ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಲಿಂಗನ

ವಿಕಿಸೋರ್ಸ್ದಿಂದ

ತಬ್ಬುವಿಕೆ. ಪ್ರೀತಿ, ವಿಶ್ವಾಸ, ಸ್ನೇಹಸೂಚಕವಾಗಿ ವ್ಯಕ್ತಿಯನ್ನು ವ್ಯಕ್ತಿ ಎರಡೂ ಕೈಗಳಿಂದ ತಬ್ಬಿ ಎದೆಗೆ ಎದೆ ಕೂಡಿಸುವುದು. ಮುಸ್ಲಿಮರಲ್ಲಿ ಸರ್ವಸಾಧಾರಣವಾದ ಆಚಾರ. ಹಿಂದೂಗಳಲ್ಲೂ ಮದುವೆ ಸಂದರ್ಭದಲ್ಲಿ ಬೀಗರು ಬೀಗರನ್ನು ಆಲಿಂಗಿಸುವ ಪದ್ಧತಿ ಇದೆ. ಸತಿಪತಿಯರಲ್ಲಿ ಚುಂಬನ, ಆಲಿಂಗನಗಳು ರತಿಭಾವಕ್ಕೆ ಆಲಂಬನಗಳಾಗಿವೆ. ಮುಖ್ಯವಾಗಿ ಆಲಿಂಗನ ಎರಡು ಮನಸ್ಸುಗಳ ಮಧುರಮಿಲನದ ಬಾಹ್ಯಪ್ರಕಟನೆಯಾಗಿದೆ. ಆಲಿಂಗನದ ನೆಪದಲ್ಲಿ ಶಿವಾಜಿ ಅಫ್ಜಲ್ ಖಾನನನ್ನು ವ್ಯಾಘ್ರನಖದಿಂದ ಬಗಿದು ಕೊಂದುದೂ ಧೃತರಾಷ್ಟ್ರಾಲಿಂಗನಕ್ಕೆ ಸಿಕ್ಕ ಭೀಮನ ಲೋಹ ಪ್ರತಿಮೆ ನುಚ್ಚುನುರಿಯಾಗಿ ಹೋದುದೂ ಆಲಿಂಗನದ ಇನ್ನೊಂದು ಮುಖಕ್ಕೆ ಉದಾಹರಣೆಗಳಾಗಿವೆ. ಸಾಯುಜ್ಯಮೋಕ್ಷವನ್ನು ಪಡೆದ ಭಕ್ತರಿಗೆ ಪರಮಾತ್ಮನ ಆಲಿಂಗನಸುಖ ಲಭಿಸುತ್ತದೆಂದು ವಿಶಿಷ್ಟಾದ್ವೈತದಲ್ಲಿ ಹೇಳಿದೆ.