ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆನೆ

ವಿಕಿಸೋರ್ಸ್ದಿಂದ

ಆನೆ ಪ್ರಬಾಸಿಡಿಯಾ ಕುಲಕ್ಕೆ ಸೇರಿದ ಸ್ತನಿ. ಜೀವಂತ ಭೂಚರ ಪ್ರಾಣಿಗಳಲ್ಲಿ ಅತಿ ದೊಡ್ಡದು. ಸದ್ಯಕ್ಕೆ ಜೀವಿಸುತ್ತಿರುವ ಆಫ್ರಿಕಾದ ಆನೆ, ಲೋಕ್ಯೊಡಾಂಟ ಆಫ್ರಿಕಾನ ಮತ್ತು ಏಷ್ಯದ ಆನೆ, ಎಲಿಫಾಸ್ ಮ್ಯಾಕ್ಸಿಮಸ್ ಎಲಿಪ್ಯಾಂಟಿಡಿ ಜಾತಿಯ ಪ್ರಭೇದಗಳು. ಇವೆರಡಕ್ಕೂ ಎತ್ತರದಲ್ಲೂ ಕಿವಿ ಮತ್ತು ದಂತ ರಚನೆಯಲ್ಲೂ ಸಾಕಷ್ಟು ವ್ಯತ್ಯಾಸಗಳಿವೆ. ಏಷ್ಯದ ಆನೆಗಳು ಇಂಡಿಯ, ಬರ್ಮ, ಮಲಯ, ದಕ್ಷಿಣ ವಿಯೆಟ್ನಾಂ, ಸಿಂಹಳದ್ವೀಪ, ಸುಮಾತ್ರಗಳಲ್ಲಿ ಇವೆ; ಆಫ್ರಿಕಾದ ಆನೆಗಳು ಸಹರ ಮರುಭೂಮಿಯ ದಕ್ಷಿಣಕ್ಕಿರುವ ಆಫ್ರಿಕ ಖಂಡದ ಪ್ರದೇಶಗಳಲ್ಲಿ ವಾಸಿಸುತ್ತವೆ. ಕಾಡುಪ್ರದೇಶ, ಹುಲ್ಲುಗಾವಲು, ಕಣಿವೆ ಪ್ರದೇಶಗಳು ಇವುಗಳ ವಾಸಸ್ಥಾನ.

ಆನೆಯ ಪೂರ್ವಚರಿತ್ರೆ : ಆನೆಯ ಪಳೆಯುಳಿಕೆಗಳು ಅಲೆಗೋಸಿನ್ ಕಾಲದಿಂದಲೂ ದೊರೆತಿವೆ. ಈ ಕಾಲದಲ್ಲಿ ಸಿಕ್ಕಿರುವುದು ಫಿಯೋಮಿಯ ಎಂಬ ಪ್ರಾಣಿಯ ಪಳೆಯುಳಿಕೆ. ಇದು ಆಫ್ರಿಕ ಖಂಡದಲ್ಲಿತ್ತು. ಇದಕ್ಕಾಗಲೆ ಮೇಲು ದವಡೆಯ ಕೋತಿ ಹಲ್ಲುಗಳು ಉದ್ದವಾಗಿದ್ದುವು. ಮೂತಿ ಬೆಳೆಯಲಾರಂಭಿಸಿತ್ತು. ಮುಂದೆ ಮಯೊಸೀನ್ ಕಾಲದಲ್ಲಿ ಟ್ರೈಲೊಪೊಡಾನ್ ಎಂಬ ಪ್ರಾಣಿಯ ಪಳೆಯುಳಿಕೆ ಸಿಕ್ಕಿದೆ. ಇದು ಫಿಯೋಮಿಯಾ ರೀತಿಯ ಜೀವಿಗಳಿಂದ ಹುಟ್ಟಿಬಂದಿರಬೇಕೆಂದು ಅಭಿಪ್ರಾಯಪಡಲಾಗಿದೆ. ಇದು ಇಂದಿನ ಆನೆಯಷ್ಟೇ ದೊಡ್ಡದಾಗಿತ್ತು. ಆದರೆ ಇದರ ಕೆಳದವಡೆ ಬಹಳ ದೊಡ್ಡದು. ಮತ್ತಿತರ ಶರೀರ ರಚನೆಗಳು ಇಂದಿನ ಆನೆಯಂತೆಯೇ ಇದ್ದುವು.

ಫಿಯೋಮಿಯಾದಿಂದ ಹುಟ್ಟಿಬಂದ ಜೀವಿಗಳು ಪರಿಸರದ ಪ್ರಭಾವಕ್ಕೊಳಗಾಗಿ ವಿಕಾಸ ಹೊಂದಿ ಪ್ಲಿಯೊಸಿನ್ ಕೊನೆಯ ಭಾಗದಲ್ಲಿ ಸ್ಟೀಗೋಡಾಂಟ ಎಂಬ ಜೀವಿಗಳನ್ನು ಕೊಟ್ಟವು. ಈ ಸ್ಟೀಗೋಡಾಂಟಗಳಿಂದಲೇ ಇಂದಿರುವ ಆಫ್ರಿಕದ ಆನೆಗಳು ಮತ್ತು ಏಷ್ಯದ ಆನೆಗಳು ಹುಟ್ಟಿಬಂದಿವೆ. ಇವೆರಡರ ಜೊತೆಯಲ್ಲಿಯೇ ಹುಟ್ಟಿ ಬಂದ ಮ್ಯಾಮಾಥ್ಸ್ ಎಂಬ ಗಜಗಳು ಗ್ಲೈಸ್ಟೊಸೀನ್ ಕೊನೆಯ ಭಾಗದಲ್ಲಿಯೇ ನಾಶವಾದುವು.

ಇಂಡಿಯ ದೇಶದ ಆನೆಗಳ ತಲೆ ದೊಡ್ಡವು. ಕಿವಿ ಕಣ್ಣುಗಳು ಚಿಕ್ಕವು. ಸೊಂಡಿಲು ಬುಡದಲ್ಲಿ ದೊಡ್ಡದಾಗಿಯೂ ತುದಿಯಲ್ಲಿ ಚಿಕ್ಕದಾಗಿಯೂ ಇದೆ. ಮುಂದಿನ ಕಾಲುಗಳಲ್ಲಿ ಐದೈದು ಉಗುರುಗಳು, ಹಿಂದಿನ ಕಾಲುಗಳಲ್ಲಿ ನಾಲ್ಕು ನಾಲ್ಕು ಉಗುರುಗಳು ಒಟ್ಟು ನಾಲ್ಕು ಕಾಲುಗಳಿಂದ 18 ಉಗುರುಗಳಿವೆ. ಗಂಡು ಆನೆಗಳಿಗೆ ಮೇಲಿನ ದವಡೆಯಲ್ಲಿ ಎರಡು ದೊಡ್ಡ ದಂತಗಳಿವೆ. ಆದರೆ ಹೆಣ್ಣು ಆನೆಗಳಿಗೆ ದಂತಗಳು ಇರುವುದಿಲ್ಲ. ಕೆಲವು ಗಂಡು ಆನೆಗಳಿಗೂ ದಂತಗಳು ಇರುವುದಿಲ್ಲ. ಅಂಥವನ್ನು ಮಖನ ಎಂದು ಕರೆಯುತ್ತಾರೆ. ಇಂಡಿಯಾದ ಆನೆಗಳಿಗೆ ಬೆನ್ನು ಮಧ್ಯೆ ಉಬ್ಬಿದೆ. ಕಪ್ಪು ಮಿಶ್ರಿತ ಬೂದಿ ಬಣ್ಣ. ವಯಸ್ಸಾಗುತ್ತ ಬಂದಾಗ ಮುಖದ ಚರ್ಮದ ಮೇಲೆ, ಸೊಂಡಿಲ ಬುಡದಲ್ಲಿ, ಮತ್ತು ಕಿವಿಗಳ ಮೇಲೆ ಬಿಳಿ ಮಚ್ಚೆಗಳು ಕಂಡುಬರುತ್ತವೆ. ಬಿಳಿ ಆನೆಗಳು ಇರುವುವೆಂದು ಪ್ರತೀತಿ ಉಂಟು. ಇವೆಲ್ಲ ಅಸಹಜವಾದ ಬಿಳುಪು ಬಣ್ಣದ ದೇಹವುಳ್ಳ (ಆಲ್ಬಿನೋಸ್) ಆನೆಗಳು. ಇಂಥ ಆನೆಗಳನ್ನು ಬರ್ಮ ಮತ್ತು ಸಯಾಂ ದೇಶಗಳಲ್ಲಿ ಬಹಳ ಪವಿತ್ರವೆಂದು ಪರಿಗಣಿಸುತ್ತಾರೆ.

ಗಂಡು ಆನೆಗಳ ಎತ್ತರ 9'-10.5' ವರೆಗೂ ಇದೆ. ಆದರೆ ಹೆಣ್ಣು ಆನೆಗಳ ಎತ್ತರ 8.5' ಮೇಲೆ ಇರುವುದಿಲ್ಲ. 8.5' ಗಿಂತ ಎತ್ತರವಿರುವ ಹೆಣ್ಣು ಆನೆಗಳು ಬಹಳ ವಿರಳ. 8' ಎತ್ತರದ ಗಂಡು ಆನೆಯ ಭಾರ ಸುಮಾರು 3 ಟನ್; 9'ಎತ್ತರದ್ದರ ಭಾರ 4-4.5 ಟನ್; 10' ಗಿಂತ ಹೆಚ್ಚು ಎತ್ತರದ ಆನೆಯ ಭಾರ 5.5-6.5 ಟನ್‍ವರೆಗೆ.

ಆನೆಯ ದಂತಗಳು : 5' ಉದ್ದ 16' ಬುಡದ ಸುತ್ತಳತೆ ಇರುವ ದಂತಗಳ ತೂಕ ಸುಮಾರು 38 ಕಿ.ಗ್ರಾಂ.; 8' ಉದ್ದ, 16' ಬುಡದ ಸುತ್ತಳತೆ ಇರುವ ದಂತಗಳ ತೂಕ ಸುಮಾರು 45 ಕಿ.ಗ್ರಾಂ. ಕೆಲವು ದಂತಗಳ ಭಾರ 50-75 ಕಿ.ಗ್ರಾಂ.ಗಳವರೆಗೂ ಇರುವುದು. ಗಂಡು ಆನೆಗಳು ಬಲಿಯಬೇಕಾದರೆ ಕನಿಷ್ಠ ಪಕ್ಷ 25 ವರ್ಷಗಳಾಗಬೇಕು. ಆದರೆ ಹೆಣ್ಣು ಆನೆಗಳಿಗೆ 20 ವರ್ಷಗಳು ಸಾಕು. ಆದರೆ ಪ್ರಬುದ್ಧಾವಸ್ಥೆಗೆ ಬರುವ ವಯಸ್ಸು ಹಲವು ಅಂಶಗಳ ಮೇಲೆ ಅವಲಂಬಿತವಾಗಿದ್ದು ಗುಂಪು ಹಾಗೂ ಪ್ರದೇಶಗಳ ನಡುವೆ 5 - 6ವರ್ಷಗಳ ವತ್ಯಾಸ ಕಂಡುಬರುತ್ತದೆ. ಇನ್ನು ಸಾಕಷ್ಟು ಅಧ್ಯಯನಗಳು ಈ ನಿಟ್ಟಿನಲ್ಲಿ ನಡೆಯಬೇಕಿದೆ. ಸಾಧಾರಣವಾಗಿ ಆನೆ 100-150 ವರ್ಷಗಳವರೆವಿಗೂ ಜೀವಿಸುತ್ತದೆ. ಪ್ರಬುದ್ಧಾವಸ್ಥೆ ತಲುಪಿದ ಗಂಡಾನೆಗಳಲ್ಲಿ ಮುಖದ ಒಂದು ಭಾಗದಲ್ಲಿ ಮಸ್ತ್ ದ್ರವ ಸೋರುತ್ತದೆ. ಈ ಸಮಯದಲ್ಲಿ ಅವು ಉದ್ರೇಕಿತ ಅವಸ್ಥೆಯಲ್ಲಿದ್ದು, ಕೆಲವು ವಿಶೇಷ ನಡವಳಿಕೆಗಳನ್ನು ತೊರುತ್ತವೆ. ಆನೆಗಳಲ್ಲಿ ಶೇಖಡ 95ರಷ್ಟು ಸ್ತನಿಗಳಲ್ಲಿರುವಂತೆ ಬಹುಪತ್ನಿತ್ವ ವ್ಯವಸ್ಥೆ ಇದ್ದು, ಒಂದು ಆನೆ ಹಲವಾರು ಹೆಣ್ಣುಗಳೊಂದಿಗೆ ಕೂಡುತ್ತದೆ.

ಆಫ್ರಿಕದ ಆನೆಗಳು ಇಂಡಿಯಾದ ಆನೆಗಳಿಗಿಂತ ಬಹಳ ಎತ್ತರ. ಅವುಗಳ ಕಿವಿಗಳು ತುಂಬ ದೊಡ್ಡವು. ಹಣೆ ಉಬ್ಬಿಕೊಂಡಿರುತ್ತದೆ. ಕಣ್ಣುಗಳು ದೊಡ್ಡವು ಮತ್ತು ಸೊಂಡಿಲ ತುದಿಯಲ್ಲಿ ಎರಡು ಬೆರಳುಗಳು ಹಿಂದೊಂದು ಮುಂದೊಂದು ಇವೆ. ಈ ಆನೆಗಳ ಬೆನ್ನಿನ ಮಧ್ಯಭಾಗ ತಗ್ಗಾಗಿದೆ. ಹಿಂದಿನ ಕಾಲುಗಳಲ್ಲಿ ನಾಲ್ಕು ನಾಲ್ಕು ಉಗುರುಗಳಿಗೆ ಬದಲಾಗಿ ಮೂರು ಮೂರು ಉಗುರುಗಳಿವೆ. ಗಂಡು ಹೆಣ್ಣು ಆನೆಗಳೆರಡಕ್ಕೂ ದಂತಗಳಿವೆ. ಇವು ಇಂಡಿಯಾದ ಆನೆಗಳ ದಂತಗಳಿಗಿಂತ ಬಹಳ ದೊಡ್ಡವಾಗಿಯೂ ಮತ್ತು ದಪ್ಪನಾಗಿಯೂ ಇವೆ. ಪೂರ್ವ ಮತ್ತು ಉತ್ತರ ಅಬಿಸೀನಿಯ ದೇಶಗಳಲ್ಲಿರುವ ಆನೆಗಳಿಗೆ ದಂತಗಳೇ ಇರುವುದಿಲ್ಲ.

ಆಫ್ರಿಕದ ಕೆಲವು ಪ್ರದೇಶಗಳಲ್ಲಿರುವ ಆನೆಗಳು ಒಂದಕ್ಕೊಂದು ತಮ್ಮ ಶರೀರದ ಬೆಳೆವಣಿಗೆ ಮತ್ತು ಆಕೃತಿಯಲ್ಲೂ ದಂತಗಳ ಬೆಳೆವಣಿಗೆಗಳಲ್ಲೂ ಮತ್ತು ಕೆಲವು ಕಿವಿಗಳ ಆಕಾರದಲ್ಲೂ ವ್ಯತ್ಯಾಸ ಹೊಂದಿವೆ. ಆಫ್ರಿಕದ ಆನೆಗಳ ಎತ್ತರ 10-11.5 ವರೆಗೆ ಇದೆ. 10 ಎತ್ತರದ ಆನೆಯ ಭಾರ 4.5 ಟನ್; 11 ಯದರ ಭಾರ 6.5 ಟನ್. ಸೂಡಾನ್ ಆನೆಗಳ ದಂತಗಳ ಭಾರ 70ಕಿ.ಗ್ರಾಂ. ಪೌಂಡುಗಳು. ಉದ್ದ 9'4. ಬುಡದ ಸುತ್ತಳತೆ 20.5 ಇರುವ ದಂತಗಳ ಭಾರ 80 ಕಿಗ್ರಾಂ. ಸುತ್ತಳತೆ 20.5 ಉದ್ದ 10.2 ಇರುವ ಕೊಂಬುಗಳ ಭಾರ 114 ಕಿಗ್ರಾಂಗಳು.

ಆನೆ ಶಾಖಾಹಾರಿ, ಗಿಡಮರಗಳ ಎಲೆ, ಎಳೆಸಾದ ಕೊಂಬೆಗಳು, ಬಿದಿರು, ಮರದ ತೊಗಟೆ, ಜೊಂಡಿನಂಥ ಹುಲ್ಲು ಮತ್ತು ಹಣ್ಣುಗಳು ಇದರ ಆಹಾರ. ಈ ದೊಡ್ಡ ಪ್ರಾಣಿಗೆ ಆಹಾರ ಅಧಿಕಪ್ರಮಾಣದಲ್ಲಿ ಬೇಕು. ಆದ್ದರಿಂದ ಇವು ಆಹಾರಕ್ಕಾಗಿ ಬಹು ದೂರ ಸಂಚರಿಸುತ್ತವೆ. ವೇಗ ಒಂದು ಗಂಟೆಗೆ ಸುಮಾರು 24 ಕಿ.ಮೀ. ನದಿಗಳನ್ನೂ ಕೆರೆಗಳನ್ನೂ ಈಸಿ ದಾಟುತ್ತವೆ. ಆನೆಯ ಕಾಲು ವಿಶಾಲವಾದ ಮೆತ್ತೆಯಂಥ ಹಿಗ್ಗುವ ಪಾದಗಳಿಂದ ಕೂಡಿದೆ; ಮೈಭಾರವನ್ನು ಚೆನ್ನಾಗಿ ಹೊರುತ್ತವೆ. ಮಿಕ್ಕ ಪ್ರಾಣಿಗಳಲ್ಲಿರುವಂತೆ ಆನೆಗೆ ಕಾಲಿನ ಹರಡಿನಲ್ಲಿ ಕೀಲು ಇಲ್ಲ. ಮಂಡಿಯನ್ನು ಮಾತ್ರ ಇದು ತಗ್ಗಿಸಬಲ್ಲದು. ಇತರ ಸ್ತನಿಗಳಲ್ಲಿ ಇರುವುದಕ್ಕಿಂತ ಆನೆಯಲ್ಲಿ ಹಲ್ಲುಗಳ ಸಂಖ್ಯೆ ಕಡಿಮೆ. ಇದರ ದಂತಸೂತ್ರ ಬಾಚಿಹಲ್ಲು 1/0, ಕೋರೆಹಲ್ಲು 0/0, ದವಡೆ ಹಲ್ಲು 6/6=26. ಪ್ರತಿದವಡೆಯ ಅರ್ಧಭಾಗದಲ್ಲಿ ಒಂದು ಅಥವಾ ಎರಡು ಭಾರಿ ದವಡೆಹಲ್ಲುಗಳಿವೆ. ಮೇಲುದವಡೆಯಲ್ಲಿ ಎರಡು ನೀಳವಾಗಿ ಬೆಳೆದ ಬಾಚಿಹಲ್ಲುಗಳೇ ಆನೆಯ ದಂತಗಳು. ದಂತಗಳು ಸವೆದ ಹಾಗೆಲ್ಲಾ ಹಿಂದಿನಿಂದ ಬೆಳೆಯುತ್ತಲೇ ಇರುತ್ತವೆ.

ಹೆಣ್ಣು ಆನೆ 607-614 ದಿವಸಗಳ ಗರ್ಭಧಾರಣೆಯ ಅನಂತರ ಒಂದು ಮರಿಯನ್ನು ಈಯುತ್ತದೆ. ಮರಿ 2 ವರ್ಷಗಳ ತನಕ ತಾಯಿಯ ಪೋಷಣೆಯಲ್ಲಿರುತ್ತದೆ. ಮುಂಗಾಲುಗಳ ಹಿಂದೆ ಇರುವ ಎರಡು ಸ್ತನಗಳಿಂದ ಮರಿ ಸೊಂಡಿಲನ್ನು ಪಕ್ಕಕ್ಕೆ ಸರಿಸಿ ಬಾಯಿಂದ ಹಾಲು ಕುಡಿಯುತ್ತದೆ. ಮರಿಯಾನೆಗಳನ್ನು ರಕ್ಷಿಸುವಲ್ಲಿ ತಾಯಿಯ ಜೊತೆಗೆ ಆ ಗುಂಪಿನ ಇತರ ಹೆಣ್ಣಾನೆಗಳೂ ಸಹಕರಿಸುತ್ತವೆ, ಹುಟ್ಟಿದ ಒಂದು ಗಂಟೆಯೊಳೆಗೆ ಎದ್ದುನಿಂತು ತಾಯಿಯನ್ನು ಹಿಂಬಾಲಿಸುವ ಆನೆಯ ಮರಿಗಳು, ನಡಿಗೆಯ ಮೇಲೆ ಹಿಡಿತ ಸಾಧಿಸಲು ಕಾಲಾವಕಾಶ ಬೇಕಾಗುತ್ತದೆ. ಹುಟ್ಟಿದಾಗ ಕಣ್ಣಿನ ದೃಷ್ಟಿ ಕಡಿಮೆ ಇದ್ದು, ವಾಸನೆ ಹಾಗೂ ಸ್ಪರ್ಶದಿಂದ ತಾಯಿಯೊಂದಿಗೆ ಸಂಪರ್ಕವಿರಿಸಿಕೊಂಡಿರುತ್ತದೆ.

ಆನೆಗಳು ಯಾವಾಗಲೂ ಹಿಂಡುಹಿಂಡಾಗಿ ಸಂಚರಿಸುತ್ತವೆ. ಒಂದು ಹಿಂಡಿನಲ್ಲಿ ಸುಮಾರು 15-30ರವರೆಗೆ ಎಲ್ಲ ವಯಸ್ಸಿನ ಆನೆಗಳೂ ಇರುತ್ತವೆ. ಅಧಿಕ ವಯಸ್ಸಿನ ಹೆಣ್ಣಾನೆ ಹಿಂಡಿನ ಮುಂದಾಳುತನವನ್ನು ವಹಿಸುತ್ತದೆ. ಕೆಲವೊಮ್ಮೆ ಸಲಗ ಮದವೇರಿದಾಗ ರೊಚ್ಚಿಗೆದ್ದು ಅಪಾಯಕಾರಿಯಾಗಬಲ್ಲದು. ಸಾಮಾನ್ಯವಾಗಿ ಗಂಡಾನೆಗಳು ತಾವಾಗೆಯೇ ಗುಂಪಿನಿಂದ ಹೊರಬಂದು ಸ್ವತಂತ್ರ ಜೀವನ ನಡೆಸುತ್ತವೆ. ಆದರೆ, ಒಮ್ಮೊಮ್ಮೆ ಗುಂಪಿನಲ್ಲಿರುವ ರಕ್ಷಣೆಯನ್ನು ಕಳೆದುಕೊಳ್ಳಲು ಇಚ್ಛಿಸದೇ ಉಳಿಯುತ್ತವೆ. ಅಂಥ ಆನೆಗಳು ಹಿಂಡಿನಿಂದ ಹೊರದೂಡಲ್ಪಡುತ್ತವೆ. ಅಂತೆಯೇ ಬೇರೆ ಗುಂಪಿನಿಂದ ಬಂದ ಗಂಡಾನೆಯನ್ನು ಸ್ವಾಗತಿಸಲಾಗುತ್ತದೆ. ಇದರಿಂದ ಹತ್ತಿರದ ಸಂಬಂಧಿಗಳಲ್ಲಿ ಗರ್ಭಧಾರಣೆಯಾಗುವುದು ತಪ್ಪಿ ವಂಶ ಸಧೃಡವಾಗಿ ಬೆಳೆಯುತ್ತದೆ. ಗುಂಪಿನ ನಾಯಕಿಯಾದ ಹೆಣ್ಣಾನೆ ಇವನ್ನೆಲ್ಲಾ ಗಮನಿಸುತ್ತದೆ. ಆನೆಗಳಲ್ಲಿ ಕೌಟುಂಬಿಕ ಹಾಗೂ ಸಾಮಾಜಿಕ ಜೀವನ ವ್ಯವಸ್ಥೆಗಳಿದ್ದು, ಭಾವ ಪೂರ್ಣ ಜೀವನ ನಡೆಸುತ್ತವೆ. ಮರಿ ಆನೆಗಳನ್ನು ಗುಂಪಿನ ಮಧ್ಯದಲ್ಲಿಟ್ಟು ಕೊಂಡು ರಕ್ಷಿಸುತ್ತವೆ. ಗುಂಪಿನ ನಾಯಕಿಗೆ ತನ್ನ ಕಾಡಿನಲ್ಲಿ ವರ್ಷದ ಯಾವ ಯಾವ ಸಮಯದಲ್ಲಿ ಎಲ್ಲೆಲ್ಲಿ ಆಹಾರ ಸಿಗುತ್ತದೆ, ನೀರು ಎಲ್ಲಿದೆ ಎಂಬ ಮಾಹಿತಿ ತಿಳಿದಿರುತ್ತದೆ. ತನ್ನ ತಾಯಿಯಿಂದ ಕಲಿತ ಈ ಮಾಹಿತಿಯನ್ನು ತನ್ನ ಮರಿಗಳಿಗೆ ತಿಳಿಸಿಕೊಡುತ್ತದೆ. ಆನೆಗಳು ಸತ್ತ ಇತರ ಆನೆಗಳ ಎಲುಬುಗಳನ್ನು ಪರಿಶೀಲಿಸುವುದು ಕಂಡುಬಂದಿದ್ದು, ಇದು ಇವುಗಳಲ್ಲಿನ ಭಾವಜೀವಕ್ಕೆ ಪೂರಕವಾಗಿದ್ದು, ನೆನಪಿನ ಶಕ್ತಿಯ ಪ್ರತೀಕವಾಗಿದೆ.

ಆನೆಗಳು ಸ್ಪರ್ಶ, ಧ್ವನಿ ಹಾಗೂ ರಾಸಯನಿಯಗಳ ಹೊರಸೂಸುವಿಕೆಯಿಂದ ಇನ್ನೊಂದು ಆನೆ ಮತ್ತು ಗುಂಪಿನೊಂದಿಗೆ ಸಂಪರ್ಕವಿಟ್ಟುಕೊಂಡಿರುತ್ತವೆ. ಇತ್ತೀಚಿಗಿನ ಸಂಶೋಧನೆಗಳು ಆನೆಗಳು ಮನುಷ್ಯನಿಗೆ ಕೇಳದ ತರಂಗಾಂತರಗಳಲ್ಲೂ ಧ್ವನಿಯನ್ನು ಹೊರಡಿಸಿ ಸಂಪರ್ಕಿಸುವುದನ್ನು ಶ್ರುತ ಪಡಿಸಿವೆ.

ಏಷ್ಯದ ಆನೆಗಳು ಬಹಳ ಹಿಂದಿನಿಂದಲೂ ಮನುಷ್ಯನಿಗೆ ಉಪಯುಕ್ತ ಪ್ರಾಣಿಯೆನಿಸಿವೆ. ಕಾಡಾನೆಗಳನ್ನು ಪಳಗಿಸಿ ಮಠಮಾನ್ಯಗಳಲ್ಲಿ ಅರಮನೆಯಲ್ಲಿ ಗೌರವ ಸಂಕೇತವಾಗಿ ಸಾಕುತಿದ್ದರು. ರಣರಂಗದಲ್ಲಿ ಆನೆಗಳ ದಳವನ್ನೇ ಬಳಸುತ್ತಿದ್ದರು. ಈಗಲೂ ಕಾಡುಗಳಲ್ಲಿ ಮರದ ದಿಮ್ಮಿಗಳನ್ನು ಎಳೆಸಲು ಆನೆಯನ್ನು ಬಳಸುತ್ತಾರೆ. ಆನೆಗಳನ್ನು ಹಿಡಿದು ಅವುಗಳನ್ನು ಪಳಗಿಸುವುದು ಒಂದು ದೊಡ್ಡ ವಿದ್ಯೆ. ಇದು ಕೆಲವು ಜನಾಂಗಗಳ ಕುಲಕಸುಬು. ಇಂಡಿಯಾದಲ್ಲಿ ಮುಸಲ್ಮಾನರು ಮತ್ತು ಕಾಡುಕುರುಬರು ಬರ್ಮದಲ್ಲಿ ಕರೆನ್ಸ, ತಲ್ಮೆಸ್ ಮತ್ತು ಲೇಯಾನ್ ಎಂಬ ಜನಗಳು, ಸಿಲೋನ್‍ನಲ್ಲಿ ಮೂರ್ ಜನಗಳು ಆನೆಗಳನ್ನು ಹಿಡಿದು ಪಳಗಿಸುವುದರಲ್ಲಿ ಬಹಳ ಚೆನ್ನಾಗಿ ನುರಿತವರು.

ಆನೆಗಳನ್ನು ಹಿಡಿಯುವುದರಲ್ಲಿ ಮೂರು ವಿಧಾನಗಳುಂಟು. ಮೊದಲನೆಯದು ಖೆಡ್ಡಾ ಮಾಡಿ ಹಿಡಿಯುವುದು. ಆನೆಗಳು ಇರುವ ಕಾಡಿನ ಮಧ್ಯದಲ್ಲಿ ನೀರಿನ ಮತ್ತು ಮರಗಳ ನೆರಳಿನ ಅನುಕೂಲವಿರುವ ಸ್ಥಳವನ್ನು ಹುಡುಕಿ ಆ ಸ್ಥಳದ ಸುತ್ತಲೂ 7 ಅಥವಾ 8 ಅಗಲ, 10 ಆಳವಿರುವ, ತ್ರಿಕೋಣಾಕಾರದ ಗುಂಡಿಯನ್ನು ತೆಗೆಸಿ, ಒಂದು ಕಡೆ ಬಾಗಿಲನ್ನಿಟ್ಟು ಆನೆಗಳ ಹಿಂಡನ್ನು ಈ ಬಾಗಿಲ ಮುಖಾಂತರ ಒಳಗೆ ಸೇರಿಸುವುದಕ್ಕೆ ಖೆಡ್ಡಾ ಎಂದು ಕರೆಯುತ್ತಾರೆ ಈ ವಿಧಾನದಲ್ಲಿ ಆನೆಗಳನ್ನು ಹಿಡಿಯಲು ಸಾವಿರಾರು ಜನಗಳು, 40 ಅಥವಾ 50 ಪಳಗಿದ ಸಹಾಯಕ ಆನೆಗಳು ಬೇಕಾಗುತ್ತವೆ. ಎರಡನೆಯದು ಆನೆಗಳು ಸಂಚಾರ ಮಾಡುವ ಮಾರ್ಗದಲ್ಲಿ ದೊಡ್ಡ ಗುಂಡಿಗಳನ್ನು ತೆಗೆದು (10 ಉದ್ದ 10 ಅಗಲ ಮತ್ತು 10 ಆಳ) ಅವುಗಳಿಗೆ ಗೋಚರವಾಗದಂತೆ ಸೊಪ್ಪುಪೊದೆಗಳ ಹೊದಿಕೆ ಹಾಕಿ ಆನೆಗಳನ್ನು ಹಿಡಿಯುತ್ತಾರೆ. ಈ ವಿಧಾನದಲ್ಲಿ ಒಂದು ಅಥವಾ ಎರಡು ಆನೆಗಳನ್ನು ಹಿಡಿಯಲು ಸಾಧ್ಯ. ಈ ವಿಧಾನಕ್ಕೆ ಜಾಸ್ತಿ ಜನವಾಗಲಿ ಅಥವಾ ಆನೆಗಳಾಗಲಿ ಬೇಕಾಗುವುದಿಲ್ಲ. ಬಯಲು ಶಿಕಾರಿಯಿಂದ ಹಿಡಿಯುವುದು ಮೂರನೆಯ ವಿಧಾನ. ಇದರಲ್ಲಿ ಒಂಟಿ ಆನೆಯನ್ನು ಮಾತ್ರ ಪಳಗಿದ ಆನೆಗಳ ಸಹಾಯದಿಂದ ಹಿಡಿಯುತ್ತಾರೆ. ಇದಕ್ಕೂ ಕೂಡ ಹೆಚ್ಚಿಗೆ ಜನವಾಗಲಿ, ಆನೆಗಳಾಗಲಿ ಬೇಕಾಗುವುದಿಲ್ಲ. ಹೀಗೆ ಹಿಡಿದ ಆನೆಗಳನ್ನು ಪಳಗಿಸುವುದು ಆನೆ ಹಿಡಿಯುವವರಿಗೆ ಒಂದು ದೊಡ್ಡ ಕೆಲಸ. ಚಿಕ್ಕ ಮರಿಗಳಾದರೆ ಬಹಳ ಜಾಗ್ರತೆ ಪಳಗುತ್ತವೆ. ದೊಡ್ಡ ಆನೆಗಳಾದರೆ ಬಹಳ ದಿವಸಗಳು ಬೇಕು. ಇದಕ್ಕೆ 6 ತಿಂಗಳಿನಿಂದ ಹಿಡಿದು ಒಂದು ವರ್ಷವಾದರೂ ಬೇಕು. ಪಳಗಿದ ಆನೆಗಳ ಸಹಾಯದಿಂದ ಈ ರೀತಿ ಹಿಡಿದ ಆನೆಗಳನ್ನು ಪಳಗಿಸುತ್ತಾರೆ. ಈಗ ಖೆಡ್ಡ ಕಾರ್ಯಕ್ರಮವನ್ನು ನಿಲ್ಲಿಸಲಾಗಿದೆ.

ಆನೆ ಹಾಗೂ ಮಾನವನ ನಡುವಿನ ಸಂಘರ್ಷವೂ ಮಾನವ ಆನೆಯ ನಡುವಿನ ಸಂಬಂಧದಷ್ಟೇ ಹಳೆಯದು. ಮುಖ್ಯವಾಗಿ ಮಾನವನ ಬೆಳೆಗಳ ಮೇಲೆ ಆನೆಗಳು ದಾಳಿ ನಡೆಸುವುದರ ಮೂಲಕ ಸಂಘರ್ಷ ಮೊದಲಾಗುತ್ತದೆ. ಆನೆಗಳ ಈ ದಾಳಿಗೆ ಅನೇಕ ಕಾರಣಗಳಿದ್ದು, ಪೌಷ್ಟಿಕ ಆಹಾರ, ಆನೆಗಳ ವರ್ತನಾ ವಿಜ್ಞಾನ, ನೈಸರ್ಗಿಕ ಆವಾಸದ ನಾಶ, ಕಾಡುಗಳ ನಡುವೆ ಮಾನವನ ವಸಹಾತುಗಳ ಬೆಳೆವಣಿಗೆ ಇತ್ಯಾದಿಗಳನ್ನೊಳಗೊಂಡ ಸಂಕೀರ್ಣ ವ್ಯವಸ್ಥೆಯಾಗಿದೆ. ಮೊದಲಲ್ಲಿ, ಕಾಡಿನಂಚಿನಲ್ಲಿ ಮಾತ್ರ ವ್ಯವಸಾಯ ನಡೆಯುತ್ತಿದ್ದು, ಯಾವ ಆನೆಗಳ ಜೀವನವ್ಯಾಪ್ತಿಯ ಪ್ರದೇಶದ ಬೆಳೆಯ ಮೇಲಷ್ಟೇ ಆನೆಗಳು ದಾಳಿಮಾಡುತ್ತಿದ್ದವು ಮತ್ತು ಒಳ ದಟ್ಟ ಅರಣ್ಯಗಳನ್ನು ಜೀವನವ್ಯಾಪ್ತಿ ಪ್ರದೇಶವಾಗಿ ಹೊಂದಿದ್ದ ಆನೆಗಳು ಬೆಳೆಗಳ ತಂಟೆಗೆ ಬರಬೇಕಾಗುತ್ತಿರಲಿಲ್ಲ. ಆದರೆ, ಕಾಡಿನ ನಾಶ ಹಾಗೂ ಮೇಲ್ಕಾಣಿಸಿದ ಇತರ ಕಾರಣಗಳಿಂದಾಗಿ ಆನೆ ಮಾನವ ಸಂಘರ್ಷಕ್ಕೆ ಹೊಸ ವಿವರಗಳು ಸೇರುತ್ತಿವೆ.

ಅನೆ ನಮ್ಮ ಪ್ರಮುಖ ವನ್ಯಜೀವಿಯಾಗಿದ್ದು, ಅದರ ಇರವು ಸುಸ್ಥಿರ ಕಾಡಿನ ಆರೋಗ್ಯದ ದ್ಯೋತಕವಾಗಿದೆ. ಮಿಲಿಯಾಂತರ ವರ್ಷಗಳಲ್ಲಿ ವಿಕಾಸ ಹೊಂದಿರುವ ಆನೆಗಳು ನಿಸರ್ಗದ ಪ್ರಯೋಗಗಳ ಫಲ. ಇದು ಒಳಗೊಂಡಿರುವ ಜೀವಜಾಲ ಸೂಕ್ಷ್ಮಸಂಬಂಧಗಳನ್ನು ಇನ್ನು ಮಾನವ ಅರಿಯಬೇಕಾಗಿದೆ. ಭಾರತ ಏಷ್ಯದ ಆನೆಗಳ ಒಂದು ಪ್ರಮುಖ ನೆಲೆಯಾಗಿದ್ದು, ಇದರ ರಕ್ಷಣೆಗೆ ಆನೆ ಪರಿಯೋಜನೆಯನ್ನು (ಪ್ರಾಜೆಕ್ಟ್ ಎಲಿಫಂಟ್) 1992ರಲ್ಲಿ ಜಾರಿಗೊಳಿಸಲಾಗಿದೆ.

(ಕೆ.ಎಂ.ಕೆ.; ಡಿ.ಎಸ್.ಇ.) ಪರಿಷ್ಕರಣೆ: ಕೆ.ಎಸ್.ಎನ್.