ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆರ್ಕ್ಟಿಕ್ ಸಮುದ್ರ

ವಿಕಿಸೋರ್ಸ್ದಿಂದ
ಆರ್ಕ್ಟಿಕ್ ಸಮುದ್ರ

ಉತ್ತರಮೇರು ಸುತ್ತಲಿನ (ಉ. ಅ. ಸುಮಾರು ೭೦೦ ವರೆಗಿನ) ಜಲಭಾಗ. ಇಲ್ಲಿರುವ ಭೂಭಾಗವೂ ಇದೇ ಹೆಸರಿನೊಳಗೆ ಸೇರಿದೆ. ಅತ್ಯಂತ ಶೀತ ವಾಯುಗುಣ ಇರುವ ಪ್ರದೇಶ. ಆರ್ಕ್ಟಿಕ್ ಸಮುದ್ರದ ವಿಸ್ತಾರ ೧೪೦೯೦೧೧೮ ಚ. ಕಿಮೀ. ಇದು ಗ್ರೀನ್ಲ್ಯೆಂಡ್ ಮತ್ತು ನಾರ್ವೆ ಸಮುದ್ರಗಳನ್ನು ಗ್ರೀನ್ಲ್ಯೆಂಡ್, ಸೇಂಟ್ ಜೋಸೆಫ್ ಲ್ಯಾಂಡ್, ಆರ್ಕ್ಟಿಕ್ ಮುಂತಾದ ದ್ವೀಪ ಸಮುದಾಯಗಳನ್ನು ಒಳಗೊಂಡಿದೆ. ಅದರ ತೀರದ ಜಲಾಂತರ ಭೂಮಿ ವಿಸ್ತಾರವಾಗಿದೆ. ಅಲ್ಲಿ ೮೦೦ಮೀ ಗಳಿಗಿಂತಲೂ ಹೆಚ್ಚು ಆಳವಿರುವ ತಗ್ಗುಗಳಿವೆ. ಬ್ಯಾಫಿನ್ ಕೊಲ್ಲಿ, ಗ್ರೀನ್ಲ್ಯಾಂಡ್ ಸಮುದ್ರ ಮುಂತಾದ ಕಡೆಗಳಲ್ಲಿ ಇಂಥ ತಗ್ಗುಗಳ ಆಳ ೧೮೨೦ಮೀ.ಗಳಿಗಿಂತಲೂ ಹೆಚ್ಚು. ಉತ್ತರಮೇರು ಸುತ್ತಲಿನ ಸಮುದ್ರದ ಪರಿಶೋಧನೆ ಇನ್ನೂ ಸಾಧ್ಯವಾಗಿಲ್ಲವಾದರೂ ಅಂತಾರಾಷ್ಟ್ರೀಯ ಭೂಭೌತವರ್ಷದ ಅವಧಿಯಲ್ಲಿ (೧೯೫೭-೫೮) ಸಹಕಾರೀ ಸಂಶೋಧನೆಗಳು ನಡೆದಿವೆ. ಅಮೆರಿಕದ ನಾಟಿಲಸ್ ಮತ್ತು ಸ್ಕೇಟ್ ಎಂಬ ಪರಮಾಣು ಶಕ್ತಿಯಿಂದ ಚಲಿಸುವ ನೀರ್ಗಲ್ಲ ನೌಕೆಗಳು ಅತಿ ಆಳವಾಗಿರುವ ಸ್ಥಳಗಳ ಪರೀಕ್ಷೆಗಳನ್ನು ನಡೆಸಿವೆ. ಈ ಸಮುದ್ರದಲ್ಲಿ ಅತ್ಯಂತ ಆಳವಾದ ಪ್ರದೇಶಗಳನ್ನು ೭೭೦ ೪೪° ಉ. ಅ., ೧೭೫೦ ಪ.ರೇ.(ಸು.೫೯೮೦ಮೀ) ಗುರುತಿಸಿದ್ದಾರೆ. ಆರ್ಕ್ಟಿಕ್ ಸಮುದ್ರವನ್ನೂ ಅಟ್ಲಾಂಟಿಕ್ ಸಾಗರವನ್ನೂ ಪ್ರತ್ಯೇಕಿಸುವ ಮಗ್ನತಟ ಭೂಮಿ (ವೈವಿಲ್ ಥಾಂಪ್ಸನ್ ರಿಡ್ಜ ಎಂದು ಇದರ ಹೆಸರು) ಕೇವಲ ೫೫೦ಮೀ.ಗಳ ಆಳದಲ್ಲಿದೆ. ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಾಗರಗಳ ಮಧ್ಯೆ ಇರುವ ಇಂಥ ಜಲವಿಭಾಗದ ಆಳ ೪೫ಮೀ ಮಾತ್ರ. ಸಮುದ್ರದ ತಳದಲ್ಲಿ ನಿಂತಿರುವ ಪದಾರ್ಥಗಳಲ್ಲಿ ಪ್ರಾಣಿ ಅಥವಾ ಸಸ್ಯಗಳಿಗೆ ಸಂಬಂಧಿಸಿದ ಪದಾರ್ಥಗಳು ಯಾವುವೂ ಇಲ್ಲ ; ಶೇ. ೧-೪ ಕ್ಯಾಲ್ಸಿಯಂ ಕಾರ್ಬೊನೇಟ್ ಅವುಗಳಲ್ಲಿರುವುದು ತಿಳಿದುಬಂದಿದೆ. ಗ್ರೀನ್ಲೆಂಡ್ ಮತ್ತು ಸ್ವಿಟ್ಸಬರ್ಗೆನ್ ಪ್ರಾಂತ್ಯಗಳಲ್ಲಿ ಇದರ ಪ್ರಮಾಣ ಇನ್ನೂ ಹೆಚ್ಚು. ನೀರಿನ ಮೇಲೆ ಸಮುದ್ರಪಾಚಿ (ಅಥವಾ ಶೈವಲ) ಹೆಚ್ಚಾಗಿ ಹರಡಿದೆ. ಅತ್ಯಂತ ಶೀತಪ್ರದೇಶವಾದ್ದರಿಂದ ಇಲ್ಲಿ ನೀರಿನ ಸಾಂದ್ರತೆ ಹೆಚ್ಚಾಗಿಲ್ಲ ; ಇದಕ್ಕೆ ಕಾರಣ, ಅದರ ಅತಿ ಕಡಿಮೆ ಲವಣತ್ವ. ಈ ಸಮುದ್ರಕ್ಕೆ ಬಂದುಸೇರುವ ನದಿಗಳು ಸಿಹಿ ನೀರನ್ನು ತರುತ್ತವೆ; ನೀರು ಆವಿಯಾಗಿ ಲವಣತ್ವ ಹೆಚ್ಚಲು ಅವಕಾಶವೇ ಇಲ್ಲ. ಈ ಕಾರಣದಿಂದ ಆಯಾ ನಿಯತಕಾಲಿಕ ಮಾರುತಗಳ ಹೊಡೆತದಿಂದ ಮೇಲಿನ ನೀರು ಚಲಿಸುತ್ತದೆ ; ಉತ್ತರ ಮೇರು ಹತ್ತಿರ ಸೈಬೀರಿಯ ಮತ್ತು ಅಲಾಸ್ಕ ಕಡೆಯಿಂದ ಗ್ರೀನ್ಲ್ಯೆಂಡ್ ಕಡೆಗೆ ಒಂದು ಪ್ರವಾಹವೇರ್ಪಟ್ಟು ಮೇರು ಪ್ರಾಂತ್ಯದ ಹಿಮಗಡ್ಡೆಗಳೂ ಇದರೊಂದಿಗೆ ತೇಲಿಹೋಗಿ, ದಕ್ಷಿಣಕ್ಕೆ ಹೋದಂತೆ ಕರಗಿ ಲ್ಯಾಬ್ರಡಾರ್ ಪ್ರವಾಹಕ್ಕೆ ಸೇರಿಕೊಳ್ಳುತ್ತದೆ. ಬೇರಿಂಗ್ ಜಲಸಂಧಿಯ ಮೂಲಕವೂ ಒಂದು ಪ್ರವಾಹವೇರ್ಪಡುತ್ತದೆ.


ಮೇರು ಪ್ರದೇಶದ ಸಮುದ್ರಜಲದಲ್ಲಿ ಹೆಚ್ಚು ಆಳಕ್ಕೆ ಹೋದಂತೆಲ್ಲ ಉಷ್ಣತೆಯಲ್ಲಾಗಲಿ ಲವಣತೆಯಲ್ಲಾಗಲಿ ಹೆಚ್ಚು ವ್ಯತ್ಯಾಸ ಕಂಡುಬರುವುದಿಲ್ಲ. ಸಮುದ್ರದ ಮೇಲ್ಭಾಗದಿಂದ ಸು. ೧೮೨ಮೀ. ಆಳದವರೆಗೂ ನೀರು ಘನೀಭವಿಸಲು ಬೇಕಾಗುವ ಉಷ್ಣತೆಗಿಂತಲೂ (ಫ್ರೀಸಿಂಗ್ ಪಾಯಿಂಟ್) ಕಡಿಮೆಯಿರುತ್ತದೆ. ಸುಮಾರು ೫೫ಮೀ. ಆಳದಲ್ಲಿ ಕನಿಷ್ಠ ಉಷ್ಣತೆಯ ಪ್ರಮಾಣ ೧೯೦ ಸೆಂ. ಗ್ರೇ. ಇರುತ್ತದೆ. ಸುಮಾರು ೩೦೦-೩೬೫ ಮೀ. ಆಳದಲ್ಲಿ ಉಷ್ಣತೆ ಸ್ವಲ್ಪ ಹೆಚ್ಚಾಗುತ್ತದೆ. ಬೇಸಗೆ, ಚಳಿಗಾಲಗಳಲ್ಲಿನ ವ್ಯತ್ಯಾಸ (ಮೇಲಿನ ಐದಾರು ಅಡಿ ತಳದ ನೀರಿನಲ್ಲಿ ಹೊರತು) ಬಹಳ ಸ್ವಲ್ಪ, ಪುರ್ವಭಾಗದಲ್ಲಿ ಶೈತ್ಯ ಕೊಂಚ ಹೆಚ್ಚು.


ಲವಣತೆ ಮೇಲ್ಭಾಗದಲ್ಲಿ ಸಾವಿರಕ್ಕೆ ೨೯ ಅಥವಾ ೩೦ ರಷ್ಟಿದ್ದು ಆಳ ಹೆಚ್ಚಿದಂತೆಲ್ಲ ೧೮೦ಮೀ. ಆಳದಲ್ಲಿ ಸಾವಿರಕ್ಕೆ ೩೫ ರಷ್ಟಾಗುತ್ತದೆ. ಇನ್ನೂ ಹೆಚ್ಚಿನ ಆಳದಲ್ಲಿ ಯಾವ ಬದಲಾವಣೆಯೂ ಕಂಡುಬರುವುದಿಲ್ಲ. ಕಾರಾ ಸಮುದ್ರದಲ್ಲಿ ಲವಣತೆ ಸಾವಿರಕ್ಕೆ ೨೯ - ೩೦ ರಷ್ಟಿದೆ.


ಆರ್ಕ್ಟಿಕ್ ಸಮುದ್ರದ ೨/೩ ಭಾಗ ಚಳಿಗಾಲದಲ್ಲಿ ಉಂಟಾಗಿ ಚಲಿಸುವ ನೀರ್ಗಲ್ಲು ಅಥವಾ ಹಿಮಗಡ್ಡೆಗಳಿಂದ ಕೂಡಿದೆ. ಗ್ರೀನ್ಲೆಂಡಿನ ಹಿಮ ಪ್ರವಾಹಗಳಿಂದಲೂ ನೀರ್ಗಲ್ಲುಗಳು ಬಂದು ಸೇರುತ್ತವೆ. ಒಂದು ಹಿಮಗಡ್ಡೆಯ ಗಾತ್ರ ಸಾಮಾನ್ಯವಾಗಿ ಆರೇಳು ಅಡಿಗಳಷ್ಟಿದ್ದು, ಕೆಲವು ಕಡೆ ಗಾಳಿಯ ಹೊಡೆತದಿಂದಾಗಿ ಅವುಗಳ ಗಾತ್ರ ಹೆಚ್ಚಾಗುತ್ತದೆ. ಬೇಸಗೆಯಲ್ಲಿ ಈ ಹಿಮಗಡ್ಡೆಗಳು ಕರಗುವುವಾದರೂ ಹೆಚ್ಚುಭಾಗ ಉಷ್ಣೋದಕಪ್ರವಾಹಕ್ಕೆ ಸಿಕ್ಕಿ ಕರಗುತ್ತವೆ. ಅಲೆಗಳ ಹೊಡೆತದಿಂದಲೂ ನೀರ್ಗಲ್ಲು ಕರಗುವುದುಂಟು.


ಹಿಮಗಡ್ಡೆಯಿರುವ ಪ್ರದೇಶಗಳಲ್ಲಿ ಸಸ್ಯಗಳಾಗಲಿ, ಪ್ರಾಣಿಗಳಾಗಲಿ ಅತಿ ಕಡಿಮೆ; ಇಂಥ ಪ್ರದೇಶಗಳಲ್ಲಿ ಸಸ್ಯಗಳನ್ನು ಕಾಣಬಹುದು. ತೀರಪ್ರದೇಶಗಳಲ್ಲಿ ಸಸ್ಯಗಳೂ ಪ್ರಾಣಿಗಳೂ ಇರುತ್ತವೆ. ಕಾಡ್, ಹ್ಯಾಲಿಬಟ್, ಸಾಮನ್ (ಸಾಲ್ಮನ್) ಮುಂತಾದ ಮೀನುಗಳು ಹೇರಳವಾಗಿ ದೊರಕುತ್ತವೆ. ಚಲಿಸುವ ಹಿಮಗಡ್ಡೆಗಳೊಂದಿಗೆ ಸೀಲ್ ಎಂಬ ಮೀನುಗಳು ಕೂಡ ಬರುತ್ತವೆ. ತಿಮಿಂಗಿಲಗಳು ವಿಶೇಷವಾಗಿಲ್ಲ.