗಿರುವುದೆಂದು ಭಾವಿಸಿದ್ದರಿಂದ ಸಮನ್ವಯ ಮಾಡಲಾಗದ ವಿರುದ್ಧ ಭಾವನೆಗಳಾಗಿ ಉಳಿದುಕೊಂಡವು. ಅನಲಿಟಿಕ್ ಭಾಗದಲ್ಲಿ ಪರಿಮಾಣ, ಗುಣ, ಸಂಬಂಧ, ರೀತಿ ಎಂಬ ನಾಲ್ಕು ಮೂಲಭಾವನೆಗಳೂ ಮೂರು ಮೂರು ಬಗೆಗಳನ್ನು ಹೊಂದಿರುವುದಾಗಿ ಹೇಳಿದೆ. ಉದಾ: ಪರಿಮಾಣದ ಮೂರು ಬಗೆಗಳು-ಏಕತೆ, ಅನೇಕತೆ, ಪೂರ್ಣತೆ, ಗುಣದ ಮೂರು ಬಗೆಗಳು-ಅಸ್ತಿತ್ತ್ವ, ನಾಸ್ತಿತ್ತ್ವ, ನಾಸ್ತಿತ್ತ್ವದ ಮಿತಿಗೊಳಪಟ್ಟ ಅಸ್ತಿತ್ತ್ವ (ಲಿಮಿಟೇಷನ್). ಆದರೆ ಈ ಮೂರರಲ್ಲಿ ಮೊದಲ ಎರಡು ತಾವೇ ತಾವಾಗಿ ಉಳಿದುಕೊಳ್ಳದೆ ಮೂರನೆಯದರಲ್ಲಿ ಸಮನ್ವಯವಾಗಬಹುದೆಂಬ ಸೂಚನೆ ಕ್ಯಾಂಟ್‍ನಿಗೆ ಹೊಳೆದಿರಲಿಲ್ಲ. ಹೆಗೆಲ್ ಈ ಒಂದೊಂದು ಭಾವನೆಯನ್ನು ಪರೀಕ್ಷಿಸಿದಾಗ ಮೊದಲನೆಯದಾದ ಸರಳವಾದ ಕೇವಲ ಅಸ್ತಿತ್ವ (ಪ್ಯೂರ್ ಬೀಯಿಂಗ್) ಕೇವಲ ನಾಸ್ತಿತ್ವಗಳಾಗಿ (ಪ್ಯೂರ್ ನಥಿಂಗ್) ಪರಿಣಮಿಸುತ್ತದೆ. ಹಾಗೆಯೇ ಕೇವಲ ಸರಳ ನಾಸ್ತಿತ್ವವನ್ನು (ಪ್ಯೂರ್ ನಾನ್ ಬೀಯಿಂಗ್) ಪರೀಕ್ಷಿಸಿದಾಗ ಅದು ಕೇವಲ ನಾಸ್ತಿಕವಾಗಿ ಉಳಿಯದೆ ಅಸ್ತಿತ್ವವಾಗಿ ಪರಿಣಮಿಸುತ್ತದೆ. ಯಾವ ವಸ್ತುವನ್ನು ಪರೀಕ್ಷಿಸಿದರೂ ಅದು ಇದ್ದಂತೆಯೆ ಇರುವುದಿಲ್ಲ. ಈಗ ಇರುವುದರಲ್ಲಿ ಸ್ವಲ್ಪವಾದರೂ ಇನ್ನೊಂದು ಗಳಿಗೆಯಲ್ಲಿ ಇಲ್ಲದೆ ಹೋಗುತ್ತದೆ. ಈಗ ಇಲ್ಲದ್ದು ಇನ್ನೊಂದು ಗಳಿಗೆಯಲ್ಲಿ ಇರುವುದಾಗಿ ಕಾಣಿಸಿಕೊಳ್ಳುತ್ತದೆ. ಅಸ್ತಿತ್ವವೂ ನಾಸ್ತಿತ್ವವೂ ಬೇರೆ ಬೇರೆಯಾಗಿ ಒಂದನ್ನು ಬಿಟ್ಟು ಇನ್ನೊಂದು ಇರುವುದಿಲ್ಲ. ಹಾಗೆ ಅವು ಒಂದನ್ನು ಬಿಟ್ಟು ಕೇವಲವಾಗಿರುವಂತೆ ಭಾವಿಸಿದಾಗ ಅವೆರಡಕ್ಕೂ ವ್ಯತ್ಯಾಸವೇ ಇಲ್ಲದಂತಾಗುತ್ತದೆ. ಕೇವಲ ಅಸ್ತಿತ್ವ ಕೇವಲ ನಾಸ್ತಿತ್ವವಾಗುತ್ತದೆ. ವಿಶ್ವದಲ್ಲಿರುವುದೆಲ್ಲ ಅಸ್ತಿತ್ವ ನಾಸ್ತಿತ್ವಗಳ ಸಮನ್ವಯ. ಸಮನ್ವಯವಾಗಿ ಮೂರನೆಯ ಭಾವವಾದ ಪರಿಣಾಮಭಾವ (ಬಿಕಮಿಂಗ್) ಅಸ್ತಿತ್ವ ನಾಸಿತ್ವಗಳೆರಡನ್ನೂ ಎಡೆಬಿಡದೆ ಹೊಂದಿರುತ್ತದೆ. ಹಾಗೆಯೇ ಸಾಮಾನ್ಯ (ಯೂನಿವರ್ಸಲ್) ವಿಶೇಷ (ಪರ್ಟಿಕ್ಯುಲರ್) ಇವೆರಡೂ ಬೇರೆಬೇರೆಯಾದ ಕೇವಲ ಭಾವನೆಗಳಲ್ಲ. ಪ್ರತಿಯೊಂದು ನಿಜವಾದ ವಸ್ತುವೂ ವೈಶಿಷ್ಟ್ಯ ಸಹಿತ ಸಾಮಾನ್ಯ, ಸಾಮಾನ್ಯಸಹಿತ ವೈಶಿಷ್ಟ್ಯ ಎರಡೂ ಸಮನ್ವಯವಾಗಿ ಪೂರ್ಣ (ಟೋಟಲ್) ವಸ್ತುವಾಗುತ್ತದೆ. ಹಾಗೆಯೇ ಅಗತ್ಯವಾದದ್ದು ಎಂಬ ಭಾವನೆ ಔಪಾಧಿಕವಾದದ್ದನ್ನು (ಕಂಟಿಂಜೆಂಟ್) ಬಿಟ್ಟು ಇರುವುದಿಲ್ಲ. ತ್ರಿಕೋನ ಕೇವಲ ತ್ರಿಕೋನವಾಗಿ ಭಾವಿಸಲು ಅಸಾಧ್ಯ. ಅದು ಯಾವುದಾದರೂ ಒಂದು ಉಪಾಧಿಗೆ ಎಂದರೆ ಮೂರು ಕೋನಗಳ ಸಮತೆ ಎಂಬ ಉಪಾಧಿಗೆ ಒಳಪಟ್ಟಂತೆ ಎರಡು ಸಮಕೋನಗಳು ಸಮತೆಯ ಉಪಾಧಿಗೆ ಒಳಪಟ್ಟಂತೆ ಅಥವಾ ಎಲ್ಲ ಕೋನಗಳು ಅಸಮತೆಯ ಉಪಾಧಿಗೆ ಒಳಪಟ್ಟಂತೆ ಭಾವಿಸಿದ್ದರೆ ಅದು ವಾಸ್ತವವಾಗುವುದಿಲ್ಲ. ತ್ರಿಕೋನ ಮೂರು ಕೋನಗಳುಳ್ಳದ್ದಾಗಿರುವುದು ಅದರ ಒಂದು ಉಪಾಧಿರೂಪ. ನಾವು ಯಾವ ವಾಸ್ತವವಾದ ತ್ರಿಕೋನ ಮೂರು ಕೋನಗಳುಳ್ಳದ್ದಾಗಿರಬೇಕೆಂಬುದು ಅಗತ್ಯ. ಆದರೆ ಅದು ಸಮನಾದ ಮೂರು ಕೋನಗಳುಳ್ಳದ್ದಾಗಿಯೇ ಇರಬೇಕಾದದ್ದಿಲ್ಲ. ಮೂರು ಕೋನಗಳುಳ್ಳದ್ದಾಗಿರುವುದು ಅದರ ಒಂದು ಉಪಾಧಿರೂಪ. ನಾವು ಯಾವ ವಾಸ್ತವವಾದ ತ್ರಿಕೋನವನ್ನು ಯೋಚಿಸಿದಾಗ ಯಾವುದಾದರೂ ಒಂದು ಉಪಾಧಿಗೆ ಒಳಪಟ್ಟಂತೆ ಯೋಚಿಸಬೇಕು. ಹೀಗೆ ಎರಡು ಭಾವನೆಗಳು ವಿರೋಧವಿಲ್ಲದಂತೆ ಮೂರನೆಯ ಭಾವದಲ್ಲಿ ಸಮನ್ವಯವಾಗಬಹುದೆಂಬ ಸೂಚನೆಯನ್ನು ಕ್ಯಾಂಟ್ ಬೆಳೆಸಲಿಲ್ಲ. ಅದನ್ನು ಹೆಗೆಲ್ ಬೆಳೆಸಿ ಹೊಸ ತರ್ಕವನ್ನು ಏರ್ಪಡಿಸಿದ. ಇದು ಹಿಂದೂತರ್ಕದಂತೆ ಒಣ ತರ್ಕ (ಫಾಮಲ್ ಲಾಜಿಕ್) ಅಲ್ಲ. ಜೀವಂತವಾದ ತರ್ಕ. ಇದು ಪರಿಣಾಮ ಹೊಂದುತ್ತಿರುವ ವಿಶ್ವವನ್ನು ಪ್ರತಿಬಿಂಬಿಸುವ ಭಾವಗಳ ಸಮನ್ವಯ. ಸತ್ (ಬೀಯಿಂಗ್) ಮತ್ತು ಚಿತ್ (ಥಾಟ್), ವಿಷಯ (ಸಬ್ಜಕ್ಟ್), ವಿಷಯಿ(ಆಬ್ಜಕ್ಟ್), ಭಾವನಾರೂಪ (ಫಾರಂ) ಮತ್ತು ಭಾವಿಸಿದ ವಿಷಯ (ಕಂಟೆಂಟ್) ಇವು ಅವಿಭಾಜ್ಯ. ಸತ್ ಕೇವಲ ಇರುವೂ ಅಲ್ಲ ಅವರ ಅಭಾವವೂ ಅಲ್ಲ. ಅದು ಪರಿಣಾಮಕಾರಿಯಾದ ಸತ್. ಅದು ಕೇವಲ ಏಕತೆಯೂ ಅಲ್ಲ ಭಿನ್ನತೆಯೂ ಅಲ್ಲ. ಭೇದ ಸಹಿತವಾದ ಏಕತೆ. ಹಾಗೆಯೇ ಚಲನೆಯೂ ಸ್ಥಿರತೆಯೂ ಒಂದನ್ನೊಂದು ಬಿಟ್ಟು ಇರುವುದಿಲ್ಲ. ಚಲನೆಯಿಂದ ಕೂಡಿದ ಸ್ಥಿರತೆ ವಾಸ್ತವದ ಸತ್‍ರೂಪ. ಇಂಥ ಪರಿಣಾಮಕಾರಿಯಾದ ಸತ್ತನ್ನು, ಭಿನ್ನತೆಯನ್ನು ಒಳಗೊಂಡು ಒಂದಾದ ಸತ್ತನ್ನು ಪ್ರತಿಬಿಂಬಿಸುವುದೇ ಜೀವಂತವಾದ ತರ್ಕ. ಇದು ವಿರುದ್ಧಾಂಶಗಳನ್ನು ಸಮನ್ವಯ ಮಾಡುವ ವೈಚಾರಿಕ ತರ್ಕ (ಡಯಲೆಕ್ಟಿಕಲ್ ಲಾಜಿಕ್). ಈ ತರ್ಕಸ್ಥಾಪಿಸುವ ಸಾಮಾನ್ಯ, ತಿರುಳಿಲ್ಲದ, ಜೊಳ್ಳಾದ ಸಾಮಾನ್ಯವಲ್ಲ. ನಿಷ್ಕ್ರಿಯವಾದ ಸಾಮಾನ್ಯವಲ್ಲ. ಅದು ತಿರುಳಿನಿಂದ ತುಂಬಿದ ಲವಲವಿಕೆಯಿಂದ ಕೂಡಿದ ಮೂರ್ತಸಾಮಾನ್ಯ (ಕಾಂಕ್ರಿಟ್ ಯೂನಿವರ್ಸಲ್). ಇಂಥ ಮೂರ್ತ ಸಾಮಾನ್ಯವನ್ನು ಆತ ಪರಮಭಾವನೆ (ಆಬ್ಸಲೂಟ್ ಐಡಿಯ) ಎಂದು ಕರೆದಿರುತ್ತಾನೆ. ಈ ವಿಶ್ವವೆಲ್ಲ ಪರಮದ (ಆಬ್ಸಲೂಟ್) ಅಭಿವ್ಯಕ್ತ ರೂಪಗಳು.

ಈ ವೈಚಾರಿಕ ತರ್ಕವನ್ನು ಎಲ್ಲ ವಿಧವಾದ ಅನುಭವಗಳಿಗೂ ಅನ್ವಯಿಸಿ ಆತ ತತ್ತ್ವಶಾಸ್ತ್ರವನ್ನು ಬೆಳೆಸಿರುತ್ತಾನೆ. ಅವನ ತತ್ತ್ವಶಾಸ್ತ್ರದ ಭಾಗಗಳು ಮೂರು : 1. ಪ್ರಕೃತಿ ಮತ್ತು ಚೇತನತತ್ತ್ವ (ಫಿಲಾಸಫಿ ಆಫ್ ನೇಚರ್ ಅಂಡ್ ಮೈಂಡ್). 2. ಚಾರಿತ್ರಿಕ ತತ್ತ್ವ (ಫಿಲಾಸಫಿ ಆಫ್ ಹಿಸ್ಟರಿ,) 3. ಕಲೆ ಮತ್ತು ಮತತತ್ತ್ವ (ಫಿಲಾಸಫಿ ಆಫ್ ಆರ್ಟ್ ಅಂಡ್ ರಿಲಿಜನ್). ಈ ಮೂರಕ್ಕೂ ಆಧಾರವಾದದ್ದು ವೈಚಾರಿಕ ತರ್ಕ.

ಪ್ರಕೃತಿ ಪರಮದ ಒಂದು ಅಭಿವ್ಯಕ್ತ ರೂಪ. ಪರಮಭಾವನೆ ಕಾಲ ದೇಶಗಳ ರೂಪದಲ್ಲಿ ಅಭಿವ್ಯಕ್ತವಾದಾಗ ಪ್ರಕೃತಿಯ ರಚನೆಯೂ ಒಂದೇ ಆಗಿರುವುದೇ ಕಾರಣ. ಪ್ರಕೃತಿಯ ರಚನೆ ಬೇರೆಯಾಗಿ ನಮ್ಮ ಮನಸ್ಸಿನ ರಚನೆಯೇ ಬೇರೆಯಾಗಿದ್ದರೆ, ನಮ್ಮ ಭಾವನೆಗಳು ಪ್ರಕೃತಿಯ ಕಾರ್ಯಗಳನ್ನು ಪ್ರತಿಬಿಂಬಿಸಲಾರವು. ಪ್ರಕೃತಿ ಪರಿಣಾಮಗೊಳ್ಳುತ್ತಿರುವಂತೆಯೇ ನಮ್ಮ ಭಾವನೆಗಳೂ ಪರಿಣಾಮಗೊಳ್ಳುತ್ತಿರಬೇಕು. ಪ್ರಕೃತಿ ಮಾನವ ಚೈತನ್ಯದಲ್ಲಿ ಎಚ್ಚರಗೊಳ್ಳುತ್ತದೆ. ಮಾನವ ಚೈತನ್ಯ ಪ್ರಕೃತಿಯ ಮೂಲಕ ವಿಷಯೀಕೃತವಾಗುತ್ತದೆ. ಈ ಮೂಲಕ ನಮ್ಮ ಒಳಭಾವನೆಗಳು ಮೂರ್ತಭಾವನೆಗಳಾಗುತ್ತವೆ. ಹೀಗೆ ಪ್ರಕೃತಿ ಮಾನವನ ಚೇತನದ ಮೂಲಕ ತನ್ನ ಜಡತೆಯನ್ನು ಕಳೆದುಕೊಂಡು ಅಭಿವ್ಯಕ್ತವಾಗಿ ಪೂರ್ಣವಾಗುತ್ತದೆ. ಹೀಗೆ ಪ್ರಕೃತಿ ಮಾನವನ ಮೂಲಕವೂ ಮಾನವ ಪ್ರಕೃತಿಯ ಮೂಲಕವೂ ಪರಸ್ಪರವಾಗಿ ಪೂರ್ಣಗೊಳ್ಳುತ್ತವೆ. ಹೀಗೆ ಪೂರ್ಣಗೊಳಿಸುವ ಚೇತನವೇ ಪರಮಚೇತನ (ಆಬ್ಸಲೂಟ್ ಕಾನ್ಷಸ್‍ನೆಸ್). ಅದರಲ್ಲಿ ಪ್ರಕೃತಿ ಮತ್ತು ಮಾನವ ಚೇತನ ಹೊಂದಿಕೆಯಾಗಿರುತ್ತವೆ.

ಪರಮ ಭಾವನೆ ಪ್ರಕೃತಿಯಲ್ಲೂ ಮಾನವಜೀವಿಗಳಲ್ಲೂ ಅಭಿವ್ಯಕ್ತವಾಗಿರುವುದಲ್ಲದೆ, ಸಾಮಾಜಿಕಸಂಸ್ಥೆಗಳಲ್ಲೂ ಮಾನವನ ಚರಿತ್ರೆಯಲ್ಲೂ ಮಾನವನ ಧಾರ್ಮಿಕ, ರಾಷ್ಟ್ರೀಯ ಭಾವನೆಗಳಲ್ಲೂ ಅಭಿವ್ಯಕ್ತವಾಗಿರುತ್ತದೆ. ಸುಪ್ತವಾಗಿದ್ದ ಭಾವನೆ ಮಾನವಸಂಸ್ಥೆಗಳಲ್ಲಿ ವ್ಯಕ್ತವಾಗುತ್ತದೆ. ಮಾನವ ಸೃಷ್ಟಿಸಿರುವ ಸಂಸ್ಥೆಗಳ ಮೂಲಕ, ತನ್ನ ಒಳಭಾವಗಳಾದ ನ್ಯಾಯ, ಧರ್ಮಗಳನ್ನು ತನ್ನ ಮುಂದೆ ವಿಷಯೀಕೃತವಾದಂತೆ ತಿಳಿಯಲು ಸಾಧ್ಯವಾಗುತ್ತದೆ. ಕುಟುಂಬ, ರಾಷ್ಟ್ರ ಅಂಥ ಸಂಸ್ಥೆಗಳು. ಆ ಸಂಸ್ಥೆಗಳ ಅಗತ್ಯತೆಯನ್ನು ಕಂಡು ತಿಳಿದಾಗ ತನ್ನ ನ್ಯಾಯ ಭಾವನೆ ಧರ್ಮ ಭಾವನೆ ಮೂರ್ತ ರೂಪಗಳಾಗುತ್ತವೆ. ಮಾನವ ತನ್ನ ಚರಿತ್ರೆಯನ್ನು ತಿಳಿದುಕೊಂಡಾಗ ಅದು ಪರಮ ಚೈತನ್ಯದ ಒಂದು ಮೂರ್ತ ರೂಪವೆಂದು ಅವನಿಗೆ ಸ್ಪಷ್ಟವಾಗುತ್ತದೆ. ರಾಷ್ಟ್ರದ ಕಾನೂನುಗಳಿಗೆ, ಸಮಾಜದ ಕಟ್ಟುಕಟ್ಟಳೆಗಳಿಗೆ ಮಾನವ ವಿಧೇಯನಾಗಿರುವುದು ಅವು ತನ್ನ ಒಳಭಾವಗಳ ಹೊರ ರೂಪಗಳಾದ್ದರಿಂದಲೇ. ರಾಷ್ಟ್ರದ ಕಾನೂನಿಗೆ ವಿಧೇಯನಾದಾಗ ತಾನು ತನ್ನ ಒಳ ಭಾವಗಳ ಹೊರ ರೂಪಗಳಾದ್ದರಿಂದಲೇ. ರಾಷ್ಟ್ರದ ಕಾನೂನಿಗೆ ವಿಧೇಯನಾದಾಗ ತಾನು ತನ್ನ ಅಂತರಂಗದ ನ್ಯಾಯ ಭಾವನೆಗೆ ವಿಧೇಯನಾಗಿರುತ್ತಾನೆಂಬುದು ಸ್ಪಷ್ಟವಾಗುತ್ತದೆ. ಆ ತಿಳಿವಿಲ್ಲದಿದ್ದರೆ ರಾಜ್ಯದ ಕಾನೂನು, ಸಮಾಜದ ಕಟ್ಟಳೆಗಳು ಕೃತಕ ಬಂಧನಗಳಾಗಿ ಪರಿಣಮಿಸುತ್ತವೆ. ಸಾಮಾಜಿಕ ಸಂಸ್ಥೆಗಳೂ ರಾಷ್ಟ್ರವೂ ನಮ್ಮ ಅಂತರಂಗದ ಭಾವನೆಗಳನ್ನು ಸಿದ್ಧಿಸಿಕೊಳ್ಳಲು ಅಗತ್ಯವಾದ ಅಂಗಗಳು. ಅವು ಇಲ್ಲದಿದ್ದರೆ ನಮ್ಮ ಒಳಭಾವಗಳು ಹೊರಹೊಮ್ಮಲು ಅವಕಾಶವಿಲ್ಲದಂತಾಗುತ್ತದೆ. ನಮ್ಮ ಆತ್ಮ ಸಿದ್ಧಿಗೆ, ಧಾರ್ಮಿಕ, ಭೌತಿಕ, ಸ್ವಾತಂತ್ರ್ಯ ಸಿದ್ಧಿಗಳಿಗೆ ಸಾಮಾಜಿಕ ಮತ್ತು ರಾಷ್ಟ್ರೀಯ ಸಂಸ್ಥೆಗಳು ಅಗತ್ಯವಾದ ವಾತಾವರಣ. ಮಾನವಚರಿತ್ರೆ ಕಾಲದಿಂದ ಕಾಲಕ್ಕೆ ಹುಟ್ಟುವ ನಮ್ಮ ವಿರುದ್ಧ ಭಾವನೆಗಳ ಮಸೆದಾಟವನ್ನೂ ಅವುಗಳ ಸಮನ್ವಯವನ್ನೂ ಪ್ರತಿಬಿಂಬಿಸುತ್ತದೆ. ವ್ಯಕ್ತಿ ಸ್ವಾತಂತ್ರ್ಯವೆಷ್ಟು ಅಗತ್ಯವೋ ಸಮಾಜದ ಸ್ಥಿಮಿತೆಯೂ ಅಷ್ಟೆ ಅಗತ್ಯ. ಒಂದು ಕಾಲದಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಅಗತ್ಯವಾದ ಭಾವನೆಗಳು ಪ್ರಬಲವಾಗುತ್ತವೆ. ಆ ಭಾವನೆಗಳು ಅತಿಯಾಗಿ ಅವುಗಳಿಗೆ ಪ್ರತಿಯಾದ ಸಾಮಾಜಿಕ ಸುಭದ್ರತೆಗೆ ಅಗತ್ಯವಾದ ಭಾವನೆಗೆ ಹುಟ್ಟಿಕೊಳ್ಳುತ್ತವೆ. ಅವುಗಳೆರಡೂ ಒಂದು ಹಂತದಲ್ಲಿ ಸಮನ್ವಯವಾದಾಗ ಹೊಸ ಬಗೆಯಾದ, ವ್ಯಕ್ತಿ ಸ್ವಾತಂತ್ರ್ಯಕ್ಕೆ ಅಗತ್ಯವಾದ ಹೊಸ ಭಾವನೆಗಳು ಹುಟ್ಟುತ್ತವೆ. ಹೀಗೆ ಸಮಾಜದ ಬೆಳವಣಿಗೆಯ, ವ್ಯಕ್ತಿಯ ಬೆಳವಣಿಗೆಯ ಹೊಸ ಹೊಸ ಹಂತಗಳು ಏರ್ಪಡುತ್ತವೆ. ಈ ಮೂಲಕ ಪರಮ ತನ್ನ ಸ್ವರೂಪವನ್ನು ಚರಿತ್ರೆಯ ಉದ್ದಕ್ಕೂ ವಿಕಸಿಸುತ್ತಿದೆ.

ಪ್ರಕೃತಿಯ ಮೂಲಕವೂ, ಸಮಾಜ ಸಂಸ್ಥೆಗಳ ಮೂಲಕವೂ ಪರಮ ಅಭಿವ್ಯಕ್ತವಾದಂತೆ ಕಲೆಯ ಮೂಲಕವೂ, ಮತದ ಮೂಲಕವೂ ಅಭಿವ್ಯಕ್ತವಾಗುತ್ತದೆ. ಪರಮ ಚೈತನ್ಯ ಮಾನವನ ಪ್ರತಿಭಾ ರೂಪಗಳ ಮೂಲಕ ಅಭಿವ್ಯಕ್ತವಾದಾಗ ಕಲೆಯಾಗುತ್ತದೆ. ಪೂಜ್ಯ ಭಾವನೆಗಳ ಮೂಲಕ ಅಭಿವ್ಯಕ್ತವಾದಾಗ ಮತವಾಗುತ್ತದೆ. ಇವೆಲ್ಲ ಸರ್ವತೋಮುಖವಾದ ವೈಚಾರಿಕ ಚೇತನದ ವಿಮರ್ಶೆಗೆ ಒಳಪಟ್ಟು ಸಮನ್ವಯವಾದಾಗ ತತ್ತ್ವವಾಗಿ ಅಭಿವ್ಯಕ್ತವಾಗುತ್ತದೆ. ಕಲೆ, ಮತ, ತತ್ತ್ವ ಈ ಮೂರು ಪರಚೇತನದ ಅಭಿವ್ಯಕ್ತವಾಗುತ್ತದೆ. ಹೆಗೆಲ್‍ನ ಅನುಯಾಯಿಗಳನ್ನು ಎಡಬಲಪಕ್ಷಗಳವರೆಂದು ವಿಂಗಡಿಸುವುದುಂಟು. ಬಲ ಪಕ್ಷದವರು ಆತ ಈಶ್ವರವಾದಿ (ಥೀಯಿಸ್ಟ್) ಯೆಂದೂ ಎಡ ಪಕ್ಷದವರು ಆತ ವಿಶ್ವದೈವೈಕ್ಯವಾದಿ (ಪ್ಯಾಂಥೀಯಿಸ್ಟ್) ಯೆಂದೂ, ಭಾವಿಸಿರುತ್ತಾರೆ. ಕಾರ್ಲ್‍ಮಾಕ್ರ್ಸ್‍ನದು ತೃತೀಯ ಪಕ್ಷ. ಈತ ಹೆಗೆಲ್ ನಿರೂಪಿಸಿದ ವೈಚಾರಿಕ ತತ್ತ್ವವನ್ನು ಅಂಗೀಕರಿಸಿರುತ್ತಾನೆ. ಆ ತರ್ಕಕ್ಕೆ ಚಿಚ್ಛಕ್ತಿಗೆ ಬದಲಾಗಿ ಭೌತಶಕ್ತಿ ಮೂಲವೆಂದು ವಾದಿಸಿರುತ್ತಾನೆ. ಕಾರ್ಲ್ ವೈಚಾರಿಕ ಭೌತವಾದಿ.

ಷೋಪೆನ್‍ಹೌರ್ : (1788-1860). ಈತನೂ ಹೆಗಲ್‍ನಂತೆ ಜರ್ಮನಿಯ ತಾತ್ತ್ವಿಕ. ಹೆಗೆಲ್‍ನ ಸಮಕಾಲೀನ. ಅವನಂತೆ ಕ್ಯಾಂಟ್‍ನ ತತ್ತ್ವವನ್ನು ತನ್ನದೇ ಆದ ರೀತಿಯಲ್ಲಿ ಬೆಳೆಸಿದ. ನಮ್ಮ ಜ್ಞಾನ ತೋರಿಕೆಯ ವಿಶ್ವಕ್ಕೆ ಮಾತ್ರ ಕ್ಲುಪ್ತವಾದದ್ದು. ಅದಕ್ಕೆ ಕಾರಣವಾದ ಸತ್ತಿನ ಜ್ಞಾನ ಬುದ್ಧಿಗೆ ಮೀರಿದ್ದು. ನಮಗೆ ತೋರುವ ವಿಶ್ವ ಭಾವನಾರೂಪವಾದದ್ದು (ವಲ್ರ್ಡ್ ಆಸ್ ಐಡಿಯ). ಕ್ಯಾಂಟ್‍ನ ತತ್ತ್ವದಲ್ಲಿ ಇಷ್ಟನ್ನು ಮಾತ್ರ ಷೋಪೆನ್‍ಹೌರ್ ಒಪ್ಪಿಕೊಳ್ಳುತ್ತಾನೆ. ಅವನ ಪ್ರಸಿದ್ಧಗ್ರಂಥವಾದ ದಿ ವಲ್ರ್ಡ್ ಆಸ್ ಐಡಿಯ ಅಂಡ್ ವಿಲ್ ಎಂಬ ಗ್ರಂಥದ ಸುಮಾರು ಇನ್ನೂರು ಪುಟಗಳಲ್ಲಿ ಅವನ್ನು ವಿವರಿಸುತ್ತಾನೆ. ಸ್ವಸ್ವರೂಪದಲ್ಲಿ ಸತ್ತನ್ನು ತಿಳಿಯಲಾಗುವುದಿಲ್ಲವೆಂಬ ಕ್ಯಾಂಟ್‍ನ ಅಭಿಪ್ರಾಯವನ್ನು ಆತ ಒಪ್ಪಲಿಲ್ಲ. ಅದು ತಿಳಿಯಬಹುದಾದದ್ದು, ಅದರ ಸ್ವರೂಪ ಚಿತ್ತರೂಪವಾದದ್ದು. ಭಾವನಾರೂಪದಲ್ಲಿ ತಿಳಿಯಲಾಗದ್ದನ್ನು ಚಿತ್ತರೂಪದಲ್ಲಿ ತಿಳಿಯಬಹುದು. ಅದು ಚಿತ್ತರೂಪವಾದದ್ದೆಂದು ನಮ್ಮ ಕ್ರಿಯೆಗಳ ಮೂಲಕ ನೇರವಾಗಿ ತಿಳಿದುಕೊಳ್ಳುತ್ತೇವೆ. ಚಿತ್ತವೇ ಪ್ರಧಾನವಾದ ನಮ್ಮ ಆತ್ಮ. ಅದು ಕಾಲದೇಶಗಳ ಮಿತಿಗೆ ಒಳಪಟ್ಟದ್ದಲ್ಲ. ಕಾರ್ಯಕಾರಣ ಸಂಬಂಧಕ್ಕೆ ಒಳಪಟ್ಟದ್ದಲ್ಲ. ಸತ್ತಿನ ಸ್ವಸ್ವಭಾವವನ್ನು ನಮ್ಮಲ್ಲಿರುವ ವಾಸನೆಗಳ (ಇನ್‍ಸ್ಟಿಂಕ್ಟ್ಸ್) ಮೂಲಕ, ಇಚ್ಛೆಗಳ ಮೂಲಕ ನೇರವಾಗಿ ಅರಿತುಕೊಳ್ಳಬಹುದು. ನಮ್ಮ ಶರೀರ ನಮ್ಮ ಚಿತ್ತದ ಹೊರರೂಪ. ಇತರ ವಸ್ತುಗಳನ್ನು ತಿಳಿದುಕೊಳ್ಳುವಂತೆ ನಾವು ನಮ್ಮ ಶರೀರವನ್ನು ಭಾವನಾ ರೂಪವಾಗಿ ತಿಳಿದುಕೊಳ್ಳುತ್ತೇವೆ. ನಮ್ಮ ಆತ್ಮವಾದ ಚಿತ್ತವನ್ನು ಅದರ ಸ್ವಸ್ವರೂಪಗಳ ಮೂಲಕ ತಿಳಿದುಕೊಳ್ಳುತ್ತೇವೆ. ನಮ್ಮ ಚಿತ್ತ ಶರೀರದ ಮೂಲಕ ವಿಷಯೀಕೃತವಾಗುತ್ತದೆ. ವಿಷಯೀಕೃತವಾದಾಗ ಶರೀರ ಇತರ ವಸ್ತುಗಳಂತೆ ಭಾವನಾ ರೂಪವಾಗಿ ಕಾಣಿಸಿಕೊಳ್ಳುತ್ತದೆ. ಇದು ಷೋಪೆನ್‍ಹೌರ್‍ನ ಮೂಲ ಸಿದ್ಧಾಂತ.

ನನ್ನಲ್ಲಿ ಚಿತ್ತವಿರುವಂತೆಯೆ ಪ್ರಕೃತಿಯಲ್ಲೂ ಇದೆ. ಅಯಸ್ಕಾಂತದ ಮುಳ್ಳು ಉತ್ತರಕ್ಕೆ ಮುಖಮಾಡುತ್ತದೆ. ಎಷ್ಟು ಅದನ್ನು ಪಲ್ಲಟಿಸಲು ಪ್ರಯತ್ನ ಮಾಡಿದರೂ ಅದು ಆ ದಿಕ್ಕಿನ ಕಡೆಗೇ ವಾಲುತ್ತದೆ. ಅದರ ಒಳಶಕ್ತಿ ಅದಮ್ಯ. ಉಪ್ಪಿನ ಹರಳುಗಳು ತಮಗೆ ಸ್ವಾಭಾವಿಕವಾದ ರೂಪವನ್ನು ಪಡೆಯಲು ತವಕಪಡುತ್ತವೆ. ಈ ಭೌತ ಪದಾರ್ಥಗಳ ವರ್ತನೆ ಅವುಗಳಲ್ಲಿ ಸುಪ್ತವಾಗಿ ಅಡಗಿರುವ ಚಿತ್ತಶಕ್ತಿಯನ್ನು ಪ್ರದರ್ಶಿಸುತ್ತದೆ. ಗಿಡಗಳವರ್ತನೆಯೂ ಅದೇ ರೀತಿಯಾಗಿ ಚಿತ್ತಶಕ್ತಿಯ ರೂಪಭೇದಗಳು. ಗಿಡಗಳು ಸೂರ್ಯನ ಕಿರಣಗಳನ್ನು ಸ್ಪರ್ಶಿಸಲು ಅಡ್ಡಬಂದ ಅಂಶಗಳನ್ನು ನಿವಾರಿಸಿಕೊಂಡು ಮೇಲಕ್ಕೆ ಏಳುತ್ತವೆ. ನೆಲದೊಳಗಿರುವ ಶೈತ್ಯವನ್ನು ಹೀರಿಕೊಳ್ಳಲು ತಮ್ಮ ಬೇರುಗಳನ್ನು ಆಳಕ್ಕೆ ಇಳಿಸುತ್ತವೆ. ಕ್ರೂರ ಮೃಗಗಳು ಕೋರೆ ಹಲ್ಲುಗಳನ್ನು ಬೆಳೆಸುತ್ತವೆ. ಆಕಳುಗಳು ತಿವಿಯಲು ಕೊಂಬುಗಳನ್ನು ಬೆಳೆಸುತ್ತವೆ. ದೇಹರಚನೆಗೆ ಚಿತ್ತವೃತ್ತಿಯೇ ಆಶ್ರಯ. ಹೀಗೆ ಚಿತ್ತವೇ ಎಲ್ಲಕ್ಕೂ ಮೂಲ.

ಸುಪ್ತವಾಗಿದ್ದ ಚಿತ್ತ ಮಾನವನಲ್ಲಿ ಚೇತನಗೊಳ್ಳುತ್ತದೆ. ಅದು ಬುದ್ಧಿಯನ್ನು ಅದರ ಒಂದು ಅಂಗವಾಗಿ ಬೆಳೆಸುತ್ತದೆ. ಮಿದುಳನ್ನು ರೂಪುಗೊಳಿಸುತ್ತದೆ. ಅದು ಜೀವನವನ್ನು ಕಾಪಾಡಿಕೊಳ್ಳಲು ಏರ್ಪಟ್ಟ ಸಾಧನ. ಚಿತ್ತ ಪ್ರಭು, ಬುದ್ಧಿ ಅದರ ಸೇವಕ. ಚಿತ್ತ ಸ್ಮøತಿ ಕಲ್ಪನಾ ಶಕ್ತಿ, ದರ್ಶನ ಮುಂತಾದ ಶಕ್ತಿಗಳನ್ನು ಹುಟ್ಟು ಹಾಕುತ್ತದೆ. ನಿಯಂತ್ರಿಸುತ್ತದೆ.

ಈ ಮೂಲಚಿತ್ತ ಪುರುಷರೂಪದ್ದಲ್ಲ. ಅದು ಬುದ್ಧಿರೂಪವಾದ ಈಶ್ವರನಲ್ಲ. ಅದು ಕಾಲ ದೇಶಗಳಲ್ಲಿರುವ ಎಲ್ಲ ವಸ್ತುಗಳಿಗೂ ಮೂಲವಾದರೂ ಅದೇ ಕಾಲ-ದೇಶಗಳ ಮಿತಿಗೆ ಒಳಪಟ್ಟದ್ದಲ್ಲ. ಅದು ಅನಂತವಾದ ಮಾದರಿಗಳಲ್ಲಿ ಅಭಿವ್ಯಕ್ತಗೊಳ್ಳುತ್ತದೆ. ಈ ಮಾದರಿಗಳು ಪ್ಲೇಟೊನ ಮಾದರಿಗಳನ್ನು ಹೋಲುತ್ತವೆ. ಪ್ರಕೃತಿಯಲ್ಲಿ ನಾವು ಕಾಣುವ ಜಾತಿಗಳೇ (ಸ್ಪೀಷೀಸ್) ಇವು. ಈ ಜಾತಿಗಳು ಅನಂತವಾದುವು. ಇವು ಕಾಲದೇಶಗಳ ಕಟ್ಟಿಗೆ ಒಳಪಟ್ಟವಲ್ಲ. ಇವಕ್ಕೆ ಬದಲಾವಣೆ ಇಲ್ಲ. ಬದಲಾಯಿಸುವುವು ವ್ಯಕ್ತಿಗಳು. ವ್ಯಕ್ತಿಗಳಿಗೆ ಹುಟ್ಟು ಸಾವುಂಟು. ಆದರೆ ಜಾತಿಗಳಿಗೆ ಹುಟ್ಟುಸಾವಿಲ್ಲ. ಅವು ಚಿರಸ್ಥಿರವಾದುವು. ಈ ಜಾತಿಗಳಲ್ಲಿ ಕ್ರಮವಾದ ಅಂತಸ್ತುಗಳಿವೆ. ಲೋಹ ಜಾತಿಗಳು ಕೆಳ ಅಂತಸ್ತಿನವು. ಸಸ್ಯ ಜಾತಿಗಳು ಅವುಗಳಿಗಿಂತ ಮೇಲಿನವು. ಪ್ರಾಣಿಜಾತಿಗಳು ಅವುಗಳಿಗಿಂತ ಮೇಲಿನವು. ಮಾನವ ಜಾತಿ ಎಲ್ಲಕ್ಕೂ ಮೇಲಿನ ಅಂತಸ್ತಿನದು. ಇವೆಲ್ಲಕ್ಕೂ ತಳಹದಿಯಾದ ಚಿತ್ತ ಅನಂತ, ಅಮೃತ.

ಇರಬೇಕು, ಇದ್ದು ಹೋರಾಡಬೇಕು, ಇದ್ದು ಜಯಿಸಬೇಕು-ಎಂಬುದೇ ಚಿತ್ತದ ಮೂಲತಂತ್ರ. ಈ ಮಂತ್ರ ನಿರಾಶಾಮಂತ್ರವಾಗಬೇಕಾದ್ದಿಲ್ಲ. ಆದರೆ ಷೋಪೆನ್ ಹೌರ್ ನಿರಾಶಾವಾದವನ್ನು ಎತ್ತಿ ಹಿಡಿದಿರುತ್ತಾನೆ. ಹೋರಾಟ, ಕೊಲೆ, ದುಃಖ-ಇವುಗಳಿಂದ ಜೀವನ ತುಂಬಿ ತುಳುಕುತ್ತಿದೆ. ಒಂದು ಆಶೆ ಪೂರ್ಣವಾದಾಗ ಅದರ ಸ್ಥಳದಲ್ಲಿ ಪೂರ್ಣವಾಗದ ಹತ್ತು ಆಶೆಗಳು ಹುಟ್ಟುತ್ತವೆ. ನಾವು ನಿರಂತರವಾಗಿ ಜೀವವನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತೇವೆ. ಆದರೆ ಕೊನೆಯಲ್ಲಿ ಸಾವು ತಪ್ಪಿದ್ದಲ್ಲ. ಒಂದೊಂದು ಸಲ ನಾವು ಉಸಿರನ್ನು ಎಳೆದುಕೊಂಡಾಗಲೂ ನಮಗೆ ಅಭಿಮುಖವಾದ ಸಾವನ್ನು ಹೊರಕ್ಕೆ ಅಟ್ಟುತ್ತಿದ್ದೇವೆ. ಆದರೂ ಅದನ್ನು ಅಟ್ಟಲಾಗದೆ ಸೋತು ಉಸಿರೆಳೆಯುವುದನ್ನು ನಿಲ್ಲಿಸುತ್ತೇವೆ. ಬೆಕ್ಕು ಇಲಿಯನ್ನು ಸ್ವಲ್ಪಕಾಲ ಆಡಿಸಿ ಕೊನೆಗೆ ಅದನ್ನು ನುಂಗುವಂತೆ ಸಾವು ನಮ್ಮನ್ನು ಸ್ವಲ್ಪಮಟ್ಟಿಗೆ ವಿನೋದಗೊಳಿಸಿ ಕೊನೆಯಲ್ಲಿ ನಮ್ಮನ್ನು ನುಂಗಿಬಿಡುತ್ತದೆ. ಜೀವನ ವಾಸಿಯಾಗದ ಒಂದು ಹುಣ್ಣು.

ಈ ನಿರಂತರವಾದ ಬೇನೆಗೆ ಸ್ವಾರ್ಥವೇ ಕಾರಣ. ನಾವು ಮೇಲೆ ನೋಡುವುದಕ್ಕೆ ಪ್ರಾಮಾಣಿಕರಾಗಿಯೂ ಪರಚಿಂತಕರಾಗಿಯೂ ಇರುತ್ತೇವೆ. ಆದರೆ ಒಳಗೆ ಅಪ್ರಾಮಾಣಿಕತೆ ಇದೆ. ಸ್ವಾರ್ಥವಿದೆ. ನಾವು ಪ್ರಾಮಾಣಿಕರಾಗಿದ್ದರೆ ಅದಕ್ಕೆ ಭಯವೇ ಕಾರಣ. ಪರಹಿತ ಚಿಂತಕರಾಗಿದ್ದರೆ ಅದಕ್ಕೆ ನಮ್ಮ ಒಣ ಜಂಭವೇ ಮೂಲ. ನಾಗರೀಕತೆ ಎಂದು ನಾವು ಯಾವುದನ್ನು ಹೆಮ್ಮೆಯಿಂದ ಆದರಿಸುತ್ತೇವೆಯೊ ಅದೇನೂ ಸುಖಪ್ರದವಲ್ಲ. ಎರಡು ಆಶೆಗಳಿಗೆ ಬದಲಾಗಿ ಇಪ್ಪತ್ತು ಆಶೆಗಳು ಹುಟ್ಟುತ್ತವೆ. ಆಶೆಯ ದಾಹ ಹೆಚ್ಚಿದಂತೆಲ್ಲ ದಣಿವೂ ಹೆಚ್ಚುತ್ತದೆ. ಜ್ಞಾನ ಬೆಳೆದರೆ ಚಿಂತೆ ಉಡುಗುವುದಿಲ್ಲ. ಜ್ಞಾನ ಹೆಚ್ಚಿದಂತೆಲ್ಲ ಹೊಸ ಹೊಸ ಚಿಂತೆಗಳು ಹೆಚ್ಚುತ್ತವೆ. ಮಾನವನ ಚರಿತ್ರೆ ಕೊನೆ ಇಲ್ಲದ, ಬಿಡುವಿಲ್ಲದ, ಕೊಲೆ, ದರೋಡೆ, ಒಳಸಂಚು, ಸುಳ್ಳುಗಳಿಂದ ತುಂಬಿದೆ. ಆ ಚರಿತ್ರೆಯ ಒಂದು ಪುಟವನ್ನು ತಿಳಿದರೆ ಸಾಕು ಎಲ್ಲವನ್ನು ತಿಳಿದಂತೆಯೇ ಆಗುತ್ತದೆ.

ಇಂಥ ಪ್ರಪಂಚದಲ್ಲಿ ಮಾನವರು ಆಚರಿಸಬೇಕಾದ ಧರ್ಮ ಯಾವುದು? ಅನುಕಂಪ ಮತ್ತು ಸ್ವಾರ್ಥತ್ಯಾಗ-ಇವೇ ಮಾನವ ಜೀವನದ ಧರ್ಮ ದೀಪಗಳು. ಸಂಕಟ ನಮಗೆಲ್ಲರಿಗೂ ಸಾಮಾನ್ಯವಾದದ್ದು. ಸಂಕಟದಲ್ಲಿರುವವರಲ್ಲಿ ಅನುತಾಪ, ಅನುಕಂಪವೇ ಮಾನವೀಯ ಗುಣ. ದುಃಖದಿಂದ ಬಿಡುಗಡೆ ಹೊಂದಲು ಮಾನವನಿಗೆ ಇರುವ ದಾರಿ ಒಂದೇ. ಅದು ಸ್ವಾರ್ಥತ್ಯಾಗ. ಚಿತ್ತದಮನದಿಂದ ಚಿತ್ತಸ್ವಾಸ್ಥ್ಯ ದೊರೆಯುವುದು. ಚಿತ್ತಸ್ವಾಸ್ಥ್ಯವನ್ನು ಹಲವು ಬಗೆಯಾಗಿ ಏರ್ಪಡಿಸಿಕೊಳ್ಳಬಹುದು. ಕಲೋಪಾಸನೆ ಅದಕ್ಕೆ ಒಂದು ಉಪಾಯ. ಎಲ್ಲವೂ ದುಃಖಮಯವೆಂಬ ತತ್ತ್ವಚಿಂತನೆ ಎರಡನೆಯ ಉಪಾಯ. ಕಲೋಪಾಸನೆ ಒಂದು ಕ್ಷಣ ಮಾತ್ರ ನಮಗೆ ಶಾಂತಿ ಕೊಡುತ್ತದೆ. ಕಲಾ ಧ್ಯಾನದಿಂದ ನಮ್ಮ ಮನಸ್ಸು ಮರಳಿದಾಗ ಪುನಃ ಈ ಸಂಕಟದ ಪ್ರಪಂಚ ಕಾಣಿಸಿಕೊಳ್ಳುತ್ತದೆ. ತತ್ತ್ವಚಿಂತನೆ ಕೂಡ ಸ್ಥಿರಶಾಂತಿಯನ್ನು ಕೊಡುವುದಿಲ್ಲ. ಸ್ಥಿರಶಾಂತಿ ಸಂನ್ಯಾಸದಿಂದಲೇ ಸಾಧ್ಯ. ಬುದ್ಧನಂತೆ ಚಿತ್ತವನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಬೇಕು. ನಿರಂತವಾದ ತಾಪಸ್ಯ ನಡೆಸಿದಾಗ ಚಿತ್ತದ ಸಂಕೋಲೆ ಕ್ರಮಕ್ರಮವಾಗಿ ಕಳಚಿಬಿದ್ದು, ಚಿತ್ತರಹಿತ ನಿರ್ಮಾಣ ಲಭಿಸುತ್ತದೆ. ನಿರ್ಮಾಣವೇ ಪರಮಸಿದ್ಧಿ. ಷೋಪೆನ್‍ಹೌರಿಗೆ ಭಾರತೀಯ ಸನ್ಯಾಸದ ಜೀವನ ತುಂಬ ಮೆಚ್ಚಿನದಾಗಿ ಕಂಡಿತು. ಆದರೆ ಭಾರತದ ದರ್ಶನಗಳೆಲ್ಲ ನಿರಾಶಾದರ್ಶನಗಳೆಂದು ಆತ ಬಗೆದಿದ್ದ. ಅವನಿಗೆ ಭಾರತದ ತತ್ತ್ವ ಸ್ವಲ್ಪ ತಿಳಿದಿದ್ದೇ ಅದಕ್ಕೆ ಕಾರಣ. ಭಾರತದ ತತ್ತ್ವ ಪಾಶ್ಚಾತ್ಯ ತಾತ್ತ್ವಿಕರನ್ನು ಪ್ರಚೋದನೆಗೊಳಿಸಲು ಪ್ರಾರಂಭಿಸಿದ್ದು ಈ ಕಾಲದಲ್ಲೇ.

ಫ್ರೆಡರಿಚ್ ನೀಚೆ : (1844-1900). ಈತನೂ ಜರ್ಮನಿಯವನೇ. ಬಾನ್ ಮತ್ತು ಲೀಪ್ಜಿಗ್ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾಭ್ಯಾಸ ಮುಗಿಸಿ ಸ್ವಿಟ್ಜರ್‍ಲೆಂಡಿನ ಪ್ರಜೆಯಾದ. ಅಲ್ಲಿ ಬಾಸೆಲ್ ವಿಶ್ವವಿದ್ಯಾನಿಲಯದಲ್ಲಿ ಗ್ರೀಕ್ ತತ್ತ್ವಾಧ್ಯಾಪಕನಾದ. ಕ್ರೈಸ್ತಮತ ತತ್ತ್ವವನ್ನು ಬಲವಾಗಿ ಖಂಡಿಸಿದ ಆಧುನಿಕ ತಾತ್ತ್ವಿಕರಲ್ಲಿ ಇವನೇ ಮೊದಲನೆಯವ. ಷೋಪೆನ್‍ಹೌರ್‍ನ ತತ್ತ್ವದಲ್ಲಿ ನೀಚೆಗೆ ಮೊದಲ ಆದರವಿತ್ತು. ಆದರೆ ತನ್ನ ತತ್ತ್ವ ಬೆಳೆದಂತೆಲ್ಲ ಷೋಪೆನ್‍ಹೌರ್‍ನ ನಿರಾಶಾವಾದವನ್ನು ತ್ಯಜಿಸಿದ. ಜೀವನದಲ್ಲಿ ಸಂಕಟವುಂಟೆಂದು ಒಪ್ಪಿಕೊಂಡರೂ ಮಾನವ ಚಿತ್ತಕ್ಕೆ ಅದನ್ನು ಗೆಲ್ಲುವ ಶಕ್ತಿ ಇದೆ ಎಂದು ವಾದಿಸಿದ. ಅವನ ತತ್ತ್ವ ಜೀವನಿರಾಕರಣೆಯದಲ್ಲ. ಜೀವಸ್ಥಿರೀಕರಣದ್ದು. ಸಂಕಟವನ್ನು, ಕಷ್ಟವನ್ನು ಎದುರಿಸುವ ಶಕ್ತಿ ಚಿತ್ತಕ್ಕಿದೆ ಎಂದು ಆತ ಸಮರ್ಥಿಸಿದ. ಮೊದಲಲ್ಲಿ ಮಾನವನ ಭಾವೋದ್ರೇಕ ಸ್ವಭಾವವೂ (ಡಯೊನೀಸಿನ್ ಸ್ವಭಾವ) ಸಂಯಮ ಸ್ವಭಾವವೂ (ಅಪಾಲೋವಿನ ಸ್ವಭಾವ) ಪರಸ್ಪರ ವಿರುದ್ಧವೆಂದು ಅವನು ಬಗೆದಿದ್ದ. ಇವೆರಡೂ ಸಮನ್ವಯವಾಗುವುದು ಸಾಧ್ಯ. ಹಾಗೆ ಸಮನ್ವಯವಾದಾಗಲೇ ಮಾನವ ತನ್ನ ನಿಜಸ್ವರೂಪವನ್ನು ತಿಳಿದುಕೊಳ್ಳುವುದು. ಆಗ ಮಾನವನಿಗೆ ತನ್ನ ಘನತೆಯ ಅರಿವಾಗುತ್ತದೆ, ಅವನಲ್ಲಿ ಆತ್ಮಗೌರವ ಆತ್ಮಪ್ರತ್ಯಯಗಳು ಹುಟ್ಟುತ್ತವೆ. ಅವನ ಚಿತ್ತ ವೀರಚಿತ್ತವಾಗುತ್ತದೆ. ಷೋಪೆನ್‍ಹೌರ್ ಬಗೆದಿದ್ದಂತೆ ಜೀವವನ್ನು ಕಾಪಾಡಿಕೊಳ್ಳುವುದೊಂದೇ ಚಿತ್ತದ ಗುರಿಯಲ್ಲ. ಜೀವನದಲ್ಲಿ ಶಕ್ತಿ ವರ್ಧಿಸುವಂತೆ ಬಾಳುವುದೇ ಅಪಾಯವನ್ನು ಧೈರ್ಯವಾಗಿ ಎದುರಿಸಿ, ಅದನ್ನು ಜಗ್ಗಿಸುವುದೇ ಚಿತ್ತಿದ ಗುರಿ. ಮಾನವ ಸಾಧಾರಣ ಪುರುಷಾರ್ಥಗಳಿಗೆ ಶರಣನಾಗದೆ, ಅವುಗಳನ್ನು ಮಾತ್ರ ಸಾಧಿಸಿ ತೃಪ್ತನಾಗಿರದೆ ಹೊಸ ಪುರುಷಾರ್ಥಗಳನ್ನು ಸಾಧಿಸಬೇಕು. ಕಲಿಯಾಗಬೇಕು, ಕಲೆಗಾರನಾಗಬೇಕು, ಪ್ರಕೃತಿಯ ಮರ್ಮವನ್ನು ಛೇದಿಸಬೇಕು. ಮಾನವನ ಜೀವನವನ್ನು ಹೊಸಮಟ್ಟಕ್ಕೆ ಎತ್ತಬೇಕು. ಹಾಗೆ ಜೀವನದ ಮಟ್ಟವನ್ನು ಏರಿಸಿದ ಮಾನವ ಅತಿಮಾನವ (ಸೂಪರ್‍ಮ್ಯಾನ್). ಕಲ್ಲಿನಲ್ಲಿದ್ದ ಶಕ್ತಿ ಪ್ರಬಲಿಸಿ, ಅದಕ್ಕಿಂತ ಮೇಲ್ಮಟ್ಟದ ಸಸ್ಯ ಹುಟ್ಟಿತು. ಸಸ್ಯದಲ್ಲಿದ್ದ ಚಿತ್ತಶಕ್ತಿ ಬೆಳೆದು, ಅದಕ್ಕಿಂತ ಮೇಲ್ಮಟ್ಟದ ಪ್ರಾಣಿಗಳು ಹುಟ್ಟಿದುವು. ಪ್ರಾಣಿಗಳಲ್ಲಿ ಅಂತರ್ಗತವಾದ ಚಿತ್ತಶಕ್ತಿ ಬೆಳೆದು ಮೇಲಿನ ಹಂತದ ಮಾನವನಾದ. ಹೀಗೆ ಪ್ರಕೃತಿಯ ಉದ್ದಕ್ಕೂ ಜೀವನವನ್ನು ಹೊಸ ಮಟ್ಟಕ್ಕೆ ಏರಿಸುವ ಸಾಹಸ ಎದ್ದು ಕಾಣಿಸುತ್ತದೆ. ಮಾನವರಾದರೋ ಕೇವಲ ಮೃಗಗಳಂತೆ ವಾಸನಾಜೀವಿಯಾಗಿ ಮೃಗಗಳ ದರ್ಜೆಗೆ ಇಳಿಯಲು ಪ್ರಯತ್ನಿಸುತ್ತಿದ್ದಾನೆ. ಇದನ್ನು ತಡೆಯಬೇಕು. ಮಾನವ ಹೊಸ ಶಕ್ತಿಯನ್ನು ಹುಟ್ಟಿಸಿಕೊಳ್ಳಬೇಕು. ಕೇವಲ ಹಣಗಳಿಸುವುದನ್ನು ಬಿಟ್ಟು ಸೃಷ್ಟ್ಯಾತ್ಮಕ ಜೀವನ ನಡೆಸಬೇಕು. ಅತಿಮಾನವನಾಗಬೇಕು. ಇಂಥ ಅತಿಮಾನವರು (ಜೀನಿಯಸ್) ಹಿಂದೆ ಕೇವಲ ಕೆಲವರಿದ್ದರು. ಅವರು ಜೀವನದ ಮಟ್ಟವನ್ನು ಏರಿಸಿದರು. ಇಂಥವರು ಈಗ ಹೆಚ್ಚಾಗಿ ಹುಟ್ಟಿಕೊಳ್ಳದಿದ್ದರೆ ಮಾನವ ಅಧೋಗತಿಗೆ ಇಳಿಯುತ್ತಾನೆ. ನೀಚೆಯ ತತ್ತ್ವ ಇಲ್ಲಿ ಭಾರತದ ಶಕ್ತಿ ತತ್ತ್ವವನ್ನು ಹೋಲುತ್ತದೆ.

ಕ್ರೈಸ್ತಧರ್ಮ ದಾಸ್ಯಧರ್ಮವೆಂದು ನೀಚೆ ತಿರಸ್ಕರಿಸುತ್ತಾನೆ. ನಮ್ರತೆಯೇ (ಹ್ಯಮಿಲಿಟಿ). ಪರಮನೀತಿ ದಾಸ್ಯ ಭಾವವೇ ಪರಮಮತವೆಂದು ಸಾರಿ ಕ್ರೈಸ್ತಧರ್ಮ ಮಾನವನ ಘನತೆಯನ್ನು ಇಳಿಸಿದೆ. ದೈವಂ ನಿಹತ್ಯ ಕುರುಪೌರುಷಮಾತ್ಮ ಶಕ್ತಿಯಾದ ದೇವರನ್ನು ಹೊರದೂಡಿ ಆತ್ಮ ಅವಲಂಬನೆಯಿಂದ ಪೌರುಷಶಾಲಿಯಾಗು ಎಂದು ಘೋಷಿಸಿದೆ. ಪೌರುಷವುಳ್ಳವನೇ ಪುರುಷನೆಂದು ಕರೆದುಕೊಳ್ಳಲು ಯೋಗ್ಯ. ಇತರರಲ್ಲಿ ಅನುಕಂಪ ತೋರಿಸಿದರೆ ಅವರಾಗಲಿ, ನಾವಾಗಲಿ ಏನನ್ನು ಸಾಧಿಸಿದಂತಾಯಿತು. ನಿಜವಾಗಿ ನಮ್ಮ ಜೊತೆಗಾರರನ್ನು ಪ್ರೀತಿಸುವುದಾದರೆ ನಿರ್ಬಲರಾದವರನ್ನು ಬಲಿಷ್ಠರನ್ನಾಗಿ ಮಾಡಬೇಕು, ಇದು ತತ್ತ್ವ. ಇದು ನೀತಿ. ಇದು ಜೀವನದ ಪರಮ ಪುರುಷಾರ್ಥ. ಈ ದೃಷ್ಟಿಯಿಂದ ಹಳೆಯ ಪುರುಷಾರ್ಥಗಳನ್ನು ಖಂಡಿಸಿ ಹೊಸ ಪುರುಷಾರ್ಥಗಳನ್ನು ಸೃಷ್ಟಿಸಿಕೊಳ್ಳಬೇಕು. ಆತ್ಮತೇಜೋಬಲಂ ಬಲಂ ಎಂದು ಸಾರುವ ಹೊಸ ವಿಶ್ವಾಮಿತ್ರ-ನೀಚೆ.

ಷೋಪನ್‍ಹೌರ್‍ನಂತೆ ವೈಚಾರಿಕ ಚೇತನವನ್ನು ನೀಚೆ ಅಲ್ಲಗಳೆಯುವುದಿಲ್ಲ. ಅದು ಅಂತಿಮ ಗುರಿಯಾದ ಶೀಲಶ್ರೀಮಂತಿಕೆಯನ್ನೂ ಭಾವಸೌಷ್ಠವವನ್ನೂ ಚಿರಂತ ಆನಂದವನ್ನೂ ಪಡೆಯಲು ಅತ್ಯಗತ್ಯವಾದ ಸಾಧನ. ವಿಚಾರಬಲದಿಂದ ಮಾತ್ರವೇ ಉದ್ರೇಕಭಾವಗಳನ್ನು ಪುಟವಿಟ್ಟು ಉನ್ನತವಾಗಿಸಲು, ಉದಾತ್ತವಾಗಿಸಲು ಸಾಧ್ಯ. ಭಕ್ತಿ, ಭಕ್ತಿ ಎಂದು ಹೇಳುವ ಕ್ರೈಸ್ತಮತ ಮಾನವನನ್ನು ಕೀಳಾಗಿಮಾಡಿದೆ. ವಿಚಾರ ಬಲವಿಲ್ಲದೆ ಯಾವ ಬಗೆಯ ಸೃಷ್ಟಿಯೂ ಸಿದ್ಧಿಸದು.

ಸತ್ತಿನ ವಿಚಾರವಾಗಿ ನೀಚೆಯ ತತ್ತ್ವ ಲೈಬ್ನಿಟ್ಸ್‍ನ ಮೋನ್ಯಾಡ್ ತತ್ತ್ವವನ್ನು ಹೋಲುತ್ತದೆ. ವಿಶ್ವ ಒಂದು ವಸ್ತುವಿನಿಂದ ಹುಟ್ಟಿದ್ದಲ್ಲ. ಅದು ಅನೇಕ ಸತ್ವಯುತವಾದ ತೇಜಃಪುಂಜವಾದ ಆತ್ಮಗಳಿಂದ ಕೂಡಿದೆ. ಆತ್ಮಗಳೆಂದರೆ ಮಾನವ ಆತ್ಮಗಳೆಂದೂ ತಿಳಿಯಕೂಡದು. ನೀಚೆಯದು ಜೈನರ ವಾದದಂತೆ. ಅಣುವಿನಿಂದ ಹಿಡಿದು ಮಾನವನವರೆಗೆ ಎಲ್ಲವೂ ಆತ್ಮವೆಂಬ ಸರ್ವಾತ್ಮವಾದ. ಒಂದೊಂದು ಆತ್ಮವೂ ತನ್ನ ಶಕ್ತಿಯನ್ನು, ತನ್ನ ದರ್ಶನವನ್ನು ಹೆಚ್ಚಿಸಿಕೊಳ್ಳಲು, ಉನ್ನತಗೊಳಿಸಲು, ಉದಾತ್ತಗೊಳಿಸಲು ಮಿಡಿಯುತ್ತಿದೆ. ಪ್ರತಿಯೊಂದು ಎಲ್ಲದರೊಡನೆ ಸಂಬಂಧ ಹೊಂದಿದೆ. ಒಂದೊಂದು ತನ್ನದೇ ಆದ ನಿಟ್ಟಿನಿಂದ ಎಲ್ಲವನ್ನೂ ವೀಕ್ಷಿಸುತ್ತದೆ. ಆ ಒಂದೊಂದು ಕಣ್‍ನಿಲೆಯೂ (ಪರ್‍ಸ್ಪೆಕ್ಟಿವ್) ವಿಶ್ವದ ಪೂರ್ಣತೆಗೆ ಅಗತ್ಯ. ಯಾವ ಒಂದು ಕಣ್‍ನಿಲೆಯೂ ಇನ್ನೊಂದರ ಪ್ರತಿನಿಧಿಯಾಗಲಾರದು. ವಿಶ್ವ ವ್ಯಕ್ತಿತ್ವದಿಂದ ತುಂಬಿ ತುಳುಕುತ್ತಿದೆ. ವ್ಯಕ್ತಿವಿಶೇಷಗಳು ಭ್ರಮೆಗಳಲ್ಲ, ಅಗತ್ಯ ಸತ್ಯಗಳು. ಏನೇ ಬರಲಿ, ಸಾವೇ ಬರಲಿ ತನ್ನ ವ್ಯಕ್ತಿತ್ತ್ವವನ್ನು ಬಿಡುವುದಿಲ್ಲವೆಂಬ ಆತ್ಮಪ್ರತ್ಯಯವುಳ್ಳ ಮಾನವರಿದ್ದುದರಿಂದಲೇ ಮಾನವಜೀವನ ಒಂದು ಹೊಸ ಮಟ್ಟವನ್ನು ಮುಟ್ಟಲು ಸಾಧ್ಯವಾದದ್ದು. ನೀಚೆ ಇದನ್ನೆಲ್ಲ ಪಾರಸಿಕ ಮತಸ್ಥಾಪಕನಾದ ಜರತುಷ್ಟ್ರನ ಹೆಸರಿನಲ್ಲಿ ಆಡಿರುತ್ತಾನೆ. ದಸ್‍ಸ್ಪೇಕ್ ಜರತುಷ್ಟ್ರ-ಎಂಬುದು ಅವನ ಮುಖ್ಯ ಗ್ರಂಥ. ಅವನ ತತ್ತ್ವ ಸಿಮ್ಮೆಲ್, ಷೇಲರ್, ಜಾಸ್ಪರ್ಸನ್, ಹೈಡಿಗ್ಗರ್ ಮುಂತಾದ ಈಚಿನ ತಾತ್ತ್ವಿಕರನ್ನು ಪ್ರಚೋದನೆಗೊಳಿಸಿದೆ. (ಜಿ.ಎಚ್.)